ಸಿದ್ದು ಸರ್ಕಾರ ಪತನಕ್ಕೆ ಸನ್ನಾಹ; ದಿಲ್ಲಿಯಲ್ಲಿ ರಣತಂತ್ರ (ಸುದ್ದಿ ವಿಶ್ಲೇಷಣೆ)

ಯಗಟಿ ಮೋಹನ್ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ಪ್ರಯತ್ನ ಗುಟ್ಟಾಗಿ ನಡೆದಿದೆಯೆ ಇಂಥದೊಂದು ಚಟುವಟಿಕೆಗೆ ಬಿಜೆಪಿ ಮುನ್ನುಡಿ ಬರೆದಿದೆ ಎಂಬ ಮಾಹಿತಿ ಹೊರ ಬಿದ್ದಿದೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ಪ್ರಯತ್ನ ಗುಟ್ಟಾಗಿ ನಡೆದಿದೆಯೆ ಇಂಥದೊಂದು ಚಟುವಟಿಕೆಗೆ ಬಿಜೆಪಿ ಮುನ್ನುಡಿ ಬರೆದಿದೆ ಎಂಬ ಮಾಹಿತಿ ಹೊರ ಬಿದ್ದಿದ್ದು ಲೋಕಸಭಾ ಚುನಾವಣೆಗೆ ಮೊದಲೇ ಈ ಕಾರ್ಯಾಚರಣೆ ನಡೆಸಲು ರಣವ್ಯೂಹ ತೆರೆಯ ಮರೆಯಲ್ಲಿ ಸಿದ್ಧವಾಗುತ್ತಿದೆ.

ಇಂಥದೊಂದು ತಂತ್ರದ ಸುಳಿವು ದೊರೆಯುತ್ತಿದ್ದಂತೆ ಎಚ್ಚರಗೊಂಡಿರುವ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಈ ರಾಜಕೀಯ ತಂತ್ರ ಫಲಿಸದಂತೆ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕಾರ್ಯಕ್ಕೆ ಮುಂದಾಗಿದ್ದಾರೆ

ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಬಿಜೆಪಿ ಹಿಂದಿನ ಚುನಾವಣೆಯಲ್ಲಿ ಗೆದ್ದ 25 ಸ್ಥಾನಗಳನ್ನು ಗಳಿಸುವ ಮೂಲಕ ಪ್ರಚಂಡ ವಿಜಯ ಸಾಧಿಸಿತ್ತು. ಈ ಬಾರಿಯೂ ಅದೇ ಉಮೇದಿನಲ್ಲಿ ಚುನಾವಣೆಯಲ್ಲಿ ಅಧಿಕ ಸ್ಥಾನಗಳನ್ನು ಗೆಲ್ಲುವ ಆಕಾಂಕ್ಷೆ ಹೊಂದಿದೆಯಾದರೂ ಪರಿಸ್ಥಿತಿ ಅನುಕೂಲಕರವಾಗಿಲ್ಲ. ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ 10 ಸ್ಥಾನಗಳನ್ನು ಗೆದ್ದರೆ ಅದೇ ದೊಡ್ಡ ಸಾಧನೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಕಳೆದ ಮೇ ನಲ್ಲಿ ನಡೆದ ವಿಧಾನಸಭೆಯ ಚುನಾವಣೆಯಲ್ಲಿನ ಸೋಲು ಪಕ್ಷದ ಆತ್ಮ ಸ್ಥೈರ್ಯವನ್ನೇ ಉಡುಗಿಸಿದ್ದು ಪಕ್ಷದ ಸೋತ ಪ್ರಮುಖ ಮುಖಂಡರ ಗುಂಪು  ಬಹಿರಂಗವಾಗೇ ಹೊಂದಾಣಿಕೆ ರಾಜಕಾರಣದಿಂದ ತಮಗೆ ಸೋಲುಂಟಾಯಿತು ಎಂದು ಗದ್ದಲ ಎಬ್ಬಿಸಿದೆ.

 ಆದರೆ ಇನ್ನಷ್ಟು ದಿನ ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿ ಇಲ್ಲದೇ ಇದ್ದರೆ ಸಂಘಟನಾತ್ಮಕ ವಾಗಿ ಇನ್ನೂ ಸೊರಗಬಹುದು ಎಂಬ ಆತಂಕಕ್ಕೆ ಬಿದ್ದಿರುವ ಬಿಜೆಪಿಯ ದಿಲ್ಲಿ ಮುಖಂಡರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ ಜೆಡಿಎಸ್ ಜತೆಗೂಡಿ ಸರ್ಕಾರ ರಚಿಸುವ ಸಾಧ್ಯಾ ಸಾಧ್ಯತೆಗಳ ಕುರಿತು ಚರ್ಚೆ ನಡೆಸಿದ್ದಾರೆ.

