ಸೈನಸೈಟಿಸ್ ಅಥವಾ ಸೈನಸ್: ತ್ವರಿತ ಉಪಶಮನ, ಪರಿಹಾರ (ಕುಶಲವೇ ಕ್ಷೇಮವೇ)

ಸೈನಸ್ ಎಂದರೆ ಮೂಗಿನ ಎರಡು ಬದಿಯಲ್ಲಿ ಗಾಳಿಯಿಂದ ತುಂಬಿರುವ ಸೂಕ್ಷ್ಮ ಜೀವಕೋಶಗಳಿರುವ ಕುಳಿಗಳು. ಕೆಲವೊಮ್ಮೆ ಈ ಕುಳಿಗಳು ಅಲರ್ಜಿ, ಶೀತ ಹಾಗೂ ಬ್ಯಾಕ್ಟೀರಿಯಾಗಳಿಂದಾಗಿ ಮುಚ್ಚಿಹೋಗುತ್ತವೆ.
ಚಿತ್ರವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ
ಚಿತ್ರವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ
Updated on

ಇತ್ತೀಚಿಗೆ ಸಾಕಷ್ಟು ಜನರು ಸೈನಸ್ (ಸೈನಸೈಟಿಸ್) ಸಮಸ್ಯೆಯಿಂದ ಬಳಲುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಸೈನಸ್ ಎಂದರೆ ಮೂಗಿನ ಎರಡು ಬದಿಯಲ್ಲಿ ಗಾಳಿಯಿಂದ ತುಂಬಿರುವ ಸೂಕ್ಷ್ಮ ಜೀವಕೋಶಗಳಿರುವ ಕುಳಿಗಳು. ಕೆಲವೊಮ್ಮೆ ಈ ಕುಳಿಗಳು ಅಲರ್ಜಿ, ಶೀತ ಹಾಗೂ ಬ್ಯಾಕ್ಟೀರಿಯಾಗಳಿಂದಾಗಿ ಮುಚ್ಚಿಹೋಗುತ್ತವೆ. ಆಗ ತಲೆನೋವು, ಉಸಿರಾಟದ ಸಮಸ್ಯೆ, ಗೊರಕೆ ಸೇರಿದಂತೆ ಇನ್ನಿತರ ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಇದರಲ್ಲಿ ಮುಖ್ಯವಾಗಿ ತಲೆನೋವು ಬಹಳಷ್ಟು ಜನರನ್ನು ಕಾಡುತ್ತದೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಸೈನಸ್ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. 

ಸೈನಸ್ ಲಕ್ಷಣಗಳು

ಸೈನಸ್ಸಿನ ಲಕ್ಷಣಗಳು ಸಾಮಾನ್ಯವಾಗಿ ನೆಗಡಿಯಾದಾಗ ಕಂಡುಬರುವ ಲಕ್ಷಣಗಳಂತೆಯೇ ಇರುತ್ತವೆ. ವಾಸನೆ ಸರಿಯಾಗಿ ಗೊತ್ತಾಗದೇ ಇರುವುದು, ಆಯಾಸ, ಕೆಮ್ಮು, ಆಯಾಸ, ತಲೆನೋವು ಮತ್ತು ಕೆಲವೊಮ್ಮೆ ಜ್ವರ ಕಾಣಿಸಿಕೊಳ್ಳುತ್ತದೆ. 

ಸೈನಸ್ ಹಾಗೆ ಬಂದು ಹೀಗೆ ಹೋಗುವ ತಲೆನೋವಲ್ಲ. ಎರಡು ಮೂರು ದಿನ ತಲೆ ಎತ್ತಲು ಸಾಧ್ಯವಾಗದಷ್ಟು ನೋವು, ತಲೆಭಾರದಿಂದ ಏನೂ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಮಲಗಿ ನಿದ್ದೆ ಮಾಡಲು ಆಗುವುದಿಲ್ಲ. ಎದ್ದು ಓಡಾಡಲು ಆಗದಂತಹ ಸಂಕಟ ಇರುತ್ತದೆ. ತಲೆನೋವಿನಿಂದಾಗಿ ಹಣೆಯ ಭಾಗ, ಕಣ್ಣಿನ ಕೆಳಭಾಗ ಹಾಗೂ ಕಣ್ಣಿನ ಸುತ್ತ ನೋವು ಇರುತ್ತದೆ. ಮುಖ ಹಾಗೂ ಹಣೆಯ ಭಾಗದಲ್ಲಿ ಸಿಡಿತವನ್ನು ಉಂಟುಮಾಡುತ್ತದೆ. 

