ವಿಜಯ ಮಲ್ಯ; ನಾಯಕನೋ? ಖಳನಾಯಕನೋ?? (ಹಣಕ್ಲಾಸು)

ಹಣಕ್ಲಾಸು-324-ರಂಗಸ್ವಾಮಿ ಮೂಕನಹಳ್ಳಿ
ವಿಜಯ ಮಲ್ಯ
ವಿಜಯ ಮಲ್ಯ

ವಿಜಯ್ ಮಲ್ಯ ಎಂದ ತಕ್ಷಣ ನಮಗೇನು ನೆನಪಿಗೆ ಬರುತ್ತದೆ ಹೇಳಿ? ಹೌದು, ನಿಮ್ಮ ಮನಸ್ಸಿನಲ್ಲಿ ಈ ಕ್ಷಣದಲ್ಲಿ ಉತ್ಪನ್ನವಾದ ಭಾವನೆ ಸರಿಯಾಗಿದೆ. 9 ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ಸಾಲವನ್ನ ಬ್ಯಾಂಕ್ಗಳಿಗೆ ಮರು ಪಾವತಿ ಮಾಡದೆ ಭಾರತವನ್ನ ಬಿಟ್ಟು ಹೋದ ವಿಲ್ ಫುಲ್ ಡಿಫಾಲ್ಟರ್ ಎನ್ನುವುದು ನಮ್ಮೆಲ್ಲರಲ್ಲೂ ಈತನ ಬಗ್ಗೆ ಬರುವ ಮೊದಲ ಭಾವ.

ಇದು ಸತ್ಯ. ಆತ ಮಾಡಿಕೊಂಡ ಎಡವಟ್ಟು, ಎಲ್ಲವೂ ಇದ್ದು ಇಂದಿಗೆ ಲಂಡನ್ ನಗರದಲ್ಲಿ ಭಾರತದಿಂದ ಸಾಲ ತೀರಿಸದೆ ಪರಾರಿಯಾಗಿ ನೆಲೆ ಕಂಡುಕೊಂಡಿರುವ ವ್ಯಕ್ತಿಯಂತೆ ಬದುಕುವುದು ಆತನ ಜೀವನದ ಪ್ಲಾನ್ ನಲ್ಲಿ ಖಂಡಿತ ಇರಲು ಸಾಧ್ಯವಿಲ್ಲ. ಏಕೆಂದರೆ ಮಲ್ಯ ಒಬ್ಬ ಕನಸುಗಾರ, ಭಾರತೀಯ ವಿಮಾನದ ಚರಿತ್ರೆಯಲ್ಲಿ ವೈಭವಕ್ಕೆ ಎಂದೂ ಜಾಗವಿರಲಿಲ್ಲ, ವಿಜಯ್ ಕಿಂಗಫಿಶರ್ ಏರ್ಲೈನ್ಸ್ ತರುವವರೆಗೆ! ಬದುಕಿದರೆ ಹೀಗೆ ಬದುಕಬೇಕು ಇಲ್ಲದಿದ್ದರೆ ಆ ಬದುಕೇ ಬೇಡ ಎನ್ನುವ ಮಟ್ಟಿನ ನಿಖರತೆ, ಜಿಡ್ಡು ಈತನ ವ್ಯಕ್ತಿತ್ವದ ಅವಿಭಾಜ್ಯ ಗುಣ. ಭಾರತೀಯ ಸಮಾಜದಲ್ಲಿ ವಿಜಯ್ ಮಲ್ಯರಿಗೆ ಮುಂಚೆ ನೂರಾರು ಜನ ಕೋಟ್ಯಧಿಪತಿಗಳು ಜನಿಸಿದ್ದಾರೆ, ಆದರೆ ಮಾಡ್ರನ್ ಸಮಯದಲ್ಲಿ ಹಣವನ್ನ ಖರ್ಚು ಮಾಡುವುದರಲ್ಲಿ ಮೂಲವಾಗಿ ಭಾರತೀಯರಲ್ಲಿ ಇದ್ದ ಮಡಿವಂತಿಕೆಯನ್ನ ಮೀರಿ 'ನನ್ನ ದುಡ್ಡು, ನನ್ನಿಚ್ಛೆ ಎನ್ನುವಂತೆ' ಬದುಕಿದವರಲ್ಲಿ ಮಲ್ಯ ಮುಂಚೂಣಿಯಲ್ಲಿ ನಿಲ್ಲುತ್ತಾರೆ.

