ಸರುಕು ಅಥವಾ ಸೇವೆಯ ಬೆಲೆ ಏರಿಕೆಗೆ ಸ್ಥಿತಿವಂತರ 'ಅಹಂ' ಕಾರಣ! (ಹಣಕ್ಲಾಸು)

ಹಣಕ್ಲಾಸು-328-ರಂಗಸ್ವಾಮಿ ಮೂಕನಹಳ್ಳಿ
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಒಂದು ವಸ್ತು, ಉತ್ಪನ್ನ ಅಥವಾ ಕಂಪನಿ ಅಥವಾ ವ್ಯಕ್ತಿ ಜನರ ಮನದಲ್ಲಿ ಯಾವುದೊ ಒಂದು ಕಾರಣಕ್ಕೆ ಸ್ಥಾನ ಪಡೆದರೆ ಮತ್ತು ಅವರ ನಿಷ್ಠೆ ಆ ವಸ್ತು, ಉತ್ಪನ್ನ, ಕಂಪನಿ ಅಥವಾ ವ್ಯಕ್ತಿಯ ಬಗ್ಗೆ ಅಚಲವಾಗಿದ್ದರೆ ಅಂತಹ ವಸ್ತು/ಉತ್ಪನ್ನ/ಕಂಪನಿ/ವ್ಯಕ್ತಿಯನ್ನು ಬ್ರಾಂಡ್ ಎನ್ನುತ್ತೇವೆ.

ಉದಾಹರಣೆ ನೋಡೋಣ ತಾಜಮಹಲ್ ಜನರ ಮನದಲ್ಲಿ ಅಚ್ಚೋತ್ತಿದೆ ಲಕ್ಷಾಂತರ ಜನ ಪ್ರವಾಸಿಗರು ಕೇವಲ ಅದರ ಹೆಸರಿನಿಂದ ಅದನ್ನು ನೋಡಲು ಹೋಗುತ್ತಾರೆ  ತಾಜಮಹಲ್ ಒಂದು ಬ್ರಾಂಡ್.  ಲೈಫ್ ಬಾಯ್ ಸೋಪು ಯಾವ ಕಂಪೆನಿಯದು ಎಂದರೆ ನನಗೂ ಸರಿಯಾಗಿ ನೆನಪು ಬರುತ್ತಿಲ್ಲ! ಆದರೆ ಲೈಫ್ ಬಾಯ್ ಸೋಪು ಉತ್ಪನ್ನವಾಗಿ ಜನರ ಮನದಲ್ಲಿ ನೆಲೆ ಪಡೆದಿದೆ. ವ್ರಿಲ್ ಪೂಲ್, ಜಾನ್ಸನ್ ಅಂಡ್ ಜಾನ್ಸನ್ ಅನೇಕ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ಉತ್ಪನ್ನದ ಜೊತೆಗೆ ಕಂಪನಿ ಕೂಡ ಒಂದು ಬ್ರಾಂಡ್ ಆಗಿ ನೆಲೆ ಪಡೆದುಕೊಂಡಿವೆ. ಸಚಿನ್ ತೆಂಡೂಲ್ಕರ್, ಧೋನಿ, ವಿರಾಟ್ ಕೊಹ್ಲಿ, ಅಮಿತಾಬ್, ಶಾರುಖ್, ಸಲ್ಮಾನ್ ಇವರೆಲ್ಲಾ ಬ್ರ್ಯಾಂಡ್ ಗಳು. ಜನರ ಮನದಲ್ಲಿ ಇವರಿಗಿರುವ ಪ್ರೀತಿಯೆ ಇವರ ಬಂಡವಾಳ. ಕಾರ್ಪೊರೇಟ್ ಕಂಪನಿಗಳು ಇವರ ಮೂಲಕ ತನ್ನ ಉತ್ಪನ್ನಗಳನ್ನು ಜನರಿಗೆ ಮಾರುತ್ತವೆ.

