ಗೌಟ್ ಸಮಸ್ಯೆ (ಕುಶಲವೇ ಕ್ಷೇಮವೇ)

ಇಂದು ನಮ್ಮ ಬದಲಾದ ಜೀವನಶೈಲಿಯಿಂದಾಗಿ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಇವುಗಳಲ್ಲಿ ಗೌಟ್ ಕೂಡ ಒಂದು. ಗೌಟ್ ಸಂಧಿವಾತದ (ಆರ್ಥ್ರೈಟಿಸ್) ಒಂದು ರೂಪ. ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು ಇದರ ಪ್ರಮುಖ ಲಕ್ಷಣಗಳಲ್ಲಿ ಒಂದು. 
ಗೌಟ್ ಸಮಸ್ಯೆ
ಗೌಟ್ ಸಮಸ್ಯೆ

ಇಂದು ನಮ್ಮ ಬದಲಾದ ಜೀವನಶೈಲಿಯಿಂದಾಗಿ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಇವುಗಳಲ್ಲಿ ಗೌಟ್ ಕೂಡ ಒಂದು. ಗೌಟ್ ಸಂಧಿವಾತದ (ಆರ್ಥ್ರೈಟಿಸ್) ಒಂದು ರೂಪ. ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು ಇದರ ಪ್ರಮುಖ ಲಕ್ಷಣಗಳಲ್ಲಿ ಒಂದು. ಅಧಿಕ ರಕ್ತದೊತ್ತಡ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, ಮಧುಮೇಹ ಮತ್ತು ಸ್ಥೂಲಕಾಯತೆಯಂತಹ ಸಹವರ್ತಿ ಕಾಯಿಲೆಗಳು ಇರುವವರಲ್ಲಿ ಇದು ಕಾಣಿಸಿಕೊಳ್ಳುವುದು ಸಾಮಾನ್ಯ.

ಗೌಟ್ ಉಂಟಾಗಲು ಕಾರಣವೇನು?
ರಕ್ತದಲ್ಲಿ ತ್ಯಾಜ್ಯ ಯೂರಿಕ್ ಆಮ್ಲವು ಕಿಡ್ನಿಯಿಂದ ಮೂತ್ರದ ಮೂಲಕ ಸಾಮಾನ್ಯವಾಗಿ ವಿಸರ್ಜನೆಯಾಗುತ್ತದೆ. ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚು ಉತ್ಪತ್ತಿಯಾದಾಗ ಅಥವಾ ಮೂತ್ರದ ಮೂಲಕ ಸರಿಯಾಗಿ ವಿಸರ್ಜನೆ ಆಗದೇ ಇದ್ದಾಗ ರಕ್ತದಲ್ಲಿ ಹಾಗೆಯೇ ಉಳಿದುಕೊಂಡು ಬಿಡುತ್ತದೆ. ಆಗ ಗೌಟ್ ಉಂಟಾಗುತ್ತದೆ. ಕೀಲುಗಳಲ್ಲಿ ಯೂರಿಕ್ ಆಮ್ಲದ ಹರಳುಗಳು ಸಂಗ್ರಹವಾಗಿ ನೋವು ಮತ್ತು ಊತ ಉಂಟುಮಾಡುತ್ತವೆ. ಅನಾರೋಗ್ಯಕರ ಆಹಾರ ಅಭ್ಯಾಸಗಳಿಂದ ಈ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಸ್ತ್ರೀಯರಲ್ಲಿ ಪುರುಷರಿಗಿಂತ ಅಧಿಕವಾಗಿ ಕಾಣಿಸುತ್ತದೆ. ಅದರಲ್ಲಿಯೂ 30 ಅಥವಾ 40 ವರ್ಷ ವಯಸ್ಸಿನ ನಂತರ ಈ ಬಗ್ಗೆ ಹುಷಾರಾಗಿರಬೇಕು.

ಗೌಟ್ ಸೌಮ್ಯ ಮತ್ತು ತೀವ್ರ ರೂಪದಲ್ಲಿ ಬರಬಹುದು. ಸೌಮ್ಯವಾದ ಗೌಟ್ ಒಂದು ಭಾಗದಲ್ಲಿ ಬಾಧೆ ಉಂಟು ಮಾಡುತ್ತದೆ. ಆದರೆ ತೀವ್ರವಾದ ಗೌಟ್ ಒಂದೇ ಬಾರಿಗೆ ದೇಹದಲ್ಲಿನ ಅನೇಕ ಕೀಲುಗಳ ಮೇಲೆ ಪರಿಣಾಮ ಬೀರಬಹುದು. ಈ ಸ್ಥಿತಿಯನ್ನು ‘ಪಾಲಿಯಾರ್ಟಿಕ್ಯುಲರ್ ಗೌಟ್’ ಎಂದು ಕರೆಯಲಾಗುತ್ತದೆ. ರಕ್ತದಲ್ಲಿ ಯೂರಿಕ್ ಆಸಿಡ್ ಮಟ್ಟವು 7mg/dl ಗಿಂತ ಹೆಚ್ಚಾದಾಗ ಮೂತ್ರಪಿಂಡದ ಕಲ್ಲುಗಳು ಮತ್ತು ಗೌಟ್‌ನಂತಹ ಸಮಸ್ಯೆಗಳು ಉಂಟಾಗುತ್ತವೆ. ಕಾಲು, ಕೀಲು, ಹೆಬ್ಬೆರಳು ಮತ್ತು ಭುಜದಲ್ಲಿ ಗೌಟ್ ಕಾಣಿಸಿಕೊಳ್ಳಬಹುದು. ಗೌಟ್ ವ್ಯಾಧಿ ಬೇರೆ ಬೇರೆ ಕೀಲುಗಳಿಗೆ ಹರಡುವುದು, ಪಾದಗಳು, ಪಾದದ ಕೀಲುಗಳು, ಮೊಣಕಾಲು, ಮೊಣಕೈಗಳು, ಬೆರಳುಗಳು, ಕಿವಿಗಳ ಹತ್ತಿರ ಮತ್ತು ಮಣಿಗಂಟುಗಳಲ್ಲಿ ಕೂಡ ಕಾಣಿಸಿಕೊಳ್ಳಬಹುದು.

