
ವ್ಯಾಪಾರ ಮಾಡಬೇಕು, ತಮ್ಮ ಬಲದ ಮೇಲೆ ಉದ್ದಿಮೆದಾರನಾಗಬೇಕು ಎನ್ನುವ ಕನಸು ಬಹಳಷ್ಟು ಜನರಿಗೆ ಇರುವುದು ಕೂಡ ಸಹಜ. ಆದರೆ ವ್ಯಾಪಾರ ಎನ್ನುವುದು ಅಷ್ಟು ಸುಲಭವಲ್ಲ. ಉದ್ದಿಮೆದಾರನಾಗಲು ಬೇಕಾಗುವ ಮನಸ್ಥಿತಿ ಬೆಳಸಿಕೊಳ್ಳಬೇಕು. ಇದೇನಿದು ಮನಸ್ಥಿತಿ?
ಗಮನಿಸಿ ನೋಡಿ ಒಬ್ಬ ವೇತನಕ್ಕೆ ದುಡಿಯುವ ವ್ಯಕ್ತಿಯ ಮನಸ್ಥಿತಿ ಭದ್ರತೆಯನ್ನ ಹೆಚ್ಚು ಇಷ್ಟಪಡುತ್ತದೆ. ಅದೇ ಉದ್ದಿಮೆದಾರನ ಮನಸ್ಥಿತಿ ನಾಳಿನ ಅಸ್ಥಿರತೆಯನ್ನ ತಡೆದುಕೊಂಡು, ಎಲ್ಲಾ ಅಪಾಯ ಮತ್ತು ಬದಲಾವಣೆಗಳನ್ನ ಮೆಟ್ಟಿನಿಂತು ಬೇರೆಯವರಿಗೆ, ಸಮಾಜಕ್ಕೆ ಭದ್ರತೆಯನ್ನ ನೀಡುವ ಕೆಲಸವನ್ನ ಮಾಡುತ್ತಾರೆ. ಇದು ಸರಿ, ಇದು ತಪ್ಪು ಎನ್ನುವುದನ್ನ ಹೇಳುವುದು ಈ ಬರಹದ ಉದ್ದೇಶವಲ್ಲ. ಮನಸ್ಥಿತಿ ಎನ್ನುವುದು ಆಯಾ ವ್ಯಕ್ತಿಯನ್ನ ಅವಲಂಬಿಸಿದೆ. ಕೆಲವರು ಬೇರೆ ದಾರಿಯಿಲ್ಲದೆ ಉದ್ದಿಮೆದಾರರಾಗಿದ್ದರೆ, ಕೆಲವರು ಉದ್ದಿಮೆದಾರರಾಗಬೇಕು ಎನ್ನುವ ಆಶಯ, ಮನೋಬಲದಿಂದ ಉದ್ದಿಮೆದಾರರಾಗಿದ್ದರೆ. ಜಗತ್ತಿನ ಬಹುತೇಕರು ವೇತನಕ್ಕೆ ಕೆಲಸ ಮಾಡುತ್ತಾರೆ. ಮೊದಲೇ ಹೇಳಿದಂತೆ ಉದ್ದಿಮೆದಾರರಾಗುವುದು ಸುಲಭದ ಮಾತಲ್ಲ. ಆಂತರಿಕ ಶಕ್ತಿಯ ಜೊತೆಗೆ ಹೊರ ಜಗತ್ತಿನ ಬದಲಾವಣೆಗಳನ್ನ, ಅಸ್ಥಿರತೆಯ ಜೊತೆಗೆ ಯಾವಾಗ ಬೇಕಾದರೂ ಕುಸಿತ ಕಾಣಬಹುದಾದ ಸಂಭಾವ್ಯತೆಯನ್ನ ಮೆಟ್ಟಿ ನಿಲ್ಲುವ ಮನೋಬಲ ಇದ್ದವರಿಗೆ ಮಾತ್ರ ಉದ್ದಿಮೆ ಕಟ್ಟಲು ಸಾಧ್ಯ.
