ಜಿಂಜೈವೈಟಿಸ್ ಅಥವಾ ವಸಡಿನ ಉರಿಯೂತ (ಕುಶಲವೇ ಕ್ಷೇಮವೇ)

ಜಿಂಜೈವಿಟಿಸ್ ಅಥವಾ ವಸಡಿನ ಉರಿಯೂತ ವಸಡಿನ ಒಂದು ಸಾಮಾನ್ಯ ಮತ್ತು ಸೌಮ್ಯವಾದ ಸಮಸ್ಯೆ. ಇದರಿಂದ ಕೆಲವರಿಗೆ ಹಲ್ಲುಜ್ಜುವಾಗ ರಕ್ತ ಬರುತ್ತದೆ.
ಜಿಂಜೈವೈಟಿಸ್
ಜಿಂಜೈವೈಟಿಸ್

ಜಿಂಜೈವಿಟಿಸ್ ಅಥವಾ ವಸಡಿನ ಉರಿಯೂತ ವಸಡಿನ ಒಂದು ಸಾಮಾನ್ಯ ಮತ್ತು ಸೌಮ್ಯವಾದ ಸಮಸ್ಯೆ. ಇದರಿಂದ ಕೆಲವರಿಗೆ ಹಲ್ಲುಜ್ಜುವಾಗ ರಕ್ತ ಬರುತ್ತದೆ. ವಸಡು ಊದಿಕೊಂಡು ನೋವಾಗುತ್ತದೆ. ಊಟ ಮಾಡುವಾಗ, ಹಣ್ಣು ತಿನ್ನುವಾಗ ಅಥವಾ ವಸಡನ್ನು ಮುಟ್ಟಿದರೆ ರಕ್ತ ಬರುತ್ತದೆ. ಒಮ್ಮೊಮ್ಮೆ ಬಾಯಿಯೊಳಗೆ ರಕ್ತದ ವಾಸನೆ ಅಥವಾ ಉಪ್ಪು ತಿಂದಂತೆ ಭಾಸವಾಗುತ್ತದೆ. ತಿಂದ ಆಹಾರ ಹಲ್ಲಿನ ಮಧ್ಯೆ ಸಿಕ್ಕಿ ಹಾಕಿಕೊಳ್ಳುತ್ತದೆ. ಅದನ್ನು ತೆಗೆಯುವಾಗಲೂ ರಕ್ತ ಒಸರುತ್ತದೆ. ಇದು ನಮ್ಮ ಭಾರತೀಯರಲ್ಲಿ ಬಹು ಸಾಮಾನ್ಯ. ಜಿಂಜೈವಿಟಿಸ್ಸನ್ನು ನಿರ್ಲಕ್ಷ್ಯ ಮಾಡದೇ ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಚಿಕಿತ್ಸೆ ನೀಡುವುದು ಮುಖ್ಯವಾಗಿದೆ. ಏಕೆಂದರೆ ಇದನ್ನು ಉದಾಸೀನ ಮಾಡಿದರೆ ಹೆಚ್ಚು ಗಂಭೀರವಾದ ಒಸಡು ಕಾಯಿಲೆ (ಪೆರಿಯೊಡಾಂಟಿಟಿಸ್) ಮತ್ತು ಹಲ್ಲು ಬೀಳಲು ಕಾರಣವಾಗಬಹುದು. ಇದರಿಂದ ವಸಡು ಸಾಮರ್ಥ್ಯ ಕಳೆದುಕೊಂಡು ಹಲ್ಲನ್ನು ಹಿಡಿದಿಟ್ಟುಕೊಳ್ಳಲು ಸೋತು ಹಲ್ಲು ಸುಲಭವಾಗಿ ಕಳಚಿ ಬೀಳುತ್ತದೆ. 

