Assets and Liabilities ಯಾವುವು ಎನ್ನುವುದನ್ನು ತಿಳಿಯುವುದು ಹೇಗೆ?... ಇಲ್ಲಿದೆ ಮಾಹಿತಿ (ಹಣಕ್ಲಾಸು)

ಹಣಕ್ಲಾಸು-391-ರಂಗಸ್ವಾಮಿ ಮೂಕನಹಳ್ಳಿ
ಹಣಕ್ಲಾಸು (ಸಾಂಕೇತಿಕ ಚಿತ್ರ)
ಹಣಕ್ಲಾಸು (ಸಾಂಕೇತಿಕ ಚಿತ್ರ)

ನಾವು ಎಳವೆಯಲ್ಲಿರುವಾಗ ನಮ್ಮ ಹೆತ್ತವರು, ಸಮಾಜ, ಗುರು ಹಿರಿಯರು ಎಲ್ಲರಾದಿಯಾಗಿ ಹೇಳುವ ಮಾತು ' ಚನ್ನಾಗಿ ಓದಬೇಕು, ಒಳ್ಳೆಯ ಕೆಲಸ ಪಡೆದುಕೊಂಡು, ಜೀವನದಲ್ಲಿ ಸೆಟ್ಟಲ್ ಆಗಬೇಕು'. ಈ ಮಾತುಗಳನ್ನು ಕೇಳದೆ ಇರುವವರು ಯಾರಾದರೂ ಇದ್ದರೆ ನನಗೂ ಸ್ವಲ್ಪ ತಿಳಿಸಿ. ಇದು ಅತ್ಯಂತ ಸಹಜ ಮಾತು. ನಮ್ಮ ಹೆತ್ತವರಿಗೆ ನಾವು ಜೀವನದಲ್ಲಿ ಬೇಗ ಒಂದು ನೆಲೆ ಕಂಡುಕೊಳ್ಳಬೇಕು ಎನ್ನುವುದು ಆಶಯ.

'ಬಂಗಾರದ ಇಟ್ಟಿಗೆಯಲ್ಲಿ ಮನೆ ಕಟ್ಟುವಂತನಾಗು', 'ದೊಡ್ಡ ಕಾರಿಟ್ಟು, ನಾಲ್ಕೈದು ಆಳುಕಾಳುಗಳನ್ನು ಮನೆತುಂಬಾ ಹೊಂದುವಂತನಾಗು' ನಮ್ಮಜ್ಜಿಗೆ ನಮಸ್ಕರಿದಾಗೆಲ್ಲಾ ಆಕೆ ಮಾಡುತ್ತಿದ್ದ ಆಶೀರ್ವಾದದ ಮಾತುಗಳು ಮೇಲಿನವು. ನಮ್ಮ ಮಕ್ಕಳು ಚನ್ನಾಗಿರಲಿ ಎನ್ನುವುದು ಈ ಆಶೀರ್ವಾದದ , ಮಾತುಗಳ ಸಾರ. ಆದರೆ ಇದರಲ್ಲಿ ಅವರಿಗೂ ಗೊತ್ತಿಲ್ಲದೇ ಸಣ್ಣದಾಗಿ ಒಂದು ಹೊರೆಯನ್ನು ಮಕ್ಕಳ ಮೇಲೆ ಹೊರಿಸಿ ಬಿಡುತ್ತಾರೆ. ಅದು ಚನ್ನಾಗಿ ಮಾಡಬೇಕೆನ್ನುವ ಒತ್ತಡ. ಜೊತೆಗೆ ಮನೆ ಮತ್ತು ಕಾರು ಇವೆರೆಡೂ ಅತ್ಯಂತ ಅವಶ್ಯಕವಾಗಿ ಹೊಂದಲೇಬೇಕಾದ ಆಸ್ತಿಗಳು ಎನ್ನುವ ಹೇರಿಕೆ.

