ಡಿಜಿಟಲ್ ಲೆಂಡಿಂಗ್ ವ್ಯವಸ್ಥೆಗೆ ಆರ್ ಬಿಐ ತಂದಿದೆ ಹೊಸ ಮಾರ್ಗಸೂಚಿ! (ಹಣಕ್ಲಾಸು)

ಇವತ್ತು ಜಗತ್ತು ಯಾವ ಮಟ್ಟಕ್ಕೆ ಬಂದು ಕುಳಿತಿದೆ ಎಂದರೆ ಸಾಲವೇ ಹಣ ಎನ್ನುವ ಮಟ್ಟಕ್ಕೆ! ಅಂದರೆ ಹಣ ಎಂದ ತಕ್ಷಣ ಅದು ಸಾಲದ ಹಣವೇ ಆಗಿರುತ್ತದೆ ಎನ್ನುವ ಮಟ್ಟಕ್ಕೆ ಜಗತ್ತು ಬದಲಾಗಿ ಹೋಗಿದೆ. 
ಡಿಜಿಟಲ್ ಲೋನ್- ಆರ್ ಬಿಐ
ಡಿಜಿಟಲ್ ಲೋನ್- ಆರ್ ಬಿಐ

ಇವತ್ತು ಜಗತ್ತು ಯಾವ ಮಟ್ಟಕ್ಕೆ ಬಂದು ಕುಳಿತಿದೆ ಎಂದರೆ ಸಾಲವೇ ಹಣ ಎನ್ನುವ ಮಟ್ಟಕ್ಕೆ! ಅಂದರೆ "ಹಣ ಎಂದ ತಕ್ಷಣ ಅದು ಸಾಲದ ಹಣವೇ ಆಗಿರುತ್ತದೆ" ಎನ್ನುವ ಮಟ್ಟಕ್ಕೆ ಜಗತ್ತು ಬದಲಾಗಿ ಹೋಗಿದೆ. 

