ರಿಸ್ಕ್ ಇಲ್ಲದ ಸಮಯ, ವ್ಯಾಪಾರ ಇಲ್ಲಿಲ್ಲ! (ಹಣಕ್ಲಾಸು)

ಹಣಕ್ಲಾಸು-392-ರಂಗಸ್ವಾಮಿ ಮೂಕನಹಳ್ಳಿ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನೀವು ಕ್ರಿಕೆಟ್ ಆಟವನ್ನು ನೋಡಿರುತ್ತೀರಿ, ಬ್ಯಾಟ್ಸಮನ್ ಕ್ರಿಸ್ನಿಂದ ಹೊರಬಂದು ಬ್ಯಾಟ್ ಬೀಸುತ್ತಾನೆ. ಫೋರ್ ಅಥವಾ ಸಿಕ್ಸರ್ ಹೊಡೆದಾಗ ನೀವು ಗಮನಿಸಿ ನೋಡಿ, ಮುಕ್ಕಾಲು ಪಾಲು ತಾವು ನಿಂತ ಜಾಗದಿಂದ ಹೊರಬಂದು ಬ್ಯಾಟ್ ಬೀಸುವುದು ನಿಮಗೆ ತಿಳಿಯುತ್ತದೆ. ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ನಿಂತ ಜಾಗದಿಂದ ಕದಲದೆ ಸಿಕ್ಸರ್ ಹೊಡೆಯಬಹುದು. ಆದರೆ ಬಹುತೇಕ ಬಾರಿ ಬ್ಯಾಟ್ಸಮನ್ ಆದವನು ಬಾಲಿನ ವೇಗ, ತಿರುವು ಇತ್ಯಾದಿಗಳನ್ನು ಅಂದಾಜಿಸಿ ನಿಂತ ಜಾಗದಿಂದ ಹೊರಬಂದು ಹೊಡೆಯಬೇಕಾಗುತ್ತದೆ. ಹೀಗೆ ಮಾಡುವ ಸಮಯದಲ್ಲಿ ರಿಸ್ಕ್, ಅಂದರೆ ಔಟ್ ಆಗುವ ಅಪಾಯ ಇದ್ದೆ ಇರುತ್ತದೆ. ಶೀಘ್ರಗತಿಯಲ್ಲಿ ರನ್ ಹೊಡೆಯಲು, ಜನ ಮಾನಸದಲ್ಲಿ ಶಾಶ್ವತವಾಗಿ ಉಳಿಯಲು ಅಷ್ಟರಮಟ್ಟಿನ ರಿಸ್ಕ್ ತೆಗೆದುಕೊಳ್ಳದೆ ಬೇರೆ ದಾರಿಯಲ್ಲ.