ಕುಟುಂಬ ಕಟ್ಟಿದ ವ್ಯಾಪಾರವನ್ನ ಮುಂದುವರಿಸುವರ ಸಂಖ್ಯೆ ಮೂರನೇ ತಲೆಮಾರಿನ ವೇಳೆಗೆ ಕುಸಿತ ಕಾಣುತ್ತದೆ ಎನ್ನುತ್ತದೆ ಅಂಕಿ-ಅಂಶ. ಹಾಗೆಯೇ ಬಹುತೇಕ ಯಾವುದೇ ವಲಯದಲ್ಲಿ ಪ್ರಾರಂಭ ಮಾಡಿದ 90 ಪ್ರತಿಶತಕ್ಕೂ ಹೆಚ್ಚು ಉದ್ದಿಮೆಗಳು ವರ್ಷ ಪೂರ್ಣಗೊಳಿಸುವುದರಲ್ಲಿ ಮುಚ್ಚಿ ಹೋಗುತ್ತವೆ ಎನ್ನುವುದು ಕೂಡ ಸತ್ಯ. ಕುಟುಂಬ ಪ್ರಾರಂಭ ಮಾಡಿದ ಉದ್ದಿಮೆಗಳು ಜಗತ್ತಿನ ತುಂಬಾ ತುಂಬಿಕೊಂಡಿವೆ. ಏಳೂವರೆ ಬಿಲಿಯನ್ ಜನಸಂಖ್ಯೆಯ ಈ ಜಗತ್ತಿನಲ್ಲಿ ಕುಟುಂಬದ ಹಿಡಿತದಲ್ಲಿರುವ 500 ಉದ್ದಿಮೆಗಳು ಜಗತ್ತನ್ನ ಆಳುತ್ತಿವೆ. ಸಮಾನತೆ, ಸ್ವಂತಂತ್ರ್ಯ ಇತ್ಯಾದಿಗಳ ಪಾಠ ಹೇಳುವ ದೊಡ್ಡಣ್ಣ ಅಮೇರಿಕಾದಿಂದ, ಜರ್ಮನಿ, ಫ್ರಾನ್ಸ್, ನೆದರ್ಲ್ಯಾಂಡ್, ಸೌತ್ ಕೊರಿಯಾ, ಭಾರತ, ಸ್ವಿಸ್, ಕೆನಡಾ, ಚೀನಾ ಇತ್ಯಾದಿ ದೇಶಗಳಲ್ಲಿ ವ್ಯಾಪಾರದ ಮೇಲಿನ ಹಿಡಿತವನ್ನ ಹೊಂದಿವೆ.
ಭಾರತ ದೇಶದ ಒಟ್ಟು ಜಿಡಿಪಿಯ 79 ಪ್ರತಿಶತ ಕುಟುಂಬದ ಆಡಳಿತದಲ್ಲಿರುವ ಸಂಸ್ಥೆಗಳಿಂದ ಬರುತ್ತಿದೆ ಎಂದರೆ ಅದೆಷ್ಟು ದೊಡ್ಡದು ಎನ್ನುವುದರ ಅರಿವು ನಿಮ್ಮದಾಗುತ್ತದೆ. ಜಗತ್ತಿನ ಅತ್ಯಂತ ಮುಂದುವರಿದ ದೇಶ ಎನ್ನುವ ಹೆಗ್ಗಳಿಕೆ ಹೊಂದಿರುವ ಜರ್ಮನಿಯ 90 ಪ್ರತಿಶತ ವ್ಯಾಪಾರ, ವಹಿವಾಟು ಕುಟುಂಬದ ಆಡಳಿತದಲ್ಲಿದೆ! ಹಾಗೆಯೇ ಜಗತ್ತಿನ 500 ಬಲಿಷ್ಠ ಕುಟುಂಬದ ಆಡಳಿತ ಹೊಂದಿರುವ ಸಂಸ್ಥೆಗಳಲ್ಲಿ 119 ಅಮೇರಿಕಾ ದೇಶದಲ್ಲಿದೆ, ನಿಮಗೆ ತಿಳಿದಿರಲಿ ಅಮೇರಿಕಾ ದೇಶದ 81 ಪ್ರತಿಶತ ಆದಾಯವನ್ನ ಈ 117 ಸಂಸ್ಥೆಗಳು ನೀಡುತ್ತಿವೆ.