ಜಿಂಜೈವೈಟಿಸ್ ಲಕ್ಷಣಗಳು

ಜಿಂಜೈವೈಟಿಸ್ಸಿನ ಲಕ್ಷಣಗಳು ಮೃದುವಾದ ವಸಡುಗಳು, ಅಗಾಗ ಕೆಂಪಾಗುವ ವಸಡು, ಹಲ್ಲು ಮತ್ತು ವಸಡುಗಳ ನಡುವೆ ಕೀವು, ಬ್ರಷ್ ಮಾಡಿದಾಗ ರಕ್ತ ಬರುವುದು ಮತ್ತು ದುರ್ವಾಸನೆಯುಕ್ತ ಉಸಿರು. ಜಿಂಜಿವೈಟಿಸ್ಸಿಗೆ ಅತಿಸಾಮಾನ್ಯವಾದ ಕಾರಣ ಎಂದರೆ ಬಾಯಿಯ ಸ್ವಚ್ಛತೆಯ ಬಗ್ಗೆ ಗಮನಹರಿಸದಿರುವುದು. ಆದ್ದರಿಂದ ಬಾಯಿಯ ಆರೋಗ್ಯದ ಕುರಿತು ಎಲ್ಲರೂ ಲಕ್ಷ್ಯ ವಹಿಸಬೇಕು. ಬಹುಮುಖ್ಯವಾಗಿ ಆಹಾರ ಸೇವಿಸಿದ ನಂತರ ಬಾಯಿಯನ್ನು ಚೆನ್ನಾಗಿ ನೀರಿನಿಂದ ಮುಕ್ಕಳಿಸಬೇಕು. ಇಲ್ಲವಾದರೆ ಹಲ್ಲುಗಳು ಮತ್ತು ವಸಡುಗಳ ಸಂದಿಗಳಲ್ಲಿ ಆಹಾರದ ಕಣಗಳು ಸೇರಿಕೊಂಡು ಅಲ್ಲಿ ಬ್ಯಾಕ್ಟೀರಿಯಾಗಳು ಸೇರಿಕೊಂಡು ಬೆಳೆಯುತ್ತವೆ. ಬ್ಯಾಕ್ಟೀರಿಯಾಗಳು ಬಾಯಿಯ ಆರೋಗ್ಯಕ್ಕೆ ಹಾನಿಕಾರಕ. ಅವು ವಸಡುಗಳ ಅಂಗಾಂಶಗಳನ್ನು ಶಿಥಿಲಗೊಳಿಸಿ ರಕ್ತನಾಳಗಳು ಒಡೆಯಲು ಹಾಗೂ ರಕ್ತ ಒಸರಲು ನೇರವಾಗಿ ಕಾರಣವಾಗಿ ಜಿಂಜೈವೈಟಿಸ್ ಕಾಣಿಸಿಕೊಳ್ಳಲು ದಾರಿಮಾಡಿಕೊಡುತ್ತವೆ. 

ಸಾಮಾನ್ಯವಾಗಿ ಆರೋಗ್ಯಪೂರ್ಣವಾಗಿರುವ ವಸಡುಗಳು ದೃಢವಾಗಿ ಮತ್ತು ತಿಳಿ ಗುಲಾಬಿ ಬಣ್ಣದಾಗಿರುತ್ತವೆ, ಕೆಂಪಾಗಿರುವುದಿಲ್ಲ. ವಸಡು ದಪ್ಪ, ಕಡುಕೆಂಪಾದರೆ ಮತ್ತು ರಕ್ತ ಒಸರಿದರೆ ತಡಮಾಡದೇ ದಂತ ವೈದ್ಯರನ್ನು ಕಾಣಬೇಕು. ಆದಷ್ಟು ಬೇಗ ವೈದ್ಯರಲ್ಲಿಗೆ ಹೋದರೆ ಜಿಂಜಿವೈಟಿಸ್ಸನ್ನು ಗುಣಪಡಿಸಬಹುದು. ಸೂಕ್ತ ಕ್ರಮದಲ್ಲಿ ಹಲ್ಲುಗಳನ್ನು ಉಜ್ಜಿಕೊಳ್ಳುವುದು, ಊಟದ ಬಳಿಕ ಚೆನ್ನಾಗಿ ಬಾಯಿ ಮುಕ್ಕಳಿಸಿ ಸ್ವಚ್ಛವಾಗಿಟ್ಟುಕೊಳ್ಳುವುದು, ಬೆಳಗ್ಗೆ ಮತ್ತು ರಾತ್ರಿ ಹೀಗೆ ದಿನಕ್ಕೆರಡು ಬಾರಿ ಸ್ವಲ್ಪ ಪೇಸ್ಟ್ ಬಳಸಿ ಹಲ್ಲುಜ್ಜುವುದು, ಹಲ್ಲುಗಳ ನಡುವೆ ಸಿಕ್ಕಿಹಾಕಿಕೊಂಡ ಆಹಾರ ಕಣಗಳನ್ನು ನಿಯಮಿತವಾಗಿ ತೆಗೆದುಹಾಕುವುದು ಇತ್ಯಾದಿ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.

