ಫಿಶರ್ ಮತ್ತು ಫಿಸ್ತುಲಾ ಆರೋಗ್ಯ ಸಮಸ್ಯೆ: ಲಕ್ಷಣಗಳು, ಆಹಾರ ಪದ್ಧತಿ ಮತ್ತು ಚಿಕಿತ್ಸೆ (ಕುಶಲವೇ ಕ್ಷೇಮವೇ)

ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಫಿಶರ್ (ಬಿರುಕು) ಮತ್ತು ಫಿಸ್ತುಲಾಗಳು ಪ್ರಮುಖವಾಗಿವೆ. ಇದಕ್ಕೆ ಇಂದಿನ ಜಡಜೀವನಶೈಲಿ ಮತ್ತು ಸರಿಯಿಲ್ಲದ ಆಹಾರ ಪದ್ಧತಿಗಳು ಮುಖ್ಯ ಕಾರಣಗಳಾಗಿವೆ. ಹಲವಾರು ಜನರು ಫಿಶರ್, ಫಿಸ್ತುಲಾ ಮತ್ತು ಪೈಲ್ಸ್‍ ಗಳು ಒಂದೇ ಎಂದು ತಿಳಿದಿದ್ದಾರೆ. 
ಫಿಶರ್ ಮತ್ತು ಫಿಸ್ತುಲಾ ಆರೋಗ್ಯ ಸಮಸ್ಯೆ
ಫಿಶರ್ ಮತ್ತು ಫಿಸ್ತುಲಾ ಆರೋಗ್ಯ ಸಮಸ್ಯೆ
Updated on

ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಫಿಶರ್ (ಬಿರುಕು) ಮತ್ತು ಫಿಸ್ತುಲಾಗಳು ಪ್ರಮುಖವಾಗಿವೆ.

ಇದಕ್ಕೆ ಇಂದಿನ ಜಡಜೀವನಶೈಲಿ ಮತ್ತು ಸರಿಯಿಲ್ಲದ ಆಹಾರ ಪದ್ಧತಿಗಳು ಮುಖ್ಯ ಕಾರಣಗಳಾಗಿವೆ. ಹಲವಾರು ಜನರು ಫಿಶರ್, ಫಿಸ್ತುಲಾ ಮತ್ತು ಪೈಲ್ಸ್‍ ಗಳು ಒಂದೇ ಎಂದು ತಿಳಿದಿದ್ದಾರೆ. ಈ ಮೂರು ಗುದದ್ವಾರಕ್ಕೆ ಸಂಬಂಧಿಸಿದ ಸಮಸ್ಯೆಗಳಾದರೂ ವಾಸ್ತವದಲ್ಲಿ ಇವೆಲ್ಲಾ ಬೇರೆ ಬೇರೆ.

