ಕಾಂಗ್ರೆಸ್ ಶಾಸಕರ ಪತ್ರ ಸಮರ: ಸೂತ್ರಧಾರಿ ಯಾರು?! (ಸುದ್ದಿ ವಿಶ್ಲೇಷಣೆ)

ಯಗಟಿ ಮೋಹನ್ಕಾಂಗ್ರೆಸ್ ಅತೃಪ್ತ ಶಾಸಕರ ಒಂದು ಬೃಹತ್ ಬಂಡಾಯ ಸದ್ಯಕ್ಕೆ ತಣ್ಣಗಾಗಿದೆ. ಆದರೆ ಇದು ಇಲ್ಲಿಗೇ ನಿಲ್ಲುತ್ತದೆಯೆ? ಈ ಸಹಿ ಸಂಗ್ರಹದ ಹಿಂದಿರುವ ನಿಜವಾದ ಸೂತ್ರದಾರರು ಯಾರು?
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್
Updated on

ಕಾಂಗ್ರೆಸ್ ಅತೃಪ್ತ ಶಾಸಕರ ಒಂದು ಬೃಹತ್ ಬಂಡಾಯ ಸದ್ಯಕ್ಕೆ ತಣ್ಣಗಾಗಿದೆ. ಆದರೆ ಇದು ಇಲ್ಲಿಗೇ ನಿಲ್ಲುತ್ತದೆಯೆ? ಈ ಸಹಿ ಸಂಗ್ರಹದ ಹಿಂದಿರುವ ನಿಜವಾದ ಸೂತ್ರಧಾರರು ಯಾರು? 

ಈಗ ತಲೆ ಎತ್ತಿರುವುದು ಇದೇ ಪ್ರಶ್ನೆ. ಕೆಲವು ಸಚಿವರ ಕಾರ್ಯವೈಖರಿ ಕುರಿತಂತೆ ಅಸಮಾಧಾನಗೊಂಡಿರುವ ಕಾಂಗ್ರೆಸ್ ನ 30 ಹಿರಿಯ ಶಾಸಕರು ಶಾಸಕಾಂಗ ಪಕ್ಷದ ನಾಯಕರೂ ಆದ ಮುಖ್ಯಮಂತ್ರಿಗಳಿಗೆ ಪತ್ರ ಬರೆದ್ದು ವಿವಾದಕ್ಕೆ ಕಾರಣವಾಗಿದೆ.

ಮೊದಲು ಮಾಧ್ಯಮಗಳಿಗೆ ಬಂದ 11 ಮಂದಿ ಶಾಸಕರದ್ದು ಎನ್ನಲಾದ ಪತ್ರದಲ್ಲಿ ನೇರವಾಗಿ ಸರ್ಕಾರಕ್ಕೆ ಮುಜುಗರವಾಗುವಂತಹ ವಿಷಯದ ಪ್ರಸ್ತಾಪ ಇತ್ತು. ಅದು ವಿವಾದದ ಕಿಡಿ ಎಬ್ಬಿಸಿದಾಗ ಎಚ್ಚೆತ್ತ ಈ ಶಾಸಕರು ಮೊದಲು ಬಿಡುಗಡೆಯಾದ ಪತ್ರ ನಕಲಿಯಾಗಿದ್ದು ಅದರಲ್ಲಿ ಪ್ರಸ್ತಾಪಿಸಿರುವ ವಿವಾದಾತ್ಮಕ ಅಂಶಗಳು ತಮ್ಮ ಅಭಿಪ್ರಾಯವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಕಲಿ ಪತ್ರದ ಬಗ್ಗೆ ತನಿಖೆ ನಡೆಸುವಂತೆ ಪೊಲಿಸರಿಗೂ ದೂರು ನೀಡಿದ್ದಾರೆ. 

ಆದರೆ ಈ ಶಾಸಕರು ಖಚಿತಪಡಿಸಿದ ಒಂದು ಅಂಶ ಎಂದರೆ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಕೋರಿ ಮಾತ್ರ ಎರಡು ಸಾಲಿನ ಪತ್ರವನ್ನು ಮುಖ್ಯಮಂತ್ರಿಗಳಿಗೆ ಬರೆದಿರುವುದು ಸತ್ಯ ಎಂಬುದು. ಗುರುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಪತ್ರದ ಕುರಿತು ಪ್ರಸ್ತಾಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದು, ಸದ್ಯಕ್ಕೆ ಅದು ತಣ್ಣಗಾಗಿದೆ.

