ಮೂರ್ಛೆ ರೋಗ ಅಥವಾ ಎಪಿಲೆಪ್ಸಿಗೆ ಆಯುರ್ವೇದ ಚಿಕಿತ್ಸೆ... (ಕುಶಲವೇ ಕ್ಷೇಮವೇ)
ಮೆದುಳು ನಮ್ಮ ದೇಹದ ಮಹತ್ವಪೂರ್ಣ ಅಂಗ. ಮೆದುಳಿನಲ್ಲಿ ಉಂಟಾಗುವ ವಿದ್ಯುತ್ ತರಂಗಗಳ ಪ್ರವಾಹದಲ್ಲಿ ಒಮ್ಮೆಲೇ ಏರುಪೇರಾಗಿ ವೇಗವಾಗಿ ಬಿಡುಗಡೆಯಾಗುವ ತೀವ್ರಗತಿಯ ವಿದ್ಯುತ್ ತರಂಗಗಳಿಂದಾಗಿ ದೇಹದಲ್ಲಿ ಉಂಟಾಗುವ ಸೆಳೆತವೇ ಮೂರ್ಛೆ ರೋಗ.
Published: 13th August 2022 11:58 AM | Last Updated: 20th August 2022 04:52 PM | A+A A-

ಎಪಿಲೆಪ್ಸಿ
ಮೆದುಳು ನಮ್ಮ ದೇಹದ ಮಹತ್ವಪೂರ್ಣ ಅಂಗ. ಮೆದುಳಿನಲ್ಲಿ ಉಂಟಾಗುವ ವಿದ್ಯುತ್ ತರಂಗಗಳ ಪ್ರವಾಹದಲ್ಲಿ ಒಮ್ಮೆಲೇ ಏರುಪೇರಾಗಿ ವೇಗವಾಗಿ ಬಿಡುಗಡೆಯಾಗುವ ತೀವ್ರಗತಿಯ ವಿದ್ಯುತ್ ತರಂಗಗಳಿಂದಾಗಿ ದೇಹದಲ್ಲಿ ಉಂಟಾಗುವ ಸೆಳೆತವೇ ಮೂರ್ಛೆ ರೋಗ. ಇದರಿಂದ ಜೋರಾದ ಚೀರುವಿಕೆಯ ಜೊತೆ ಬಾಯಿಯಲ್ಲಿ ನೊರೆ ಹೊರಬಂದು ಸ್ವಲ್ಪ ಹೊತ್ತಿನ ತನಕ (ಕೆಲವು ಸೆಕೆಂಡುಗಳಿಂದ ಒಂದು ನಿಮಿಷದತನಕ) ಪ್ರಜ್ಞಾಹೀನತೆ ಉಂಟಾಗುತ್ತದೆ. ದೇಹವಿಡೀ ನಡುಗಬಹುದು.
ಎಪಿಲೆಪ್ಸಿ ಅಥವಾ ಮೂರ್ಛೆ ರೋಗಕ್ಕೆ ಕಾರಣಗಳು
ಮೆದುಳಿಗೆ ಹಾನಿ ಉಂಟುಮಾಡುವಂತಹ ಹಲವಾರು ಕಾರಣಗಳಿಂದಾಗಿ ಈ ತೊಂದರೆ ತಲೆದೋರಬಹುದು. ಇದುಚಯಾಪಚಯ ವ್ಯವಸ್ಥೆಯಲ್ಲಿನ ತೊಂದರೆ, ಸೋಂಕು, ರಕ್ತನಾಳ ಸಮಸ್ಯೆ ಮತ್ತು ಮೆದುಳಿನ ಗಡ್ಡೆಯ ರೂಪದಲ್ಲಿಯೂ ವ್ಯಕ್ತವಾಗಬಹುದು. ಈ ಸ್ಥಿತಿಯಲ್ಲಿ ಮುಖದ ಭಾಗ ಸೇರಿದಂತೆ ಕೈ ಅಥವಾ ಕಾಲುಗಳು ಅನಿಯಂತ್ರಿತವಾಗಿ ಚಲಿಸುತ್ತವೆ. ಮುಖವು ಒಂದು ಕಡೆಗೆ ವಾಲಿಕೊಂಡು ಕಣ್ಣು ಗುಡ್ಡೆಗಳು ಮೇಲ್ಮುಖವಾಗಿ ತಿರುಗುತ್ತವೆ. ಇದು ದೇಹದ ಯಾವುದಾದರೂ ಒಂದು ಭಾಗಕ್ಕೆ ಮಾತ್ರ ಆಗಬಹುದು ಅಥವಾ ಪದೇ ಪದೇ ಮರುಕಳಿಸಬಹುದು. ಮಕ್ಕಳಲ್ಲಿ ಈ ಸೆಳೆತ ಬಂದಾಗ ಅದರೊಟ್ಟಿಗೆ ಜ್ವರ ಕಾಣಿಸಿಕೊಳ್ಳಬಹುದು. ಜೊತೆಗೆ ಸಂಕೀರ್ಣ ಸಮಸ್ಯೆಗಳು ಕೂಡ ಇರಬಹುದು.