ಹೀಗೆ ಜನರ ಮನದಲ್ಲಿ ಒಂದು ವಸ್ತು /ಉತ್ಪನ್ನ/ಕಂಪನಿ ಅಥವಾ ವ್ಯಕ್ತಿಯನ್ನು ನೆಲೆಗೊಳಿಸುವ ಪ್ರಕ್ರಿಯೆಗೆ ಬ್ರಾಂಡಿಂಗ್ ಎನ್ನುತ್ತಾರೆ. ವಸ್ತುವಿಗೆ ಅಥವಾ ಉತ್ಪನ್ನಕ್ಕೆ ಒಂದು ಚಿಹ್ನೆ ಅಥವಾ ಲೋಗೋ ನೀಡಲಾಗುತ್ತದೆ. ಜಾಹೀರಾತು ಮೂಲಕ ಅದನ್ನು ಜನರಿಗೆ ತಲುಪಿಸಲಾಗುತ್ತದೆ. ಒಂದೇ ವಿಷಯವನ್ನು ಪದೆ ಪದೆ ಇಂದು ಲಭ್ಯವಿರುವ ಅನೇಕ ಮಾಧ್ಯಮಗಳ ಮೂಲಕ ತೋರಿಸಲಾಗುತ್ತದೆ. ಆಲೂಗೆಡ್ಡೆ ಚಿಪ್ಸ್ ಎಂದ ತಕ್ಷಣ ಲೇಯ್ಸ್ ಅನ್ನುವ ಮಟ್ಟಕ್ಕೆ, ನಕಲು ತೆಗೆಯುವ ಪ್ರಕ್ರಿಯೆಗೆ ಫೋಟೋ ಕಾಪಿ ಅನ್ನುವ ಬದಲಿಗೆ ಜೆರಾಕ್ಸ್ ಎನ್ನುವ ಕಂಪನಿ ಹೆಸರೇ ಪರ್ಯಾಯವಾದ ಹಾಗೆ ಬ್ರಾಂಡ್ ಬೆಳಸಬಹುದು. ಇಂದು ಹೀಗೆ ಬ್ರಾಂಡ್ ಕಟ್ಟುವ ಕೆಲಸದಲ್ಲಿ ತೊಡಗಿರುವ ಅನೇಕ ಕಂಪನಿಗಳಿವೆ. ಇವರ ಮುಖ್ಯ ಉದ್ಯೋಗವೇ ಅದು ಜನರನ್ನು ನಂಬಿಸುವುದು ಅವರನ್ನು ಉತ್ಪನ್ನ ಕೊಳ್ಳುವಂತೆ ಪ್ರೇರೇಪಿಸಿವುದು ಅಷ್ಟೇ ಅಲ್ಲ ಅವರ ನಿಷ್ಠೆ ಬ್ರಾಂಡ್ ಗೆ ಅಚಲವಾಗಿರುವಂತೆ ನೋಡಿಕೊಳ್ಳುವುದು ಕೂಡ ಇವರ ಕೆಲಸ. ಇಲ್ಲಿ ಇವರ ಕೆಲಸ ಸುಲಭ ಮಾಡುವುದು ಮನಶಾಸ್ತ್ರ. ಅವರಿಗೆ ಚೆನ್ನಾಗಿ ಗೊತ್ತು ವಸ್ತುವಿನ ಬೆಲೆ ಹೆಚ್ಚಿಸಿ ಬಿಟ್ಟರೆ ಸಾಕು ಮನುಷ್ಯ ಅದನ್ನು ತನ್ನದಾಗಿಸಿಕೊಳ್ಳಲು ಹವಣಿಸುತ್ತಾನೆ ಎಂದು. ನಿತ್ಯವೂ ಕೈ ಕಾಲಿಗೆ ಎಟುಕುವ ಯಾವುದೇ ವಸ್ತುವ ನೋಡಿ ಅದಕ್ಕೆ ನಮ್ಮ ಸಮಾಜದಲ್ಲಿ ಬೆಲೆ ಇಲ್ಲ. ಅದನ್ನ ಜಗಮಗಿಸುವ ಶೋ ರೂಮ್ ನಲ್ಲಿಡಿ ಅದಕ್ಕೆ ಜೋಬಿಗೆ ಭಾರ ಎನಿಸುವ ಪ್ರೈಸ್ ಟ್ಯಾಗ್ ಹಾಕಿ ಕಂತಿನಲ್ಲಿಯಾದರು ಸರಿಯೇ ಜನ ಕೊಳ್ಳುತ್ತಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಐಫೋನ್! ಈ ಐಫೋನ್ ನ ಹೊಸ ಮಾಡೆಲ್ ಬರುತ್ತದೆ ಎಂದರೆ ಜನ ಹಿಂದಿನ ರಾತ್ರಿಯೇ ಸರದಿಯಲ್ಲಿ ಕಾದು ಅದನ್ನ ಪಡೆದುಕೊಳ್ಳುತ್ತಾರೆ.