ಮೇಲಿನ ಉದಾಹರಣೆಯನ್ನು ನೀವು ಬದುಕಿನ ಎಲ್ಲಾ ಮಜಲುಗಳಿಗೂ ಅನ್ವಯಿಸಿಕೊಳ್ಳಬಹುದು. ವೇತನಕ್ಕೆ ದುಡಿಯುತ್ತ ಜೀವನ ಸವೆಸುವುದು ಒಂದು ಕಾಲದಲ್ಲಿ ಸೇಫ್ ಆಗಿತ್ತು. ಇವತ್ತು ಕೆಲಸವಿರುತ್ತದೆ ಎನ್ನುವ ಗ್ಯಾರಂಟಿ ಕೂಡ ಇಲ್ಲ. ಹೀಗಾಗಿ ನಾವೆಲ್ಲರೂ ಒಂದಷ್ಟು ರಿಸ್ಕ್ ತೆಗೆದುಕೊಳ್ಳಬೇಕು. ಬೇರೆ ದಾರಿಯಿಲ್ಲ. ಸರಿ ರಿಸ್ಕ್ ತೆಗೆದುಕೊಳ್ಳಬೇಕು ಎನ್ನುವ ಕಾರಣಕ್ಕೆ ನಾವು ರಿಸ್ಕ್ ತೆಗೆದುಕೊಳ್ಳಲು ಕೂಡ ಸಾಧ್ಯವಿಲ್ಲ. ಅಪಾಯದ ಅಂದಾಜು ಅದು ಮಾಡಬಹುದಾದ ಡ್ಯಾಮೇಜ್ ಅಂದಾಜು ನಮಗಿರಬೇಕು. ಎಲ್ಲಿಯವರೆಗೆ ನಾವು ಆ ಅಪಾಯವನ್ನು ತಡೆದುಕೊಳ್ಳಬಲ್ಲೆವು ಎನ್ನುವುದು ಕೂಡ ತಿಳಿದುಕೊಂಡಿರಬೇಕು. ಗಮನಿಸಿ ನೋಡಿ ರಿಲೈಯನ್ಸ್ ಗ್ರೂಪ್ನವರು ಎಲ್ಲೆಡೆ ಪೆಟ್ರೋಲ್ ಬಂಕ್ ತೆಗೆಯಬೇಕು ಎಂದು ಶುರು ಮಾಡಿದರು. ಆದರೆ ಅದು ಯಶಸ್ವಿಯಾಗಲಿಲ್ಲ. ಕೋಟ್ಯಂತರ ರೂಪಾಯಿ ನಷ್ಟವನ್ನು ಅವರಿ ಅನುಭವಿಸಿದರು. ಆದರೆ ಆ ನಷ್ಟವನ್ನು ತಡೆದುಕೊಳ್ಳುವ ಶಕ್ತಿ ಸಂಸ್ಥೆಗಿತ್ತು. ಹೀಗಾಗಿ ನಡೆಯುತ್ತದೆ. ಇನ್ನೊಂದು ಉದಾಹರಣೆ ನೋಡೋಣ. ಫೋರ್ಡ್ ಸಂಸ್ಥೆ ಅಮೇರಿಕಾ ದೇಶದ ಅಗ್ರಗಣ್ಯ ಕಾರು ತಯಾರಿಕಾ ಸಂಸ್ಥೆ. ಒಂದಲ್ಲ ಎರಡಲ್ಲ ಹತ್ತಿರತ್ತಿರ 130 ದೇಶದಲ್ಲಿ ತನ್ನ ಘಟಕಗಳನ್ನು ತೆಗೆದು ಅಲ್ಲೆಲ್ಲಾ ಯಶಸ್ವಿಯಾದ ಸಂಸ್ಥೆ. ಭಾರತದಲ್ಲೂ ಫೋರ್ಡ್ ದಶಕಗಳ ಕಾಲ ತನ್ನ ಘಟಕವನ್ನು ಹೊಂದಿತ್ತು. ತೀರಾ ಇತ್ತೀಚಿಗೆ ತನ್ನ ಘಟಕವನ್ನು ಮುಚ್ಚಿ ಬಿಟ್ಟಿತು. ಈ ಮಧ್ಯೆ ಅದು ಭಾರತದ ಮಾರುಕಟ್ಟೆಯಲ್ಲಿ ಸಾವಿರಾರು ಕೋಟಿ ರೂಪಾಯಿಯನ್ನು ಸುರಿದಿತ್ತು. ಫೋರ್ಡ್ ನಂತಹ ದೊಡ್ಡ ಸಂಸ್ಥೆ ಭಾರತದ ಮಾರುಕಟ್ಟೆಯನ್ನು ಅರಿಯುವಲ್ಲಿ ಮಾಡಿಕೊಂಡ ಎಡವಟ್ಟು ಅದರ ಅವನತಿಗೆ ಕಾರಣವಾಯ್ತು. ಗಮನಿಸಿ ನೋಡಿ ಭಾರತದ ಕಾರು ಮಾರುಕಟ್ಟೆ ಉಛ್ಛ್ರಾಯ ಸ್ಥಿತಿಯಲ್ಲಿದ್ದಾಗ ಕೂಡ ಫೋರ್ಡ್ ತನ್ನ ಪದಾರ್ಥವನ್ನು ಮಾರುವಲ್ಲಿ ವಿಫಲವಾಯ್ತು. ಕೊನೆಗೆ ತನ್ನ ಘಟಕವನ್ನು ಮುಚ್ಚಿ ಭಾರತದಿಂದ ಹೊರಹೋಗಬೇಕಾಯ್ತು.

