ಸೀಸವೆಂಬ ವಿಷ ಅಥವಾ Lead Poisoning (ಕುಶಲವೇ ಕ್ಷೇಮವೇ)

ಸೀಸವು ಭೂಮಿಯ ಹೊರಪದರದಲ್ಲಿ ನೈಸರ್ಗಿಕವಾಗಿ ಕಂಡುಬರುವ ವಿಷಕಾರಿ ಲೋಹವಾಗಿದೆ. ಇದರ ವ್ಯಾಪಕ ಬಳಕೆಯು ವ್ಯಾಪಕವಾದ ಪರಿಸರ ಮಾಲಿನ್ಯ ಮತ್ತು ಪ್ರಪಂಚದ ಅನೇಕ ಭಾಗಗಳಲ್ಲಿ ಗಮನಾರ್ಹವಾದ ಸಾರ್ವಜನಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ.
ಸೀಸ
ಸೀಸ

ಸೀಸವು ಭೂಮಿಯ ಹೊರಪದರದಲ್ಲಿ ನೈಸರ್ಗಿಕವಾಗಿ ಕಂಡುಬರುವ ವಿಷಕಾರಿ ಲೋಹವಾಗಿದೆ. ಇದರ ವ್ಯಾಪಕ ಬಳಕೆಯು ವ್ಯಾಪಕವಾದ ಪರಿಸರ ಮಾಲಿನ್ಯ ಮತ್ತು ಪ್ರಪಂಚದ ಅನೇಕ ಭಾಗಗಳಲ್ಲಿ ಗಮನಾರ್ಹವಾದ ಸಾರ್ವಜನಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ.

ಸೀಸದ ಅಂಶಗಳು ಎಲ್ಲೆಲ್ಲಿ ಇವೆ?

ಸೀಸ ಧೂಳು, ಮಣ್ಣು ಮತ್ತು ಕುಡಿಯುವ ನೀರಿನಲ್ಲಿರಬಹುದು. ಇದನ್ನು ಸಾಮಾನ್ಯವಾಗಿ ಬಣ್ಣಗಳು, ಸೆರಾಮಿಕ್ಸ್, ಸೌಂದರ್ಯವರ್ಧಕಗಳು, ಆಭರಣಗಳು, ಆಟಿಕೆಗಳು, ಬಣ್ಣದ ಗಾಜು, ಕೊಳವೆಗಳು ಮತ್ತು ಪ್ಲಾಸ್ಟಿಕ್ ಸಾಮಗ್ರಿಗಳಲ್ಲಿ ಬಳಸಲಾಗುತ್ತದೆ. ಭಾರತ, ಮೆಕ್ಸಿಕೋ ಮತ್ತು ವಿಯೆಟ್ನಾಂನಂತಹ ದೇಶಗಳಲ್ಲಿ ಸೀಸದ ಕೊಳವೆಗಳು ಅಥವಾ ಸೀಸದ ಬೆಸುಗೆಯೊಂದಿಗೆ ಜೋಡಿಸಲಾದ ಪೈಪ್‌ಗಳ ಮೂಲಕ ಮನೆಮನೆಗೆ ಪೂರೈಕೆ ಮಾಡುವ ಕುಡಿಯುವ ನೀರು ಸೀಸವನ್ನು ಹೊಂದಿದೆ. ಸೀಸ ಆಧಾರಿತ ಬಣ್ಣ ಮತ್ತು ಹಳೆಯ ಕಟ್ಟಡಗಳಲ್ಲಿನ ಸೀಸ-ಕಲುಷಿತ ಧೂಳು ಮಕ್ಕಳಲ್ಲಿ ಸೀಸದ ವಿಷದ ಸಾಮಾನ್ಯ ಮೂಲಗಳಾಗಿವೆ. ಬ್ಯಾಟರಿಗಳೊಂದಿಗೆ ಕೆಲಸ ಮಾಡುವ, ಮನೆ ನವೀಕರಣಗಳನ್ನು ಮಾಡುವ ಅಥವಾ ಆಟೋ ರಿಪೇರಿ ಅಂಗಡಿಗಳಲ್ಲಿ ಕೆಲಸ ಮಾಡುವ ವಯಸ್ಕರು ಸೀಸಕ್ಕೆ ಒಡ್ಡಿಕೊಳ್ಳಬಹುದು.