ಬ್ರಾಂಡೆಡ್ ಎಲ್ಲಾ ಉತ್ತಮ ಗುಣಮಟ್ಟದವೆ?

ಇದಕ್ಕೆ ಉತ್ತರ ಹೌದು ಮತ್ತು ಇಲ್ಲ. ಸರ್ವಿಸ್ ಕ್ಷೇತ್ರದಲ್ಲಿ ಇದಕ್ಕೆ ಉತ್ತರ ಹೌದು. ಹೋಟೆಲ್, ರೆಸ್ಟೊರಾಂಟ್ ಇತ್ಯಾದಿ ಸೇವೆ ನೀಡುವ ಸಂಸ್ಥೆಗಳು ಬ್ರಾಂಡೆಡ್ ಆಗುವುದು ಸಲಭವಲ್ಲ ಇಲ್ಲಿ ಜನರನ್ನು ನಂಬಿಸುವುದಷ್ಟೇ ಮುಖ್ಯವಲ್ಲ ಸೇವೆ ಅವರು ಮೆಚ್ಚ ಬೇಕು ಕೂಡ. ಎಷ್ಟೇ ಜಾಹೀರಾತು ನೀಡಿದರೂ ನೀಡಿದ ಸೇವೆ ಗ್ರಾಹಕನಿಗೆ ಇಷ್ಟವಾಗಿಲ್ಲ ಎಂದರೆ ಅಲ್ಲಿಗೆ ಮುಗಿಯಿತು. ಇದೆ ಮಾತನ್ನು ಇತರ ವಿಷಯಗಳ ಬಗ್ಗೆ ಹೇಳಲು ಬರುವುದಿಲ್ಲ. ಏಕೆಂದರೆ ಇಲ್ಲಿ ಮನುಷ್ಯನ ಅಹಂ ಅಥವಾ ಇಗೋ ನಂಬಿಸುವುದು ಅಥವಾ ಅದನ್ನು ತಣಿಸುವುದಷ್ಟೇ ಮುಖ್ಯ. ರೋಲ್ಲೆಕ್ಸ್ ವಾಚ್, ರೇ ಬಾನ್ ಕನ್ನಡಕ, ಗುಚ್ಚಿ ಬ್ಯಾಗ್, ಲಾಕೋಸ್ಟೆ ಟಿ ಶರ್ಟ್ ಇತ್ಯಾದಿ. ಇಲ್ಲಿ ನೀವು ಇನ್ನೊಂದು ಪ್ರಮುಖ ಅಂಶವನ್ನ ಗಮನಿಸಬೇಕು , ರೇ ಬಾನ್ ಕನ್ನಡಕದ ತಯಾರಿಕಾ ವೆಚ್ಚಕ್ಕೂ ಮತ್ತು ಅದನ್ನ ಮಾರುಕಟ್ಟೆಯಲ್ಲಿ ಮಾರುವ ಬೆಲೆಗೂ ಅಜಗಜಾಂತರ ವ್ಯತ್ಯಾಸವಿದೆ. ತಯಾರಿಕಾ ವೆಚ್ಚ 2000 ರೂಪಾಯಿ ಆದರೆ ಮಾರಾಟದ ಬೆಲೆಯನ್ನ 12ಸಾವಿರ 15/20ಸಾವಿರ ರೂಪಾಯಿವರೆಗೆ ಇಡಲಾಗುತ್ತದೆ. ಬೆಲೆ ಹೆಚ್ಚಿದಷ್ಟೂ ಅದನ್ನ ಕೊಂಡು ಧರಿಸಿದ ವ್ಯಕ್ತಿಯ 'ಅಹಂ ' ಹೆಚ್ಚುತ್ತದೆ. ನಾನು ಇತರಿಗಿಂತ ಭಿನ್ನ ಎನ್ನುವ ಭಾವನೆ ಮೂಡುತ್ತಾ ಹೋಗುತ್ತದೆ. ಅವರದೇ ಎಲೀಟ್ ಕ್ಲಬ್ಗಳನ್ನ ಕೂಡ ಸೃಷ್ಟಿಸಿಕೊಳ್ಳುತ್ತಾ ಹೋಗುತ್ತಾರೆ.

