ಟ್ರಸ್ಟ್ ಗಳನ್ನು 'ಟ್ರಸ್ಟ್' ಮಾಡಬಹುದೇ? (ಹಣಕ್ಲಾಸು)

ಹಣಕ್ಲಾಸು-327-ರಂಗಸ್ವಾಮಿ ಮೂಕನಹಳ್ಳಿ
ಟ್ರಸ್ಟ್ (ಸಂಗ್ರಹ ಚಿತ್ರ)
ಟ್ರಸ್ಟ್ (ಸಂಗ್ರಹ ಚಿತ್ರ)

ನಾವು ನಿತ್ಯ ಜೀವನದಲ್ಲಿ ಹಲವು ಫೌಂಡೇಶನ್, ಟ್ರಸ್ಟ್ ಗಳ ಹೆಸರನ್ನು ಕೇಳುತ್ತಲೇ ಇರುತ್ತೇವೆ. ಹಲವು ಟ್ರಸ್ಟ್ ಗಳು ನಿಗದಿತ ಉದ್ದೇಶಕ್ಕಾಗಿ ಸ್ಥಾಪಿತವಾದರೆ, ಹಲವು ಸಮಾಜಕ್ಕೆ ನೆರವಾಗಲು ಎನ್ನುವ ವಿಶಾಲ ವಿಷಯದಡಿಯಲ್ಲಿ ಸ್ಥಾಪಿತವಾಗಿವೆ. ಕೆಲವು ಟ್ರಸ್ಟ್ ಗಳು ತಮ್ಮ ಉಗಮಕ್ಕೆ ಕಾರಣವಾದ ವಿಷಯದ ಒಳಿತಿಗೆ ತನಗೆ ಬಂದ ಹಣವನ್ನು ಉಪಯೋಗಿಸುತ್ತಿದ್ದರೆ, ಮತ್ತೆ ಕೆಲವು ತನ್ನ ಟ್ರಸ್ಟಿಗಳ ಲೋಲುಪತೆಯ ಖರ್ಚನ್ನು ಹೊರುವ ತೆರಿಗೆಯಿಂದ ಬಚಾವಾಗಲು ಮಾತ್ರ ಅಸ್ತಿತ್ವದಲ್ಲಿರುವ ಸಂಸ್ಥೆಗಳಾಗಿವೆ.

ಇರಲಿ, ಒಂದು ವಿಷಯವಂತೂ ನಿಮ್ಮನ್ನು ಬಾಧಿಸಿರುತ್ತೆ, ಅದರ ಬಗ್ಗೆ ಯಾವುದೇ ಸಂಶಯ ನನಗಿಲ್ಲ! ಪ್ರಸಿದ್ಧರು, ಸ್ಥಿತಿವಂತರು ತಮ್ಮ ಹೆಸರಲ್ಲಿ ಅಥವಾ ತನ್ನ ಹೆತ್ತವರ ಅಥವಾ ಅಜ್ಜ-ಅಜ್ಜಿಯ ಹೆಸರಲ್ಲಿ ಫೌಂಡೇಶನ್ ತೆಗೆಯುವುದು ಏಕೆ? ಇದು ದೇಶ, ಭಾಷೆ, ಗಡಿಗಳ ಪರಿಮಿತಿ ದಾಟಿ ಎಲ್ಲಾ ಕಡೆಯೂ ಸಾಮಾನ್ಯ ಎನ್ನುವಂತೆ ಹಬ್ಬಿರುವ ಚಾಳಿ. ಯೂರೋಪಿನಲ್ಲಿ ಫುಟ್ಬಾಲ್ ಆಟಗಾರರು, ಭಾರತದಲ್ಲಿ ಕ್ರಿಕೆಟ್ ಆಟಗಾರರು, ಸಿನಿಮಾ ತಾರೆಗಳು ಫೌಂಡೇಶನ್ ತೆಗೆದು ಜನ ಸೇವೆಯ, ಸಮಾಜ ಸೇವೆಯ ಮಾಡುವ ನಾಟಕ ಮಾಡುವುದೇಕೆ ನೋಡೋಣ. ಹಾಗೆಂದ ಮಾತ್ರಕ್ಕೆ ಎಲ್ಲವೂ ತೆರಿಗೆ ಉಳಿಸಲು ಎನ್ನುವ ಹಾಗಿಲ್ಲ.

