ಐವಿಎಫ್ ಮೂಲಕ ಗರ್ಭಧಾರಣೆ (ಕುಶಲವೇ ಕ್ಷೇಮವೇ)

ಕೆಲವರಿಗೆ ಮದುವೆಯಾಗಿ ಹಲವಾರು ವರ್ಷಗಳಾದರೂ ಮಕ್ಕಳಾಗಿರುವುದಿಲ್ಲ. ಸಂತಾನಹೀನತೆಗೆ (ಬಂಜೆತನ) ಒಂದಲ್ಲ ಅನೇಕ ಕಾರಣಗಳು ಇರಬಹುದು.
ಐವಿಎಫ್ ಮೂಲಕ ಗರ್ಭಧಾರಣೆ
ಐವಿಎಫ್ ಮೂಲಕ ಗರ್ಭಧಾರಣೆ

ಕೆಲವರಿಗೆ ಮದುವೆಯಾಗಿ ಹಲವಾರು ವರ್ಷಗಳಾದರೂ ಮಕ್ಕಳಾಗಿರುವುದಿಲ್ಲ. ಸಂತಾನಹೀನತೆಗೆ (ಬಂಜೆತನ) ಒಂದಲ್ಲ ಅನೇಕ ಕಾರಣಗಳು ಇರಬಹುದು. ಮಹಿಳೆಯರಿಗೆ ಮುಟ್ಟಿನಲ್ಲಿ ಏರುಪೇರು, ತೀವ್ರ ರಕ್ತಸ್ರಾವ, ಕೆಲಸದ ಒತ್ತಡ, ಇಂದಿನ ಅನಾರೋಗ್ಯಕರ ಜಡ ಜೀವನಶೈಲಿ, ಥೈರಾಯ್ಡ್ ಸಮಸ್ಯೆ, ಅಂಡಾಣುಗಳು ಸರಿಯಾಗಿ ಉತ್ಪತ್ತಿಯಾಗದಿರುವುದು, ಫೈಬ್ರಾಯಿಡ್, ಅತಿಯಾದ ತೂಕ, ಕಡಿಮೆ ತೂಕ, ಧೂಮಪಾನ ಹಾಗೂ ಮದ್ಯಪಾನ, ಲೈಂಗಿಕ ಸಮಸ್ಯೆ, ಹಾರ್ಮೋನ್ ವ್ಯತ್ಯಾಸಗಳು ಮತ್ತಿತರ ಕಾರಣಗಳಿಂದ ಮಕ್ಕಳಾಗದೇ ಇರಬಹುದು.

ಇದಲ್ಲದೇ ಪುರುಷರಲ್ಲಿ ಕಡಿಮೆ ಅಥವಾ ವೀರ್ಯಾಣುಗಳೇ ಇಲ್ಲದಿರುವುದು, ಅವುಗಳ ಚಲನಶಕ್ತಿ ಸರಿಯಾಗಿಲ್ಲದೇ ಇರುವುದು, ಅತಿಯಾದ ಧೂಮಪಾನ ಹಾಗೂ ಮದ್ಯಪಾನ, ಲೈಂಗಿಕ ಸಮಸ್ಯೆಗಳು, ಕೆಲಸದ ಒತ್ತಡ ಮತ್ತು ಅನಾರೋಗ್ಯಕರ ಜೀವನಶೈಲಿಗಳು ಸಂತಾನಹೀನತೆ ಕಾರಣವಾಗಬಹುದು. ಒಟ್ಟಾರೆ ಪತಿಪತ್ನಿಯರಿಬ್ಬರು ಮಕ್ಕಳು ಸದ್ಯಕ್ಕೆ ಬೇಡ ಎಂದು ಗರ್ಭಧಾರಣೆಯನ್ನು ಮುಂದೂಡುತ್ತಾ ಬಂದು 30-35 ವರ್ಷಗಳ ನಂತರ ಸಂತಾನವಾಗುವುದು ಸವಾಲಾಗಿ ಕಷ್ಟವೆನಿಸುತ್ತದೆ.

