ಮಳೆಗಾಲದಲ್ಲಿ ಕಾಡುವ ಸಾಮಾನ್ಯ ಕಾಯಿಲೆಗಳಿಗೆ ಮನೆಮದ್ದು (ಕುಶಲವೇ ಕ್ಷೇಮವೇ)

ಮಳೆಗಾದಲ್ಲಿ ಸ್ವಲ್ಪ ಮಳೆಯಲ್ಲಿ ನೆನದರೂ ತಕ್ಷಣ ಜ್ವರ ಕಾಣಿಸಿಕೊಳ್ಳುತ್ತದೆ. ಅಲರ್ಜಿ ತೊಂದರೆಯಿರುವವರಿಗಂತು ಸೀನು ಬರುವುದು, ಮೂಗು ಕಟ್ಟುವುದು ಅತ್ಯಂತ ಸಾಮಾನ್ಯ. ಉಬ್ಬಸ ರೋಗಿಗಳಿಗಂತು ತುಂಬಾ ಕಷ್ಟ.
ಮಳೆಗಾಲ (ಸಾಂಕೇತಿಕ ಚಿತ್ರ)
ಮಳೆಗಾಲ (ಸಾಂಕೇತಿಕ ಚಿತ್ರ)

ಮಳೆಗಾದಲ್ಲಿ ಸ್ವಲ್ಪ ಮಳೆಯಲ್ಲಿ ನೆನದರೂ ತಕ್ಷಣ ಜ್ವರ ಕಾಣಿಸಿಕೊಳ್ಳುತ್ತದೆ. ಅಲರ್ಜಿ ತೊಂದರೆಯಿರುವವರಿಗಂತು ಸೀನು ಬರುವುದು, ಮೂಗು ಕಟ್ಟುವುದು ಅತ್ಯಂತ ಸಾಮಾನ್ಯ. ಉಬ್ಬಸ ರೋಗಿಗಳಿಗಂತು ತುಂಬಾ ಕಷ್ಟ. ಹೊರಗಡೆ ಮೋಡ ಕಟ್ಟಿದ ವಾತಾವರಣ ಕಂಡಕೂಡಲೇ ಉಸಿರಾಟದಲ್ಲಿ ಏರುಪೇರು ಉಂಟಾಗುತ್ತದೆ. ಸಂಧಿವಾತ ಅಂದರೆ ಮಂಡಿ ನೋವಿನಿಂದ ಬಳಲುವವರಿಗೂ ತೊಂದರೆಯಾಗುತ್ತದೆ. ಚರ್ಮದ ಕಾಯಿಲೆಗಳು, ಇಸುಬು, ಸೋರಿಯಾಸಿಸ್, ಪಿತ್ತದ ಗಂಧೆಗಳು ಹೆಚ್ಚಾಗುತ್ತದೆ.

ಜ್ವರ

2 ಚಮಚೆ ತುಳಸಿ ಎಲೆಯ ರಸಕ್ಕೆ 2 ಚಿಟಿಕೆ ಕಾಳುಮೆಣಸಿನಪುಡಿ ಸೇವಿಸಿ, ಇದಕ್ಕೆ ಜೇನುತುಪ್ಪ ಬೆರೆಸಿ ಸೇವಿಸಬೇಕು. 3 ಗಂಟೆಗಳಿಗೊಮ್ಮೆ ತೆಗೆದುಕೊಳ್ಳಬೇಕು. ಅಮೃತಬಳ್ಳಿಯ ರಸವನ್ನು ಜೇನಿನೊಂದಿಗೆ ಬೆರೆಸಿ ದಿನಕ್ಕೆ ನಾಲ್ಕೈದು ಬಾರಿ ಕುಡಿಯಬೇಕು. 

ನೆಗಡಿ

ಒಂದು ಲವಂಗವನ್ನು ಬಾಯಲ್ಲಿಟ್ಟಿರಿಸಿ ಅದರ ರಸ ನುಂಗುತ್ತಿರಬೇಕು. ಅರಿಶಿನಪುಡಿಯನ್ನು ಕೆಂಡದ ಮೇಲೆ ಹಾಕಿ ಇಲ್ಲವೇ ಅರಿಶಿನಕೊಂಬಿನ ತುದಿಯನ್ನು ಕೆಂಡದಲ್ಲಿ ಸುಟ್ಟು ಅದರ ಹೊಗೆಯನ್ನು ಮೂಗಿನಿಂದ ಎಳೆದುಕೊಳ್ಳಬೇಕು.

ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಲೋಟ ಬಿಸಿನೀರು ಇಲ್ಲವೇ ಬಿಸಿಹಾಲಿಗೆ ಅರ್ಧ ಚಮಚೆಗೆ ಶುದ್ಧವಾದ ಅರಿಶಿನಪುಡಿ ಬೆರೆಸಿ, ಸ್ವಲ್ಪ ಬೆಲ್ಲ ಹಾಕಿ ಕುಡಿಯಬೇಕು. ಅರಿಶಿನಪುಡಿಯನ್ನು ಅಂಗಡಿಯಲ್ಲಿ ಸಿದ್ದ ಪ್ಯಾಕೇಟ್ ಖರೀದಿಸದೇ ಅರಿಶಿನ ಕೊಂಬು ತಂದು ಪುಡಿ ಮಾಡಿಟ್ಟುಕೊಂಡಲ್ಲಿ ಉತ್ತಮ. 

ಕೆಮ್ಮು

ಶುಂಠಿ, ಹಿಪ್ಪಲಿ, ಮೆಣಸು ಪ್ರತಿಯೊಂದು 10 ಗ್ರಾಂ, ಜೇಷ್ಠಮಧು 30 ಗ್ರಾಂ ಎಲ್ಲವನ್ನೂ ಕುಟ್ಟಿ ನುಣ್ಣಗೆ ಪುಡಿ ಮಾಡಿಟ್ಟುಕೊಂಡು ಒಂದು ಚಮಚೆ ಪುಡಿಯನ್ನು ಜೇನುತುಪ್ಪದಲ್ಲಿ ಬೆರೆಸಿ ದಿನಕ್ಕೆ 3 ಬಾರಿ ಸೇವಿಸಬೇಕು. 5 ಚಮಚೆ ಆಡುಸೋಗೆ ಎಲೆಯ ರಸಕ್ಕೆ ಒಂದು ಚಮಚೆ ಜೇನುತುಪ್ಪ ಬೆರೆಸಿ ಬೆಳಗ್ಗೆ ಹಾಗೂ ರಾತ್ರಿ ಊಟಕ್ಕೆ ಮುಂಚೆ ಸೇವಿಸಬೇಕು. 

ಗಂಟಲು ನೋವು

10 ಗ್ರಾಂ ಜೇಷ್ಠಮಧು ಕುಟ್ಟಿ ಪುಡಿ ಮಾಡಿ ಅದನ್ನು ಒಂದು ಲೋಟ ನೀರಿನಲ್ಲಿ ಕಷಾಯಕ್ಕಿಟ್ಟು ಅರ್ಧಲೋಟಕ್ಕಿಳಿಸಿ, ಆರಿಸಿ, ಶೋಧಿಸಿ, ಜೇನುತುಪ್ಪ ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿಯಬೇಕು. ದ್ರಾಕ್ಷಿ, ಕಾಳುಮೆಣಸು, ಜೇಷ್ಠಮಧು ಸಮಪ್ರಮಾಣದಲ್ಲಿ ಕುಟ್ಟಿ ಮಾತ್ರೆ ತಯಾರಿಸಿಟ್ಟುಕೊಂಡು ಎರಡು ಮಾತ್ರೆಯನ್ನು ದಿನಕ್ಕೆ ಮೂರು ಬಾರಿ ಸೇವಿಸಬೇಕು. ಆಡುಸೋಗೆ ಎಲೆಗೆ ಸ್ವಲ್ಪ ಬಿಸಿನೀರು ಹಾಕಿ ರಸ ತೆಗೆದು ಆ ರಸವನ್ನು 5 ಚಮಚೆ ತೆಗೆದುಕೊಂಡು 3-4 ಚಿಟಿಕಿ ಹಿಪ್ಪಲಿ ಪುಡಿ ಮತ್ತು ಜೇನುತುಪ್ಪ ಬೆರೆಸಿ 3-4 ಬಾರಿ ಸೇವಿಸಬೇಕು.