ಆದರೆ ಇವತ್ತು ಕಾಲ ಬದಲಾಗಿದೆ. ಆಸ್ತಿ ಮತ್ತು ಲಿಯಬಲಿಟಿ ಯಾವುದು ಎನ್ನುವುದು ಸಮಯ ಮತ್ತು ಸಂದರ್ಭದ ಆಧಾರದ ಮೇಲೆ ನಿರ್ಣಯವಾಗುತ್ತದೆ. ಅಲ್ಲದೆ ಸೆಟಲ್ ಎನ್ನುವ ಪದಕ್ಕೆ ಇಂದು ಅರ್ಥವಿಲ್ಲವಾಗಿದೆ. ನಾವು ಸೆಟಲ್ ಎಂದುಕೊಂಡ ವಿಷಯ ಬದಲಾಗಲು ಕ್ಷಣ ಸಾಕು. ನಾವಿಂದು ಅತ್ಯಂತ ಏರಿಳಿತಗಳನ್ನು ಹೊಂದಿರುವ ಕಾಲಘಟ್ಟದಲ್ಲಿದ್ದೇವೆ. ನನ್ನ ತಮ್ಮ ಡಾ. ಲಕ್ಷ್ಮೀಕಾಂತ ನಿಗೆ ಈ ಸೆಟಲ್ ಎನ್ನುವ ಪದವನ್ನು ಕೇಳಿದರೆ ಅಲರ್ಜಿ. ಬದುಕು ನಿರಂತರ ಚಲನೆಯಲ್ಲಿರಬೇಕಾದದ್ದು , ಸೆಟ್ಟಲ್ ಎಂದರೆ ಒಂದು ಕಡೆ ನೆಲೆ ಕಂಡುಕೊಳ್ಳುವುದು ಎಂದರ್ಥ. ನೆಲೆ ಕಂಡುಕೊಂಡರೆ ಅಲ್ಲಿಗೆ ಪ್ರಯಾಣ ನಿಂತಂತೆ ಎನ್ನುವುದು ಅವನ ವ್ಯಾಖ್ಯಾನ. ಜೀವನದ ಮೊದಲ 25 ವರ್ಷ ಭಾರತದಲ್ಲಿ ಕಳೆದ ಅವನು ನಂತರ ಬಂದದ್ದು ಬಾರ್ಸಿಲೋನಾ, ಸ್ಪೇನ್ ದೇಶಕ್ಕೆ , ಅಲ್ಲಿಂದ ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಮತ್ತೆ ಸ್ಪೇನ್, ಅಮೇರಿಕಾ, ಮತ್ತೆ ಸ್ಪೇನ್ ದೇಶಗಳನ್ನು ಮುಗಿಸಿ ಇದೀಗ ನೆದರ್ಲ್ಯಾಂಡ್ ನಿವಾಸಿಯಾಗಿದ್ದಾನೆ. ಅತ್ಯುತ್ತಮ ಹುದ್ದೆ, ಸಂಸ್ಥೆಗಳನ್ನು ತೊರೆದು ಹೋಗಲು ಕ್ಷಣವೂ ಚಿಂತಿಸುವುದಿಲ್ಲ. ಅವನ ಗುಣ ಗೊತ್ತಿದ್ದೂ ಅವನನ್ನು ಮಾತಿಗೆಳೆದು ಕೇಳಿದರೆ ಬಹುಕಾಲ ಒಂದೆಡೆ ನಿಂತರೆ ಗ್ರೋಥ್ - ಬೆಳವಣಿಗೆ ನಿಲ್ಲುತ್ತದೆ. ಸದಾ ಸಾಗುತ್ತಿರಬೇಕು. ಸಣ್ಣದಕ್ಕೆ, ಕೈಗೆಟುಕಿದ್ದಕ್ಕೆ ಖುಷಿಯಾಗಿ ನಿಂತರೆ, ಮುಂದೆ ನಮಗೆ ಕಾದಿರುವ ಬದುಕನ್ನು ನಾವು ಭೇಟಿ ಮಾಡುವುದೇ ಇಲ್ಲ, ಸೊ ಜನ, ಜಗತ್ತು ಹೇಳುವ ರೀತಿ ಸೆಟ್ಟಲ್ ಆಗುವುದು ನನಗಿಷ್ಟವಿಲ್ಲ ಎನ್ನುವ ಅವನ ಸಿದ್ದ ಉತ್ತರ ಸಿಗುತ್ತದೆ.