ಸೈನಸ್ ಬಂದಾಗ ನಿರ್ವಹಣೆ ಹೇಗೆ?

ಸೈನಸ್ ಬಂದಾಗ ಹೆಚ್ಚಿನವರು ಮಾತ್ರೆಯ ಮೊರೆಹೋಗುತ್ತಾರೆ. ಆದರೆ ಮಾತ್ರೆ ತೆಗೆದುಕೊಳ್ಳುವುದು ಒಳ್ಳೆಯದಲ್ಲ, ಮಾತ್ರೆ ತೆಗೆದುಕೊಳ್ಳುವುದರಿಂದ ಆ ಕ್ಷಣಕ್ಕೆ ನೋವು ಕಡಿಮೆಯಾಗುವುದು ಹಾಗೂ ಸ್ವಲ್ಪ ದಿನ ಬಿಟ್ಟು ಮತ್ತೆ ಕಾಡಲಾರಂಭಿಸುವುದು.

ಸೈನಸ್ ಆರೋಗ್ಯ ಸಮಸ್ಯೆ ಇರುವವರು ಹೆಚ್ಚು ನೀರು, ಸಕ್ಕರೆ ಹಾಕದ ಪಾನೀಯಗಳು ಹಾಗೂ ಬೆಚ್ಚಗಿನ ಪಾನೀಯಗಳನ್ನು ಆಗಾಗ ಸೇವಿಸುತ್ತಲೇ ಇರಬೇಕು. ಹೀಗೆ ದೇಹವನ್ನು ನಿರ್ಜಲೀಕರಣಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು. ದೇಹದಲ್ಲಿ ನೀರಿನಂಶ ಹೆಚ್ಚಾಗಿದ್ದರೆ ಕಿರಿಕಿರಿ ಉಂಟುಮಾಡುವ ಸೈನಸ್ಗೆತ ಪರಿಹಾರವನ್ನು ನೀಡುವುದು. ದೇಹವನ್ನು ನಿರ್ಜಲೀಕರಣ ಮಾಡುವ ಆಲ್ಕೋಹಾಲ್, ಕೆಫೀನ್ ಮತ್ತು ಧೂಮಪಾನಗಳನ್ನು ಆದಷ್ಟು ಬಿಡಬೇಕು. ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವ ಕಾಳು ಮೆಣಸು, ಕೆಂಪು ಮೆಣಸು ಹಾಗೂ ಇನ್ನಿತ ಮಸಾಲೆ ಪದಾರ್ಥಗಳನ್ನು ಬಳಸಬಹುದು. ಕಾಲು ಟೀ ಚಮಚದಷ್ಟು ತಾಜಾ ಮೂಲಂಗಿ ರಸವನ್ನು ಬಾಯಿಗೆ ಹಾಕಿಕೊಂಡು ಕೆಲವು ನಿಮಿಷಗಳ ಕಾಲ ಬಾಯಲ್ಲಿಯೇ ಹಿಡಿದಿಟ್ಟುಕೊಳ್ಳಬೇಕು. ಒಮ್ಮೆ ರುಚಿಯು ಆವಿಯಾಗಿದೆ ಎಂದಾಗ ಆ ರಸವನ್ನು ನುಂಗಬೇಕು.  

ನೀರನ್ನು ಕಾಯಿಸಿ ಬಿಸಿ ಹಬೆಯನ್ನು ತೆಗೆದುಕೊಳ್ಳುವುದು ಸೈನಸ್‍ ಸಮಸ್ಯೆಗೆ ಒಂದು ಉತ್ತಮ ಪರಿಹಾರ. ಬಿಸಿ ನೀರಿನ ಪಾತ್ರೆಗೆ ಸ್ವಲ್ಪ ನೀಲಗಿರಿ ಎಣ್ಣೆ ಸೇರಿಸಿ ಅದರ ಹಬೆಗೆ ಮುಖವನ್ನು ಹಿಡಿದು, ತಲೆಯ ಮೇಲ್ಭಾಗದಿಂದ ಹಬೆಯ ಪಾತ್ರೆ ಮುಚ್ಚುವಂತೆ ಟವೆಲ್ ಅಥವಾ ದಪ್ಪ ಬಟ್ಟೆಯನ್ನು ಮುಚ್ಚಿಕೊಳ್ಳಬೇಕು. ಆಗ ಬಿಸಿ ಹಬೆಯು ಮೂಗಿನೊಳಗೆ ಹೋಗಿ ಮುಚ್ಚಿರುವ ಉಸಿರಾಟ ಹಾಗೂ ಮೂಗಿನ ಮಾರ್ಗವು ತೆರವುಗೊಳ್ಳುತ್ತದೆ. ಹೀಗೆ ಸೈನಸ್ ಸಮಸ್ಯೆಯು ಬಹುಬೇಗ ಉಪಶಮನವಾಗುತ್ತದೆ. 

