ಆಸ್ತಮಾ ಸಮಸ್ಯೆಗೆ ಮನೆಮದ್ದುಗಳು... (ಕುಶಲವೇ ಕ್ಷೇಮವೇ)

ಇಂದು ಕಲುಷಿತ ಗಾಳಿ ಮತ್ತು ವಾತಾವರಣದಿಂದಾಗಿ ಹಲವಾರು ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.
ಆಸ್ತಮಾ ಸಮಸ್ಯೆಗೆ ಮನೆಮದ್ದುಗಳು... (ಕುಶಲವೇ ಕ್ಷೇಮವೇ)

ಇಂದು ಕಲುಷಿತ ಗಾಳಿ ಮತ್ತು ವಾತಾವರಣದಿಂದಾಗಿ ಹಲವಾರು ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇವುಗಳಲ್ಲಿ ಆಸ್ತಮಾ ಕೂಡ ಒಂದು. ಆಸ್ತಮಾ ಶ್ವಾಸಕೋಶದಲ್ಲಿರುವ ಗಾಳಿ ಹೋಗುವ ಮಾರ್ಗದ ಮೇಲೆ ಪರಿಣಾಮ ಬೀರುವ ಒಂದು ಸಮಸ್ಯೆಯಾಗಿದೆ. ಶ್ವಾಸಕೋಶದ ವಾಯುಮಾರ್ಗಗಳು ಸೂಕ್ಷ್ಮವಾಗಿರುವುದರಿಂದ ಕೆಲವು ವಸ್ತುಗಳಿಗೆ ಪ್ರತಿಕ್ರಿಯಿಸಿದಾಗ ಸುತ್ತಲಿನ ಸ್ನಾಯುಗಳು ಬಿಗಿಗೊಳ್ಳುತ್ತವೆ. ಇದರಿಂದಾಗಿ ವಾಯುಮಾರ್ಗಗಳು ಕಿರಿದಾಗಿ ಉಸಿರಾಡಲು ಕಷ್ಟವಾಗುತ್ತದೆ.

ಆಸ್ತಮಾ ಎಂದರೇನು?

ಆಸ್ತಮಾ ಒಂದು ಋತುಕಾಲಿಕ ಅನಾರೋಗ್ಯ ಸ್ಥಿತಿ. ಇದರ ಲಕ್ಷಣಗಳು ಒಂದು ಋತುವಿನಲ್ಲಿ ಹೆಚ್ಚಾಗಬಹುದು ಮತ್ತು ನಂತರ ಕಾಣಿಸಿಕೊಳ್ಳದಿರಬಹುದು. ಕೆಲವೊಮ್ಮೆ ಬಹಳ ಕಾಲ ಉಳಿಯಬಹುದು. ಇದರ ಬಗ್ಗೆ ಸರಿಯಾಗಿ ತಿಳಿದುಕೊಂಡರೆ ಸಮಸ್ಯೆಯನ್ನು ಸೂಕ್ತವಾಗಿ ನಿರ್ವಹಿಸಬಹುದು. ತೊಂದರೆಯನ್ನು ಕಡಿಮೆ ಮಾಡಿಕೊಳ್ಳಬಹುದು. 

ಪ್ರತಿ ವರ್ಷ ಮೇ 3ರಂದು ವಿಶ್ವ ಆಸ್ತಮಾ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿಯೊಬ್ಬರ ಆಸ್ತಮಾ ಭಿನ್ನವಾಗಿರುತ್ತದೆ. ವಿಶ್ವಆರೋಗ್ಯ ಸಂಸ್ಥೆಯ ಪ್ರಕಾರ ಇಂದು ಪ್ರಪಂಚದಲ್ಲಿ 300 ಮಿಲಿಯನ್‍ ಜನರಿಗೆ ಆಸ್ತಮಾ ಸಮಸ್ಯೆ ಇದೆ. ಭಾರತದಲ್ಲಿ ಇದರ ಕನಿಷ್ಠ ಹತ್ತರಷ್ಟು (30 ಮಿಲಿಯನ್) ಆಸ್ತಮಾ ರೋಗಿಗಳಿದ್ದಾರೆ. ಆದ್ದರಿಂದ ಇದೊಂದು ಸಾಮಾನ್ಯ ಸಮಸ್ಯೆಯಾಗಿದೆ ಎಂದು ಹೇಳಬಹುದು. ಈ ಸಮಸ್ಯೆ ಮಕ್ಕಳನ್ನೂ ಕಾಡುತ್ತದೆ.