ನಮ್ಮ ದೇಶದ ಟಾಟಾ, ವಿಪ್ರೊ, ನಾರಾಯಣ ಮೂರ್ತಿ/ಸುಧಾ ಮೂರ್ತಿ ಅವರ ಫೌಂಡೇಶನ್ ಗಳು ನಿಜವಾದ ಕಾಳಜಿ ಹೊಂದಿವೆ. ಮುಕ್ಕಾಲು ಪಾಲು ಸ್ಥಿತಿವಂತರು ಟ್ರಸ್ಟ್ ತೆಗೆಯುವುದು ಮಾತ್ರ ತಮ್ಮ ಆಸ್ತಿಯನ್ನು ದುಪಟ್ಟು ಮಾಡಲು, ತೆರಿಗೆ ಕಟ್ಟದೆ ಇರಲು ಎನ್ನುವುದು ಮಾತ್ರ ಸತ್ಯ. ಮೊದಲೇ ಹೇಳಿದ ಹಾಗೆ ಇದು ಜಗತ್ತಿನಾದ್ಯಂತ ಹಬ್ಬಿರುವ ಖಾಯಿಲೆ. ಇದು ಹೇಗೆ ಕಾರ್ಯ ನಿರ್ವಹಿಸುತ್ತೆ? ಅವರು ಹೇಗೆ ತೆರಿಗೆ ವಂಚನೆ ಮಾಡಬಹುದು? ಅವರ ಹಣ ಅವರ ನಂತರ ಅವರ ಮಕ್ಕಳಿಗೆ/ಸಂಬಂಧಿಕರಿಗೆ ಹೇಗೆ ವರ್ಗಾವಣೆ ಆಗುತ್ತೆ? ಇವೆಲ್ಲವ ತಿಳಿಯುವ ಮೊದಲು ಟ್ರಸ್ಟ್ ಬಗ್ಗೆ ಒಂದಷ್ಟು ಬೇಸಿಕ್ ಮಾಹಿತಿ ತಿಳಿದುಕೊಂಡರೆ ಉಳಿದದ್ದು ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತೆ.

ಟ್ರಸ್ಟ್ ಎಂದರೆ ನಂಬಿಕೆ. ತನ್ನ ಆಸ್ತಿಯ ಮೇಲಿನ ತನ್ನ ನಂಬಿಕೆಯನ್ನು ಇನ್ನೊಬ್ಬರಿಗೆ ವರ್ಗಾಯಿಸುವುದಕ್ಕೆ ಟ್ರಸ್ಟ್ ಎನ್ನುತ್ತಾರೆ. ಈ ಟ್ರಸ್ಟ್ ತನ್ನ ಒಳಿತಿಗೆ ಅಥವಾ ತನ್ನವರ ಒಳಿತಿಗೆ ಅಥವಾ ಸಮಾಜದ ಒಳಿತಿಗಾಗಿ ಸೃಷ್ಟಿಸಲ್ಪಟ್ಟ ನಂಬಿಕೆ. ಹೀಗೆ ತನ್ನ ಆಸ್ತಿಯನ್ನು ಬೇರೊಬ್ಬನ ಮೇಲೆ ನಂಬಿಕೆ ಇತ್ತು ವರ್ಗಾಯಿಸುವ ವ್ಯಕ್ತಿಯನ್ನು ಆಥರ್ ಆಫ್ ದಿ ಟ್ರಸ್ಟ್ ಎನ್ನುತ್ತಾರೆ. ಹೀಗೆ ಬೇರೆಯವರು ತನ್ನ ಮೇಲೆ ಇಟ್ಟಿರುವ ನಂಬಿಕೆಯ ಹೊಣೆಗಾರಿಕೆಯನ್ನು ಒಪ್ಪಿಕೊಂಡವನನ್ನು ಟ್ರಸ್ಟೀ ಎನ್ನುತ್ತಾರೆ. ಹೀಗೆ ಯಾರ ಒಳಿತಿಗೆ ಇಂತಹ ಟ್ರಸ್ಟನ್ನು ಸ್ಥಾಪಿಸಲಾಗಿದೆ ಅಂತವರನ್ನು ಫಲಾನುಭವಿ ಅಥವಾ ಬೆನಿಫಿಶಿಯರಿ ಎನ್ನುತ್ತಾರೆ. ಟ್ರಸ್ಟ್ ಗೆ ವರ್ಗಾಯಲ್ಪಟ್ಟ ಆಸ್ತಿ ಅಥವಾ ಹಣವನ್ನು ಟ್ರಸ್ಟ್ ಪ್ರಾಪರ್ಟಿ/ಟ್ರಸ್ಟ್ ಮನಿ ಎಂದು ಕರೆಯಲಾಗುತ್ತೆ.