ಬಟ್ಟೆ ಬ್ರಾಂಡ್ಗಳು ನಗು ಹುಟ್ಟಿಸುತ್ತವೆ. ಪಕ್ಕದ ರೋಡಿನಲ್ಲಿ ಮುನ್ನೂರು ರುಪಾಯಿಗೆ ಸಿಗುವ ಟಿ ಶರ್ಟ್ ಗೆ ಮೂರು ಸಾವಿರ ಕೊಡುವ ಜನರಿದ್ದಾರೆ. ಬ್ರಾಂಡೆಡ್ ಟಿ ಶರ್ಟ್ ತಯಾರಾಗುವ ಜಾಗ ಮತ್ತು ಇತರ ಟಿ ಶರ್ಟ್ ತಯಾರಾಗುವ ಜಾಗ ಎರಡೂ ಒಂದೇ, ಚೀನಾದ ದೊಡ್ಡ ದೊಡ್ಡ ತಯಾರಿಕಾ ಸಂಸ್ಥೆಗಳಿಗೆ ಹೇಳಿದರೆ ಸಾಕು ಬ್ರಾಂಡೆಡ್ ಬಟ್ಟೆಯನ್ನ ತಯಾರಿಸಿ ಕೊಡುತ್ತಾರೆ. ನಿಜ ಹೇಳಬೇಕೆಂದರೆ ಬಟ್ಟೆಯ ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಬ್ರಾಂಡೆಡ್ ಲೋಗೋ ಮಾತ್ರ ಹಾಕುತ್ತಾರೆ. ಇತರ ಬಟ್ಟೆಯಲ್ಲಿ ಲೋಗೋ ಇರುವುದಿಲ್ಲ, ಆದರೆ ಗ್ರಾಹಕನಿಗೆ  ತಲುಪುವು ವೇಳೆಗೆ ಸಾಮಾನ್ಯ ಟಿ ಶರ್ಟ್ ನ ಬೆಲೆಗಿಂತ ಕನಿಷ್ಠ ಐದು ಅಥವಾ ಹತ್ತು ಪಟ್ಟು ಹೆಚ್ಚು ಬೆಲೆಯನ್ನ ಹೆಚ್ಚಿಸಿ ಕೊಳ್ಳುತ್ತವೆ. ಮೌಲ್ಯವೃದ್ಧಿ ಯಾಗದೆ ಕೆಲವ ಬೆಲೆ ಯಾಕೆ ವೃದ್ಧಿಯಾಯಿತು ಎನ್ನುವುದು ಬುದ್ಧಿವಂತ ಓದುಗನಿಗೆ ಬಿಡಿಸಿ ಹೇಳುವ ಅಗತ್ಯವಿಲ್ಲ.

