ಟೈಮ್ ಡೊನೇಷನ್  (ಸಾಂಕೇತಿಕ ಚಿತ್ರ)
ಟೈಮ್ ಡೊನೇಷನ್ (ಸಾಂಕೇತಿಕ ಚಿತ್ರ)

ಹಣಕ್ಕೆ ಬದಲಾಗಿಯಾಗಿ 'ವೇಳೆ' ಕರೆನ್ಸಿಯಾಗಬಹುದೇ? ಟೈಮ್ ಡೊನೇಷನ್ ಸಾಧ್ಯವೇ? (ಹಣಕ್ಲಾಸು)

ಹಣಕ್ಲಾಸು-370-ರಂಗಸ್ವಾಮಿ ಮೂಕನಹಳ್ಳಿ

ಹಣಕ್ಕಿಂತ ಹೆಚ್ಚಿನ ಮೌಲ್ಯ ಹೊಂದಿರುವುದು ಕೇವಲ ಎರಡು ವಿಷಯಗಳು ಮಾತ್ರ ಒಂದು ಜ್ಞಾನ ಮತ್ತೊಂದು ವೇಳೆ. ಹಣವನ್ನ ನಾವೆಲ್ಲಾ ಕರೆನ್ಸಿ, ಅಂದರೆ ವಿನಿಮಯ ಮಾಧ್ಯಮವನ್ನಾಗಿ ಬಳಸಿಕೊಳ್ಳುತ್ತಿದ್ದೇವೆ. ಹಣದ ಜೊತೆಗೆ ವೇಳೆಯನ್ನ ಕೂಡ ಬೆಸೆದಿದ್ದೇವೆ. ಹೀಗಾಗಿ ಹಣದ ಮೌಲ್ಯದಲ್ಲಿ ಏರುಪೇರಾಗುತ್ತದೆ ಎನ್ನುವುದನ್ನ ಕೂಡ ಹಿಂದಿನ ಅನೇಕ ಹಣಕ್ಲಾಸು ಲೇಖನಗಳಲ್ಲಿ ಬರೆದಿದ್ದೇನೆ. ಹಣಕ್ಕಿಂತ ಅತ್ಯಂತ ಪ್ರಬಲವಾದ ಕರೆನ್ಸಿ ವೇಳೆ ಮಾತ್ರ. ಜ್ಞಾನವನ್ನ ನಾವು ಕರೆನ್ಸಿ ರೂಪದಲ್ಲಿ ಬಳಸಲು ಸಾಧ್ಯವಿದೆ. ಜ್ಞಾನವನ್ನ ಕರೆನ್ಸಿಯಾಗಿ ಬಳಸಿದರೆ ಸಮಾಜದಲ್ಲಿ ಸುಖ ಶಾಂತಿ ಹೆಚ್ಚಾಗುತ್ತದೆ. ಆದರೆ ಮನುಷ್ಯನ, ಅದರಲ್ಲೂ ಹಣಕಾಸಿನ ಆಟದಲ್ಲಿ ಮೇಲಿರುವವರಿಗೆ ಇದು ಬೇಕಿಲ್ಲ. ಅವರ ಹಿಡಿತ ಪ್ರಬಲವಾಗೇ ಉಳಿಯಲು ಏನು ಬೇಕು ಅದನ್ನ ಅವರು ಮಾಡಿಯೇ ತಿರುತ್ತಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಜ್ಞಾನಾ ಕರೆನ್ಸಿಯಾಗುವುದು ಸಾಧ್ಯವಿಲ್ಲದ ಮಾತು. ಆದರೆ ಹಣದ ಬದಲು, ಅಥವಾ ಹಣದ ಜೊತೆ ಜೊತೆಯಲ್ಲೇ ವೇಳೆ ಕೂಡ ಕರೆನ್ಸಿಯಾಗಬಹುದೇ? ಎನ್ನುವ ಸಂಶಯಗಳು ಇಂದಿಗೆ ಶುರುವಾಗಿದೆ.