ಸಾಲ ತೀರಿಸಲು ಹೊಸ ಸಾಲ ಮಾಡುವುದು ಆರ್ಡರ್ ಆಫ್ ದಿ ಡೇ ಎನ್ನುವ ಮಟ್ಟಕ್ಕೆ ಜಗತ್ತು ಬಂದಿದೆ. ಸಾಲ ಕೊಡುವವರಲ್ಲಿ ಮತ್ತು ತೆಗೆದುಕೊಳ್ಳುವವರಲ್ಲಿ ಇಬ್ಬರಲ್ಲೂ ಹಿಂದಿನ ಸೂಕ್ಷ್ಮ ಮನೋಭಾವ ಇಲ್ಲವಾಗಿದೆ. ಸಾಲವಿಲ್ಲದ ಸಂಸ್ಥೆಗಳು ವಿರಳ  ಎನ್ನುವಂತಾಗಿದೆ. ಅಂದ ಮಾತ್ರಕ್ಕೆ ಕೇಳಿದವರಿಗೆಲ್ಲಾ ಮುಖ್ಯವಾಹಿನಿ ಬ್ಯಾಂಕುಗಳು ಸಾಲ ಕೊಡುತ್ತವೆ ಎನ್ನುವಂತೆಯೂ ಇಲ್ಲ. ಮುಖ್ಯವಾಹಿನಿ ಬ್ಯಾಂಕುಗಳ ಈ ನಿಬಂಧನೆಗಳು ನಾನ್ ಬ್ಯಾಂಕಿಂಗ್ ಫೈನಾನ್ಸಿಯಲ್ ಕಾರ್ಪೋರೇಶನ್ ಗಳಿಗೆ ಮತ್ತು ಆನ್ಲೈನ್ ಲೆಂಡಿಂಗ್ ಪೋರ್ಟಲ್ ಮತ್ತು ಆಪ್ ಗಳಿಗೆ ಹೊಸ ವ್ಯಾಪಾರದ ದಾರಿಯನ್ನ ಸೃಷ್ಟಿ ಮಾಡಿಕೊಟ್ಟಿದೆ. ಗಮನಿಸಿ ನಾನ್ ಬ್ಯಾಂಕಿಂಗ್ ಫೈನಾನ್ಸಿಯಲ್ ಕಾರ್ಪೋರೇಶನ್ ಗಳು ಕೂಡ ಆರ್ ಬಿಐ ನ ನಿಗರಾಣಿಯಲ್ಲಿ ಬರುತ್ತದೆ. ಈ ಹಿಂದೆ ಮಾಡಿದಷ್ಟು ಬಿಡುಬೀಸು ಲೆಂಡಿಂಗ್ ಮತ್ತು ವಸೂಲಿಗೆ ಬಳಸುವ ವಿಧಾನಗಳಿಗೆ ಬಹಳಷ್ಟು ಬ್ರೇಕ್ ಬಿದ್ದಿದೆ. ಹೀಗೆ ಇಲ್ಲಿ ಸಾಲ ಸಿಗದವರು ಮತ್ತು ಹಣದ ತುರ್ತು ಬಹಳ ಇದ್ದವರ ಸಹಾಯಕ್ಕೆ ಬರುತ್ತಿದ್ದವು ಆನ್ಲೈನ್ ಲೆಂಡಿಂಗ್ ಪೊರ್ಟಲ್ಸ್ ಮತ್ತು ಆಪ್ಗಳು. ಇಲ್ಲಿಯವರೆಗೆ ಇಲ್ಲಿ ಯಾವುದೇ ರೀತಿಯ ಕಟ್ಟುಪಾಡುಗಳು ಮತ್ತು ನಿಬಂಧನೆಗಳು ಇರಲಿಲ್ಲ. ಬಹಳಷ್ಟು ಬಾರಿ ಸಾಲ ಪಡೆದುಕೊಂಡವರು ಬಡ್ಡಿ ಮತ್ತು ಚಕ್ರಬಡ್ಡಿಯ ಸುಳಿಯಲ್ಲಿ ಸಿಲುಕಿ ಹೈರಾಣಾದ ಉದಾಹರಣೆಗಳಿವೆ. ಇದೀಗ ಆರ್ ಬಿಐ ಇದಕ್ಕೂ ಒಂದು ಚೌಕಟ್ಟು ವಿಧಿಸಿದೆ. ಮುಖ್ಯವಾಹಿನಿ ಬ್ಯಾಂಕಿಂಗ್ ಸಿಸ್ಟಮ್ಗಳ ಹೆಸರು ಹೇಳಿಕೊಂಡು ನಮ್ಮ ದೇಶದಲ್ಲಿ ಆಗುತ್ತಿರುವ ಆನ್ಲೈನ್ ಫ್ರಾಡ್ಗಳು ಲೆಕ್ಕಕ್ಕಿಲ್ಲ, ಇನ್ನೂ ಖಾಸಗಿ ಪೋರ್ಟಲ್ ಮತ್ತು ಆಪ್ಗಳ ಕಥೆ ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲವೆಂದುಕೊಳ್ಳುವೆ.

ಹೇಳುವ ಬಡ್ಡಿದರಕ್ಕೂ ಕೊನೆಯಲ್ಲಿ ಸಂದಾಯ ಮಾಡಿದ ಬಡ್ಡಿದರಕ್ಕೂ ಇರುವ ವ್ಯತ್ಯಾಸ, ನೇರವಾಗಿ ಕಾಣದ ಅನೇಕ ಖರ್ಚುಗಳನ್ನ ಗ್ರಾಹಕನ ತಲೆಯ ಮೇಲೆ ಹೊರಿಸುವುದು, ಹೀಗೆ ಅವ್ಯಾಹತವಾಗಿ ಹಗಲು ದರೋಡೆ ನಡೆಯುತ್ತಿತ್ತು. ಆದರೆ ಹಣದ ಅವಶ್ಯಕತೆ ಇರುವ ಗ್ರಾಹಕ ಇಂತಹ ವ್ಯವಸ್ಥೆಗಳಿಂದ ಶೋಷಣೆಗೊಳಗಾಗುವುದು ಬಿಟ್ಟು ಬೇರೇನೂ ಮಾಡಲಾಗದ ಅಸಹಾಯಕ ಪರಿಸ್ಥಿತಿಯಲ್ಲಿದ್ದರು.