ಬಿಜೆಪಿಗೆ ಹಳೇ ಮೈಸೂರು ಭಾಗದ ಒಕ್ಕಲಿಗರೇ ಪ್ರಾಬಲ್ಯ ಹೊಂದಿರುವ ಜಿಲ್ಲೆಗಳಲ್ಲಿ ಅಸ್ತಿತ್ವ ಇಲ್ಲ. ಇನ್ನು ಪಕ್ಷಕ್ಕೆ ಬೆನ್ನೆಲುಬಾಗಿದ್ದ ಲಿಂಗಾಯಿತರೂ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನತ್ತ ತಮ್ಮ ನಿಷ್ಠೆ ಬದಲಾಯಿಸಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ನಂತರ ಹಿಂದುಳಿದ ವರ್ಗಗಳಲ್ಲಿ ಹೊಸ ಆಶಾವಾದ ಮೂಡಿದ್ದು ಅವರ ಶಕ್ತಿ ಇಮ್ಮಡಿಯಾಗಿದೆ. ಪರಿಸ್ಥಿತಿಯನ್ನು ಹೀಗೆಯೇ ಬಿಟ್ಟರೆ ಕರ್ನಾಟಕದಲ್ಲಿ ಬಿಜೆಪಿ ಇರುವ ಅಸ್ತಿತ್ವವನ್ನೂ ಕಳೆದುಕೊಳ್ಳಬಹುದು ಎಂಬ ಆತಂಕ ದಿಲ್ಲಿ ವರಿಷ್ಠರದ್ದು. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನ ಪರ ಆಡಳಿತದಿಂದಾಗಿ ತನ್ನ ನೆಲೆಯನ್ನು ಭದ್ರ ಪಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಸಂಘಟನಾತ್ಮಕವಾಗಿಯೂ ಬಿಜೆಪಿ ಸೊರಗಬಹುದು ಎಂಬ ಆತಂಕ ವರಿಷ್ಠರದ್ದು . ಈ ಕಾರಣಕ್ಕಾಗೇ ಕಾಂಗ್ರೆಸ್ ನಲ್ಲಿರುವ ಭಿನ್ನಮತವನ್ನು ಬಳಸಿಕೊಂಡು ಸರ್ಕಾರ ಉರುಳಿಸಿದರೆ ಅದರಿಂದ ರಾಜಕೀಯವಾಗಿ ಭವಿಷ್ಯದಲ್ಲಿ ಲಾಭ ಆಗಬಹುದು ಎಂಬ ನಿರೀಕ್ಷೆ ಹೈಕಮಾಮಡ್ ನದ್ದು. ಈ ಕಾರಣಕ್ಕಾಗೇ ಆಪರೇಷನ್ ಕಮಲ ಕಾರ್ಯಾಚರಣೆಯನ್ನು ಮತ್ತಗೆ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ.

