ಇಸುಬು ಅಥವಾ ಎಕ್ಜಿಮಾ ಎಂಬ ಚರ್ಮ ಸೋಂಕು (ಕುಶಲವೇ ಕ್ಷೇಮವೇ)
ಚರ್ಮ ನಮ್ಮ ದೇಹದ ಅತಿದೊಡ್ಡ ಅಂಗ. ಚರ್ಮ ದೇಹದ ಹೊರಭಾಗಗಳನ್ನು ಕಾಪಾಡುವ ರಕ್ಷಾಕವಚದಂತೆ ಕೆಲಸ ಮಾಡುತ್ತದೆ. ಇದು ಒಂದು ಪ್ರಮುಖ ಇಂದ್ರಿಯವೂ ಹೌದು. ಚರ್ಮಕ್ಕೆ ಹಲವಾರು ಬಾರಿ ಸೋಂಕು ಮತ್ತು ಸಮಸ್ಯೆಗಳು ಎದುರಾಗುತ್ತವೆ. ಇವುಗಳಲ್ಲಿ ಇಸುಬು (ಎಕ್ಜಿಮಾ) ಕೂಡ ಒಂದು.
Published: 09th July 2022 01:23 PM | Last Updated: 09th July 2022 01:38 PM | A+A A-

ಸಾಂದರ್ಭಿಕ ಚಿತ್ರ
ಚರ್ಮ ನಮ್ಮ ದೇಹದ ಅತಿದೊಡ್ಡ ಅಂಗ. ಚರ್ಮ ದೇಹದ ಹೊರಭಾಗಗಳನ್ನು ಕಾಪಾಡುವ ರಕ್ಷಾಕವಚದಂತೆ ಕೆಲಸ ಮಾಡುತ್ತದೆ. ಇದು ಒಂದು ಪ್ರಮುಖ ಇಂದ್ರಿಯವೂ ಹೌದು. ಚರ್ಮಕ್ಕೆ ಹಲವಾರು ಬಾರಿ ಸೋಂಕು ಮತ್ತು ಸಮಸ್ಯೆಗಳು ಎದುರಾಗುತ್ತವೆ. ಇವುಗಳಲ್ಲಿ ಇಸುಬು (ಎಕ್ಜಿಮಾ) ಕೂಡ ಒಂದು.
ಇಸುಬು ಚರ್ಮ ರೋಗದ ಲಕ್ಷಣಗಳು
ಇಸುಬು ಎಂದರೆ ಚರ್ಮ ಅಲ್ಲಲ್ಲಿ ಕೆಂಪಗಾಗಿ ಬಿರುಕು ಬಿಡುವುದು. ಇದು ಗಂಧೆಯಂತೆಯೂ ಕಾಣಿಸಿಕೊಳ್ಳುತ್ತದೆ. ಇದು ತುರಿಕೆ ಮತ್ತು ಉರಿಯಿಂದ ಕೂಡಿರುತ್ತದೆ. ಇದೊಂದು ಸಾಮಾನ್ಯ ಚರ್ಮವ್ಯಾಧಿಯಾಗಿದ್ದು ತುರಿಕೆಯಾದಾಗ (ನವೆ) ಕೆರೆದಷ್ಟು ಇದರ ತುರಿಕೆ ಹೆಚ್ಚಾಗುತ್ತಾ ಹೋಗುತ್ತದೆ ಹಾಗೂ ಕೆಲವೊಮ್ಮೆ ಮುಜುಗರ ಉಂಟುಮಾಡುತ್ತದೆ. ಇದು ಕ್ರಮೇಣ ನೀರಿನ ಗುಳ್ಳೆಗಳಾಗಿ ಅವುಗಳಿಂದ ದ್ರವ ಪದಾರ್ಥ ಸೋರುತ್ತದೆ. ಬಳಿಕ ಆ ಭಾಗವೆಲ್ಲವೂ ಮಚ್ಚೆಯಾಗಿ (ಇಸುಬು) ಚರ್ಮ ಕಪ್ಪಾಗುತ್ತದೆ. ದೀರ್ಘಾವಧಿಯ ಪ್ರಕರಣಗಳಲ್ಲಿ ಚರ್ಮವು ಗಟ್ಟಿಯಾಗಬಹುದು. ಬಾಧಿತ ಚರ್ಮದ ಪ್ರದೇಶ ಒಂದು ಸಣ್ಣ ಭಾಗದಿಂದ ಹಿಡಿದು ಇಡೀ ದೇಹದವರೆಗೆ ಬದಲಾಗಬಹುದು.
