ರಕ್ತಹೀನತೆ ಅಥವಾ ಅನೀಮಿಯಾ ಬಗ್ಗೆ ತಿಳಿದುಕೊಳ್ಳಿ (ಕುಶಲವೇ ಕ್ಷೇಮವೇ)

ರಕ್ತಹೀನತೆ (ಅನೀಮಿಯಾ) ಎಂದರೆ ದೇಹದ ಅಂಗಾಂಶಗಳಿಗೆ ಆಮ್ಲಜನಕವನ್ನು ಸಾಗಿಸಲು ರಕ್ತ ಕೆಂಪು ರಕ್ತ ಕಣಗಳಲ್ಲಿ ಹಿಮೋಗ್ಲೋಬಿನ್ನಿನ ಕೊರತೆ ಉಂಟಾಗುವುದು. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರಕ್ತಹೀನತೆ (ಅನೀಮಿಯಾ) ಎಂದರೆ ದೇಹದ ಅಂಗಾಂಶಗಳಿಗೆ ಆಮ್ಲಜನಕವನ್ನು ಸಾಗಿಸಲು ರಕ್ತ ಕೆಂಪು ರಕ್ತ ಕಣಗಳಲ್ಲಿ ಹಿಮೋಗ್ಲೋಬಿನ್ನಿನ ಕೊರತೆ ಉಂಟಾಗುವುದು. ಹಿಮೋಗ್ಲೋಬಿನ್ ಕೆಂಪು ರಕ್ತಕಣದಲ್ಲಿರುವ ಒಂದು ಪ್ರೋಟೀನ್. ಇದು ದೇಹದ ಆಮ್ಲಜನಕ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತ ಕಣಗಳಿಗೆ ಕೆಂಪು ಬಣ್ಣವನ್ನು ನೀಡುತ್ತದೆ. ಹಿಮೋಗ್ಲೋಬಿನ್ನಿನಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿದ್ದು ಶ್ವಾಸಕೋಶದಿಂದ ಎಲ್ಲಾ ಅಂಗಗಳಿಗೆ ಮತ್ತು ಜೀವಕೋಶಗಳಿಗೆ ಅಗತ್ಯ ಪ್ರಮಾಣದ ಆಮ್ಲಜನಕವನ್ನು ಸರಬರಾಜು ಮಾಡುತ್ತದೆ.

ರಕ್ತಹೀನತೆಗೆ ಕಾರಣಗಳು ಮತ್ತು ಲಕ್ಷಣಗಳು
ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12 ಮಿಲಿಗ್ರಾಮಿಗಿಂತ ಕಡಿಮೆ ಇದ್ದರೆ ಆಗ ರಕ್ತಹೀನತೆ ಕಂಡುಬರುತ್ತದೆ. ರಕ್ತಹೀನತೆಯಿಂದ ಹೆಚ್ಚು ದಣಿವಾಗುತ್ತದೆ ಮತ್ತು ಜನರು ದುರ್ಬಲರಾಗುತ್ತಾರೆ. ರಕ್ತಹೀನತೆಯು ಗಂಭೀರ ಹಂತಕ್ಕೆ ತಲುಪಿದಾಗ ಗೊಂದಲ, ತಲೆ ತಿರುಗುವಿಕೆ, ಪ್ರಜ್ಞೆ ತಪ್ಪುವುದು, ವಿಪರೀತ ಬಾಯಾರಿಕೆ, ಎದೆ ಬೇನೆ, ಹೃದಯಬಡಿತದಲ್ಲಿ ವ್ಯತ್ಯಾಸ ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. 

ರಕ್ತಹೀನತೆಗೆ ಪ್ರಮುಖ ಕಾರಣ ದೇಹದಲ್ಲಿ ಕಬ್ಬಿಣಾಂಶ ಕೊರತೆ. ನಾವು ದೇಹಕ್ಕೆ ಅತ್ಯಗತ್ಯವಾದ ಕಬ್ಬಿಣಾಂಶ ನಾವು ದಿನನಿತ್ಯ ಸೇವಿಸುವ ಆಹಾರದಿಂದ ದೊರೆಯುತ್ತದೆ. ಕಬ್ಬಿಣಾಂಶದ ಕೊರತೆಯಾದರೆ ನಿಶ್ಯಕ್ತಿ, ಸುಸ್ತು, ಜೀರ್ಣಶಕ್ತಿ ಕಡಿಮೆಯಾಗುವುದು ಮತ್ತು ಉಸಿರಾಟದಲ್ಲಿ ಕಷ್ಟವಾಗುವುದು ಕಂಡುಬರುತ್ತದೆ.