ಈ ಮಾತುಗಳನ್ನು ಯಾರನ್ನು ನೋಯಿಸಲು ಅಥವಾ ಹೋಲಿಕೆ ಮಾಡಲು ಬರೆಯುತ್ತಿಲ್ಲ. ನೀವೇ ಇದನ್ನು ಗಮನಿಸಿ ನೋಡಿ, ನಿರ್ಧಾರಕ್ಕೆ ಬನ್ನಿ. ಶ್ರೀಮಂತರು ಆಸ್ತಿಯನ್ನು ಖರೀದಿಸುತ್ತಾರೆ, ಮಧ್ಯಮವರ್ಗದ ಜನ ಲಿಯಬಲಿಟಿಯನ್ನು ಖರೀದಿಸುತ್ತಾರೆ ಮತ್ತು ಅದನ್ನು ಆಸ್ತಿ ಎಂದು ನಂಬಿ ಖುಷಿಯಾಗಿ ಜೀವನವನ್ನು ಸವೆಸುತ್ತಾರೆ. ಯಾವುದು ಆಸ್ತಿ? ಯಾವುದು ಲಿಯಬಲಿಟಿ? ಎನ್ನುವ ಗೊಂದಲದಿಂದ ಮುಕ್ತವಾದರೆ ಅಲ್ಲಿಗೆ ಶ್ರೀಮಂತಿಕೆಯ ಕಡೆಗೆ ನಮ್ಮ ನಡಿಗೆ ಪ್ರಾರಂಭವಾಗುತ್ತದೆ. ಇಲ್ಲಿ ನೀವು ಇನ್ನೊಂದು ಮುಖ್ಯ ಅಂಶವನ್ನು ಗಮನಿಸಬೇಕು. ಈ ಸಮಾಜ, ನಮ್ಮ ಅಕೌಂಟಿಂಗ್ ಮತ್ತು ಫೈನಾನ್ಸಿಂಗ್ ಸಂಸ್ಥೆಗಳು ಕೂಡ ಇವುಗಳನ್ನು ಒಂದೇ ವರ್ಗದಲ್ಲಿ ಫಿಕ್ಸ್ ಮಾಡಿ ಬಿಟ್ಟಿವೆ. ಅಂದರೆ ಕಟ್ಟಡ, ಕಾರು, ಬಂಗಾರ, ನೆಲ, ಹಣ ಇತ್ಯಾದಿಗಳನ್ನು ಅಸೆಟ್ ಎಂದು ವರ್ಗಿಕರಿಸಲಾಗಿದೆ. ಇವು ಲಿಯಬಲಿಟಿ ಕೂಡ ಆಗಬಲ್ಲದು! ಅದರ ಬಗ್ಗೆ  ನಮ್ಮ ಸಂಸ್ಥೆಗಳು ಇನ್ನೂ ಚಿಂತಿಸಿಲ್ಲ, ಇನ್ನು ಒಪ್ಪುವ ಮಾತು ಬೇರೆ. ಹೀಗಾಗಿ ಇವುಗಳನ್ನು ನಂಬಿಕೊಂಡವರು ಶ್ರೀಮಂತರಾಗದೆ ಹಾಗೆ ಉಳಿಯುತ್ತಾರೆ. ಬನ್ನಿ ಈ ಅಸೆಟ್ ಮತ್ತು ಲಿಯಬಲಿಟಿ ಸಮಯಕ್ಕೆ ಮತ್ತು ಸನ್ನಿವೇಶಕೆ ತಕ್ಕಂತೆ ಹೇಗೆ ಜಾಗ ಬದಲಾಯಿಸುತ್ತವೆ ನೋಡೋಣ.

