ಟೆಲಿಮೆಡಿಸಿನ್ - Telemedicine (ಕುಶಲವೇ ಕ್ಷೇಮವೇ)

ಕೊರೊನಾ ಮಹಾಮಾರಿ ಆರಂಭವಾದ ಬಳಿಕ ನಮ್ಮ ದೇಶದಲ್ಲಿ ಟೆಲಿಮೆಡಿಸಿನ್ನಿಗೆ ಬೇಡಿಕೆ ಹೆಚ್ಚಿದೆ.
ಟೆಲಿಮೆಡಿಸಿನ್  (ಸಂಗ್ರಹ ಚಿತ್ರ)
ಟೆಲಿಮೆಡಿಸಿನ್ (ಸಂಗ್ರಹ ಚಿತ್ರ)

ಕೊರೊನಾ ಮಹಾಮಾರಿ ಆರಂಭವಾದ ಬಳಿಕ ನಮ್ಮ ದೇಶದಲ್ಲಿ ಟೆಲಿಮೆಡಿಸಿನ್ನಿಗೆ ಬೇಡಿಕೆ ಹೆಚ್ಚಿದೆ. ಈ ಮೊದಲು ಕೇವಲ ವಿದೇಶಗಳಲ್ಲಿ ಜನಪ್ರಿಯವಾಗಿದ್ದ ಟೆಲಿ ಮೆಡಿಸಿನ್ ಇಂದು ನಮ್ಮ ರಾಜ್ಯದಲ್ಲಿಯೂ ಹೆಚ್ಚು ಚಾಲ್ತಿಯಲ್ಲಿದೆ. ಹಾಗೆಯೇ ದಿನದಿನಕ್ಕೂ ಜನಪ್ರಿಯವಾಗುತ್ತಿದೆ.

ಟೆಲಿಮೆಡಿಸಿನ್ ಎಂದರೇನು?

ಟೆಲಿಮೆಡಿಸಿನ್ ಎಂದರೆ ವೈದ್ಯರನ್ನು ನೇರವಾಗಿ ಭೇಟಿ ಮಾಡದೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸಲಹೆ ಪಡೆಯುವ ವಿಧಾನ. ಕೊರೊನಾ ಸಮಯದಲ್ಲಿ ರೋಗಿಗಳು ಆಸ್ಪತ್ರೆಗಳಿಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳುವುದು ಕಷ್ಟವಾಗಿತ್ತು. ಆದ್ದರಿಂದ ವೈದ್ಯರು ರೋಗಿಯನ್ನು ಅಂತರ್ಜಾಲದ ಮೂಲಕ ಸಂಪರ್ಕಿಸಿ ಲ್ಯಾಪ್‌ಟಾಪ್, ಕಂಪ್ಯೂಟರ್ ಅಥವಾ ಮೊಬೈಲ್ ಪರದೆ ನೋಡಿಕೊಂಡೇ ಸಲಹೆ ನೀಡುವ ಮತ್ತು ಔಷಧ ಸೂಚಿಸುವ ಟೆಲಿಮೆಡಿಸಿನ್ ಕ್ರಮ ಜನಪ್ರಿಯವಾಯಿತು.

ಟೆಲಿಮೆಡಿಸಿನ್ನಿನಲ್ಲಿ ಮೊದಲಿಗೆ ರೋಗಿಯು ಮತ್ತು ಅವರ ಆರೋಗ್ಯ ಆರೈಕೆ ವೈದ್ಯರ ನಡುವೆ ವೀಡಿಯೊ ಅಥವಾ ಫೋನ್ ಅಪಾಯಿಂಟ್‌ಮೆಂಟ್‌ಗಳನ್ನು ಫಿಕ್ಸ್ ಮಾಡಲಾಗುತ್ತದೆ. ಇಂತಹ ನಿಗದಿತ ಸಮಯದಲ್ಲಿ ವೈದ್ಯರು ಮತ್ತು ರೋಗಿ ಅಂತರ್ಜಾಲದ ಮೂಲಕ ಮುಖಾಮುಖಿಯಾಗುತ್ತಾರೆ. ಹೀಗೆ ರೋಗಿಗಳಿಗೆ ಸಲಹೆ ಮತ್ತು ಸಮಾಲೋಚನೆಗಳ ಮೂಲಕ ಆರೋಗ್ಯ ಸೇವೆಯನ್ನು ನೀಡಲಾಗುತ್ತದೆ. ಇದರಲ್ಲಿ ವ್ಯಾಯಾಮ, ಔಷಧ ಮತ್ತು ಆರೈಕೆ ಕ್ರಮಗಳ ಕುರಿತು ರೋಗಿಯು ವೈದ್ಯರ ಸಲಹೆ ಪಡೆಯಬಹುದು. ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿರುವ ತಜ್ಞ ವೈದ್ಯರ ನೇರ ವೀಡಿಯೋ ಸಂವಾದದ ಮೂಲಕ ಮತ್ತೊಂದು ಆಸ್ಪತ್ರೆಯಲ್ಲಿ ಇತರ ವೈದ್ಯರು ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಕೂಡ ನಡೆಸುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಈ ಸೌಲಭ್ಯ ಬಳಕೆಯಲ್ಲಿದೆ.