ಇಸುಬು ಚರ್ಮ ರೋಗ ಬರಲು ಕಾರಣಗಳು
ವಂಶವಾಹಿಗಳು ಮತ್ತು ವಾತಾವರಣದಲ್ಲಿರುವ ಆಧಿಕ ಶೀತ, ಉಷ್ಣ ಮುಂತಾದ ಅಹಿತಕರ ಅಂಶಗಳು ಇಸುಬಿಗೆ ಪ್ರಮುಖ ಕಾರಣಗಳು. ಸಾಮಾನ್ಯವಾಗಿ ಇಸುಬು ಮುಖ, ತಲೆ, ಮೊಣಕಾಲು, ಕತ್ತಿನ ಭಾಗ, ಮೊಣಕೈ, ಮಣಿಕಟ್ಟು, ಪಾದದ ಹಿಂಬದಿ ಹಾಗೂ ಕಿವಿಯ ಹಿಂಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಒಣ ಚರ್ಮ ಇದ್ದವರಿಗೆ ಇದೊಂದು ಪ್ರಮುಖ ಸಮಸ್ಯೆಯಾಗಿ ಕಾಡಬಹುದು.
ಈ ತೊಂದರೆ ಇರುವ ಜನರು ಪರಿಸರದಲ್ಲಿ ಅತಿ ಸಾಮಾನ್ಯವಾಗಿರುವ ತಾಪಮಾನದಲ್ಲಿ ಬದಲಾವಣೆ, ಕೆಲವು ಪ್ರಾಣಿಗಳ ಒಡನಾಟ, ಧೂಳು, ಹೂವಿನ ಪರಾಗ, ಸೊಳ್ಳೆ-ತಿಗಣೆ ಮೊದಲಾದ ಕಡಿಯುವ ಕೀಟಗಳು, ಮನೆಯನ್ನು ಸ್ವಚ್ಛಗೊಳಿಸುವ ಫಿನಾಯಿಲ್ ಅಥವಾ ಇತರ ರಾಸಾಯನಿಕಗಳು, ಕೆಲವು ಸೌಂದರ್ಯವರ್ಧಕ ಪ್ರಸಾಧನಗಳು ಮೊದಲಾದವುಗಳಿಗೆ ಅತಿ ಹೆಚ್ಚಿನ ಅಲರ್ಜಿಯನ್ನು ಹೊಂದಿರುತ್ತಾರೆ. ಅಂತಹವರು ಚರ್ಮ ಒಣಗಲು ಬಿಡಬಾರದು. ಚರ್ಮದಲ್ಲಿ ನೀರಿನಂಶ ಕಡಿಮೆಯಾದಾಗ ತುರಿಕೆ ಮತ್ತು ಉರಿ ಉಂಟಾಗುತ್ತದೆ. ಕೆಲವೊಮ್ಮೆ ಮಕ್ಕಳನ್ನೂ ಇಸುಬು ಕಾಡುತ್ತದೆ.
ಇಸುಬು ಅಥವಾ ಎಕ್ಜಿಮಾ ಚರ್ಮ ರೋಗಕ್ಕೆ ಚಿಕಿತ್ಸೆ
ಇಂದು ಇಸುಬಿಗೆ ಹಲವಾರು ಚಿಕಿತ್ಸೆಗಳು ಲಭ್ಯವಿದೆ. ಆದ್ದರಿಂದ ಚಿಂತೆಗೆ ಕಾರಣವಿಲ್ಲ. ಇದಕ್ಕೆ ಸಮರ್ಥ ಹಾಗೂ ನೈಸರ್ಗಿಕವಾದ ಚಿಕಿತ್ಸೆ ಎಂದರೆ ಬೇವಿನ ಎಣ್ಣೆ. ಇಸುಬು ಇರುವ ಚರ್ಮದ ಭಾಗವನ್ನು ಸ್ವಚ್ಛಪಡಿಸಲು ಉಗುರು ಬೆಚ್ಚನೆಯ ನೀರಿನಲ್ಲಿ ಬೇವಿನ ಎಣ್ಣೆಯನ್ನು ಬೆರೆಸಿ ಚರ್ಮವನ್ನು ಸ್ವಚ್ಛಗೊಳಿಸಬೇಕು. ಬೇವಿನಲ್ಲಿರುವ ಉರಿಯೂತ ನಿವಾರಕ ಗುಣ ಉರಿ, ತುರಿಕೆ, ಕೆಂಪಗಾಗುವುದು ಮೊದಲಾದವುಗಳನ್ನು ನಿವಾರಿಸುತ್ತದೆ.
