ಹುಳುಕಡ್ಡಿ ಅಥವಾ ಗಜಕರ್ಣ ಎಂಬ ಅಂಟುಜಾಡ್ಯ (ಕುಶಲವೇ ಕ್ಷೇಮವೇ)

ಸಾಮಾನ್ಯವಾಗಿ ಬೇಸಿಗೆಯ ಉರಿಬಿಸಿಲಿನ ಸಮಯದಲ್ಲಿ ನಾವು ಹೆಚ್ಚಾಗಿ ಬೆವರುವುದರಿಂದ ಸಣ್ಣ ಪುಟ್ಟ ಚರ್ಮದ ಸೋಂಕುಗಳು ಎದುರಾಗುತ್ತವೆ.
ಹುಳುಕಡ್ಡಿ 
ಹುಳುಕಡ್ಡಿ 

ಸಾಮಾನ್ಯವಾಗಿ ಬೇಸಿಗೆಯ ಉರಿಬಿಸಿಲಿನ ಸಮಯದಲ್ಲಿ ನಾವು ಹೆಚ್ಚಾಗಿ ಬೆವರುವುದರಿಂದ ಸಣ್ಣ ಪುಟ್ಟ ಚರ್ಮದ ಸೋಂಕುಗಳು ಎದುರಾಗುತ್ತವೆ. ಇತ್ತೀಚೆಗೆ ಹವಾಮಾನ ವೈಪರೀತ್ಯದ ಕಾರಣದಿಂದ ಚಳಿಗಾಲದಲ್ಲಿಯೂ ಬಿಸಿಲು ಹೆಚ್ಚಾಗಿರುವುದರಿಂದ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಲೇ ಇವೆ. ಆಗಾಗ ತುರಿಕೆ, ದದ್ದುಗಳು, ಗುಳ್ಳೆಗಳು ಇತ್ಯಾದಿ ಚರ್ಮ ಸಂಬಂಧಿತ ತೊಂದರೆಗಳು ಉಂಟಾಗುವುದು ಸಹಜ. ಇವೆಲ್ಲವೂ ಅಂಟು ಜಾಡ್ಯಗಳು. ಫಂಗಸ್‌ಗಳಿಂದ ಬರುವಂಥದ್ದು. ಗಜಕರ್ಣ ಇಂತಹ ಒಂದು ಸಾಮಾನ್ಯ ಶಿಲೀಂಧ್ರ (ಫಂಗಲ್) ಸೋಂಕು. ಇದಕ್ಕೆ ಹುಳುಕಡ್ಡಿ ಎಂದೂ ಕರೆಯುತ್ತೇವೆ.

