ಡಿಕೆಶಿ ರಣತಂತ್ರಕ್ಕೆ ಬಿಜೆಪಿ ದಿಲ್ಲಿ ನಾಯಕರೇ ಕಂಗಾಲು! (ಸುದ್ದಿ ವಿಶ್ಲೇಷಣೆ)

ಯಗಟಿ ಮೋಹನ್ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಿನೇ ದಿನೇ ತನ್ನ ಯೋಜನೆಗಳ ಮೂಲಕ ಜನಪ್ರಿಯವಾಗುತ್ತಿರುವುದರ ಜತೆಗೇ ಸಂಘಟನಾತ್ಮಕವಾಗಿಯೂ ಗಟ್ಟಿಯಾಗುತ್ತಿರುವುದೂ ದಿಲ್ಲಿಯ ನಾಯಕರಿಗೆ ಆತಂಕ ತಂದಿದೆ.
ಡಿಸಿಎಂ ಡಿಕೆ ಶಿವಕುಮಾರ್, ಪ್ರಧಾನಿ ಮೋದಿ- ಅಮಿತ್ ಶಾ
ಡಿಸಿಎಂ ಡಿಕೆ ಶಿವಕುಮಾರ್, ಪ್ರಧಾನಿ ಮೋದಿ- ಅಮಿತ್ ಶಾ

ಸಮರ್ಥ ನಾವಿಕನಿಲ್ಲದೆ ದಿಕ್ಕು ತಪ್ಪಿದ ನೌಕೆ ರಾಜ್ಯ ಬಿಜೆಪಿ!

ವಿಧಾನಸಭೆ ಚುನಾವಣೆಯಲ್ಲಿ ಕರುಣಾಜನಕ ಸೋಲಿನ ನಂತರ ಕಂಗೆಟ್ಟಿರುವ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಪಕ್ಷ ಸೋತಿದ್ದೇಕೆ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಇನ್ನೂ ಸಿಕ್ಕಿಲ್ಲ. ಲೋಕಸಭೆ ಚುನಾವಣೆಗೆ ದಿನಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿಯ ಸ್ಥಿತಿಯನ್ನು ಹೊಯ್ದಾಡುತ್ತಿರುವ ನೌಕೆಗೆ ಹೋಲಿಸಿದರೆ ಅದೇ ಸೂಕ್ತ.

ಚುನಾವಣೆ ಸೋಲಿನಿಂದ ಆಘಾತಕ್ಕೆ ಒಳಗಾಗಿರುವ ಪಕ್ಷದ ಉನ್ನತ ನಾಯಕರಿಗೆ ಕರ್ನಾಟಕದಲ್ಲಿ ಪಕ್ಷದ ಸಂಘಟನೆ, ರಾಜ್ಯ ಘಟಕ್ಕೆ ಸಮರ್ಥ ಅಧ್ಯಕ್ಷರ ಆಯ್ಕೆ, ವಿಧಾನ ಮಂಡಲದ ಉಭಯ ಸದನಗಳಿಗೆ ಪ್ರತಿಪಕ್ಷದ ನಾಯಕರ ನೇಮಕದ ವಿಚಾರದಲ್ಲಿ ಇನ್ನೂ ಒಂದು ಖಚಿತ ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತಿಲ್ಲ. 