ಅಕೌಂಟಿಂಗ್ ಟರ್ಮಿನಾಲಜಿ ಪ್ರಕಾರ ಕೆಳಗಿನ ಎಲ್ಲವನ್ನೂ ಆಸ್ತಿ ಎನ್ನಲಾಗುತ್ತದೆ:

  1. ಹಣ ಮತ್ತು ಹಣಕ್ಕೆ ಸಮವಾದ ಹೂಡಿಕೆಗಳು: ಅಂದರೆ ಹಣ, ಫಿಕ್ಸೆಡ್ ಡೆಪಾಸಿಟ್, ಬ್ಯಾಂಕ್ ಬ್ಯಾಲೆನ್ಸ್, ರಿಕರಿಂಗ್ ಡೆಪಾಸಿಟ್ ಇತ್ಯಾದಿ
  2. ರಿಯಲ್ ಎಸ್ಟೇಟ್: ನೆಲ, ಮನೆ, ಕಮರ್ಷಿಯಲ್ ಪ್ರಾಪರ್ಟಿ
  3. ವೈಯಕ್ತಿಕ ಬಳಕೆ ವಸ್ತುಗಳು: ಒಡವೆಗಳು, ಬಂಗಾರ, ಕಾರು, ಸ್ಕೂಟರ್ ಇತ್ಯಾದಿ ವಾಹನಗಳು, ಪೀಠೋಪಕರಣ, ಆರ್ಟ್ ವರ್ಕ್, ಬಟ್ಟೆ ಇತ್ಯಾದಿ
  4. ಇನ್ನಿತರ ಹೂಡಿಕೆಗಳು: ಷೇರು, ಬಾಂಡ್, ಮ್ಯೂಚುಯಲ್ ಫಂಡ್, ಇನ್ಶೂರೆನ್ಸ್, ಬೆಲೆಬಾಳುವ ಲೋಹಗಳ ಮೇಲಿನ ಹೂಡಿಕೆ.

ಮೇಲಿನ ಲೆಕ್ಕಾಚಾರದಲ್ಲಿ ಬರದೇ ಇರುವ ಎಲ್ಲವೂ ಲಿಯಬಿಲಿಟಿ ಎನ್ನಿಸಿಕೊಳ್ಳುತ್ತದೆ. ಯಾವುದು ನಮ್ಮ ಜೇಬಿನಿಂದ ಹಣವನ್ನು ಖರ್ಚು ಮಾಡಿಸುತ್ತದೆ ಅವೆಲ್ಲವೂ ಲಿಯಬಿಲಿಟಿ. ಯಾವುದು ಮೌಲ್ಯ ಹೆಚ್ಚುತ್ತದೆ, ಯಾವುದೇ ನಮಗೆ ಹಣವನ್ನು ತಂದು ಕೊಡುತ್ತದೆ ಅವೆಲ್ಲವೂ ಆಸ್ತಿ. ಮೇಲೆ ಆಸ್ತಿ ಎಂದು ಪರಿಗಣಿಸಲಾಗಿರುವ ವಸ್ತುಗಳ ಅವಲೋಕನ ಮಾಡೋಣ.