ವೇಳೆ? ವೇಳೆ ಹೇಗೆ ಕರೆನ್ಸಿಯಾಗಲು ಸಾಧ್ಯ ಎನ್ನುವವರಿಗೆ ಒಂದು ಸಣ್ಣ ಉದಾಹರಣೆಯನ್ನ ನೀಡುತ್ತೇನೆ. ಮುಂಬರುವ ದಿನಗಳಲ್ಲಿ ಇದು ಸಾಧ್ಯ ಎನ್ನುವ ದೃಷ್ಟಿಯಿಂದ ಈ ಉದಾಹರಣೆಯನ್ನ ನೀಡುತ್ತಿದ್ದೇನೆ. ನೀವು ಒಂದಷ್ಟು ಸಾಲ ಮಾಡಿರುತ್ತೀರಿ ಎಂದುಕೊಳ್ಳಿ, ಸಾಲದ ಸಮಯದಲ್ಲಿ ನಿಮ್ಮಿಂದ ಸಾಲ ವಾಪಸ್ಸು ಕೊಡದೆ ಹೋದ ಸಮಯದಲ್ಲಿ ನಿಮ್ಮ ಬದುಕಿನ ಒಂದಷ್ಟು ವರ್ಷಗಳನ್ನ ಸಾಲದ ಬದಲಿಗೆ ಸಾಲ ಕೊಟ್ಟವರು ಅಥವಾ ಅವರು ಹೇಳಿದವರಿಗೆ ಕೊಡಬೇಕು ಎನ್ನುವುದನ್ನ ಬರೆಸಿಕೊಂಡಿರುತ್ತಾರೆ. ಹೀಗಾಗಿ ಸಾಲ ತೀರಿಸಲು ಆಗದ ಸಮಯದಲ್ಲಿ ನಿಮ್ಮ ಜೀವನದ ಒಂದಷ್ಟು ವರ್ಷಗಳನ್ನ, ಅಂದರೆ ಬಾಕಿ ಎಷ್ಟಿದೆ ಎನ್ನುವುದರ ಮೇಲೆ ತೆಗೆದುಕೊಳ್ಳಲಾಗುತ್ತದೆ. ತಿಂಗಳಿಗೆ, ದಿನಕ್ಕೆ ಇಷ್ಟು ಎಂದು ಹಣವನ್ನ ನಿಗದಿಪಡಿಸಲಾಗುತ್ತದೆ. ಅದರ ಆಧಾರದ ಮೇಲೆ ಬಾಕಿ ಹಣ ಎಷ್ಟಿದೆ ಅಷ್ಟಕ್ಕೇ ಸಮಯವನ್ನ ಪಡೆದುಕೊಳ್ಳಲಾಗುತ್ತದೆ. ಇನ್ನೊಂದು ಉದಾಹರಣೆ ನೋಡಿ , ಹತ್ತು ಲಕ್ಷ ಸಾಲ ಬಾಕಿಯಿದ್ದರೆ, ಮತ್ತು ನಿಮ್ಮ ವಾರ್ಷಿಕ ವೇತನ ಐದು ಲಕ್ಷವಿದ್ದರೆ, ನಿಮ್ಮ ಬದುಕಿನ ಎರಡು ವರ್ಷವನ್ನ ತಂತ್ರಜ್ಞಾನದ ಮೂಲಕ ತೆಗೆದುಕೊಂಡು ಅದನ್ನ ಬೇರೆಯವರಿಗೆ ವರ್ಗಾಯಿಸುವುದು. ಇಂದಿಗೆ ಈ ಮಾತುಗಳು ಕಪೋಲಕಲ್ಪಿತ ಎನ್ನಿಸಬಹುದು, ಯಾವುದೋ ಸೈಂಟಿಫಿಕ್ ಮೂವಿಯ ಕಥಾಹಂದರ ಎನ್ನಿಸಬಹುದು. ಆದರೆ ಇಂದಿಗೆ ಇಂತಹುದು ಸಾಧ್ಯವಿಲ್ಲ ಎನ್ನುವಂತಿಲ್ಲ. ನಮ್ಮ ಪುರಾಣಗಳಲ್ಲಿ ಯಯಾತಿ ಎನ್ನುವ ರಾಜನ ಕಥೆಯೊಂದು ಬರುತ್ತದೆ. ಯಯಾತಿ ಇನ್ನಷ್ಟು ವರ್ಷ ಬದುಕಲಿ ಎನ್ನುವ ಕಾರಣಕ್ಕೆ ಅವನ ಮಗ ತನ್ನ ಯೌವನವನ್ನ ಅಂದರೆ ತನ್ನ ವೇಳೆಯನ್ನ ಯಯಾತಿಗೆ ಧಾರೆಯೆರೆಯುತ್ತಾನೆ ಎನ್ನುವ ಉಲ್ಲೇಖವಿದೆ. ಅಂದಿನ ಪುರಾಣ ಕಥೆಗಳಲ್ಲಿ ಉಲ್ಲೇಖವಾದ ಅದೆಷ್ಟೋ ವಿಷಯಗಳನ್ನ ಇಂದು ವಿಜ್ಞಾನ ಸಾಧಿಸಿ ತೋರಿಸಿದೆ. ಹೀಗಾಗಿ ಟೈಮ್ ಡೊನೇಷನ್ ಎನ್ನುವ ಈ ಪರಿಕಲ್ಪನೆಗೆ ಜೀವ ಇನ್ನೊಂದಷ್ಟು ವರ್ಷದಲ್ಲಿ ಬರುವ ಸಾಧ್ಯತೆಗಳನ್ನ ಅಲ್ಲಗೆಳೆಯಲು ಸಾಧ್ಯವಿಲ್ಲ. ಮನುಷ್ಯ ತನ್ನ ಉಗಮದ ಸಮಯದಿಂದ ಚಿರಂಜೀವಿಯಾಗಬೇಕು ಎನ್ನುವ ಹೆಬ್ಬಯಕೆಯನ್ನ ಹೊಂದಿದ್ದಾನೆ. ಟೈಮ್ ಡೊನೇಷನ್ ಎನ್ನುವುದು ಪುರಾಣಗಳಲ್ಲಿ ಉಲ್ಲೇಖವಾಗಿದೆ, ವಿಜ್ಞಾನ ಅದನ್ನ ಜಾರಿಗೆ ತಂದರೆ, ಸಂಪನ್ಮೂಲಗಳ ಮೇಲೆ ಹಿಡಿತ ಹೊಂದಿರುವ ಕೆಲವರು ಚಿರಂಜೀವಗಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಒಮ್ಮೆ ಗಮನಿಸಿ ನೋಡಿ ಈಗಿರುವ ವ್ಯವಸ್ಥೆ ಕೂಡ ವೇಳೆಯ ಮೇಲೆ ಆಧಾರವಾಗೇ ಕೆಲಸ ನಡೆಸುತ್ತಿದೆ. ಅಂದರೆ ಮೂವತ್ತು ದಿನಕ್ಕೆ ತಿಂಗಳು ಎನ್ನುತ್ತೇವೆ, ನಿತ್ಯವೂ ಎಂಟು ಗಂಟೆಗಳ ಕಾಲ ಮೂವತ್ತು ದಿನವೂ ಕೆಲಸ ಮಾಡಿದರೆ ಇಷ್ಟು ಹಣ, ವೇತನ ಎನ್ನುವುದನ್ನ ನಿಗದಿಗೊಳಿಸುತ್ತೇವೆ. ಸೇವೆ ನೀಡುವವರಿಗೂ ಕೂಡ ಇದೆ ಅನ್ವಯವಾಗುತ್ತದೆ. ಅಂದರೆ ಗಂಟೆಗೆ ಇಷ್ಟು ಹಣ ಎನ್ನುವುದು ನಿರ್ಧಾರವಾಗಿರುತ್ತದೆ. ಜಗತ್ತಿನ ಎಲ್ಲೆಡೆ ಬಹುತೇಕ ಎಲ್ಲರೂ ತಮ್ಮ ಸಮಯವನ್ನ ಹಣ ಸಂಪಾದನೆಗೆ ಎಂದು ಮೀಸಲಿಡಲೇಬೇಕು. ಅದೇ ಆಗುತ್ತಿದೆ. ಗಮನಿಸಿ ನೋಡಿ ದಿನದ 24 ಗಂಟೆಗಳಲ್ಲಿ ನಾವು 8 ಗಂಟೆಯನ್ನ ನಿದ್ರೆಗೆ ಎಂದು ಮೀಸಲಿಡಬೇಕು. ಅಂದರೆ ನಮ್ಮ ಜೀವಿತಾವಧಿಯ ಮೂರನೇ ಒಂದು ಭಾಗ ನಮ್ಮದಲ್ಲ. ಅದನ್ನ ನಿದ್ರಾವಸ್ಥೆಯಲ್ಲಿ ಕಳೆದು ಬಿಡುತ್ತೇವೆ. ಉಳಿದ ಎರಡು ಭಾಗದಲ್ಲಿ ಒಂದು ಭಾಗ ಕೆಲಸಕ್ಕೆ, ಹಣ ಸಂಪಾದನೆಗೆ ಎಂದು ನಾವು ಅದನ್ನ ಬೇರೆಯವರಿಗೆ ಮಾರಿ ಬಿಡುತ್ತೇವೆ. ಉಳಿದದ್ದು ಕೇವಲ ಒಂದು ಭಾಗ ಅಂದರೆ 8 ಗಂಟೆ, ಅದರಲ್ಲೂ ದಿನ ನಿತ್ಯ ಮಾಡಲೇ ಬೇಕಾದ ನಿತ್ಯಕರ್ಮಗಳಿಗೆ ಎರಡು ತಾಸು ಕಳೆದು ಹೋಗುತ್ತದೆ. ಉಳಿದದ್ದು 6 ತಾಸು. ನಮ್ಮ ಬಳಿ ನಮ್ಮದು ಎಂದು ಉಳಿಯುವ 6 ತಾಸಿನಲ್ಲೂ ನಾವು ಅವರಿವರ ಬಗ್ಗೆ ಮಾತನಾಡುತ್ತ, ಕೆಲಸಕ್ಕೆ ಬಾರದ ದ್ವೇಷ, ಅಸೂಯೆಯಲ್ಲಿ ಒಂದಷ್ಟು ಸಮಯವನ್ನ ಕಳೆಯುತ್ತೇವೆ. ಮನೋಲ್ಲಾಸಕ್ಕೆ ಒಂದಷ್ಟು ವೇಳೆ ಮೀಸಲಿಡಬೇಕು. ಆತ್ಮೋನ್ನತಿಗೆ ವೇಳೆ ಎಲ್ಲಿ ಉಳಿಯಿತು? ಇದೊಂದು ಸಾಲದ ವಿಷ ವರ್ತುಲವಿದ್ದಂತೆ, ಒಮ್ಮೆ ಅದರಲ್ಲಿ ಸಿಲುಕಿಕೊಂಡರೆ ಮುಗಿಯಿತು. ಅದರಿಂದ ಹೊರಬರುವುದು ಕಷ್ಟ.