ವರ್ಕಿಂಗ್ ಗ್ರೂಪ್ ಫಾರ್ ಡಿಜಿಟಲ್ ಲೆಂಡಿಂಗ್ ಎನ್ನುವುದು ಆರ್ ಬಿಐ ಇಂತಹ ವಿಷಯಗಳನ್ನ ಅಧ್ಯಯನ ಮಾಡಿ ಒಂದು ವರದಿಯನ್ನ ಸಲ್ಲಿಸುವಂತೆ ಕೇಳಿಕೊಂಡಿತ್ತು. ಈ ವರದಿಯನ್ನ ನವೆಂಬರ್ 2021 ರಲ್ಲಿ ಜನರ ಮುಂದೆ ಮತ್ತು ಆರ್ ಬಿಐ ಮುಂದೆ ಇಡಲಾಗಿತ್ತು. ಇದೀಗ ಇದರ ಅಂತಿಮ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ. ಇದನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ತನ್ನ ಮಾರ್ಗಸೂಚಿಯಲ್ಲಿ ಹೇಳಿದೆ.

ಇಂತಹ ಮಾರ್ಗಸೂಚಿಗಳಿಂದ ಸಾಲ ಪಡೆಯುವವರಿಗೆ ಬಹಳ ಅನುಕೂಲವಾಗುತ್ತದೆ ನಿಜ, ಆದರೆ ಇದರಲ್ಲಿ ಆಗಿರುವ ಬದಲಾವಣೆಗಳನ್ನ ಗ್ರಾಹಕ ತಿಳಿದುಕೊಳ್ಳುವುದು ಅತಿ ಮುಖ್ಯ. ಏನಿದು ಮಾರ್ಗಸೂಚಿಗಳು ಎನ್ನುವುದರ ಬಗ್ಗೆ ಒಂದಷ್ಟು ತಿಳಿದುಕೊಳ್ಳುವ ಪ್ರಯತ್ನವನ್ನ ಮಾಡೋಣ. ಅತಿ ಮುಖ್ಯವಾಗಿ ಇದು:

