ಕೆಲಸವೇ ಇಲ್ಲದ ಜಗತ್ತನ್ನು ಊಹಿಸಿಕೊಳ್ಳುವುದು ಹೇಗೆ? (ಹಣಕ್ಲಾಸು)

ಹಣಕ್ಲಾಸು-389-ರಂಗಸ್ವಾಮಿ ಮೂಕನಹಳ್ಳಿ
ಕೆಲಸವೇ ಇಲ್ಲದ ಜಗತ್ತನ್ನು ಊಹಿಸಿಕೊಳ್ಳುವುದು ಹೇಗೆ?
ಕೆಲಸವೇ ಇಲ್ಲದ ಜಗತ್ತನ್ನು ಊಹಿಸಿಕೊಳ್ಳುವುದು ಹೇಗೆ?

ಇವತ್ತಿನ ಸಮಾಜ ನಿಂತಿರುವುದು ದುಡಿಮೆಯ ಮೇಲೆ, ಪ್ರತಿಯೊಬ್ಬರೂ ಒಂದಲ್ಲ ಒಂದು ಕೆಲಸ ಮಾಡಬೇಕು. ತನ್ಮೂಲಕ ಬರುವ ಆದಾಯವನ್ನು ವ್ಯಯಿಸಿ ಜೀವನ ಸಾಗಿಸಬೇಕು. ಇದು ಹಿಂದಿನಿಂದ ಇಲ್ಲಿಯವರೆಗೆ ನಡೆದು ಬಂದಿರುವ ಕ್ರಮ. ಇದರಲ್ಲಿ ಅಲ್ಪಸ್ವಲ್ಪ ಬದಲಾವಣೆಗಳು ಆಗಿವೆ. ಆದರೆ ಒಟ್ಟಾರೆ ಮನುಷ್ಯನ ಬದುಕುವ ರೀತಿ ಕೆಲಸವನ್ನೇ ಅವಲಂಬಿಸಿದೆ. ಕೆಲಸವಿಲ್ಲದ ಬದುಕನ್ನು ಊಹಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. 

ನಮ್ಮ ಸಮಾಜವಂತೂ ಉದ್ಯೋಗಂ ಪುರುಷ ಲಕ್ಷಣಂ ಎಂದು ಕೂಡ ಹೇಳಿ ಬಿಟ್ಟಿದೆ. ಕಾಲ ಬದಲಾಗಿದೆ ಉದ್ಯೋಗಕ್ಕೆ ಹೆಣ್ಣು ಗಂಡಿನ ಭೇದವಿಲ್ಲದ ಮಾರ್ಪಾಟಾಗಿದೆ. ಹೀಗಾಗಿ ಇಲ್ಲಿಯವರೆಗಿನ ಬದುಕು ಒಂದು ರೀತಿಯದ್ದು, ಮುಂದಿನ ದಿನಗಳ ಬದುಕು ಬಹಳ ಬದಲಾಗಿದೆ. ನಾವ್ಯಾರೂ ಅಂದರೆ ಇಡೀ ಮನುಷ್ಯ ಕುಲವೇ ಕೆಲಸ ಮಾಡಬೇಕಾದ ಅವಶ್ಯಕತೆ ಇಲ್ಲ ಎನ್ನುವ ಮಟ್ಟಕ್ಕೆ ಜಗತ್ತು ಬದಲಾಗಲಿದೆ. ಕೆಲಸವೇ ಜಗತ್ತು ಎನ್ನುತ್ತಿದ್ದ ಸಮಾಜದಿಂದ ಕೆಲಸವೇ ಇಲ್ಲ ಎನ್ನುವ ಜಗತ್ತಿಗೆ ನಾವು ಬದಲಾಗಿ ಬಿಟ್ಟರೆ? ಕೆಲಸವಿಲ್ಲದ ಸಮಾಜವನ್ನು ಊಹಿಸಲು ಸಾಧ್ಯವೇ? ಕೆಲಸವಿಲ್ಲದ ಸಮಾಜವನ್ನು ಸೃಷ್ಟಿಸಬಹುದು. ಆದರೆ ಅದರ ಅವಶ್ಯಕತೆಯಿದೆಯೇ? ಕೆಲಸವೇ ಇಲ್ಲ ಎಂದ ಮೇಲೆ ಈ ಜಗತ್ತು ಹೇಗೆ ಕಾರ್ಯ ನಿರ್ವಹಿಸಬಹುದು? ಬದುಕಿನ ಉದ್ದೇಶವೇನು? ನಮಗೆ ಗೊತ್ತಿರುವ ಬದುಕಿನ ಡೆಫಿನಿಷನ್ ಬದಲಾಯಿಸಿಬಿಟ್ಟರೆ ನಮ್ಮ ಅಸ್ತಿತ್ವವನ್ನೇ ಬದಲಿಸಿದಂತೆ, ಪ್ರಶ್ನಿಸಿದಂತೆ ಆಗುವುದಿಲ್ಲವೇ? ಅದು ಹಾಗಿರಲಿ, ಇವತ್ತಿನ ನಮ್ಮ ಆರ್ಥಿಕತೆ ನಿಂತಿರುವುದೇ ದುಡಿಮೆಯ ಮೇಲೆ, ಮನುಷ್ಯರು ಕೆಲಸ ಮಾಡದೆ ಆರ್ಥಿಕತೆ ಹೇಗೆ ಕೆಲಸ ಮಾಡುತ್ತದೆ. 