ಆಸ್ತಮಾಗೆ ಕಾರಣವಾಗುವ ಪ್ರಚೋದಕಗಳು ಇವು...

ಎದೆಗೂಡಿನ ಮಾರ್ಗಗಳಿಗೆ ಕಿರಿಕಿರಿಯುಂಟುಮಾಡುವ ಪ್ರಚೋದಕಗಳು (ಟ್ರಿಗರ್) ಧೂಳು, ಕಣ್ಣಿಗೆ ಕಾಣದ ಹುಳುಗಳು, ಇಂದು ನಾವು ಪ್ರತಿನಿತ್ಯ ಬಳಸುವ ಡಿಯೋಡ್ರೆಂಟ್ ಹೀಗೆ ಏನಾದರೂ ಆಗಿರಬಹುದು. ಇವು ಆಸ್ತಮಾ ಲಕ್ಷಣಗಳನ್ನು ಉಂಟುಮಾಡಬಹುದು. ಒಬ್ಬೊಬ್ಬರಿಗೆ ಒಂದೊಂದು ಪ್ರಚೋದಕಗಳು ಇರಬಹುದು. ಆ ಪ್ರಚೋದಕಗಳನ್ನು ಗುರುತಿಸುವುದು ಬಹಳ ಮುಖ್ಯ. ಇದನ್ನು ಅರಿತರೆ ಸಮಸ್ಯೆಯ ನಿರ್ವಹಣೆ ಸುಲಭ.

ಸಾಮಾನ್ಯವಾಗಿ ಆಸ್ತಮಾಗೆ ಕಾರಣವಾಗುವ ಪ್ರಚೋದಕಗಳೆಂದರೆ ಧೂಳು, ಹಾಸಿಗೆಗಳ, ಪರದೆಗಳ ಮತ್ತು ಮೃದು ಆಟಿಕೆಗಳ ಮೇಲಿನ ಧೂಳಿನಲ್ಲಿ ಬೆಳೆಯುವ ಹುಳಗಳು, ಹೂವುಗಳ ಪರಾಗರೇಣುಗಳು, ಬೀಡಿ, ಸಿಗರೇಟಿನಂತಹ ವಾಯುಮಾಲಿನ್ಯ ಕಾರಕಗಳು, ಪಟಾಕಿಯ ಹೊಗೆ, ನಾಯಿ-ಬೆಕ್ಕುಗಳ ಕೂದಲುಗಳು ಚರ್ಮ, ಹಕ್ಕಿಗಳ ಗರಿ, ಉಣ್ಣೆ, ಮುದ್ರಣಾಲಯಗಳು, ಪೇಂಟ್ ಕಾರ್ಖಾನೆಗಳು, ಆಭರಣ ತಯಾರಿಕೆ ಮತ್ತು ಗಣಿ ಕೈಗಾರಿಕೆಗಳಲ್ಲಿ ಕೆಲಸ ಮಾಡುವಾಗ ಕಂಡುಬರುವ ಸೂಕ್ಷ್ಮ ಕಣಗಳು, ಶೀತ, ವೈರಸ್‍ಗಳು, ಬೂಷ್ಟುಗಳು, ಫಂಗಸ್ಸುಗಳು, ಹವಾಮಾನದಲ್ಲಿ ಆಗುವ ಹಠಾತ್ ಬದಲಾವಣೆಗಳು, ಮಹಿಳೆಯರಲ್ಲಿ ಹಾರ್ಮೋನುಗಳ ಏರುಪೇರು, ಸೆಂಟ್, ರೂಮ್ ಫ್ರೆಷ್ನರ್, ಶುದ್ಧಿಕಾರಕಗಳು ಮತ್ತು ಕೆಲವು ಔಷಧಗಳು. ಇವುಗಳಲ್ಲಿ ಯಾವುದು ಅಸ್ತಮಾವನ್ನು ಪ್ರಚೋದಿಸುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕು ಮತ್ತು ಇಂತಹ ವಸ್ತುಗಳಿಂದ ದೂರ ಇರಬೇಕು.