ರಕ್ತಹೀನತೆ ಮಕ್ಕಳು, ಹದಿಹರೆಯದವರು ಮತ್ತು ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿ ರಕ್ತಹೀನತೆ ಸಾಮಾನ್ಯವಾಗಿ ಕಂಡುಬರುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿ ಲಿಂಗ ತಾರತಮ್ಯದಿಂದ ಹೆಣ್ಣು ಮಕ್ಕಳಿಗೆ ಪೌಷ್ಠಿಕ ಆಹಾರ ನೀಡದೆ ಇರುವುದರಿಂದ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ರಕ್ತಹೀನತೆ ಕಂಡುಬರುತ್ತದೆ. ಪದೇ ಪದೇ ಗರ್ಭಪಾತ ಹಾಗೂ ಹೆಚ್ಚು ಅಂತರವಿಲ್ಲದೆ ಗರ್ಭ ಧರಿಸುವುದರಿಂದಲೂ ಮಹಿಳೆಯರಲ್ಲಿ ರಕ್ತಹೀನತೆ ಕಾಣಿಸಿಕೊಳ್ಳುತ್ತದೆ.

ರಕ್ತಹೀನತೆಯಿದ್ದವರಿಗೆ ಕಣ್ಣಿನ ರೆಪ್ಪೆಯ ಒಳಭಾಗ, ನಾಲಿಗೆ, ತುಟಿ, ಉಗುರು ಮತ್ತು ಅಂಗೈಗಳು ಬಿಳಿಚಿಕೊಳ್ಳುತ್ತವೆ. ಇವುಗಳಲ್ಲಿ ಯಾವುದಾದರೂ ಲಕ್ಷಣಗಳು ಕಂಡುಬಂದ ಕೂಡಲೇ ರಕ್ತ ವೈದ್ಯರಿಂದ ಪರೀಕ್ಷೆ ಮಾಡಿಸಿ ರಕ್ತಹೀನತೆಯನ್ನು ಪತ್ತೆಹಚ್ಚಬಹುದು. ಆದರೆ ಹೆಚ್ಚಿನವರಿಗೆ ರಕ್ತಹೀನತೆ ಇರುವುದು ಗೊತ್ತೇ ಇರುವುದಿಲ್ಲ. ಬೇರೆ ಯಾವುದಾದರೂ ಕಾಯಿಲೆಗೆ ತುತ್ತಾಗಿ ರಕ್ತ ಪರೀಕ್ಷೆ ಮಾಡುವ ಸಂದರ್ಭದಲ್ಲಿ ರಕ್ತಹೀನತೆ ಇರುವುದು ಕಂಡುಬರುವ ಸಾಧ್ಯತೆ ಇರುತ್ತದೆ. ಮಕ್ಕಳಲ್ಲಿ ಜಂತುಹುಳುವಿನ ಸಮಸ್ಯೆ ಇದ್ದಾಗಲೂ ರಕ್ತಹೀನತೆ ಕಾಣಿಸಬಹುದು. ಅಂತಹ ಸಂದರ್ಭದಲ್ಲಿ ಮೊದಲಿಗೆ ಜಂತುಹುಳು ಸಮಸ್ಯೆಯನ್ನು ಸರಿಪಡಿಸಿ ನಂತರ ರಕ್ತಹೀನತೆಗೆ ಪರಿಹಾರ ಕಂಡುಕೊಳ್ಳಬೇಕು. ಇಂದು ಸರಿಯಾದ ಜೀವನ ಶೈಲಿಯನ್ನು ಅಳವಡಿಸಿಕೊಳ್ಳದೇ ಇರುವುದರಿಂದ ಹೆಚ್ಚಿನವರಲ್ಲಿ ರಕ್ತಹೀನತೆ ಸಮಸ್ಯೆ ಕಾಡುತ್ತಿದೆ.

