
ಸರ್ವೈಕಲ್ ಸ್ಪಾಂಡಿಲೈಟಿಸ್ ಎಂದರೆ ಕುತ್ತಿಗೆಯ ಮೃದ್ವಸ್ಥಿ (ಕಾರ್ಟಿಲೇಜ್) ಮತ್ತು ಮೂಳೆಗಳ ದೀರ್ಘಕಾಲಿಕ ನೋವು. ಕುತ್ತಿಗೆಯ ಮಾಂಸಖಂಡಗಳ ಮತ್ತು ಬೆನ್ನುಹುರಿಯ ಮೂಳೆಗಳ ನಡುವೆ ಇರುವ ಕೀಲುಗಳ ನಡುವಿನ ಡಿಸ್ಕ್ ಗಳು ತೊಂದರೆಗೆ ಒಳಗಾದಾಗ ಕುತ್ತಿಗೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಬೆನ್ನು ಮೂಳೆಯ ಅಸಹಜ ಬೆಳವಣಿಗೆ ಇದಕ್ಕೆ ಕಾರಣವಾಗಿರಬಹುದು. ಕ್ರಮೇಣ ಈ ಬದಲಾವಣೆಗಳಿಂದ ನರ ಬೇರುಗಳು ಸಂಕುಚಿತಗೊಂಡಾಗ ಬೆನ್ನುಹುರಿ ಸಿಕ್ಕಿಕೊಂಡು ನೋವು ಕಾಣಿಸಿಕೊಳ್ಳುತ್ತದೆ.
ಅತಿಯಾದ ವ್ಯಾಯಾಮ, ಭಾರಿ ತರಬೇತಿ ಅಥವಾ ಬಾಗುವುದು ಮತ್ತು ಬಾಗಿಕೊಂಡೇ ಕೆಲಸ ಮಾಡುವುದು, ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ, ಬಿರುಕುಗೊಂಡ ಅಥವಾ ಸ್ಲಿಪ್ ಡಿಸ್ಕ್, ತೀವ್ರ ಸಂಧಿವಾತ, ಅಸ್ಟಿಯೋಪೋರೋಸಿಸ್, ಬೆನ್ನು ಮೂಳೆಯ ಸಣ್ಣ ಮುರಿತಗಳು ಕೂಡ ಈ ಕಾಯಿಲೆಯನ್ನು ಉಂಟುಮಾಡುತ್ತದೆ. ಅತಿಯಾದ ಭಾರ ಎತ್ತುವುದು ಮತ್ತು ಕ್ರೀಡೆಯಲ್ಲಿ ನಿರತರಾದವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಲ್ಲದೆ ವಯಸ್ಸಾಗುತ್ತಿದ್ದಂತೆಯೇ ಈ ಅಪಾಯ ಉಂಟಾಗುವ ಸಾಧ್ಯತೆಯೂ ಇರುತ್ತದೆ.
ಮೊದಮೊದಲು ಕುತ್ತಿಗೆಯ ನೋವು ಸ್ವಲ್ಪ ಕಾಣಿಸಿಕೊಂಡು ನಿಧಾನವಾಗಿ ಹೆಚ್ಚಾಗುತ್ತದೆ. ಕಾಲಾಂತರದಲ್ಲಿ ಈ ನೋವು ಮುಂದುವರಿದು ಭುಜ, ತೋಳು, ಮುಂದಿನ ತೋಳು, ಬೆರಳುಗಳಿಗೂ ಹರಡಬಹುದು. ನೋವು ಸಾಧಾರಣ, ತೀವ್ರ ಮತ್ತು ಬಗೆಹರಿಸಲು ಸಾಧ್ಯವಿಲ್ಲದಷ್ಟು ರೂಪದಲ್ಲಿ ತೀವ್ರವಾಗಿರುತ್ತದೆ.
ನಿಂತಾಗ ಅಥವಾ ಕುಳಿತ ನಂತರ, ಸೀನುವಾಗ, ಕೆಮ್ಮು ಅಥವಾ ನಗುವಾಗ, ಕುತ್ತಿಗೆಯನ್ನು ಬಾಗಿಸುವಾಗ, ಸ್ವಲ್ಪದೂರ ನಡೆಯುವಾಗ ನೋವು ಕಾಣಿಸಬಹುದು. ದಿನವಿಡೀ ಕಂಪ್ಯೂಟರ್‍ನಲ್ಲಿ ಕೆಲಸ ಮಾಡುವರಾದರೆ ಅಥವಾ ಹೆಚ್ಚು ಮೊಬೈಲ್ ಬಳಸುವವರು ಆಗಾಗ್ಗೆ ಕುತ್ತಿಗೆ ನೋವಿನ ಬಗ್ಗೆ ದೂರು ನೀಡುತ್ತಾರೆ. ಆಗಾಗ್ಗೆ ಕತ್ತಿನ ಹಿಂಭಾಗದಿಂದ ಪ್ರಾರಂಭವಾಗುವ ತಲೆನೋವನ್ನು ಅನುಭವಿಸುತ್ತಿದ್ದರೆ ನೀವು ಜಾಗರೂಕರಾಗಿರಬೇಕು. ಇದರ ಪರಿಹಾರಕ್ಕಾಗಿ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.