ಚಿಕ್ಕ ಮಕ್ಕಳು ಮನೆಗಳಲ್ಲಿ ಗೋಡೆಗೆ ಬಳಿದಿರುವ ರಸಾಯನಿಕ ಮಿಶ್ರಿತ ಬಣ್ಣವನ್ನು ಕೆರೆದು ತಿಂದರೆ ಅದರಲ್ಲಿರುವ ಸೀಸ ಅವರ ದೇಹವನ್ನು ಸೇರುತ್ತದೆ. ರಸ್ತೆಬದಿಗಳಲ್ಲಿ ಬಜ್ಜಿಬೋಂಡಾ ಮತ್ತು ಭೇಲ್ ಪುರಿ-ಚುರುಮುರಿ ಮಾಡಿ ಮಾರುವವರು ಅವುಗಳನ್ನು ದಿನಪತ್ರಿಕೆಗಳಲ್ಲಿ ಹಾಕಿ ತಿನ್ನಲು ಕೊಡುತ್ತಾರೆ. ಆ ಬಣ್ಣದಲ್ಲಿ ಸೀಸದ ಅಂಶವಿದ್ದು ಅದು ತಿನಿಸಿನ ಮೂಲಕ ದೇಹವನ್ನು ಕಡಿಮೆ ಪ್ರಮಾಣದಲ್ಲಿಯಾದರೂ ಸೇರುತ್ತದೆ. ಹೀಗಾಗಿ ಜನಸಾಮಾನ್ಯರು ಸೀಸದ ನೇರ ಸಂಪರ್ಕಕ್ಕೆ ಬರುತ್ತಿದ್ದಾರೆ. ಇದು ಬೇಗನೆ ರಕ್ತಪ್ರವಾಹವನ್ನು ಪ್ರವೇಶಿಸುತ್ತದೆ ಮತ್ತು ದೇಹದಾದ್ಯಂತ ಸಂಗ್ರಹಗೊಳ್ಳುತ್ತದೆ. ಇದರ ಅರಿವಿರುವುದರಿಂದಲೇ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು "ಗೃಹೋಪಯೋಗಿ ಮತ್ತು ಅಲಂಕಾರಿಕ ಬಣ್ಣಗಳ ನಿಯಮಗಳು, 2016ರಲ್ಲಿ “ಸೀಸದ ವಸ್ತುಗಳ ಮೇಲಿನ ನಿಯಂತ್ರಣ" ಅಧಿಸೂಚನೆಯನ್ನು ಅಂಗೀಕರಿಸಿದೆ ಮತ್ತು ಸೀಸವಿರುವ ಮನೆ ಮತ್ತು ಅಲಂಕಾರಿಕ ಬಣ್ಣಗಳ ತಯಾರಿಕೆ, ವ್ಯಾಪಾರ, ಆಮದು ಮತ್ತು ರಫ್ತುಗಳನ್ನು ನಿಷೇಧಿಸಿದೆ. ಆದರೂ ನಮ್ಮ ದೇಶದಲ್ಲಿ ಸೀಸದ ಸಮಸ್ಯೆ ಇತರ ಸಾರ್ವಜನಿಕ ಆರೋಗ್ಯ ಕಾಳಜಿಗಳಂತೆ ಸೀಸವು ಹೆಚ್ಚಿನ ಗಮನ ಸೆಳೆದಿಲ್ಲ. ನಮ್ಮಲ್ಲಿನ ಅನೇಕ ಕಡಿಮೆ-ವೆಚ್ಚದ ಉತ್ಪನ್ನಗಳು ಸೀಸವನ್ನು ಹೊಂದಿರುತ್ತವೆ ಮತ್ತು ಜನರು ಸೀಸ-ಮುಕ್ತ ಪರ್ಯಾಯ ವಸ್ತುಗಳಿಗೆ ಹೆಚ್ಚು ಹಣ ಕೊಟ್ಟು ಕೊಳ್ಳಲು ಆಸಕ್ತಿ ತೋರುತ್ತಿಲ್ಲ. ಅನೇಕರಿಗೆ ಇಂತಹ ವಸ್ತುಗಳನ್ನು ಖರೀದಿಸುವ ಶಕ್ತಿ ಇರುವುದಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರಮುಖ ಸಾರ್ವಜನಿಕ ಆರೋಗ್ಯ ಕಾಳಜಿಯ 10 ರಾಸಾಯನಿಕಗಳಲ್ಲಿ ಒಂದಾಗಿದೆ.

ಸೀಸದಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮವೇನು?

ಸೀಸ ದೊಡ್ಡವರಿಗಿಂತ ಹೆಚ್ಚಾಗಿ ಮಕ್ಕಳಿಗೆ ಹೆಚ್ಚಿನ ಅಪಾಯ ಉಂಟುಮಾಡುತ್ತದೆ. ಅವರ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಸೀಸವು ಮೆದುಳು, ನರ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಗಳಿಗೆ ಹಾನಿಯುಂಟುಮಾಡುತ್ತದೆ. ಇದರಿಂದ ಬೆಳವಣಿಗೆಯ ಮತ್ತು ಕಲಿಕೆಯ ಸಮಸ್ಯೆಗಳು ತಲೆದೋರುತ್ತವೆ.

ಸಣ್ಣ ಪ್ರಮಾಣದ ಸೀಸ ಕೂಡ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ವಿಶೇಷವಾಗಿ ಸೀಸದ ವಿಷಕ್ಕೆ ಗುರಿಯಾಗುತ್ತಾರೆ, ಇದು ಅವರ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ. ಇದು ಅಧಿಕ ರಕ್ತದೊತ್ತಡ, ಹೃದಯರಕ್ತನಾಳದ ಸಮಸ್ಯೆಗಳು ಮತ್ತು ಮೂತ್ರಪಿಂಡದ ಹಾನಿಯ ಅಪಾಯವನ್ನು ಒಳಗೊಂಡಂತೆ ವಯಸ್ಕರಲ್ಲಿ ದೀರ್ಘಕಾಲೀನ ಹಾನಿಯನ್ನು ಉಂಟುಮಾಡುತ್ತದೆ. ಗರ್ಭಿಣಿಯರು ಹೆಚ್ಚಿನ ಮಟ್ಟದ ಸೀಸಕ್ಕೆ ಒಡ್ಡಿಕೊಳ್ಳುವುದರಿಂದ ಗರ್ಭಪಾತ, ಮಕ್ಕಳ ಅಕಾಲಿಕ ಜನನ ಮತ್ತು ಕಡಿಮೆ ತೂಕವಿರುವ ಮಕ್ಕಳ ಜನನಕ್ಕೆ ಕಾರಣವಾಗಬಹುದು.

ಮೊದಲಿಗೆ ಸೀಸ ದೇಹವನ್ನು ಸೇರಿದಾಗ ಆಯಾಸ, ಹೊಟ್ಟೆ ನೋವು, ವಾಕರಿಕೆ, ಅತಿಸಾರ, ಹಸಿವಿನ ಕೊರತೆ, ರಕ್ತಹೀನತೆ, ಒಸಡುಗಳ ಉದ್ದಕ್ಕೂ ಕಪ್ಪು ರೇಖೆ ಮತ್ತು ಸ್ನಾಯು ಪಾರ್ಶ್ವವಾಯು ಅಥವಾ ಕೈಕಾಲುಗಳ ದೌರ್ಬಲ್ಯಗಳು ಕಾಣಿಸಿಕೊಳ್ಳುತ್ತವೆ.