ಹಣ ಮತ್ತು ಹಣಕ್ಕೆ ಸಮವಾದ ಹೂಡಿಕೆಗಳು: ಅಂದರೆ ಹಣ , ಫಿಕ್ಸೆಡ್ ಡೆಪಾಸಿಟ್, ಬ್ಯಾಂಕ್ ಬ್ಯಾಲೆನ್ಸ್, ರಿಕರಿಂಗ್ ಡೆಪಾಸಿಟ್ ಇತ್ಯಾದಿ: ಎಲ್ಲವೂ ಸಹಜವಾಗಿ ನಡೆಯುತ್ತಿದ್ದಾಗ ಇದು ಆಸ್ತಿ. ಉದಾಹರಣೆಗೆ ಸಮಾಜದಲ್ಲಿ ಯಾವುದೇ ಏರಿಳಿತವಿಲ್ಲದ ಕಾಲದಲ್ಲಿ ಇದು ಆಸ್ತಿ. ನಗದು ಹಣ ಕಳ್ಳತನವಾಗುವ ಸಾಧ್ಯತೆ ಹೆಚ್ಚು ಅದನ್ನು ಸಂರಕ್ಷಿಸಲು ಸಮಯ ಮತ್ತು ಎನರ್ಜಿ ಎರಡೂ ಪೋಲಾಗುತ್ತದೆ. ಪ್ರೈವೇಟ್ ಬ್ಯಾಂಕ್ ಅಥವಾ ಕೋ ಅಪೆರಟಿವ್ ಬ್ಯಾಂಕುಗಳಲ್ಲಿ ಇಟ್ಟ ಹಣಕ್ಕೆ ಭದ್ರತೆಯ ಕೊರತೆ ಕಾಡುತ್ತದೆ. ಇದರ ಜೊತೆಗೆ ಹಣದುಬ್ಬರ ಸಮಾಜದಲ್ಲಿ ಹೆಚ್ಚಿದ್ದಾಗ ಬ್ಯಾಂಕ್ನಲ್ಲಿ ಸಿಗುವ ಬಡ್ಡಿ ಹಣದುಬ್ಬರಕ್ಕಿಂತ ಕಡಿಮೆ  ಇರುತ್ತದೆ. ಹೀಗಾಗಿ ಇದು ನೆಗಟಿವ್ ಇಂಟರೆಸ್ಟ್ ರೇಟ್ಗೆ ತುತ್ತಾಗುತ್ತದೆ. ಅಂದರೆ ಹಣ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ಯಾವುದನ್ನು ನಾವು ಆಸ್ತಿ ಎಂದು ಕೊಂಡಿರುತ್ತೇವೆ ಅದು ಲಿಯಬಲಿಟಿ ಆಗುತ್ತದೆ. ಆದರೆ ಗಮನಿಸಿ ನಮ್ಮ ಅಕೌಂಟಿಂಗ್ ಸ್ಟ್ಯಾಂಡರ್ಡ್ ಪ್ರಕಾರ ಇದು ಯಾವಾಗಲೂ ಆಸ್ತಿ. ಆದರೆ ಇದು ತಪ್ಪು . ಜನ ಸಾಮಾನ್ಯನಿಗೆ ಇದರ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ.