ಟ್ರಸ್ಟ್ ಗಳಲ್ಲೂ ಹಲವು ವಿಧಗಳಿವೆ. ಪಬ್ಲಿಕ್ ಟ್ರಸ್ಟ್, ಪ್ರೈವೇಟ್ ಟ್ರಸ್ಟ್ ಮತ್ತು ಚಾರಿಟೇಬಲ್ ಟ್ರಸ್ಟ್. ಪ್ರೈವೇಟ್ ಟ್ರಸ್ಟ್ ನಲ್ಲಿ ಮತ್ತೆ ಸ್ಪೆಸಿಫಿಕ್ ಟ್ರಸ್ಟ್ ಮತ್ತು ಡಿಸ್ಕ್ರೀಷನರಿ ಟ್ರಸ್ಟ್ ಎನ್ನುವ ವಿಧಗಳಿವೆ. ಪಬ್ಲಿಕ್ ಟ್ರಸ್ಟ್ ಪೂರ್ಣ ಸಮಾಜದ ಏಳಿಗೆಗೆ ಸ್ಥಾಪಿಸಿದ ಸಂಸ್ಥೆ. ಪ್ರೈವೇಟ್ ಟ್ರಸ್ಟ್ ಸಮಾಜದ ಒಂದು ಭಾಗ ಅಥವಾ ಕೆಲವೇ ಕೆಲವು ಜನರ ಒಳಿತಿಗಾಗಿ ಸೃಷ್ಟಿಸಿದ ಸಂಸ್ಥೆ. ಚಾರಿಟೇಬಲ್ ಟ್ರಸ್ಟ್ ಗಳು ಧರ್ಮ, ಜಾತಿ ಅಥವಾ ಯಾವುದೇ ಒಂದು ನಿಗದಿತ ಉದ್ದೇಶಕ್ಕೆ ಅಸ್ತಿತ್ವಕ್ಕೆ ಬಂದ ಟ್ರಸ್ಟ್ ಗಳಾಗಿರುತ್ತವೆ.

ಟ್ರಸ್ಟ್ ಪ್ರೈವೇಟ್ ಆಗಿರಲಿ ಪಬ್ಲಿಕ್ ಆಗಿರಲಿ ಅವುಗಳು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ ಅಡಿಯಲ್ಲಿ ಬರುವ ಇನ್ಕಮ್ ಟ್ಯಾಕ್ಸ್ ಆಕ್ಟ್ 1961ರ ಪ್ರಕಾರ ಪರಿಶೀಲನೆಗೆ ಒಳಗಾಗಿ ತೆರಿಗೆ ಕಟ್ಟಬೇಕಾಗುತ್ತದೆ. ಹಾಗೆಂದ ಮೇಲೆ ಪ್ರಸಿದ್ಧರು ಹಣವಂತರು ಟ್ರಸ್ಟ್ ನಿರ್ಮಿಸುವ ಉದ್ದೇಶವೇನು ಎನ್ನುವ ಪ್ರಶ್ನೆ ನೀವು ಕೇಳಬಹುದು. ಬನ್ನಿ ಇವರು ಹೇಗೆ ತೆರಿಗೆ ಉಳಿತಾಯ ಮಾಡುತ್ತಾರೆ ಹಂತ ಹಂತವಾಗಿ ನೋಡೋಣ.

