ಎರಡು ವರ್ಷದಲ್ಲಿ ಅದಾನಿ ಸಂಪತ್ತು ಹತ್ತು ಪಟ್ಟು ವೃದ್ಧಿಯಾಗಿದ್ದು ಹೇಗೆ? (ಹಣಕ್ಲಾಸು)

ಹಣಕ್ಲಾಸು-326-ರಂಗಸ್ವಾಮಿ ಮೂಕನಹಳ್ಳಿ
ಗೌತಮ್ ಅದಾನಿ
ಗೌತಮ್ ಅದಾನಿ

ಎರಡು ವರ್ಷದ ಹಿಂದೆ ಅಂದರೆ 2020 ರ ಮಧ್ಯಭಾಗದಲ್ಲಿ ಗೌತಮ್ ಅದಾನಿ ಅವರ ನಿವ್ವಳ ಮೌಲ್ಯ 10 ಬಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು, ಎರಡು ವರ್ಷದ ಅಂತರದಲ್ಲಿ ಅಂದರೆ 2022ರ ಜೂನ್ ವೇಳೆಗೆ ಇವರ ನಿವ್ವಳ ಮೌಲ್ಯ 105 ಬಿಲಿಯನ್ ಡಾಲರ್ ಎನ್ನುತ್ತದೆ ಅಂಕಿ ಅಂಶ. 

ಕೆಲವು ವಿಶ್ಲೇಷಕರು ಇದು 92 ಬಿಲಿಯನ್ ಅಷ್ಟೇ, ಉಳಿದದ್ದು ಸುಮ್ಮನೆ ಹೆಚ್ಚಿಸಿ ಹೇಳುತ್ತಿದ್ದಾರೆ ಎನ್ನುತ್ತಾರೆ. ಇನ್ನು ಕೆಲವು ವಿಶ್ಲೇಷಣೆಗಳು ಅವರು ತೆಗೆದುಕೊಂಡಿರುವ ಸಾಲ ಬಹಳವಿದೆ, ಸ್ವಲ್ಪ ಹೆಚ್ಚು ಕಡಿಮೆಯಾದರೂ ಕುಸಿತ ತಪ್ಪಿಸಲಾಗದು ಎನ್ನುತ್ತಾರೆ. ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ ಒಂದು ಅಂಶವಿದೆ. ನಿವ್ವಳ ಎಂದರೆ ಒಟ್ಟು ಆಸ್ತಿಯನ್ನ, ಭಾದ್ಯತೆ ಅಥವಾ ಲಿಯಬಿಲಿಟಿಯನ್ನ ಕಳೆದು ಉಳಿದದ್ದು ಎನ್ನಲಾಗುತ್ತದೆ. ಹೀಗಾಗಿ ಇಲ್ಲಿ ಮತ್ತೆ ಸಾಲದ ವಿಷಯ ಎತ್ತುವ ಅವಶ್ಯಕತೆ ಬರುವುದಿಲ್ಲ. ಇನ್ನು ಇವರ ಒಟ್ಟು ನಿವ್ವಳ ಮೌಲ್ಯ ಸ್ವಲ್ಪ ಅತ್ತಿತ್ತ ಆದರೂ ಅವರು ಮೂರನೇ ಸ್ಥಾನದಲ್ಲಿರುವುದು ಮಾತ್ರ ಚರ್ಚೆಗೆ ಆಸ್ಪದವಿಲ್ಲದ್ದು. ಅದಾನಿ ಅವರು ಟೆಸ್ಲಾ ಕಂಪನಿಯ ಎಲಾನ್ ಮಸ್ಕ್ ಮತ್ತು ಅಮೆಜಾನ್ನ ಜೆಫ್ ಬೆಜೋಸ್ ಅವರ ನಂತರದ ಸ್ಥಾನದಲ್ಲಿದ್ದಾರೆ.