ಇದನ್ನೂ ಓದಿ: ಸರ್ವೈಕಲ್ ಸ್ಪಾಂಡಿಲೈಟಿಸ್ (ಕುಶಲವೇ ಕ್ಷೇಮವೇ)
ಸ್ನಾನದ ನೀರು ಉಗುರು ಬೆಚ್ಚಗಿರುವುದು ಅಗತ್ಯ. ಅತಿ ಬಿಸಿಯೂ ಇರಬಾರದು, ತಣ್ಣಗೂ ಇರಬಾರದು. ತೇವಗೊಂಡ ಚರ್ಮದ ಭಾಗಕ್ಕೆ ಬೇವಿನ ಕ್ರೀಂ ಅಥವಾ ಲೋಶನ್ ಹಚ್ಚಬೇಕು. ಇದರಿಂದ ಚರ್ಮ ತನ್ನ ಮೂಲಸ್ವರೂಪವನ್ನು ಪಡೆದುಕೊಳ್ಳಲು ನೆರವಾಗುತ್ತದೆ. ತ್ವಚೆಗೆ ರಾಸಾಯನಿಕ ಮುಕ್ತ, ಉತ್ತಮ ಗುಣಮಟ್ಟದ ಹಾಗೂ ನೈಸರ್ಗಿಕ ಉತ್ಪನ್ನಗಳನ್ನೇ ಕೊಳ್ಳಬೇಕು. ಇದಲ್ಲದೇ ದಿನವೂ ಸ್ನಾನ ಮಾಡಿದ ನಂತರ ಚರ್ಮಕ್ಕೆ ಮಾಯಿಶ್ಚರೈಸರ್ ಹಚ್ಚಿಕೊಳ್ಳಬೇಕು. ಸೂರ್ಯಕಾಂತಿ ಬೀಜದ ಎಣ್ಣೆಯನ್ನು ಮತ್ತು ಕೊಬ್ಬರಿ ಎಣ್ಣೆಯನ್ನೂ ಬಾಧಿತ ಭಾಗಕ್ಕೆ ಹಚ್ಚಿಕೊಳ್ಳಬಹುದು. ಲೋಳೆಸರ (ಅಲೋವೆರಾ) ಕ್ರೀಮನ್ನು ಹಚ್ಚಿಕೊಳ್ಳಬಹುದು. ಆಲಿವ್ ಎಣ್ಣೆ ಮತ್ತು ವ್ಯಾಸೆಲಿನ್/ಪೆಟ್ರೋಲಿಯಂ ಜೆಲ್ಲಿಯ ಬಳಕೆ ಕೂಡ ಸಹಾಯಕಾರಿ. ಒಟ್ಟಿನಲ್ಲಿ ಚರ್ಮ ಒಣಗದಂತೆ ಆದಷ್ಟೂ ಜಾಗ್ರತೆಯಾಗಿ ನೋಡಿಕೊಳ್ಳಬೇಕು.
ಅಡಿಗೆಯಲ್ಲಿ ಅರಿಷಿಣವನ್ನು ತಪ್ಪದೇ ದಿನನಿತ್ಯ ಬಳಸಬೇಕು. ಬೆಳಗ್ಗೆ ಖಾಲಿ ಹೊಟ್ಟೆಗೆ ಒಂದು ಚಮಚ ಅರಿಷಿಣವನ್ನು ಅರ್ಧ ಲೋಟ ಬಿಸಿ ನೀರು ಅಥವಾ ಹಾಲಿಗೆ ಹಾಕಿ ಕುಡಿಯಬೇಕು. ಅಂಗಡಿಯಲ್ಲಿ ಸಿಗುವ ಅರಿಷಿಣ ಪುಡಿಗಿಂತ ಅರಿಷಿಣದ ಕೊಂಬನ್ನು ತಂದು ಮನೆಯಲ್ಲಿಯೇ ಪುಡಿ ಮಾಡಿ ಬಳಸುವುದು ಒಳ್ಳೆಯದು. ಇದು ದೇಹಕ್ಕೆ ಹೊರಗಿನಿಂದ ಮತ್ತು ಒಳಗಿನಿಂದ ಆರೈಕೆ ನೀಡುವ ಮುಖ್ಯ ಪದಾರ್ಥವಾಗಿದೆ. ವಿಟಮಿನ್ ಡಿ ಇರುವಂತಹ ಮೊಟ್ಟೆ, ಮೀನು, ಹಾಲು, ಸೊಪ್ಪು, ಬೆಂಡೆಕಾಯಿ, ಸೋಯಾ ಉತ್ಪನ್ನಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಚರ್ಮದ ಶಕ್ತಿ ಕೂಡ ಹೆಚ್ಚಾಗುತ್ತದೆ.
