ಮೂಲವ್ಯಾಧಿ ಅಥವಾ ಪೈಲ್ಸ್: ಆಹಾರಕ್ರಮ ಎಷ್ಟು ಮುಖ್ಯ? (ಕುಶಲವೇ ಕ್ಷೇಮವೇ)

ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಮೂಲವ್ಯಾಧಿಯೂ (ಪೈಲ್ಸ್) ಒಂದು. ಇದಕ್ಕೆ ಹೆಮೆರಾಯ್ಡ್ ಅಥವಾ ಮೊಳೆರೋಗ ಎಂದೂ ಹೆಸರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಮೂಲವ್ಯಾಧಿಯೂ (ಪೈಲ್ಸ್) ಒಂದು. ಇದಕ್ಕೆ ಹೆಮೆರಾಯ್ಡ್ ಅಥವಾ ಮೊಳೆರೋಗ ಎಂದೂ ಹೆಸರಿದೆ. ಯಾರೊಂದಿಗೂ ಹೇಳಿಕೊಳ್ಳಲು ಮುಜುಗರಪಡುವ ಈ ಕಾಯಿಲೆಯ ಹಿಂಸೆ ಅನುಭವಿಸಿದವರಿಗೆ ಮಾತ್ರ ಗೊತ್ತು. ಇದರಿಂದ ಗುದನಾಳದ ಒಳಪದರದಲ್ಲಿ ಇರುವ ರಕ್ತನಾಳಗಳು ಸೋಂಕಿಗೊಳಗಾಗಿ ಉಬ್ಬಿಕೊಂಡು ಮಲವಿಸರ್ಜನೆಯ ಸಮಯದಲ್ಲಿ ಒತ್ತಲ್ಪಟ್ಟು ಬಿರಿದು ರಕ್ತ ಒಸರುತ್ತದೆ. ಜೊತೆಗೆ ಗುದದ್ವಾರದಲ್ಲಿ ಚರ್ಮದ ನೋವಿನ ಗುಳ್ಳೆ ಕಾಣಿಸಿಕೊಳ್ಳುತ್ತದೆ. ಇದು ಮಲವಿಸರ್ಜನೆ ಮಾಡುವಾಗ ನೋವನ್ನು ಉಂಟುಮಾಡುತ್ತದೆ.

ಮೂಲವ್ಯಾಧಿ ಆರೋಗ್ಯ ಸಮಸ್ಯೆಯ ಲಕ್ಷಣಗಳು

ಮೂಲವ್ಯಾಧಿ ಬೇರೆಬೇರೆ ಬಗೆಯಲ್ಲಿ ಕಂಡು ಬರುತ್ತದೆ. ಕೆಲವರಿಗೆ ಗುದದ್ವಾರದಲ್ಲಿ ಸ್ವಲ್ಪ ಹೊರಗಡೆ ಭಾಗದಲ್ಲಿ ಪೈಲ್ಸ್ ಉಂಟಾದರೆ ಇತರರಿಗೆ ಗುದದ್ವಾರದ ಒಳಗೆ ಪೈಲ್ಸ್ ಸಮಸ್ಯೆ (ಫಿಸ್ಟುಲಾ, ಫಿಷರ್ಸ್) ಕಂಡು ಬರುತ್ತದೆ. ಆರೋಗ್ಯ ತಜ್ಞರ ಪ್ರಕಾರ ಮೂಲವ್ಯಾಧಿಗೆ ಬಹು ಮುಖ್ಯ ಕಾರಣವೆಂದರೆ ಮಲಬದ್ಧತೆ. ಸಾಮಾನ್ಯವಾಗಿ ಹೆಚ್ಚು ಕಾಲ ಕುಳಿತು ಕೆಲಸ ಮಾಡುವವರಿಗೆ ಈ ಮೂಲವ್ಯಾಧಿ ಕಂಡುಬರುತ್ತದೆ. ಜೊತೆಗೆ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಳಲ್ಲಿ ತೊಡಗದೇ ಇರುವವರಿಗೆ ಈ ಸಮಸ್ಯೆ ಕಾಡುತ್ತದೆ.  

ಅನುವಂಶಿಕ ಕಾರಣಗಳಿಂದ ಹಿಡಿದು ಮಲಬದ್ಧತೆ, ಕೆಲವು ಔಷಧಿಗಳ ಅಡ್ಡಪರಿಣಾಮಗಳು, ಜೀವನಶೈಲಿ ಮೊದಲಾದವುಗಳಿಂದ ಮೂಲವ್ಯಾಧಿ ಎದುರಾಗಬಹುದು. ಇದರಿಂದ ಕೆಲವೊಮ್ಮೆ ಕುಳಿತುಕೊಳ್ಳಲು ಮತ್ತು ಮಲಗಲು ಕಷ್ಟವಾಗುವುದು.