ವಿಜಯ್ ಮಲ್ಯ ಅವರ ತಂದೆ ವಿಠ್ಠಲ್ ಮಲ್ಯ ಅವರು ಲಿಕ್ಕರ್ ಸಾಮ್ರಾಜ್ಯವನ್ನ ಕಟ್ಟಿದವರು. ಭಾರತದಲ್ಲಿ ಈ ವ್ಯಾಪಾರ ಕೆಟ್ಟದ್ದು ಎನ್ನುವ ಕಾಲಘಟ್ಟದಲ್ಲಿ ಅವರು ಈ ವ್ಯಾಪಾರವನ್ನ ಬಹಳವಾಗಿ ವೃದ್ಧಿಸಿದ್ದರು. ಹೇಳಿಕೆಗಳ ಪ್ರಕಾರ ಎಷ್ಟು ಸಾಧ್ಯವೋ ಅಷ್ಟು ಸುದ್ದಿಯಿಂದ ದೂರವಿರಬೇಕು, ಅಪ್ಪಿತಪ್ಪಿಯೂ ಪತ್ರಿಕೆಯಲ್ಲಿ ಹೆಸರು ಬರಬಾರದು ಎನ್ನುವ ನಿಲುವಿಗೆ ವಿಠ್ಠಲ್ ಅವರು ಬದ್ಧರಾಗಿದ್ದರು. 

ಎಲೆಮರೆಕಾಯಿಯಂತೆ ಕೆಲಸ ಮಾಡಬೇಕು ಎನ್ನುವುದು ಅವರ ಸಿದ್ಧಾಂತವಾಗಿತ್ತು. ವಿಜಯ್ ಮಲ್ಯ ಇದಕ್ಕೆ ತದ್ವಿರುದ್ದ. 1983 ರಲ್ಲಿ ವಿಠ್ಠಲ್ ಮಲ್ಯ ಅವರು ಇಹಲೋಕದ ವ್ಯಾಪಾರ ಮುಗಿಸಿ ಹೊರಟಾಗ ವಿಜಯ ಮಲ್ಯ ತಾನಾಯ್ತು ತನ್ನ ಮೋಜು, ಫಾಸ್ಟ್ ಟ್ರ್ಯಾಕ್ ಕಾರುಗಳಾಯ್ತು ಎನ್ನುವಂತೆ ಬದುಕುತ್ತಿದ್ದರು. ಅಪ್ಪ ಹೋದಾಗ ಲಿಕ್ಕರ್ ಸಾಮ್ರಾಜ್ಯದ ಚುಕ್ಕಾಣಿ ಹಿಡಿದಾಗ ವಿಜಯ್ಗೆ ಕೇವಲ 28ರ ಹರಯ. ಅಪ್ಪ ಕಟ್ಟಿದ ಅಷ್ಟು ದೊಡ್ಡ ಸಾಮ್ರಾಜ್ಯವನ್ನ ಉಳಿಸಿಕೊಂಡು, ಬೆಳಸಿಕೊಂಡು ಹೋಗುವ ಸವಾಲು ವಿಜಯ್ ಅವರ ಮುಂದಿತ್ತು.