ಈಗ ಮತ್ತೆ ಟೈಮ್ ಡೊನೇಷನ್ ವಿಷಯಕ್ಕೆ ಬರೋಣ. ತಂತ್ರಜ್ಞಾನದ ಸಹಾಯದಿಂದ 18ರ ಹುಡುಗನಿಗೆ ನಿನ್ನ ಒಟ್ಟು ಜೀವಿತಾವಧಿ 70 ವರ್ಷ, ಅದರಲ್ಲಿ 18 ವರ್ಷ ಕಳೆದು ಹೋಗಿದೆ, ಉಳಿದ 52 ವರ್ಷದಲ್ಲಿ 10 ವರ್ಷವನ್ನ ಡೊನೇಟ್, ಅಥವಾ ಮಾರಿದರೆ ಉಳಿದ ಜೀವನವನ್ನ ನಡೆಸಲು ಬೇಕಾಗುವಷ್ಟು ಸಂಪನ್ಮೂಲದ, ಹಣದ ವ್ಯವಸ್ಥೆಯನ್ನ ಮಾಡಲಾಗುತ್ತದೆ ಎನ್ನುವ ಒಂದು ಒಪ್ಪಂದದ ಪತ್ರವನ್ನ ಇಟ್ಟರೆ ಏನಾಗಬಹುದು? ಉಳಿದ 42 ವರ್ಷದಲ್ಲಿ ಬಹಳಷ್ಟು ಸಮಯ ಬೇಕಾದದ್ದು ಮಾಡಲು ಸಮಯ ಸಿಗುತ್ತದೆ. ಅದ್ಯಾರೋ ಮಹತ್ವಾಕಾಂಕ್ಷಿ ವ್ಯಕ್ತಿ ಸಾವಿರ ವರ್ಷ ಬದುಕಬೇಕು ಎಂದು ಕೊಂಡವನಿಗೆ ಅದು ಸಾಧ್ಯವೂ ಆಗುತ್ತದೆ. ಇದು ಸಾಧ್ಯವೇ? ಗಮನಿಸಿ ಇದು ಸಾಧ್ಯವಿಲ್ಲ ಎಂದು ಯಾವುದನ್ನೂ ನಾವು ಇಂದು ಹೇಳಲು ಸಾಧ್ಯವಿಲ್ಲ. ಟೈಮ್ ಡೊನೇಷನ್ ಇಷ್ಟಕ್ಕೆ ನಿಲ್ಲುವುದಾದರೆ ಹೆಚ್ಚಿನ ತಕರಾರು ಇರುವುದಿಲ್ಲ. ಆದರೆ ಈ ತಂತ್ರಜ್ಞಾನ ಡೆವೆಲಪ್ ಆಗಿಬಿಟ್ಟರೆ ಇಲ್ಲೊಂದು ದೊಡ್ಡ ಸಮಸ್ಯೆ ಸೃಷ್ಟಿಯಾಗುತ್ತದೆ.