ಉಬ್ಬಸ

ಅರಿಶಿನ, ಕಾಳುಮೆಣಸು, ಹಿಪ್ಪಲಿ, ದ್ರಾಕ್ಷಿ, ಬೆಲ್ಲ, ಕಚೋರ, ಶುಂಠಿ ಇವುಗಳನ್ನು ಸಮಭಾಗ ಮಾಡಿ 5 ಗ್ರಾಂನಷ್ಟು ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ 2 ಇಲ್ಲವೇ 3 ಬಾರಿ ಸೇವಿಸಬೇಕು. ಆಡುಸೋಗೆ ಎಲೆ, ಬೆಳ್ಳುಳ್ಳಿ, ಮೆಣಸು, ಹಿಪ್ಪಲಿ, ಕಟುಕರೋಹಿಣಿ ಈ ಎಲ್ಲವುಗಳನ್ನು ಸೇವಿಸಿ ಅರೆದು ಒಂದು ಚಮಚೆಯಷ್ಟನ್ನು ತೆಗೆದುಕೊಂಡು ಬಿಸಿನೀರಿನಲ್ಲಿ ಸೇರಿಸಿ ದಿನ್ಕೆ 3 ಬಾರಿ ಸೇವಿಸುವುದರಿಂದ ಉಬ್ಬಸ ಕಡಿಮೆಯಾಗುತ್ತದೆ.

ಸ್ವರ ಒಡೆದಿದ್ದರೆ

ಒಂದೆಲಗ, ಬಜೆ, ಶುಂಠಿ, ಹಿಪ್ಪಲಿ ಸಮಭಾಗ ಕುಟ್ಟಿ ಪುಡಿ ಮಾಡಿಟ್ಟುಕೊಂಡು ದಿನಕ್ಕೆರಡು ಬಾರಿ ಜೇನುತುಪ್ಪದೊಂದಿಗೆ ಸೇವಿಸಬೇಕು.

ಸಂಧಿವಾತ

ಧನಿಯ, ಒಣಶುಂಠಿ ಎರಡನ್ನು 10 ಗ್ರಾಂ ತೆಗೆದುಕೊಂಡು ಕುಟ್ಟಿ ಪುಡಿಮಾಡಿ 4 ಲೋಟ ನೀರಿನಲ್ಲಿ ಹಾಕಿ ಕಷಾಯಕ್ಕಿಟ್ಟು ಒಂದು ಲೋಟಕ್ಕಿಳಿಸಿ, ಶೋಧಿಸಿ ದಿನಕ್ಕೆರಡು ಬಾರಿ ಕುಡಿಯಬೇಕು. ನೋವಿರುವ ಜಾಗಕ್ಕೆ ಎಳ್ಳೆಣ್ಣೆ, ಸಾಸಿವೆ ಎಣ್ಣೆಯನ್ನು ಬಿಸಿಮಾಡಿ ಹಚ್ಚಿ ಮಸಾಜ್ ಮಾಡಿ ನಂತರ ಶಾಖ ತೆಗೆದುಕೊಳ್ಳಬೇಕು. ಒಣಶುಂಠಿಯನ್ನು ನೀರಿನಲ್ಲಿ ತೇಯ್ದು ತೆಳುವಾಗಿ ನೋವಿರುವ ಜಾಗಕ್ಕೆ ಲೇಪಿಸಬೇಕು. ಹೊಂಗೆಯ ಎಲೆಯನ್ನು ಹಾಕಿ ಕುದಿಸಿದ ನೀರಿನಿಂದ ಶಾಖ ತೆಗೆದುಕೊಳ್ಳಬೇಕು. 