ಇದನ್ನೂ ಓದಿ: Assets and Liabilities ಯಾವುವು ಎನ್ನುವುದನ್ನು ತಿಳಿಯುವುದು ಹೇಗೆ?... ಇಲ್ಲಿದೆ ಮಾಹಿತಿ (ಹಣಕ್ಲಾಸು)

ಮೇಲಿನ ಉದಾಹರಣೆ ಹೇಳಿದ ಅರ್ಥ ಸರಳ. ಕೇವಲ ಹಣ ಹೂಡಿಕೆ ಮಾಡುವುದರಿಂದ, ಕೇವಲ ಕಷ್ಟಪಡುವುದರಿಂದ ಯಶಸ್ಸು, ಶ್ರೀಮಂತಿಕೆ ಸಿಗುವುದಿಲ್ಲ. ಅದನ್ನು ಗಳಿಸಲು ಪೂರ್ಣ ಪ್ರಮಾಣದ ಅರಿವಿರಬೇಕು. ಅಂದರೆ ಸುತ್ತಮುತ್ತಲಿನ ಎಲ್ಲಾ ಆಗುಹೋಗುಗಳ ಮೇಲೆ ಸದಾ ಒಂದು ಕಣ್ಣಿರಬೇಕು. ಅಯ್ಯೋ ಅದು ನನ್ನ ಕಾರ್ಯಕ್ಷೇತ್ರವಲ್ಲ ಎಂದು ನಿರ್ಲಕ್ಷ ಮಾಡುವಂತಿಲ್ಲ!

ಹೂಡಿಕೆ ಕ್ಷೇತ್ರದಲ್ಲಿ ಒಂದು ಜನಜನಿತ ಮಾತಿದೆ. ಅಪಾಯ ಮತ್ತು ಲಾಭ ಜೊತೆಯಲ್ಲಿ ಹೆಜ್ಜೆ ಹಾಕುತ್ತವೆ ಎನ್ನುವುದು ಆ ಮಾತು. ಇದನ್ನು ಸ್ವಲ್ಪ ಕೊಲಂಕುಷವಾಗಿ ವಿವೇಚಿಸಬೇಕು. ಮೊದಲೇ ಹೇಳಿದಂತೆ ಯೋಚಿಸದೆ, ಲೆಕ್ಕಾಚಾರ ಮಾಡದೆ ಅಪಾಯವನ್ನು ಮೇಲೆದುಕೊಳ್ಳುವುದು ಮೂರ್ಖತನವಾದೀತು. ಆದರೆ ಅಪಾಯವನ್ನು ತೆಗೆದುಕೊಳ್ಳದೆ ನಮಗೆ ಬೇಕಾದ ಫಲಿತಾಂಶವನ್ನು ಪಡೆಯಲು ಸಾಧ್ಯವಿಲ್ಲ ಎನ್ನುವುದು ಕೂಡ ಸತ್ಯ.

ನಮ್ಮಲ್ಲಿ ಅಂದರೆ ಹಿಂದೂ ಧರ್ಮದಲ್ಲಿ ಸಾವಿರಾರು ದೇವತೆಗಳು ಇದ್ದಾರೆ. ಆದರೆ ಮುಖ್ಯವಾಗಿ ನಾವು ಹೇಳುವುದು ತ್ರಿಮೂರ್ತಿಗಳ ಬಗ್ಗೆ ಮಾತ್ರ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ. ಇವರನ್ನು ಸೃಷ್ಟಿ-ಸ್ಥಿತಿ-ಲಯ ಕ್ಕೆ ಕಾರಣರು ಎಂದು ನಂಬಲಾಗಿದೆ. ಅಂತೆಯೇ ಲಕ್ಷ್ಮಿ -ಪಾರ್ವತಿ -ಸರಸ್ವತಿ ಯರನ್ನು ಹಣ -ಶಕ್ತಿ -ಬುದ್ದಿಗೆ ಅದಿ ದೇವತೆಗಳು ಎಂದು ನಾವು ನಂಬುತ್ತೇವೆ. ಇನ್ನು ಶ್ರೀಮಂತಿಕೆಯ ದಾರಿಯಲ್ಲಿ ಕೂಡ ಒಂದಲ್ಲ ಹತ್ತಾರು ಕಾರಣಗಳು, ಸವಾಲುಗಳು ಎದುರಾಗುತ್ತವೆ. ಇಲ್ಲಿ ಕೂಡ ನಾವು ಮುಖ್ಯವಾಗಿ ಮೂರು ಅಂಶಗಳನ್ನು ಮಾತ್ರ ಹೇಳುತ್ತೇವೆ. ಅದೆ ರಿಸ್ಕ್ -ರಿಟರ್ನ್ -ಟೈಮ್.