ಹುಳುಕಡ್ಡಿ ಸೋಂಕಿನ ಲಕ್ಷಣಗಳು

ಈ ಶಿಲೀಂಧ್ರ ಸೋಂಕು ತಗುಲಿದಾಗ ಉಬ್ಬಾದ ಅಂಟು ಹೊಂದಿರುವ ದುಂಡಗಿನ ಆಕಾರದ ದದ್ದು ಅಥವಾ ಗುಳ್ಳೆ ಚರ್ಮದ ಮೇಲೆ ಕಾಣಿಸಿಕೊಳ್ಳುತ್ತದೆ. ಇದು ಕಡಿತವನ್ನು ಉಂಟುಮಾಡುತ್ತದೆ. ದೇಹದ ಯಾವುದೇ ಭಾಗದಲ್ಲಿಯಾದರೂ ಚರ್ಮದ ಪದರಪದರವಾಗಿ ಏಳುವಂತೆ ಮಾಡಬಹುದು. ಈ ಫಂಗಸ್ ಉಗುರು, ಕೂದಲನ್ನು ಒಳಗೊಂಡ ಸತ್ತ ಚರ್ಮದ ಅಂಗಾಂಶಗಳಲ್ಲಿ ವಾಸಿಸುತ್ತದೆ. ಸಾಮಾನ್ಯವಾಗಿ ಪಾದ, ತೊಡೆ ಸಂದು, ಒಳ ತೊಡೆ, ಕಂಕುಳು ಮತ್ತು ಕೈ ತೋಳುಗಳ ಮೇಲೆ ಕಾಣಿಸಿಕೊಳ್ಳುತ್ತದೆ. ತಲೆಯಲ್ಲಿ ಗಜಕರ್ಣ ಕಾಣಿಸಿಕೊಂಡಾಗ ಕೂದಲು ಉದುರುತ್ತದೆ. ಕಾಲಿನಲ್ಲಿ ಗಜಕರ್ಣ ಪ್ರಭಾವ ತೋರಿದಾಗ ತುಂಬಾ ಕಡಿತ ಬರುತ್ತದೆ. ಕಾಲು ಬೆರಳುಗಳ ಮಧ್ಯೆ ಚರ್ಮ ಬಿರುಕು ಬಿಟ್ಟುಕೊಳ್ಳುತ್ತದೆ. ಈ ಸೋಂಕು ಉಗುರಿನಲ್ಲಿಯೂ ಕಾಣಿಸಿಕೊಳ್ಳಬಹುದು.

ಗಜಕರ್ಣ ಕಿರಿಯರು ಹಿರಿಯರೆನ್ನದೇ ಎಲ್ಲರಲ್ಲೂ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಇದು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದು ಡರ್ಮಟೋಫೈಟ್ಸ್ ಎಂಬ ಹೆಸರಿನ ಚರ್ಮದ ಫಂಗಸ್ಸಿನಿಂದ ಬರುತ್ತದೆ. ಈ ಫಂಗಸ್ ದೇಹದ ಒಳಭಾಗಕ್ಕೆ ಪ್ರವೇಶಿಸುವುದಿಲ್ಲ. ಹೊರಗೇ ಸಾಕುಸಾಕು ಎನ್ನಿಸುವಷ್ಟು ತೊಂದರೆ ಕೊಡುತ್ತದೆ. ಸೋಂಕುಪೀಡಿತರ ಚರ್ಮದ ಮೇಲಿನ ಗುಳ್ಳೆಯನ್ನು ಸ್ಪರ್ಶಿಸಿ ಅಥವಾ ತುರಿಸಿಕೊಂಡಾಗ, ಫಂಗಸ್ ಚರ್ಮಕ್ಕೆ ಅಂಟಿಕೊಂಡು ಅಥವಾ ಉಗುರಿನ ಒಳಗೆ ಪ್ರವೇಶ ಪಡೆದು ಆ ವ್ಯಕ್ತಿ ಇನ್ನೊಬ್ಬರನ್ನು ಮುಟ್ಟಿದಾಗ ಸೋಂಕು ಮತ್ತೊಬ್ಬರಿಗೆ ಹರಡುತ್ತದೆ. ಹಾಗೆಯೇ ಒಬ್ಬರ ಬಾಚಣಿಗೆಗಳನ್ನು ಇನ್ನೊಬ್ಬರು ಬಳಸಿದರೆ ತಲೆಯ ಸೋಂಕು ಮತ್ತೊಬ್ಬರಿಗೆ ಹರಡುತ್ತದೆ. ಆದ್ದರಿಂದ ಗಜಕರ್ಣ ಬಂದವರು ಅದು ತಮ್ಮ ದೇಹದ ಇತರ ಭಾಗಗಳಿಗೆ ಅಥವಾ ಇತರರಿಗೆ ಹರಡದಂತೆ ಎಚ್ಚರಿಕೆಯನ್ನು ವಹಿಸಬೇಕು.

ಹುಳುಕಡ್ಡಿ ಸೋಂಕು ಹೇಗೆ ಬರುತ್ತದೆ?