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಏಷ್ಯಾದ ಉದ್ಯಮಿ ಸ್ಥಾನ ಪಡೆದಿರುವ ಪುರಾವೆ ಇರಲಿಲ್ಲ, ಅದಾನಿ ಅದನ್ನ ಅಳಿಸಿ ಹಾಕಿದ್ದಾರೆ. ರಿಲಯನ್ಸ್ನ ಮುಖೇಶ್ ಅಂಬಾನಿ, ಚೀನಾದ ಜ್ಯಾಕ್ ಮಾ ಸಹ ಈ ಮಟ್ಟಕ್ಕೆ ತಲುಪುವುದರಲ್ಲಿ ವಿಫಲರಾಗಿದ್ದರು. ಅದಾನಿ ಗ್ರೂಪ್ ಹಲವು ವರ್ಷಗಳಿಂದ ಕಲ್ಲಿದ್ದಲು ಹಾಗೂ ಬಂದರು ವಲಯದಲ್ಲಿ ಕಾರ್ಯಪ್ರವೃತ್ತವಾಗಿದೆ. ಇತ್ತೀಚಿನ ವರ್ಷಗಳಲ್ಲಿ ದತ್ತಾಂಶ ವಿಶ್ಲೇಷಣೆ, ಮಾಧ್ಯಮ ಮತ್ತು ಅಲ್ಯುಮಿನಿಯಂ, ಫುಡ್ ಬಿಸಿನೆಸ್ ಸೇರಿದಂತೆ ಹಲವು ವಲಯಗಳಿಗೆ ವಹಿವಾಟು ವಿಸ್ತರಿಸಿದೆ. ಪ್ರಸ್ತುತ ಅದಾನಿ ಸಮೂಹವು ಭಾರತದಲ್ಲಿ ಖಾಸಗಿ ವಲಯದ ಅತಿದೊಡ್ಡ ಬಂದರು ಹಾಗೂ ವಿಮಾನ ನಿಲ್ದಾಣ ನಿರ್ವಹಣೆ ಕಂಪನಿಯಾಗಿದೆ. ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಮೂಲಗಳ ಇಂಧನ ಉತ್ಪಾದಕ ಕಂಪನಿ ಎನ್ನುವ ಹೆಗ್ಗಳಿಕೆ ಕೂಡ ಗಳಿಸಿಕೊಂಡಿದೆ.

ಪದವಿ ಶಿಕ್ಷಣದ ಎರಡನೇ ವರ್ಷದಲ್ಲಿ ಕಾಲೇಜು ಬಿಟ್ಟು ಉದ್ಯೋಗಪತಿಯಾಗಬೇಕು ಎನ್ನುವ ಹಂಬಲದಿಂದ 1988ರಲ್ಲಿ ಅದಾನಿ ಎಂಟರ್ಪ್ರೈಸಸ್ ತೆಗೆಯುವ ಮುನ್ನ ಡೈಮಂಡ್ ಬಿಸಿನೆಸ್ ನಲ್ಲಿ ಕೂಡ ತಮ್ಮ ಅದೃಷ್ಟ ಪರೀಕ್ಷೆ ಮಾಡಿದ್ದರು. ಅದಾನಿ ಗ್ರೂಪ್ ಅಂದಿನಿಂದ ಇಂದಿನವರೆಗೆ ಸಿಮೆಂಟ್ ನಿಂದ, ಫುಡ್, ಮೀಡಿಯಾ ಹೀಗೆ ಬಹುತೇಕ ಎಲ್ಲಾ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಿದೆ.

ಇದೆಲ್ಲಾ ಸರಿ, ಆದರೆ ಕೇವಲ ಎರಡು ವರ್ಷದಲ್ಲಿ ಹೇಗೆ ಸಂಪತ್ತು ಹತ್ತು ಪಟ್ಟು ವೃದ್ಧಿಯಾಗಲು ಸಾಧ್ಯವಾಯ್ತು?