ಇದನ್ನೂ ಓದಿ: ಮೂತ್ರನಾಳದ ಸೋಂಕು ಅಥವಾ Urinary Tract Infection ಗೆ ಕಾರಣಗಳೇನು? ಮನೆ ಮದ್ದುಗಳ ಬಗ್ಗೆ ಮಾಹಿತಿ....
ರಕ್ತಹೀನತೆಯಿಂದ ಬಹುಬೇಗ ಆಯಾಸವಾಗುವುದರಿಂದ ದಿನನಿತ್ಯ ಕೆಲಸ ಮಾಡಲೂ ಸಹ ಕಷ್ಟವಾಗುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಸುಲಭವಾಗಿ ಜನರು ಹಲವಾರು ಸೋಂಕುಗಳಿಗೆ ತುತ್ತಾಗುತ್ತಾರೆ. ರಕ್ತಹೀನತೆಯಿಂದಾಗಿ ಮಹಿಳೆಯರಲ್ಲಿ ಗರ್ಭಪಾತ, ಅವಧಿಪೂರ್ವ ಹೆರಿಗೆ ಹಾಗೂ ಹೆರಿಗೆ ಸಮಯದಲ್ಲಿ ಹೆಚ್ಚಿನ ರಕ್ತಸ್ರಾವ ಸಂಭವಿಸಬಹುದು. ರಕ್ತಹೀನತೆಯಿಂದ ಬಳಲುವ ಗರ್ಭಿಣಿಗೆ ಜನಿಸುವ ಮಗುವಿನ ತೂಕ ಕಡಿಮೆ ಇದ್ದರೆ ಹುಟ್ಟುವ ಮಗುವಿಗೂ ರಕ್ತಹೀನತೆಯಾಗಬಹುದು. ಮಕ್ಕಳಲ್ಲಿ ರಕ್ತಹೀನತೆಯಿಂದಾಗಿ ಅವರ ಮೆದುಳಿನ ಬೆಳವಣಿಗೆ ಕುಂಠಿತವಾಗುತ್ತದೆ. ರಕ್ತಹೀನತೆಯಿಂದ ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಮುಟ್ಟಿನ ವೇಳೆ ಅಧಿಕ ರಕ್ತಸ್ರಾವ, ತೂಕ ಕಡಿಮೆಯಾಗುವುದು ಹಾಗೂ ಬಲಹೀನತೆ ಕಾಣಿಸಿಕೊಳ್ಳುತ್ತದೆ. ತೀವ್ರವಾದ ಅಪಘಾತದಲ್ಲಿ ಸಂದರ್ಭದಲ್ಲಿ, ಮಹಿಳೆಯರಲ್ಲಿ ಪ್ರಸವ ಸಮಯದಲ್ಲಿ ಆಗುವ ಅಸಹಜ ರಕ್ತಸ್ರಾವದ ಕಾರಣದಿಂದಾಗಿ ಮತ್ತು ರಕ್ತದಲ್ಲಿ ಕಬ್ಬಿಣಾಂಶದ ಕೊರತೆಯಿಂದಾಗಿ ರಕ್ತಹೀನತೆಯು ಕಾಣಿಸಿಕೊಳ್ಳಬಹುದು.

ರಕ್ತಹೀನತೆಯ ಕಾರಣ ಮತ್ತು ತೀವ್ರತೆಯನ್ನು ಅವಲಂಬಿಸಿ ರೋಗಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ. ಬಾಯಿಯ ಮೂಲಕ ಕಬ್ಬಿಣಾಂಶದ ಮಾತ್ರೆಗಳನ್ನು ಅಥವಾ ಚುಚ್ಚುಮದ್ದಿನ ರೂಪದಲ್ಲಿ ಅತ್ಯಗತ್ಯ ಔಷಧಗಳನ್ನು ನೀಡಲಾಗುತ್ತದೆ.