  1. ಮೂರನೇ ವ್ಯಕ್ತಿಗಳನ್ನ ವ್ಯವಹಾರದಲ್ಲಿ ನುಸುಳಲು ಬಿಡುವಂತಿಲ್ಲ: ಗಮನಿಸಿ ಬಹತೇಕ ವೆಬ್ ಪೋರ್ಟಲ್ ಮತ್ತು ಆಪ್ಗಳನ್ನ ನಡೆಸುವವರು ಬೇರೆ ಮತ್ತು ಗ್ರಾಹಕನಿಗೆ ಹಣ ನೀಡುವವರು ಬೇರೆ, ಸಾಲದ ಒಪ್ಪಂದ ಲೆಂಡಿಂಗ್ ಪೋರ್ಟಲ್ ಮತ್ತು ಗ್ರಾಹಕನ ಜೊತೆಗಿದ್ದರೂ, ಯಾವುದೇ ಸಮಯದಲ್ಲಿ ಈ ಮೂರನೆಯ ವ್ಯಕ್ತಿಯ ಮೂಗು ತೂರಿಸುವಿಕೆಯನ್ನ ತಡೆಯಲು ಆಗುತ್ತಿರಲಿಲ್ಲ. ಕಮಿಷನ್ ಆಸೆಗೆ ಇಂತಹ ವೆಬ್ ಪೋರ್ಟಲ್ ಮತ್ತು ಆಪ್ಗಳು ಸಿಕ್ಕವರ ಜೊತೆಗೆಲ್ಲಾ ಒಪ್ಪಂದ ಮಾಡಿಕೊಳ್ಳುತ್ತಿತ್ತು. ಈಗ ಹೊಸ ಮಾರ್ಗಸೂಚಿಯ ಪ್ರಕಾರ ಮೂರನೆಯ ವ್ಯಕ್ತಿಯ ಮಧ್ಯ ಪ್ರವೇಶವನ್ನ ಪೂರ್ಣವಾಗಿ ತಡೆ ಹಿಡಿಯಲಾಗಿದೆ. ಹೀಗಾಗಿ ಗ್ರಾಹಕನಿಗೆ ಅಷ್ಟರ ಮಟ್ಟಿಗಿನ ನೆಮ್ಮದಿ ಸಿಗುತ್ತದೆ.
  2. ಸೇವೆ ನೀಡುವಾಗ ಹೇಳುವ ಸುಳ್ಳುಗಳು, ಅಥವಾ ಮಿಸ್ ಸೆಲ್ಲಿಂಗ್: ಇದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾಮೂಲು ಎನ್ನುವ ಮಟ್ಟಕ್ಕೆ ಬಂದು ನಿಂತಿದೆ. ಮುಖ್ಯವಾಹಿನಿ ಬ್ಯಾಂಕುಗಳ ಸಿಬ್ಬಂದಿಯನ್ನೇ ಏಜೆಂಟ್ಗಳಾಗಿ ಮಾರ್ಪಾಟು ಮಾಡಿದ್ದಾರೆ. ಸ್ವಲ್ಪ ತಿಳುವಳಿಕೆ ಇಲ್ಲದ ಜನರನ್ನ, ಸೀನಿಯರ್ ಸಿಟಿಜನ್ಗಳನ್ನ ಮಾರುಕಟ್ಟೆಗೆ ಲಿಂಕ್ ಆಗಿರುವ ಸ್ಕೀಮ್ ಗಳಲ್ಲಿ ಹೂಡಿಕೆ ಮಾಡುವಂತೆ ಪ್ರಚೋದಿಸುವುದು, ಹೆಚ್ಚಿನ ಲಾಭದ ಅಸೆ ತೋರಿಸುವುದು ಇಂದಿಗೆ ಕಾಮನ್ ಆಗಿದೆ. ಇನ್ನು ನೀವು ಖಾಸಗಿ ಲೆಂಡಿಂಗ್ ಪೋರ್ಟಲ್ ಮತ್ತು ಆಪ್ಗಳ ಕಥೆಯನ್ನ ಊಹಿಸಿಕೊಳ್ಳಿ. ಹೇಳುವ ಸೇವೆಗೂ, ನೀಡುವ ಸೇವೆಗೂ ಅಜಗಜಾಂತರ ವ್ಯತ್ಯಾಸ ಇರುತ್ತದೆ. ಮೊದಲೇ ಖೆಡ್ಡಾದಲ್ಲಿ ಬಿದ್ದಿದ್ದ ಗ್ರಾಹಕನಿಗೆ ಇದರ ವಿರುದ್ಧ ಧ್ವನಿಯೆತ್ತುವ ಶಕ್ತಿ ಇರಲಿಲ್ಲ. ಇದೀಗ ಹೇಳುವ ಸೇವೆಯನ್ನ ನೀಡಬೇಕಾದ ಪರಿಸ್ಥಿತಿ ಲೆಂಡಿಂಗ್ ಪೋರ್ಟಲ್ಗಳ ಮೇಲಿದೆ.
  3. ಡೇಟಾ ಪ್ರೈವೆಸಿ ಎನ್ನುವ ಇಂದಿನ ಶತಮಾನದ ದೊಡ್ಡ ಜೋಕ್: ಗಮನಿಸಿ ನೋಡಿ ನಾವು ಸೇವೆ ಪಡೆಯುವ ಷೆಡ್ಯೂಲ್ಡ್ ಬ್ಯಾಂಕುಗಳಲ್ಲಿ ನಮ್ಮ ಮಾಹಿತಿ ಸೋರಿಕೆಯಾಗುತ್ತದೆ. ಹತ್ತಾರು ಖಾಸಗಿ ಸಂಸ್ಥೆಗಳು ಕ್ರೆಡಿಟ್  ಕಾರ್ಡ್ ಬೇಕಾ? ಸಾಲ ಬೇಕಾ? ಎಂದು ಫೋನ್ ಮಾಡುವುದು ಸಾಮಾನ್ಯವಾಗಿದೆ. ಇನ್ನು ಖಾಸಗಿ ಲೆಂಡಿಂಗ್ ಪೋರ್ಟಲ್ಗಳಿಗೆ ಯಾವ ನಿಯಮಗಳೂ ಇರಲಿಲ್ಲ ಎಂದರೆ, ನಮ್ಮ -ನಿಮ್ಮ ಮಾಹಿತಿ ಯಾವ ಮಟ್ಟದಲ್ಲಿ ಸೋರಿಕೆಯಾಗಿರಬಹುದು ಎನ್ನುವ ಅಂದಾಜು ನಿಮ್ಮದಾಗಿದೆ ಎಂದುಕೊಳ್ಳುವೆ. ಹೊಸ ಮಾರ್ಗಸೂಚಿ ಇವೆಲ್ಲಕ್ಕೂ ಬ್ರೇಕ್ ಹಾಕಲಿದೆ.