ಇನ್ನು ಚೀನಾ ದೇಶದಲ್ಲಿ ಕಮ್ಯುನಿಸಂ ಇದ್ದೂ ಕೂಡ ಪರಿಸ್ಥಿತಿ ವಿಭಿನ್ನವಾಗಿಲ್ಲ, ಅಲ್ಲಿಯೂ ಕುಟುಂಬ, ಮನೆತನಗಳ ದರ್ಬಾರು ಅಭಾದಿತ. ಸೌತ್ ಕೊರಿಯಾ 14 ಕುಟುಂಬಗಳು ನಡೆಸುವ ಸಂಸ್ಥೆಗಳ ದೇಶ ಎಂದು ಧಾರಾಳವಾಗಿ ಹೇಳಬಹುದು. ಜಗತ್ತಿನ ಯಾವುದೇ ದೇಶವನ್ನ ನೀವು ಗಮನಿಸಿ, ಎಲ್ಲೆಡೆಯೂ ನಿಮಗೆ ಇದೆ ಅಂಕಿಅಂಶಗಳು ಸಿಗುತ್ತವೆ. ಸ್ವಭಾವತಃ ಮನುಷ್ಯನ ಸ್ವಭಾವ ಒಂದೇ, ಹಿಂದೆಲ್ಲ ರಾಜ ಮನೆತನಗಳು ಆಳುತ್ತಿದ್ದರು, ಇಂದಿಗೆ ಅವರ ಜಾಗವನ್ನ ವ್ಯಾಪಾರಸ್ಥ ಕುಟುಂಬಗಳು ಬದಲಿಸಿವೆ. ಹೇಗೆ ಮುಂದಿನ ತಲೆಮಾರಿನಲ್ಲಿ ಉತ್ತಮ ರಾಜ ಸಿಗದ ಕಾರಣ ಕೆಲವು ರಾಜ ಮನೆತನೆಗಳು ಅಳಿದವು, ಥೇಟ್ ಹಾಗೆಯೇ ವ್ಯಾಪಾರಸ್ಥ ಕುಟುಂಬಗಳು ಕೂಡ ಅವನತಿ ಕಾಣುತ್ತವೆ, ಅವುಗಳ ಜಾಗದಲ್ಲಿ ಹೊಸ ಮನೆತನ, ಕುಟುಂಬ ಬರುತ್ತದೆ. ಜಗತ್ತಿನಾದ್ಯಂತ ಇದೇ ಕಥೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ಬೇಕಿದೆ ಸಪ್ತ ವಿತ್ತೀಯ ಸಂಕಲ್ಪಗಳು!
ಕುಟುಂಬ ನಿಯಂತ್ರಣದ ವ್ಯಾಪಾರದಲ್ಲಿ ಜಪಾನ್ ವಿಶಿಷ್ಟವಾಗಿ ನಿಲ್ಲುತ್ತದೆ. ಜಾಗತಿಕವಾಗಿ ಕೇವಲ 30 ಪ್ರತಿಶತ ಕುಟುಂಬ ನಿಯಂತ್ರಣದಲ್ಲಿರುವ ಸಂಸ್ಥೆಗಳು ಮುಂದಿನ ತಲೆಮಾರಿನ ಒಡೆತನಕ್ಕೆ ಸಿಗುತ್ತವೆ. ಉಳಿದರ 70 ಪ್ರತಿಶತ ಕುಟುಂಬ ಹೊರತುಪಡಿಸಿದ ನಾಯಕನನ್ನ ಹುಡುಕಿಕೊಳ್ಳುತ್ತವೆ. ಮೂರು ಮತ್ತು ನಾಲ್ಕನೇ ತಲೆಮಾರಿಗೆ ಅದೇ ಕುಟುಂಬದ ನಾಯಕತ್ವ ಹೊಂದಿರುವ ಸಂಸ್ಥೆಗಳು ಕೇವಲ 3/4 ಪ್ರತಿಶತ ಎನ್ನುವುದು ಅಚ್ಚರಿಯ ವಿಷಯವಲ್ಲ. ಜಪಾನ್ ವಿಶಿಷ್ಟವಾಗಿ ನಿಲ್ಲುವುದು ಈ ವಿಷಯದಲ್ಲಿ!
ಜಪಾನಿನಲ್ಲಿರುವ ಹೋಷಿ ರ್ಯೋಕನ್ ( Hoshi Ryokan ) ಎನ್ನುವ ಹೋಟೆಲ್ 718 ನೇ ಇಸವಿಯಿಂದ ಅದೇ ಕುಟುಂಬದವರು ನಡೆಸಿಕೊಂಡು ಬರುತ್ತಿದ್ದಾರೆ. ಇವತ್ತಿನ ಆಡಳಿತ ಮಂಡಳಿ 46ನೇ ತಲೆಮಾರು !! ಜಾಗತಿಕವಾಗಿ ಕುಟುಂಬ ನಡೆಸಿಕೊಂಡು ಬಂದಿರುವ ಮತ್ತು 200 ವರ್ಷಕ್ಕೂ ಹೆಚ್ಚು ಕಾಲ ತಮ್ಮ ಅಸ್ಥಿತ್ವ ಉಳಿಸಿಕೊಂಡಿರುವ ಸಂಸ್ಥೆಗಳ ಸಂಖ್ಯೆ ಐದು ಸಾವಿರ, ಇದರಲ್ಲಿ 60 ಪ್ರತಿಶತ ಅಂದರೆ 3 ಸಾವಿರ ಸಂಸ್ಥೆಗಳು ಜಪಾನ್ ದೇಶದಲ್ಲಿದೆ.