ಇನ್ನು ಕೆಲವು ಬ್ರಾಂಡ್ ಗಳು ಸೃಷ್ಟಿಯಾಗುವುದು ಕೂಡ ಮತ್ತೆ ಅದೇ ಮನುಷ್ಯನ ಅಹಂ ಅಥವಾ ಇಗೋ ವನ್ನ ತಣಿಸುವುದಕ್ಕಾಗಿಯೇ!. ಫೆರಾರಿ ಕಾರು, ಆಡಿ, ಬಿಎಂಡಬ್ಲ್ಯೂ ಕಾರುಗಳು.  ಅತ್ಯಂತ ದುಬಾರಿ ವಾಚು, ಬೆಲ್ಟು, ಶೂ, ಪರ್ಫ್ಯೂಮ್ ಇವೆಲ್ಲಾ ನಾವು ಜನ ಸಾಮಾನ್ಯರಿಗಿಂತ ನಾವು ಬಿನ್ನ, ನಾವು ಎಲ್ಲರಂತಲ್ಲ ಎನ್ನುವ ಹಮ್ಮು ಇಂತ ಉತ್ಪನ್ನಗಳ ಉಪಯೋಗಿಸುವ ಜನರಲ್ಲಿ ಬೇರೂರಿರುತ್ತದೆ. ಆಫ್ರಿಕಾ ದೇಶದಲ್ಲಿ ಬ್ರಾಂಡೆಡ್ ಶೂ ಕೊಳ್ಳಲು, ಬ್ರಾಂಡೆಡ್ ಬಟ್ಟೆ ಹಾಕಲು ಜನರ ನಡುವೆ ಸಾಕಷ್ಟು ಪೈಪೋಟಿ ಇದೆ. ಈಗ ನಾನು ಹೇಳುವ ವಿಷಯ ನಂಬಲು ಸ್ವಲ್ಪ ಕಷ್ಟ ಆದರೆ ಇದು ಸತ್ಯ. ಆಫ್ರಿಕಾ ದೇಶದಲ್ಲಿ ಒಂದು ಶೂ ಕೊಳ್ಳಲು ಎರಡು ವರ್ಷ ಹಣ ಉಳಿತಾಯ ಮಾಡಿ ಅದನ್ನು ಕೊಳ್ಳುವರಿದ್ದಾರೆ. ಇಟಾಲಿಯನ್ ಸೂಟ್.., ಬೆಲ್ಟು ಇವಕ್ಕೆಲ್ಲಾ ಹಲವು ವರ್ಷ ದುಡಿದು ಉಳಿಸಿ ಕೊಳ್ಳುವ ಒಂದು ದೊಡ್ಡ ಜನರ ದಂಡೆ ಇದೆ. ಇಂತಹ ಉತ್ಪನ್ನಗಳ ಕೊಂಡು ಧರಿಸಿದರೆ ಸಮಾಜದಲ್ಲಿ ತಮ್ಮ ಮೌಲ್ಯ, ಗೌರವ ಹೆಚ್ಚುವುದು ಎನ್ನುವ ಮನಸ್ಥಿತಿ ಇದಕ್ಕೆ ಕಾರಣ.

ಚೀನಾ, ಭಾರತ, ಆಫ್ರಿಕಾ ದೇಶಗಳ ಹೊಸ ಶ್ರೀಮಂತರ ಮನಸ್ಸಿನಲ್ಲಿ ಬ್ರಾಂಡ್ ಈಸ್ ಗ್ರಾಂಡ್ ಅಂಡ್ ಬೆಸ್ಟ್ ಎನ್ನುವ ಮನಸ್ಥಿತಿಯನ್ನು ಬೇರೂರುವಂತೆ ನಡೆದ ಪ್ರಯತ್ನಗಳು ಫಲ ಕೊಟ್ಟಿವೆ. ಹಣವಿಲ್ಲದೆ ಜನ ಸಾಮಾನ್ಯ ಕೂಡ ಇದರ ಬಲೆಗೆ ಬಿದ್ದು ಆಪಲ್ ಐ ಫೋನ್ ಕೊಳ್ಳಲು ಮಗುವ ಮಾರಿದ, ತನ್ನ ಕನ್ಯತ್ವವನ್ನ ಹಾರಾಜಿಗಿಟ್ಟ ಸುದ್ದಿಗಳು ನಮ್ಮನ್ನು ತಲುಪಿವೆ.