ಸೈನಸ್ ಗೆ ಮನೆಮದ್ದು

ಅರಿಶಿನ ಮತ್ತು ಶುಂಠಿಯು ಆರೋಗ್ಯಯುತವಾದ ಮಸಾಲ ಪದಾರ್ಥ. ಇವುಗಳನ್ನು ಬಿಸಿಬಿಸಿಯಾದ ಕಷಾಯ, ಚಹಾಗಳಲ್ಲಿ ಸೇರಿಸಿ ಕುಡಿಯುವುದರಿಂದ ಮೂಗಿನ ಮಾರ್ಗವನ್ನು ಸುಗಮಗೊಳಿಸುತ್ತದೆ. ಒಂದು ಟೀ ಚಮಚ ಜೇನುತುಪ್ಪದೊಂದಿಗೆ ತಾಜಾ ಶುಂಠಿ ರಸವನ್ನು ದಿನಕ್ಕೆ ಎರಡು ಬಾರಿ ಸೇವಿಸಿದರೆ ಸೈನಸ್ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಹಾಗೆಯೇ ಬಿಸಿಬಿಸಿಯಾದ ತರಕಾರಿ ಸೂಪ್ ಕುಡಿಯುವುದು ಅತ್ಯಂತ ಪರಿಣಾಮಕಾರಿ. ಇಷ್ಟೆಲ್ಲಾ ಮಾಡಿಯೂ ತಲೆನೋವು ಕಡಿಮೆಯಾಗದಿದ್ದರೆ ವೈದ್ಯರನ್ನು ಭೇಟಿಯಾಗಬೇಕು.

ಸೈನಸ್ ಸಮಸ್ಯೆ ಬರದಂತೆ ನೋಡಿಕೊಳ್ಳಲು ಸ್ವಚ್ಛತೆಯನ್ನು ಕಟ್ಟುನಿಟ್ಟಾಗಿ ಸದಾಕಾಲ ಪಾಲಿಸಬೇಕು. ನೆಗಡಿ ಮತ್ತು ಫ್ಲೂ ಬಂದಿರುವವರ ಹತ್ತಿರ ಸುಳಿಯಬಾರದು. ಅರೋಗ್ಯ ಕಾಪಾಡಿಕೊಳ್ಳಲು ಅಗತ್ಯವಾಗಿ ತೆಗೆದುಕೊಳ್ಳಬೇಕಾದ ಲಸಿಕೆಗಳನ್ನು ಸರಿಯಾಗಿ ಹಾಕಿಸಿಕೊಳ್ಳಬೇಕು. ಆಂಟಿಆಕ್ಸಿಡೆಂಟುಗಳು ಹೆಚ್ಚಾಗಿರುವ ದ್ರಾಕ್ಷಿ, ಪೀಚ್ ಮೊದಲಾದ ಹಣ್ನುಗಳನ್ನು ತಿನ್ನಬೇಕು. ದಿನನಿತ್ಯದ ಜೀವನದಲ್ಲಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಪರಾಗರೇಣುಗಳು, ಧೂಳು, ಸಿಮೆಂಟ್ ಹೀಗೆ ಅಲರ್ಜಿಕಾರಕಗಳು ಇದ್ದರೆ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು. ಸಿಗರೇಟು ಸೇದಬಾರದು. ಹಾಗೆಯೇ ಯಾರಾದರೂ ಸೇದುತ್ತಿದ್ದರೆ ಆ ಹೊಗೆಯನ್ನೂ ತೆಗೆದುಕೊಳ್ಳಬಾರದು. ಇಂದು ಹತ್ತು ಕೋಟಿಗೂ ಹೆಚ್ಚು ಭಾರತೀಯರನ್ನು ಈ ಸಮಸ್ಯೆ ಕಾಡುತ್ತಿದೆ.