  4. ವ್ಯಾಪಾರ ಮಾಡುವುದರಲ್ಲಿ ಇಲ್ಲದ ನೀತಿ ನಿಯಮಗಳು: ತಮ್ಮ ಮನಸ್ಸಿಗೆ ಬಂದದ್ದು ಕಾನೂನು ಎನ್ನುವಂತೆ ಈ ಲೆಂಡಿಂಗ್ ಪೋರ್ಟಲ್ಗಳು ಇಲ್ಲಿಯ ತನಕ ವ್ಯಾಪಾರ ಮಾಡಿವೆ. ಗಮನಿಸಿ ಕೊನೆಪಕ್ಷ ನಾನ್ ಬ್ಯಾಂಕಿಂಗ್ ಫೈನಾನ್ಸಿಯಲ್ ಕಾರ್ಪೋರೇಶನ್ಗಳು ಭಾರತದ ಎಲ್ಲೆಡೆ ಸಮಾನವಾಗಿ ಒಂದಷ್ಟು ನಿಯಮಗಳನ್ನ ಪಾಲಿಸಬೇಕಾಗಿತ್ತು , ಆದರೆ ಇಂತಹ ತೀರಾ ಖಾಸಗಿ ಸಾಲ ನೀಡುವ ಸಂಸ್ಥೆಗಳಿಗೆ ಯಾವುದೇ ರೀತಿಯ ನಿಯಮಗಳಿರಲಿಲ್ಲ, ಪ್ರತಿಯೊಂದು ತಮ್ಮ ಲೆಕ್ಕಾಚಾರದ ಪ್ರಕಾರ ಕೆಲಸ ಮಾಡುತ್ತಿದ್ದವು. ಎಲ್ಲವನ್ನೂ ಒಂದು ನಿಯಮಾವಳಿಯಲ್ಲಿ ತರಲು ಆಗಿರಲಿಲ್ಲ. ಇದರಿಂದ ಗ್ರಾಹಕನಿಗೆ ಆಗಿರುವ ತೊಂದರೆಯನ್ನ ಗಮನಿಸಿ, ಹೊಸ ನಿಯಮಾವಳಿಗಳನ್ನ, ಮಾರ್ಗಸೂಚಿಯನ್ನ ಜಾರಿಗೆ ತರಲಾಗಿದೆ.
  5. ಮನಸ್ಸಿಗೆ ಬಂದ ಬಡ್ಡಿದರವನ್ನ ವಿಧಿಸುವುದು: ಮೇಲಿನ ಎಲ್ಲಾ ಅಂಶಗಳನ್ನ ಓದಿದ ಮೇಲೆ, ಈ ವೇಳೆಗೆ ನಿಮಗೆ ಇಲ್ಲಿ ಅಗಾಧವಾಗಿದ್ದ ಲೋಪದೋಷಗಳು ಗೊತ್ತಾಗಿರುತ್ತದೆ. ಬಡ್ಡಿದರವನ್ನ ವಿಧಿಸುವುದರಲ್ಲಿ ಕೂಡ ಸಾಮಾನ್ಯ ನಿಯಮಾವಳಿಗಳು ಇರಲಿಲ್ಲ. ಗ್ರಾಹಕನ ಪರಿಸ್ಥಿತಿ ಆಧಾರದ ಮೇಲೆ ತಮಗೆ ಇಚ್ಛೆ ಬಂದ ಬಡ್ಡಿದರವನ್ನ ಇವುಗಳು ವಿಧಿಸುತ್ತಿದ್ದವು. ಅವಶ್ಯಕೆತೆಯಲ್ಲಿರುವ ಗ್ರಾಹಕನಿಗೆ ಬೇರೆ ದಾರಿಯಾವುದಿತ್ತು? ಹೀಗಾಗಿ ಕೈ ಮೀರಿದ ಬಡ್ಡಿಯನ್ನ ತೆತ್ತು ವ್ಯಾಪಾರವನ್ನ ಹೇಗೋ ಬದುಕಿಸಿಕೊಂಡರೂ, ಲಾಭ ಎನ್ನುವುದು ಮರೀಚಿಕೆಯಾಗಿತ್ತು. ಕಷ್ಟಪಟ್ಟು ದುಡಿಯುವ ಸಣ್ಣಪುಟ್ಟ ವ್ಯಾಪಾರಸ್ಥರ ಲಾಭವನ್ನ ಇಂತಹ ಸಂಸ್ಥೆಗಳು ನುಂಗಿ ಬಿಡುತ್ತಿದ್ದವು. ಹೊಸ ಮಾರ್ಗಸೂಚಿ ಇದಕ್ಕೂ ಒಂದಷ್ಟು ಕಡಿವಾಣ ಹಾಕುವ ಆಶಾಭಾವ ಮನೆಮಾಡಿದೆ.
  6. ಇವೆಲ್ಲಕ್ಕೂ ಮೀರಿ ವಸೂಲಾತಿ ಸಮಯದಲ್ಲಿ ನಡೆಯುತ್ತಿದ್ದ ಗೂಂಡಾಗಿರಿಗೆ ಕೂಡ ಒಂದಷ್ಟು ನಿಯಂತ್ರಣ ಸಾಧ್ಯತೆಯಿದೆ: ಆರ್ ಬಿಐ ನಿಯಮಾವಳಿಗಳ ಅಡಿಯಲ್ಲಿ ಬರುವ ಬ್ಯಾಂಕುಗಳು ಈ ರೀತಿಯ ಆನ್ ಎಥಿಕಲ್ ವಸೂಲಾತಿಯಲ್ಲಿ ತೊಡಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇನ್ನು ಯಾವುದೇ ನಿಯಮಗಳ ಅಡಿಯಲ್ಲಿ ಬಾರದ ಇಂತಹ ಲೇವಾದೇವಿ ಸಂಸ್ಥೆಗಳು ಗ್ರಾಹಕನನ್ನ ಅದ್ಯಾವ ಮಟ್ಟದಲ್ಲಿ ಗೋಳಾಡಿಸಿರಬಹುದು ಎನ್ನುವ ಊಹೆಯನ್ನ ನಿಮಗೆ ಮಾಡಿಕೊಳ್ಳಲು ಬಿಡುವೆ.