ಈ ಸಮಸ್ಯೆ ಬರಲು ಮುಖ್ಯ ಕಾರಣ ಎಂದರೆ ಸ್ವಚ್ಛತೆ ಪಾಲನೆ ಮಾಡದಿರುವುದು. ಚರ್ಮದ ಮೇಲೆ ಎಲ್ಲಿ ಬೇಕಾದರೂ ಈ ಸೋಂಕು ಬರಬಹುದು. ಗಜಕರ್ಣ ಮುಖ್ಯವಾಗಿ ತೊಡೆಯ ಸಂಧಿಯಲ್ಲಿ, ತೋಳುಗಳ ಕೆಳಗೆ, ಸೊಂಟದ ಸುತ್ತಲೂ ಹಾಗೂ ಕತ್ತಿನ ಹತ್ತಿರ ಕಾಣಿಸಿಕೊಳ್ಳುತ್ತದೆ. ಈ ಫಂಗಸ್ ಸೋಂಕು ಬಂದರೆ ಚರ್ಮದಲ್ಲಿ ಆಗಾಗ ತುರಿಕೆ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತಲೇ ಇರುತ್ತದೆ. ಒಂದು ವೇಳೆ ಇದನ್ನು ಕೆರೆದುಕೊಳ್ಳಬೇಕು ಎಂದು ಅನ್ನಿಸಿದರೂ ಸಹ ಅದನ್ನು ಆದಷ್ಟೂ ತಡೆದುಕೊಳ್ಳಬೇಕು. ಏಕೆಂದರೆ ಅದನ್ನು ಕೆರೆದುಕೊಂಡು ಮತ್ತೆ ಅದೇ ಕೈಯಿಂದ ದೇಹದ ಇತರ ಭಾಗವನ್ನು ಸ್ಪರ್ಶಿಸಿದರೆ ಈ ಸೋಂಕು ಅಲ್ಲಿಗೂ ಹರಡುತ್ತದೆ.

ಹುಳುಕಡ್ಡಿ ಆದಾಗ ಏನು ಮಾಡಬೇಕು?

ಗಜಕರ್ಣ ಕಾಣಿಸಿಕೊಂಡಾಗ ಮೊದಲಿಗೆ ಚರ್ಮದ ಬಾಧಿತ ಜಾಗವನ್ನು ತುಂಬ ಸ್ವಚ್ಛವಾಗಿಟ್ಟುಕೊಳ್ಳಬೇಕು. ಅ ಸ್ಥಳವನ್ನು ಆದಷ್ಟು ಸೋಪಿನಿಂದ ಸ್ವಚ್ಛಗೊಳಿಸಬೇಕು. ಸೋಪ್ ಬಳಸಿ ತೊಳೆದಾಗ ಸೋಂಕು ಹರಡುವುದನ್ನು ತಡೆಯಬಹುದು. ಸ್ವಚ್ಛತೆಯಿಂದ ಇದ್ದಾಗ ಸೋಂಕನ್ನು ಸುಲಭವಾಗಿ ಹರಡದಂತೆ ತಡೆಯಬಹುದು.