ಸಂತಾನಹೀನತೆಯ ಸಮಸ್ಯೆ

ಇಂದು ಭಾರತದಲ್ಲಿ ಸುಮಾರು ಶೇಕಡಾ 15ರಿಂದ 20ರಷ್ಟು ದಂಪತಿಗಳು ಸಂತಾನಹೀನತೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪ್ರಪಂಚದಲ್ಲಿ ಈ ಸಮಸ್ಯೆ ಪ್ರಮಾಣ ಶೇಕಡಾ 15ರಷ್ಟಿದೆ. ಕೆಲವು ಪ್ರಕರಣಗಳಲ್ಲಿ ಸಣ್ಣಪುಟ್ಟ ಔಷದೋಪಚಾರದ ಅಗತ್ಯದಿಂದ ಮಕ್ಕಳಾಗುವ ಸಂಭವವಿದೆ. ಇದರಿಂದಲೂ ಸಮಸ್ಯೆ ಪರಿಹಾರವಾಗದಿದ್ದರೆ ಸಂತಾನಹೀನತೆ ಯಾವ ರೀತಿಯದ್ದು ಎಂಬುದನ್ನು ಪರಿಗಣಿಸಿ ವೈದ್ಯರು ಚಿಕಿತ್ಸೆ ನಿರ್ಧರಿಸುತ್ತಾರೆ. ವಯಸ್ಸು ಮತ್ತು ಸಂತಾನಹೀನತೆಯ ತೀವ್ರತೆ ಮೇಲೆ ಅವಲಂಬಿತವಾಗಿ ಯಾವ ಚಿಕಿತ್ಸೆ ನೀಡಬಹುದು ಎನ್ನುವುದನ್ನು ನಿರ್ಧರಿಸಬಹುದು. ಹಲವಾರು ಪರೀಕ್ಷೆಗಳ ನಂತರವೂ ಮಕ್ಕಳಾಗುವುದು ಸಾಧ್ಯವಿಲ್ಲ ಎನ್ನುವುದು ಗೊತ್ತಾದಾಗ ಇನ್ ವಿಟ್ರೋ ಫರ್ಟಿಲೈಜೇಷನ್ (ಐವಿಎಫ್) ಎಂಬ ವೈಜ್ಞಾನಿಕ ವಿಧಾನದ ಮೂಲಕ ಗರ್ಭ ಧರಿಸಿ ಮಕ್ಕಳನ್ನು ಪಡೆಯಬಹುದು.

ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಅತ್ಯಂತ ಕಡಿಮೆ ಇದ್ದಾಗ, ಮಹಿಳೆಯರ ಗರ್ಭನಾಳ ಕೆಲಸ ಕಾರ್ಯ ನಿರ್ವಹಿಸಲು ವಿಫಲವಾದಾಗ, ವಯಸ್ಸು ಹೆಚ್ಚಾದಾಗ ಅಥವಾ ಅನುವಂಶಿಕ ಮತ್ತು ಜನ್ಮಜಾತ ಸಮಸ್ಯೆಗಳಿಂದ ಮಕ್ಕಳು ಆಗುವುದೇ ಇಲ್ಲ ಎಂದಾಗ ಕೊನೆಯ ಆಸರೆಯಾಗಿ ತಜ್ಞವೈದ್ಯರನ್ನು ಕಂಡು ಐವಿಎಫ್ ವಿಧಾನದ ಮೊರೆ ಹೋಗಬಹುದು. ಇದಕ್ಕೆ ಮೊದಲು ಮಕ್ಕಳಾಗದೇ ಇರಲು ಸೂಕ್ತ ಕಾರಣ ಏನೆಂಬುದನ್ನು ತಿಳಿದುಕೊಂಡಿರುವುದು ಮುಖ್ಯ.