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಿನೇ ದಿನೇ ತನ್ನ ಯೋಜನೆಗಳ ಮೂಲಕ ಜನಪ್ರಿಯವಾಗುತ್ತಿರುವುದರ ಜತೆಗೇ ಸಂಘಟನಾತ್ಮಕವಾಗಿಯೂ ಗಟ್ಟಿಯಾಗುತ್ತಿರುವುದೂ ದಿಲ್ಲಿಯ ನಾಯಕರಿಗೆ ಆತಂಕ ತಂದಿದೆ. ಇಂತಹ ಸನ್ನಿವೇಶದಲ್ಲೇ ಹತ್ತಿರ ಬರುತ್ತಿರುವ ಲೋಕಸಭಾ ಚುನಾವಣೆಗೆ ಸನ್ನದ್ಧವಾಗಬೇಕಿದ್ದ ಪಕ್ಷಕ್ಕೆ ಅಸ್ತಿತ್ವಕ್ಕಾಗಿ ಹೋರಾಟ ನಡೆಸಬೇಕಾದ ಸ್ಥಿತಿ ಬಂದೊದಗಿದೆ. ಇದೇ ಸಂದರ್ಭದಲ್ಲಿ ಬಿಜೆಪಿಯ ಐದಕ್ಕೂ ಹೆಚ್ಚು ಪ್ರಭಾವಿ ಶಾಸಕರಿಗೆ ಕಾಂಗ್ರೆಸ್ ಗಾಳ ಹಾಕಿದ್ದು ಅವರು ಪಕ್ಷ ತೊರೆಯುವುದೂ ಬಹುತೇಕ ಖಚಿತವಾಗಿದೆ. ಅತೃಪ್ತರನ್ನು ಮನವೊಲಿಸುವ ಮುಖಂಡರ ಪ್ರಯತ್ನಗಳು ಫಲ ಕೊಟ್ಟಂತೆ ಕಾಣುತ್ತಿಲ್ಲ. ಮತ್ತೊಂದು ಕಡೆ ಲೋಕಸಭಾ ಚುನಾವಣೆಗೆ  ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್ , ಶತಾಯಗತಾಯ ರಾಜ್ಯದಲ್ಲಿ 20 ಸ್ಥಾನಗಳನ್ನು ಗೆಲ್ಲಲು ರಣ ತಂತ್ರ ರೂಪಿಸಿದೆ. ಇಷ್ಟೆಲ್ಲ ರಾಜಕೀಯ ಚಟುವಟಿಕೆಗಳು ಆಡಳಿತ ಪಕ್ಷದಲ್ಲಿ ನಡೆದಿದ್ದರೂ ಬಿಜೆಪಿಯಲ್ಲಿ ಇನ್ನೂ ಚುನಾವಣೆಗೆ ತಯಾರಿಯೇ ಆರಂಭ ಆಗಿಲ್ಲ. ದಿಲ್ಲಿ ನಾಯಕರ ಆದೇಶಗಳಿಗೆ ಕಾಯುತ್ತಿದೆ. 

ಇದನ್ನೂ ಓದಿ: ಇಕ್ಕಟ್ಟಿನ ಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (ಸುದ್ದಿ ವಿಶ್ಲೇಷಣೆ)
 
ಬಿಜೆಪಿಗೆ ಡಿಕೆಶಿಯೇ ತಲೆ ನೋವು: ಬಹು ಮುಖ್ಯವಾಗಿ ಬಿಜೆಪಿ ಆತಂಕಕ್ಕೆ ಕಾರಣ ಐದಕ್ಕೂ ಹೆಚ್ಚು ಶಾಸಕರು ಪಕ್ಷ ತೊರೆದು ಕಾಂಗ್ರೆಸ್ ಸೇರಲು ಆ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಿರುವುದು. ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈಗಾಗಲೇ ಬಿಜೆಪಿಯ ಅತೃಪ್ತ ಶಾಸಕರೊಂದಿಗೆ ಎರಡು ಸುತ್ತು  ಮಾತುಕತೆ ನಡೆಸಿದ್ದು ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಬೆಂಗಳೂರು ನಗರದ ಶಾಸಕರಾದ ಎಸ್.ಟಿ. ಸೋಮಶೇಖರ್, ಕೆ. ಗೋಪಾಲಯ್ಯ, ಬೈರತಿ ಬಸವರಾಜು, ಮುನಿರತ್ನ ಅವರಿಗೆ ಕಾಂಗ್ರೆಸ್ ಗಾಳ ಹಾಕಿದೆ. ಈ ಪೈಕಿ ಮುನಿರತ್ನ ಅವರನ್ನು ಹೊರತುಪಡಿಸಿ ಉಳಿದವರು ಬಹುತೇಕ ಶಿವಕುಮಾರ್ ಆಹ್ವಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ಮಾತುಕತೆ ನಡೆದಿದೆ.  

ಸದ್ಯಕ್ಕೆ ಯಾವುದೇ ಷರತ್ತುಗಳಿಲ್ಲದೇ ಕಾಂಗ್ರೆಸ್ ಸೇರಿದರೆ ಮುಂದೆ ನಡೆಯುವ ವಿಧಾನಸಭಾ ಉಪ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳುವುದರ ಜತೆಗೇ ಸೂಕ್ತ ಸ್ಥಾನಮಾನ ನೀಡುವ ಭರವಸೆ ಡಿ.ಕೆ.ಶಿವಕುಮಾರ್ ಅವರಿಂದ ದೊರೆತಿದೆ. ಈ ಶಾಸಕರು ಕಾಂಗ್ರೆಸ್ ಸೇರಲು ಮಂತ್ರಿಗಿರಿ ನೀಡಬೇಕೆಂಬ ಷರತ್ತು ವಿಧಿಸಿದ್ದಾರೆ. ಇವರ ಜತೆಗೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಕೂಡಾ ಕಾಂಗ್ರೆಸ್ ಸೇರುವ ತಯಾರಿಯಲ್ಲಿದ್ದು ಮಾತುಕತೆ ನಡೆದಿದೆ. ಮಂತ್ರಿಗಿರಿನೀಡಿಕೆ ವಿಚಾರದಲ್ಲಿ ಲೋಕಸಭೆ ಚುನಾವಣೆ ನಂತರ ಗಮನ ಹರಿಸುವ ಆಶ್ವಾಸನೆಯನ್ನು ಶಿವಕುಮಾರ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. 