ಹೊಸ ಮಾರ್ಗಸೂಚಿ ಪ್ರಕಾರ ಸಾಲಗಳನ್ನ ನೀಡುವ ಸಂಸ್ಥೆಗಳನ್ನ ಸ್ಥೂಲವಾಗಿ ಮೂರು ವರ್ಗಿಕರಣ ಮಾಡಲಾಗಿದೆ:

  • ಆರ್ ಬಿಐ ನಿಯಮಗಳನ್ನ ಪಾಲಿಸುವ ಮತ್ತು ಆರ್ ಬಿಐನಿಂದ ಈ ವ್ಯಾಪಾರ ಮಾಡಲು ಅನುಮತಿ ಪಡೆದಿರುವ ಸಂಸ್ಥೆಗಳು.
  • ಆರ್ ಬಿಐ ಅಧೀನದಲ್ಲಿ ಬಾರದ ಆದರೆ ದೇಶದಲ್ಲಿರುವ ಇತರೆ ಕಾನೂನುಗಳ ಅಡಿಯಲ್ಲಿ ಕೆಲಸ ಮಾಡುವ ಸಂಸ್ಥೆಗಳು

           ಇವೆರೆಡನ್ನೂ ರೆಗ್ಯುಲೇಟೆಡ್ ಎನ್ಟಿಟಿಸ್ (RE ) ಎನ್ನಲಾಗುತ್ತದೆ.