ಹುಳುಕಡ್ಡಿಗೆ ಮನೆಮದ್ದು

  • ಚರ್ಮದ ತುರಿಕೆಯನ್ನು ಕಡಿಮೆ ಮಾಡಲು ಒಂದು ಚಮಚದಷ್ಟು ಅರಿಶಿಣ ಒಂದು ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ಸೇರಿಸಿಕೊಳ್ಳಿ. ಈ ಲೇಪನವನ್ನು ಗಜಕರ್ಣ ಎಲ್ಲಿ ಆಗಿರುತ್ತದೆ ಅಲ್ಲಿ ಲೇಪಿಸಿ ಎರಡು ನಿಮಿಷಗಳ ಕಾಲ ಮೃದುವಾಗಿ ಮಸಾಜ್ ಮಾಡಿಕೊಳ್ಳಿ. ಹೀಗೆ ನಿತ್ಯವೂ ಸ್ನಾನ ಮಾಡುವ ಎರಡು ಗಂಟೆ ಮುಂಚೆ ಇದನ್ನು ಲೇಪಿಸಿಕೊಂಡು ನಂತರ ಸ್ನಾನ ಮಾಡುವುದರಿಂದ ಗಜಕರ್ಣ ಸೇರಿದಂತೆ ಚರ್ಮದ ಅನೇಕ ಸಮಸ್ಯೆಗಳೂ ಪರಿಹಾರವಾಗುತ್ತವೆ.
  • ತಾಜಾ ಆಗಿರುವ ಲೋಳೆಸರದ ತಿರುಳನ್ನು ತೆಗೆದುಕೊಂಡು ಅದಕ್ಕೆ ಅರಿಷಿಣ ಸೇರಿಸಿ ಸಮಸ್ಯೆ ಇರುವ ಜಾಗಕ್ಕೆ ದಿನಕ್ಕೆ ಒಂದೆರಡು ಬಾರಿ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಸ್ವಚ್ಛ ಮಾಡಿಕೊಳ್ಳಬೇಕು.
  • ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ ಅದು ಬೆಚ್ಚಗಿರುವಾಗಲೇ ಸೋಂಕಿತ ಭಾಗದ ಮೇಲೆ ಹಚ್ಚಿದರೆ ಚರ್ಮವು ಅದನ್ನು ಸುಲಭವಾಗಿ ಹೀರಿಕೊಳ್ಳುವುದು. ದಿನಕ್ಕೆ ಮೂರು ಬಾರಿ ಹೀಗೆ ಮಾಡಿದರೆ ಈ ಸಮಸ್ಯೆ ಸುಲಭವಾಗಿ ನಿವಾರಣೆಯಾಗುವುದು.
  • ಮನೆಯಲ್ಲಿ ಎಲ್ಲರೂ ಸಾಮಾನ್ಯವಾಗಿ ಬೆಳೆಸುವ ತುಳಸಿ ಗಿಡದ ಎಲೆಗಳ ರಸವನ್ನು ಹಿಂಡಿಕೊಂಡು ಅದನ್ನು ಚರ್ಮದ ಮೇಲೆ ಸೋಂಕು ಉಂಟಾಗಿರುವ ಜಾಗದಲ್ಲಿ ಮೃದುವಾಗಿ ಹಚ್ಚಬೇಕು.
  • ಅರಿಶಿನದಲ್ಲಿರುವ ಕರ್ಕ್ಯುಮಿನ್ ಎಂಬ ಅಂಶ ಆಂಟಿಸೆಪ್ಟಿಕ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಚರ್ಮದ ಸಮಸ್ಯೆಗಳಾದ ಕಜ್ಜಿ, ತುರಿಕೆ, ಹುಳುಕಡ್ಡಿ ಸೋಂಕನ್ನು ತಡೆಗಟ್ಟುವಲ್ಲಿ ಸಹಾಯಕ್ಕೆ ಬರುತ್ತದೆ. ಹಾಗೆಯೇ ಅರಿಷಿಣದ ಕೊಂಬನ್ನು ನೀರಿನೊಂದಿಗೆ ಅರೆದು ಅದಕ್ಕೆ ಬೇವಿನ ಎಣ್ಣೆಯನ್ನು ಅಥವಾ ಬೇವಿನ ಎಲೆಗಳ ರಸವನ್ನು ಬೆರೆಸಿ ತೊಂದರೆಯುಂಟಾಗಿರುವ ಭಾಗಕ್ಕೆ ಹಚ್ಚಿಕೊಂಡು ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.
  • ಪಪ್ಪಾಯಿ ಹಣ್ಣಿನ ಸಿಪ್ಪೆ ಅಥವಾ ಪರಂಗಿ ಬೀಜಗಳಿಂದ ರುಬ್ಬಿ ತಯಾರು ಮಾಡಿದ ಪೇಸ್ಟ್ ಹಚ್ಚುವುದರಿಂದ ಚರ್ಮದ ಮೇಲಿನ ಶಿಲೀಂಧ್ರ ಸೋಂಕು ಕಡಿಮೆಯಾಗಿ ನಿವಾರಣೆಯಾಗುತ್ತದೆ.
  • ಮೂಲಂಗಿ ಬೀಜವನ್ನು ಮೊಸರಿನಲ್ಲಿ ಅರೆದು ಲೇಪಿಸಬೇಕು. ಹಾಗೆಯೇ ಸಾಸಿವೆಯನ್ನು ನೀರಿನಲ್ಲಿ ಅರೆದು ಲೇಪಿಸಬಹುದು. ಜೊತೆಗೆ ಮುತ್ತುಗದ ಬೀಜವನ್ನು ಮೊಸರಿನಲ್ಲಿ ಅರೆದು ಲೇಪಿಸಿಯೂ ಗಜಕರ್ಣದ ಉಪಶಮನ ಮಾಡಿಕೊಳ್ಳಬಹುದು. ತುಳಸಿ ಎಲೆಗಳನ್ನು ಉಪ್ಪಿನೊಂದಿಗೆ ಚೆನ್ನಾಗಿ ಅರೆದು ಗಜಕರ್ಣ ಆಗಿರುವ ಜಾಗಕ್ಕೆ ನಿಧಾನವಾಗಿ ಹಚ್ಚಬೇಕು ಮತ್ತು ಉಜ್ಜಬೇಕು.