ನೀವು ಮನೆಯನ್ನ ಅಥವಾ ಕಾರು ಅಥವಾ ಇನ್ನ್ಯಾವುದೋ ವಿಷಯಕ್ಕೆ ಸಾಲ ತೆಗೆದುಕೊಂಡಿರುತ್ತೀರಿ ಎಂದುಕೊಳ್ಳಿ , ಅದನ್ನ ತೀರಿಸಲು ಸಾಧ್ಯವಿಲ್ಲ ಎಂದಾಗ ಇವತ್ತಿನ ವ್ಯವಸ್ಥೆಯಲ್ಲಿ ಮನೆಯನ್ನ, ಕಾರನ್ನ ಅಥವಾ ಇನ್ನ್ಯಾವುದೋ ಆಸ್ತಿಯನ್ನ ಮಟ್ಟುಗೋಲು ಹಾಕಿಕೊಳ್ಳುತ್ತಿದ್ದೇವೆ. ಹೊಸ ವ್ಯವಸ್ಥೆಯಲ್ಲಿ ಹೀಗೆ ಬೇಡ ಎಂದು ಬಿಡುವ ಅನುತ್ಪಾದಕ ಆಸ್ತಿಯನ್ನ ತೆಗೆದುಕೊಂಡು ಮಾಡುವುದೇನು? ನಿಮ್ಮ ವೇಳೆಯನ್ನ ಅದಕ್ಕೆ ಬದಲಾಗಿ ಮಟ್ಟುಗೋಲು ಹಾಕಿಕೊಳ್ಳಲು ಶುರು ಮಾಡುತ್ತಾರೆ. ಅಂದರೆ ನಿಂಗಿಷ್ಟವಿರಲಿ, ಬಿಡಲಿ ನಿಮ್ಮ ಜೀವನದ ಒಂದಷ್ಟು ವರ್ಷಗಳನ್ನ ವ್ಯವಸ್ಥೆ ಕಸಿದುಕೊಂಡು ಬಿಡುತ್ತದೆ.