ಈ ಪ್ರಮಾಣದ ಸಂಪತ್ತು ವೃದ್ಧಿಗೆ ನಾವು ಹಲವಾರು ಕಾರಣಗಳನ್ನ ಪಟ್ಟಿ ಮಾಡಬಹುದು ಅದರಲ್ಲಿ ಪ್ರಮುಖವಾಗಿ:

  1. ಹೋಪ್ ಅಥವಾ ನಂಬಿಕೆ: ಜಗತ್ತು ನಿಂತಿರುವುದು ನಂಬಿಕೆ ನಂಬಿಕೆಯ ಮೇಲೆ , ಯಾರು ಹೆಚ್ಚಿನ ನಂಬಿಕೆಯನ್ನ ಜನರಲ್ಲಿ , ಹೂಡಿಕೆದಾರರಲ್ಲಿ ತುಂಬಲು ಯಶಸ್ವಿಯಾಗುತ್ತಾರೆ ಅಂತಹ ಸಂಸ್ಥೆ, ಅಂತಹ ಉದ್ದಿಮೆಗಳು ಕೂಡ ಯಶಸ್ವಿಯಾಗುತ್ತವೆ. ಒಮ್ಮೆ ನೀವು ಅದಾನಿ ಗ್ರೂಪ್ ನಡೆಸುತ್ತಿರುವ ವ್ಯಾಪಾರಗಳತ್ತ ಗಮನವಿಟ್ಟು ನೋಡಿ, ಅಲ್ಲಿನ ಎಲ್ಲಾ ವ್ಯಾಪಾರಗಳೂ ಭಾರತದ ಅಭಿವೃದ್ಧಿಯೊಂದಿಗೆ ತಳುಕು ಹಾಕಿಕೊಂಡಿವೆ. ಅದಾನಿ ಪೋರ್ಟ್ಸ್, ಭಾರತದ ಆಮದು ಮತ್ತು ರಫ್ತಿನೊಂದಿಗೆ ಬೆಸೆದುಕೊಂಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಭವಿಷ್ಯ, ಭಾರತದ ಬಗೆಗಿನ ನೋಟ ಉತ್ತಮವಾದಷ್ಟು, ಅದಾನಿ ಸಮೂಹ ಸಂಸ್ಥೆಗಳ ಭವಿಷ್ಯ ಕೂಡ ಉಜ್ವಲವಾಗುತ್ತದೆ. ಈ ಅಗಾಧ ನಂಬಿಕೆ ಹೂಡಿಕೆದಾರರಲ್ಲಿ ಹೊಸ ಜೋಷ್ ಸೃಷ್ಟಿಮಾಡಿದೆ. ಹೀಗಾಗಿ ಈ ಎಲ್ಲಾ ಸಂಸ್ಥೆಗಳ ಮಾರುಕಟ್ಟೆ ಮೌಲ್ಯ ನೈಜ ಮೌಲ್ಯಕ್ಕಿಂತ ಹೆಚ್ಚಾಗಿದೆ.
  2. ಸರಕಾರದ ಕನಸುಗಳೊಂದಿಗೆ ತಮ್ಮ ವ್ಯಾಪಾರವನ್ನ ಬೆಸೆದಿದ್ದಾರೆ: ಅದಾನಿ ಗ್ರೂಪ್ ನ ಅದಾನಿ ಗ್ರೀನ್ ರಿನ್ಯೂವಬೆಲ್ ಎನರ್ಜಿ ವಲಯದಲ್ಲಿ ತೊಡಗಿಸಿ ಕೊಂಡಿದೆ. 2024ರ ವೇಳೆಗೆ 25 ಗಿಗಾವಾಟ್ ಎನರ್ಜಿಯನ್ನ ಉತ್ಪಾದಿಸುವ ಟಾರ್ಗೆಟ್ ಹೊಂದಿದೆ. ಗಮನಿಸಿ ನೋಡಿ ಕೇಂದ್ರ ಸರಕಾರ ಶತಾಯಗತಾಯ ತೈಲದ ಮೇಲಿನ ಅವಲಂಬನೆಯನ್ನ ಕಡಿಮೆ ಮಾಡಬೇಕು ಎನ್ನುವ ಹಠಕ್ಕೆ ಬಿದ್ದಿದೆ. ಅಂತರರಾಷ್ಟ್ರೀಯ ರಾಜಕೀಯವನ್ನ ಗಮನಿಸಿದರೆ ಕೂಡ ಮುಂದಿನ ಹತ್ತು ವರ್ಷದಲ್ಲಿ ತೈಲಧಾರಿತ ವಿತ್ತ ವ್ಯವಸ್ಥೆ ನೇಪಥ್ಯಕ್ಕೆ ಸೇರುವುದು ನಿಶ್ಚಿತ ಎನ್ನುವುದು ತಿಳಿದು ಬರುತ್ತದೆ. ಈ ನಿಟ್ಟಿನಲ್ಲಿ ಪರ್ಯಾಯ ಶಕ್ತಿ ಅದರಲ್ಲೂ ನವೀಕರಿಸಬಹುದಾದ ಶಕ್ತಿಯ ಮೂಲವನ್ನ ಯಾರಾದರೂ ಉತ್ಪಾದಿಸುತ್ತೇನೆ ಎಂದರೆ ಅವರಿಗೆ ಸರಕಾರ ಎಲ್ಲಾ ರೀತಿಯ ಸವಲತ್ತುಗಳನ್ನ ನೀಡುತ್ತದೆ, ಜೊತೆಗೆ ಇದು ಕುಸಿತ ಕಾಣದಂತೆ ರೂಪುರೇಷೆಗಳನ್ನ, ಕಾನೂನನ್ನ ಜಾರಿಗೆ ತಂದಿದೆ. ಹೀಗಾಗಿ ಅದಾನಿ ಗ್ರೀನ್ಸ್ ಇರುವ ವ್ಯಾಪಾರ ವಲಯ ಕುಸಿತ ಕಾಣುವ ಸಾಧ್ಯತೆ ಬಹಳ ಕಡಿಮೆ. ಇದು ಹೂಡಿಕೆದಾರರಿಗೆ ಚನ್ನಾಗಿ ಗೊತ್ತಿದೆ ಹೀಗಾಗಿ ಇವರ ಸಂಸ್ಥೆಯ ಷೇರುಗಳಿಗೆ ಇನ್ನಿಲದ ಬೇಡಿಕೆ ಬಂದಿದೆ. ಸಹಜವಾಗೇ ಇದರ ಮೌಲ್ಯಮಾಪನ ಮಾಡುವಾಗ ಹೆಚ್ಚಿನ ಮೌಲ್ಯವನ್ನ ನೀಡಲಾಗಿದೆ.