ಈ  ಬೆಳವಣಿಗೆ ಒಂದು ಕಡೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶಾಸಕರ ಅತೃಪ್ತಿಯ ವಿಚಾರ ಪ್ರಸ್ತಾಪಿಸಿ ಸರ್ಕಾರ ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದೇ ಕಷ್ಟವಾಗಿದೆ. ಈ ಬಾರಿ ಶಾಸಕರುಗಳಿಗೆ ನೀಡಲಾಗುತ್ತಿದ್ದ ಕ್ಷೇತ್ರಾಭಿವೃದ್ಧಿ ಅನುದಾನ ನೀಡಲಾಗುವುದಿಲ್ಲ, ವಿವಿಧ ಇಲಾಖೆಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಈ ವರ್ಷ ಕೈಗೆತ್ತಿಕೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ ಎಂಬ ಆಘಾತಕರ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ. ಈ ವಿಚಾರದ ಬಗ್ಗೆಯೂ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆಯಾಗಿದೆ. ಒಂದಂತೂ ಸ್ಪಷ್ಟ. ರಾಜ್ಯದಲ್ಲಿ ಬಹುನಿರೀಕ್ಷೆಯೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಸದ್ಯದ ಸ್ಥಿತಿಯಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹಣ ಹೊಂದಿಸುವ ಸ್ಥಿತಿಯಲ್ಲಿ ಇಲ್ಲ ಎಂಬುದು.

ಶಾಸಕಾಂಗ ಪಕ್ಷದ ಸಭೆಗೆ ಆಗ್ರಹಿಸಿ ಕಾಂಗ್ರೆಸ್ ನ ಬಿ.ಆರ್. ಪಾಟೀಲ್,ಬಸವರಾಜ ರಾಯರೆಡ್ಡಿ ಸೇರಿದಂತೆ ಸುಮಾರು 30 ಶಾಸಕರು ಮುಖ್ಯಮಂತ್ರಿಗೆ ಪತ್ರ ಬರೆದು ಆಗ್ರಹಿಸಿದ್ದರ ಹಿನ್ನೆಲೆ ಕೆದುಕಿದರೆ ಕೌತುಕದ ಸಂಗತಿಗಳು ಹೊರ ಬರುತ್ತವೆ.  ಪತ್ರಬರೆದ ಶಾಸಕರ ಪೈಕಿ ಹೆಚ್ಚಿನವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಬಳಗಕ್ಕೆ ಸೇರಿದವರು. ಜನತಾ ಪರಿವಾರದ ಕಾಲದಿಂದ ಸಿದ್ದರಾಮಯ್ಯ ಜತೆ ಅತ್ಯಂತ ಆಪ್ತ ಒಡನಾಟ ಹೊಂದಿರುವವರು. ಅಧಿಕಾರದ ಶಕ್ತಿ ಪ್ರದರ್ಶನದ ಸಂದರ್ಭ ಬಂದರೆ ಬೆಂಬಲಕ್ಕೆ ಗಟ್ಟಿಯಾಗಿ ನಿಲ್ಲುವಷ್ಟರ ಮಟ್ಟಿಗೆ ನಿಷ್ಠೆ ಹೊಂದಿರುವವರು. ಇದು ವಸ್ತು ಸ್ಥಿತಿ. ಇಷ್ಟು ಆಪ್ತತೆ ಹೊಂದಿರುವ ಈ ಹಿರಿಯ ಶಾಸಕರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಖ್ಯಮಂತ್ರಿಗಳು ಕಾಲಾವಕಾಶ ಕೊಡಲಿಲ್ಲವೆ? ಹಾಗಿದ್ದರೆ ಸಿದ್ದರಾಮಯ್ಯನವರಿಗೆ ಈ ಸಮಸ್ಯೆ ಗೊತ್ತಿರಲಿಲ್ಲವೆ? ಎಂಬುದೇ ಸದ್ಯದ ಪ್ರಶ್ನೆ. 