ಟೆಲಿಮೆಡಿಸಿನ್ ಹೇಗೆ ಸಹಾಯಕವಾಗಿದೆ?: ಟೆಲಿಮೆಡಿಸಿನ್ ಜನರ ಆರೋಗ್ಯದ ಗುಣಮಟ್ಟವನ್ನು ಸುಧಾರಿಸಲು ಮತ್ತು ಹೆಚ್ಚು ದೂರದೂರದ ಸ್ಥಳಗಳಿಗೆ ಆರೋಗ್ಯ ಸೇವೆಗಳನ್ನು ವಿಸ್ತರಿಸಲು ಬಹಳ ಸಹಾಯಕವಾಗಿದೆ. ಮೊದಲಿಗೆ ಇದನ್ನು ಮೂಲಸೌಕರ್ಯಗಳ ಕೊರತೆಯಿರುವ ಗ್ರಾಮೀಣ ಮತ್ತು ಪ್ರತ್ಯೇಕ ಸ್ಥಳಗಳಿಗೆ ಆರೋಗ್ಯ ಸೇವೆಗಳನ್ನು ತರಲು ಸಹಾಯ ಮಾಡುವ ತಂತ್ರಜ್ಞಾನವಾಗಿ ಬಳಸಲಾಯಿತು. ಕ್ರಮೇಣ ನಗರಪ್ರದೇಶಗಳಲ್ಲಿ ಟೆಲಿಮೆಡಿಸಿನ್ ಜನಪ್ರಿಯವಾಯಿತು. ಇಂದು ಬಹುತೇಕ ಖಾಸಗಿ ಆಸ್ಪತ್ರೆಗಳು ಇಂದು ಟೆಲಿಮೆಡಿಸಿನ್ ಸೇವೆ ನೀಡುತ್ತಿವೆ. ಇದರಿಂದಾಗಿ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಜನರು ಆಸ್ಪತ್ರೆಗೆ ಹೋಗುವ ಬದಲು ಮನೆಯಲ್ಲೇ ಕುಳಿತು ವೈದ್ಯರ ಸಲಹೆ ಪಡೆಯುವ ಅವಕಾಶ ದೊರೆತಿದೆ.

ಟೆಲಿಮೆಡಿಸಿನ್ ಕಲ್ಪನೆ ಹಲವಾರು ವರ್ಷಗಳಿಂದಲೂ ಇದೆ. ಕೊರೊನಾದ ಭೀತಿ ಆರಂಭವಾಗುವ ಮೊದಲು ಕೂಡ ಈ ಪದ್ಧತಿ ಇತ್ತು. ಆದರೆ ಹೆಚ್ಚು ಜನಪ್ರಿಯವಾಗಿರಲಿಲ್ಲ. ಇಂದು ಟೆಲಿಮೆಡಿಸಿನ್ನಿನ ಬಳಕೆ ಅಂದಿಗಿಂತ 8 ರಿಂದ 10 ಪಟ್ಟು ಹೆಚ್ಚಾಗಿದೆ. ಬೆಂಗಳೂರಿನಂತಹ ಭಾರೀ ನಗರಗಳಲ್ಲಿ ಟೆಲಿಮೆಡಿಸಿನ್ ವಿಡಿಯೊ ಕಾಲ್ ಮೂಲಕ ವೈದ್ಯರು ಹಾಗೂ ರೋಗಿ ಮಾತನಾಡುವುದು ಸುಲಭ. ಇಲ್ಲಿ ಟ್ರಾಫಿಕ್ ಒಂದು ದೊಡ್ಡ ಸಮಸ್ಯೆಯೇ ಆಗಿದೆ. ಜೊತೆಗೆ ಆಸ್ಪತ್ರೆಗೆ ಬಂದು ವೈದ್ಯರಿಗೆ ಕಾಯುವ ಅಗತ್ಯವೇ ಇರುವುದಿಲ್ಲ. ಸಾಮಾನ್ಯವಾಗಿ ಬಂದು ಹೋಗುವ ರೋಗಿಗಳಿಗೆ ಇದು ಸೂಕ್ತ ವಿಧಾನ ಎಂದು ತಿಳಿಯಬಹುದು.