ಅಪಾಯ:
ಅಪಾಯ ಎಲ್ಲಿಲ್ಲ ಹೇಳಿ? ಅಪಾಯ ಎಂದು ಕೆಲಸ ಮಾಡದೆ ಅದನ್ನು ಸವಾಲಾಗಿ ಸ್ವೀಕರಿಸದೆ ಹೋಗಿದ್ದರೆ ನಾವು ಇಷ್ಟು ದೂರ ಬರುತ್ತಿರಲಿಲ್ಲ. ಈ ಅಕ್ಷರಗಳನ್ನು ನಾನು ಕಂಪ್ಯೂಟರ್ ಪರದೆಯ ಮೇಲೆ ಬರೆಯಲು ಆಗುತ್ತಿರಲಿಲ್ಲ. ನಮ್ಮ ಪೂರ್ವಜರನ್ನು ನೋಡಿ ನಿತ್ಯ ಬೆಳಿಗ್ಗೆ ಎದ್ದಾಗ ಅವರ ಮುಂದೆ ಇರುತ್ತಿದ್ದದ್ದು ಎರಡೇ ಆಯ್ಕೆ. ಒಂದು ಕಾಡಿನಲ್ಲಿ ಭೇಟೆಗೆ ಅಥವಾ ವ್ಯವಸಾಯಕ್ಕೆ ಹೋಗುವುದು, ಆ ಪ್ರಯಾಣದಲ್ಲಿ ಕಾಡುಮೃಗಗಳ ಬಾಯಿಗೆ ಆಹಾರವಾಗುವುದು, ಇತರ ಟ್ರೈಬ್ಗಳ ದಾಳಿಯಲ್ಲಿ ಮರಣ ಆಪ್ಪುವುದು. ಎರಡು ಯಾವುದು ಬೇಡ ಎಂದು ಮನೆಯಲ್ಲಿ ಕುಳಿತು ಉಪವಾಸ ಸಾಯುವುದು. ನಮ್ಮ ಹಿರಿಯರು ಆಯ್ಕೆ ಮಾಡಿಕೊಂಡದ್ದು ಅಪಾಯದ ಹಾದಿಯನ್ನು! ಅದಕ್ಕೆ ನಾವಿಂದು ಇಲ್ಲಿದ್ದೇವೆ. ಹಾಗೆ ನೋಡಲು ಹೋದರೆ ಇಂದಿಗೆ ನಾವು ಅತ್ಯಂತ ಸುರಕ್ಷಿತ ಸಮಯದಲ್ಲಿ ವಾಸಿಸುತ್ತಿದ್ದೇವೆ.