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಈ ಹಿಂದೆ ಎರಡು ಬಾರಿ ನಿಗದಿಯಾಗಿ ಮುಂದೂಡಲ್ಪಟ್ಟಿದ್ದು,ಈ ಮಾಸಾಂತ್ಯದಲ್ಲಿ ಸಭೆ ನಡೆಯುವ ಬಗ್ಗೆ ಸ್ವತಹಾ ಸಿದ್ದರಾಮಯ್ಯ ಅವರೇ ಖಚಿತ ಪಡಿಸಿದ್ದರು. ಹಾಗಿದ್ದರೂ ಆಪ್ತ ಶಾಸಕರು ಪತ್ರ ಬರೆದದಿದ್ದೇಕೆ? ಎಂಬ ಪ್ರಶ್ನೆಗೆ ನಾನಾ ವಿಶ್ಲೇಷಣೆಗಳು ಕಾಂಗ್ರೆಸ್ ವಲಯದಿಂದಲೇ ಕೇಳಿ ಬರುತ್ತಿವೆ. ಅಸಮಾಧಾನಿತ ಶಾಸಕರ ಪೈಕಿ ಬಸವರಾಜ ರಾಯರೆಡ್ಡಿ, ಬಿ.ಆರ್. ಪಾಟೀಲ್, ಡಾ. ಅಜಯ್ ಸಿಂಗ್, ಶಿವಲಿಂಗೇಗೌಡ ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಮಂತ್ರಿಗಿರಿಯ ನಿರೀಕ್ಷೆಯಲ್ಲಿದ್ದರು. ಆದರೆ ಸಚಿವ ಸಂಫುಟ ರಚನೆ ಸಂದರ್ಭದಲ್ಲಿ ಅದು ಈಡೇರಲಿಲ್ಲ. 
   
ಅದಕ್ಕೆ ಕಾರಣ ದಿಲ್ಲಿಯ ಹೈಕಮಾಂಡ್ ಮಟ್ಟದಲ್ಲಿ ಈ ಹೆಸರುಗಳಿಗೆ ಮಾನ್ಯತೆ ದೊರಕಲಿಲ್ಲ. ತಮ್ಮ ನಿಷ್ಠರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗದೆ ಇಕ್ಕಟ್ಟಿಗೆ ಸಿಕ್ಕ ಸಿದ್ದರಾಮಯ್ಯ ವಾಸ್ತವ ಸಂಗತಿಯನ್ನು ಮನವರಿಕೆ ಮಾಡಿಕೊಟ್ಟು ತಾಳ್ಮೆಯಿಂದ ಇರಬೇಕೆಂದೂ, ಮುಂದಿನ ದಿನಗಳಲ್ಲಿ ಎಲ್ಲರ ಹಿತಾಸಕ್ತಿ ರಕ್ಷಿಸಲಾಗುವುದೆಂದೂ ಈ ಶಾಸಕರಿಗೆ ಭರವಸೆ ನೀಡಿದ್ದರು.

ಆದರೆ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಕೆಲವು ಸಚಿವರು ಈ ಶಾಸಕರ ಮಾತು ಕೇಳದೇ ತೀರ್ಮಾನಗಳನ್ನು ತೆಗೆದುಕೊಂಡಾಗ ಅತೃಪ್ತಿಯ ಬೆಂಕಿಗೆ ತುಪ್ಪ ಸುರಿದಂತಾಯ್ತು. ಮಖ್ಯವಾಗಿ ಗ್ರಾಮೀಣ ಅಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಯವರ ಬಗ್ಗೆ ಹೈದರಾಬಾದ್ ಕರ್ನಾಟಕ ಭಾಗದ ಶಾಸಕರು ಅಸಮಾಧಾನಗೊಂಡಿ ದ್ದಾರೆ. ಸ್ಥಳೀಯ ಶಾಸಕರನ್ನು ಅವರು ಲೆಕ್ಕಕ್ಕೇ ಇಟ್ಟಿಲ್ಲ ಎಂಬ ದೂರುಗಳು ಸಿದ್ದರಾಮಯ್ಯ ಅವರ ವರೆಗೂ ಹೋಗಿದೆ. ಆದರೂ ಯಾವುದೇ ಪರಿಹಾರ ಸಿಕ್ಕಿಲ್ಲ. ಪ್ರಿಯಾಂಕ್ ತಮ್ಮದಲ್ಲದ ಇಲಾಖೆಗಳಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆಕ್ಷೇಪಗಳಿವೆ.
 