  3. ಪಿಇ ರೇಶಿಯೋ: ಪಿ ಇ ರೇಶಿಯೋ ಎಂದರೆ ಪ್ರೈಸ್ ಟು ಅರ್ನಿಂಗ್ ರೇಶಿಯೋ ಎಂದರ್ಥ. ಸಂಸ್ಥೆ ಒಂದು ಷೇರಿನ ಮೇಲೆ ಒಂದು ರೂಪಾಯಿ ಗಳಿಕೆಗೆ ಹೂಡಿಕೆದಾರ ಎಷ್ಟು ಹಣವನ್ನ ನೀಡಲು ತಯಾರಿದ್ದಾರೆ ಎನ್ನುವುದನ್ನ ಮಾರುಕಟ್ಟೆಯ ಆಧಾರದ ಮೇಲೆ ನಿರ್ಧರಿಸಲಾಗುವ ಸಮೀಕರಣ. ವಲಯದಿಂದ ವಲಯಕ್ಕೆ ಎಷ್ಟು ಪಿಇ ರೇಶಿಯೋ ಇರಬೇಕು ಎನ್ನುವುದನ್ನ ನಿರ್ಧರಿಸಲಾಗುತ್ತದೆ. ಆದರೆ ಸಾಮಾನ್ಯವಾಗಿ ಹೇಳುವಾಗ 20 ರಿಂದ 25 ಉತ್ತಮ, ಆರೋಗ್ಯಕರ ಪಿ ಇ ಎನ್ನಲಾಗುತ್ತದೆ. ಇದಕ್ಕಿಂತ ಕಮ್ಮಿ ಇದ್ದರೆ ಸಂಸ್ಥೆಯ ಷೇರುಗಳ ಮೌಲ್ಯವನ್ನ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ತೋರಿಸಿದ್ದಾರೆ ಎಂದರ್ಥ. ಹಾಗೆಯೇ ಇದಕ್ಕಿಂತ ಹೆಚ್ಚಿದ್ದರೂ ಕಷ್ಟ. ಸಂಸ್ಥೆಯ ಷೇರಿನ ಮೌಲ್ಯವನ್ನ ಹೆಚ್ಚು ಹೆಚ್ಚಾಗಿ ತೋರಿಸಿದ್ದಾರೆ ಎಂದರ್ಥ. ಅದಾನಿ ಸಮೂಹ ಸಂಸ್ಥೆಗಳ ಷೇರುಗಳು ಓವರ್ ವ್ಯಾಲ್ಯೂ ಆಗಿವೆ. ಅಂದರೆ ಮಾರುಕಟ್ಟೆ ಮೌಲ್ಯಕ್ಕಿಂತ ಅತಿ ಹೆಚ್ಚು ತೋರಿಸಿದ್ದಾರೆ. ಈ ಕಾರಣ ಅದಾನಿ ಸಂಪತ್ತಿನಲ್ಲಿ ಅತಿ ವೇಗದಲ್ಲಿ ಏರಿಕೆ ಕಂಡಿದೆ. ಉದಾಹರಣೆ ನೋಡೋಣ. ಅದಾನಿ ಗ್ರೀನ್ಸ್ ಪಿ.ಇ ರೇಶಿಯೋ ಎಷ್ಟು ಗೊತ್ತೇ? ಜೂನ್ 2022ರ ಅಂಕಿ-ಅಂಶದ ಪ್ರಕಾರ 702, ಈ ಸಂಸ್ಥೆ ಪವರ್ ಸೆಕ್ಟರ್ನಲ್ಲಿ ಬರುತ್ತದೆ ಮತ್ತು ಸೆಕ್ಟರ್ ಅವೆರೆಜ್ ಪಿಇ 12/13 ರ ಆಜುಬಾಜಿನಲ್ಲಿದೆ. ಅಂದರೆ ಅದಾನಿ ಗ್ರೀನ್ಸ್ ಯಾವ ಮಟ್ಟದಲ್ಲಿ ಓವರ್ ವ್ಯಾಲ್ಯೂ ಆಗಿರಬಹುದು ಅರಿವು ನಿಮ್ಮದಾಗಿರುತ್ತದೆ ಎಂದುಕೊಳ್ಳುವೆ. ಹಾಗೆಯೇ ಅದಾನಿ ಗ್ರೋಪ್ಸ್ ನ ಇನ್ನೊಂದು ಸಂಸ್ಥೆ ಅದಾನಿ ಟೋಟಲ್ ಗ್ಯಾಸ್ ಪಿ ಇ 521, ಇದೆ ವಲಯದ ಅವೆರೆಜ್ ಪಿಇ 