ವಿಠ್ಠಲ್ ಮಲ್ಯ ಅವರಲ್ಲಿ ಹಲವಾರು ಬ್ರಾಂಡ್ ಗಳಿದ್ದವು. ಕೆದಕುತ್ತಾ ಕುಳಿತಾಗ ಕಣ್ಣಿಗೆ ಬಿದ್ದದ್ದು ಕಿಂಗ್ ಫಿಷರ್! ಈ ಹೆಸರು, ಆ ಪುಟಾಣಿ ಪಕ್ಷಿಯ ಲೋಗೋ ಎಲ್ಲವೂ ವಿಜಯ್ಗೆ ಇಷ್ಟವಾಗುತ್ತದೆ. 80 ರ ದಶಕದ ಅಂತ್ಯದ ಸಮಯದಲ್ಲಿ ಭಾರತ ಬದಲಾಗುತ್ತಿತ್ತು. ಜನ ಹಿಂದಿನ ಮಡಿವಂತಿಕೆಯಿಂದ ಸ್ವಲ್ಪ ಸ್ವಲ್ಪವೇ ಹೊರಬರುತ್ತಿದ್ದರು. ಆದರೆ ಸರಕಾರ ಲಿಕ್ಕರ್ ಆಡ್ (ಜಾಹಿರಾತು) ಕೊಡುವಂತಿಲ್ಲ ಎನ್ನುವ ಸುತ್ತೋಲೆ ಹೊರಡಿಸುತ್ತದೆ. ಕಿಂಗ್ ಫಿಷರ್ ಒಂದು ಲೈಫ್ ಸ್ಟೈಲ್ ಬ್ರಾಂಡ್ ಆಗಿ ಬೆಳೆಸಬೇಕು ಎನ್ನುವ ಹಠ ವಿಜಯ್ ಮಲ್ಯ ಅವರದ್ದು, ಹೀಗಾಗಿ ಅದೇ ಹೆಸರಿನಲ್ಲಿ ನೀರು, ಸೋಡಾ ತರುತ್ತಾರೆ, ಅವುಗಳ ಜಾಹಿರಾತು ನೀಡುತ್ತಾರೆ. ಜನ ಬಾರ್ಗಳಲ್ಲಿ ಬಿಯರ್ ಕೊಡಿ ಎನ್ನುವ ಜಾಗದಲ್ಲಿ ಕಿಂಗಫಿಶರ್ ಕೊಡಿ ಎನ್ನುವ ಮಟ್ಟಕ್ಕೆ ಬ್ರಾಂಡ್ ಬೆಳೆಯುತ್ತದೆ. ಭಾರತದಲ್ಲಿ ಎಫ್ 1 ಕಾರನ್ನ ಹೊಂದಿದ್ದ ಪ್ರಥಮ ಮತ್ತು ಏಕೈಕ ವ್ಯಕ್ತಿ ವಿಜಯ ಮಲ್ಯ ಆಗಿದ್ದರು.

ಲಿಕ್ಕರ್ ವ್ಯಾಪಾರದಲ್ಲಿ ಎಲ್ಲವೂ ಆತ ಎಣಿಸಿದ ರೀತಿಯಲ್ಲಿ ನಡೆದುಕೊಂಡು ಹೋಗುತ್ತಿತ್ತು. ಕಿಂಗಫಿಶರ್ ಹೆಸರಿನಲ್ಲಿ 2005 ರಲ್ಲಿ ಏರ್ಲೈನ್ ಶುರು ಮಾಡಿದ್ದು ಕಿಂಗ್ ಆಫ್ ಗುಡ್ ಟೈಮ್ ನ ಬ್ಯಾಡ ಟೈಮ್ ಆರಂಭ ಎಂದು ಹೇಳಬಹುದು. ನೀವು ಗಮನಿಸುತ್ತಾ ಬನ್ನಿ ಭಾರತದಲ್ಲಿ ಸ್ವಂತಂತ್ರ್ಯವಾಗಿ ಖಾಸಗಿ ಏರ್ಲೈನ್ಸ್ ನಡೆಸಲು ಹೋದವರ ಕಥೆಯೆಲ್ಲಾ ಹೀಗೆ ದಾರುಣ ಅಂತ್ಯ ಕಂಡಿದೆ. ಅಮೆರಿಕಾದ ಡಾಲಸ್ ನಗರದಿಂದ ಏರ್ಲೈನ್ಸ್ ನಡೆಸಲು