ಸರಳ ಜೀವನ, ಬೇಕಾದ ಅವಶ್ಯವಿದ್ದ ವಸ್ತುವ ಮಾತ್ರ ಕೊಳ್ಳುತ್ತಿದ್ದ ದಿನಗಳು ಗತಿಸಿ ಹೋಗಿವೆ. ಇನ್ನೇನಿದ್ದರೂ ನಾನೆಷ್ಟು ಬೆಲೆ ಬಾಳುತ್ತೇನೆ, ನೀನೆಷ್ಟು ಎನ್ನುವ ಪೈಪೋಟಿಯ ಭೌತವಾದದ  ಜೀವನ. ಆ ವಸ್ತುವಿಗೆ ಆ ಬೆಲೆಯನ್ನು ಕೊಟ್ಟವರಾರು? ಹೊಸ ಶ್ರೀಮಂತರು ಹಳಬರಾಗಿ ಬ್ರಾಂಡ್ ಬಲೆಯಿಂದ ಹೊರಬರುವ ಹೊತ್ತಿಗೆ ಡೆವಲಪ್ಮೆಂಟ್ ಇನ್ನೊಂದಷ್ಟು ಹೊಸ ಶ್ರೀಮಂತರ ಬ್ರಾಂಡೆಡ್ ವಸ್ತು ಕೊಳ್ಳಲು ತಯಾರಿಸುತ್ತೆ. ಇಂದಿನ ಸಮಾಜದ ಉದ್ದೇಶವೇ ಅದಲ್ಲವೇ ಡೆವಲಪ್ಮೆಂಟ್, ದುಡಿಯಬೇಕು -ಖರ್ಚು ಮಾಡುತ್ತಿರಬೇಕು.

ಬದುಕಲು ದುಡಿಯಬೇಕು ಖರ್ಚು ಕೂಡ ಮಾಡಬೇಕು ‘ಬ್ರಾಂಡೆಡ್’  ಅಥವಾ ‘ಬ್ರಾಂಡ್’ ಬೇಕು ಎನ್ನುವ ಮೋಹ ಅದು ಕೊಂಡರೆ ಮಾತ್ರ ಸಫಲ ಎನ್ನುವುದು ಮಾತ್ರ ಮಿಥ್ಯೆ, ಮನಸ್ಥಿತಿ.

ಕೊನೆಮಾತು: ನಾವೆಲ್ಲಾ ಮನೆಯಲ್ಲಿ ಹಸುಕಟ್ಟಿಕೊಂಡು ನಮಗೆ ಬೇಕಾದ ಹಾಲನ್ನ ಉತ್ಪಾದಿಸಿ ಕೊಂಡರೆ ಅದು ಅಭಿವೃದ್ದಿಯಲ್ಲ, ಅದೇ ಹಾಲನ್ನ ನಾವು ಡೈರಿಗೆ ಹಾಕಿ, ಅದಕ್ಕೆ ಇಲ್ಲಸಲ್ಲದ ಕೆಮಿಕಲ್ ಬೆರೆಸಿ ಎರಡು ಅಥವಾ ಮೂರು ದಿನದ ನಂತರ ಪ್ಲಾಸ್ಟಿಕ್ ಪ್ಯಾಕ್ ನಲ್ಲಿ ಬರುವ ಹಾಲನ್ನ ಕೊಂಡರೆ ಅದು ಅಭಿವೃದ್ಧಿ. ಕೆಮಿಕಲ್ ಮಿಶ್ರಿತ ಹಾಲನ್ನ ಕುಡಿದು ಕ್ಯಾನ್ಸರ್ ಬಂದರೆ ಇನ್ನೂ ಹೆಚ್ಚಿನ ಅಭಿವೃದ್ಧಿ! ಮೆಡಿಕಲ್ ವಲಯಕ್ಕೂ ಸುಗ್ಗಿ!! ಜಿಡಿಪಿಯಂತೂ ಇಲ್ಲದ ಏರಿಕೆ ಕಾಣುತ್ತದೆ. ಇದೆ ತತ್ವ ಬ್ರಾಂಡೆಡ್ ಕೊಳ್ಳುವ ಮುನ್ನ  ನೆನಪು ಮಾಡಿಕೊಳ್ಳಿ. ಸರಿ ತಪ್ಪು ನಿರ್ಧಾರ ನಿಮ್ಮದು.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com