ಇನ್ನು ಹಣವೇ ಪ್ರಧಾನವಾಗಿರುವ ವ್ಯವಸ್ಥೆಯಲ್ಲೇ ನಡೆಯುತ್ತಿರುವ ಅನೈತಿಕ, ಕಾನೂನುಬಾಹಿರ ಕೆಲಸಗಳು ಇನ್ನಷ್ಟು ಹೆಚ್ಚಾಗುತ್ತವೆ. ತಂತ್ರಜ್ಞಾನ ಕೆಲವೇ ಕೆಲವರ ಕೈಯಲ್ಲಿ ಸಿಕ್ಕಾಗ ಹೇಗೆ ಹಣವನ್ನ ಸಂಗ್ರಹಣೆಯಲ್ಲಿ ತೊಡಗಿದ್ದೇವೆ ಹಾಗೆ ಸಮಯವನ್ನ ಸಂಗ್ರಹಿಸಲು ಶುರು ಮಾಡುತ್ತಾರೆ. ಇದು ಪಡೆದುಕೊಳ್ಳಬಹುದಾದ ರೂಪವನ್ನ ಇಂದಿಗೆ ನಾವು ಊಹಿಸಲು ಕೂಡ ಸಾಧ್ಯವಿಲ್ಲ.

ಇದರ ಜೊತೆಗೆ ಹಣದ ಬದಲಿಗೆ ಇಡ್ಲಿ ಬೇಕೇ? ಒಂದು ನಿಮಿಷ ನೀಡು, ವಡೆಯೂ ಬೇಕೇ ಇನ್ನೊಂದು ನಿಮಿಷ ನೀಡು, ಹೀಗೆ ನಾವು ಇಂದು ಹಣವನ್ನ ನೀಡಿ ಏನೆಲ್ಲಾ ವಹಿವಾಟು ನಡೆಸುತ್ತಿದ್ದೇವೆ ಅವೆಲ್ಲವೂ ವೇಳೆಯನ್ನ ಅವಂಬಿಸುವಂತೆ ಮಾಡುವ ಒಂದು ಹೊಸ ವ್ಯವಸ್ಥೆ ಬಂದರೆ ಜಗತ್ತು ಯಾವ ರೀತಿಯಲ್ಲಿ ಬದಲಾಗಬಹುದು ಎನ್ನುವ ಯೋಚನೆಗಳು ಕೂಡ ಮನಸಿನಲ್ಲಿ ತಲ್ಲಣವನ್ನ ಹುಟ್ಟಿಸುತ್ತವೆ. ಆದರೆ ಗಮನಿಸಿ ಇಂದಿನ ವೇಗದ ಯುಗದಲ್ಲಿ ಎಲ್ಲವೂ ಸಾಧ್ಯ. ಇಂದಿಗೆ ಇದು ಕೇವಲ ಪರಿಕಲ್ಪನೆ ಎನ್ನಿಸಬಹುದು. ಮೂರು ದಶಕದ ಹಿಂದೆ ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಇರುತ್ತದೆ, ಅದರಲ್ಲಿ ಇಂಟರ್ನೆಟ್ ಇರುತ್ತದೆ, ನಗದು ಹಣದ ಸಹಾಯವಿಲ್ಲದೆ ಎಲ್ಲವೂ ಥಟ್ಟಂತ ಆಗುತ್ತದೆ ಎನ್ನುವ ಕನಸನ್ನ ಕಂಡವರಿದ್ದರು, ಇದ್ದಾರೆ, ಅವರನ್ನ ಅಂದಿನ ಸಮಾಜ ನೋಡಿ ನಕ್ಕಿತ್ತು. ಇದೆಲ್ಲಾ ಸಾಧ್ಯವೇ ಎಂದಿತ್ತು. ಅಂತಹ ಕಲ್ಪನೆಯನ್ನ ಕೂಡ ಜಗತ್ತಿನ 99.99 ಪ್ರತಿಶತ ಜನ ಮಾಡಿಕೊಂಡಿರಲಿಲ್ಲ, ಅವರಿಗೆ ಅದು ಅರ್ಥವೂ ಆಗಿರಲಿಲ್ಲ. ಇವತ್ತಿಗೆ ಟೈಮ್ ಡೊನೇಷನ್ ಕೂಡ ಅಂತಹುದೇ ಒಂದು ಯೋಜನೆ, ಪರಿಕಲ್ಪನೆ.