  • ಮೇಲಿನ ಎರಡು ರೆಗ್ಯುಲೇಟೆಡ್ ಎನ್ಟಿಟಿಸ್ ನೇಮಕ ಮಾಡಿಕೊಳ್ಳುವ ಲೆಂಡಿಂಗ್ ಸರ್ವಿಸ್ ಪ್ರೊವೈಡರ್ಸ್.

ಈಗಿನ ನಿಯಮಾವಳಿಗಳು ಅಥವಾ ಮಾರ್ಗಸೂಚಿ ಜಾರಿಗೆ ತಂದಿರುವುದು ಮೂರನೇ ಸಂಸ್ಥೆಗಳು ಅರ್ಥಾತ್ ಲೋನ್ ಸರ್ವಿಸ್ ಪ್ರೊವೈಡರ್ಸ್. ಮೇಲಿನ ಎರಡು ಸಂಸ್ಥೆಗಳು ಆರ್ಬಿಐ ಅಥವಾ ಇತರ ಮಾರ್ಗಸೂಚಿಗಳಂತೆ ಕಾರ್ಯ ನಿರ್ವಹಿಸುವ ಕಾರಣ ತಮಗೆ ಬೇಕಾದ ಲಿವರೇಜ್ ಪಡೆದುಕೊಳ್ಳಲು, ಇಂತಹ ಲೋನ್ ಸರ್ವಿಸ್ ಪ್ರೊವೈಡರ್ಸ್ ಸಂಸ್ಥೆಗಳನ್ನ ಬಳಸಿಕೊಳ್ಳುತ್ತಿದ್ದವು. ಹೊಸ ಮಾರ್ಗಸೂಚಿ ಇಂತಹ ಎಲ್ಲಾ ಅಕ್ರಮಗಳಿಗೆ ಮಂಗಳ ಹಾಡಲಿದೆ.

ಕೊನೆಮಾತು: ಮೇಲೆ ಹೇಳಿರುವ ಅಂಶಗಳು ಸ್ಥೂಲ ಚಿತ್ರಣವನ್ನ ಮಾತ್ರ ನೀಡಿವೆ. ಇದರ ಜೊತೆಗೆ ಹತ್ತಾರು ಸಣ್ಣಪುಟ್ಟ ನಿಯಮಾವಳಿಗಳನ್ನ ಕೂಡ ಪಾಲಿಸಬೇಕಾಗುತ್ತದೆ. ಉದಾಹರಣೆಗೆ ಗ್ರಾಹಕ ದೂರು ನೀಡಿದರೆ ಅದನ್ನ 30 ದಿನಗಳಲ್ಲಿ ಇತ್ಯರ್ಥಗೊಳಿಸಬೇಕಾಗುತ್ತದೆ. ಗ್ರಾಹಕನ ಅಹವಾಲು ಸ್ವೀಕರಿಸಲು ಗ್ರಿವೆನ್ಸ್ ಸೆಲ್ ಗಳ ನಿರ್ಮಾಣ ಮಾಡುವುದು ಹೀಗೆ ಹತ್ತಾರು ನಿಬಂಧನಗೆಳು ಇಲ್ಲಿ ಸೇರಿಸಲಾಗಿದೆ. ಇದೆಲ್ಲವನ್ನೂ ಗ್ರಾಹಕನ ಹಿತವನ್ನ ಕಾಯುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ಇಷ್ಟೆಲ್ಲಾ ಬದಲಾವಣೆಗಳಾಗಿವೆ ಎನ್ನುವುದನ್ನ ಗ್ರಾಹಕ ಮೊದಲು ಅರಿತುಕೊಳ್ಳಬೇಕು. ಇದರ ಸಾಮಾನ್ಯಜ್ಞಾನವಿಲ್ಲದೆ ಹೋದರೆ ಶೋಷಣೆ ನಿಲ್ಲುವುದು ಹೇಗೆ? ಪ್ರತಿಯೊಬ್ಬ ಸಾಲ ಪಡೆಯಲು ಇಚ್ಛಿಸುವ ವ್ಯಕ್ತಿ ಇದನ್ನ ಅಮೂಲಾಗ್ರವಾಗಿ ತಿಳಿದುಕೊಳ್ಳುವ ಅವಶ್ಯಕತೆಯಿದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com