social_icon

ದಾರ್ಶನಿಕ ಅರ್ಥಶಾಸ್ತ್ರಜ್ಞ ಅಂಬೇಡ್ಕರ್ ಅವರ ಆರ್ಥಿಕ ನೀತಿಗಳು (ಹಣಕ್ಲಾಸು)

-ಹಣಕ್ಲಾಸು-332

ರಂಗಸ್ವಾಮಿ ಮೂನಕನಹಳ್ಳಿ

Published: 03rd November 2022 11:00 AM  |   Last Updated: 03rd November 2022 03:53 PM   |  A+A-


Dr B.R Ambedkar

ಡಾ.ಬಿಆರ್ ಅಂಬೇಡ್ಕರ್

ಡಾ. ಬಿ.ಆರ್ ಅಂಬೆಡ್ಕರ್ ಹೆಸರನ್ನ ಭಾರತದಲ್ಲಿ ಕೇಳದವರೇ ಇಲ್ಲ ಎನ್ನಬಹುದು. ಅಂಬೇಡ್ಕರ್ ಅವರದು ಅಷ್ಟು ದೊಡ್ಡ ಹೆಸರು. ಜನ ಸಾಮಾನ್ಯನಿಗೆ ಅಂಬೇಡ್ಕರ್ ಎಂದರೆ ನಮ್ಮ ಸಂವಿಧಾನವನ್ನ ರಚಿಸಿದವರು, ' ಫಾದರ್ ಆಫ್ ಇಂಡಿಯನ್ ಕಾನ್ಸ್ಟಿಟ್ಯೂಷನ್ ' ಎನ್ನುವುದು ತಿಳಿದಿದೆ. ಇನ್ನೊಂದು ವರ್ಗ ಅವರನ್ನ ದಲಿತ ನಾಯಕ ಎನ್ನುವಂತೆ ಬಿಂಬಿಸಲು ಮತ್ತು ಅಂಬೇಡ್ಕರ್ ಅವರಂತಹ ಮಹಾನ್ ಆತ್ಮವನ್ನ ಕೇವಲ ಒಂದು ಸೀಮಿತ ಪರಿಧಿಯಲ್ಲಿ ಬಂಧಿಸಲು ನೋಡುತ್ತಾರೆ. ಆದರೆ ಅಂಬೇಡ್ಕರ್ ಅವರು ಇವೆಲ್ಲವನ್ನ ಮೀರಿದ ತುಂಬು ವ್ಯಕ್ತಿತ್ವವನ್ನ ಹೊಂದಿದ್ದವರು. ಭಾರತದ ಅರ್ಥ ವ್ಯವಸ್ಥೆ ಬಗ್ಗೆ ಅವರಿಗೆ ಅಪಾರವಾದ ಜ್ಞಾನವಿತ್ತು. 

ಯಾವ ರೀತಿಯಲ್ಲಿ ಅರ್ಥ ವ್ಯವಸ್ಥೆಯನ್ನ ಮುಂದುವರಿಸಿದರೆ ಸಾಮಾಜಿಕವಾಗಿ ನಾವು ಇನ್ನಷ್ಟು ಪ್ರಬಲರಾಗಬಹುದು ಎನ್ನುವ ದೂರದರ್ಶಿತ್ವ ಕೂಡ ಇತ್ತು ಎನ್ನುವುದಕ್ಕೆ ನಮಗೆ ಹಲವಾರು ಉದಾಹರಣೆಗಳು ಸಿಗುತ್ತವೆ. ಡಾ. ಬಿ .ಆರ್ ಅಂಬೆಡ್ಕರ್ ಅವರು ಸಂವಿಧಾನ ಶಿಲ್ಪಿ ಅಷ್ಟೇ ಅಲ್ಲ ಅವರೊಬ್ಬ ಮಹಾನ್ ಎಕಾನಾಮಿಸ್ಟ್ ಆಗಿದ್ದರು. ಅವರ ಬಗೆಗಿನ ಈ ವಿಷಯ ಹೆಚ್ಚು ಜನಪ್ರಿಯವಲ್ಲ. ಆದರೆ ಭಾರತಕ್ಕೆ ಎಕನಾಮಿಸ್ಟ್ ಆಗಿ ಅವರು ನೀಡಿರುವ ಕೊಡುಗೆ ಅಪಾರ. ಅದೇನು? ಎನ್ನುವುದರ ಬಗ್ಗೆ ಒಂದಷ್ಟು ತಿಳಿದುಕೊಳ್ಳುವ ಪ್ರಯತ್ನವನ್ನ ಮಾಡೋಣ.

ಇದನ್ನೂ ಓದಿ: ಆರ್ಥಿಕತೆಯಲ್ಲಿ ಬ್ರಿಟನ್ ಹಿಂದಿಕ್ಕಿದ ಭಾರತ: ನಿಜಕ್ಕೂ ಜಿಡಿಪಿ ನಮ್ಮ ಅಭಿವೃದ್ಧಿಯ ಮಾನದಂಡವೇ?

ಬಹಳ ಜನರಿಗೆ ಈ ವಿಷಯ ಗೊತ್ತಿರುವುದಿಲ್ಲ, ಅದೇನೆಂದರೆ ಅಂಬೇಡ್ಕರ್ ಅವರು ತಮ್ಮ ವೃತ್ತಿ ಜೀವನವನ್ನ ಎಕನಾಮಿಸ್ಟ್ ಆಗಿ ಪ್ರಾರಂಭಿಸುತ್ತಾರೆ. ಅಂದಿನ ರಾಷ್ಟೀಯ ಮತ್ತು ಅಂತರರಾಷ್ಟ್ರೀಯ ಚರ್ಚೆಗಳಲ್ಲಿ ಇವರ ಹೆಸರಿಲ್ಲದೆ ಮುಕ್ತಾಯ ಕಾಣುತ್ತಿರಲಿಲ್ಲ ಎನ್ನುವಷ್ಟರ ಮಟ್ಟಿಗೆ ತಿಳಿದುಕೊಂಡವರಾಗಿದ್ದರು. ಅಂದಿನ ದಿನದಲ್ಲಿ ಭಾರತದಲ್ಲಿ ಅತಿ ಹೆಚ್ಚು ಎಕಾನಮಿ ಬಗ್ಗೆ ಅಧ್ಯಯನ ಮಾಡಿದ ವ್ಯಕ್ತಿ ಅಂಬೇಡ್ಕರ್ ಎನ್ನುವುದು ನಿರ್ವಿವಾದ. ಬಾಬಾ ಸಾಹೇಬ್ ಅವರು ಒಂದಲ್ಲ ಎರಡೆರೆಡು ಯೂನಿವೆರ್ಸಿಟಿಗಳಿಂದ ಡಾಕ್ಟರೇಟ್ ಪದವಿಯನ್ನ ಪಡೆದವರು. ಅಮೆರಿಕಾದ ಕೊಲಂಬಿಯಾ ಯೂನಿವೆರ್ಸಿಟಿಯಲ್ಲಿ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಎಕನಾಮಿಕ್ಸ್ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನ ಪಡೆದಿದ್ದಾರೆ. ಇಂದಿಗೂ ಇವರ ಹಲವಾರು ಅರ್ಥ ವ್ಯವಸ್ಥೆಯ ಚಿಂತನೆಗಳು ಪ್ರಸ್ತುತವಾಗಿದೆ. ಅವುಗಳಲ್ಲಿ ಪ್ರಮುಖವಾದವುಗಳನ್ನ ಗಮನಿಸೋಣ.