23/24 ರ ನಡುವಿನಲ್ಲಿದೆ. ಅದಾನಿ ಎಂಟರ್ಪ್ರೈಸಸ್ 502ರಲ್ಲಿದೆ, ಹೀಗೆ ಬಹುತೇಕ ಎಲ್ಲವೂ ಮಾರುಕಟ್ಟೆ ಮೌಲ್ಯಕ್ಕಿಂತ ಬಹಳಷ್ಟು ಅಧಿಕವಾಗಿದೆ. ಹೀಗಾಗಿ ಕೇವಲ ಎರಡು ವರ್ಷದಲ್ಲಿ 10 ಬಿಲಿಯನ್ 100 ಬಿಲಿಯನ್ ಆಗಲು ಸಾಧ್ಯವಾಗಿದೆ.
  4. ಫೋಮಾ ಸಿಂಡ್ರೋಮ್: FOMO ಎಂದರೆ ಫಿಯರ್ ಆಫ್ ಮಿಸ್ಸಿಂಗ್ ಔಟ್ ಎಂದರ್ಥ. ಹೌದು ಹೂಡಿಕೆದಾರರ ಮನದಲ್ಲಿ ಅದಾನಿ ಗ್ರೂಪ್ ನಲ್ಲಿ ಹೂಡಿಕೆ ಮಾಡದಿದ್ದರೆ ಅವಕಾಶವನ್ನ ಕೆಳೆದುಕೊಂಡೆವು ಎನ್ನುವ ಭಾವನೆ ಉಂಟಾಗಿದೆ. ಇದೊಂದು ರೀತಿಯ ಗೀಳು ಕಾಯಿಲೆ, ಮನಸ್ಸಿನಲ್ಲಿ ಉಂಟಾಗುವ ತೀವ್ರ ಭಾವನೆ. ಗಮನಿಸಿ ನೋಡಿ , ಯಾವುದೇ ವಲಯದಲ್ಲಿ ಸ್ಥಿರತೆ ಬಹಳ ಮುಖ್ಯ. ಆದರೆ ಮುಂದಿನ ಐದಾರು ವರ್ಷ ಈ ವಲಯದಲ್ಲಿ, ಈ ಸಂಸ್ಥೆ ಸ್ಥಿರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಹಾಗೊಮ್ಮೆ ಮುಂದಿನ ಐದಾರು ವರ್ಷ ಈ ಸಂಸ್ಥೆಯಲ್ಲಿ ನಿಖರತೆ ಇದೆ ಎನ್ನುವ ನಂಬಿಕೆ ಬಲವಾದರೆ? ಅಥವಾ ಅದು ನಿಜವೂ ಆಗುವುದಿದ್ದರೆ ಏನಾಗಬಹದು ಊಹಿಸಿ ನೋಡಿ, ಈಗ ಅದಾನಿ ಸಮೂಹ ಸಂಸ್ಥೆಯನ್ನ ನೋಡಿ, ಈಗ ಇಲ್ಲಿ ಆಗಿರುವುದು ಇದೆ. ಅದಾನಿ ಪೋರ್ಟ್ಸ್ ಇರಬಹುದು, ಗ್ಯಾಸ್ ಅಥವಾ ಗ್ರೀನ್ಸ್ ಎಲ್ಲವೂ ಕೇಂದ್ರ ಸರಕಾರದ ಕನಸಿನ ಯೋಜನೆಗಳಿಗೆ ತಕ್ಕಂತೆ ಹೆಜ್ಜೆ ಹಾಕುತ್ತಿವೆ. ಬೇರಾವ ವಲಯದಲ್ಲೂ ಇಲ್ಲದ ಸ್ಥಿರತೆ ಈ ಸಂಸ್ಥೆಗಳಲ್ಲಿ ಕಂಡು ಬರುತ್ತಿದೆ. ಸಹಜವಾಗೇ ಹೂಡಿಕೆದಾರರಲ್ಲಿ ಫೋಮಾ ಸಿಂಡ್ರೋಮ್ ಸೃಷ್ಟಿಯಾಗಿದೆ. ಇದು ಷೇರಿನ ಪಿ ಇ ರೇಶಿಯೋ ಹೆಚ್ಚಳಕ್ಕೆ ನೇರ ಕಾರಣವಾಗಿದೆ. ಇವೆಲ್ಲವುಗಳ ಒಟ್ಟು ಕಾರಣ ಅದಾನಿ ಸಂಪತ್ತಿನಲ್ಲಿ ಧಿಡೀರ್ ಏರಿಕೆಗೆ ಕಾರಣವಾಗಿದೆ.