ಈ ಸಮಸ್ಯೆಯ ಜತೆಗೇ ಪಕ್ಷದ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸಿದ್ದರಾಮಯ್ಯ ವಿರುದ್ಧ ನೇರಾ ನೇರ ಕದನಕ್ಕಿಳಿದಿದ್ದಾರೆ. ಇತ್ತೀಚೆಗೆ ನಡೆದ ಬಿಲ್ಲವ ಸಮುದಾಯದ ಸಭೆಯಲ್ಲಿ ತಮಗೆ ಸಚಿವ ಸ್ಥಾನ ನೀಡದ ಕಾರಣಕ್ಕಾಗಿ ಆಕ್ರೋಶವನ್ನು ಹೊರ ಹಾಕಿದ್ದಾರೆ. ಮುನಿದಿರುವ ಅವರನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಎಚ್. ಮುನಿಯಪ್ಪ, ಡಾ. ಪರಮೇಶ್ವರ್ ಪಕ್ಷದ ಹಿರಿಯ ಮುಖಂಡ ಡಾ. ಬಿ.ಎಲ್.ಶಂಕರ್ ಸೇರಿದಂತೆ ಪ್ರಮುಖರು ಮನವೊಲಿಸಲು ಪ್ರಯತ್ನಿಸಿದ್ದಾರಾದರೂ ಅದು ಫಲ ನೀಡಿಲ್ಲ.

ಸೌಜನ್ಯಕ್ಕಾದರೂ ಹರಿಪ್ರಸಾದ್ ರನ್ನು ಕರೆದು ಸಿದ್ದರಾಮಯ್ಯ ಮಾತಾಡಿಲ್ಲ. ಕಡೆಗಣಿಸಿದ್ದಾರೆ. ವಿಶೇಷ ಎಂದರೆ ದಿಲ್ಲಿ ರಾಜಕಾರಣದಲ್ಲಿ ದಶಕಗಳಿಂದಲೂ ಪ್ರಭಾವಿಯಾಗಿದ್ದ ಹರಿಪ್ರಸಾದ್ ಗೆ ಮಂತ್ರಿಗಿರಿ ತಪ್ಪಿದ್ದು ಏಕೆ? ಎಂಬುದೇ ಕುತೂಹಲದ ಸಂಗತಿ. ಈ ಮೊದಲು ವಿಧಾನ ಮಂಡಲದ ಉಭಯ ಸದನಗಳ ಸದಸ್ಯರೇ ಆಗಿರದಿದ್ದ ಕಲಬುರ್ಗಿ ಜಿಲ್ಲೆಯ ಭೋಸರಾಜು ಹೈಕಮಾಂಡ್ ಕೃಪೆಯಿಂದ ಸಂಪುಟ ಸೇರಲು ಸಾಧ್ಯವಾದರೆ, ಹರಿಪ್ರಸಾದ್ ಗೆ ಆಗಲಿಲ್ಲ. ಇದು ಕುತೂಹಲದ ಅಂಶ. 

ಈ ಬೆಳವಣಿಗೆಗಳೆಲ್ಲವೂ ಸಿದ್ದರಾಮಯ್ಯನವರಿಗೆ ಗೊತ್ತಿಲ್ಲವೆಂದೇನಲ್ಲ. ಮುಖ್ಯಮಂತ್ರಿಗೆ ತನ್ನ ಪಕ್ಷವೂ ಸೇರಿದಂತೆ ಇಡೀ ರಾಜ್ಯದಲ್ಲಿ ನಡೆಯುತ್ತಿರುವ ವಿವಿಧ ಬೆಳವಣಿಗೆಗಳ ಬಗ್ಗೆ ದಿನನಿತ್ಯ ಪೊಲಿಸ್ ಗುಪ್ತಚರ ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಹಾಗಾಗಿ ಈ ಬೆಳವಣಿಗೆ ಅನಿರೀಕ್ಷಿತವೇನಲ್ಲ. ಹಾಗಿದ್ದೂ ಅದನ್ನು ಮೂಲದಲ್ಲೇ ತಡೆಯುವ ಪ್ರಯತ್ನ ಮಾಡಲಿಲ್ಲವೇಕೆ? ಎಂಬ ಪ್ರಶ್ನೆಗೆ ಉತ್ತರ ಹುಡುಕಿದರೆ ಸದ್ಯದ ಬೆಳವಣಿಗೆಯಲ್ಲಿ ಸಂದರ್ಭ ಒದಗಿ ಬಂದರೆ ತಮ್ಮ ಶಕ್ತಿ ಪ್ರದರ್ಶನಕ್ಕೂ ಸಿದ್ಧರಾಗಲು ಸಿದ್ದರಾಮಯ್ಯ ನಡೆಸಿರುವ ತಯಾರಿಯ ಒಂದು ಭಾಗವೇ ಈ ತಂತ್ರ ಎನ್ನಲಾಗುತ್ತಿದೆ. 