ಆರಂಭಿಕ ರೋಗಲಕ್ಷಣಗಳನ್ನು ಪರಿಗಣಿಸಿದ ನಂತರ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ. ಪರಿಹಾರಕ್ಕಾಗಿ ಫಿಸಿಯೋಥೆರಪಿ ಚಿಕಿತ್ಸೆ ಮಾಡಿಸಿಕೊಳ್ಳಬಹುದು. ಜೊತೆಗೆ ಕೆಲವು ವ್ಯಾಯಾಮಗಳ ಬಗ್ಗೆಯೂ ಸೂಚಿಸಬಹುದು. ವೈದ್ಯರು ಹೆಚ್ಚಾಗಿ ಸ್ನಾಯುಗಳನ್ನು ಸಡಿಲಗೊಳಿಸುವ ಮಾತ್ರೆಗಳು ಮತ್ತು ಮುಲಾಮುಗಳನ್ನು ನೀಡಬಹುದು. ಅಧಿಕ ಒತ್ತಡದ ಚಟುವಟಿಕೆಗಳನ್ನು ಮಾಡುವುದನ್ನು ತಪ್ಪಿಸಬೇಕು. ಅಧಿಕ ತೂಕ ಎತ್ತಬಾರದು. ದೇಹದ ತೂಕ ಹೆಚ್ಚಾಗಿದ್ದರೆ ಅದನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು. ಬೆನ್ನುಮೂಳೆಯನ್ನು ಬಲಪಡಿಸಲು ಮತ್ತು ನೋವನ್ನು ಕಡಿಮೆ ಮಾಡಲು ವ್ಯಾಯಾಮಗಳನ್ನು ಮಾಡಬೇಕು. ಜೊತೆಗೆ ನೋವನ್ನು ಕಡಿಮೆ/ನಿವಾರಣೆ ಮಾಡಲು ಕುತ್ತಿಗೆಗೆ ಕೂಲ್ ಪ್ಯಾಡ್ ಬಳಸಬೇಕು.
ಕುತ್ತಿಗೆಯ ನೋವನ್ನು ಬರದಂತೆ ತಡೆಯಲು ನಿರಂತರವಾಗಿ ಕೆಳಗೆ ನೋಡುವುದನ್ನು ತಪ್ಪಿಸಬೇಕು. ಬಹಳಷ್ಟು ಜನರು ತಮ್ಮ ಮೊಬೈಲ್ ಫೋನುಗಳನ್ನು ಕಣ್ಣಿನ ಕೆಳಗೆ ಹಿಡಿದುಕೊಂಡು ಕುತ್ತಿಗೆಯನ್ನು ಬಗ್ಗಿಸಿ ಅದನ್ನೇ ಗಂಟೆಗಟ್ಟಲೇ ನೋಡುತ್ತಿರುತ್ತಾರೆ. ಇದು ತಪ್ಪು. ಹಾಗೆ ದೀರ್ಘಕಾಲ ಮಾಡಬಾರದು. ಮುಖದ ಮುಂದೆಯೂ ಮೊಬೈಲ್ ಫೋನನ್ನು ಹಿಡಿದು ಬಳಸಬಹುದು. ಕಂಪ್ಯೂಟರ್/ಲ್ಯಾಪ್ ಟಾಪುಗಳನ್ನು ಒಂದೇ ಭಂಗಿಯಲ್ಲಿ ಬಳಸುತ್ತಾ ಕೂರಬಾರದು. ಪ್ರತಿ ಒಂದು ಗಂಟೆ ಅಥವಾ ಎರಡು ಗಂಟೆಗಳ ವಿರಾಮ ತೆಗೆದುಕೊಳ್ಳಬೇಕು. ಸುಮಾರು 5 ನಿಮಿಷಗಳ ಕಾಲ ನಡೆಯಿರಿ. ಇದು ಸ್ನಾಯುಗಳಿಗೆ ವಿಶ್ರಾಂತಿ ನೀಡಲು ಮತ್ತು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.
ಮಲಗುವಾಗ ಗಟ್ಟಿಯಾದ ದಿಂಬುಗಳನ್ನು ಬಳಸುತ್ತಿದ್ದರೆ ಅದು ಕುತ್ತಿಗೆಯ ಮೇಲೆ ಒತ್ತಡವನ್ನು ಉಂಟುಮಾಡಬಹುದು. ಹಾಗಿದ್ದಲ್ಲಿ ಮೃದುವಾದ ದಿಂಬುಗಳನ್ನು ಆರಿಸಿಕೊಳ್ಳಿ. ಇದು ಬೆನ್ನು ನೋವನ್ನೂ ನಿವಾರಿಸುತ್ತದೆ. ನೆಲದ ಮೇಲೆ ಚಾಪೆಯ ಮೇಲೆ ಮಲಗಲು ಆದ್ಯತೆ ನೀಡಿ.