ಫಿಶರ್ ಲಕ್ಷಣಗಳು

ಕರುಳಿನಲ್ಲಿ ಮಲದ ಚಲನೆ ಕಷ್ಟವಾಗಿ ಗುದದ್ವಾರದ ಅಂಗಾಂಶಗಳಲ್ಲಿ ಬಿರುಕುಂಟಾಗಿ ಫಿಶರ್ ಉಂಟಾಗುತ್ತದೆ. ಫಿಶರ್‍ ಗಳು ಬಹಳಷ್ಟು ನೋವನ್ನು ಉಂಟುಮಾಡುತ್ತವೆ. ಅಲ್ಲದೇ ಅತಿಸಾರ ಭೇದಿ ಅಥವಾ ಊತದಿಂದಲೂ ಫಿಶರ್‍ ಉಂಟಾಗಬಹುದು. ಇದರಿಂದ ಗುದ ಒಣಗಿ ಬಿರುಕುಬಿಟ್ಟು ಕಿರಿಕಿರಿ/ತುರಿಕೆ ಉಂಟಾಗುತ್ತದೆ. ಹೆರಿಗೆ ವೇಳೆಯಲ್ಲಿಯೂ ಗುದಪ್ರದೇಶ ತೊಂದರೆಗೊಳಗಾಗಿ ಫಿಶರ್ ಆಗಬಹುದು. ಗುದದ್ವಾರ ಮತ್ತು ಗುದ ಕಾಲುವೆಯು ಸ್ನಾಯುಗಳು ಮತ್ತು ನರಗಳಿಂದ ಸುತ್ತುವರಿಯಲ್ಪಟ್ಟಿದೆ. ಮಲವಿಸರ್ಜನೆ ವೇಳೆ ಇವು ತೆರೆದುಕೊಳ್ಳುತ್ತವೆ ಮತ್ತು ನಂತರ ಮುಚ್ಚಿಕೊಳ್ಳುತ್ತವೆ. ಫಿಶರ್‍ ಉಂಟಾದಾಗ ಸ್ನಾಯು/ನರಗಳ ಬಿರುಕು ವಿಸ್ತರಣೆಯಾಗಿ ನೋವುಂಟಾಗುತ್ತದೆ. ಕೆಲವೊಮ್ಮೆ ರಕ್ತಸ್ರಾವ ಕೂಡ ಆಗಬಹುದು. ಮಹಿಳೆಯರಲ್ಲಿ ಇದು ಸಾಮಾನ್ಯ ಸಮಸ್ಯೆಯಾಗಿದೆ.

ಫಿಶರ್ ಗುಣಪಡಿಸುವುದು ಹೇಗೆ?

ಫಿಶರ್‍ ಗಳಲ್ಲಿ ಹೆಚ್ಚಿನವು ತಂತಾನೇ ಅಥವಾ ಶಸ್ತ್ರಚಿಕಿತ್ಸೆಯಲ್ಲದ ಚಿಕಿತ್ಸೆಯಿಂದ ಗುಣವಾಗುತ್ತವೆ. ಮಲವನ್ನು ಮೆದುಗೊಳಿಸಿ ಕರುಳಿನಲ್ಲಿ ಅದರ ಚಲನೆಯನ್ನು ಸುಗಮಗೊಳಿಸುವ ಔಷಧಿಯಿಂದ ಇದನ್ನು ನಿಯಂತ್ರಿಸಬಹುದು. ಅಲ್ಲದೇ ವೈದ್ಯರು ಈ ಸಮಸ್ಯೆ ಪರಿಹಾರಕ್ಕೆಂದೇ ವಿಶೇಷ ಕ್ರೀಮುಗಳನ್ನು ನೀಡಬಹುದು. ಫಿಶರ್‍ ಇದ್ದಾಗ ಗುದಪ್ರದೇಶವನ್ನು ಸ್ವಚ್ಛವಾಗಿ ಮತ್ತು ಶುಷ್ಕವಾಗಿರಿಸುವುದು ಮುಖ್ಯ. ಸ್ನಾನದ ನಂತರ ಮೃದುವಾದ ಟವೆಲ್ಲಿನಿಂದ ಆ ಪ್ರದೇಶವನ್ನು ನಿಧಾನವಾಗಿ ಒಣಗಿಸಬೇಕು. ಪೌಡರ್ ಹಾಕಿಕೊಂಡರೂ ಒಳ್ಳೆಯದು.