ಪಕ್ಷದ ಮೇಲೆ ಹಿಡಿತ ಸಾಧಿಸುವ ವಿಚಾರದಲ್ಲಿ ಹೈಕಮಾಂಡ್ ನಲ್ಲಿರುವ ಹಿರಿಯ ನಾಯಕರು ಹಾಗೂ ಸಿದ್ದರಾಮಯ್ಯ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಅದಕ್ಕಿಂತ ಹೆಚ್ಚಾಗಿ ಬೆರಳೆಣಿಕೆಯ ಮಂದಿ ಬಿಟ್ಟರೆ ಮೂಲ ಕಾಂಗ್ರೆಸ್ಸಿಗರು ಮತ್ತು ಅವರ ನಡುವಿನ ಕಂದಕ ನಿವಾರಣೆ ಆಗಿಲ್ಲ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ತಮ್ಮ ಆಪ್ತ ಬಳಗಕ್ಕೆ ಸೇರಿದವರನ್ನು ಅಭ್ಯರ್ಥಿಗಳಾಗಿ ಕಣಕ್ಕಿಳಿಸಲು ಅವರು ಸಿದ್ಧತೆ ನಡೆಸಿದ್ದಾರೆ. ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗಲೀ ಅಥವಾ ಹೈಕಮಾಂಡ್ ಆಗಲಿ ಅಡ್ಡ ಬರದಂತೆ ಮಾಡಲು ತಮ್ಮ ಶಕ್ತಿ ಪ್ರದರ್ಶನಕ್ಕೆ ಆಪ್ತ ಶಾಸಕರ ಪತ್ರ ರಾಜಕಾರಣದ ಮೂಲಕ ಮುನ್ನುಡಿ ಬರೆದಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. 

ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ ಆದ ನಂತರ ಬೆಂಗಳೂರಿಗೆ ಸಂಬಂಧಿಸಿದಂತೆ ಕೈಗೊಳ್ಳುತ್ತಿರುವ ಕೆಲವು ಸ್ವತಂತ್ರ ನಿರ್ಧಾರಗಳೂ ಸಿದ್ದರಾಮಯ್ಯನವರ ಅತೃಪ್ತಿಗೆ ಕಾರಣವಾಗಿದೆ. ಪರಿಸ್ಥಿತಿ ಹೀಗೇ ಬೆಳೆಯಲು ಬಿಟ್ಟರೆ ಸರ್ಕಾರ ಮತ್ತು ಪಕ್ಷದಲ್ಲಿ ಸಮಾನಾಂತರ ಅಧಿಕಾರ ಕೇಂದ್ರಗಳು ಹುಟ್ಟಿಕೊಂಡು ತನ್ನ ವಿರುದ್ಧವೇ ನಿಲ್ಲಬಹುದು ಎಂಬ ಅತಂಕವೂ ಅವರಲ್ಲಿದೆ. ಇದೆಲ್ಲದರ ಒಟ್ಟು  ಪ್ರತಿಫಲನವೇ ಶಾಸಕರ ಪತ್ರ ರಾಜಕಾರಣ ಎಂಬುದು ಗೊತ್ತಾಗುವ ಅಂಶ. ಆಗಾಗ ಅವರ ಪರಮಾಪ್ತ ಮಂತ್ರಿಗಳು,ಶಾಸಕರು ಅಧಿಕಾರ ಹಂಚಿಕೆಯ ಮಾತುಕತೆಯೇ ನಡೆದಿಲ್ಲ ಎಂದು ನೀಡುವ ಹೇಳಿಕೆಯ ಬಗ್ಗೆಯೂ ಸಿದ್ದರಾಮಯ್ಯ ಮೌನ  ಮೂಲ ಕಾಂಗ್ರೆಸ್ಸಿಗರಲ್ಲಿ ಆಕ್ರೋಶ ಮೂಡಿಸಿದೆ. ಸರ್ಕಾರ ಕೆಡವಲು ವಿದೇಶದಲ್ಲಿ ಕುಳಿತು ಸಂಚು ನಡೆಸಲಾಗುತ್ತಿದೆ ಎಂದು ಶಿವಕುಮಾರ್ ಹೇಳಿಕೆ ವಿಚಾರದಲ್ಲೂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡುವಾಗ ಅಂತರ ಕಾಯ್ದುಕೊಂಡರು. 

ಮರುಕಳಿಸಿದ ಇತಿಹಾಸ: ಹೆಗಡೆಯವರು ಮುಖ್ಯಮಂತ್ರಿ ಆಗಿದ್ದಾಗ ಅಂದಿನ ಜನತಾ ಸರ್ಕಾರದಲ್ಲಿ ಅದಕ್ಷ ಮತ್ತು ದುರಹಂಕಾರಿ ಸಚಿವರನ್ನು ಕೈಬಿಡಿ ಎಂಬ ಪತ್ರ ಸಮರ ನಡೆದಿತ್ತು. ಎಂ.ಎಸ್.ನಾರಾಯಣರಾವ್ (ಗಾಂಧಿ ನಗರದ ಶಾಸಕರಾಗಿದ್ದರು), ಡಾ. ಎನ್.ಎಸ್. ಹುಂಬರವಾಡಿ, ಡಾ. ಬಿ.ಎಂ. ತಿಪ್ಪೆಸ್ವಾಮಿ, ಚಳ್ಳಕೆರೆ ತಿಪ್ಪೆಸ್ವಾಮಿ ಇನ್ನಿತರ ಶಾಸಕರು ಅದರ ಮುಂಚೂಣಿಯಲ್ಲಿದ್ದರು. ನಂತರದ ದಿನಗಳಲ್ಲಿ ಅಂದು ಹೆಗಡೆಯವರ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಈಗಿನ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ಚಟುವಟಿಕೆಗೆ ನೀರೆರೆದರು. ಅದು ಮುಂದುವರಿದು ಹೆಗಡೆಯವರ ವಿರುದ್ಧ ಭಿನ್ನಮತೀಯ ಚಟುವಟಿಕೆ ಆರಂಭವಾಯಿತು. ರೇವಜಿತು, ಸಾರಾಯಿ ಬಾಟ್ಲಿಂಗ್ ಹಗರಣದ ಸಮಗ್ರವಾದ ವರದಿಗಳು ಪತ್ರಿಕೆಗಳಲ್ಲಿ ಪ್ರಕಟವಾಯಿತು. ಈ ಎರಡೂ ವರದಿಗಳ ನೇರ ಗುರಿ ಹೆಗಡೆಯವರೇ ಆಗಿದ್ದರೂ ವಾಸ್ತವವಾಗಿ ಆವತ್ತು ಗೌಡರ ಮುಖ್ಯ ಗುರಿ ಹೆಗಡೆಯವರ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದ ಡಾ. ಜೀವರಾಜ ಆಳ್ವ ಅವರಾಗಿದ್ದರು. ಮುಖ್ಯ ಮಂತ್ರಿ ಪಟ್ಟಕ್ಕೇರಬೇಕೆಂಬ ಗೌಡರ ಮಹತ್ವಾಕಾಂಕ್ಷೆ ಗೆ ಅಂದು ಡಾ.ಜೀವರಾಜ ಆಳ್ವ ಅಡ್ಡಗೋಡೆ ಆಗಿದ್ದರು.

ಈಗ ಈ ಪ್ರಸಂಗವನ್ನು ಇಲ್ಲಿ ನೆನಪಿಸಿಕೊಳ್ಳಲು ಕಾರಣ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಪಕ್ಷದಲ್ಲಿ ಬಂಡಾಯ ಹೊಗೆ ಆಡಲಾರಂಭಿಸಿದೆ. ಇದು ಮುಂದೆ ಯಾವ ಸ್ವರೂಪ ಪಡೆಯುತ್ತದೋ ನೋಡಬೇಕು.

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com