ಮೋದಿ ಟೀಂ ಗುರಿ ಮಲ್ಲಿಕಾರ್ಜುನ ಖರ್ಗೆ:  ಕರ್ನಾಟಕದವರೇ ಆದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಮಟ್ಟದಲ್ಲಿ ಬಿಜೆಪಿಗೆ ದೊಡ್ಡ ಸಮಸ್ಯೆಯಾಗಿದ್ದಾರೆ. ಅವರು ಪಕ್ಷದ ಚುಕ್ಕಾಣಿ ವಹಿಸಿಕೊಂಡ ನಂತರ ಕಾಂಗ್ರೆಸ್ ಗೆ ಒಂದಷ್ಟರ ಮಟ್ಟಿನ ಗಂಭೀರತೆ ಬಂದಿದೆ. ರಾಜ್ಯಸಭೆಯಪ್ರತಿಪಕ್ಷದ ನಾಯಕರೂ ಆಗಿರುವ ಖರ್ಗೆ ಸದನದ ಒಳಗೆ ಮತ್ತು ಹೊರಗೆ ಪ್ರಧಾನಿ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದಲ್ಲದೇ ಅನೇಕ ಸಂದರ್ಭಗಳಲ್ಲಿ ಸರ್ಕಾರ ಇಕ್ಕಟ್ಟಿಗೆ ಸಿಕ್ಕುವಂತೆ ಮಾಡಿದ್ದಾರೆ. ಅವರು ಅಧ್ಯಕ್ಷರಾದ ನಂತರ ಕಾಂಗ್ರೆಸ್ ರಾಷ್ಟ್ರ ಮಟ್ಟದಲ್ಲೂ ಚೇತರಿಸಿಕೊಂಡಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಗುಲಬರ್ಗದಿಂದ ಕಣಕ್ಕಿಳಿಯಲಿರುವ ಅವರು ಆಯ್ಕೆಯಾಗುವ ಎಲ್ಲ ಸಾಧ್ಯತೆಗಳು ಹೆಚ್ಚಾಗಿವೆ. ಅವರು ಲೋಕಸಭೆಗೆ ಆರಿಸಿ ಬಂದರೆ ರಾಷ್ಟ್ರ ರಾಜಕಾರಣದಲ್ಲೂ ಮಹತ್ವದ ಬದಲಾವಣೆಗಳು ಆಗುವ ಸಂಭವವಿದೆ. ಈ ಎಲ್ಲ ಪರಿಸ್ಥಿತಿಗಳನ್ನು ಅವಲೋಕಿಸಿರುವ ದಿಲ್ಲಿ ಬಿಜೆಪಿ ನಾಯಕರು ಶತಾಯ ಗತಾಯ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸುವ ಚಿಂತನೆಯಲ್ಲಿದ್ದಾರೆ.  ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ನಿರೀಕ್ಷೆಯಂತೆ ಕಾಂಗ್ರೆಸ್ ಸರ್ಕಾರ ಪತನಗೊಂಡರೆ  ಅದು ರಾಷ್ಟ್ರ ಮಟ್ಟದಲ್ಲಿ ಖರ್ಗೆಯವರಿಗಾದ ಹಿನ್ನೆಡೆ ಎಂದು ಬಿಂಬಿಸಲು ಸಾಶಧ್ಯವಾಗುತ್ತದೆ ಆ ಮೂಲಕ ಕಾಂಗ್ರೆಸ್ಸನ್ನು ಮತ್ತು ನಾಯಕತ್ವವನ್ನು ದುರ್ಬಲಗೊಳಿಸಬಹುದು ಎಂಬುದು ಬಿಜೆಪಿ ದಿಲ್ಲಿ ನಾಯಕರ ಲೆಕ್ಕಾಚಾರ.

ಮೂಲಗಳ ಪ್ರಕಾರ ಜೆಡಿಎಸ್ ಮತ್ತು ಬಿಜೆಪಿ ನಾಯಕತ್ವಕ್ಕೆ ಆಪ್ತರಾದ ಗುಜರಾತ್ ಮೂಲದ ಉದ್ಯಮಿಯೊಬ್ಬರ ನೆರವನ್ನುಈ ಕಾರ್ಯಾಚರಣೆಗೆ ಪಡೆಯುವ ಬಗ್ಗೆಯೂ ಚಿಂತನೆ ನಡೆದಿದೆ.

ಜೆಡಿಎಸ್ ಸ್ಥಿತಿ:  ರಾಜ್ಯದಲ್ಲಿ ಚುನಾವಣೆಯ ನಂತರ ಜೆಡಿಎಸ್ ನಿಧಾನವಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಸೈದ್ದಾಂತಿಕ ನಿಲುವಿಗಿಂತ ವ್ಯಕ್ತಿಗತ ವಿಚಾರಗಳನ್ನೇ ಗುರಿಯಾಗಿಸಿಕೊಂಡು ಅಧಿಕಾರಕ್ಕೇರುತ್ತಾ ಬಂದಿರುವ ಆ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗೊಂದಲದ ರಾಜಕೀಯ ನಿಲುವುಗಳು ಪಕ್ಷವನ್ನು ಸಂಕಷ್ಟಕ್ಕೀಡು ಮಾಡಿದೆ. ಪಕ್ಷದ ಪರಮೋಚ್ಚ ನಾಯಕ ಮಾಜಿ ಪ್ರಧಾನಿ ದೇವೇಗೌಡರು ವಯೋ ಸಹಜ ಅನಾರೋಗ್ಯದ ನಿಮಿತ್ತ ಮುಖ್ಯ ವಾಹಿನಿಯಿಂದ ದೂರ ಸರಿದಿರುವುದರಿಂದ ಇಡೀ ಪಕ್ಷದ ಸಂಘಟನೆ, ಆಡಳಿತ ಕುಮಾರಸ್ವಾಮಿ ಪಾಲಾಗಿದ್ದು ಅವರ ಸೋದರ ಶಾಸಕ ಎಚ್.ಡಿ.ರೇವಣ್ಣ ಅವರೇ ಮೂಲೆಗುಂಪಾಗಿದ್ದಾರೆ.

ಭಗ್ನಗೊಂಡ ಕನಸು: ಅತಂತ್ರ ವಿಧಾನ ಸಭೆಯ ನಿರೀಕ್ಷೆಯಲ್ಲಿ ಮತ್ತೆ ಮುಖ್ಯಮಂತ್ರಿ ಪಟ್ಟಕ್ಕೇರುವ ಆಸೆ ಇಟ್ಟುಕೊಂಡಿದ್ದ ಕುಮಾರಸ್ವಾಮಿಯವರ ಎಲ್ಲ ನಿರೀಕ್ಷೆಗಳೂ ಹುಸಿಯಾಗಿವೆ. ಒಕ್ಕಲಿಗರೇ ಪ್ರಧಾನವಾಗಿರುವ ಜಿಲ್ಲೆಗಳಲ್ಲಿ ಒಂದು ಕಾಲಕ್ಕೆ ಪ್ರಭಾವೀ ಪಕ್ಷವಾಗಿ ಬಲಯುತವಗಿದ್ದ ಜೆಡಿಎಸ್ ಈಗ ಆ ಜಿಲ್ಲೆಗಳಲ್ಲೂ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಸಂಘಟನೆಗೆ ಶಕ್ತಿ ತುಂಬಲು ಅವರಿಗೆ ಬಲಯುತ ಆಸರೆ ಬೇಕಾಗಿದ್ದು ಕಾಂಗ್ರೆಸ್ ಗಿಂತ ಬಿಜೆಪಿಯೇ ಸೂಕ್ತ ಎಂಬ ನಿಲುವಿಗೆ ಅವರು ಬಂದಿದ್ದಾರೆ. ಬಿಜೆಪಿಯಲ್ಲಿ ಪ್ರಬಲ ಒಕ್ಕಲಿಗ ನಾಯಕರ ಕೊರತೆ ಇದೆ. ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಟ್ಟಾದರೆ ಪರಸ್ಪರರಿಗೆ ಲಾಭ ಎಂಬ ಲೆಕ್ಕಾಚಾರ ಎರಡೂ ಪಕ್ಷದ ನಾಯಕರದ್ದು. ಆದರೆ ಜೆಡಿಎಸ್ ಜತೆಗಿನ ಹೊಂದಾಣಿಕೆಯ ಪ್ರಸ್ತಾಪಕ್ಕೆ ಬಿಜೆಪಿಯಲ್ಲೇ ಹಿರಿಯ ಮುಖಂಡರಲ್ಲಿ ಒಮ್ಮತವಿಲ್ಲ. ಇದು ಸದ್ಯದ ಸ್ಥಿತಿ.

ಕಾಂಗ್ರೆಸ್ ನಲ್ಲಿ.: ಇನ್ನು ರಾಜ್ಯ ಕಾಂಗ್ರೆಸ್ ನಲ್ಲಿ ಸಚಿವ ಸಂಪುಟ ರಚನೆ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದ ಬಗ್ಗೆ ಅಸಮಧಾನದ ಹೊಗೆ ಆಡುತ್ತಿದೆ. ಮೂಲ ಕಾಂಗ್ರೆಸ್ಸಿಗರು ಮತ್ತು ವಲಸಿಗರ ನಡುವೆ ಇನ್ನೂ ಹೊಂದಾಣಿಕೆ ಸಾಧ್ಯವಾಗಿಲ್ಲ.ಬಹು ಮುಖ್ಯವಾಗಿಮುಖ್ಯಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟು ಚುನಾವಣೆಯಲ್ಲಿ ಪಕ್ಷ ಗೆಲ್ಲಲು ಶ್ರಮ ವಹಿಸಿದ ಕೆಪಿಸಿಸಿ ಅಧ್ಯಕ್ಷ ಆದ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಪಟ್ಟ ಕೈ ತಪ್ಪಿ ಸಿದ್ದರಾಮಯ್ಯ ಪಾಲಾಗಿದ್ದರ ಬಗ್ಗೆ ಅತೃಪ್ತಿ ಹೊಂದಿದ್ದಾರೆ . ಆಗಾಗ ಅದು ಅವರ ಮಾತುಗಳಿಂದಲೇ ವ್ಯಕ್ತವಾಗುತ್ತಿದೆ. ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಆಗಿರುವ ಅವರು ತಮ್ಮ ಅಧಿಕಾರ ಬಳಸಿಕೊಂಡು ಪರ್ಯಾಯ ಅಧಿಕಾರ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಕಿರಿಕಿರಿ ತಂದಿದೆ.ಇಬ್ಬರ ನಡುವೆ ಸಮನ್ವಯತೆ ಇನ್ನೂ ಮೂಡಿಲ್ಲ. ಪಕ್ಷದ ಮೂಲ ನಿವಾಸಿಗಳಾದ ಹಿರಿಯ ನಾಯಕರ ಮತ್ತು ಸಿದ್ದರಾಮಯ್ಯ ನಡುವಿನ ಸಂಬಂದಗಳೂ ಉತ್ತಮವಾಗಿಲ್ಲ.ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯತೆಯೂ ಇಲ್ಲ. ಈ ಸನ್ನಿವೇಶದಲ್ಲಿ ಅಧಿಕಾರ ವಂಚಿತ ಶಾಸಕರು ಮತ್ತು ಪ್ರಮುಖ ಹಿರಿಯ ಮುಖಂಡರ ಅಸಮಧಾನದ ಲಾಭ ಪಡೆದು ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಸನ್ನಾಹ ನಡೆಸಿದ್ದು ಅದಕ್ಕೆ ಪೂರಕವಾದ ಕಾರ್ಯಾಚರಣೆ ಆರಂಭಿಸಿದೆ.