ಮಾಯಿಶ್ಚರೈಸರ್

ಮನೆಯಲ್ಲಿಯೇ ಮಾಯಿಶ್ಚರೈಸರ್ ತಯಾರಿಸಿಕೊಂಡು ಪ್ರತಿದಿನ ಮಲಗುವ ಮುಂಚೆ ಮುಖಕ್ಕೆ ಹಚ್ಚಿಕೊಂಡಲ್ಲಿ ಹಗಲು ಹೊತ್ತಿನಲ್ಲಿ ಯಾವುದೇ ಕ್ರೀಂ ಬಳಸುವ ಅವಶ್ಯಕತೆಯಿರುವುದಿಲ್ಲ. ಲೋಳೆರಸ (ಅಲೊವೆರಾ) ತಿರುಳು ಅಥವಾ ಜೆಲ್ 2 ಚಮಚೆ, ಬಾದಾಮಿ ಎಣ್ಣೆ 1 ಚಮಚೆ, ಬೆಣ್ಣೆ ಅರ್ಧ ಚಮಚೆ, ಗುಲಾಬಿ ಜಲ 1 ಚಮಚೆ ಈ ಎಲ್ಲವನ್ನು ಬೆರೆಸಿಟ್ಟುಕೊಂಡು ರಾತ್ರಿ ಹೊತ್ತು ಮುಖಕ್ಕೆ ಹಚ್ಚಿಕೊಳ್ಳವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. 

ತುಟಿಗಳಿಗೆ

ಪ್ರತಿದಿನ ರಾತ್ರಿ ಮಲಗುವಾಗ ತುಪ್ಪ ಅಥವಾ ಬೆಣ್ಣೆ ಇಲ್ಲವೇ ಮಜ್ಜಿಗೆ ತುಟಿಗಳಿಗೆ ಹಚ್ಚಿಕೊಂಡು ಮೃದುವಾಗಿ ಮಸಾಜ್ ಮಾಡಿಕೊಳ್ಳಬೇಕು. 

ಸ್ನಾನದ ಚೂರ್ಣ

ಕಡಲೆಕಾಳು, ಹೆಸರುಕಾಳು, ಮೆಂತ್ಯ ಇವುಗಳ (1:1:1/4 ಪ್ರಮಾಣದಲ್ಲಿ) ಹಿಟ್ಟು ತಯಾರಿಸಿಕೊಳ್ಳಬೇಕು. ಈ ಹಿಟ್ಟನ್ನು ಸ್ವಲ್ಪ ನೀರಿನಲ್ಲಿ ಕಲೆಸಿ ಸ್ನಾನಕ್ಕೆ ಬಳಸುವುದರಿಂದ ಸಾಬೂನಿನಂತೆ ಸ್ವಚ್ಛ ಮಾಡುವುದಲ್ಲದೇ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಚರ್ಮರೋಗದಿಂದ ಬಳಲುವವರು ಈ ಪುಡಿಗೆ ನಿಂಬೆಹಣ್ಣಿನ ಸಿಪ್ಪೆ, ಕಿತ್ತಳೆ ಸಿಪ್ಪೆ, ತುಳಸಿ, ಕಸ್ತೂರಿ, ಅರಿಶಿನ, ಕಚೋರ, ಸೇರಿಸಿ ಬೆರೆಸಿಟ್ಟುಕೊಂಡು ಬಳಸಬೇಕು. 

ಬಿಳಿಚಿಬ್ಬು

ಕೆಲವರಲ್ಲಿ ಎದೆ, ಕುತ್ತಿಗೆ, ಬೆನ್ನಿನ ಭಾಗದಲ್ಲಿ ಬಿಳಿಯ ಚುಕ್ಕೆ ಮತ್ತು ಮಚ್ಚೆಗಳಾಗಿರುತ್ತವೆ. ಅಂತಹವರು ಶ್ರೀಗಂಧ ಮತ್ತು ಬಜೆಯನ್ನು ಮಜ್ಜಿಗೆಯಲ್ಲಿ ಅರೆದು ಲೇಪಿಸಿಕೊಂಡು ಒಂದು ಗಂಟೆ ಸಮಯ ಬಿಟ್ಟು ಸ್ನಾನ ಮಾಡಬೇಕು. 