ಕೊನೆಮಾತು: ಕೇಂದ್ರ ಸರಕಾರದ ಮಹತ್ತರ ಯೋಜನೆಗಳನ್ನ ಮನಗಂಡು, ವೇಗವಾಗಿ ಸಮಯಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುತ್ತಾ ಬಂದದ್ದು ಅದಾನಿ ಗ್ರೂಪ್ ಗೆ ಸದ್ಯದ ಮಟ್ಟಿಗೆ ವರದಾನವಾಗಿದೆ. ಮುಂದಿನ ಐದಾರು ವರ್ಷವಂತೂ ಅಭಾದಿತವಾಗಿ ಈ ವಲಯಗಳಲ್ಲಿ ಮುಂದುವರಿಯಬಹುದು. ಅಂದಮಾತ್ರಕ್ಕೆ ಎಲ್ಲವೂ ಸರಿಯಾಗಿದೆ ಎನ್ನುವಂತೆಯೂ ಇಲ್ಲ, ಮಹತ್ತರ ಯೋಜನೆಗಳಾದ ನವೀಕರಿಸಬಹುದಾದ ಶಕ್ತಿ ಮೂಲದ ಸಂಸ್ಥೆ ಗ್ರೀನ್ಸ್ ತನ್ನ ಟಾರ್ಗೆಟ್ನ ಕಾಲು ಭಾಗ ಕೂಡ ಇನ್ನು ಸಾಧಿಸಿಲ್ಲ ಆದರೆ ಮುಂದೆ ಆಗುತ್ತದೆ ಎನ್ನುವ ಹೆಚ್ಚಿನ ಊಹಾಪೋಹಗಳು ಷೇರಿನ ಮೌಲ್ಯವನ್ನ ಇನ್ನಿಲ್ಲದಂತೆ ಹೆಚ್ಚಿಸಿವೆ. ನೆನಪಿರಲಿ ಅತಿಯಾದರೆ ಅಮೃತವೂ ವಿಷ ಎನ್ನುವ ಗಾದೆ ಮಾತಿದೆ , ಅಂತೆಯೇ ಅತಿ ಹೆಚ್ಚಿನ ಮೌಲ್ಯ , ಓವರ್ ವ್ಯಾಲ್ಯೂವೇಷನ್ ಖಂಡಿತ ಒಳ್ಳೆಯದಲ್ಲ. ಇದು ಸದ್ಯದ ಮಟ್ಟಿಗೆ ಜಗತ್ತಿನ ಮೂರನೇ ಅತಿ ದೊಡ್ಡ ಶ್ರೀಮಂತ ಪಟ್ಟಕ್ಕೆ ಕೂರಿಸಿದೆ, ಉಳಿದಿಬ್ಬರ ಕಥೆಯೂ ಹೆಚ್ಚಿನ ಬದಲಾವಣೆಯೇನಿಲ್ಲ. ವಿತ್ತ ಸಮಾಜ ಇಂದು ನಿಂತಿರುವುದೇ ಇಂತಹ ವ್ಯಾಲ್ಯೂವೇಷನ್ ಆಟಗಳಿಂದ ಎನ್ನುವುದು ಮಾತ್ರ ಕಟು ವಾಸ್ತವ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com