 1. ಮ್ಯಾನೇಜ್ಮೆಂಟ್ ಆಫ್ ರುಪಿ: ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಡಾಕ್ಟರೇಟ್ ಪದವಿಯನ್ನ ಪಡೆಯಲು ಅಂಬೇಡ್ಕರ್ ಅವರು ತೆಗೆದುಕೊಂಡ ವಿಷಯ ಮ್ಯಾನೇಜ್ಮೆಂಟ್ ಆಫ್ ರುಪಿ ಎನ್ನುವುದಾಗಿತ್ತು. ಆಮೇಲೆ ಇದು ಪುಸ್ತಕದ ರೂಪದಲ್ಲಿ ಕೊಡ ಪ್ರಕಟವಾಗಿ ಬಹಳ ಜನಪ್ರಿಯತೆಯನ್ನ ಪಡೆದುಕೊಂಡಿತು. ಗಮನಿಸಿ ಅಂದಿನ ದಿನದಲ್ಲೇ ಪೇಪರ್ ಹಣವನ್ನ ಮುದ್ರಿಸಲು ಗೋಲ್ಡ್ ಬ್ಯಾಕ್ ಅಪ್ ಇರುವುದು ಅತ್ಯಂತ ಅವಶ್ಯಕ ಎನ್ನುವುದನ್ನ ಅಂಬೆಡ್ಕರ್ ಅವರು ಪ್ರತಿಪಾದಿಸಿದ್ದರು. ಅಂದಿನ ದಿನದಲ್ಲಿ ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಬಹಳ ದೊಡ್ಡ ಬದಲಾವಣೆಯ ದಾರಿಯಲ್ಲಿತ್ತು. ಗೋಲ್ಡ್ ರಶ್ ಉಂಟಾದ ನಂತರ ಅಮೇರಿಕಾ ತನ್ನ ಹಣವನ್ನ ಗೋಲ್ಡ್ ಸ್ಟ್ಯಾಂಡರ್ಡ್ ಅಥವಾ ಗೋಲ್ಡ್ ಬ್ಯಾಕ್ ಅಪ್ ಇಲ್ಲದೆ ಮುದ್ರಿಸಲು ಮುಂದಾಗುತ್ತದೆ. ಇದರಿಂದ ಉಂಟಾಗುವ ದೂರಗಾಮಿ ಪರಿಣಾಮಗಳನ್ನ ಬಾಬಾ ಸಾಹೇಬ್ ಊಹಿಸಿದ್ದರು ಅನ್ನಿಸುತ್ತದೆ. ಪೇಪರ್ ಮನಿಯನ್ನ ಇಚ್ಛೆ ಬಂದಂತೆ ಬಂಗಾರದ ರಿಸರ್ವ್ ಇಲ್ಲದೆ ಮುದ್ರಿಸುವುದು ತಪ್ಪು ಎನ್ನುವುದು ಇವರ ವಾದವಾಗಿತ್ತು. ರೂಪಾಯಿ ನಿರ್ವಹಣೆಗೆ ಬಂಗಾರದ ರಿಸರ್ವ್ ಅವಶ್ಯಕ ಎನ್ನುವುದು ಬಾಬಾ ಸಾಹೇಬ್ ಅವರ ನಿಲುವಾಗಿತ್ತು. ಇಂದಿಗೆ ಜಾಗತಿಕ ಮಟ್ಟದಲ್ಲಿ ಗೋಲ್ಡ್ ಬ್ಯಾಕ್ ಅಪ್ ಇಲ್ಲದೆ ಕೇವಲ ನಂಬಿಕೆಯ ಆಧಾರದ ಮೇಲೆ ಹಣವನ್ನ ಮುದ್ರಿಸಲಾಗುತ್ತಿದೆ. ಇದರಿಂದ ಏನಾಗಿದೆ? ಜಗತ್ತಿನ ಎಲ್ಲೆಡೆ ಯಾವ ಮಟ್ಟದಲ್ಲಿ ಹಣದುಬ್ಬರ ಏರಿದೆ ಎನ್ನುವುದನ್ನ ನಾವು ಕಾಣುತ್ತಿದ್ದೇವೆ. ಪೂರ್ಣ ಜಗತ್ತು ಇಂದಿಗೆ Finincial mismanagement ನಿಂದ ಬಳಲುತ್ತಿದೆ. ಜಾಗತಿಕ ಅರ್ಥ ವ್ಯವಸ್ಥೆ ಶಿಥಿಲಗೊಂಡಿದೆ. ಇದನ್ನ ನೋಡಿದಾಗ ಅಂಬೆಡ್ಕರ್ ಅವರ ವಾದದಲ್ಲಿ ಎಷ್ಟು ಹುರುಳಿತ್ತು ಎನ್ನುವುದು ಅರ್ಥವಾಗುತ್ತದೆ. ಅಂಬೆಡ್ಕರ್ ಅವರ ನಿಲುವನ್ನ ಸಮರ್ಥಿಸಿಕೊಂಡಿದ್ದರೆ ಇಂದು ಭಾರತ ಮಾತ್ರವಲ್ಲ ಜಗತ್ತು ಕೂಡ ಅವರನನ್ನ ನೆನೆಯುತ್ತಿತ್ತು.