ಹೀಗೆ ಹತ್ತಾರು ಪ್ರಶ್ನೆಗಳು ಉದ್ಭವಾಗುತ್ತದೆ. ಇಷ್ಟಕ್ಕೂ ಇಷ್ಟೆಲ್ಲಾ ಮಾತುಗಳು ಬಂದದ್ದಾದರೂ ಏಕೆ ಗೊತ್ತೇ? ನಿಮಗೆಲ್ಲಾ ಎಲಾನ್ ಮಸ್ಕ್ ಎನ್ನುವ ಮನುಷ್ಯನ ಬಗ್ಗೆ ಗೊತ್ತೇ ಇರುತ್ತದೆ. ಕೆಲವು ದಿನಗಳ ಹಿಂದೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಜೊತೆಗೆ ಈತ ಮಾತುಕತೆಯಲ್ಲಿ ತೊಡಗಿದ್ದರು. Bletchley Park summit on Artificial Intelligence (AI) ಸಮಾರಂಭದಲ್ಲಿ ಇರ್ವರೂ ಮುಖಾಮುಖಿಯಾಗಿದ್ದರು. ಆಗಿನ ಸಮಯದಲ್ಲಿ ಎಲಾನ್ ಮಸ್ಕ್ ಮಾತನಾಡುತ್ತಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಹಾಯದಿಂದ ಮನುಷ್ಯ ದೈಹಿಕ ಮತ್ತು ಮಾನಸಿಕ ಶ್ರಮವನ್ನು ವ್ಯಯಿಸಿ ಮಾಡುವ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯ. ಮನುಷ್ಯ ಕೆಲಸ ಮಾಡಲು ಬಯಸಿದರೆ ಅದು ಕೇವಲ ಅವನ ಆತ್ಮ ತೃಪ್ತಿಗೆ ಮಾತ್ರ ಮಾಡಬಹುದು, ಉಳಿದಂತೆ ಜಗತ್ತಿನ ಯಾವ ಮನುಷ್ಯನೂ ಕೆಲಸ ಮಾಡುವ ಅಗತ್ಯವೇ ಇಲ್ಲ ಎಂದಿದ್ದಾರೆ.