ನಾವು ಮನೆ ಬಿಟ್ಟ ತಕ್ಷಣ, ಮನೆಯಲ್ಲಿ ಕುಳಿತ್ತಿದ್ದಾಗ, ಕೆಲಸದ ಜಾಗದಲ್ಲಿ, ಪ್ರಯಾಣದ ವೇಳೆ ಹೀಗೆ ಎಲ್ಲಾ ಕಡೆ ಎಲ್ಲಾ ಸಮಯದಲ್ಲೂ ಅಪಾಯ ಇದ್ದೆ ಇರುತ್ತದೆ. ಅಪಾಯ ಎಂದು ಸುಮ್ಮನೆ ಕೂರುವುದಕ್ಕಿಂತ ದೊಡ್ಡ ಅಪಾಯ ಬೇರೇನಿದ್ದೀತು ಅಲ್ವಾ? ನೀವು ನಮ್ಮ ದೇಶದ ವ್ಯಾಪಾರಿ ಸಮುದಾಯವನ್ನು ಗಮನಿಸಿ ನೋಡಿ. ಸಿಂಧಿಗಳು, ಮಾರ್ವಾಡಿಗಳು, ಗುಜರಾತಿಗಳು ತಮ್ಮ ನೆಲವನ್ನು ಬಿಟ್ಟು ಸಾವಿರಾರು ಮೈಲಿ ಪ್ರಯಾಣ ಮಾಡುತ್ತಾರೆ. ವಲಸೆ ಹೋಗುತ್ತಾರೆ. ಬೇರೆಡೆ ನೆಲಸುತ್ತಾರೆ. ಅಲ್ಲಿನ ಭಾಷೆ, ರೀತಿ ರಿವಾಜು ಕಲಿಯುತ್ತಾರೆ, ತಮ್ಮದನ್ನೂ ಉಳಿಸಿಕೊಂಡು ನಡೆಯುತ್ತಾರೆ. ದೂರದ ಅಮೆರಿಕಾದಲ್ಲಿ ಹೆಚ್ಚು ಓದಿರದ ಗುಜರಾತಿಗಳಿಗೆ ಉತ್ತಮ ಕೆಲಸ ಸಿಕ್ಕುತ್ತಿರಲಿಲ್ಲ, ಹೀಗಾಗಿ ಅವರು ಹೋಟೆಲ್ ನಲ್ಲಿ ಕೆಲಸ ಮಾಡಲು ಶುರು ಮಾಡಿದರು. ಇಂದಿಗೆ ಹೋಟೆಲ್ ಬ್ಯುಸಿನೆಸ್ನಲ್ಲಿ ಅವರದ್ದೇ ಕಾರುಬಾರು. ವಜ್ರದ ವ್ಯಾಪಾರದಲ್ಲಿ ಕೂಡ ಇದೆ ಕಥೆ, ಸಣ್ಣ ಪುಟ್ಟ ಪುಡಿಯನ್ನು ಕೊಳ್ಳಲು ಶುರು ಮಾಡಿದ ಗುಜರಾತಿಗಳು ಇಂದು ಬೆಲ್ಜಿಯಂ ದೇಶವನ್ನು ಹಿಂದಿಕ್ಕೆ ವಜ್ರದ ವ್ಯಾಪಾರದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಓಮನ್ ದೇಶದಲ್ಲಿ ಮೊದಲ ಹಿಂದೂ ಶೇಕ್ ಎಂದು ಹೆಸರು ಪಡೆದುಕೊಂಡ ರಾಮ್ಜೀ ಕಥೆಯೂ ರೋಚಕವಾಗಿದೆ.

ಇಂದು ನಾವು ಯಶಸ್ವಿ ಎಂದು ಯಾರನ್ನು ನೋಡಿದರೂ ಅವರೆಲ್ಲಾ ಅಪಾಯವನ್ನು ಒಪ್ಪಿಕೊಂಡವರೆ, ಅಪಾಯದ ಬಗ್ಗೆ ಅವರ ಜಡ್ಜ್ಮೆಂಟ್ ಸರಿಯಾಗಿತ್ತು ಅಷ್ಟೇ, ಉಳಿದವರ ಜಡ್ಜೆಮೆಂಟ್ನಲ್ಲಿ ವ್ಯತ್ಯಾಸವಾದ ಕಾರಣ ಅವರು ಯಶಸ್ವಿ ಅಥವಾ ಶ್ರೀಮಂತ ಎನ್ನಿಸಿಕೊಳ್ಳುವುದರಲ್ಲಿ ಎಡವಿರುತ್ತಾರೆ. ಮುಖ್ಯವಾಗಿ ನಾವು ಅಪಾಯದ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು. ಎಲ್ಲಕ್ಕೂ ಮುಖ್ಯವಾಗಿ ನಾವು ಯಾವುದೇ ವೆಂಚರ್ ತೆಗೆದುಕೊಂಡರೂ ಅದರಲ್ಲಿ ಒಂದಷ್ಟು ಅಪಾಯಗಳು ಇದ್ದೆ ಇರುತ್ತದೆ. ಅದ್ಯಾವುದು ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯ.