ಐವಿಎಫ್ ಚಿಕಿತ್ಸಾ ವಿಧಾನ

ಐವಿಎಫ್ ಫಲವತ್ತತೆಗೆ ಸಹಾಯ ಮಾಡುವ ಅಥವಾ ಆನುವಂಶಿಕ ಸಮಸ್ಯೆಗಳನ್ನು ತಡೆಗಟ್ಟಲು ಇರುವ ಒಂದು ವೈದ್ಯಕೀಯ ಚಿಕಿತ್ಸಾ ವಿಧಾನ. ಈ ವಿಧಾನದಲ್ಲಿ ಆರೋಗ್ಯಕರ ಅಂಡಾಣುವನ್ನು ಮಹಿಳೆಯ ಅಂಡಾಶಯದಿಂದ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ವೀರ್ಯಾಣುಗಳಿಂದ ಫಲವತ್ತಾಗಿಸಲಾಗುವುದು. ಅಂದರೆ ಪತ್ನಿಯ ಅಂಡಾಣು ಹಾಗೂ ಪತಿಯ ವೀರ್ಯಾಣುಗಳನ್ನು ತೆಗೆದು ಪ್ರಯೋಗಾಲಯದಲ್ಲಿ ಎರಡನ್ನೂ ಸೇರಿಸಿ ನಿರ್ದಿಷ್ಟ ಕಾಲದವರೆಗೆ ಭ್ರೂಣವನ್ನು ಬೆಳೆಸಲಾಗುತ್ತದೆ. ನಂತರ ಅದನ್ನು ಪತ್ನಿಯ ಗರ್ಭಕೋಶಕ್ಕೆ ವರ್ಗಾಯಿಸಲಾಗುತ್ತದೆ. ಈ ಬಗ್ಗೆ ಸರ್ಕಾರ ಹಲವಾರು ನೀತಿನಿಯಮಗಳನ್ನು ರೂಪಿಸಿದ್ದು ಅವುಗಳ ಪಾಲನೆಯು ಕಡ್ಡಾಯವಾಗಿದೆ. ಹೀಗೆ ಕೃತಕ ಗರ್ಭಧಾರಣೆ ಮೂಲಕ ಮಕ್ಕಳನ್ನು ಪಡೆಯಬಹುದು. ಹೀಗೆ ಜನಿಸಿದ ಮಕ್ಕಳು ಸಾಮಾನ್ಯ ಮಕ್ಕಳಂತೆಯೇ ಇರುತ್ತಾರೆ. ಈ ವಿಧಾನದಲ್ಲಿ ಉತ್ತಮ ಲ್ಯಾಬ್ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆಯಾಗುವುದರಿಂದ ಹಣ ಹೆಚ್ಚಾಗಿಯೇ ಖರ್ಚಾಗುತ್ತದೆ. ಹೀಗೆ ಗರ್ಭ ಧರಿಸಿ ಮಕ್ಕಳನ್ನು ಪಡೆಯುವ ಪ್ರಮಾಣ ಸಾಮಾನ್ಯವಾಗಿ ಶೇಕಡಾ 40-50ರಷ್ಟಿರುತ್ತದೆ ಎಂಬುದನ್ನು ಗಮನದಲ್ಲಿಡಬೇಕು.

ಗರ್ಭಧಾರಣೆ ಪರೀಕ್ಷೆಯನ್ನು ಭ್ರೂಣ ವರ್ಗಾವಣೆಯ ನಂತರ ಎರಡು ವಾರಗಳ ಮಾಡಲಾಗುತ್ತದೆ. ನಂತರ ಸುಲಭವಾಗಿ ಹೆರಿಗೆಯಾಗುವ ತನಕ ಗರ್ಭಿಣಿಯ ಆರೋಗ್ಯದ ಮೇಲೆ ಗಮನ ಹೆಚ್ಚಾಗಿಯೇ ಇರಿಸಬೇಕಾಗುತ್ತದೆ. ವೈದ್ಯರು ಹೇಳುವ ಚುಚ್ಚುಮದ್ದು ಮತ್ತು ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು. ಧೂಮಪಾನ, ಮದ್ಯಪಾನ ತ್ಯಜಿಸಬೇಕು ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಒತ್ತಡ ನಿರ್ವಹಣೆಯನ್ನು ಕಲಿಯಬೇಕು. ಹೊಟ್ಟೆಯ ಒತ್ತಡಕ್ಕೆ ಕಾರಣವಾಗುವ ಭಾರೀ ತೂಕ ಎತ್ತುವುದನ್ನು ಅಥವಾ ಇತರ ಚಟುವಟಿಕೆಗಳನ್ನು ತಪ್ಪಿಸಬೇಕು. ಏನೇ ಅನಾರೋಗ್ಯ ಅಥವಾ ಸಮಸ್ಯೆ ಉಂಟಾದರೆ ವೈದ್ಯರ ಸಲಹೆಯಂತೆಯೇ ನಡೆದುಕೊಳ್ಳಬೇಕು.