ಇದನ್ನೂ ಓದಿ: ಆಸ್ತಮಾ ಸಮಸ್ಯೆಗೆ ಮನೆಮದ್ದುಗಳು... (ಕುಶಲವೇ ಕ್ಷೇಮವೇ)
ಮೂರ್ಛೆ ರೋಗಕ್ಕೆ ನಿರ್ದಿಷ್ಟ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅನುವಂಶೀಯ ತೊಂದರೆ ಮತ್ತು ಮೆದುಳಿನಲ್ಲಿ ಉಂಟಾಗುವ ಅಸಹಜತೆಗಳು ಇದಕ್ಕೆ ಕಾರಣವಾಗಬಹುದು. ತಲೆಗೆ ಬಿದ್ದ ಪೆಟ್ಟು, ಪಾರ್ಶ್ವವಾಯು, ಮೆದುಳುಗಡ್ಡೆ, ಮೆದುಳಿನಲ್ಲಿ ರಕ್ತಸ್ರಾವ, ಮೆದುಳಿನ ರಕ್ತನಾಳಗಳ ದೋಷಪೂರ್ಣ ರಚನೆ, ಜನನದ ವೇಳೆ ಆಗುವ ಗಾಯ ಮತ್ತು ಸೋಂಕುಗಳಿಂದ ಮೂರ್ಛೆ ರೋಗ ಉಂಟಾಗಬಹುದು.
ಮೂರ್ಛೆರೋಗ ಮೆದುಳಿಗೆ ಸಂಬಂಧಿಸಿದ ಸಮಸ್ಯೆ, ಮಾನಸಿಕ ಅಸ್ವಸ್ಥತೆಯಲ್ಲ. ಇದು ಎಲ್ಲಾ ವಯೋಮಾನದವರಲ್ಲಿ ಕಂಡುಬರುತ್ತದೆ. ಮೆದುಳಿನ ಚಟುವಟಿಕೆಯಲ್ಲಾಗುವ ಏರುಪೇರು ಮೂರ್ಛೆರೋಗಕ್ಕೆ ಕಾರಣ. ಕೆಲವೊಮ್ಮೆ ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಮೂರ್ಛೆರೋಗ ಕಾಣಿಸಿಕೊಳ್ಳಬಹುದು.
ಸೂಕ್ತ ವೈದ್ಯಕೀಯ ಚಿಕಿತ್ಸೆ ಮತ್ತು ಪರಿಣಾಮಕಾರಿ ಔಷಧಿಗಳನ್ನು ನೀಡುವುದರಿಂದ ಇದನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು. ಈ ಸಮಸ್ಯೆಗೆ ತುತ್ತಾದವರು ನಿಗದಿತ ಅವಧಿಯವರೆಗೆ ಕ್ರಮಬದ್ಧವಾ ಔಷಧಿ ತೆಗೆದುಕೊಳ್ಳಬೇಕಾಗುತ್ತದೆ. ಮೂರ್ಛೆರೋಗವನ್ನು ಆದಷ್ಟು ಬೇಗ ಪತ್ತೆ ಹಚ್ಚಿ ಚಿಕಿತ್ಸೆ ಆರಂಭಿಸುವುದರಿಂದ ಮೆದುಳಿಗೆ ಹೆಚ್ಚಿನ ಹಾನಿಯಾಗದಂತೆ ತಡೆಯಬಹುದು. ಅಸಹಜ ಮೆದುಳಿನಿಂದ ಉಂಟಾಗುವ ಮೂರ್ಛೆರೋಗದ ಮೂಲವನ್ನು ಈಗ ಅತ್ಯಾಧುನಿಕ ಉಪಕರಣಗಳ ನೆರವಿನಿಂದ ಪತ್ತೆ ಹಚ್ಚಬಹುದು.