ಅಪಾಯ ಎಂದರೇನು ಗೊತ್ತಾ? ನಾವು ಮಾಡುವ ಯಾವುದೇ ಕೆಲಸದ ಫಲಿತಾಂಶ ಅಂದರೆ ಔಟ್ಕಮ್ ಮೇಲೆ ಯಾವುದೇ ಹಿಡಿತ ಇಲ್ಲದಿರುವುದು. ಲಾಭ ಅಥವಾ ನಷ್ಟ ಯಾವುದು ಉತ್ಪತ್ತಿಯಾಗುತ್ತದೆ ಎನ್ನುವುದು ಗೊತ್ತಾಗುವುದಿಲ್ಲ. ಈಗ ಹೇಳಿ ನಾವೆಲ್ಲರೂ ಜೀವಿಸುತ್ತಿರುವುದೇ ಅಪಾಯದಲ್ಲಿ ಅಲ್ವಾ? ಹೀಗಾಗಿ ಅಪಾಯಕ್ಕೆ ಹೆದರುವ ಅವಶ್ಯಕತೆಯಿಲ್ಲ. ಅದರ ಬಗ್ಗೆ ಹೆಚ್ಚು ಮಾಹಿತಿಯನ್ನು ತಿಳಿದುಕೊಂಡು, ಸನ್ನದ್ಧರಾಗಬೇಕು.

  1. ಬೇಸಿಕ್ ರಿಸ್ಕ್
  2. ಫೈನಾನ್ಸಿಯಲ್ ರಿಸ್ಕ್ - ಇದರಲ್ಲಿ ಎರಡು ವಿಧ. ಸಿಸ್ಟಮ್ಯಾಟಿಕ್ ಮತ್ತು ಅನ್ ಸಿಸ್ಟಮ್ಯಾಟಿಕ್
  3. ಬಿಸಿನೆಸ್ ರಿಸ್ಕ್
  4. ಕ್ರೆಡಿಟ್ ರಿಸ್ಕ್
  5. ದೇಶಗಳಲ್ಲಿ ಆಗುವ ಅಪಾಯ
  6. ವಿದೇಶಿ ವಿನಿಮಯದಲ್ಲಿನ ಬದಲಾವಣೆ ಅಪಾಯ
  7. ಇಂಟರೆಸ್ಟ್ ರೇಟ್ ರಿಸ್ಕ್
  8. ಪೊಲಿಟಿಕಲ್ ರಿಸ್ಕ್
  9. ಲಿಕ್ವಿಡಿಟಿ ರಿಸ್ಕ್
  10. ಮಾಡೆಲ್ ರಿಸ್ಕ್
  11. ರೆಪ್ಯೂಟೇಷನ್ ರಿಸ್ಕ್
  12. ಇನ್ನಿತರೇ ಅಪಾಯಗಳು

ರಿಟರ್ನ್ ಅಥವಾ ಫಲಿತಾಂಶ:
ನಾವು ಮಾಡಿದ ಕೆಲಸಕ್ಕೆ ಸಿಕ್ಕ ಉತ್ತರವನ್ನು ಫಲಿತಾಂಶ ಎನ್ನಬಹುದು. ಅದು ಲಾಭ ಅಥವಾ ನಷ್ಟ ಯಾವುದಾದರೂ ಆಗಿರಬಹುದು. ಅಪಾಯವನ್ನು ಡಿಫೈನ್ ಮಾಡುವುದು ಕಷ್ಟ ಏಕೆಂದರೆ ಅದು ಯಾವ ರೂಪದಲ್ಲಿರುತ್ತದೆ, ಬರುತ್ತದೆ ಎಂದು ಊಹಿಸುವುದು ಕಷ್ಟ. ಆದರೆ ರಿಟರ್ನ್ಸ್ ವಿಷಯದಲ್ಲಿ ಹಾಗಲ್ಲ, ಇಲ್ಲಿರುವ ಸಂಭಾವ್ಯತೆ ಮೂರು.