ರಕ್ತಹೀನತೆಗೆ ಚಿಕಿತ್ಸೆಗಳು
ಸಾಮಾನ್ಯ ಸಂದರ್ಭಗಳಲ್ಲಿ ನಿಯಮಿತವಾಗಿ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇವಿಸುವ ಮೂಲಕ ರಕ್ತಹೀನತೆಯಿಂದ ಪಾರಾಗಬಹುದು. ರಕ್ತಹೀನತೆಯನ್ನು ತಡೆಯಲು ಹದಿಹರೆಯದವರಿಗೆ ಉತ್ತಮ ಪೌಷ್ಠಿಕಾಂಶಗಳುಳ್ಳ ಆಹಾರವನ್ನು ನೀಡಬೇಕು. ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಪೌಷ್ಠಿಕ ಆಹಾರ ಅತ್ಯಗತ್ಯ. ಆದ್ದರಿಂದ ಕಬ್ಬಿಣಾಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ರಕ್ತಹೀನತೆ ತಡೆಯಬಹುದು. ತರಕಾರಿ, ಸೊಪ್ಪು, ರಾಗಿ, ಮೊಳಕೆ ಕಟ್ಟಿದ ಕಾಳುಗಳು, ಬೆಲ್ಲ, ನೆಲ್ಲಿಕಾಯಿ, ಕಿತ್ತಳೆ ಹಣ್ಣು, ಮುಂತಾದವುಗಳ ಸೇವನೆಯಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣಾಂಶ ಹೊರೆಯುತ್ತದೆ. ಅಗತ್ಯವೆನಿಸಿದರೆ ಕಬ್ಬಿಣಾಂಶದ ಮಾತ್ರೆಗಳು ಅಥವಾ ಸಿರಪ್ ಸೇವಿಸಬೇಕು. ಪ್ರತಿದಿನ ಕನಿಷ್ಠ ಎರಡು ಲೋಟ ಹಾಲು ಕುಡಿಯಬೇಕು. ಒಣದ್ರಾಕ್ಷಿ, ಗೆಣಸು, ಬೀಟ್ರೂಟ್, ಪಾಲಕ್ ಸೊಪ್ಪು, ಬಾಳೆಹಣ್ಣು, ಸೇಬು, ಸಪೋಟ, ಅನಾನಸ್ ಮುಂತಾದ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಬೇಕು.

ದಾಳಿಂಬೆ ಹಣ್ಣಿನಲ್ಲಿರುವ ಕಬ್ಬಿಣಾಂಶ, ಕ್ಯಾಲ್ಸಿಯಂ, ಪ್ರೋಟೀನ್, ಕಾರ್ಬೋಹೈಡ್ರೇಟ್‍ಗಳು ಮತ್ತು ಫೈಬರ್ ಅಂಶಗಳು ಹಿಮೋಗ್ಲೊಬಿನ್ ಪ್ರಮಾಣವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ವಿಟಮಿನ್ ಸಿ ಸಮೃದ್ಧವಾಗಿರುವ ನೆಲ್ಲಿಕಾಯಿಗಳು ಕೂಡ ರಕ್ತಹೀನತೆಯ ಸಮಸ್ಯೆಗೆ ಪ್ರಮುಖ ಆಹಾರವಾಗಿದೆ. ಪ್ರತಿನಿತ್ಯ ಸೇಬನ್ನು ತಿನ್ನುವುದರಿಂದ ಹಿಮೊಗ್ಲೋಬಿನ್ ಮಟ್ಟವನ್ನು ಹೆಚ್ಚಿಸಬಹುದು. ದಿನನಿತ್ಯದ ಆಹಾರಗಳಲ್ಲಿ ಹಸಿರು ತರಕಾರಿ, ಸೊಪ್ಪುಗಳಾದ ಬಸಳೆ, ಮೆಂತ್ಯ ಸೊಪ್ಪು, ಸಬ್ಬಸಿಗೆ, ಕೊತ್ತಂಬರಿ ಸೊಪ್ಪು, ಬಟಾಣಿ, ನಿಂಬೆ ಹಣ್ಣು, ಪಪಾಯ ಹಾಗೂ ಟೊಮೇಟೊ ಮತ್ತು ಕೋಸುಗಡ್ಡೆ ಬಳಕೆ ಮಾಡಬೇಕು.

ಮಕ್ಕಳಿರಲಿ ಅಥವಾ ದೊಡ್ಡವರಿರಲಿ ರಕ್ತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣದ ಅಂಶ ಇರುವುದು ಬಹಳ ಮುಖ್ಯ. ಮಕ್ಕಳ ಬೆಳವಣಿಗೆಗೆ ಕಬ್ಬಿಣದ ಅಂಶ ಅತ್ಯಂತ ಅವಶ್ಯಕವಾಗಿದೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಪೋಷಕರು ಎಚ್ಚೆತ್ತುಕೊಳ್ಳಬೇಕಾಗಿದೆ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com