ಆರ್ಟಿಫಿಸಿಷಿಯಲ್ ಇಂಟೆಲಿಜೆನ್ಸಿ ತನಗೆ ವಹಿಸಿದ ಕೆಲಸದ ಜೊತೆಗೆ ಸಮಯ ಮತ್ತು ಸಂದರ್ಭವನ್ನು ಅರಿತು ಅದಕ್ಕೆ ತಕ್ಕಂತೆ ಕೂಡ ಕಾರ್ಯ ನಿರ್ವಹಿಸುವ, ಲಾಜಿಕಲ್ ನಿರ್ಧಾರಗಳನ್ನು ತೆಗೆದುಕೊಳ್ಳುವ ಕ್ಷಮತೆಯನ್ನು ಹೊಂದಲಿವೆ. ಇದಕ್ಕೆ ಬೇಕಾಗುವುದು ಜಗತ್ತಿನ ಜನಸಂಖ್ಯೆಯ ಬೆರಳೆಣಿಕೆಯ ಜನ ಮಾತ್ರ. ಉಳಿದವರಿಗೆ ಕೆಲಸವೇ ಇರುವುದಿಲ್ಲ. ಇದು ಸಾಧ್ಯವೇ? ಖಂಡಿತ ಇದು ಸಾಧ್ಯ ಆದರೆ ಪ್ರಶ್ನೆ ಇರುವುದು ಇದು ಸಾಧುವೆ? ಇದು ಬೇಕೇ ಎನ್ನುವುದರಲ್ಲಿ. ಏಕೆಂದರೆ ನೀವೇ ಗಮನಿಸಿ ನೋಡಿ ಜಗತ್ತಿನ ಎಲ್ಲಾ ಕೆಲಸಗಾರರ ಕೆಲಸವನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಮಾಡಿ ಮುಗಿಸಿತು ಎಂದುಕೊಳ್ಳಿ, ಜನರ ಆದಾಯದ ಗತಿಯೇನು? ಬದುಕಿಗೆ ಬೇಕಾದ ಆಹಾರ, ಬಟ್ಟೆ, ವೈದ್ಯಕೀಯ ಸೇವೆ ಇವುಗಳನ್ನು ಆತ ಆದಾಯವಿಲ್ಲದೆ ಹೇಗೆ ಪಡೆದುಕೊಳ್ಳಲು ಸಾಧ್ಯ? ಇವತ್ತಿನ ವರ್ಲ್ಡ್ ಆರ್ಡರ್ ಧೋಳಿಪಟ ಮಾಡುವುದು ಕ್ಷಣದ ಕೆಲಸ ಆದರೆ ಅದರಿಂದ ಉಂಟಾಗುವ ಪರಿಣಾಮವನ್ನು ಹೇಗೆ ನಿಭಾಯಿಸುವುದು. ಇಂದಿನ ವ್ಯವಸ್ಥೆಗೆ ಪರ್ಯಾಯ ಕಲ್ಪಿಸದೆ ಹೊಸ ವ್ಯವಸ್ಥೆ ಸೃಷ್ಟಿಸಿದರೆ ಅದರಿಂದ ಅಪಾಯವೇ ಹೆಚ್ಚು.

ಇನ್ನೊಂದು ವಿಷಯವನ್ನು ಕೂಡ ನಾವು ಗಮನಿಸಬೇಕು. ಇದು ಹೇಳಿಕೇಳಿ ಕ್ಯಾಪಿಟಲಿಸ್ಟ್ ಸಮಾಜ. ಇದು ಎಂದರೆ ಪೂರ್ಣ ಜಗತ್ತು ಎನ್ನುವ ಲೆಕ್ಕಾಚಾರದಲ್ಲಿ ಹೇಳಿದ್ದೇನೆ.ಇಲ್ಲೇನಿದ್ದರೂ ಲಾಭ ಮತ್ತು ನಷ್ಟದ ಲೆಕ್ಕಾಚಾರದಲ್ಲಿ ಸಮಾಜ ನಡೆಯುತ್ತಿದೆ. ಎಲ್ಲವನ್ನೂ ತಂತ್ರಜ್ಞಾನ ಮಾಡಿದರೆ, ಮನುಷ್ಯರ ಅವಶ್ಯಕತೆ ಇಲ್ಲದಿದ್ದರೆ, ಅವರು ಉತ್ಪಾದಿಸಿದ ಪದಾರ್ಥಗಳನ್ನು ಕೊಳ್ಳುವವರು ಯಾರು? ಇನ್ಫ್ಯಾಕ್ಟ್ ಉತ್ಪಾದನೆ ಏಕೆ ಬೇಕು? ಇವತ್ತಿನ ಕ್ಯಾಪಿಟಲಿಸ್ಟ್ ಸಮಯದಲ್ಲಿ ಇಲ್ಲಿಯ ತನಕ ಮಾಡಿಕೊಂಡು ಬಂದ ಎಲ್ಲಕ್ಕೂ ಒಂದು ಅರ್ಥವಿದೆ. ಜನ ಸಾಮಾನ್ಯರಿಂದ ಹಿಡಿದು ಎಲ್ಲರ ಬದುಕಿಗೂ ಒಂದು ಅರ್ಥವಿದೆ. ಲಾಭವಿಲ್ಲದ ಇಂತಹ ವ್ಯವಸ್ಥೆಯಿಂದ ಸಾಧಿಸುವುದಾದರೂ ಏನು? ನೀವು ಗಮನಿಸಿ ನೋಡಿದರೆ ಇದನ್ನೇ ಅಲ್ಲವೇ ನಮ್ಮ ಸನಾತನ ಧರ್ಮ ಸಾವಿರಾರು ವರ್ಷಗಳ ಹಿಂದೆ ಹೇಳಿದ್ದು. ತೀರಾ ಕಡಿಮೆ ಅವಶ್ಯಕತೆಗಳಲ್ಲಿ ಅವರು ಸಾವಿರಾರು ವರ್ಷ ಬಾಳಿ ಹೋದರು. ನಾವು ಹೊಸ ವ್ಯವಸ್ಥೆಯನ್ನು ಹುಟ್ಟುಹಾಕಿದೆವು. ಕೆಲಸ ಸಿಗದಿದ್ದರೆ, ಕೆಲಸವಿಲ್ಲದಿದ್ದರೆ ಬದುಕಿಗೆ ಅರ್ಥವಿಲ್ಲ ಎನ್ನುವ ವ್ಯವಸ್ಥೆಯನ್ನು ಸೃಷ್ಟಿಸಿದೆವು. ಈಗ ಮತ್ತೆ ನಮ್ಮ ಬಳಿ ತಂತ್ರಜ್ಞಾನವಿದೆ ಅದರ ಸಹಾಯದಿಂದ ಎಲ್ಲವನ್ನೂ ಮಾಡಬಲ್ಲೆವು ಎನ್ನುತ್ತಿದ್ದಾರೆ. ಜನರೇ ಬೇಡ ಎನ್ನಲಾಗುತ್ತಿದೆ. 

ನಮ್ಮ ಮೂಲಭೂತ ಬದುಕಿಗೆ ಬೇಕಾದ ಅವಶ್ಯಕ ಪದಾರ್ಥಗಳ ಖರೀದಿ ಹೇಗೆ? ಸದ್ಯಕ್ಕೆ ಇದಕ್ಕೆ ಉತ್ತರವಿರುವುದು ಒಂದೇ ಅಂಶದಲ್ಲಿ ಅದೇ ಯೂನಿವರ್ಸಲ್ ಬೇಸಿಕ್ ಇನ್ಕಮ್. ಜಗತ್ತಿನ ಎಲ್ಲಾ ಜನರಿಗೂ ಮಾಸಿಕ ಇಷ್ಟು ಹಣ ಎಂದು ಕೊಡುವುದಕ್ಕೆ ಯೂನಿವರ್ಸಲ್ ಬೇಸಿಕ್ ಇನ್ಕಮ್ ಎನ್ನಲಾಗುತ್ತದೆ. ಇದರಲ್ಲಿ ಕೂಡ ಪ್ರಶ್ನೆಗಳು ಉದ್ಭವವಾಗುತ್ತದೆ. ಯಾವ ಆಧಾರದ ಮೇಲೆ ಹಣವನ್ನು ನಿರ್ಧರಿಸುವುದು? ಎಲ್ಲರಿಗೂ ಒಂದೇ ಮೊತ್ತವನ್ನು ನಿರ್ಧರಿಸುವುದಾ? ಬೇರೆ ಮೊತ್ತವಾದರೆ ಅದಕ್ಕೆ ಆಧಾರವೇನು? ಕೇವಲ ಅವಶ್ಯಕ ವಸ್ತುವಿಗೆ ಹಣವನ್ನು ನೀಡಿದರೆ ಎಷ್ಟು ದಿನ ತಾನೇ ಆ ಬದುಕನ್ನು ಬದುಕಲು ಸಾಧ್ಯ? ಬೇಸರ ಬಂದು ಸಮಾಜ ತಿರುಗಿ ಬೀಳುವುದಿಲ್ಲವೇ? ಎನ್ನುವ ಪ್ರಶ್ನೆಗಳು ಉತ್ಪನ್ನವಾಗುತ್ತದೆ. ಇವತ್ತಿನ ಸಮಾಜದಲ್ಲಿ ಹುಳುಕುಗಳಿಲ್ಲ ಎನ್ನುವಂತಿಲ್ಲ, ಅತಿಯಾದ ಅಂತರವನ್ನು ಈ ಸಮಾಜ ಸೃಷ್ಟಿ ಮಾಡಿದೆ. ಕೆಲವೇ ಕೆಲವು ಬಿಲಿಯನೇರ್ ಜನರ ಕೈಯಲ್ಲಿ ಸಮಾಜ ಸಿಲುಕಿದೆ. ನಾಳಿನ ಪ್ರಶ್ನೆಯೇನೆಂದರೆ ಈ ಹೊಸ ವ್ಯವಸ್ಥೆಯನ್ನು ನಡೆಸಲು ಅದಕ್ಕೂ ಬಂಡವಾಳ ಹಾಕಲು ಇದೆ ಬಿಲಿಯನೇರ್ಗಳು ಬೇಕು. ಹೀಗಾಗಿ ಇವತ್ತಿನ ಸಮಾಜದ ಎಲ್ಲಾ ಹುಳುಕುಗಳ ಜೊತೆಗೆ ಹೊಸ ಸಮಸ್ಯೆಯನ್ನು ಹೊಸ ವ್ಯವಸ್ಥೆ ಹುಟ್ಟುಹಾಕಲಿದೆ.