ಇದೊಂದು ವಿಚಾರ ಬಗೆಹರಿದರೆ ಈ ಐವರು ಶಾಸಕರು ಕಾಂಗ್ರೆಸ್ ಸೇರಲು ಮುಹೂರ್ತ ನಿಗದಿಯಾದಂತೆಯೆ. ಒಂದು ಮಾಹಿತಿ ಪ್ರಕಾರ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಅಗತ್ಯ ಅನುದಾನ ನೀಡುವುದು, ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಬೆಂಬಲಿಗರಿಗೆ ಟಿಕೆಟ್ ನೀಡುವುದೂ ಸರಿದಂತೆ ಎಲ್ಲ ಹಿತಾಸಕ್ತಿಗಳನ್ನು ಕಾಯುವ  ಭರಸೆಯೂ ಶಿವಕುಮಾರ್ ಅವರಿಂದ ದೊರೆತಿದೆ. ಹೀಗಾಗಿ ಬಿಜೆಪಿಯಿಂದ ಹೊರ ಬರಲು ಈಶಾಸಕರು ಅಂತಿಮ ಹಂತದ ತಯಾರಿಯಲ್ಲಿದ್ದಾರೆ.

ಬರೀ ಶಾಸಕರಷ್ಟೇ ಅಲ್ಲ ಬೆಂಗಳೂರಿನ ಸುಮಾರು 30ಕ್ಕೂ ಹೆಚ್ಚು ಬಿಜೆಪಿಯ ಮಾಜಿ ಕಾರ್ಪೊರೇಟರುಗಳು, ಪ್ರಭಾವಿ ಮುಖಂಡರೂ ಕಾಂಗ್ರೆಸ್ ನತ್ತ ಮುಖ ಮಾಡಿದ್ದರೆ,ಪಕ್ಷ ತೊರೆಯಲು ಸನ್ನದ್ಧರಾಗಿರುವ ಶಾಸಕರು ಮತ್ತಿತರೆ ಮುಖಂಡರನ್ನು ಹಿಡಿದಿಟ್ಟುಕೊಳ್ಳುವ ಸಮರ್ಥ ನಾಯಕರ ಕೊರತೆ ಆ ಪಕ್ಷಕ್ಕೆ ಕಾಡುತ್ತಿದೆ. ಮಾಜಿ ಸಚಿವ ಸಿ.ಟಿ.ರವಿ , ಸಂಸದ ಡಿ.ವಿ.ಸದಾನಂದ ಗೌಡ ಸೇರಿದಂತೆ ಕೆಲ ಪ್ರಮುಖರು ಈ ಅತೃಪ್ತರನ್ನು ಮನವೊಲಿಸುವ ಮಾಡಿದ್ದಾರಾದರೂ ಅದು ಫಲ ನೀಡಿಲ್ಲ.