ಬೇಕಾಗುವ ಸಂಪನ್ಮೂಲ ವ್ಯಕ್ತಿಗಳನ್ನ ಕರೆ ತಂದು, ಹತ್ತಾರು ಹೊಸ ಏರ್ ಬಸ್ ಗಳನ್ನ ಕೊಂಡು, ಕೋಟ್ಯಂತರ ರೂಪಾಯಿ ಹಣವನ್ನ ಸುರಿದು ಕಿಂಗಫಿಶರ್ ಏರ್ಲೈನ್ಸ್ ಶುರು ಮಾಡುತ್ತಾರೆ. ಭಾರತೀಯರು ಲಕ್ಷುರಿ ಎಂದರೇನು ಎಂದು ತಿಳಿಯದ ಸಮಯದಲ್ಲಿ ಎಕಾನಮಿ ಕ್ಲಾಸ್ ನಲ್ಲಿ ಆ ಮಟ್ಟದ ಲಕ್ಷುರಿ ನೀಡಿ ಜನರಲ್ಲಿ, ಸಮಾಜದಲ್ಲಿ ಹೊಸ ಕ್ರೇಜ್ ಶುರು ಮಾಡುತ್ತಾರೆ. ಗಮನಿಸಿ ಇಲ್ಲಿ ಲೆಕ್ಕಾಚಾರ ಮಾಡುವ ಗೋಜಿಗೆ ಹೋಗುವುದಿಲ್ಲ. ಜನರಿಂದ ಪಡೆಯುವ ಹಣದಲ್ಲಿ ಮತ್ತು ಅವರಿಗೆ ನೀಡುವ ಸೇವೆಗೆ ಆಗುವ ಖರ್ಚಿನಲ್ಲಿ ಅಪಾರ ವ್ಯತ್ಯಾಸ ಉಂಟಾಗುತ್ತದೆ. ಶುರು ಮಾಡಿದಾಗ ಇದ್ದ ತೈಲ ಬೆಲೆ ಉತ್ತರಾಭಿಮುಖವಾಗಿ ಸಾಗುತ್ತ ಹೋಗುತ್ತದೆ. ಜನರ ಕೈಗೆಟುಕುವ ಬೆಲೆಯಲ್ಲಿ ವಿಮಾನಯಾನ ಮಾಡಿಸಬೇಕು ಎನ್ನುವುದು ಕಿಂಗಫಿಶರ್ ಶುರುವಿನಲ್ಲಿದ್ದ ಉದ್ದೇಶ. ನಿಧಾನವಾಗಿ ಅದರಿಂದ ದೂರ ಸರಿಯುತ್ತ ವೈಭವದ ಕಡೆಗೆ ಮಲ್ಯ ವಾಲುತ್ತಾರೆ. ಅವರು ವೈಯಕ್ತಿಕವಾಗಿ ವೈಭವವಾಗಿ ಬಾಳುವುದಕ್ಕೂ ನಡೆಸುವ ವ್ಯಾಪಾರವನ್ನ ವೈಭವೀಕರಿಸಿವುದಕ್ಕೂ ವ್ಯತ್ಯಾಸವಿದೆ. ಆದರೆ ಅದು ಅವರಿಗೆ ತಿಳಿಯದೆ ಹೋಯ್ತು. ಇಷ್ಟೊಂದು ಖರ್ಚು ತಪ್ಪು ಎಂದು ಯಾರೂ ಮಲ್ಯರಿಗೆ ಹೇಳುವ ಸ್ಥಿತಿಯಲ್ಲಿರಲಿಲ್ಲ. ದಿನದಿಂದ ದಿನಕ್ಕೆ ಸಾಲದ ಹೊರೆ ಏರುತ್ತಾ ಹೋಯ್ತು. ಹಳೆಸಾಲ ಮುಚ್ಚಲು ಹೊಸ ಸಾಲ ಶುರುವಾಯ್ತು. ಇದೆಲ್ಲದರ ಜೊತೆಗೆ ಅಂದಿನ ದಿನದಲ್ಲಿ ಹೆಚ್ಚು ಎನ್ನುವಷ್ಟು ಅಂದರೆ 550 ಕೋಟಿ ರೂಪಾಯಿ ನೀಡಿ ಏರ್ ಡೆಕ್ಕನ್ ಕೂಡ ಖರೀದಿಸುತ್ತಾರೆ.