ಇದನ್ನೂ ಓದಿ: ಮಳೆಗಾಲದಲ್ಲಿ ಕಾಡುವ ಸಾಮಾನ್ಯ ಕಾಯಿಲೆಗಳಿಗೆ ಮನೆಮದ್ದು (ಕುಶಲವೇ ಕ್ಷೇಮವೇ)
ಇಸುಬಿಗೆ ಆಯುರ್ವೇದದಲ್ಲಿ ಉತ್ತಮ ಚಿಕಿತ್ಸೆ ಲಭ್ಯ ಇದೆ. ಪಂಚಕರ್ಮ ಚಿಕಿತ್ಸೆಯೊಂದಿಗೆ ಕೆಲವು ಗಿಡಮೂಲಿಕೆಗಳ ಕಷಾಯಗಳು ಮತ್ತು ರಸೌಷಧಿಗಳು ಇವೆ. ಬದನೆಕಾಯಿ, ಕುಂಬಳಕಾಯಿ ಮತ್ತು ಕರಿದ ಪದಾರ್ಥಗಳನ್ನು ಹೆಚ್ಚು ಸೇವನೆ ಮಾಡಬಾರದು, ಶೇಂಗಾ ಬೀಜ ಮತ್ತಿತರ ಆಹಾರ ಪದಾರ್ಥಗಳನ್ನು ಸೇವಿಸಿದಾಗ ಕೆಲವರಿಗೆ ತುರಿಕೆ ಹೆಚ್ಚಾಗುತ್ತದೆ. ಆದ್ದರಿಂದ ಅಂತಹ ಆಹಾರ ಸೇವನೆ ಬಿಡಬೇಕು.
ಇಸುಬು ಚರ್ಮ ಸೋಂಕು ಇರುವವರು ವಹಿಸಬೇಕಾದ ಎಚ್ಚರಿಕೆ
ಇಸುಬಿದ್ದರೆ ದಪ್ಪನೆಯ ಮತ್ತು ಚರ್ಮಕ್ಕೆ ಕಿರಿಕಿರಿ ಉಂಟು ಮಾಡುವ ಬಟ್ಟೆಗಳನ್ನು ತೊಡಬಾರದು. ಆದಷ್ಟು ಮೆತ್ತಗಿನ ಹತ್ತಿಯ ಬಟ್ಟೆಗಳನ್ನೇ ಧರಿಸಬೇಕು. ಸೌಮ್ಯ ರೀತಿಯ ಸಾಬೂನು ಮಾತ್ರ ಉಪಯೋಗಿಸಬೇಕು. ಬೆವರು ಬರುವಷ್ಟು ಹೆಚ್ಚಿನ ತಾಪಮಾನಕ್ಕೆ ಮೈಯ್ಯನ್ನು ಒಡ್ಡಿಕೊಳ್ಳಬಾರದು. ಚಳಿಗಾಲದಲ್ಲಿ ಚರ್ಮದ ಬಗೆಗೆ ವಿಶೇಷ ಕಾಳಜಿ ವಹಿಸಬೇಕು. ಇಸುಬಿನ ಕೆರೆತವನ್ನು ಆದಷ್ಟು ನಿಯಂತ್ರಿಸಿ. ಕೆರೆದು ದೊಡ್ಡದು ಮಾಡಿಕೊಳ್ಳಬಾರದು. ಇದಕ್ಕಾಗಿ ಕೈ ಬೆರಳುಗಳ ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಬೇಕು.
ಇಸುಬು ಬೇಗನೆ ಹೋಗುವ ಚರ್ಮದ ಸಮಸ್ಯೆ ಅಲ್ಲ. ಹಲವಾರು ತಿಂಗಳುಗಳು ಅಥವಾ ವರ್ಷಗಳು ಹಿಡಿಯಬಹುದು. ವೈದ್ಯರ ಸೂಚನೆಯಂತೆ ಉತ್ತಮ ಚಿಕಿತ್ಸೆ ಪಡೆದುಕೊಂಡರೆ ಅದರ ಪರಿಣಾಮಗಳು ಮಾಯವಾಗುತ್ತವೆ. ಇದರಿಂದ ಆಗುವ ತೊಂದರೆಗಳನ್ನು ಗಮನಿಸಿ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದು ಪರಿಹಾರ ಕಂಡುಕೊಳ್ಳಬೇಕು. ಮಕ್ಕಳ ವಿಷಯದಲ್ಲಿ ಮಾತ್ರ ಬಹಳ ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆ ಇದೆ.
ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com