ಡಿಕೆಶಿ ವಿರುದ್ಧ ವಿಫಲವಾದ ಬಿಜೆಪಿ ಅಸ್ತ್ರಗಳು: ಬಿಜೆಪಿ ಆತಂಕಕ್ಕೆ ಕಾರಣವಾಗಿರುವುದು ಮುಖ್ಯವಾಗಿ ಇದೇ ಸಂಗತಿ. ಕಾಂಗ್ರೆಸ್ ನಲ್ಲಿ ದಿನೇ ದಿನೇ ಪ್ರಬಲರಾಗುತ್ತಿರುವ ಹಾಗೆಯೇ ಮುಂದಿನ ಎರಡೂವರೆ ವರ್ಷಗಳ ನಂತರ ಮುಖ್ಯಮಂತ್ರಿ ಆಗುತ್ತಾರೆ ಎಂದು ಸುದ್ದಿಯಾಗಿರುವ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ತಂತ್ರಗಾರಿಕೆ ಎದುರಿಸುವುದು ಹೇಗೆ ಎಂಬ ದೊಡ್ಡ ಪ್ರಶ್ನೆ ಆ ಪಕ್ಷದ ರಾಷ್ಟ್ರೀಯ ನಾಯಕರಿಗೂ ಕಾಡುತ್ತಿದೆ. ಐಟಿ, ಇಡಿ, ಸಿಬಿಐ ಹೀಗೆ ಇದ್ದಬದ್ದ  ಮಹಾನ್ ಅಸ್ತ್ರಗಳನ್ನೆಲ್ಲ ಬಳಸಿ ಕಟ್ಟಿ ಹಾಕುವ ಯಾವುದೇ ತಂತ್ರಗಳಿಗೂ ಶಿವಕುಮಾರ್ ಬಗ್ಗಿಲ್ಲ. ಎಲ್ಲವನ್ನೂ ಕಾನೂನಾತ್ಮಕವಾಗಿ ಎದುರಿಸುತ್ತಿದ್ದಾರೆ. 

ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಪ್ರಚಂಡ ದಿಗ್ವಿಜಯ ತಂದುಕೊಡುವ ಮೂಲಕ ಪಕ್ಷದಲ್ಲಿ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಂಡಿರುವ ಶಿವಕುಮಾರ್ ಉರುಳಿಸುತ್ತಿರುವ ಒಂದೊಂದೇ ರಾಜಕೀಯ ದಾಳಗಳು ಬಿಜೆಪಿಯನ್ನು ಸಂಕಷ್ಟಕ್ಕೆ ದೂಡಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಹೆಚ್ಚು ಸ್ಥಾನ ಗಳಿಸಿದರೆ ಆ ಯಶಸ್ಸಿನ ಸಿಂಹಪಾಲೂ ಕೆಪಿಸಿಸಿ ಅಧ್ಯಕ್ಷರಾಗಿ ಅವರದ್ದೇ ಆಗುತ್ತದೆ.

ಖರ್ಗೆ, ಸಿದ್ದರಾಮಯ್ಯ ಬೆಂಬಲ: ಈಗಾಗಲೇ ತಮ್ಮ ರಾಜತಂತ್ರಗಳ ಮೂಲಕ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ವಿರೋಧಿ ನಾಯಕರ ಗಮನ ಸೆಳೆದಿರುವ ಶಿವಕುಮಾರ್ ಆಕರ್ಷಣೆಯ ಕೇಂದ್ರ ಬಿಂದು ಆಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಒಂದಂಕಿಗೆ ಇಳಿಸಿದರೆ ರಾಷ್ಟ್ರ ಮಟ್ಟದಲ್ಲಿ ಬೀಗುತ್ತಿರುವ ಬಿಜೆಪಿ ನಾಯಕರಿಗೆ ಭಾರೀ ಮರ್ಮಾಘಾತ ನೀಡಿದಂತಾಗುತ್ತದೆ, ಇದು ದಕ್ಷಿಣದಲ್ಲಿ ಭದ್ರವಾಗಿ ನೆಲೆಯೂರುವ ಬಿಜೆಪಿಯ ಪ್ರಯತ್ನಗಳನ್ನು ವಿಫಲಗೊಳಿಸಿದಂತಾಗುತ್ತದೆ ಎಂಬ ಲೆಕ್ಕಾಚಾರವೂ ಇದರ ಹಿಂದಿದೆ. 

ಪ್ರಮುಖವಾಗಿ ಬಿಜೆಪಿಯನ್ನು ಸಂಪೂರ್ಣವಾಗಿ ದುರ್ಬಲಗೊಳಿಸುವ ವಿಚಾರದಲ್ಲಿ ಶಿವಕುಮಾರ್ ಬೆಂಬಲಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಂತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ನಡೆದಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವ ದೂರುಗಳ ಬಗ್ಗೆ ತನಿಖೆಗೆ ಆದೇಶಿಸಿರುವ ಸರ್ಕಾರ ಒಂದೊಂದೇ ಹಗರಣಗಳನ್ನು ಪತ್ತೆ ಹಚ್ಚುತ್ತಿದೆ. ಈ ಮೂಲಕ ನಗರದ ಬಿಜೆಪಿಯ ಕೆಲವು ಶಾಸಕರನ್ನು ಕಟ್ಟಿಹಾಕುವ ಶಿವಕುಮಾರ್ ತಂತ್ರಕ್ಕೆ ಸಿದ್ದರಾಮಯ್ಯ ಅಸ್ತು ಎಂದಿದ್ದಾರೆ. ತನಿಖೆ ನಡೆದು ವರದಿ ಬಂದ ನಂತರ ಅದನ್ನೇ ಬಿಜೆಪಿ ವಿರುದ್ಧ ಅಸ್ತ್ರವಾಗಿ ಪ್ರಯೋಗಿಸುವ ಉದ್ದೇಶ ಇದರ ಹಿಂದಿದೆ. ಈ ಕಾರಣಕ್ಕೇ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಶಿವಕುಮಾರ್ ವಿರುದ್ಧ ಕಿಡಿ ಕಾರಿದ್ದಾರೆ. 