ಈ ರೋಗ ಸಂಭವಿಸಲು ಮುಖ್ಯ ಕಾರಣ ಅನಿಯಮಿತ ದಿನಚರಿ, ಆಹಾರ ಪದ್ಧತಿ. ಬೊಜ್ಜು ಮತ್ತು ಮಲಬದ್ಧತೆ. ಅತಿಯಾದ ದೈಹಿಕ/ಮಾನಸಿಕ ಒತ್ತಡ, ಮಾಂಸಾಹಾರಿ ಆಹಾರ, ಆಲ್ಕೋಹಾಲ್ ಮತ್ತು ಮಸಾಲೆಯುಕ್ತ ಆಹಾರಗಳ ಸೇವನೆ ಇತರ ಕೆಲವು ಕಾರಣಗಳಾಗಿವೆ. ಸಾಮಾನ್ಯವಾಗಿ ಇಡೀ ದಿನ ಕುಳಿತು ಕೆಲಸ ಮಾಡುವವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಮೂಲವ್ಯಾಧಿ ಇರುವವರಿಗೆ ಮಲವಿಸರ್ಜನೆ ಮಾಡಿಯಾದರೂ ಇನ್ನೂ ಮಲ ತುಂಬಿರುವ ಅನುಭವವಾಗುತ್ತದೆ. ಮಲದ್ವಾರದ ಸುತ್ತಲೂ ತುರಿಕೆ ಮತ್ತು ಗುದದ್ವಾರ ಕೆಂಪಾಗಬಹುದು. ಮಲ ವಿಸರ್ಜನೆ ಸಮಯ ನೋವು, ಗುದದ್ವಾರದ ಸುತ್ತ ಗಟ್ಟಿಯಾದ ನೋವನ್ನುಂಟುಮಾಡುವ ಗಂಟು ಮತ್ತು ಮಲದಲ್ಲಿ ರಕ್ತ ಹೋಗುವಿಕೆಯನ್ನು ಕಾಣಬಹುದು. ಇಂತಹ ಪರಿಸ್ಥಿತಿಯಲ್ಲಿ ಗುದದ್ವಾರದಲ್ಲಿ ನವೆ ಉಂಟಾಗುವುದು ಸಹಜ. ಆದರೆ ಅದನ್ನು ಕೆರೆದುಕೊಳ್ಳಬಾರದು. ಉಗುರು ತಾಕಿದರೆ ಅಲ್ಲಿನ ಮೃದುಚರ್ಮ ಬಿರುಕು ಬಿಡಬಹುದು. ಆ ಭಾಗದಲ್ಲಿ ನೋವಿದ್ದರೆ ಸ್ನಾನದ ತೊಟ್ಟಿಯಲ್ಲಿ ಉಗುರು ಬೆಚ್ಚನೆ ನೀರನ್ನು ತುಂಬಿ ಅದರಲ್ಲಿ ದೇಹದ ಕೆಳಭಾಗವನ್ನು ಹತ್ತರಿಂದ ಹದಿನೈದು ನಿಮಿಷ ಮುಳುಗಿಸಿಡಿ. ಮೂಲವ್ಯಾಧಿಯ ನೋವಿನ ನಿವಾರಣೆಗೆ ಆಲೋವಿರಾ (ಲೋಳೆಸರ) ತಿರುಳು ಮತ್ತು ಹರಳೆಣ್ಣೆಯನ್ನು ರಾತ್ರಿ ಹೊತ್ತು ಮತ್ತು ಮಲವಿಸರ್ಜನೆ ನಂತರ ಹಚ್ಚಿಕೊಳ್ಳಬಹುದು.