ವ್ಯಾಪಾರ ಯಾವುದೇ ಇರಲಿ ಅಲ್ಲಿ ಒಂದು ಸರಳ ಮಂತ್ರ ಪಾಲಿಸಬೇಕಾಗುತ್ತದೆ, ಆದಾಯಕ್ಕಿಂತ ಹೆಚ್ಚಿನ ಖರ್ಚು ಎಂದಿಗೂ ಮಾಡಬಾರದು. ಮಲ್ಯ ಇದಕ್ಕೆ ತದ್ವಿರುದ್ದ ಮಾಡುತ್ತಾ ಹೋದದ್ದು, ವೈಭವದ ಹಿಂದೆ ಹೋದದ್ದು ಕಿಂಗಫಿಶರ್ ಕುಸಿತಕ್ಕೆ ಮೂಲಕಾರಣ. 2009ರಲ್ಲಿ ಐಡಿಬಿಐ ಬ್ಯಾಂಕಿನಿಂದ 900 ಕೋಟಿ ರೂಪಾಯಿ ಹಣವನ್ನ ಸಾಲದ ರೂಪದಲ್ಲಿ ಪಡೆಯುತ್ತಾರೆ. ಗಮನಿಸಿ ಹೀಗೆ ಸಾಲ ಪಡೆದಾಗ ಆಗಲೇ ಕಿಂಗಫಿಶರ್ ಲೆಕ್ಕಪತ್ರ ಹದಗೆಟ್ಟಿತ್ತು. ಐಡಿಬಿಐ ಸಾಲ ನೀಡುವಾಗ ಕಿಂಗಫಿಶರ್ ಬ್ರಾಂಡ್ ಹೆಸರಿನ ಮೌಲ್ಯವನ್ನ ಗಣನೆಗೆ ತೆಗೆದುಕೊಂಡಿತ್ತು. ಸಾಲ ಕೊಡುವ ಸಮಯದಲ್ಲಿ ಬ್ರಾಂಡ್ ವ್ಯಾಲ್ಯೂ ಗಣನೆಗೆ ತೆಗೆದುಕೊಳ್ಳುವಂತಿಲ್ಲ, ಅದು ಕಣ್ಣಿಗೆ ಕಾಣದ ಆಸ್ತಿ. ಬ್ಯಾಂಕಿನ ಅಧಿಕಾರಿಗಳು ಇದನ್ನ ಅವಗಣಿಸಿ ದೊಡ್ಡ ಮೊತ್ತದ ಸಾಲವನ್ನ ನೀಡಿದ್ದರು.