ಕೊನೆಮಾತು: ಜ್ಞಾನ ಮತ್ತು ಸೇವೆಯನ್ನ ಪ್ರಮುಖವನ್ನಾಗಿ ಅಂದರೆ ಕರೆನ್ಸಿಯನ್ನಾಗಿ ಮಾಡಿಕೊಂಡು ಇಂಕಾ ನಾಗರೀಕತೆ ಹತ್ತಿರತ್ತಿರ ಐನೂರು ವರ್ಷ ಸುಖವಾಗಿ ಬಾಳಿದ ಉದಾಹರಣೆ ನಮಗೆ ಇತಿಹಾಸದಲ್ಲಿ ಸಿಗುತ್ತದೆ. ಅದು ಎಲ್ಲರಿಗೂ ಸಮಬಾಳು -ಸಮಪಾಲು ಎನ್ನುವ ತತ್ವದಲ್ಲಿ ಕಟ್ಟಿದ ಸಮಾಜ. ಅಲ್ಲಿ ಶಾಂತಿ, ನಂಬಿಕೆ, ವಿಶ್ವಾಸದ ಜೊತೆಗೆ ಬದುಕು ಸುಂದರವಾಗಿತ್ತು. ಹಣದ ಜೊತೆಗೆ ಸಮಯವನ್ನ ಬೆಸೆದ ಕಾರಣ ಹಣದುಬ್ಬರ ಇತ್ಯಾದಿಗಳ ಸೃಷ್ಟಿಯಾಗಿ ಬದುಕು ಇಂದಿನ ಸ್ಥಿತಿಗೆ ಬಂದು ನಿಂತಿದೆ. ಇನ್ನು ವೇಳೆಯೇ ಕರೆಸ್ಸಿಯಾಗಿಬಿಟ್ಟರೆ? ಟೈಮ್ ಡೊನೇಷನ್ ಎನ್ನುವ ಪರಿಕಲ್ಪನೆ ನಿಜವಾಗಿ ಬಿಟ್ಟರೆ? ಹೊಸ ಅರ್ಥ ವ್ಯವಸ್ಥೆ, ವಿಶ್ವ ವ್ಯವಸ್ಥೆ ಹೇಗಿರಬಹುದು? ಒಂದಂತೂ ನಿಜ, ಇಂದಿಗಿಂತ ಹೆಚ್ಚಿನ ಅಸ್ಥಿರತೆಯಂತೂ ಖಂಡಿತ ಇರಲಿದೆ .

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Related Stories

No stories found.

Advertisement

X
Kannada Prabha
www.kannadaprabha.com