ಬದುಕಿಗೆ ಅರ್ಥ ಬೇಕು, ಉದ್ದೇಶ ಬೇಕು. ಮನುಷ್ಯನ ಮುಂದೆ ಈ ಉದ್ದೇಶ ಇರುವ ಕಾರಣಕ್ಕೆ ಜಗತ್ತಿನಲ್ಲಿ ಇನ್ನೂ ಈ ಮಟ್ಟಿನ ಶಾಂತಿ ನೆಲೆಸಿದೆ. ಅವನಿಂದ ಬದುಕಿನ ಅರ್ಥವನ್ನು , ಉದ್ದೇಶವನ್ನು ಕಿತ್ತು ಕೊಂಡು ಬಿಟ್ಟರೆ? ಬದುಕು ಮೂರಾಬಟ್ಟೆ. ಸಧ್ಯದ ಸ್ಥಿತಿಯಲ್ಲಿ ಬೇಸಿಕ್ ಇನ್ಕಮ್ ಗ್ಯಾರಂಟಿ (BIG) ಅಥವಾ ಯೂನಿವರ್ಸಲ್  ಬೇಸಿಕ್ ಇನ್ಕಮ್ (UBI) ಅಥವಾ ಮಿನಿಮಮ್ ಇನ್ಕಮ್ ಗ್ಯಾರಂಟಿ (MIG) ಎನ್ನುವುದುಬೇರೆ ಬೇರೆ ರೂಪದಲ್ಲಿ ಭಾರತದಲ್ಲಿ ಚಾಲನೆಯಲ್ಲಿದೆ. ಬೆಂಕಿಯಿಲ್ಲದೆ ಹೊಗೆ ಹೇಗೆ ಬಂದೀತು? ಇಂದಿನ ಸಣ್ಣ ಕಿಡಿ ಇನ್ನೊಂದು ದಶಕದಲ್ಲಿ ಕಾಳ್ಗಿಚ್ಚಿನಂತೆ ಜಗತ್ತನ್ನ  ಅವರಿಸದೆ ಇರುವುದೇ? ಮುಂದಿನ ಐದು ವರ್ಷದಲ್ಲಿ ಜಗತ್ತು ಅಮೂಲಾಗ್ರ ಬದಲಾವಣೆ ಹೊಂದುವುದಂತೂ ಸತ್ಯ. ಭಾರತದ ಮಟ್ಟಿಗೆ ಹೇಳುವುದಾದರೆ, ಭಾರತ ಈ ರೀತಿಯ ವ್ಯವಸ್ಥೆಯನ್ನ ಜಾರಿಗೆ ತರುವ ಮೊದಲ ದೇಶವಾಗುವ ಸಾಧ್ಯತೆಯಿದೆ.

