ಸ್ತ್ರೀಯರನ್ನು ಕಾಡುತ್ತಿರುವ ಪಿಸಿಓಡಿ ಸಮಸ್ಯೆ (ಕುಶಲವೇ ಕ್ಷೇಮವೇ)

ಇಂದು ಸ್ತ್ರೀಯರನ್ನು ಕಾಡುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಪಾಲಿಸಿಸ್ಟಿಕ್ ಒವೇರಿಯನ್ ಡಿಸೀಸ್ (ಪಿಸಿಓಡಿ) ಕೂಡ ಒಂದು.
ಪಿಸಿಒಡಿ
ಪಿಸಿಒಡಿ

ಇಂದು ಸ್ತ್ರೀಯರನ್ನು ಕಾಡುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಪಾಲಿಸಿಸ್ಟಿಕ್ ಒವೇರಿಯನ್ ಡಿಸೀಸ್ (ಪಿಸಿಓಡಿ) ಕೂಡ ಒಂದು. ಶೇಕಡಾ 25 ರಿಂದ 30ರಷ್ಟು ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಧಿಕ ತೂಕ, ಕೂದಲು ಉದುರುವಿಕೆ, ಮೊಡವೆ, ಗಂಡಸರಿಗಿರುವಂತೆ ರೋಮಗಳ ಬೆಳವಣಿಗೆ ಮೊದಲಾದ ಸಮಸ್ಯೆಗಳನ್ನು ಪಿಸಿಓಡಿ ಸಮಸ್ಯೆಗೊಳಗಾದವರಲ್ಲಿ ಕಾಣಬಹುದು.

ಹೆಣ್ಣಿನಲ್ಲಿ ಯೌವನದಿಂದ ವೃದ್ಧಾಪ್ಯದವರೆಗೂ ಹಲವಾರು ಬದಲಾವಣೆಗಳು ಆಗುತ್ತವೆ. ಈ ಬದಲಾವಣೆಗಳಿಗೆ ಕಾರಣದೇಹದಲ್ಲಿ ಉತ್ಪತ್ತಿಯಾಗುವ ಹಾರ್ಮೋನುಗಳು. ಹಾರ್ಮೋನು ಉತ್ಪಾದನೆಯಲ್ಲಿ ವ್ಯತ್ಯಾಸವಾದರೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತದೆ. ಈ ಸಮಸ್ಯೆಗಳಲ್ಲಿ ಪಿಸಿಓಡಿಯೂ ಸೇರಿದೆ. ಬಂಜೆತನಕ್ಕೂ ಕಾರಣವಾಗಬಲ್ಲ ಈ ಸಮಸ್ಯೆಯಿಂದ ಚಿಂತೆ ಮತ್ತು ಖಿನ್ನತೆಯಂತಹ ಬೇರೆ ಬೇರೆ ತೊಂದರೆಗಳು ಕಾಣಿಸಿಕೊಳ್ಳಬಹುದು.

ಪಿಸಿಓಡಿ ಸಮಸ್ಯೆಯ ಮುಖ್ಯ ಲಕ್ಷಣಗಳು

ಪಿಸಿಓಡಿ ಸಮಸ್ಯೆ ಉಂಟಾಗಲು ಅಸಮರ್ಪಕ ಜೀವನಶೈಲಿ, ಅಧಿಕ ಒತ್ತಡ, ವ್ಯಾಯಾಮದ ಕೊರತೆ ಮತ್ತು ಕೊಬ್ಬಿನ ಪದಾರ್ಥಗಳನ್ನು ಹೆಚ್ಚು ತಿನ್ನುವುದು ಕಾರಣಗಳಾಗಿವೆ. ಆನುವಂಶೀಯತೆಯ ಪ್ರಭಾವವೂ ಇದೆ.

ಪಿಸಿಓಡಿಯ ಮುಖ್ಯ ಲಕ್ಷಣಗಳೆಂದರೆ ಪ್ರತಿ ತಿಂಗಳ ಋತುಚಕ್ರದಲ್ಲಿ(ಮುಟ್ಟು) ಏರುಪೇರು, ಋತುಚಕ್ರ ಸರಿಯಾಗಿ ಆದರೂ ಅಂಡಾಣುಗಳು ಅಂಡಕೋಶದಿಂದ ಬಿಡುಗಡೆಯಾಗದಿರುವುದು, ಈ ಸಂದರ್ಭದಲ್ಲಿ ಹೆಚ್ಚಿನ ರಕ್ತಸ್ರಾವ, ತೀವ್ರ ನೋವು, ಬಹಳ ತಿಂಗಳಾದರೂ ಋತುಚಕ್ರ ಕಾಣಿಸಿಕೊಳ್ಳದಿರುವುದು, ತೂಕ ಹೆಚ್ಚಾಗುವುದು, ಕೂದಲು ಉದುರುವುದು, ಮುಖದ ಮೇಲೆ, ಶರೀರದ ಮೇಲೆ ಅಧಿಕವಾಗಿಕೂದಲು ಕಾಣಿಸಿಕೊಳ್ಳುವುದು ಮತ್ತು ಮೊಡವೆಗಳು. ಕೆಲವೊಮ್ಮೆ ಸೊಂಟದ ಭಾಗದಲ್ಲಿ ಹೆಚ್ಚಿನ ಬೊಜ್ಜು ಶೇಖರಣೆಯಾಗಿ ತೂಕ ನಿಯಂತ್ರಣ ಮೀರಿ ಹೆಚ್ಚಾಗುತ್ತದೆ. ನಂತರ ಇದನ್ನು ಕರಗಿಸಲು ಹೆಚ್ಚು ಶ್ರಮ ಪಡಬೇಕಾಗುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆಯಿರುತ್ತದೆ. ಹಾರ್ಮೋನುಗಳ ವ್ಯತ್ಯಾಸದಿಂದ ದೇಹದ ನಾನಾ ರೀತಿಯ ಬದಲಾವಣೆಗಳು ಆಗುವುದರಿಂದ ತಮಗೆ ಅರಿವಿಲ್ಲದಂತೆ ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ದೊಡ್ಡದಾಗಿ ಯೋಚಿಸುವ ರೀತಿ ಆಗುತ್ತದೆ.