ರಿಯಲ್ ಎಸ್ಟೇಟ್: ನೆಲ, ಮನೆ, ಕಮರ್ಷಿಯಲ್ ಪ್ರಾಪರ್ಟಿ: ಜೀವನದಲ್ಲಿ ನಾವು ಮಾಡುವ ಅತಿ ದೊಡ್ಡ ಹೂಡಿಕೆಯ ನಿರ್ಧಾರ ರಿಯಲ್ ಎಸ್ಟೇಟ್. ನೆಲ ಕೊಳ್ಳುವುದು, ಮನೆ ಕೊಳ್ಳುವುದು ಅತ್ಯುತ್ತಮ ಹೂಡಿಕೆ ಎಂದು ಬಿಂಬಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ರಿಯಲ್ ಎಸ್ಟೇಟ್ ಮೌಲ್ಯ ಕೂಡ ಇದಕ್ಕೆ ಕಾರಣ. ಜೊತೆಗೆ ಇದಕ್ಕೆ ನಾವು ಎಮೋಷನಲ್ ವ್ಯಾಲ್ಯೂ ಕೂಡ ಜೋಡಿಸಿ ಬಿಡುತ್ತೇವೆ. ಹೀಗಾಗಿ ರಿಯಲ್ ಎಸ್ಟೇಟ್ ಮೇಲಿನ ಹೂಡಿಕೆ ಬೆಸ್ಟ್ ಎನ್ನಿಸಿಕೊಳ್ಳುತ್ತದೆ. ಇದು ಆಸ್ತಿ ಹೌದು. ಆದರೆ ಇದು ಕೂಡ ಲಿಯಬಿಲಿಟಿ ಆಗುತ್ತದೆ. ನಾವು ವಾಸಿಸಲು ಕೊಂಡ ಮನೆಯ ಮೌಲ್ಯ ಅದೆಷ್ಟೇ ಹೆಚ್ಚಲಿ ಅದರಿಂದ ಏನೂ ಪ್ರಯೋಜನವಿಲ್ಲ. ಏಕೆಂದರೆ ನಾವು ಅದನ್ನು ಮಾರಿ ಲಾಭ ಪಡೆದುಕೊಳ್ಳದೇ ಹೋದರೆ ಅದು ಕೇವಲ ಬುಕ್ ಪ್ರಾಫಿಟ್ ಅಷ್ಟೇ, ಇದರಿಂದ ಪ್ರಯೋಜನವಿಲ್ಲ. ಇನ್ನು ಎರಡನೇ ಪ್ರಾಪರ್ಟಿ ಮೇಲೆ ಸುರಿಯುವ ಹಣವನ್ನು ಮತ್ತು ಅದರಿಂದ ಬರುವ ಉತ್ಪತ್ತಿಯನ್ನು ಲೆಕ್ಕ ಮಾಡಿ ನೋಡಿದರೆ ಮತ್ತು ಅದೇ ಹಣವನ್ನು ಬೇರೆಡೆ ಹೂಡಿಕೆ ಮಾಡಿ ಗಳಿಸಬಹುದಾದ ಹಣವನ್ನು ಲೆಕ್ಕ ಹಾಕಿದರೆ ಇದು ಲಿಯಬಲಿಟಿ ಎನ್ನಿಸುತ್ತದೆ. ಅಂದರೆ ನಾವು ಅಪರ್ಚುನಿಟಿ ಕಾಸ್ಟ್ ಗಣನೆಗೆ ತೆಗೆದುಕೊಳ್ಳುವುದಿಲ್ಲ, ಅದನ್ನು ತೆಗೆದುಕೊಂಡು ನೋಡಿದಾಗ ಇದು ಲಿಯಬಿಲಿಟಿ ಎನ್ನಿಸುತ್ತದೆ. ಜೊತೆಗೆ ಅಪಾರ್ಟ್ಮೆಂಟ್ಗಳು ಕೆಲವೊಂದು ಸ್ಥಳಗಳನ್ನು ಬಿಟ್ಟರೆ ಮಿಕ್ಕೆಲ್ಲಾ ಕಡೆ ಮೌಲ್ಯದಲ್ಲಿ ಕುಸಿತವಾಗುತ್ತದೆ. ಇನ್ನು ಆಸ್ತಿ ಹಕ್ಕುಗಳ ಕಿತ್ತಾಟದಲ್ಲಿ ಉಂಟಾಗುವ ಮನೋಬೇನೆಯನ್ನು ಗಣನೆಗೆ ತೆಗೆದುಕೊಂಡರೆ ಇದು ಅತಿ ದೂಡ್ಡ ತಪ್ಪು ಎನ್ನಿಸುತ್ತದೆ.ಬಾಡಿಗೆ ದುಡಿಯುತ್ತದೆ ಎನ್ನುವ ಕಾರಣಕ್ಕೆ ಮನೆಕಟ್ಟುವುದು, ಹೂಡಿಕೆ ದೃಷ್ಟಿಯಿಂದ ಉತ್ತಮ ನಿರ್ಧಾರವಲ್ಲ . ಕೇವಲ 5-7 ಪ್ರತಿಶತ ಗಳಿಕೆ ಆಕರ್ಷಕವಲ್ಲ , ಅಲ್ಲದೆ ದೀರ್ಘಾವಧಿಯಲ್ಲಿ ಕಟ್ಟಿದ ಮನೆಗೆ ಬೆಲೆಯಿಲ್ಲ. ಹೀಗಾಗಿ ಬಾಡಿಗೆ ಕೊಡಲು ಕಟ್ಟುವ ಕಟ್ಟಡ ಲಿಯಬಿಲಿಟಿ ಆಗುತ್ತದೆ.