ಆಹಾರದಲ್ಲಿ ತಾಜಾ ಹಣ್ಣುಗಳು ಮತ್ತು ಹಸಿರು ತರಕಾರಿಗಳನ್ನು ಸೇವಿಸುವ ಮೂಲಕ ದೇಹಕ್ಕೆ ಬೇಕಾದ ಎಲ್ಲಾ ಅಗತ್ಯ ಪೋಷಕಾಂಶಗಳು ಮತ್ತು ಖನಿಜಗಳನ್ನು ಪಡೆಯಬಹುದು. ಇವುಗಳಲ್ಲಿ ಮೂಳೆ ಮತ್ತು ನರಗಳ ಆರೋಗ್ಯವನ್ನು ಸುಧಾರಿಸುವ ಅನೇಕ ಪೋಷಕಾಂಶಗಳು ಇರುತ್ತವೆ. ಧೂಮಪಾನ ಮತ್ತು ಮದ್ಯಪಾನದಂತಹ ಅಭ್ಯಾಸಗಳನ್ನು ತ್ಯಜಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಸರ್ವೈಕಲ್ ಸ್ಪಾಂಡಿಲೈಟಿಸ್ ಗೆ ಆಯುರ್ವೇದದ ಪಂಚಕರ್ಮ ಚಿಕಿತ್ಸೆಯಲ್ಲಿ ಗ್ರೀವ ಬಸ್ತಿ ಎಂಬ ಚಿಕಿತ್ಸೆಯಿದೆ. ಇದರಲ್ಲಿ ಕುತ್ತಿಗೆ ಭಾಗಕ್ಕೆ ಉದ್ದಿನ ಹಿಟ್ಟನ್ನು ಕಟ್ಟೆಯಂತೆ ಕಟ್ಟಿ ಬಿಸಿ ಎಣ್ಣೆಯನ್ನು ಹಾಕಿ ನಂತರ ಮಸಾಜು ಮಾಡಿ ಗಿಡಮೂಲಿಕೆಗಳ ಪೋಟಲಿಯಿಂದ ಶಾಖವನ್ನು ಹತ್ತು ದಿನಗಳ ಕಾಲ ಕೊಡುತ್ತಾರೆ. ಕೆಲವರಿಗೆ ಈ ಚಿಕಿತ್ಸೆಯನ್ನು 14 ದಿನಗಳ ಕಾಲ ಮಾಡಬೇಕಾಗಬಹುದು. ಇದರ ಜೊತೆಗೆ ಕೆಲವು ಔಷಧಿಗಳನ್ನು ತೆಗೆದುಕೊಳ್ಳಬೇಕು.
ಆಹಾರದಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುವ ಹಾಲು, ಮೊಸರು, ಮೊಳಕೆಕಾಳು, ಮೊಟ್ಟೆ, ಮೀನು, ಪಪ್ಪಾಯಿ, ನುಗ್ಗೆಸೊಪ್ಪು, ಮೆಂತ್ಯ, ಪಾಲಕ್ ಸೊಪ್ಪನ್ನು ನಿಯಮಿತವಾಗಿ ಸೇವಿಸಬೇಕು. ಕತ್ತನ್ನು ಹೆಚ್ಚಾಗಿ ಬಗ್ಗಿಸದೇ ಇರುವ ವ್ಯಾಯಾಮಗಳನ್ನು ಮಾಡಬೇಕು, ಕತ್ತಿನ ಭಾಗವನ್ನು ಮಳೆ ಮತ್ತು ಚಳಿಗೆ ತೆರೆದುಕೊಳ್ಳಬಾರದು. ಮಫ್ಲರ್ ಅಥವಾ ಕತ್ತಿನ ಭಾಗ ಕವರ್ ಆಗುವಂತಹ ಉಲ್ಲನ್ ಸ್ವೆಟರನ್ನು ಧರಿಸಬೇಕು. ಹತ್ತಿಯ ಬಟ್ಟೆಯನ್ನು ಕತ್ತಿಗೆ ಸುತ್ತಿಕೊಳ್ಳಬಹುದು, ಕೆಲವರಿಗೆ ಅಧಿಕ ನೋವಿದ್ದರೆ ನೆಕ್ ಕಾಲರನ್ನು ಧರಿಸಬಹುದು. ನೋವು ಕಡಿಮೆ ಆಗುವವರೆಗೂ ದ್ವಿಚಕ್ರ ವಾಹನಗಳನ್ನು ಚಲಾಯಿಸುವುದು ಬೇಡ.
ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com
Advertisement