ಸೈನಸ್ ಗೆ ಆಯುರ್ವೇದದಲ್ಲಿ ಪರಿಹಾರ

ಸೈನಸೈಟಿಸ್ಸಿಗೆ ಆಯುರ್ವೇದದಲ್ಲಿ ಅತ್ಯುತ್ತಮ ಪರಿಹಾರವಿದೆ. ಅದೆಂದರೆ ಏಳು ಅಥವಾ ಹದಿನಾಲ್ಕು ದಿನಗಳ ಕಾಲ ನಸ್ಯ ಚಿಕಿತ್ಸೆಯನ್ನು ತೆಗೆದುಕೊಳ್ಳುವುದು. ಇದರಲ್ಲಿ ಹಣೆ, ಕೆನ್ನೆ ಮತ್ತು ಮೂಗಿನ ಭಾಗದಲ್ಲಿ ಮಾಲೀಸು ಮಾಡಿ ಬಿಸಿ ಹಬೆಯನ್ನು ಕೊಟ್ಟು ನಂತರ ಮೂಗಿನಲ್ಲಿ ಔಷಧೀಯ ತೈಲಗಳ ಹನಿಗಳನ್ನು ಹಾಕಲಾಗುವುದು. 

ಸೈನಸ್ ಬರದಂತೆ ತಡೆಯಲು ಇವನ್ನೂ ಪಾಲಿಸಿ...

ಆಹಾರವನ್ನು ಆದಷ್ಟೂ ಬಿಸಿಯಾಗಿಯೇ ಸೇವಿಸಬೇಕು. ಸಾಧ್ಯವಾದಷ್ಟು ರಾತ್ರಿ ಹೊತ್ತು ಮೊಸರು, ಮಜ್ಜಿಗೆ ಅಥವಾ ಹುಳಿ ಇರುವ ಪದಾರ್ಥಗಳನ್ನು ಸೇವನೆ ಮಾಡುವುದು ಬೇಡ. ಬೆಳಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವ ಮುಂಚೆ ಬಿಸಿ ನೀರನ್ನು ಕುಡಿಯುವುದು ಒಳ್ಳೆಯದು. ಇದಕ್ಕೆ ಶುಂಠಿ ಅಥವಾ ತುಳಸಿ ಎಲೆಗಳನ್ನು ಹಾಕಿ ಕುಡಿಯುವುದು ಪರಿಣಾಮಕಾರಿ. 
ಪ್ರತಿದಿನ ಮನೆಯಿಂದ ಹೊರಗೆ ಹೋಗುವ ಮುಂಚೆ ಕರ್ಚೀಫಿಗೆ ಒಂದೆರಡು ಹನಿ ನೀಲಗಿರಿ ತೈಲವನ್ನು ಹಾಕಿಕೊಂಡು ಹೋಗಿ ಆಗಾಗ ಅದನ್ನು ಆಘ್ರಾಣಿಸುತ್ತಿರಬೇಕು. ಇದರಿಂದ ಸೈನಸ್ಸಿನ ಸಮಸ್ಯೆ ಹೆಚ್ಚು ಕಾಡುವುದಿಲ್ಲ. ಜೊತೆಗೆ ಬೆಚ್ಚಗಿರುವ ಉಡುಪನ್ನು ಧರಿಸಬೇಕು. ಹೊರಗೆ ಹೋಗಬೇಕಾದಾಗ ಕಿವಿಗೆ ಹತ್ತಿಯನ್ನು ಇಟ್ಟುಕೊಂಡು ಹೋಗಬೇಕು. ಬೆಳಿಗ್ಗೆ ಥಂಡಿಯಲ್ಲಿ ವಾಕಿಂಗ್ ಮಾಡುವ ಬದಲು ಸಂಜೆ ವಾಕ್ ಮಾಡಬಹುದು. ಆಹಾರದಲ್ಲಿ ಬೆಳ್ಳುಳ್ಳಿ ಬಳಕೆ ಮಾಡಬೇಕು. ಮಲಗುವಾಗಿ ದಿಂಬಿಗೆ ಒಂದೆರಡು ಹನಿ ನೀಲಗಿರಿ ತೈಲವನ್ನು ಸೇರಿಸಿ. ಹಾಗೆಯೇ ಸ್ನಾನ ಮಾಡುವಾಗ ಬಿಸಿನೀರಿಗೂ ಒಂದೆರಡು ಹನಿ ನೀಲಗಿರಿ ತೈಲವನ್ನು ಹಾಕಿಕೊಳ್ಳುವುದೂ ಒಳ್ಳೆಯದು. ದೀರ್ಘಕಾಲ ಸೈನಸ್ ಕಾಡುತ್ತಿದ್ದರೆ ತಜ್ಞ ವೈದ್ಯರು/ಆಯುರ್ವೇದ ವೈದ್ಯರನ್ನು ಕಾಣಬೇಕು.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com