ಈಗಾಗಲೇ ಅವರ ಕ್ಢೇತ್ರದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಮೂಲಕ ಮೊದಲ ಅಸ್ತ್ರ ಪ್ರಯೋಗ ಆಗಿದೆ. ಮುನಿರತ್ನ ಅವರೇನೋ ಯಾವುದೇ ಕಾರಣಕ್ಕೂ ತಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರುವುದಿಲ್ಲ ಎಂದು ಘೋಷಿಸಿದ್ದಾರೆ. ಆದರೆ ರಾಜಕಾರಣದಲ್ಲಿನ ಬೆಳವಣಿಗೆಗಳು ಸಂದರ್ಭ ಸನ್ನಿವೇಶಕ್ಕೆ ಅನುಸಾರವಾಗಿ ಬದಲಾಗುವುದರಿಂದ ಮುಂದಿನ ದಿನಗಳಲ್ಲಿ ಅವರ ಈ ನಿಲುವು ಬದಲಾಗಲೂ ಬಹುದು .
   
ಅತೃಪ್ತ ಬಿಜೆಪಿ ಸಂಸದರಿಗೂ ಕಾಂಗ್ರೆಸ್ ಗಾಳ?: ನತ್ತಬರೀ ವಲಸಿಗ ಶಾಸಕರಷ್ಟೇ ಅಲ್ಲ. ಬಿಜೆಪಿ ಈ ಬಾರಿ ಹಾಲಿ 10 ಕ್ಕೂ ಹೆಚ್ಚು ಸಂಸದರಿಗೆ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡುವುದಿಲ್ಲ ಎಂಬ ಸುದ್ದಿಗಳಿವೆ. ಇದರ ಮಾಹಿತಿ ಪಡೆದಿರುವ ಕಾಂಗ್ರೆಸ್ ನಾಯಕರು ಈಗಾಗಲೇ ಈ ಪೈಕಿ ಕೆಲವರನ್ನು ಸಂಪರ್ಕಿಸಿದ್ದು ಚುನಾವಣೆಯಲ್ಲಿ ಟಿಕೆಟ್ ನೀಡುವ ಭರವಸೆಯನ್ನೂ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಯ ಕರಾವಳಿ ಹಾಗೂ ಮಲೆನಾಡು ಭಾಗದ ಕೆಲವು ಮುಂಚೂಣಿ ನಾಯಕರೇ ಪಕ್ಷ ತೊರೆಯುವ ಸೂಚನೆಗಳಿದ್ದು ಅವರೆಲ್ಲ ಕಾಂಗ್ರೆಸ್ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ. 

ಯಡಿಯೂರಪ್ಪ ನಿಗೂಢ ಮೌನ!: ಇಷ್ಟೆಲ್ಲ ಬೆಳವಣಿಗೆಗಳು ಬಿಜೆಪಿಯಲ್ಲಿ ನಡೆಯುತ್ತಿದ್ದರೂ ಬಿಜೆಪಿ ರಾಷ್ಟ್ರೀಯ ಸಮಿತಿಯ ಪದಾಧಿಕಾರಿಗಳಲ್ಲಿ ಪ್ರಮುಖರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೌನಕ್ಕೆ ಶರಣಾಗಿದ್ದಾರೆ. ಲೋಕಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಸದ್ಯದಲ್ಲೇ ಕೇಂದ್ರ ಸಮಿತಿಗೆ ಕಳಿಸುವುದಾಗಿ ಅವರೇನೋ ತಿಳಿಸಿದ್ದಾರೆ. ಆದರೆ ಪರಿಸ್ಥಿತಿ ಪಕ್ಷದಲ್ಲಿ ಅವರಂದುಕೊಂಡಂತೆ ಇಲ್ಲ.

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com