ದಂತ ಆರೋಗ್ಯ ಮತ್ತು ಮನೆಮದ್ದು

ಜಿಂಜೈವೈಟಿಸ್ ಆದಾಗ ಎಲ್ಲಕ್ಕೂ ಮೊದಲು ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಕೊಂಚ ಉಪ್ಪು (ಕಲ್ಲುಪ್ಪು ಆದರೆ ಉತ್ತಮ) ಹಾಕಿ ಬಾಯಿಯನ್ನು ಮುಕ್ಕಳಿಸಬೇಕು. ಇದರಿಂದ ತೆರೆದುಕೊಂಡಿದ್ದ ರಕ್ತನಾಳಗಳು ಮುಚ್ಚಲು ಹಾಗೂ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ. ಊದಿಕೊಂಡು ನೋವಾಗುತ್ತಿರುವ ವಸಡಿನ ಮೇಲೆ ಲಘುವಾಗಿ ಕೊಬ್ಬರಿ ಎಣ್ಣೆಯನ್ನು ಸವರಿದರೆ ತಕ್ಷಣ ನೋವಿನಿಂದ ಉಪಶಮನ ಸಾಧ್ಯ. 

ಉತ್ತಮ ದಂತ ಆರೋಗ್ಯಕ್ಕಾಗಿ ಊಟವಾದ ನಂತರ ಮೃದುವಾಗಿ ಹಲ್ಲನ್ನು ಬ್ರಶ್ ಮಾಡಬಹುದು. ಹಲ್ಲನ್ನು ಉಜ್ಜಲು ಮೃದುವಾದ ಎಳೆಗಳಿರುವ ಬ್ರಶ್ ಬಳಸಬೇಕು. ಗಟ್ಟಿಯಾಗಿ ಹಲ್ಲುಗಳನ್ನು ಇಷ್ಟಬಂದ ಹಾಗೆ ತಿಕ್ಕಬಾರದು, ಮೃದುವಾಗಿ ಸ್ವಲ್ಪ ಸ್ವಲ್ಪವಾಗಿ ಮೇಲಿಂದ ಕೆಳಗೆ ಉಜ್ಜಬೇಕು. ಹಲ್ಲಿನ ಸಂದುಗಳನ್ನು ನಿಧಾನವಾಗಿ ಶುಚಿಮಾಡಲು ದಾರ (ಫ್ಲಾಸ್) ಬಳಸಬೇಕು. ತಂಬಾಕು ಜಗಿಯುವ ಮತ್ತು ಧೂಮಪಾನದಂತಹ ಅಭ್ಯಾಸಗಳು ಹಲ್ಲುಗಳ ಮೇಲ್ಮೈಯಲ್ಲಿರುವ ದಂತಕವಚದ ಪದರವನ್ನು ಸವೆಸುತ್ತವೆ. ಹಲ್ಲಿನ ಸವೆತವು ಕೊಳೆತವನ್ನು ಉಂಟುಮಾಡಬಹುದು. ಇದು ಹೆಚ್ಚು ಹಲ್ಲಿನ ನಾಶಕ್ಕೆ ಕಾರಣವಾಗುತ್ತದೆ. ಆದ್ದರಿಂದ ಇಂತಹ ದುಶ್ಚಟಗಳಿಂದ ದೂರವಿರಬೇಕು. 