ವೈಯಕ್ತಿಕ ಬಳಕೆ ವಸ್ತುಗಳು: ಒಡವೆಗಳು, ಬಂಗಾರ, ಕಾರು, ಸ್ಕೂಟರ್ ಇತ್ಯಾದಿ ವಾಹನಗಳು, ಪೀಠೋಪಕರಣ , ಆರ್ಟ್ ವರ್ಕ್, ಬಟ್ಟೆ ಇತ್ಯಾದಿ: ಕಾರು, ಸ್ಕೂಟರ್ ಇತ್ಯಾದಿ ವಾಹನಗಳು ಕಾಲಕ್ರಮೇಣ ಮೌಲ್ಯವನ್ನು ಕಳೆದುಕೊಳ್ಳುತ್ತವೆ, ಜೊತೆಗೆ ಇವುಗಳ ಬಳಕೆಯಿಂದ ನಿತ್ಯವೂ ನಮ್ಮ ಜೋಬಿನಿಂದ ಹಣ ಖರ್ಚಾಗುತ್ತದೆ ಹೀಗಾಗಿ ಇದು ಲಿಯಬಿಲಿಟಿ. ಆದರೆ ಯಾರಿಗೆ ಇದರ ಅವಶ್ಯಕತೆಯಿದೆ, ಅಂದರೆ ಇದರ ಸಹಾಯದಿಂದ ಬಹಳ ಉಪಯೋಗವಾಗುತ್ತದೆ ಅವರಿಗೆ ಇದು ಆಸ್ತಿ. ನೀವೇ ಗಮನಿಸಿ ನೋಡಿ ಜನ ಸಾಮಾನ್ಯ ಕಾರನ್ನು ವಾರದ ಐದು ದಿನ ಅಥವಾ ಆರು ದಿನ ಹೊದಿಕೆಯನ್ನು ಹೊದಿಸಿ ನಿಲ್ಲಿಸಿರುತ್ತಾನೆ. ವಾರಕ್ಕೆ ಅಥವಾ ತಿಂಗಳಿಗೊಮ್ಮೆ ಉಪಯೋಗಿಸುವ ಕಾರಿನ ಮೇಲೆ ಲಕ್ಷಗಟ್ಟಲೆ ಹಣವನ್ನು ಹೂಡಿಕೆ ಮಾಡುತ್ತಾನೆ. ಇದನ್ನು ಆಸ್ತಿ ಎಂದುಕೊಳ್ಳುತ್ತಾನೆ. ಆದರೆ ಇದು ಅವನಿಗೆ ಲಿಯಬಿಲಿಟಿ. ಕಂತು ಕಟ್ಟಿ ಕೊಳ್ಳುವ ಪೀಠೋಪಕರಣ, ಆರ್ಟ್ ವರ್ಕ್, ಬಟ್ಟೆ, ಒಡವೆ ಎಲ್ಲವೂ ಲಿಯಬಿಲಿಟಿ. ಇವುಗಳಿಂದ ಯಾವುದೇ ಮಾಸಿಕ ಆದಾಯವಿರುವುದಿಲ್ಲ, ಜೊತೆಗೆ ಇವುಗಳನ್ನು ಕಾಯುವುದು ದೊಡ್ಡ ಸವಾಲಿನ ಕೆಲಸವಾಗುತ್ತದೆ. ಒಡವೆಯನ್ನು, ಬಂಗಾರವನ್ನು ನಾವು ಇಂದು ಹಾಕಿಕೊಂಡು ಪ್ರದರ್ಶನ ಮಾಡುವ ಸ್ಥಿತಯಲ್ಲಿಲ್ಲ, ಇದನ್ನು