ನಿರಂತರವಾಗಿ ಮಾಂಸ ಮತ್ತು ಮೀನು, ಏಡಿ, ಸೀಗಡಿಯಂತಹ ಸಮುದ್ರಾಹಾರ ಸೇವಿಸುವವರು, ಅತಿಯಾಗಿ ಮದ್ಯಪಾನ ಮಾಡುವವರು, ಮಧುಮೇಹ ಅಥವಾ ಅಧಿಕ ರಕ್ತದೊತ್ತಡದಂತಹ ವೈದ್ಯಕೀಯ ಪರಿಸ್ಥಿತಿಗಳಿಂದ ಬಳಲುತ್ತಿರುವವರು, ಕುಟುಂಬದಲ್ಲಿಯೇ ಗೌಟ್ ಇರುವವರು ಮತ್ತು ಬೊಜ್ಜು ಹೆಚ್ಚಾಗಿರುವ ಜನರು ಗೌಟ್ ಸಮಸ್ಯೆಯನ್ನು ಅನುಭವಿಸುತ್ತಾರೆ.

ಗೌಟ್ ಲಕ್ಷಣಗಳೇನು?
ಗೌಟ್ ಬಂದರೆ ಕೀಲಿನ ಸುತ್ತಲೂ ಚರ್ಮ ಕೆಂಪಗೆ ಅಥವಾ ನೇರಳೆ ಬಣ್ಣಕ್ಕೆ ತಿರುಗುವುದು, ಕೀಲುಗಳ ಕದಲಿಕೆ ಕಷ್ಟವಾಗುವುದು ಮತ್ತು ಕೆಲವು ಬಾರಿ ಇದು ಶಸ್ತ್ರಚಿಕಿತ್ಸೆಯಾದ ಬಳಿಕವೂ ಕಾಣಿಸಿಕೊಳ್ಳಬಹುದು.

ಕೆಲವರಲ್ಲಿ ಗೌಟ್ ಒಂದು ವಾರ ಅಥವಾ ಹಲವಾರು ತಿಂಗಳವರೆಗೂ ಕಾಣಿಸಿಕೊಳ್ಳಬಹುದು. ಇನ್ನೂ ಕೆಲವರಲ್ಲಿ 6 ತಿಂಗಳು ಅಥವಾ 2 ವರ್ಷಗಳ ಬಳಿಕ ಮತ್ತೆ ಮರುಕಳಿಸಬಹುದು. ರಕ್ತ ಪರೀಕ್ಷೆ, ಇಎಸ್‌ಆರ್, ಎಕ್ಸ್-ರೇ, ಅಲ್ಟ್ರಾಸೌಂಡ್ ಮತ್ತು ಕೀಲುಗಳಲ್ಲಿನ ದ್ರವನ್ನು ತೆಗೆದು ಪರೀಕ್ಷಿಸಿದಾಗ ಈ ವ್ಯಾಧಿಯನ್ನು ನಿರ್ಧರಿಸಬಹುದು. 