 2. ತನಗೆ ಬೇಕಾದ ಹಣವನ್ನ ತಾನೇ ಕ್ರೋಡೀಕರಿಸಿಕೊಳ್ಳಬೇಕು : ಪಬ್ಲಿಕ್ ಫೈನಾನ್ಸ್ ಬಯಸುವ ಎಲ್ಲಾ ಸಂಸ್ಥೆಗಳು ತಮ್ಮ ಖರ್ಚಿಗೆ ಬೇಕಾದ ಸಂಪನ್ಮೂಲವನ್ನ ತಾವೇ ಕ್ರೋಡೀಕರಿಸಿಕೊಳ್ಳುವ ಶಕ್ತಿಯನ್ನ ಬೆಳಸಿಕೊಳ್ಳಬೇಕು ಆಗ ಮಾತ್ರ ಸುಸ್ಥಿರ ಬೆಳವಣಿಗೆ ಸಾಧ್ಯ ಎನ್ನುವುದು ಅಂಬೆಡ್ಕರ್ ಅವರ ಇನ್ನೊಂದು ಆರ್ಥಿಕತೆ ಕುರಿತು ಬಹುದೊಡ್ಡ ನಿಲುವಾಗಿತ್ತು . ಈ ಆಧಾರದ ಮೇಲೆ ಕೆಲಸ ಮಾಡುವ ಯಾವ ಸಂಸ್ಥೆಯೂ ಕುಸಿತ ಕಾಣಲು ಸಾಧ್ಯವಿಲ್ಲ. ಬಹುತೇಕ ಸರಕಾರಿ ಸಂಸ್ಥೆಗಳಲ್ಲಿ ಈ ತಿರುಳನ್ನ ಅಳವಡಿಕೆ ಮಾಡಿಕೊಳ್ಳಲಾಗಿದೆ ಆದರೆ ಮೂಲ ಆಶಯವನ್ನ ಮರೆತುದರ ಪರಿಣಾಮ ಇಂದು ಸರಕಾರಿ ಸಾಮ್ಯದ ಸಂಸ್ಥೆಗಳು ಆ ಮಟ್ಟದ ಯಶಸ್ಸನ್ನ ಕಾಣುತ್ತಿಲ್ಲ. ಅದು ಒಂದು ತತ್ವವವನ್ನ ರೂಢಿಸಿಕೊಳ್ಳುವುದರಲ್ಲಿ ನಮ್ಮಿಂದಾದ ತಪ್ಪು. ಅಂಬೆಡ್ಕರ್ ಅವರ ಈ ಆರ್ಥಿಕ ನೀತಿಯನ್ನ ಇಂದಿಗೂ ಅಳವಡಿಸಿಕೊಳ್ಳಲು ಹೇರಳ ಅವಕಾಶವಿದೆ.
 3. ಲ್ಯಾಂಡ್ ಅಥವಾ ನೆಲ ಕೇವಲ ಒಂದು ಅಂಶ ಮಾತ್ರ: ಅಂಬೆಡ್ಕರ್ ಅವರು ಲ್ಯಾಂಡ್ ರಿಫಾರ್ಮ್ ಆಕ್ಟ್ ಕುರಿತು ಕೂಡ ಬಹಳ ಮುಂದಾಲೋಚನೆ ಇಟ್ಟು ಕೊಂಡವರು. ಕೇವಲ ನೆಲವನ್ನ ಯಾರೊಬ್ಬರ ನಿಯಂತ್ರಣದಲ್ಲಿ ಇಟ್ಟು ಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ ಎನ್ನುವುದು ಅವರ ವಾದವಾಗಿತ್ತು. ಉತ್ಪನ್ನತೆಗೆ ಬೇಕಾದ ಅಂಶಗಳಲ್ಲಿ ನೆಲ ಕೇವಲ ಒಂದು ಅಂಶ, ಅಂದರೆ ಫ್ಯಾಕ್ಟರ್ಸ್ ಆಫ್ ಪ್ರೊಡಕ್ಷನ್ ನಲ್ಲಿ ಲ್ಯಾಂಡ್ ಒಂದು ಫ್ಯಾಕ್ಟರ್ ಅಷ್ಟೇ , ಅದೇ ಎಲ್ಲವೂ ಅಲ್ಲ ಎನ್ನುವುದು ಅವರ ಗಟ್ಟಿ ನಿಲುವಾಗಿತ್ತು. ಉದಾಹರಣೆಗೆ ಕೇವಲ ನೆಲವಿದ್ದು , ಉಳಲು ಬೇಕಾದ ಜನಶಕ್ತಿ ಇರದಿದ್ದರೆ? ಉಳಲು ಬೇಕಾದ ಸಾಮಗ್ರಿ ಇರದಿದ್ದರೆ? ಹೀಗೆ ಎಲ್ಲವೂ ಒಂದಕ್ಕೊಂದು ಪೂರಕವಾಗಿ ಇರಬೇಕೆ ಹೊರತು, ಎಲ್ಲವನ್ನೂ ವಿಭಜಿಸಿ ನೋಡಬಾರದು, ಹಾಗೆ ಮಾಡಿದರೆ ಕೃಷಿಯನ್ನ ನಂಬಿ ಕುಳಿತಿರುವ ಭಾರತ ಆರ್ಥಿಕವಾಗಿ ಎಂದಿಗೂ ಸಬಲವಾಗಲು ಸಾಧ್ಯವಿಲ್ಲ ಎನ್ನುವುದು ಬಾಬಾ ಸಾಹೇಬರ ನಂಬಿಕೆಯಾಗಿತ್ತು. ನಮ್ಮ ದೇಶದ ಲ್ಯಾಂಡ್ ಆಕ್ಟ್ ಗಳು ಏನಿವೆ ಅವುಗಳಲ್ಲಿ ಅಮೂಲಾಗ್ರ ಬದಲಾವಣೆ ಬೇಕಿದೆ. ಇದರ ಕುರಿತು ನಮ್ಮ ಕಾನೂನಿನಲ್ಲಿ ಬಹಳಷ್ಟು ಎಡವಟ್ಟುಗಳಿವೆ ಎಂದಿದ್ದರು. ವಿಪರ್ಯಾಸವೆಂದರೆ ಇಂದಿಗೂ ಅವು ಹಾಗೆಯೇ ಇವೆ.
 4. ಭಾರತದ ಕೃಷಿ ಸೋಲಿಗೆ ಕೈಗಾರೀಕರಣವೇ ಮದ್ದು: ಭಾರತ ಇಂದಿಗೂ ಕೃಷಿ ಪ್ರಧಾನ ದೇಶ, ಅಂದಿನ ದಿನದಲ್ಲಿ ಕೇಳುವುದಿನ್ನೇನು? ಪ್ರಧಾನವಾದ ಉದ್ಯೋಗದಲ್ಲೇ ಭಾರತ ಮುಗ್ಗರಿಸುತಿತ್ತು. ಒಂದು ದೇಶ ಆರ್ಥಿಕವಾಗಿ ಸಬಲವಾಗದಿದ್ದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅದಕ್ಕೆ ಕವೆಡೆ ಕಾಸಿನ ಕಿಮ್ಮತ್ತು ಇರುವುದಿಲ್ಲ ಎನ್ನುವುದು ಅಂಬೇಡ್ಕರ್ ಅವರಿಗೆ ಗೊತ್ತಿತ್ತು. ಭಾರತದ ಕೃಷಿ ನೀತಿಯನ್ನ , ಲ್ಯಾಂಡ್ ಆಕ್ಟ್ ಗಳನ್ನ ಸುಧಾರಿಸುವುದು ಸುಲಭದ ಮಾತಲ್ಲ ಎನ್ನುವುದು ಕೂಡ ಅರಿವಿತ್ತು, ಹೀಗಾಗಿ ಅವರು ಇವೆಲ್ಲಕ್ಕೆ ಇಂಡಸ್ಟ್ರೀಲಿಸಷನ್ ಅಥವಾ ಕೈಗಾರಿಕೀಕರಣವೇ ಎಲ್ಲಕ್ಕೂ ಮದ್ದು ಎನ್ನುವುದನ್ನ ಕಂಡುಕೊಂಡಿದ್ದರು. ಹೊಸ ಉದ್ದಿಮೆಗಳು ಮತ್ತು ಹೊಸ ಬಂಡವಾಳ ಭಾರತವನ್ನ ಆರ್ಥಿಕವಾಗಿ ಸಬಲವಾಗಿಸಲು ಬೇಕಿರುವ ಔಷಧಗಳು ಎನ್ನುವುದನ್ನ ತಮ್ಮ ಮಾತುಗಳಲ್ಲಿ ಮತ್ತು ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಭಾರತ ಇಂದಿನ ಭಾರತವಾಗಿ ಉಗಮವಾಗಲು ಕೈಗಾರೀಕರಣ ಬಹಳ ದೊಡ್ಡ ದೇಣಿಗೆ ನೀಡಿದೆ. ಭಾರತದ ಇಂದಿನ ಆರ್ಥಿಕತೆಗೆ ಅಂಬೇಡ್ಕರ್ ಅವರ ದೂರದರ್ಶಿತ್ವ ಮತ್ತು ನಾಯಕರಿಗೆ ನೀಡಿದ ಸಲಹೆ ಸೂಚನೆಗಳು ಅನುದಾನ ನೀಡಿವೆ.
 5. ಕಣ್ಣಿಗೆ ಕಾಣದ ನಿರದ್ಯೋಗ ಅಥವಾ ಡಿಸ್ಗೈಸ್ಡ್ ಆನ್ ಎಂಪ್ಲಾಯ್ಮೆಂಟ್: ಈ ಮಾತು ಕೇವಲ ಭಾರತ ಎಂದಲ್ಲ ಜಾಗತಿಕ ಮಟ್ಟಕ್ಕೂ ಲಾಗೂ ಆಗುತ್ತದೆ. ಕೃಷಿ ಕ್ಷೇತ್ರದಲ್ಲಿ ಮತ್ತು ಇನ್ನತರ ಕ್ಷೇತ್ರದಲ್ಲಿ ಹೆಸರಿಗೆ ಬಹಳಷ್ಟು ಜನ ತೊಡಗಿಸಿಕೊಂಡಿರುತ್ತಾರೆ. ಆದರೆ ನಿಜವಾಗಿ ಅವರ ವೇಳೆ ಯಾವ ಮಟ್ಟದಲ್ಲಿ ವಿನಿಯೋಗವಾಗುತ್ತಿದೆ ಎಂದು ನೋಡಲು ಹೋದಾಗ ನಿಜವೇನೆಂದು ತಿಳಿದು ಬರುತ್ತದೆ. ಇದೊಂದು ಬಹು ದೊಡ್ಡ ಸಮಸ್ಯೆ. ಗಮನಿಸಿ ಇಂದಿಗೂ ಭಾರತದ ಜನಸಂಖ್ಯೆಯ ಅರವತ್ತು ಪ್ರತಿಶತ ಜನ ತಮ್ಮನ್ನ ತಾವು ರೈತರು ಎಂದು ಕರೆದುಕೊಳ್ಳುತ್ತಾರೆ. ಆದರೆ ಅವರಲ್ಲಿ 20 ಪ್ರತಿಶತ ಜನ ಕೂಡ ಪೂರ್ಣಾವಧಿ ಕೃಷಿಯಲ್ಲಿ ತೊಡಗಿಕೊಂಡಿರುವುದಿಲ್ಲ. ಹೀಗಿದ್ದಾಗ ಉಳಿದ ಬಹುದೊಡ್ಡ ಸಂಖ್ಯೆಯ ಜನ ಏನು ಮಾಡುತ್ತಿರುತ್ತಾರೆ? ಅವರ ಸಮಯ ಪೋಲಾಗುತ್ತಿರುತ್ತದೆ. ಯಾವುದೇ ರೀತಿಯ ವೈಯಕ್ತಿಕ ಅಥವಾ ಸಾಮಾಜಿಕ ಅಭಿವೃದ್ಧಿಗೆ ದೇಣಿಗೆ ನೀಡದೆ ಸಮಯವನ್ನ ವ್ಯಯ ಮಾಡುತ್ತಾ ಇರುತ್ತಾರೆ. ಹೀಗೆ ಸುಮ್ಮನೆ ಕುಳಿತ ಜನರ ಸಮಯವನ್ನ ಸರಿಯಾಗಿ ಬಳಸಿಕೊಂಡರೆ ದೇಶ ವಿಕ್ರಮವನ್ನ ಸಾಧಿಸಬಹುದು ಎನ್ನುವುದು ಬಾಬಾ ಸಾಹೇಬರ ಮಾತಾಗಿತ್ತು. ಜನರಲ್ಲಿ ಉಳಿಸುವಷ್ಟು ಹಣ ಸಂಗ್ರಹವಾಗಬೇಕು, ಹಾಗೆ ಆಗಲು ಒಂದು ವಲಯದಲ್ಲಿ ಸುಮ್ಮನೆ ಕುಳಿತ ಜನರ ಕೈಗೆ ಕೆಲಸ ನೀಡಬೇಕು. ಕೈಗಾರೀಕರಣವಾಗಬೇಕು ಕೃಷಿ ಕ್ಷೇತ್ರದಲ್ಲಿ ಸುಮ್ಮನೆ ಕುಳಿತ ಜನರ ಸಮಯ ಸದುಪಯೋಗವಾಗಬೇಕು. ಇದಕ್ಕೆ ಟೂ ಸೆಕ್ಟರ್ ಮಾಡೆಲ್ ಎಕಾನಮಿ ಎಂದು ಕರೆಯುತ್ತಾರೆ.