ಈ ಹೊಸ ವ್ಯವಸ್ಥೆ ನಮಗೆ ಬೇಕಿಲ್ಲ, ಆದರೆ ಇದು ನಮ್ಮ ಮುಂದೆ ಆಗಲೇ ಕಾಣುತ್ತಿದೆ. ಇದು ಜಾಗತಿಕವಾಗಿ ಚಾಲನೆಗೆ ಬರಲು ಒಂದಷ್ಟು ಸಮಯ ಹಿಡಿಯಬಹುದು. ಆದರೆ ಇದನ್ನು ನಾವು ಅವಾಯ್ಡ್ ಮಾಡಲಂತೂ ಸಾಧ್ಯವಿಲ್ಲ. ಮೊನ್ನೆ ಎಲಾನ್ ಮಸ್ಕ್ ಆಡಿದ ಮಾತುಗಳು ಇದನ್ನು ಇನ್ನಷ್ಟು ಪುಷ್ಟಿಕರಿಸುತ್ತದೆ. ನಾವು ಬದುಕಲು ಹೊಸ ದಾರಿ, ಹೊಸ ಉದ್ದೇಶವನ್ನು ಹುಡುಕಿಕೊಳ್ಳುವ ಸಮಯ ದೂರವಿಲ್ಲ. ಒಂದೆರೆಡು ವಾರಗಳ ಹಿಂದೆ ನಾರಾಯಣ ಮೂರ್ತಿಯವರು ಭಾರತದ ಜನತೆಗೆ 14 ಗಂಟೆ ಕೆಲಸ ಮಾಡಿ ಎಂದು ಕರೆ ಕೊಟ್ಟರು. ಮೊನ್ನೆ ಎಲಾನ್ ಮಸ್ಕ್ ಜಗತ್ತಿನ ಯಾರೊಬ್ಬರೂ ಕೆಲಸ ಮಾಡುವ ಅವಶ್ಯಕತೆಯೇ ಇಲ್ಲ ಎನ್ನುತ್ತಾನೆ, ಕೆಲಸ ಮಾಡುವುದೇ ಆದರೆ ಕೇವಲ ಆತ್ಮತೃಪ್ತಿಗಾಗಿ ಮಾಡಬೇಕು ಅಷ್ಟೇ, ಮಿಕ್ಕೆಲ್ಲವನ್ನೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮಾಡುತ್ತದೆ ಎನ್ನುತ್ತಾರೆ. ಇಬ್ಬರ ಮಾತಿನಲ್ಲಿ ಅದೆಷ್ಟು ವೈರುಧ್ಯ.

ಕೊನೆಮಾತು: ಜಗತ್ತು 14 ತಾಸು ಕೆಲಸ ಮಾಡುವ ಕಾಲಘಟ್ಟದಿಂದ ದೂರಾಗುತ್ತಿರುವುದು ಸತ್ಯ. ಯೂರೋಪಿನ ದೇಶಗಳಲ್ಲಿ ಈಗಾಗಲೇ ವಾರದಲ್ಲಿ ನಾಲ್ಕುವರೆ ದಿನ ಕೆಲಸ ಮಾಡುವ ಸಂಪ್ರದಾಯ ಶುರುವಾಗಿದೆ. ಮುಂಬರುವ ದಿನಗಳಲ್ಲಿ ನಾವು ಮಾಡುವ ಎಲ್ಲಾ ಕೆಲಸಗಳನ್ನೂ ಮಷೀನ್ ಮಾಡಿ ಮುಗಿಸುತ್ತದೆ ಅದರಲ್ಲಿ ಯಾವುದೇ ಸಂಶಯವಿಲ್ಲ. ಇಂದಲ್ಲ ನಾಳೆ ಜಗತ್ತು ಹೊಸ ವಿಶ್ವ ವ್ಯವಸ್ಥೆಗೆ ಅಣಿಯಾಗಲೇ ಬೇಕಿದೆ. ಹೇಗೆ ಏನು ಎನ್ನುವ ರೂಪುರೇಷೆಗಳನ್ನು ಮಾತ್ರ ಸಿದ್ಧಪಡಿಸಬೇಕಿದೆ. ಇವೆಲ್ಲವುಗಳ ನಡುವೆ ನಾವ್ಯಾರು? ನಮ್ಮ ಅಸ್ತಿತ್ವವೇನು? ಬದುಕಿನ ಉದ್ದೇಶವೇನು? ಎನ್ನುವ ಪ್ರಶ್ನೆಗಳಿಗೆ ನಾವು ಉತ್ತರವನ್ನು ಈಗಲೇ ಹುಡುಕಿಕೊಳ್ಳುವ ಕೆಲಸವನ್ನು ಮಾಡಬೇಕಿದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com