ಎಪಿಲೆಪ್ಸಿ ಅಥವಾ ಮೂರ್ಛೆ ರೋಗ ಇರುವವರು ವಹಿಸಬೇಕಾದ ಜಾಗ್ರತೆಗಳು
ಮೂರ್ಛೆರೋಗ ಇರುವವರು ಸುರಕ್ಷಿತ ವಾಹನ ಚಾಲನೆ ಹಾಗೂ ತಲೆಗೆ ಪೆಟ್ಟು ಬೀಳದಂತೆ ಎಚ್ಚರಿಕೆ ವಹಿಸಬೇಕು. ಮೆದುಳಿನ ಆಘಾತ (ಪಾಶ್ರ್ವವಾಯು ಮತ್ತು ಬ್ರೈನ್ ಹ್ಯಾಮರೇಜ್) ಆಗದಂತೆ ಜಾಗ್ರತೆ ವಹಿಸುವುದು ಬಹಳ ಮುಖ್ಯ. ನರಸಂಬಂಧಿ ಸೋಂಕನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡಬೇಕು. ಈ ರೋಗದ ನಿಯಂತ್ರಣಕ್ಕೆ ನಿಯಮಿತ ವ್ಯಾಯಾಮ, ಆಹಾರಕ್ರಮ ಮತ್ತು ನಿದ್ದೆಯಿಂದ ಕೂಡಿದ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ.
ಇದನ್ನೂ ಓದಿ: ಕಿಡ್ನಿ ಸ್ಟೋನ್ ಅಥವಾ ಮೂತ್ರಕೋಶದಲ್ಲಿ ಕಲ್ಲು ಉಂಟಾಗಲು ಕಾರಣಗಳೇನು? ತಡೆಯುವುದು ಹೇಗೆ?
ಯಾರಾದರೂ ಮೂರ್ಛೆ ಹೋದರೆ ಅವರಿಗೆ ಅಪಾಯವಾಗದಂತೆ ಕಾಳಜಿ ವಹಿಸಬೇಕಾಗುತ್ತದೆ. ಚೂಪಾದ ವಸ್ತುಗಳು, ಕಲ್ಲು, ನೀರು, ಬೆಂಕಿ ಇಂತಹ ವಸ್ತುಗಳಿಂದ ಅವರನ್ನು ದೂರವಿರಿಸಬೇಕು. ಉಸಿರಾಟ ಕ್ರಿಯೆ ಸರಳವಾಗಿ ನಡೆಯುವಂತೆ ನೋಡಿಕೊಳ್ಳುವುದು ತುಂಬಾ ಅಗತ್ಯ. ನಾಲಿಗೆ ಕಚ್ಚಿಕೊಳ್ಳುವ ಸಂಭವ ಹೆಚ್ಚಿರುವುದರಿಂದ ರಕ್ಷಣೆಗಾಗಿ ಹಲ್ಲುಗಳು ನಡುವೆ ಬಟ್ಟೆಯನ್ನು ಇಡಬೇಕು. ರೋಗಿಗಳು ಕಂಪಿಸುತ್ತಿರುವಾಗ ಅವರನ್ನು ಕುಳ್ಳಿರಿಸಬಾರದು. ಸಮತಟ್ಟಾದ ನೆಲದ ಮೇಲೆ ಮಲಗಿಸಿ ದೇಹದ ಸೆಳೆತ ನಿಲ್ಲುವವರೆಗೂ ಆ ವ್ಯಕ್ತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ನಂತರ ವೈದ್ಯರನ್ನು ಸಂಪರ್ಕಿಸಬೇಕು. ಈ ರೋಗದಿಂದ ಬಳಲುವವರು ನಿರಂತರವಾಗಿ ವೈದ್ಯರು ನೀಡುವ ಮಾರ್ಗದರ್ಶನವನ್ನು ತಪ್ಪದೇ ಪಾಲಿಸುವುದು ಅತೀ ಅಗತ್ಯವಾಗಿರುತ್ತದೆ. ಎಂದಿಗೂ ನಿರ್ಲಕ್ಷ್ಯ ಸಲ್ಲದು.