ಸರ್ ಆರ್ಥರ್ ಲೀವಿಸ್ ಎನ್ನುವ ಅರ್ಥ ಶಾಸ್ತ್ರಜ್ಞ ಅಂಬೆಡ್ಕರ್ ಅವರ ಈ ಆರ್ಥಿಕತೆಯ ಎಳೆಯನ್ನ ಇನ್ನಷ್ಟು ವಿಸ್ತರಿಸಿ ಒಂದು ಸೆಕ್ಟರ್ ನಲ್ಲಿ ಇರುವ ಕೊರತೆಯನ್ನ ಇನ್ನೊಂದು ಸೆಕ್ಟರ್ ನಲ್ಲಿ ಹೆಚ್ಚು ಕೆಲಸವಿಲ್ಲದ ಜನರನ್ನ ಬಳಸಿಕೊಂಡು ಕೈಗಾರಿಕಾ ಕ್ರಾಂತಿ, ಮತ್ತು ಹೆಚ್ಚು ಕ್ಷಮತೆಯಿಂದ ಮ್ಯಾನ್ ಪವರ್ ಉಪಯೋಗಿಸಿ ಕೊಳ್ಳುವುದರಿಂದ ಹೇಗೆ ದೇಶದ ಆರ್ಥಿಕತೆ ಬದಲಾಗುತ್ತದೆ ಮತ್ತು ಪೆರ್ಸನಲ್ ಫೈನಾನ್ಸ್ ಕೂಡ ಬಲಿಷ್ಠವಾಗುತ್ತದೆ ಎನ್ನುವುದನ್ನ ಮಂಡಿಸಿ ಎಕನಾಮಿಕ್ಸ್ ಗೆ ನೀಡುವ ನೊಬೆಲ್ ಪ್ರಶಸ್ತಿಗೆ ಕೂಡ ಭಾಜನರಾಗುತ್ತಾರೆ. ಗಮನಿಸಿ ನೋಡಿ,  ಸರ್ ಅರ್ಥರ್ ರವರು ಈ ವಾದ ಮಂಡಿಸುವ ದಶಕಗಳ ಮುಂಚೆಯೇ ಅಂಬೇಡ್ಕರ್ ಅವರು ಇದನ್ನ ಪ್ರಸ್ತಾಪಿಸಿದ್ದರು. ಈ ಘಟನೆ ಅಂಬೇಡ್ಕರ್ ಅವರು ಕೇವಲ ಭಾರತೀಯ ಆರ್ಥಿಕತೆಗೆ ಮಾತ್ರವಲ್ಲ ಜಾಗತಿಕ ಆರ್ಥಿಕತೆಗೆ ಕೂಡ ದಿಕ್ಕು ತೋರಿಸಬಲ್ಲ ಅರ್ಥಶಾಸ್ತ್ರಜ್ಞರಾಗಿದ್ದರು ಎನ್ನುವುದನ್ನ ಸಾಬೀತು ಮಾಡುತ್ತದೆ.