ಏರ್ಲೈನ್ ವ್ಯವಹಾರ ನಷ್ಟದ ಮೇಲೆ ನಷ್ಟ ಅನುಭವಿಸುತ್ತಿರುವ ಸಮಯದಲ್ಲಿ 2008ರಲ್ಲಿ ಫೋರ್ಸ್ ಇಂಡಿಯಾ ಫಾರ್ಮುಲಾ 1 ಟೀಮ್ ಖರೀದಿ ಮಾಡುತ್ತಾರೆ, ಅಲ್ಲಿಗೆ ಬೇಕಾಗುವ ಹಣ ಹೊಂದಾವಣಿಕೆಯಲ್ಲಿ ಎಡವುತ್ತಾರೆ. ಐಡಿಬಿಐ ನಿಂದ ಪಡೆದ 9೦೦ ಕೋಟಿ ರೂಪಾಯಿಯನ್ನ ಏರ್ಲೈನ್ ಬದಲು ಫಾರ್ಮುಲಾ 1 ಟೀಮ್ ಗೆ ಬಳಸುತ್ತಾರೆ. ಇದು ಡೈವರ್ಶನ್ ಆಫ್ ಮನಿ, ಮತ್ತು ಮಿಸ್ ಯೂಸ್ ಆಫ್ ಮನಿ ಅಡಿಯಲ್ಲಿ ಬರುತ್ತದೆ. ಸಾಲದಕ್ಕೆ ಭಾರತೀಯ ರೂಪಾಯಿಯಲ್ಲಿ ಪಡೆದ ಹಣವನ್ನ ಯೂರೋಪಿಗೆ ಕೊಂಡು ಹೋದದ್ದು ಮನಿ ಲೌಡ್ರಿಂಗ್ ಅಡಿಯಲ್ಲಿ ಬರುತ್ತದೆ. ಹೀಗೆ ಒಂದು ತಪ್ಪಿನ ನಂತರ ಇನ್ನೊಂದು ತಪ್ಪು ಮಾಡುತ್ತಾ ಹೋದದ್ದು ಮಲ್ಯರ ಕುಸಿತಕ್ಕೆ ಕಾರಣಗಳಾದವು .

ಕೊನೆಗೆ 2021 ರಲ್ಲಿ ಇನ್ನು ಕಿಂಗಫಿಶರ್ಗೆ ಮರಳಿ ಜೀವ ಕೊಡಲಾಗದು ಎನ್ನುವ ಹಂತ ತಲುಪಿದಾಗ ಅದರ ಲೈಸೆನ್ಸ್ ರದ್ದು ಮಾಡಲಾಗುತ್ತದೆ. ಕಿಂಗಫಿಶರ್ ಏರ್ಲೈನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಜನರಿಗೆ ಆರೆಂಟು ತಿಂಗಳ ವೇತನ ಇಲ್ಲಿಯವರೆಗೆ ನೀಡಿಲ್ಲ. ಗಮನಿಸಿ ಬೇರೆ ದೇಶದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲರಿಗೂ ವೇತನ ನೀಡಲಾಗಿತ್ತು. ಕೇವಲ ಭಾರತ ಕೆಲಸಗಾರರಿಗೆ ಮಾತ್ರ ಈ ರೀತಿಯ ತಾರತಮ್ಯ ವಿಜಯ್ ಮಲ್ಯ ಮಾಡುತ್ತಾರೆ. ಆರು ತಿಂಗಳು ವೇತನ ಬಾರದ ಕಾರಣ ಮನನೊಂದು ಕೆಲಸಗಾರನ ಪತ್ನಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಂದಿನ ದಿನದಲ್ಲಿ ಇದು ದೊಡ್ಡ ನ್ಯೂಸ್ ಆಗುತ್ತದೆ. ಆದರೇನು ಮಲ್ಯ ವೇತನ ಮಾತ್ರ ನೀಡುವುದಿಲ್ಲ. ಗಾಯದ ಮೇಲೆ ಬರೆ ಎಳೆದಂತೆ 2015 ರಲ್ಲಿ ತಮ್ಮ 60 ನೇ ಹುಟ್ಟುಹಬ್ಬವನ್ನ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಆಚರಿಸುತ್ತಾರೆ. ಕೊನೆಗೆ ಮಾರ್ಚ್ 6, 2016 ರಂದು ಭಾರತ ಬಿಟ್ಟು ಲಂಡನ್ ನಗರಕ್ಕೆ ಪ್ರಯಾಣ ಬೆಳೆಸುತ್ತಾರೆ. ಅವರು ವಾಪಸ್ಸು ಬರುವುದಿಲ್ಲ ಎನ್ನುವ ಸುಳಿವು ಯಾರಿಗೂ ಇರುವುದಿಲ್ಲ. ಆದರೆ ತಾನು ಮಾಡಿದ ತಪ್ಪುಗಳ ಗುಡ್ಡೆಯಿಂದ ಎದ್ದು ಬರುವುದು ಕಷ್ಟ ಎನ್ನುವುದು ವಿಜಯ್ ಮಲ್ಯರಿಗೆ ಗೊತ್ತಿತ್ತು.