ಸೀಸದಿಂದ ಉಂಟಾಗುವ ವಿಷಕ್ಕೆ ಚಿಕಿತ್ಸೆ

ಸೀಸದಿಂದ ಉಂಟಾಗುವ ವಿಷಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಅದಕ್ಕಾಗಿಯೇ ಸೀಸಕ್ಕೆ ಒಡ್ಡಿಕೊಳ್ಳುವುದನ್ನು ತಡೆಗಟ್ಟುವುದು, ಅದರಲ್ಲಿಯೂ ವಿಶೇಷವಾಗಿ ಮಕ್ಕಳಲ್ಲಿ, ಮುಖ್ಯವಾಗಿದೆ. ಮಗು ಸೀಸಕ್ಕೆ ಒಡ್ಡಿಕೊಳ್ಳುವುದನ್ನು ತಡೆಯಲು ಪರಿಸರದಿಂದ ಸೀಸದ ಮೂಲಗಳನ್ನು ತೆಗೆದುಹಾಕುವುದು ಅವಶ್ಯಕ. ಸೀಸದ ವಿಷಕಾರಿ ಪ್ರಭಾವವನ್ನು ಕಡಿಮೆ ಮಾಡಲು ಆಗಾಗ ಮಕ್ಕಳ ಕೈ ಮತ್ತು ಆಟಿಕೆಗಳನ್ನು ತೊಳೆಯಿರಿ. ಕಲುಷಿತ ಧೂಳಿನ ವಾತಾವರಣದಿಂದ ಜನರು ತಮ್ಮನ್ನು ಮತ್ತು ಮಕ್ಕಳನ್ನು ರಕ್ಷಿಸಿಕೊಳ್ಳಬೇಕು. ಮಕ್ಕಳು ಮಣ್ಣನ್ನಾಗಲೀ, ಬಣ್ಣಬಣ್ಣದ ಆಟಿಕೆಗಳನ್ನಾಗಲೀ ನೇರವಾಗಿ ಬಾಯಿಗೆ ಹಾಕಿಕೊಳ್ಳದಂತೆ ನೋಡಿಕೊಳ್ಳಬೇಕು.

ನಮ್ಮಲ್ಲಿ ಸೀಸದ ಮೂಲಗಳ ನಿಯಮಿತ ಪರೀಕ್ಷೆಯ ನಡೆಯಬೇಕು. ಸೀಸದ ಮಾಲಿನ್ಯವನ್ನು ನಿರ್ಣಯಿಸಲು ಸರ್ಕಾರಿ ಅಧಿಕಾರಿಗಳಿಗೆ ತರಬೇತಿ ನೀಡಬೇಕು. ಸೀಸದ ಮಾಲಿನ್ಯ ಮತ್ತು ವಿಷಕಾರಿ ಪ್ರಭಾವದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಬಳಸಿದ ಲೆಡ್-ಆಸಿಡ್ ಬ್ಯಾಟರಿಗಳ ಮರುಬಳಕೆಯು ಅಪಾಯಕ್ಕೆ ದಾರಿಮಾಡುಕೊಡುತ್ತದೆ ಎಂಬುದನ್ನು ಜನ ತಿಳಿಯಬೇಕು. ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತದ ಸೀಸದ ಮಟ್ಟವನ್ನು ಪರೀಕ್ಷಿಸಲು ಸರ್ಕಾರವು ಸೌಲಭ್ಯಗಳನ್ನು ಹೆಚ್ಚಿಸಬೇಕು. ಸೀಸದ ವಿಷವು ಭಾರತದ ಆರೋಗ್ಯ ನೀತಿಯ ಒಂದು ಭಾಗವಾಗಿರಬೇಕು.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com