ಪಿಸಿಓಡಿ ಸಮಸ್ಯೆಗೆ ಪರಿಹಾರ ಜೀವನ ವಿಧಾನದಲ್ಲಿ ಬದಲಾವಣೆ

ಈ ಸಮಸ್ಯೆಗೆ ಪರಿಹಾರ ಜೀವನ ವಿಧಾನದಲ್ಲಿ ಬದಲಾವಣೆ ಮಾಡಿಕೊಂಡು ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು, ಸರಿಯಾದ ವ್ಯಾಯಾಮದಿಂದ ಹಾರ್ಮೋನ್‍ಗಳ ಸಮತೋಲನವನ್ನು ಕಾಪಾಡಿಕೊಳ್ಳುವುದು ಮತ್ತು ಸಮತೋಲನ ಆಹಾರ ಸೇವನೆ.

ದಿನನಿತ್ಯದ ಆಹಾರದಲ್ಲಿ ಹಸಿರು ಸೊಪ್ಪು ತರಕಾರಿಗಳು ಅದರಲ್ಲಿಯೂ ಮುಖ್ಯವಾಗಿ ಎಲೆಕೋಸು, ಹೂಕೋಸು, ಬ್ರಾಕೋಲಿ, ಬಸಳೆ, ಪಾಲಕ್ ಸೊಪ್ಪು, ಮೂಲಂಗಿ ಮತ್ತು ಸೌತೆಕಾಯಿಗಳನ್ನು ಹೆಚ್ಚಿಗೆ ಉಪಯೋಗಿಸಬೇಕು. ದ್ವಿದಳ ಧಾನ್ಯಗಳು (ಲೆಗ್ಯುಮ್) ಬೀನ್ಸ್, ಕಿಡ್ನಿ ಬೀನ್ಸ್, ಸೋಯಾ ಬೀನ್ಸ್‍ಗಳನ್ನು ನಿಯಮಿತವಾಗಿ ಸೇವಿಸಬೇಕು. ಒಣಹಣ್ಣುಗಳು ಹಾಗೂ ತಾಜಾ ಹಣ್ಣುಗಳಾದ ದ್ರಾಕ್ಷಿ, ಸೇಬು,ಚೆರ್ರಿ, ಸ್ಟ್ರಾಬೇರಿ, ಪ್ಲಮ್, ಅವಕಾಡೋ (ಬೆಣ್ಣೆಹಣ್ಣು), ಕಿತ್ತಳೆ, ವಾಲ್‍ನಟ್, ಅಗಸೆಬೀಜ ಮತ್ತು ಕಿವಿಹಣ್ಣುಗಳು ಉತ್ತಮ.ಕೆಂಪಕ್ಕಿಯಜೊತೆ ಹೆಚ್ಚು ನಾರಿನ ಅಂಶವುಳ್ಳ ಆಹಾರವನ್ನು ಸೇವಿಸಬೇಕು.