ಗೌಟ್ ತಡೆಗೆ ಮುಂಜಾಗ್ರತೆ ಮುಖ್ಯ
ಗೌಟ್ ಬರದಂತೆ ಹಲವಾರು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬಹುದು. ಮೊದಲಿಗೆ ಮಾಂಸಾಹಾರ ಮತ್ತು ಸಮುದ್ರಾಹಾರವನ್ನು ಕಡಿಮೆ ಮಾಡಬೇಕು. ಸೇವಿಸದಿದ್ದರೆ ಬಹಳ ಒಳ್ಳೆಯದು. ಮದ್ಯಪಾನ ಮಾಡಲೇಬಾರದು. ಸಕ್ಕರೆ ಇರುವ ಪಾನೀಯಗಳು ಅದರಲ್ಲಿಯೂ ವಿಶೇಷವಾಗಿ ಹಣ್ಣಿನ ರಸಗಳು ಮತ್ತು ಸಕ್ಕರೆಯ ಸೋಡಾಗಳನ್ನು ಹೆಚ್ಚಾಗಿ ಕುಡಿಯಬಾರದು. ಜೊತೆಗೆ ಬಿಳಿ ಬ್ರೆಡ್, ಕೇಕ್ ಮತ್ತು ಕುಕೀಗಳಂತಹ ಸಂಸ್ಕರಿಸಿದ ಕಾರ್ಬೋ ಹೈಡ್ರೇಟುಗಳಿರುವ ಆಹಾರಗಳಿಂದ ದೂರವಿರುವುದು ಒಳ್ಳೆಯದು. ದೈನಂದಿನ ಆಹಾರದಲ್ಲಿ ಚರ‍್ರಿಯಂತಹ ತಾಜಾ ಹಣ್ಣುಗಳು, ಆಲೂಗಡ್ಡೆ, ಹಾಗಲಕಾಯಿ, ಬಟಾಣಿ, ಅಣಬೆಗಳು, ಬದನೆಕಾಯಿ ಮತ್ತು ಕಡು ಹಸಿರು ಎಲೆಗಳ ತರಕಾರಿಗಳು, ಅರಿಶಿಣ, ಶುಂಠಿ, ಮಸೂರ್ ಧಾಲ್, ಬೀನ್ಸ್, ಸೋಯಾಬೀನ್ ಮತ್ತು ಟೋಫು, ಓಟ್ಸ್, ಕಂದು ಅಕ್ಕಿ ಮತ್ತು ಬಾರ್ಲಿ ಸೇರಿವೆ. ಕಡಿಮೆ ಕೊಬ್ಬಿನ ಅಂಶವಿರುವ ಡೈರಿ ಪದಾರ್ಥಗಳು, ಮೊಟ್ಟೆ, ಹಸಿರು ಟೀ, ತೆಂಗಿನಕಾಯಿ, ಆಲಿವ್ ಮತ್ತು ಅಗಸೆ ತೈಲಗಳು ಇದ್ದರೆ ಬಹಳ ಉತ್ತಮ.

ನಾವು ಪ್ರತಿದಿನ ಸೇವಿಸುವ ಆಹಾರದಲ್ಲಿ ನಾರಿನಂಶ ಇರುವುದು ಬಹಳ ಮುಖ್ಯ. ನಾರಿನಂಶ ದೇಹವು ಯೂರಿಕ್ ಆಮ್ಲವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಉದಾಹರಣೆಗೆ, ಒಣಗಿದ ಹಣ್ಣುಗಳು, ಸಲಾಡ್ಗಳು, ಓಟ್ಸ್, ಬೀಜಗಳು ಇತ್ಯಾದಿ. ಸಾಕಷ್ಟು ನೀರನ್ನು ದಿನವೂ ಕುಡಿಯುವುದರಿಂದ ಮೂತ್ರಪಿಂಡಗಳು ಯೂರಿಕ್ ಆಮ್ಲವನ್ನು ವೇಗವಾಗಿ ಹೊರಹಾಕಲು ಸಹಾಯ ಮಾಡುತ್ತದೆ. ಹೊರಗಡೆ ಹೋದಾಗ ಎಲ್ಲಾ ಸಮಯದಲ್ಲೂ ನೀರಿನ ಬಾಟಲಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಆಗಾಗ ನೀರು ಕುಡಿಯಿರಿ.

ಗೌಟ್ ಬಂದವರು ವ್ಯಾಯಾಮವನ್ನು ಆದಷ್ಟೂ ನಿಯಮಿತವಾಗಿ ಮಾಡಬೇಕು. ಸೌಮ್ಯ ವ್ಯಾಯಾಮಗಳನ್ನು ಮಾಡುತ್ತಾ ಬಂದರೆ ಕೀಲುಗಳು ಬಲಗೊಳ್ಳುತ್ತವೆ. ವ್ಯಾಯಾಮ, ವಿಶೇಷವಾಗಿ ಯೋಗ, ಒಟ್ಟಾರೆ ಆರೋಗ್ಯವನ್ನು ಬೆಂಬಲಿಸುತ್ತದೆ. ವ್ಯಾಯಾಮ ಮಾಡಿದಾಗ ಬೆವರುವಿಕೆ ಹೆಚ್ಚಾಗಿ ಬೆವರಿನ ಮೂಲಕ ಹೆಚ್ಚಿನ ಯೂರಿಕ್ ಆಮ್ಲ ದೇಹದಿಂದ ಹೊರಹೋಗುತ್ತದೆ. ಆಯುರ್ವೇದಲ್ಲಿ ಗೌಟ್ ಗೆ ಉತ್ತಮ ಚಿಕಿತ್ಸೆ ಇದೆ. ಪಂಚಕರ್ಮದ ವಿರೇಚನ ಮತ್ತು ಬಸ್ತಿಗಳು ವಿಶೇಷ ಉಪಶಮನಕಾರಿಯಾಗಿವೆ. ಜೊತೆಗೆ ಔಷಧಿಗಳು ಲಭ್ಯವಿವೆ. ಹೆಚ್ಚಿನ ವಿವರಗಳಿಗಾಗಿ ನಿಮ್ಮ ಹತಿರದ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com