ಸುಲಭವಾಗಿ ಈ ಮನೆಮದ್ದುಗಳನ್ನು ಬಳಸಿ ಗಜಕರ್ಣಕ್ಕೆ ಪರಿಹಾರ ಕಂಡುಕೊಳ್ಳಬಹುದು. ಇದೆಲ್ಲಾ ಮಾಡಿಯೂ ಸಮಸ್ಯೆ ಸರಿಹೋಗದಿದ್ದಲ್ಲಿ ಅಥವಾ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ ತಡಮಾಡದೇ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು.

ಆಯುರ್ವೇದದಲ್ಲಿ ಇದಕ್ಕೆ ಉತ್ತಮ ಔಷಧಿಗಳಿವೆ. ಪಂಚಕರ್ಮ ಚಿಕಿತ್ಸೆ ಇದಕ್ಕೆ ಅತ್ಯುತ್ತಮ ಪರಿಹಾರ ವಿಧಾನ. ಪದೇ ಪದೇ ಈ ತೊಂದರೆ ಕಾಣಿಸಿಕೊಳ್ಳುತ್ತಿದ್ದರೆ ಈ ಚಿಕಿತ್ಸೆ ಒಳ್ಳೆಯದು. ಇದರಲ್ಲಿ ಶೋಧನದ ಮೂಲಕ ದೇಹವನ್ನು ಶುದ್ಧಿಗೊಳಿಸಿ ನಂತರ ಶಮನ ಚಿಕಿತ್ಸೆ ನೀಡುವುದರಿಂದ ಉತ್ತಮ ಫಲಿತಾಂಶ ದೊರಕುತ್ತದೆ. ಪಂಚಕರ್ಮ ಚಿಕಿತ್ಸೆಯಲ್ಲಿ ಮೊದಲು ಸ್ನೇಹನ, ಸ್ವೇದನ ಮಾಡಿ ನಂತರ ವಿರೇಚನ ಚಿಕಿತ್ಸೆ ಮಾಡುತ್ತೇವೆ. ಜೊತೆಗೆ ಮಹಾಮಂಜಿಷ್ಟಾದಿ ಕಷಾಯ, ಖದಿರಾರಿಷ್ಟ ಮುಂತಾದ ಔಷಧಿಗಳು ಲಭ್ಯ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com