ಸಿದ್ದರಾಮಯ್ಯ ಲೆಕ್ಕಚಾರ: ಶುಕ್ರವಾರ ಬಜೆಟ್ ಮಂಡನೆಗೂ ಮುನ್ನ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಜೆಪಿ ನಡೆಸಲು ಹೊರಟಿರುವ ಆಪರೇಷನ್ ಕಮಲ ಕಾರ್ಯಾಚರಣೆ ಬಗ್ಗೆ ಶಾಸಕರನ್ನು ಎಚ್ಚರಿಸಿರುವ ಸಿದ್ದರಾಮಯ್ಯ  ತಮ್ಮನ್ನು ವಿರೋಧಿಸುತ್ತಿರುವ ಪಕ್ಷದ ಮುಖಂಡರಿಗೂ  ಪರೋಕ್ಷವಾಗಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ರಾಜ್ಯದಲ್ಲಿರುವ ಸರ್ಕಾರವನ್ನು ಉಳಿಕೊಳ್ಳುವುದು ಬಿಡುವುದು ವರಿಷ್ಠರಿಗೆ ಬಿಟ್ಟ ವಿಚಾರ ಎಂಬ ಸಂದೇಶವನ್ನು ಅವರು ರವಾನಿಸಿರುವುದರ ಹಿಂದೆ ನಾನಾ ಅರ್ಥಗಳಿವೆ. ಈ ಬೆಳವಣಿಗೆಗಳಿಂದ ಎಚ್ಚೆತ್ತಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಎಂಥದೇ ಸಂದರ್ಭದಲ್ಲಿ ರಕ್ಷಿಸಿಕೊಳ್ಳುವ ಹೊಣೆಗಾರಿಕೆಯನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರಿಗೆ ವಹಿಸಿದ್ದಾರೆ. ಒಟ್ಟು 136 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪೂರ್ಣ ಬಹುಮತ ಹೊಂದಿದೆ. ಬಿಜೆಪಿಯ 66 ಶಾಸಕರು ಜೆಡಿಎಸ್ ನ 19 ಶಾಸಕರು ಮತ್ತು ಮೂವೆರು ಪಕ್ಷೇತರರು ಒಟ್ಟು ಗೂಡಿದರೂ ಸರ್ಕಾರ ರಚನೆ ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ. ಆದರೆ ರಾಜಕಾರಣದಲ್ಲಿನ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಯಾವುದೇ ಸ್ವರೂಪ ಪಡೆಯ ಬಹುದು. ಈ ಹಿಂದಿನ ಸಂದರರ್ಭಗಳಲ್ಲಿ ಸಂಖ್ಯಾ ಬಲಕ್ಕಿಂತ ಬೇರೆಯದೇ ಲೆಕ್ಕಚಾರಗಳೂ ಯಶಸ್ಸು ಪಡೆದ ಉದಾಹರಣೆಗಳಿವೆ. ಹೀಗಾಗಿ ರಾಜಕಾರಣದ ಚೆದುರಂಗದಾಟ ಈಗಷ್ಟೇ ಶುರುವಾಗಿದೆ. ಫಲಿತಾಂಶಕ್ಕಾಗಿ ಕೆಲವು ದಿನ ಕಾಯಲೇಬೇಕು.

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com