ಬಾಯಿಯ ಆರೋಗ್ಯ
ಬಾಯಿಯ ಆರೋಗ್ಯಕ್ಕೆ ಹಲ್ಲು ಮತ್ತು ವಸಡುಗಳನ್ನು ಸ್ವಚ್ಛಗೊಳಿಸುವುದು ಸಾಕಾಗುವುದಿಲ್ಲ. ನಾಲಿಗೆಯ ಮೇಲೆ ಬ್ಯಾಕ್ಟೀರಿಯಾದ ಪದರವಿದ್ದು ಅದು ಹಲ್ಲು ಮತ್ತು ವಸಡುಗಳನ್ನು ತಲುಪಿ ಹಲವು ಹಲ್ಲಿನ ಸಮಸ್ಯೆಗಳನ್ನು ಉಂಟುಮಾಡುತ್ತದೆ. ನಾಲಿಗೆಯನ್ನು ಸರಿಯಾಗಿ ಸ್ವಚ್ಛಗೊಳಿಸಲು ಟಂಗ್ ಕ್ಲೀನರನ್ನು ಬಳಸಬಹುದು ಸಾಮಾನ್ಯ ಹಾಗೂ ಬಾಯಿಯ ಆರೋಗ್ಯಕ್ಕೆ ಪ್ರತಿದಿನವೂ ಸಾಕಷ್ಟು ನೀರು ಕುಡಿಯುವುದು ಒಳ್ಳೆಯದು. ಇದು ಹಲ್ಲುಗಳ ಮೇಲ್ಮೈ ಮತ್ತು ನಾಲಿಗೆಯಿಂದ ಬ್ಯಾಕ್ಟೀರಿಯಾದ ಪದರವನ್ನು ಸರಿಯಾಗಿ ತೊಳೆಯುತ್ತದೆ. ಇದು ಬಾಯಿಯಲ್ಲಿ ಲಾಲಾರಸದ ಮಟ್ಟವನ್ನು ಹೆಚ್ಚಿಸಲು ಕೂಡ ಸಹಾಯ ಮಾಡುತ್ತದೆ. ಅಲ್ಲದೆ ಸಾಕಷ್ಟು ನೀರು ಕುಡಿಯುವುದು ಒಸಡುಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ.

ಆಹಾರದಲ್ಲಿರುವ ಸಕ್ಕರೆ ಬಾಯಿಯಲ್ಲಿ ಅನೇಕ ರೀತಿಯ ಬ್ಯಾಕ್ಟೀರಿಯಾಗಳನ್ನು ಪೋಷಿಸಿ ಅಂತಿಮವಾಗಿ ಹಲ್ಲಿನ ಕೊಳೆತಕ್ಕೆ ಕಾರಣವಾಗುತ್ತದೆ. ಈ ಬಗ್ಗೆ ಗಮನ ಹರಿಸಬೇಕು. ಅತಿಯಾಗಿ ಜಂಕ್ ಫುಡ್ ತಿನ್ನುವುದರಿಂದ ದೇಹದ ಮೇಲೆ ದುಷ್ಪರಿಣಾಮ ಬೀರುವುದಲ್ಲದೇ ಬಾಯಿಯ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಒಳಗೊಂಡಿರುವ ಆರೋಗ್ಯಕರ ಸಮತೋಲಿತ ಆಹಾರವನ್ನು ತಿನ್ನುವುದು ವಸಡು ಮತ್ತು ಹಲ್ಲುಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com