  1. ನಾವು ಮಾಡಿದ ಕೆಲಸ ಲಾಭವನ್ನು ನೀಡುತ್ತದೆ.
  2. ನಾವು ಮಾಡಿದ ಕೆಲಸ ನಷ್ಟವನ್ನು ಉಂಟು ಮಾಡುತ್ತದೆ
  3. ಲಾಭ ನಷ್ಟ ಎರಡೂ ಇಲ್ಲದ ಬ್ರೇಕ್ ಈವನ್ ಸ್ಥಿತಿ ತಲುಪಿ ಇನ್ನಷ್ಟು ಸಮಯ ಬೇಡುತ್ತದೆ.

ಹೀಗಾಗಿ ನಾವು ಹೆಚ್ಚು ಯೋಚಿಸಬೇಕಿರುವುದು ಅಪಾಯದ ಬಗ್ಗೆ, ಕೆಲಸವನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಫಲಿತಾಂಶ ಇವುಗಳ ಮೂರ್ತರೂಪವಷ್ಟೆ.

ಟೈಮ್:
ಟೈಮ್ ಇಸ್ ದಿ ಬೆಸ್ಟ್ ಹೀಲರ್ ಎನ್ನುವ ಮಾತಿದೆ. ಎಲ್ಲವುದನ್ನು ವೇಳೆ ಮರೆಸಿಬಿಡುತ್ತದೆ. ಸಿರಿವಂತರಾಗುವುದು ಒಂದು ದಿನದಲ್ಲಿ ಸಾಧ್ಯವಿಲ್ಲದ ಮಾತು. ಇದು ನೂರು ಮೀಟರ್ ಓಟವಲ್ಲ, ಇದು ಮ್ಯಾರಥಾನ್ ಓಟ. ಇಲ್ಲಿ ಕೂಡ ಅಪಾಯದ ವಿಷಯದಲ್ಲಿ ನಾವು ಪ್ರಶ್ನೆ ಮಾಡಿಕೊಂಡಂತೆ ಪ್ರಶ್ನೆ ಮಾಡಿಕೊಳ್ಳಬೇಕು.

  1. ನಮ್ಮ ಬಳಿ ಎಷ್ಟು ವೇಳೆಯಿದೆ?
  2. ಎಷ್ಟು ವೇಳೆಯನ್ನು ನಾವು ಅಂದುಕೊಂಡ ಕಾರ್ಯಕ್ಕೆ ಮೀಸಲಿಡಲು ತಯಾರಿದ್ದೇವೆ
  3. ಸಂಕಷ್ಟದ ಸಮಯದಲ್ಲಿ ಯಾವ ನಿಲುವುರಬೇಕ
  4. ಸುಖದ ಸಮಯದಲ್ಲಿ ಏನು ಮಾಡಬೇಕು
  5. ಯಾವಾಗ ಸಾಕಪ್ಪ ಎಂದು ಹೊರಬರಬೇಕು?

ಮೇಲಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಅತಿ ಮುಖ್ಯ.

ಕೊನೆಮಾತು: ಅಪಾಯ ಬದುಕಿನ ಅವಿಭಾಜ್ಯ ಅಂಗ ಎನ್ನುವುದನ್ನು ನಾವು ಅರಿತುಕೊಳ್ಳಬೇಕು. ಅಪಾಯವಿಲ್ಲದ ಯಾವುದೇ ಸಮಯ, ಕೆಲಸ ಈ ಭೂಮಿಯ ಮೇಲಿಲ್ಲ. ಭದ್ರತೆ, ಸ್ಥಿರತೆ ಎನ್ನುವುದು ಮಾನಸಿಕ ಸ್ಥಿತಿಗಳು, ಅದನ್ನು ನಾವು ಕಂಡುಕೊಳ್ಳಬೇಕು. ಬಾಹ್ಯ ಕಾರಣಗಳು ಅವನ್ನು ಪ್ರೋತ್ಸಾಹಿಸುವ ಮಟ್ಟಕ್ಕೆ ಬಿಡಬಾರದು. ಅಪಾಯವನ್ನು ಒಪ್ಪಿಕೊಂಡು ಅಪ್ಪಿಕೊಂಡು ಮುಂದುವರೆಯುವುದರಲ್ಲಿ ಜಾಣತನವಿದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com