ನೋವಿದ್ದರೆ ಸ್ನಾನದ ತೊಟ್ಟಿಯಲ್ಲಿ ಉಗುರುಬೆಚ್ಚನೆ ನೀರನ್ನು ತುಂಬಿ ಅದರಲ್ಲಿ ದೇಹದ ಕೆಳಭಾಗವನ್ನು ಹತ್ತರಿಂದ ಹದಿನೈದು ನಿಮಿಷ ಮುಳುಗಿಸಿಟ್ಟುಕೊಳ್ಳಬೇಕು. ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬಂದರೆ ಫಿಶರ್ ಮತ್ತು ಗಾಯವಾಗಿರುವ ಅಂಗಾಂಶವನ್ನು ತೆಗೆದುಹಾಕುತ್ತಾರೆ. ಗುದದ ಸ್ನಾಯುವಿನ ಸಣ್ಣ ಭಾಗವನ್ನು ಕತ್ತರಿಸುವುದರೆ ಅದು ಸೆಳೆತವನ್ನು ತಡೆಯುತ್ತದೆ ಮತ್ತು ರಕ್ತದ ಹರಿವನ್ನು ಸುಧಾರಿಸುತ್ತದೆ. ಸಂಪೂರ್ಣ ಚಿಕಿತ್ಸೆ ಕೆಲವೇ ವಾರಗಳ ತನಕ ನಡೆಯುತ್ತದೆ. ಕೆಲವು ದಿನಗಳ ನಂತರ ನೋವು ಸಾಮಾನ್ಯವಾಗಿ ಕಣ್ಮರೆಯಾಗುತ್ತದೆ.

ಫಿಶರ್ ತಡೆಯಲು ಆಹಾರಕ್ರಮ ಪಾಲನೆ ಸಹಕಾರಿ

ದೈನಂದಿನ ಆಹಾರದಲ್ಲಿ ಸಾಕಷ್ಟು ನಾರಿನಂಶ ಇರುವ ಪದಾರ್ಥಗಳನ್ನು ಬಳಸುವುದರಿಂದ ಫಿಶರ್ ಬರುವುದನ್ನು ತಡೆಬಹುದು. ಗುಣಪಡಿಸಲು ಮೊದಲು ಸಾಕಷ್ಟು ನಾರಿನಂಶವಿರುವ ಮತ್ತು ಮೃದುವಾಗಿರುವ ಆಹಾರವನ್ನು ಸೇವಿಸಬೇಕು. ಏಕೆಂದರೆ ನಾರಿನಂಶವಿರುವ ಆಹಾರ ಜೀರ್ಣಕ್ರಿಯೆಗೆ ಸಹಾಯ ಮಾಡುವುದರಿಂದ ಮಲವಿಸರ್ಜನೆ ಸರಾಗವಾಗಿ ನಡೆಯುವುದು. ಹಾಗೆಯೇ ಮಲಬದ್ಧತೆ ಕಾಣಿಸಿಕೊಳ್ಳದಂತೆ ಸಾಕಷ್ಟು ಎಚ್ಚರ ವಹಿಸಬೇಕು. ಈ ಸಮಸ್ಯೆಗಳಿಗೆ ಮುಖ್ಯಕಾರಣ ಅನಿಯಮಿತ ದಿನಚರಿ, ಆಹಾರ ಪದ್ಧತಿ. ಬೊಜ್ಜು ಮತ್ತು ಮಲಬದ್ಧತೆ. ಅತಿಯಾದ ದೈಹಿಕ/ ಮಾನಸಿಕ ಒತ್ತಡ, ಮಾಂಸಾಹಾರಿ ಆಹಾರ, ಆಲ್ಕೋಹಾಲ್ ಮತ್ತು ಮಸಾಲೆಯುಕ್ತ ಆಹಾರಗಳ ಸೇವನೆ ಇತರ ಕೆಲವು ಕಾರಣಗಳಾಗಿವೆ. ಸಾಮಾನ್ಯವಾಗಿ ಇಡೀ ದಿನ ಕುಳಿತು ಕೆಲಸ ಮಾಡುವವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಫಿಸ್ತುಲಾ ಲಕ್ಷಣಗಳು

ಗುದ ಕುಹರದ ಮಧ್ಯ ಭಾಗದಲ್ಲಿರುವ ಗ್ರಂಥಿಗಳು ಸೋಂಕಿಗೆ ಒಳಗಾಗಿ ಬಾವು ಉಂಟಾಗಿ ಕೀವು ಸ್ರವಿಸಲು ಪ್ರಾರಂಭಿಸುವುದು ಫಿಸ್ತುಲಾ ಆಗಿರುವುದರ ಲಕ್ಷಣ. ಫಿಸ್ತುಲಾವನ್ನು ಹೋಗಲಾಡಿಸಲು ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ.