ಸಾಧ್ಯವಾದಷ್ಟು ಮನೆ, ಆರ್ಟ್ ವರ್ಕ್, ಹಡಗು ಸಮೇತ ಸಾಕಷ್ಟು ಹಣವನ್ನು ಆಸ್ತಿಯ ರೂಪದಲ್ಲಿ ಹೊಂದಿರುವ ಖ್ಯಾತನಾಮರು, ಹಣವಂತರು ಜಗತ್ತಿನಾದ್ಯಂತ 40 ಪ್ರತಿಶತ ಆದಾಯ ತೆರಿಗೆ ಕಟ್ಟಬೇಕು. ಮುಕ್ಕಾಲು ಪಾಲು ಜಗತ್ತಿನ ಎಲ್ಲಾ ದೇಶಗಳು ಆಜುಬಾಜು ಇದೆ ರೇಟ್ ಹೊಂದಿವೆ. ತಮ್ಮ ಜೀವನವೇನೋ ಆಯಿತು ನಮ್ಮ ಮಕ್ಕಳು? ಎನ್ನುವ ಮೋಹ ಟ್ರಸ್ಟ್ ನಿರ್ಮಿಸಲು ಪ್ರೇರಣೆ. ಜಗತ್ತಿನ ಹಲವು ದೇಶಗಳಲ್ಲಿ ಇನ್ಹೆರಿಟೆನ್ಸ್ ಟ್ಯಾಕ್ಸ್ ಅಂದರೆ ಹೆತ್ತವರ ಆಸ್ತಿ ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಲು ನೀಡುವ ತೆರಿಗೆ ನಲವತ್ತು ಭಾಗದಷ್ಟಿದೆ. ಅಂದರೆ ಎರಡು ಲಕ್ಷ ಬೆಲೆಬಾಳುವ ಮನೆಯನ್ನ ಹೆತ್ತವರು ಮಗನಿಗೆ/ಮಗಳಿಗೆ ಬಿಟ್ಟು ಹೋದರೆ 80 ಸಾವಿರ ಇನ್ಹೆರಿಟೆನ್ಸ್ ಟ್ಯಾಕ್ಸ್ ಮಕ್ಕಳು ಕಟ್ಟಬೇಕು. ಕೇವಲ ಲಕ್ಷಗಳಲ್ಲಿ ಕಟ್ಟುವ ತೆರಿಗೆ ಇಷ್ಟಾದ್ದರೆ ಮಿಲಿಯನ್, ಬಿಲಿಯನ್ ಡಾಲರ್ ಗಳ ಆಸ್ತಿಯನ್ನು ಬಿಟ್ಟು ಹೋದಾಗ ಕಟ್ಟಬೇಕಾದ ತೆರಿಗೆಯನ್ನು ಊಹಿಸಿಕೊಳ್ಳಿ. ಟ್ರಸ್ಟ್ ಸ್ಥಾಪಿಸುವುದು ಎಷ್ಟು ಲಾಭದಾಯಕ ಎನ್ನುವ ಅರಿವು ನಿಮ್ಮದಾಗುತ್ತೆ. ಇಷ್ಟೇ ಅಲ್ಲ ಹೀಗೆ ಇನ್ ಹೆರಿಟೆನ್ಸ್ ಟ್ಯಾಕ್ಸ್ ಕಟ್ಟಿದ ಮೇಲೆ ಉಳಿಯುವ ಆಸ್ತಿಯಿಂದ ಬಂದ ಆದಾಯದ ಮೇಲೆ ಮತ್ತೆ ನಲವತ್ತು ಪ್ರತಿಶತ ತೆರಿಗೆ ಕಟ್ಟಬೇಕು. ಇವೆಲ್ಲದರಿಂದ ಮುಕ್ತಿ ಪಡೆಯಲು ಇಂತ ಹಣವಂತರಿಗೆ ಟ್ಯಾಕ್ಸ್ ಕನ್ಸಲ್ಟೆಂಟ್ ಸೂಚಿಸುವ ಉಪಾಯವೇ ಟ್ರಸ್ಟ್ ಕ್ರಿಯೇಷನ್.