ಆರೋಗ್ಯಕ್ಕೆ ಅಗತ್ಯವಾದ ವಿಟಮಿನ್–ಡಿ ಮೀನು, ಮೊಟ್ಟೆ ಹಾಗೂ ಕೆನೆತೆಗೆದ ಹಾಲಿನಿಂದ ಸಿಗುತ್ತದೆ. ಸೂರ್ಯನ ಬೆಳಕಿನಲ್ಲಿ ಕನಿಷ್ಠ 30 ನಿಮಿಷ ಕೆಲಸ ಮಾಡುವುದರಿಂದಲೂ ಅಥವಾ ಮೈಯೊಡ್ಡುವುದರಿಂದಲೂ ಈ ವಿಟಮಿನ್ ಸಿಗುತ್ತದೆ. ಒಂದು ದಿನದಲ್ಲಿ ಕನಿಷ್ಠ ಎಂಟರಿಂದ ಹತ್ತು ಗ್ಲಾಸ್ ನೀರನ್ನುಕುಡಿಯಬೇಕು. ಕಾಫಿ–ಟೀ ಸೇವನೆಯನ್ನು ಆದಷ್ಟೂ ಕಡಿಮೆ ಮಾಡಬೇಕು. ಕೃತಕ ಪಾನೀಯಗಳ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಅತಿ ಮಸಾಲೆಭರಿತ ಪದಾರ್ಥಗಳ ಸೇವಿಸುವುದನ್ನು ಬಿಡಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿದಿನವೂ ಒಂದು ಗಂಟೆ ಕಾಲ ಬಿರುಸಿನ ನಡಿಗೆ ಅಥವಾ ಏರೋಬಿಕ್ಸ್, ಸ್ವಿಮಿಂಗ್, ಸೈಕ್ಲಿಂಗ್, ಯೋಗ-ಪ್ರಾಣಾಯಾಮಗಳನ್ನು ತಜ್ಞರಿಂದ ಕಲಿತು ಮಾಡಬೇಕು. ಇಂಥ ವ್ಯಾಯಾಮಗಳನ್ನು ಕನಿಷ್ಠ 6-8 ತಿಂಗಳು ಬಿಡದೆ ಮಾಡಿದಾಗ ಹಾರ್ಮೋನಿನ ಅಸಮತೋಲನ ಕಡಿಮೆಯಾಗುತ್ತದೆ. ಆಗ ಪಿಸಿಓಡಿ ಸಮಸ್ಯೆ ಪರಿಹಾರವಾಗುತ್ತದೆ.

ಪಿಸಿಓಡಿ ಸಮಸ್ಯೆ ಇದ್ದಾಗ ಅಂಡಾಶಯದ ಸುತ್ತಲೂ ನೀರುಗುಳ್ಳೆಗಳು ಕಂಡುಬರುತ್ತವೆ. ಹಾಗಾಗಿ ಋತುಚಕ್ರದಲ್ಲಿ ಏರುಪೇರಾಗುತ್ತದೆ. ಆಯುರ್ವೇದದಲ್ಲಿ ಪಿಸಿಓಡಿ ಸಮಸ್ಯೆಗೆ ಉತ್ತಮ ಪಂಚಕರ್ಮ ಚಿಕಿತ್ಸೆ ಇದೆ. ವಿರೇಚನ ಚಿಕಿತ್ಸೆಯಿಂದ ದೇಹದ ತೂಕವೂ ಕಡಿಮೆಯಾಗುತ್ತದೆ ಮತ್ತು ಋತುಚಕ್ರ ಸರಿಯಾಗುತ್ತದೆ. ಜೊತೆಗೆ ಔಷಧಿ ಚಿಕಿತ್ಸೆ ಇದೆ. ನಮ್ಮ ಜೀವನಶೈಲಿಯನ್ನು ಸರಿಪಡಿಸಿಕೊಳ್ಳಬೇಕು. ಪ್ರತಿದಿನ ಸಾಕಷ್ಟು ನಿದ್ದೆ ಮಾಡಬೇಕು.ಯಾವುದೇ ತರಹದ ಒತ್ತಡ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಒತ್ತಡವೂ ಪಿಸಿಓಡಿ ಸಮಸ್ಯೆಗೆ ಕಾರಣವಾಗಬಹುದು. ಹರೆಯದ ಹುಡುಗಿಯರಿಂದ ಹಿಡಿದು ಮಧ್ಯವಯಸ್ಸಿನವರ ತನಕ ಯಾರಲ್ಲಿಯಾದರೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು.

ಇತ್ತೀಚೆಗೆ ಹೆಣ್ಣುಮಕ್ಕಳು ಬಹಳ ಬೇಗ ಎಂದರೆ ಒಂಬತ್ತು-ಹತ್ತು ವರ್ಷಕ್ಕೆಲ್ಲಾ ಋತುಮತಿಯಾಗುತ್ತಾರೆ. ವರ್ಷಗಳು ಕಳೆದಂತೆ ಒಂದಲ್ಲಾ ಒಂದು ಕಾರಣದಿಂದ ಪಿಸಿಓಡಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆಗ ತಕ್ಷಣ ವೈದ್ಯರನ್ನು ಕಾಣಬೇಕು. ಸರಿಯಾದ ಸಮಯಕ್ಕೆ ಮುಟ್ಟಾಗದೆ ಅಥವಾ ಹೆಚ್ಚಿನ ರಕ್ತಸ್ರಾವ ಆಗುತ್ತಿದ್ದರೆ ಅಥವಾ ದೇಹದಲ್ಲಿ ಯಾವುದೇ ಬದಲಾವಣೆ ಕಂಡರೆ ಚಿಕಿತ್ಸೆ ಪಡೆಯಲೇಬೇಕು. ಮೂರರಿಂದ ಆರು ತಿಂಗಳುಗಳ ಕಾಲ ಚಿಕಿತ್ಸೆ ಪಡೆದರೆ ಗುಣಮುಖರಾಗಲು ಸಾಧ್ಯ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com