ಕೆಸರು ಹುಣ್ಣು

ಕಾಲಿನ ಬೆರಳುಗಳ ಸಂದಿಗಳಲ್ಲಿ ನವೆಯಾಗುವುದು; ಕೆಂಪಾಗಿ ನೋವು ಉಂಟಾಗುತ್ತದೆ. ಸದಾ ನೀರಿನಲ್ಲಿ ಕೆಲಸ ಮಾಡುವವರಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ. 20 ಗ್ರಾಂ ಜೇನು ಮೇಣವನ್ನು ಒಂದು ಪಾತ್ರೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ಕರಗಿಸಿ ನಂತರ ಅದಕ್ಕೆ 10 ಮಿಲಿ ಬೇವಿನೆಣ್ಣೆ ಮತ್ತು 10 ಮಿಲಿ ಕೊಬ್ಬರಿ ಎಣ್ಣೆ ಬೆರೆಸಿ ಆರಿದ ನಂತರ ಬಾಟಲಿಯಲ್ಲಿ ತುಂಬಿಟ್ಟುಕೊಳ್ಳಬೇಕು.

ಬೆಳಗ್ಗೆ ಕೆಲಸವೆಲ್ಲ ಮುಗಿದ ನಂತರ ಕಾಲಿನ ಬೆರಳುಗಳ ಸಂದಿಗಳಲ್ಲಿರುವ ತೇವಾಂಶವನ್ನು ಒರೆಸಿಕೊಂಡು, ಒಣಗಿದ ನಂತರ ಈ ಮುಲಾಮನ್ನು ಹಚ್ಚಿಕೊಳ್ಳಬೇಕು. ರಾತ್ರಿ ಮಲಗುವ ಮುಂಚೆಯು ಮುಲಾಮನ್ನು ಲೇಪಿಸಿಕೊಂಡಲ್ಲಿ ಒಳ್ಳೆಯದು. 

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ...

ಕಾಯಿಲೆಗಳು ಬಾರದಂತೆ ದೇಹದ ರೋಗ ನಿರೋಧಕಶಕ್ತಿ ಹೆಚ್ಚಿಸಿಕೊಳ್ಳಲು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಚಮಚೆ ನೆಲ್ಲಿಕಾಯಿ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ತಿನ್ನಬೇಕು. ಕರೊನಾ ಬಾರದಂತೆ ನೋಡಿಕೊಳ್ಳಲು ಅಮೃತಬಳ್ಳಿ ರಸ, ತುಳಸಿ ರಸವನ್ನು ನೆಲ್ಲಿಕಾಯಿ ಪುಡಿಯೊಂದಿಗೆ ಜೇನುತುಪ್ಪ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಬೇಕು.  ಅರಿಶಿನ, ಬೆಳ್ಳುಳ್ಳಿ, ಶುಂಠಿ, ಮೆಣಸುಗಳನ್ನು ಆಹಾರ ಅಡುಗೆಗೆ ತಯಾರಿಸುವಾಗ ಹೆಚ್ಚಾಗಿ ಬಳಸಬೇಕು.          

ಪರಿಸರ ಸ್ವಚ್ಛತೆ

ಪರಿಸರದ ಸ್ವಚ್ಛತೆ ಬಹಳ ಮುಖ್ಯ. ಮನೆಯ ಒಳಗೆ ಮತ್ತು ಹೊರಗೆ ಎರಡನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆಯ ಸುತ್ತಮುತ್ತ ಗುಂಡಿಗಳಿದ್ದಲ್ಲಿ ನೀರು ನಿಲ್ಲುವಂತಿದ್ದರೆ ಅಂತಹುಗಳಿಂದಲೇ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಮಲೇರಿಯಾ, ಚಿಕುನ್‍ಗುನ್ಯದಂತಹ ಕಾಯಿಲೆಗಳು ಹರಡುವುದು ಹೆಚ್ಚು. ಬ್ಲೀಚಿಂಗ್ ಪೌಡರ್ ಹಾಕಿ ಸ್ವಚ್ಛಗೊಳಿಸಬೇಕು. ಕಸ, ಕಡ್ಡಿ, ಒಡೆದ ಕುಂಡ, ತೆಂಗಿನ ಚಿಪ್ಪು ಮುಂತಾದವುಗಳನ್ನು ಹಾಗೆಯೆ ಬಿಡಬಾರದು. ಸ್ವಚ್ಛತೆಯೇ ನಮ್ಮ ಪ್ರಥಮ ಆದ್ಯತೆಯಾಗಬೇಕು. 

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com