ಅಸ್ತಮಾಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಮುಖ್ಯ. ಮುಖಕ್ಕೆ ಮಾಸ್ಕ್‍ ಧರಿಸುವುದು, ಹೆಚ್ಚು ವಾಯುಮಾಲಿನ್ಯ ಪ್ರದೇಶಗಳಿಗೆ ಸಂಚರಿಸದಿರುವುದು, ಶುದ್ಧ ಗಾಳಿ ಸೇವನೆ, ಧೂಮಪಾನ ಬಿಡುವುದು ಮತ್ತು ಸರಿಯಾದ ಆಹಾರಕ್ರಮದಿಂದ ಅಸ್ತಮಾ ಬರುವುದನ್ನು ತಡೆಯಬಹುದು. ಕೆಲವರು ಅಸ್ತಮಾ ಗಂಭೀರವಾಗಿದ್ದರೂ ನಿರ್ಲಕ್ಷದಿಂದ ವೈದ್ಯರನ್ನು ಕಾಣುವುದಿಲ್ಲ. ಇದು ಅಪಾಯಕಾರಿ. ಅಸ್ತಮಾದ ತೀವ್ರತೆ ಇದ್ದರೆ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು.

ಆಸ್ತಮಾ ಸಮಸ್ಯೆಗೆ ಮನೆಮದ್ದು

ಆಸ್ತಮಾ ಸಮಸ್ಯೆಗೆ ಪ್ರತಿದಿನ ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿಯುವುದು ಉತ್ತಮ. ಈ ಸಮಸ್ಯೆಯಿಂದ ಹೊರಬರುವ ತುಂಬಾ ಮುಖ್ಯವಾದ ಮನೆಮದ್ದುಗಳಲ್ಲಿ ನೀಲಗಿರಿ ಎಣ್ಣೆ ಕೂಡ ಒಂದು. ಬಿಸಿ ನೀರಿನಲ್ಲಿ ನೀಲಗಿರಿ ಎಣ್ಣೆಯನ್ನು ಹಾಕಿ ಅದರ ಆವಿಯನ್ನು ಸೇವಿಸಿದರೆ ಉಸಿರಾಟದ ನಾಳಗಳು ಶುಚಿಯಾಗುತ್ತವೆ. ಜೊತೆಗೆ ಇದು ಶ್ವಾಸಕೋಶ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.

ಆಯುರ್ವೇದದಲ್ಲಿ ಆಸ್ತಮಾಗೆ ಉತ್ತಮ ಔಷಧಿ ಮತ್ತು ಚಿಕಿತ್ಸೆಗಳು ಲಭ್ಯವಿವೆ. ಪಂಚಕರ್ಮ ಮತ್ತು ನಸ್ಯ ಚಿಕಿತ್ಸೆ ಪರಿಣಾಮಕಾರಿಯಾಗಿರುತ್ತವೆ. ಆಹಾರದಲ್ಲಿ ಕರಿದ ಮತ್ತು ಮಸಾಲೆ ಪದಾರ್ಥಗಳ ಸೇವನೆ ಹೆಚ್ಚು ಒಳ್ಳೆಯದಲ್ಲ. ತಂಪು ಪಾನೀಯಗಳು ಮತ್ತು ತಂಪಾಗಿರುವ ಪದಾರ್ಥಗಳನ್ನು ಸೇವಿಸುವುದು ಬೇಡ. ಫ್ರಿಜ್ಜಿನಲ್ಲಿರುವ ಪದಾರ್ಥಗಳನ್ನು ಹೊರಗೆತೆಗೆದು ಸ್ವಲ್ಪ ಹೊತ್ತು ಇಟ್ಟು ವಾತಾವರಣದ ತಾಪಮಾನಕ್ಕೆ ತಂದು ಬಿಸಿ ಮಾಡಿ ಸೇವಿಸಬೇಕು. ಹಾಗೆಯೇ ನೇರವಾಗಿ ತೆಗೆದ ತಕ್ಷಣ ಬಿಸಿ ಮಾಡಿ ಸೇವಿಸಬಾರದು. ಹಾಗೆ ಮಾಡಿದಲ್ಲಿ ಅಲರ್ಜಿ ಸಮಸ್ಯೆ ಆಗಬಹುದು. 

ಆಲೂಗೆಡ್ಡೆ, ಅಲಸಂದೆ, ಕಡಲೆಕಾಳು, ಶೇಂಗಾಗಳನ್ನು ಆಸ್ತಮಾ ಇರುವವರು ವರ್ಜಿಸುವುದು ಒಳ್ಳೆಯದು. ನೀರನ್ನು ಬಿಸಿ ಮಾಡುವಾಗ ಒಂದು ತುಂಡು ಶುಂಠಿ ಹಾಕಿ ಕಾಯಿಸಿ ಕುಡಿಯಬೇಕು. ನೀರು ಕುದಿಯುವ ಹಂತಕ್ಕೆ ಬಂದಾಗ ತುಳಸಿ ಎಲೆಗಳನ್ನು ಹಾಕಿ ಮುಚ್ಚಿ ನಂತರ ಆ ನೀರನ್ನು ಕುಡಿಯಬೇಕು. ಇಡೀ ದಿನ ಕುದಿಸಿ ಆರಿಸಿದ/ಬಿಸಿ ನೀರನ್ನು ಕುಡಿಯುವುದು ಒಳ್ಳೆಯದು. 