ಐವಿಎಫ್ ಇತ್ತೀಚಿನ ದಿನಗಳಲ್ಲಿ ಸಮರ್ಥ ವೈದ್ಯಕೀಯ ಮತ್ತು ವೈಜ್ಞಾನಿಕ ವಿಧಾನವಾದರೂ ಮತ್ತು ಕೆಲವೊಮ್ಮೆ ಅತ್ಯುತ್ತಮ ತಂತ್ರಜ್ಞಾನ ಮತ್ತು ಪರಿಣಿತರಿಂದ ಚಿಕಿತ್ಸೆ ಪಡೆದರೂ ಸಹ ಅನಿರೀಕ್ಷಿತ ಅನಾರೋಗ್ಯ ಕಾಡಬಹುದು. ಆದ್ದರಿಂದ ಈ ಚಿಕಿತ್ಸೆಗೆ ಮೊದಲು ಕುಟುಂಬದ ಸದಸ್ಯರ ಬೆಂಬಲ ಮತ್ತು ದಂಪತಿಗಳ ನಿರ್ಧಾರ ಮುಖ್ಯವಾಗಿರುತ್ತದೆ. ಇದು ಕೇವಲ ದೈಹಿಕ ತೊಂದರೆಯಲ್ಲ. ಸಂತಾನಹೀನತೆ ಮತ್ತು ಗರ್ಭಾವಸ್ಥೆಯ ಚಿಕಿತ್ಸೆಯಾಗಿರುವುದರಿಂದ ಸೂಕ್ಷ್ಮ-ಭಾವನಾತ್ಮಕ ವಿಷಯವಾಗಿದೆ. ಹೀಗಾಗಿ ಬಹಳ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಸಹಜವಾಗಿ ಮತ್ತು ಆರೋಗ್ಯ ಕಾಪಾಡಿಕೊಂಡು ನೈಸರ್ಗಿಕ ವಿಧಾನದಲ್ಲಿಯೇ ಗರ್ಭ ಧರಿಸಿ ಮಕ್ಕಳನ್ನು ಪಡೆಯುವುದು ಅತ್ಯುತ್ತಮ. ಇಲ್ಲದಿದ್ದರೆ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಂಡು ಮಕ್ಕಳನ್ನು ಪಡೆಯುವುದು ಹಿತಕಾರಿ. ಇತ್ತೀಚೆಗೆ ನಗರಪ್ರದೇಶಗಳಲ್ಲಿ, ಅದರಲ್ಲಿಯೂ ಬೆಂಗಳೂರಿನಂತಹ ನಗರಗಳಲ್ಲಿ ಹಾದಿಬೀದಿಗೊಂದು ಕೃತಕ ಗರ್ಭಧಾರಣೆ ಕೇಂದ್ರಗಳು ಹುಟ್ಟಿಕೊಂಡು ಜನರಿಂದ ಹಣ ಕೀಳುವ ಮತ್ತು ಸರಿಯಾಗಿ ತಂತ್ರಜ್ಞಾನ ಬಳಸದೇ ಹಾನಿಯುಂಟುಮಾಡಿರುವ ಪ್ರಕರಣಗಳು ಸಾಕಷ್ಟಿವೆ. ಈ ಬಗ್ಗೆಯೂ ಎಚ್ಚರದಿಂದ ಇರಬೇಕಾದ ಅವಶ್ಯಕತೆ ಇಂದು ಹೆಚ್ಚಾಗಿದೆ.

ಆಯುರ್ವೇದದಲ್ಲಿಯೂ ಸಂತಾನಹೀನತೆ ಪಂಚಕರ್ಮ ಚಿಕಿತ್ಸೆ, ಉತ್ತಮ ಆರೋಗ್ಯಕ್ಕಾಗಿ ಸೂಕ್ತ ಸೂತ್ರಗಳು, ಅಂಡಾಣು/ವೀರ್ಯಾಣುಗಳು ಫಲವತ್ತಾಗಲೂ ಔಷಧಿ ಮತ್ತು ಉಪಚಾರಗಳಿವೆ. ಇವುಗಳ ಬಗೆಗೂ ಗಮನ ಹರಿಸುವುದು ಒಳ್ಳೆಯದು. ಎಲ್ಲಾ ಮಾರ್ಗಗಳನ್ನು ಶೋಧಿಸಿ ಬೇರೆ ಯಾವ ಮಾರ್ಗವೂ ಇಲ್ಲ ಎಂದಾಗ ಮಾತ್ರ ಐವಿಎಫ್ ವಿಧಾನದ ಮೊರೆ ಹೋಗಬೇಕು. ಅದರಲ್ಲಿಯೂ ತಜ್ಞ ಮತ್ತು ನಂಬಿಕಸ್ಥ ವೈದ್ಯರಿಂದ ಈ ಚಿಕಿತ್ಸೆಯನ್ನು ಪಡೆಯಬೇಕು.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com