ಮೂಲವ್ಯಾಧಿ ಗುಣಪಡಿಸಲು ಆಹಾರಕ್ರಮ ಮುಖ್ಯ

ಮೂಲವ್ಯಾಧಿ ಸಮಸ್ಯೆ ಗುಣಪಡಿಸಲು ಮೊದಲು ಸಾಕಷ್ಟು ನಾರಿನಂಶವಿರುವ ಮತ್ತು ಮೃದುವಾಗಿರುವ ಆಹಾರವನ್ನು ಸೇವಿಸಬೇಕು. ಏಕೆಂದರೆ ನಾರಿನಂಶವಿರುವ ಆಹಾರ ಜೀರ್ಣಕ್ರಿಯೆಗೆ ಸಹಾಯ ಮಾಡುವುದರಿಂದ ಮಲವಿಸರ್ಜನೆ ಸರಾಗವಾಗಿ ನಡೆಯುವುದು. ಹಲವಾರು ಧಾನ್ಯಗಳಲ್ಲಿ ಪೋಷಕಾಂಶ ಹಾಗೂ ನಾರಿನಂಶವಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಹಾಗೂ ಇದರಿಂದ ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ. ಒಬ್ಬ ಮನುಷ್ಯನಿಗೆ ಪ್ರತಿದಿನಕ್ಕೆ ಕನಿಷ್ಠ 30 ಗ್ರಾಂನಷ್ಟು ನಾರಿನಂಶ ಅಗತ್ಯವಿರುತ್ತದೆ. ಆದ್ದರಿಂದ ನಾರಿನಂಶವಿರುವ ಬಾರ್ಲಿ, ನವಣೆ, ಕೆಂಪಕ್ಕಿ ಅನ್ನ ಮತ್ತು ಓಟ್ಸನ್ನು ಪ್ರತಿನಿತ್ಯ ಸೇವಿಸಬೇಕು.

ಆಹಾರದಲ್ಲಿ ಹೆಚ್ಚು ಉಪ್ಪನ್ನು ಹಾಕಿಕೊಳ್ಳಬಾರದು. ಹೆಚ್ಚು ಉಪ್ಪು ಸೇವನೆಯಿಂದ ರಕ್ತದಲ್ಲಿ ನೀರಿನಂಶ ಹೆಚ್ಚಾಗಿ ಇದರಿಂದ ಗುದದ್ವಾರದ ರಕ್ತನಾಳಗಳು ಉಬ್ಬಿಕೊಂಡು ಮಲವಿಸರ್ಜನೆ ಮಾಡುವಾಗಿ ತೊಂದರೆಯಾಗುತ್ತದೆ. ಆದ್ದರಿಂದ ಉಪ್ಪನ್ನು ಆದಷ್ಟು ಮಿತವಾಗಿ ಸೇವಿಸಬೇಕು. ಹೆಚ್ಚು ತೂಕ ಇದ್ದರೆ ಕಡಿಮೆ ಮಾಡಬೇಕು. ಕಾಫಿ ಮತ್ತು ಟೀಗಳನ್ನು ಹೆಚ್ಚು ಕುಡಿಯಬಾರದು. ಮಲಮೂತ್ರಗಳನ್ನು ತಡೆಯಬಾರದು. ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿ ಮೂಲವ್ಯಾಧಿ ಕಾಣಿಸಿಕೊಳ್ಳುವ ಸಂಭವ ಇರುವುದರಿಂದ ಅವರು ಹೆಚ್ಚಿನ ಕಾಳಜಿ ವಹಿಸಬೇಕು. ಮಾನಸಿಕ ಒತ್ತಡದಿಂದ ಹೊರಬರಬೇಕು.

ಪ್ರತಿದಿನ ಸಾಕಷ್ಟು ನೀರು ಅಂದರೆ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯಬೇಕು. ನೀರು ದೇಹದಲ್ಲಿನ ಎಲ್ಲಾ ಕಲ್ಮಷಗಳನ್ನು ಹೊರಹಾಕಲು ಸಹಾಯಕವಾಗಿದೆ. ಅಲ್ಲದೆ ಕರುಳನ್ನು ಬಿಸಿಯಾಗದಂತೆ ತಡೆಯುತ್ತದೆ. ಹೀಗಾಗಿ ಮೂಲವ್ಯಾಧಿ ಸಮಸ್ಯೆ ಇರುವವರು ಸ್ವಲ್ಪ ಹೆಚ್ಚು ನೀರನ್ನು ಕುಡಿಯಬೇಕು. ಆಲೋವಿರಾದ (ಲೋಳೆಸರ) ರಸವನ್ನು ದಿನಕ್ಕೆ ಮೂರು-ನಾಲ್ಕು ಬಾರಿ ಸೇವಿಸಬೇಕು. ಐವತ್ತು ಮಿಲಿಲೀಟರ್ ಈರುಳ್ಳಿ ರಸವನ್ನು ಮಜ್ಜಿಗೆಯಲ್ಲಿ ಬೆರೆಸಿ ಊಟದ ನಂತರ ಕುಡಿಯಬೇಕು. ಸುವರ್ಣಗೆಡ್ಡೆಯ ಹೋಳುಗಳನ್ನು ಒಣಗಿಸಿ ಕುಟ್ಟಿ ಪುಡಿ ಮಾಡಿ. ಐದು ಗ್ರಾಂ ಸುವರ್ಣಗೆಡ್ಡೆಯ ಪುಡಿಗೆ ಸ್ವಲ್ಪ ತುಪ್ಪ/ಜೇನುತುಪ್ಪ/ಬೆಲ್ಲ ಹಾಕಿ ಬೆರೆಸಿ ಸೇವಿಸಿ.ಹಾಗೆಯೇ ಅಳಲೆಕಾಯಿಪುಡಿಯೊಂದಿಗೆ ಬೆಲ್ಲವನ್ನು ಬೆರೆಸಿಯೂ ಸೇವಿಸಬಹುದು. ಗುಲ್ಕಂದನ್ನು ಹೆಚ್ಚು ಸೇವಿಸಬೇಕು. ಇದರಿಂದ ಮಲವಿಸರ್ಜನೆ ಸಮಯದಲ್ಲಿ ರಕ್ತ ಹೊರಹೋಗುವುದು ನಿಲ್ಲುತ್ತದೆ.