ಕಾಲಕ್ಕೆ ತಕ್ಕಂತೆ ಆಸ್ತಮಾ ಇರುವವರು ಕೆಲಸಕ್ಕೆ ಅಥವಾ ಹೊರಗೆ ಹೋಗುವಾಗ ಬೆಚ್ಚಗಿನ ಉಡುಪನ್ನು ಧರಿಸುವುದು ಒಳ್ಳೆಯದು. ಕಿವಿಗೆ ಹತ್ತಿ, ಕೈಗೆ ಗ್ಲೌಸು ಮತ್ತು ಕಾಲಿಗೆ ಸಾಕ್ಸ್ ಹಾಕಿಕೊಳ್ಳಬೇಕು. ನಸುಕಿನಲ್ಲಿ ವಾಕಿಂಗ್ ಮಾಡುವುದು ಬೇಡ. ರಾತ್ರಿಯಲ್ಲಿಯೂ ಬೇಡ. ಬಿಸಿಲು ಬಂದ ನಂತರ ವಾಕಿಂಗ್ ಮಾಡಬಹುದು.

ನಿಯಮಿತವಾಗಿ ಪ್ರಾಣಾಯಾಮ ಮಾಡುವುದು ಆಸ್ತಮಾ ಸಮಸ್ಯೆ ಇರುವವರಿಗೆ ಬಹಳ ಒಳ್ಳೆಯದು. ದಿನಕ್ಕೆ ಹತ್ತು ನಿಮಿಷ ಪ್ರಾಣಾಯಾಮ ಮಾಡಬೇಕು. ಇದರಿಂದ ಶ್ವಾಸಕೋಶದ ಎಲ್ಲ ಕಡೆಗೂ ಆಮ್ಲಜನಕ ತಲುಪಿ ಹೆಚ್ಚಿನ ಸಮಸ್ಯೆ ಆಗುವುದಿಲ್ಲ.

ಚಳಿಗಾಲ ಮತ್ತು ಮಳೆಗಾಲದಲ್ಲಿ ಈ ಸಮಸ್ಯೆ ಇರುವವರು ಹೆಚ್ಚಿನ ಕಾಳಜಿ ವಹಿಸಬೇಕು. ರಾತ್ರಿ ಹೊತ್ತಿನಲ್ಲಿ ಹಾಲು, ಮೊಸರು ಮತ್ತು ಮಜ್ಜಿಗೆ ಹೆಚ್ಚಿಗೆ ಸೇವಿಸಬಾರದು. ಜ್ಯೇಷ್ಠಮಧು, ಶುಂಠಿ ಮತ್ತು ಮೆಣಸು ಹಾಕಿರುವ ಕಷಾಯ ಸೇವಿಸಬೇಕು. ಜ್ಯೇಷ್ಠಮಧುವಿನ ಸೂಪು ಕೂಡ ಒಳ್ಳೆಯದು.

ಆಹಾರವನ್ನು ಬಿಸಿಬಿಸಿಯಾಗಿ ಸೇವಿಸಬೇಕು. ತಣ್ಣಗಿರುವುದನ್ನು/ತಂಗಳನ್ನವನ್ನು ಸೇವಿಸಬಾರದು. ವಾಯುಮಾಲಿನ್ಯ ಇದ್ದರೆ ಸಮಸ್ಯೆ ಹೆಚ್ಚು ಬಾಧಿಸುತ್ತದೆ. ನಗರಪ್ರದೇಶಗಳಲ್ಲಿ ಮಕ್ಕಳಲ್ಲಿ ಈ ಸಮಸ್ಯೆ ಇದ್ದರೆ ಹೆಚ್ಚಿನ ಕಾಳಜಿ ವಹಿಸಬೇಕು. ಸಮಸ್ಯೆ ಹೆಚ್ಚಾಗಿದ್ದರೆ ವೈದ್ಯರನ್ನು ಕೂಡಲೇ ಕಾಣಬೇಕು.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com