ಕೊನೆ ಮಾತು: ಭಾರತೀಯ ವಿಮಾನಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಸಾಧನೆ ಮಲ್ಯರದ್ದು, ಅದನ್ನ ಹೆಚ್ಚಿನ ದಿನ ಉಳಿಸಿಕೊಂಡು ಬಾರದೆ ಹೋದದ್ದು ಮಾತ್ರ ವಿಪರ್ಯಾಸ. ಜಗತ್ತಿನ ಕಣ್ಣಿನಲ್ಲಿ ಹೀರೋ ಆಗಿ ಇಂದಿಗೂ ಮಿಂಚಬಹುದಾಗಿದ್ದ ಮಲ್ಯ ವಿಲನ್ ಆಗಿ ಬದಲಾಗಿದ್ದು ಸ್ವಯಂಕೃತ ಅಪರಾಧಗಳಿಂದ! ಲಿಕ್ಕರ್ ಬಿಸಿನೆಸ್ನಲ್ಲೆ ಇದ್ದಿದ್ದರೆ ಇಂದಿಗೆ ಆತ ಅದಾನಿ, ಅಂಬಾನಿಯರ ಮಟ್ಟದಲ್ಲಿ ಇರಬಹುದಿತ್ತು. ಕಿಂಗ್ ಫಿಷರ್ ಏರ್ಲೈನ್ಸ್ ತೆಗೆದದ್ದು ಪೂರ್ಣ ತಪ್ಪು ನಿರ್ಧಾರವಲ್ಲ, ಆದರೆ ಅದನ್ನ ಸರಿಯಾಗಿ ನಿರ್ವಹಿಸದೇ ಹೋದದ್ದು, ಏರ್ ಡೆಕ್ಕನ್ ಕೊಂಡದ್ದು, ಇಲ್ಲಿನ ಹಣವನ್ನ ಫಾರ್ಮುಲಾ 1 ಟೀಮ್ ಕೊಳ್ಳಲು ಬಳಸಿದ್ದು, ಎಲ್ಲಕ್ಕೂ ಮುಖ್ಯವಾಗಿ ತನ್ನ ನೌಕರರಿಗೆ ವೇತನ ನೀಡದೆ ಹೋಗಿದ್ದು ಮಲ್ಯರನ್ನ ವಿಲನ್ ಪಟ್ಟಕ್ಕೆ ದೂಡಿ ಬಿಟ್ಟಿತು. ಮಲ್ಯರ ಪ್ರಯೋಗಗಳಿಗೆ ಭಾರತೀಯ ಮಧ್ಯಮವರ್ಗದ ಜನರ 9 ಸಾವಿರ ಕೋಟಿ ರೂಪಾಯಿ ಪೋಲಾಯ್ತು. ಬ್ಯಾಂಕಿಗೆ ಹಣ ಕೊಡದವರ ಪಟ್ಟಿಯಲ್ಲಿ ಮಲ್ಯ ತೀರಾ ದೊಡ್ಡ ಮೀನಲ್ಲ, ಆತನಿಗಿಂತ ಹೆಚ್ಚು ಹಣ ಬಾಕಿ ಉಳಿಸಿಕೊಂಡವರ ಪಟ್ಟಿ ಬಹಳ ದೊಡ್ಡದಿದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com