ಉದ್ದಿಮೆ ಕಟ್ಟಲು ಮತ್ತು ಅದನ್ನ ಸುಸ್ಥಿರವಾಗಿ ನಡೆಸಿಕೊಂಡು ಹೋಗಲು ಜಪಾನೀಯರ ಬಳಿ ಮಂತ್ರ ದಂಡವಿಲ್ಲ , ಆದರೆ ಕೆಲವು ಸರಳ, ಅತಿ ಸರಳ ಸೂತ್ರಗಳಿವೆ ಅವುಗಳನ್ನ ಅಳವಡಿಸಿಕೊಂಡರೆ ಯಶಸ್ಸಿನ ಸಂಭಾವ್ಯತೆ ಹೆಚ್ಚಾಗುತ್ತದೆ. ಅಂದಹಾಗೆ ಈ ಸೂತ್ರವನ್ನ ಕೇವಲ ಕುಟುಂಬ ಪ್ರಾರಂಭಿಸುವ ಉದ್ದಿಮೆಗಳು ಮಾತ್ರ ಪಾಲಿಸಬೇಕೆಂದಿಲ್ಲ , ನಮ್ಮ ಇಂದಿನ ದಿನದ ನವೋದ್ದಿಮೆಗಳು ಕೂಡ ಇದನ್ನ ಅಳವಡಿಸಿಕೊಳ್ಳಬಹುದು. ಸಂಸ್ಥೆ ಹಳೆಯದೋ , ಹೊಸತೋ, ಯಾವ ವಲಯದ್ದು ಇತ್ಯಾದಿ ಯಾವ ಅಂಶಗಳು ಕೂಡ ಇಲ್ಲಿ ಗಣನೆಗೆ ಬರುವುದಿಲ್ಲ, ಅಂದರೆ ಇದನ್ನ ಯಾವ ಸಂಸ್ಥೆ ಬೇಕಾದರೂ ಯಾವುದೇ ಹಂತದಲ್ಲಿದ್ದರೂ ತಮ್ಮದಾಗಿಸಿಕೊಳ್ಳಬಹುದು. ಇದರಿಂದ ಮೊದಲೇ ಹೇಳಿದಂತೆ ಗೆಲ್ಲುವ ಸಂಭಾವ್ಯತೆ ಹೆಚ್ಚಾಗುತ್ತದೆ .
ಇದನ್ನೂ ಓದಿ: ಜಾಗತಿಕ ವಿತ್ತ ಜಗತ್ತಿನ 2023ರ ಮುನ್ನೋಟ ಇಲ್ಲಿದೆ...
ಕೊನೆಮಾತು: ಮೇಲಿನ ಅಂಶಗಳು ಕೇವಲ ಜಪಾನಿ ಸಂಸ್ಥೆಗಳಿಗೆ ಸೀಮಿತವಲ್ಲ. ದೀರ್ಘಕಾಲದಲ್ಲಿ ಇವೆಲ್ಲವೂ ಹೆಚ್ಚಿನ ಲಾಭವನ್ನೆ ತಂದುಕೊಡುತ್ತವೆ. ಹೀಗಾಗಿ ಯಾವುದೇ ಸಂಸ್ಥೆ ಯಾವುದೇ ಹಂತದಲ್ಲಿ ಇವುಗಳನ್ನ ಅಳವಡಿಸಿಕೊಳ್ಳಬಹುದು. ಇದರೊಂದಿಗೆ ಅವಶ್ಯಕವಾಗಿ ಪಾಲಿಸಬೇಕಾದ ಹಣಕಾಸು ಸೂತ್ರಗಳು ಬೇರೆಯಿವೆ, ಅವುಗಳನ್ನ ಕೂಡ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಒಟ್ಟಿನಲ್ಲಿ ಸರಳವಾಗಿ ಹೇಳಬೇಕೆಂದರೆ ಕುಟುಂಬ ನಿಯಂತ್ರಣದಲ್ಲಿರುವ ಸಂಸ್ಥೆಗಳು ಜಗತ್ತಿನಾದ್ಯಂತ ಹಬ್ಬಿವೆ, ಅಲ್ಲದೆ ಅವುಗಳ ಕೊಡುಗೆ ಕೂಡ ಹುಬ್ಬೇರಿಸುವಂತಿದೆ. ಸಂಸ್ಥೆ ಯಾರದೇ ಆಡಳಿತದಲ್ಲಿರಲಿ ಅದು ಸಮಾಜದ ಒಳಿತನ್ನ , ತನ್ನ ನೌಕರರ ಒಳಿತನ್ನ ಮರೆಯಬಾರದು.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement