ಹೊಸ ವಿಶ್ವವ್ಯವಸ್ಥೆ ಬರೆಯಲು ಸಿದ್ಧವಾಗುತ್ತಿದೆ ಬ್ರಿಕ್ಸ್ ಒಕ್ಕೂಟ! (ಹಣಕ್ಲಾಸು)

ಹಣಕ್ಲಾಸು-374-ರಂಗಸ್ವಾಮಿ ಮೂಕನಹಳ್ಳಿ
ಬ್ರಿಕ್ಸ್ ಒಕ್ಕೂಟ
ಬ್ರಿಕ್ಸ್ ಒಕ್ಕೂಟ

ಬ್ರಿಕ್ಸ್ ಎನ್ನುವ ಪದವನ್ನು ನಾವು 2009 ರಿಂದ ಕೇಳಿಕೊಂಡು ಬಂದಿದ್ದೇವೆ. ಅವತ್ತಿಗೆ ಈ ಒಕ್ಕೂಟ ಈ ಮಟ್ಟಿಗೆ ಬೆಳೆಯಬಹುದು ಎನ್ನುವ ಕಲ್ಪನೆ ಯಾರಿಗೂ ಇರಲಿಲ್ಲ. ಬ್ರಿಕ್ ಇದ್ದದ್ದು ಬ್ರಿಕ್ಸ್ ಆಯ್ತು. ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ಸೌತ್ ಆಫ್ರಿಕಾ ಪದಗಳ ಮೊದಲ ಅಕ್ಷರವನ್ನು ಸೇರಿಸಿಕೊಂಡು ಬ್ರಿಕ್ಸ್ ಎನ್ನುವ ನಾಮಕರಣ ಮಾಡಿಕೊಂಡು ಹುಟ್ಟಿದ ಈ ಒಕ್ಕೂಟದ ಮುಖ್ಯ ಉದ್ದೇಶ ಜಾಗತಿಕ ಮಟ್ಟದಲ್ಲಿ ಅಮೇರಿಕಾ ತನ್ನ ಮೂಗಿನ ನೇರಕ್ಕೆ, ಏಕಪಕ್ಷೀಯ ತೀರ್ಮಾನವನ್ನು ತೆಗೆದುಕೊಂಡು ಅದನ್ನು ಜಗತ್ತಿನ ಇತರ ದೇಶಗಳ ಮೇಲೆ ಮಾಡುತ್ತಿದ್ದ ಹೇರಿಕೆಯನ್ನು ವಿರೋಧಿಸುವುದು, ಚೀನಾ ಮತ್ತು ರಷ್ಯಾ ಬಹಳ ಹಿಂದಿನಿಂದ ಅಮೆರಿಕಾದ ದ್ವಂದ್ವ ನೀತಿಯನ್ನು ವಿರೋಧ ಮಾಡಿಕೊಂಡು ಬಂದ ದೇಶಗಳು. ಮತ್ತು ಅಮೆರಿಕಾದ ದೇಶದ ಈ ರೀತಿಯ ನೀತಿಗಳಿಂದ ಸಾಕಷ್ಟು ತೊಂದರೆಯನ್ನು ಅನುಭವಿಸಿದ್ದ ದೇಶಗಳು.

ನೀವು ಗಮನಿಸಿ ನೋಡಿ, ಜಗತ್ತಿನ 40 ಪ್ರತಿಶತ ಜನಸಂಖ್ಯೆ ಈ ಐದು ದೇಶದಲ್ಲಿದ್ದಾರೆ. ಜಾಗತಿಕ ಜಿಡಿಪಿಯ 25 ಪ್ರತಿಶತಕ್ಕೂ ಹೆಚ್ಚು ಈ ಐದು ದೇಶಗಳು ಕಾಣಿಕೆ ನೀಡುತ್ತಿವೆ. ಪರಿಸ್ಥಿತಿ ಹೀಗಿದ್ದೂ ಸದಾ ಅಮೆರಿಕಾದ ತಾಳಕ್ಕೆ ಕುಣಿಯುವುದು ಚೀನಾ ಮತ್ತು ರಷ್ಯಾ ದೇಶಗಳಿಗೆ ಸುತರಾಂ ಇಷ್ಟವಿರಲಿಲ್ಲ. ಅವರು ಸಾಧ್ಯವಾದಾಗಲೆಲ್ಲ ಅಮೆರಿಕಾಕಕ್ಕೆ ಟಾಂಗ್ ನೀಡುವ ಕೆಲಸವನ್ನು ಮಾಡುತ್ತಿದ್ದರು. ಹೀಗೆ ಅಮೆರಿಕಾದ ಏಕಮುಖಿಯ ನೀತಿಗಳ ವಿರುದ್ಧ ಒಂದು ಒಕ್ಕೂಟ ಕಟ್ಟಿಕೊಂಡ ಮೇಲೆ ಇನ್ನಷ್ಟು ಬಲ ಬಂದಿದೆ. ಈ ಒಕ್ಕೂಟದ ಇನ್ನೊಂದು ಅತ್ಯಂತ ಬಲಶಾಲಿ ಮತ್ತು ಪ್ರಮುಖ ದೇಶವಾಗಿ ಭಾರತ ಹೊರಹೊಮ್ಮಿದೆ. ಜಾಗತಿಕ ಮಟ್ಟದಲ್ಲಿ ಇಂದು ಭಾರತ ಅತ್ಯಂತ ಗೌರವಾನ್ವಿತ ಸ್ಥಾನವನ್ನು ಪಡೆದುಕೊಂಡಿದೆ.

ಒಕ್ಕೂಟಕ್ಕೆ ಭಾರತ ಹೊಸ ಎಂಜಿನ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕಳೆದ ವಾರ ಜೋಹಾನ್ಸ್ ಬರ್ಗ್ ನಲ್ಲಿ ನಡೆದ 15ನೇ ಸಭೆಯಲ್ಲಿ ಒಕ್ಕೂಟದ ಐದು ದೇಶಗಳು ಈ ಒಕ್ಕೂಟಕ್ಕೆ ಹೊಸ ಆರು ದೇಶಗಳನ್ನು ಸೇರಿಸಿಕೊಳ್ಳಲು ತೀರ್ಮಾನವನ್ನು ಕೈಗೊಂಡವು. ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಇರಾನ್, ಈಜಿಪ್ಟ್, ಇಥಿಯೋಪಿಯ ಮತ್ತು ಅರ್ಜೆಂಟೀನಾ ಹೊಸ ಸದಸ್ಯರಾಗಿ ಬ್ರಿಕ್ಸ್ ಒಕ್ಕೂಟವನ್ನು ಜನವರಿ 1, 2024 ರಿಂದ ಸೇರಿಕೊಳ್ಳಲಿದ್ದಾರೆ. ಈ ಎಲ್ಲಾ ಸದಸ್ಯ ರಾಷ್ಟ್ರಗಳು ಕೂಡ ಅಮೆರಿಕಾದ ನೀತಿಗಳಿಂದ ಬೇಸತ್ತ ದೇಶಗಳು ಎನ್ನುವುದು ಕೂಡ ವೇದ್ಯ. ಇನ್ನೊಂದು ಪ್ರಮುಖ ಬೆಳವಣಿಗೆಯೇನು ಗೊತ್ತೇ? ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಈ ಶಕ್ತಿ ಬದಲಾವಣೆಯ ಪರ್ವವನ್ನು ನೋಡುತ್ತಾ ಇರುವ ಎಲ್ಲಾ ದೇಶಗಳಲ್ಲಿ ಈಗಾಗಲೇ 40ಕ್ಕೂ ಹೆಚ್ಚು ದೇಶಗಳು ಬ್ರಿಕ್ಸ್ ಒಕ್ಕೂಟಕ್ಕೆ ಸೇರಿಸಿಕೊಳ್ಳುವಂತೆ ಮನವಿಯನ್ನು ಮಾಡಿವೆ. ಮುಂಬರುವ ವರ್ಷಗಳಲ್ಲಿ ಹಂತಹಂತವಾಗಿ ಈ ಎಲ್ಲಾ ದೇಶಗಳನ್ನೂ ಒಕ್ಕೂಟದಲ್ಲಿ ಸೇರಿಸಿಕೊಳ್ಳುವ ಬಗ್ಗೆ, ಒಕ್ಕೂಟವನ್ನು ಇನ್ನಷ್ಟು ಬಲಶಾಲಿಯಾಗಿಸುವ ಬಗ್ಗೆ ಮಾತುಕತೆ ನಡೆದಿದೆ.

ಜನವರಿ 2024ರಲ್ಲಿ ಹೊಸ ಆರು ಸದಸ್ಯ ರಾಷ್ಟ್ರಗಳು ಒಕ್ಕೂಟಕ್ಕೆ ಬರುವುದರಿಂದ ಜಾಗತಿಕ ತೈಲ ರಫ್ತು ವಹಿವಾಟಿನ 80 ಪ್ರತಿಶತ ಬ್ರಿಕ್ಸ್ ಒಕ್ಕೂಟದ ತೆಕ್ಕೆಗೆ ಬರಲಿದೆ. ಯೂರೋಪಿಯನ್ ಯೂನಿಯನ್, ಅಮೇರಿಕಾ ದೇಶದ ಪಾರುಪತ್ಯ ಅಂತ್ಯವಾಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಜಾಗತಿಕ ಜಿಡಿಪಿ 105 ರೂಪಾಯಿ, ಅದರಲ್ಲಿ 31 ರೂಪಾಯಿ ಈ ಹನ್ನೊಂದು ದೇಶದ ಬ್ರಿಕ್ಸ್ ಒಕ್ಕೂಟದಲ್ಲಿರಲಿದೆ. ಮುಂಬರುವ ವರ್ಷಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಂಭಾವ್ಯತೆ ಹೆಚ್ಚು.

ಒಕ್ಕೂಟದ 15ನೇ ಸಮ್ಮಿಟ್ನಲ್ಲಿ ಮುಂದಿನ ರೂಪುರೇಷಗಳ ಬಗ್ಗೆ ಮಾತುಕತೆಯಾಗಿದೆ, ಈಗಾಗಲೇ ಅವುಗಳಲ್ಲಿ ಬಹಳಷ್ಟು ಕಾರ್ಯರೂಪಕ್ಕೂ ಬಂದಿದೆ, ಅವುಗಳ ವ್ಯಾಪ್ತಿಯನ್ನು ಹೆಚ್ಚಿಸುವ ಕಾರ್ಯವಾಗಬೇಕಿದೆ.

  1. ಹೊಸ ಡೆವಲಪ್ಮೆಂಟ್ ಬ್ಯಾಂಕ್: ಈಗಾಗಲೇ ಒಕ್ಕೂಟದ ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ಅಸ್ತಿತ್ವದಲ್ಲಿದೆ. ಶಾಂಘೈ ನಲ್ಲಿರುವ ಈ ಬ್ಯಾಂಕ್ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವ, ಅಭಿವೃದ್ಧಿಗೆ ಒತ್ತು ಕೊಡುವ ಕೆಲಸವನ್ನು ಮಾಡುತ್ತಿದೆ. ಈ ಹೊಸ ಬ್ಯಾಂಕ್ ನಿರ್ಮಾಣದ ಉದ್ದೇಶ ಐಎಂಎಫ್ ನಂತಹ ಅಮೇರಿಕಾ ದೇಶದ ಕೈಗೊಂಬೆ ಸಂಸ್ಥೆಯಿಂದ ಹೊರಬಂದು ಅದಕ್ಕೊಂದು ಪರ್ಯಾಯ ಸೃಷ್ಟಿ ಮಾಡುವುದು, ಜಗತ್ತಿನ 50/60ದೇಶಗಳು ಸೇರಿಕೊಳ್ಳುವ ಸಾಧ್ಯತೆ ಬಹಳ ಹೆಚ್ಚಾಗಿದೆ. ಗೆಲುವಿನ ದಾರಿ ಹಿಡಿದಂತೆ ಉಳಿದ ದೇಶಗಳು ಭಾಗಿಯಾಗುತ್ತವೆ. ಈಗಿರುವ ಐಎಂಎಫ್ ಕೇವಲ ಮುಂದುವರಿದ ದೇಶಗಳ ಏಳ್ಗೆಗೆ ದುಡಿಯುತ್ತಿದೆ. ಸಣ್ಣ ಪುಟ್ಟ ದೇಶಗಳು ಅದಕ್ಕೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಈಗಾಗಲೇ ಇರುವ ಬ್ಯಾಂಕ್ ಇನ್ನಷ್ಟು ಬೆಳೆಯುತ್ತ ಹೋದರೆ, ಹೊಸ ವಿಶ್ವ ವ್ಯವಸ್ಥೆ ತೆರೆದುಕೊಳ್ಳುವುದು ಖಚಿತ.
  2. ಹೊಸ ಜಾಗತಿಕ ಹಣದ ಸೃಷ್ಟಿ: ಇಂದಿಗೂ ಜಾಗತಿಕ ವಹಿವಾಟಿನ 80ಕ್ಕೂ ಹೆಚ್ಚು ಪ್ರತಿಶತ ವಹಿವಾಟು ಡಾಲರ್ನಲ್ಲಾಗುತ್ತಿದೆ. ಬೇರೆ ದೇಶಗಳು ತಮ್ಮ ಹಣದ ಜೊತೆಗೆ ಭದ್ರತೆಯ ದೃಷ್ಟಿಯಿಂದ ತೆಗೆದಿರುವ ರಿಸರ್ವ್ ಹಣದಲ್ಲಿ 58 ಪ್ರತಿಶತ ಹಣ ಡಾಲರ್ ರೂಪದಲ್ಲಿದೆ. ಅಂದರೆ ಇಂದಿಗೂ ಜಗತ್ತು ನಿಂತಿರುವುದು ಡಾಲರ್ ಆಧಾರದ ಮೇಲೆ, ಇದನ್ನು ನಾಳೆಗೆ ನಾಳೆಯೇ ಬದಲಿಸಲು ಬಾರದು. ಒಕ್ಕೂಟ ಹೊಸ ಹಣವನ್ನು ಸೃಷ್ಟಿಸುವ ಕಾರ್ಯದಲ್ಲಿದೆ, ಆಗ ರಿಸರ್ವ್ ಮನಿ ಮತ್ತು ವಹಿವಾಟು, ಟ್ರೇಡ್ ಮಾಡುವ ಹಣ ಎರಡೂ ಒಕ್ಕೂಟದ್ದೇ ಆದರೆ ಅದು ನಾವು ಡಾಲರ್ಗೆ ನೀಡಬಹುದಾದ ದೊಡ್ಡ ಹೊಡೆತ. ರಷ್ಯಾ ದೇಶದ ಅಧ್ಯಕ್ಷ ಪುಟಿನ್ ಅವರಂತೂ ಡಾಲರ್ ಬಳಕೆ ಬೇಡ ಎನ್ನುವ ದೊಡ್ಡ ಧ್ವನಿಯನ್ನು ಎತ್ತಿದ್ದಾರೆ. ಇದು ಸಾಧ್ಯವಾದರೆ ಹೊಸ ವಿಶ್ವ ವ್ಯವಸ್ಥೆಯ ಉಗಮವಾಗುತ್ತದೆ.
  3. ಹೊಸ ಕ್ರೆಡಿಟ್ ರೇಟಿಂಗ್ ಸಂಸ್ಥೆಗಳು: ಇಂದಿಗೆ ಕ್ರೆಡಿಟ್ ರೇಟಿಂಗ್ ನೀಡುವ ಸಂಸ್ಥೆಗಳೆಲ್ಲವೂ ಇರುವುದು ಮುಂದುವರಿದ ದೇಶಗಳ ಅಂಕೆಯಲ್ಲಿ, ಸಂಸ್ಥೆಗಳನ್ನು, ದೇಶಗಳನ್ನು ತಮ್ಮ ರೇಟಿಂಗ್ ಮೂಲಕ ಹೂಡಿಕೆಗೆ ಸೂಕ್ತವೇ ಇಲ್ಲವೇ ಎನ್ನುವ ರೇಟಿಂಗ್ ಇವು ನೀಡುತ್ತವೆ. ಇವುಗಳಲ್ಲಿ ಒಂದಲ್ಲ ಹಲವು ಬಾರಿ ಪಕ್ಷಪಾತಗಳಾಗಿವೆ. ಜಗತ್ತಿನ ಎಲ್ಲಾ ದೇಶಗಳಿಗೂ ಸಮಾನ ಅವಕಾಶ ಸಿಗಬೇಕು, ಆದರೆ ಅದಾಗುತ್ತಿಲ್ಲ. ಅಮೇರಿಕಾ ತನ್ನ ಬಳಿ ಇರುವ ಶಕ್ತಿಯನ್ನು ಬಳಸಿಕೊಂಡು ಜಗತ್ತಿನ ದೇಶಗಳನ್ನು ನಿಯಂತ್ರಣದಲ್ಲಿಟ್ಟಿದೆ. ಹೀಗಾಗಿ ಒಕ್ಕೂಟ ತನ್ನದೇ ಆದ ಹೊಸ ಕ್ರೆಡಿಟ್ ರೇಟಿಂಗ್ ಸಂಸ್ಥೆ, ಇನ್ಶೂರೆನ್ಸ್ ಸಂಸ್ಥೆಗಳನ್ನು ಸೃಷ್ಟಿಸುವ ಚಿಂತನೆಯಲ್ಲಿದೆ.

ನೀವು ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ರಾಜಕೀಯವನ್ನು ಗಮನಿಸುತ್ತಾ ಬಂದವರಾಗಿದ್ದಾರೆ ಮೇಲಿನ ಬದಲಾವಣೆಗಳು ನಿಮ್ಮಲ್ಲಿ ಈಗಾಗಲೇ ಒಂದು ಹೊಸ ಹುಮ್ಮಸ್ಸನ್ನು ತುಂಬಿರುತ್ತದೆ. ಎರಡನೇ ಮಹಾಯುದ್ಧದ ನಂತರ ಅಮೇರಿಕಾ ಜಗತ್ತಿನ ಮೇಲೆ ತನ್ನ ನಿಯಂತ್ರಣವನ್ನು ಬಲವಾಗಿಸಿಕೊಂಡಿತು. ಅದರ ಬಳಿ ಇರುವ ಎರಡು ಪ್ರಮುಖ ಅಸ್ತ್ರಗಳಲ್ಲಿ ಮೊದಲನೆಯದು ಡಾಲರ್, ಇದನ್ನು ನಾವೆಲ್ಲರೂ ಜಾಗತಿಕ ಕರೆನ್ಸಿ ಎಂದು ಒಪ್ಪಿಕೊಂಡಿರುವ ಕಾರಣ, ಅವರು ತಮಗೆ ಬೇಡವಾದ ದೇಶದ ವಿರುದ್ಧ ಸ್ಯಾಂಕ್ಷನ್ ಹಾಕಬಹುದು. ಹೀಗೆ ಬಹಿಷ್ಕಾರ ಹಾಕಿದ ದೇಶಕ್ಕೆ ಡಾಲರ್ ಹರಿವು ಇಲ್ಲದಂತೆ ಅದು ನೋಡಿಕೊಳ್ಳುತ್ತದೆ ಯಾವುದೇ ಒಂದು ದೇಶ ಜಾಗತಿಕ ಮಟ್ಟದಲ್ಲಿ ತನ್ನ ಬಿಲ್ ಪಾವತಿ ಮಾಡಲು ಬಳಸುವುದು ಡಾಲರ್ ಹಣವನ್ನು, ಹೀಗೆ ಡಾಲರ್ ಇಲ್ಲದ ದೇಶ ಬಹಳ ವೇಳೆ ತನಗೆ ಬೇಕಾದ ವಸ್ತುಗಳನ್ನು ಇತರ ದೇಶಗಳಿಂದ ತರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅದು ಅಮೇರಿಕಾ ಹಾಕುವ ತಾಳಕ್ಕೆ ಕುಣಿಯದೆ ವಿಧಿಯಿಲ್ಲ.

ಈ ಡಾಲರ್ ಮೌಲ್ಯ ಬದಲಾವಣೆಯನ್ನು ಮಾಡಿಕೊಳ್ಳುವ ಮೂಲಕ ಅದು ಜಗತ್ತನ್ನು ನಿಯಂತ್ರಣದಲ್ಲಿಟ್ಟಿದೆ. ಹೀಗೆ ಡಾಲರ್ನಲ್ಲಿ ಆಗುವ ಏರಿಳಿತ ಕೆಲವೊಮ್ಮೆ ಸಣ್ಣಪುಟ್ಟ ದೇಶಗಳ ಎಕಾನಾಮಿಯನ್ನು ಪೂರ್ಣವಾಗಿ ನೆಲ ಕಚ್ಚಿಸುವ ಶಕ್ತಿಯನ್ನು ಹೊಂದಿದೆ. ಈ ಕಾರಣಕ್ಕೆ ಬಹುತೇಕ ದೇಶಗಳು ಅಮೇರಿಕಾ ವಿರುದ್ಧ ಧ್ವನಿ ಎತ್ತುವುದಿಲ್ಲ. ಎರಡನೇ ಅಸ್ತ್ರ ವರ್ಲ್ಡ್ ಬ್ಯಾಂಕ್ ಮತ್ತು ಐಎಂಎಫ್ ಮೇಲಿನ ಹಿಡಿತ, ಕ್ರೆಡಿಟ್ ರೇಟಿಂಗ್ ಸಂಸ್ಥೆಗಳ ಮೇಲಿನ ಹಿಡಿತದ ಮೂಲಕ, ಡಾಲರ್ ಬಳಸಿ ಕಟ್ಟಿಹಾಕಲು ಸಾಧ್ಯವಿಲ್ಲದ ದೇಶಗಳನ್ನೂ ಕೂಡ ಇದು ಕಟ್ಟಿ ಹಾಕಬಲ್ಲದು. ಹೀಗಾಗಿ ಇಂದು ಜಗತ್ತು ಅಮೆರಿಕಾದ ತಾಳಕ್ಕೆ ಕುಣಿಯಬೇಕಾದ ಅನಿವಾರ್ಯತೆ ಇದೆ. ಇದು ಕಳೆದ 75/80 ವರ್ಷದಿಂದ ನಡೆದುಕೊಂಡು ಬಂದಿದೆ. ಇದೀಗ ರಷ್ಯಾ , ಚೀನಾ ಮತ್ತು ಭಾರತದಂತಹ ದೇಶಗಳು ಒಗ್ಗೊಡಿರುವ ಕಾರಣ ಅಮೇರಿಕಾ ದೇಶದ ಪಾರುಪತ್ಯಕ್ಕೆ ಪೆಟ್ಟು ಬೀಳುವುದು ತಪ್ಪಿಸಲಾಗುವುದಿಲ್ಲ. ಎಲ್ಲಕ್ಕೂ ಮೊದಲು ನಮ್ಮ ನಡುವಿನ ವ್ಯಾಪಾರಕ್ಕೆ ನಾವು ಡಾಲರ್ ಬಳಸುವುದು ಬಿಟ್ಟರೆ ಸಾಕು , ಈ ದೇಶದ ಒಂದೆರೆಡು ವರ್ಷದಲ್ಲಿ ಕುಸಿತ ಕಾಣುತ್ತದೆ.

ಕೊನೆಮಾತು: ಜಾಗತಿಕ ಮಟ್ಟದಲ್ಲಿ 2024ಕ್ಕೆ ಅತ್ಯಂತ ದೊಡ್ಡ ಮಹತ್ವವಿದೆ. ಭಾರತ ದೇಶದ ಮುಂದಿನ ಸರಕಾರ ನಡೆಸುವವರು ಯಾರು ಎನ್ನುವುದನ್ನು ನಾವು ಭಾರತೀಯರು ನಿರ್ಧರಿಸಲಿದ್ದೇವೆ. ಭಾರತದಲ್ಲಿನ ಫಲಿತಾಂಶ ಜಾಗತಿಕ ಮಟ್ಟದಲ್ಲೂ ಆಗಲಿದೆ. ಬಲಿಷ್ಠ ಭಾರತ ಬ್ರಿಕ್ಸ್ ಒಕ್ಕೂಟಕ್ಕೆ ಮುಂದಿನ ದಾರಿಯನ್ನು ತೋರಿಸುವ ಮಟ್ಟಕ್ಕೆ ಬೆಳಯಲಿದೆ. ರಷ್ಯಾ , ಚೀನಾ ದೇಶಗಳನ್ನು , ಒಕ್ಕೂಟದ ಇತರ ದೇಶಗಳನ್ನು ಸಂಭಾಳಿಸುವ ಶಕ್ತಿಯಿರುವುದು ಭಾರತಕ್ಕೆ ಮಾತ್ರ. ಬಲಿಷ್ಠ ಭಾರತ ಅಮೇರಿಕಾ ದೇಶಕ್ಕೆ ತಲೆನೋವಾಗಿ ಕಾಡಲಿದೆ. ಹೀಗಾಗಿ ಅವರಿಗೆ ನಮ್ಮಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುವುದು ಬೇಕಿಲ್ಲ. ಭಾರತ ಬಲಿಷ್ಠವಾಗುವುದು ಚೀನಾಗು ಬೇಕಿಲ್ಲ. ಅದಕ್ಕೆ ತಾನು ಬ್ರಿಕ್ಸ್ ಮತ್ತು ಜಗತ್ತಿನ ಒಡೆಯಾನಾಗುವ ಹಂಬಲ. 2024ರ ಚುನಾವಣೆ ಫಲಿತಾಂಶ ಈ ನಿಟ್ಟಿನಲ್ಲಿ ಹಲವಾರು ಗ್ಲೋಬಲ್ ಪ್ಲೇಯರ್ಸ್ಗಳ ಭವಿಷ್ಯವನ್ನೂ ಬರೆಯಲಿದೆ. ಹೀಗಾಗಿ ಜಾಗತಿಕ ಭವಿಷ್ಯ ಬರೆಯುವ ಶಕ್ತಿ ಭಾರತೀಯರಿಗೆ ಸಿಕ್ಕಿದೆ. ಅದನ್ನು ಸರಿಯಾಗಿ ನಾವು ಬಳಸಿಕೊಳ್ಳಬೇಕಿದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com