ಇದನ್ನೂ ಓದಿ: ಸರುಕು ಅಥವಾ ಸೇವೆಯ ಬೆಲೆ ಏರಿಕೆಗೆ ಸ್ಥಿತಿವಂತರ 'ಅಹಂ' ಕಾರಣ!

ಅಂಬೇಡ್ಕರ್ ಅವರ ಈ ಮಂಡನೆಯನ್ನ ವೇದವಾಕ್ಯದಂತೆ ತೆಗೆದುಕೊಂಡು ಬಹಳಷ್ಟು ದೇಶಗಳು ಇಂದಿಗೆ ಮುಂದುವರಿದ ದೇಶಗಳ ಪಟ್ಟಿಗೆ ಸೇರಿವೆ. ಭಾರತ ಮಾತ್ರ ಈ ಕ್ಷೇತ್ರದಲ್ಲಿ ಇಂದಿಗೂ ಹಾಗೆ ಉಳಿದುಕೊಂಡಿದೆ. ವಾಸ್ತವದ ಪ್ರಸ್ತಾಪನೆ ಮಾಡಬೇಕೆಂದರೆ 2016 ರಿಂದ ಈಚೆಗೆ ಅಂಬೇಡ್ಕರ್ ಅವರ ಹಲವು ಅರ್ಥ ನೀತಿಗಳಿಗೆ ಕಾಯಕಲ್ಪ ನೀಡುವ ಕೆಲಸವಾಗುತ್ತಿದೆ. ಆದರು ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ.