ಮೊದಲಿಗೆ ಒಟ್ಟು ಮೌಲ್ಯ 100 ಕೋಟಿ ಎಂದುಕೊಳ್ಳಿ ಅದನ್ನು ಟ್ರಸ್ಟ್ ಗೆ ವರ್ಗಾಯಿಸಲಾಗುತ್ತದೆ. ನಂತರ ಹೆಂಡತಿ, ಮಗಳು ಮಗ, ಚಿಕ್ಕಪ್ಪ ಚಿಕ್ಕಮ್ಮ ಅಣ್ಣ ತಮ್ಮ ಹೀಗೆ ತನಗೆ ಬೇಕಾದ ಸಂಬಧಿಕರನ್ನು ಟ್ರಸ್ಟಿ ಎಂದು ಸೇರಿಸಲಾಗುತ್ತದೆ. ಇವರಿಗೆಲ್ಲ ತಾವು ಸಲ್ಲಿಸುತ್ತಿರುವ ‘ಸೇವೆ’ ಗೆ ಅಂತ ಪ್ರತಿ ತಿಂಗಳು ವೇತನ ನೀಡಲಾಗುತ್ತದೆ. ಗಮನಸಿ ವೇತನ ಎನ್ನುವುದು ಒಂದು ನಾಮಕಾವಸ್ತೆ ಸೃಷ್ಟಿಸಿರುವ ಪದ ಇವರಿಗೆ. ಏಕೆಂದರೆ ಇವರ ಸಕಲ ಖರ್ಚು ಕೆಲಸಕ್ಕೆ ಸಂಬಂಧಿಸಿದ ಓಡಾಟದ ಹೆಸರಲ್ಲಿ ಟ್ರಸ್ಟ್ನ ಖರ್ಚಿನಲ್ಲಿ ನುಸುಳಿ ಹೋಗಿರುತ್ತದೆ. ಉದಾಹರಣೆ ನೋಡೋಣ.