ಮೂರ್ಛೆ ರೋಗಕ್ಕೆ ಆಯುರ್ವೇದದಲ್ಲಿ ಚಿಕಿತ್ಸೆ
ಮೂರ್ಛೆರೋಗಕ್ಕೆ ನಿರ್ದಿಷ್ಟ ಕಾಲ ಅಥವಾ ಕೆಲವು ವರ್ಷಗಳ ಕಾಲಚಿಕಿತ್ಸೆ ಬೇಕಾಗಬಹುದು. ಆಯುರ್ವೇದದಲ್ಲಿ ಇದಕ್ಕೆ ಪಂಚಕರ್ಮ, ಶಿರೋಧಾರಾ, ನಸ್ಯಕರ್ಮ ಮತ್ತು ಶೀರೋಪಿಚು ಚಿಕಿತ್ಸೆಗಳು ಪರಿಣಾಮಕಾರಿಯಾಗಿವೆ. ಔಷಧೀಯ ತೈಲವನ್ನು ಹಣೆಯ ಮೇಲೆ ಧಾರೆಯಾಗಿ ಹರಿಸಿ ಪರಿಹಾರ ನೀಡಲಾಗುತ್ತದೆ. ಈ ಚಿಕಿತ್ಸೆಯನ್ನು ನಿರಂತರವಾಗಿ ಒಂದು ವಾರದ ತನಕ ಪ್ರತಿದಿನ ಒಂದು ಗಂಟೆ ಕಾಲ ತೆಗೆದುಕೊಳ್ಳಬೇಕಾಗುತ್ತದೆ. ಜೊತೆಗೆಅಭ್ಯಂಗ ಮತ್ತು ಸ್ವೇದನ ಚಿಕಿತ್ಸೆಗಳೂ ಇವೆ.
ರೋಗಿಗಳ ಜೊತೆಯಲ್ಲಿ ಸದಾಕಾಲ ಯಾರಾದರೂ ಒಬ್ಬರು ಇರಬೇಕು. ಅವರಿಗೆ ಇಂತಹ ಕಾಯಿಲೆ ಇದೆ ಎಂದು ಒಂದು ಕಾಗದದಲ್ಲಿ ಬರೆದು ಅದನ್ನು ಅವರ ಜೇಬಿನಲ್ಲಿ ಅಥವಾ ಅವರು ಧರಿಸುವ ಉಡುಪಿನಲ್ಲಿ/ ಹೆಣ್ಣುಮಕ್ಕಳಾದರೆ ವ್ಯಾನಿಟಿ ಬ್ಯಾಗಿನಲ್ಲಿ ಇಡಬೇಕು. ಅವರನ್ನು ಒಬ್ಬರೇ ಹೊರಗೆ ಕಳಿಸಬಾರದು. ಜಾಗ್ರತೆಯಿಂದ ನೋಡಿಕೊಳ್ಳಬೇಕು. ಬೆಂಕಿ ಮತ್ತು ನೀರಿನ ಹತ್ತಿರ ಒಬ್ಬರನ್ನೇ ಬಿಡಬಾರದು. ರಸ್ತೆ ದಾಟುವಾಗ ಅವರು ಒಬ್ಬರೇ ಇರಬಾರದು. ಗಾಬರಿ/ಆತಂಕ ಇಲ್ಲದೇ ಮಾನಸಿಕವಾಗಿ ಅವರು ನೆಮ್ಮದಿಯಿಂದ ಇರಬೇಕು. ಒತ್ತಡದಿಂದ ಮುಕ್ತರಾಗಿರಬೇಕು. ಪೋಷಕಾಂಶಯುಕ್ತ ಆಹಾರವನ್ನು ಸೇವಿಸಬೇಕು. ದಿನಕ್ಕೆ ಆರು-ಎಂಟು ಗಂಟೆಗಳ ಕಾಲ ನಿದ್ರೆ ಮಾಡಬೇಕು. ಮನೆಯವರು ಹೆಚ್ಚಾಗಿ ಅವರ ಕಾಳಜಿಯನ್ನು ಮಾಡಬೇಕು.
ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com