ಫಿಸ್ತುಲಾ ತಡೆಯಲು ಆಹಾರಕ್ರಮ ಪಾಲನೆ ಸಹಕಾರಿ

ಫಿಶರ್ ಮತ್ತು ಫಿಸ್ತುಲಾ ಸಮಸ್ಯೆಗಳನ್ನು ತಡೆಯಲು ಪ್ರತಿದಿನ ಸಾಕಷ್ಟು ನೀರು ಕುಡಿಯಬೇಕು. ಕನಿಷ್ಠ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯಬೇಕು. ಶುಂಠಿ ಚಹಾ, ಅರಿಶಿನ ಹಾಲು, ಎಲೆಕೋಸು ರಸ, ಕಿತ್ತಳೆ ರಸ ಅಥವಾ ನೆಲ್ಲಿಕಾಯಿಯ ರಸ ಸೇವಿಸುವುದು ಉತ್ತಮ. ಸೌತೆಕಾಯಿ, ಕರ್ಬೂಜ, ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚಾಗಿ ನೀರಿನಂಶವಿರುತ್ತದೆ. ಇವುಗಳನ್ನು ನಿಯಮಿತವಾಗಿ ಸೇವಿಸಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿದಿನ ಸಾಕಷ್ಟು ನಾರಿನಂಶವಿರುವ ಮತ್ತು ಮೃದುವಾಗಿರುವ ಆಹಾರವನ್ನು ಸೇವಿಸಬೇಕು. ಏಕೆಂದರೆ ನಾರಿನಂಶವಿರುವ ಆಹಾರ ಜೀರ್ಣಕ್ರಿಯೆಗೆ ಸಹಾಯ ಮಾಡುವುದರಿಂದ ಮಲವಿಸರ್ಜನೆ ಸರಾಗವಾಗಿ ನಡೆಯುವುದು. ಹಲವಾರು ಧಾನ್ಯಗಳಲ್ಲಿ ಪೋಷಕಾಂಶ ಹಾಗೂ ನಾರಿನಂಶವಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಹಾಗೂ ಇದರಿಂದ ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ. ಒಬ್ಬ ಮನುಷ್ಯನಿಗೆ ಪ್ರತಿದಿನಕ್ಕೆ ಕನಿಷ್ಠ 30 ಗ್ರಾಂನಷ್ಟು ನಾರಿನಂಶ ಅಗತ್ಯವಿರುತ್ತದೆ.

ಆದ್ದರಿಂದ ನಾರಿನಂಶವಿರುವ ಬಾರ್ಲಿ, ನವಣೆ, ಕೆಂಪಕ್ಕಿ ಅನ್ನ ಮತ್ತು ಓಟ್ಸನ್ನು ಪ್ರತಿನಿತ್ಯ ಸೇವಿಸಬೇಕು. ಆಯುರ್ವೇದದಲ್ಲಿ ಫಿಸ್ತುಲಾಗೆ ಉತ್ತಮ ಔಷಧಿ ಮತ್ತು ಚಿಕಿತ್ಸೆ ಇದೆ. ಔಷಧಿಯೊಂದಿಗೆ ಕ್ಷಾರಸೂತ್ರ ಚಿಕಿತ್ಸೆ ಉತ್ತಮ ಪರಿಹಾರ ಒದಗಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಆರೋಗ್ಯಕರ ಜೀವನಶೈಲಿ, ವ್ಯಾಯಾಮ ಮತ್ತು ಹಿತಮಿತ ಸಮತೋಲನ ಆಹಾರ ಸೇವನೆಯು ಫಿಶರ್ ಮತ್ತು ಫಿಸ್ತುಲಾ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಮತ್ತು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com