ರಾಮ ಎನ್ನುವನ ಬಳಿ 100 ಕೋಟಿ ಬೆಲೆಬಾಳುವ ಆಸ್ತಿಯಿದೆ. ಆತನಿಗೆ ನಾಲ್ಕು ಮಕ್ಕಳು ಮತ್ತು ಹೆಂಡತಿ ಇದ್ದಾರೆ ಎಂದುಕೊಳ್ಳಿ. ತನ್ನ ನಂತರ ತನ್ನ ಆಸ್ತಿಗಾಗಿ ಹೊಡೆದಾಟವಿಲ್ಲದೆ ತೆರಿಗೆ ಉಳಿಸಿ ತನ್ನವರು ಮತ್ತಷ್ಟು ಶ್ರೀಮಂತರಾಗಲು ಆತ ಒಂದು ಟ್ರಸ್ಟ್ ತೆಗೆಯುತ್ತಾನೆ. ಅಲ್ಲಿ ತನ್ನೆಲ್ಲ ಮಕ್ಕಳು ಮತ್ತು ಹೆಂಡತಿಯನ್ನು ಟ್ರಸ್ಟಿ ಮಾಡುತ್ತಾನೆ. ಹೀಗೆ ಮಾಡುವುದರಿಂದ ನೂರು ಕೋಟಿ ಮೇಲೆ ಕೊಡಬೇಕಾದ ಇನ್ ಹೆರಿಟೆನ್ಸ್ ಟ್ಯಾಕ್ಸ್ ನೇರವಾಗಿ ಉಳಿತಾಯವಾಗುತ್ತೆ. ಮಕ್ಕಳು ಮತ್ತು ಹೆಂಡತಿ ತಮ್ಮೆಲ್ಲಾ ಖರ್ಚು ವೆಚ್ಚವನ್ನು ಟ್ರಸ್ಟ್ ಹೆಸರಲ್ಲಿ ನಡೆಸುತ್ತಾರೆ. ಒಂದಷ್ಟು ಹಣವನ್ನು ವೇತನ ರೂಪದಲ್ಲಿ ಪಡೆಯುತ್ತಾರೆ. ಹೀಗಾಗಿ ತಮ್ಮ ಇನ್ಕಮ್ ಮೇಲೆ ಕಟ್ಟುವ ತೆರಿಗೆಯನ್ನು ಕೂಡ ಬಹಳಷ್ಟು ಉಳಿಸುತ್ತಾರೆ. ಟ್ರಸ್ಟ್ ಮಾಡದೆ ಹೋಗಿದ್ದರೆ ತಮ್ಮ ಪಾಲಿಗೆ ಬಂದ ಆಸ್ತಿಯ ಮೇಲಿನ ಪೂರ್ಣ ಆದಾಯದ ಮೇಲೆ ದೊಡ್ಡ ಮೊತ್ತದ ತೆರಿಗೆ ತೆತ್ತು ಉಳಿದದ್ದರಲ್ಲಿ ಖರ್ಚು ಮಾಡಬೇಕಿತ್ತು. ಆದರೆ ಟ್ರಸ್ಟ್ ಮಾಡಿದರೆ ಹಾಗಲ್ಲ ಖರ್ಚು ಮಾಡಿ ತಮಗೆ ಬೇಕಾದ ಆದಾಯದ ಮೇಲೆ ಮಾತ್ರ ತೆರಿಗೆ ಕಟ್ಟುವ ವ್ಯವಸ್ಥೆ ಕಲ್ಪಿಸಿಕೊಂಡಿದ್ದಾರೆ. ಅಲ್ಲದೆ ತಮ್ಮ ಸಂಬಂಧಿಕರ ನಡುವೆ ಇನ್ನೊಂದು ಟ್ರಸ್ಟ್ ಸ್ಥಾಪಿಸಿ ಅವರಿಗೆ ದೇಣಿಗೆ/ಡೊನೇಷನ್ ನೀಡಿ ಅದರ ಮೇಲೂ ತೆರಿಗೆ ವಿನಾಯ್ತಿ ಪಡೆಯಬಹದು. ಹೀಗೆ ಹಣವನ್ನು ತಮ್ಮ ನಡುವೆಯೇ ವರ್ಗಾಯಿಸಿಕೊಂಡು ಒಂದು ರೂಪಾಯಿ ಕೂಡ ತೆರಿಗೆ ಕಟ್ಟದೆ ತಮ್ಮ ಐಷಾರಾಮಿ ಜೀವನ ಶೈಲಿಗೆ ಒಂದಿಷ್ಟೂ ಕುಂದು ಬರದಂತೆ ಬದುಕುವ ಕಲೆ ಅವರಿಗೆ ತಿಳಿದಿದೆ. ತಾವು ಬಳಸುವ ಬೆಲೆ ಬಾಳುವ ಐಷಾರಾಮಿ ಕಾರು ಟ್ರಸ್ಟ್ ಹೆಸರಲ್ಲಿ, ವಿಮಾನದ ಖರ್ಚು ಮೋಜು ಎಲ್ಲವೂ ಟ್ರಸ್ಟ್ ಖರ್ಚಿನಲ್ಲಿ!

ಅಮೇರಿಕದ ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ನೀಡಿರುವ ಹೇಳಿಕೆಯಲ್ಲಿ ದೇಣಿಗೆ ರೂಪದಲ್ಲಿ ಪಡೆದ ಹಣದ ಅರ್ಧಕ್ಕೂ ಹೆಚ್ಚು ಖರ್ಚಿನ ರೂಪದಲ್ಲಿ ಹೋಗಿರುತ್ತದೆ ಎನ್ನುತ್ತದೆ. ಈ ಹೇಳಿಕೆ ನಮ್ಮ ವ್ಯವಸ್ಥೆಯ ಲೋಪದೋಷವನ್ನು ತೋರಿಸುತ್ತಿದೆ.