ಕೊನೆಮಾತು: ಅಂಬೇಡ್ಕರ್ ಅವರು ತಮ್ಮ ಜೀವನದ ಒಂದು ಹಂತದ ನಂತರ ರಾಜಕೀಯ ಕ್ಷೇತ್ರಕ್ಕೆ ಬಂದರು. ಅಲ್ಲಿನ ತಮ್ಮ ಮಾತುಗಳಲ್ಲಿ ಕೂಡ ಭಾರತೀಯ ಆರ್ಥಿಕತೆ ಬಗ್ಗೆ ಅವರಿಗಿದ್ದ ಕಳಕಳಿ ವ್ಯಕ್ತಪಡಿಸುತ್ತಲೆ ಇದ್ದರು. ದೇಶ ಆರ್ಥಿಕವಾಗಿ ಭದ್ರವಾಗದ ಹೊರತು ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಗುವುದಿಲ್ಲ ಎನ್ನುವುದು ಅವರಿಗೆ ತಿಳಿದಿತ್ತು. ದೇಶ ಆರ್ಥಿಕವಾಗಿ ಭದ್ರವಾಗಲು ದೇಶದ ಪ್ರಜೆಗಳ ಆರ್ಥಿಕತೆ ಭದ್ರವಾಗಬೇಕು ಎನ್ನುವುದು ಕೂಡ ಅವರಿಗೆ ತಿಳಿದಿತ್ತು. ಯಾವ ದೇಶದಲ್ಲಿ ಗಳಿಕೆಯ ಜೊತೆಗೆ ಉಳಿಸುವ ಸಂಪ್ರದಾಯ ಬರುತ್ತದೆ, ಆ ದೇಶದಲ್ಲಿ ಆರ್ಥಿಕ ಭದ್ರತೆ ತಾನೇ ತಾನಾಗಿ ಬರುತ್ತದೆ ಎನ್ನುವುದು ಕೂಡ ಬಾಬಾ ಸಾಹೇಬರ ಮಾತಾಗಿತ್ತು. ಒಂದು ಹಂತದ ವರೆಗೆ ಅವರ ಮಾತನ್ನ ಭಾರತದ ಸಮಾಜ ಪಾಲಿಸಿದೆ. ಬಹಳಷ್ಟು ಪಾಲಿಸುವ ಅವಶ್ಯಕತೆಯಿದೆ. ಡಾ. ಬಿ ಆರ್ ಅಂಬೇಡ್ಕರ್ ಅವರನ್ನ ಯಾವುದೇ ಒಂದು ವರ್ಗಕ್ಕೆ ಸೀಮಿತ ಮಾಡದೆ ಅವರಲೊಬ್ಬ ದಾರ್ಶನಿಕ ಅರ್ಥಶಾಸ್ತ್ರಜ್ನರನ್ನ ನಾವು ಕಾಣಬೇಕಿದೆ.


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com


  Stay up to date on all the latest ಅಂಕಣಗಳು news
  Poll
  rahul-gandhi

  ಮಾನಹಾನಿ ಪ್ರಕರಣದಲ್ಲಿ ಜೈಲು ಶಿಕ್ಷೆ; ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ: ಇದರಿಂದ...


  Result
  ಕಾಂಗ್ರೆಸ್ ಗೆ ಹಿನ್ನಡೆ
  ಕಾಂಗ್ರೆಸ್ ಗೆ ಪ್ರಯೋಜನ

  Comments

  Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

  The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

  flipboard facebook twitter whatsapp