ಎಲ್ಲ ಬಗೆಯ ಸೊಪ್ಪು, ಹಣ್ಣು ಮತ್ತು ತರಕಾರಿಗಳನ್ನು ಸೇವಿಸಬೇಕು. ಮೂಲಂಗಿಯನ್ನು ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವುದು ಉತ್ತಮ. ಐದು ಚಮಚ ಮೂಲಂಗಿ ರಸವನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು. ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ ತುಪ್ಪದೊಂದಿಗೆ ಹುರಿದು ಅನ್ನದ ಜೊತೆಗೆ ತಿನ್ನಬಹುದು. ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು ಮೊಸರಿನಲ್ಲಿ ಬೆರೆಸಿ ಸೇವನೆ ಮಾಡಬೇಕು. ಸೌತೇಕಾಯಿ ರಸವನ್ನು ಮಜ್ಜಿಗೆಯೊಂದಿಗೆ ಕುಡಿಯಬೇಕು. ಇಪ್ಪತ್ತೈದು ಗ್ರಾಂ ಧನಿಯಾವನ್ನು ಪುಡಿ ಮಾಡಿ ಅದರ ಕಷಾಯ ಮಾಡಿ ಅದಕ್ಕೆ ಹಾಲು ಸಕ್ಕರೆ ಹಾಕಿ ಕುಡಿಯಬಹುದು. ಬ್ರೊಕೋಲಿ, ಎಲೆಕೋಸು ಮತ್ತು ನವಿಲುಕೋಲುಗಳನ್ನು ತಿನ್ನಬಹುದು. ಸಿಹಿ ಗೆಣಸು, ಬೀಟ್‍ರೂಟ್ ಮತ್ತು ಕ್ಯಾರೆಟ್ಟುಗಳನ್ನು ಬೇಯಿಸಿ ತಿನ್ನುವುದು ಒಳ್ಳೆಯದು. ಇವುಗಳಲ್ಲಿರುವ ನಾರಿನಂಶ ಹಾಗೂ ಪೋಷಕಾಂಶ ಮೂಲವ್ಯಾಧಿ ಸಮಸ್ಯೆ ಗುಣಪಡಿಸುವಲ್ಲಿ ಸಹಕಾರಿಯಾಗಿದೆ. ಬೂದು ಕುಂಬಳಕಾಯಿ, ಸಿಹಿ ಕುಂಬಳಕಾಯಿ, ಸೋರೆಕಾಯಿ ಕೂಡ ಮೂಲವ್ಯಾಧಿ ಸಮಸ್ಯೆ ಗುಣಪಡಿಸುವಲ್ಲಿ ಸಹಕಾರಿಯಾಗಿದೆ. ಆಗಾಗ ಮಲಬದ್ಧತೆ ಉಂಟಾಗುತ್ತಿದ್ದರೆ ಸೌತೆಕಾಯಿ, ಕರ್ಬೂಜ, ಕಲ್ಲಂಗಡಿ ಹಣ್ಣಿನಲ್ಲಿ ನೀರಿನಂಶ ಅಧಿಕವಿದ್ದು ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.

ಮೂಲವ್ಯಾಧಿಗೆ ಆಯುರ್ವೇದದಲ್ಲಿ ಔಷಧಿಯೊಂದಿಗೆ ಕ್ಷಾರಸೂತ್ರ ಎಂಬ ಚಿಕಿತ್ಸೆಯೂ ಇದೆ. ಇದರಲ್ಲಿ ದಾರವನ್ನು ಔಷಧೀಯ ಕಷಾಯದಲ್ಲಿ ಅದ್ದಿ ಅದನ್ನು ಮೊಳೆಗಳಿಗೆ ಕಟ್ಟಿ ತೆಗೆಯುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಆರೋಗ್ಯಕರ ಜೀವನಶೈಲಿ, ವ್ಯಾಯಾಮ ಮತ್ತು ಹಿತಮಿತ ಸಮತೋಲನ ಆಹಾರ ಸೇವನೆಯು ಮೂಲವ್ಯಾಧಿಯನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com