ಬ್ಯಾಂಕಿನಲ್ಲಿಡಲು ಲಾಕರ್ ರೆಂಟ್ ಬೇರೆ ಕಟ್ಟಬೇಕು. ಹೀಗಾಗಿ ಇವೆಲ್ಲವೂ ಲಿಯಬಿಲಿಟಿ. ಕೊಳ್ಳುವುದೆ ಆದರೆ ಗೋಲ್ಡ್ ಬಾಂಡ್ ಕೊಳ್ಳುವುದು ಓಕೆ. ಹೀಗಾಗಿ ಇವುಗಳನ್ನು ಹೊಂದಿರುವ ವ್ಯಕ್ತಿಯ ಪರಿಸ್ಥಿತಿಯ ಮೇಲೆ ಇವುಗಳು ಕೂಡ ಆಸ್ತಿ ಅಥವಾ ಲಿಯಬಿಲಿಟಿ ಎನ್ನುವುದು ನಿರ್ಧಾರವಾಗುತ್ತದೆ. ಒಮ್ಮುಖವಾಗಿ ಇದು ಆಸ್ತಿ ಎಂದು ನಿರ್ಧರಿಸುವುದು ತಪ್ಪಾಗುತ್ತದೆ.

ಇನ್ನಿತರ ಹೂಡಿಕೆಗಳು: ಷೇರು, ಬಾಂಡ್, ಮ್ಯೂಚುಯಲ್ ಫಂಡ್, ಇನ್ಶೂರೆನ್ಸ್, ಬೆಲೆಬಾಳುವ ಲೋಹಗಳ ಮೇಲಿನ ಹೂಡಿಕೆ: ಅಳೆದು ತೂಗಿ ಒಳ್ಳೆಯ ಷೇರು, ಬಾಂಡ್ ಕೊಂಡರೆ ಆಸ್ತಿ, ಇಲ್ಲವೇ ಅದು ಲಿಯಬಿಲಿಟಿ. ಇದ್ದುದರಲ್ಲಿ ಇವುಗಳ ಮೇಲಿನ ಹೂಡಿಕೆ ಹೆಚ್ಚಿನ ಲಾಭವನ್ನು ತಂದು ಕೊಡುತ್ತದೆ. ಕನಿಷ್ಠ ಹಣದುಬ್ಬರವನ್ನು ಇದು ಎದುರಿಸುವ ಶಕ್ತಿ ಹೊಂದಿದೆ.

ಕೊನೆ ಮಾತು: ಯಾವುದೆಲ್ಲಾ ನಮಗೆ ನೋವು ಕೊಡುತ್ತದೆ ಅದು ಲಿಯಬಿಲಿಟಿ, ಯಾವುದೆಲ್ಲಾ ಸುಖ ಕೊಡುತ್ತದೆ ಅದು ಆಸ್ತಿ. ಶ್ರೀಮಂತರು ಏನೇ ಮಾಡಿದರೂ ಅದು ನಡೆದು ಹೋಗುತ್ತದೆ. ಶ್ರೀಮಂತರಾಗುವ ಹಂತದಲ್ಲಿರುವವರು ಯಾವುದು ಆಸ್ತಿಯಾಗುತ್ತದೆ ಎನ್ನುವುದನ್ನು ಲೆಕ್ಕಾಚಾರ ಮಾಡಿ ಹೂಡಿಕೆ ಮಾಡಬೇಕು.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com