ವಿತ್ತ ಜಗತ್ತನ್ನು ಆಳುತ್ತಿರುವುದು ಕೇವಲ ಹನ್ನೆರಡು ಮನೆತನಗಳು ಎನ್ನುವ ವಿಷಯ ಕೇಳಿದರೆ ನೀವು ಚಕಿತರಾಗಬಹುದು, ಆದರಿದು ನಿಜ. ತಮ್ಮ ಅನುಕೂಲಕ್ಕೆ ತಕ್ಕ ಕಾಯಿದೆ ಕಾನೂನು ಮಾಡಿಕೊಂಡಿರುವ ಇವರು ಇದರ ಬದಲಾವಣೆಗೆ ಏಕೆ ಶ್ರಮಿಸಿಯಾರು? ಅವರ ನಂತರ ಅವರ ಅಳಿಯನೊ ಮಗನೋ ಟ್ರಸ್ಟಿಯಾಗಿ ಮುಂದುವರಿಯುತ್ತಾನೆ. ಹಣದ ಮೇಲಿನ ಹಿಡಿತ ಒಂದು ಕೈಯಿಂದ ಇನ್ನೊಂದು ಕೈಯಿಗೆ ಮನೆತನದಲ್ಲಿಯೇ ವರ್ಗಾವಣೆ ಸದ್ದಿಲ್ಲದೇ ನಡೆದುಹೋಗುತ್ತದೆ. ನಮ್ಮೂರ ಬಡ ರೈತನ ಮಕ್ಕಳು ಮಾತ್ರ ಅಪ್ಪನ ನಂತರ ಉಳಿದಿದ್ದ ಒಂದು ಎಕರೆ ಜಾಗಕ್ಕೆ ತಮ್ಮ ತಮ್ಮಲ್ಲೇ ಕಚ್ಚಾಡಿಕೊಂಡು ಬದುಕನ್ನು ಬೀದಿ ರಂಪ ಮಾಡಿಕೊಂಡು ಕೋರ್ಟಿಗೆ ಅಲೆದಾಡುತ್ತ ವಕೀಲನ ಜೇಬು ತುಂಬಿಸುತ್ತಾರೆ. ಸಲ್ಮಾನ್ ನ ಬೀಯಿಂಗ್ ಹ್ಯೂಮನ್ ಬಟ್ಟೆಯ ಔಟ್ಲೆಟ್ ನ ಟರ್ನ್ ಓವರ್ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತೆ. ಅಲ್ಲಿ ಕೊಂಡದ್ದಕ್ಕೆ ಕೊಡುವ ರಸೀತಿ ಹಿಂದೆ ವ್ಯಾಪಾರದಿಂದ ಲಾಭದ ಒಂದಷ್ಟು ಅಂಶ ಬಡವರ ಏಳಿಗೆಗೆ ಖರ್ಚು ಮಾಡಲಾಗುತ್ತದೆ ಎನ್ನುವ ಹೇಳಿಕೆ ಮುದ್ರಿತವಾಗಿರುತ್ತೆ. ನಮ್ಮ ಅಲೂಗೆಡ್ಡೆ ನಮಗೆ ತಿನ್ನಿಸುವ ಮ್ಯಾಕ್ ಡೊನಾಲ್ಡ್, ನಮ್ಮ ಹಣದಲ್ಲಿ ಲಾಭಮಾಡುವ ಎಮಿರೇಟ್ಸ್, ಲುಫ್ತಾನ್ಸ್ ಹೀಗೆ ಒಂದೇ ಎರಡೇ, ಒಬ್ಬರೇ ಇಬ್ಬರೇ? ಎಲ್ಲರೂ ಬಡವರ ಉದ್ದಾರಕ್ಕೆ ಟ್ರಸ್ಟ್ ತೆಗೆದು ಕೊಂಡವರೇ! ಬಡವ, ಬಡತನ ಮಾತ್ರ ಬದಲಾಗದೆ ದೊಡ್ಡವರ ಆಟಗಳನ್ನು ಅರಿಯಲಾಗದೆ ತನ್ನ ಕೈಗಿಟ್ಟ ತುತ್ತನ್ನು ತಿನ್ನುವುದರಲ್ಲಿ ಮಗ್ನನಾಗಿದ್ದಾನೆ.

ಟ್ರಸ್ಟ್ ಗಳ್ಳನ್ನು ಟ್ರಸ್ಟ್ ಮಾಡಬಹುದೇ? ದೇಣಿಗೆ ನೀಡುವ ಮುಂಚೆ ಟ್ರಸ್ಟ್ ನ ಪೂರ್ವಾಪರ ಜಾಲಾಡಿ. ನೆನಪಿಡಿ ದಾನವನ್ನು ಕೂಡ ಪಾತ್ರ-ಅಪಾತ್ರರನ್ನು ನೋಡಿ ಮಾಡು ಎನ್ನುತ್ತದೆ ನಮ್ಮ ಸಂಸ್ಕೃತಿ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com