ಭಾರತದಲ್ಲಿ ಟೆಲಿಮೆಡಿಸಿನ್ನಿನ ಪ್ರಮುಖ ಪ್ರಯೋಜನವೆಂದರೆ ನಗರ ಮತ್ತು ಗ್ರಾಮೀಣ ಆರೋಗ್ಯ ಸೇವೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಸಾಮರ್ಥ್ಯ. ಇದು ದೂರದ ಪ್ರದೇಶಗಳಲ್ಲಿನ ರೋಗಿಗಳಿಗೆ ನಗರ ಕೇಂದ್ರಗಳಲ್ಲಿರುವ ವೈದ್ಯರು ಮತ್ತು ತಜ್ಞರೊಂದಿಗೆ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ, ಇದರಿಂದಾಗಿ ಗುಣಮಟ್ಟದ ಆರೋಗ್ಯ ಸೇವೆಯ ಪ್ರವೇಶವನ್ನು ಸುಧಾರಿಸುತ್ತದೆ. ಇದು ಭೌಗೋಳಿಕ ಅಡೆತಡೆಗಳನ್ನು ಎದುರಿಸುತ್ತಿರುವ ಅಥವಾ ಸೀಮಿತ ಚಲನಶೀಲತೆಯನ್ನು ಹೊಂದಿರುವ ವ್ಯಕ್ತಿಗಳಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

ಹೆಚ್ಚುವರಿಯಾಗಿ, ಭಾರತದಲ್ಲಿ ಟೆಲಿಮೆಡಿಸಿನ್ ತುರ್ತು ಸಂದರ್ಭಗಳಲ್ಲಿ ಅಥವಾ ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಆರೋಗ್ಯ ಸೌಲಭ್ಯಗಳಿಗೆ ಭೌತಿಕ ಪ್ರವೇಶವನ್ನು ಅಡ್ಡಿಪಡಿಸಿದಾಗ ಉಪಯುಕ್ತವಾಗಿದೆ ಎಂದು ಸಾಬೀತಾಗಿದೆ. ಇದು ಸಕಾಲಿಕ ವೈದ್ಯಕೀಯ ಸಮಾಲೋಚನೆಗಳು ಮತ್ತು ಸಲಹೆಗಳನ್ನು ಸಶಕ್ತಗೊಳಿಸುತ್ತದೆ. ಅನಗತ್ಯ ಆಸ್ಪತ್ರೆ ಭೇಟಿಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ.

ಟೆಲಿಮೆಡಿಸಿನ್ ಹೇಗೆ ಕೆಲಸ ಮಾಡುತ್ತದೆ?

ಸಾಮಾನ್ಯವಾಗಿ ಟೆಲಿಮೆಡಿಸಿನ್ನಿನಲ್ಲಿ ಆಸ್ಪತ್ರೆಗೆ ಬರುವ ರೋಗಿಯ ಇತಿಹಾಸ ಇರುತ್ತದೆ. ಇದನ್ನು ನೋಡಿಕೊಂಡು ವೈದ್ಯರು ಸಲಹೆ ನೀಡುತ್ತಾರೆ. ಹೊಸ ರೋಗಿಯಾದರೆ ಮೊದಲೇ ಅನಾರೋಗ್ಯದ ಮಾಹಿತಿ ನೀಡಿರಬೇಕು ಅಥವಾ ವೈದ್ಯರಿಗೆ ನೇರವಾಗಿ ಹೇಳಬಹುದು. ಐ ಪ್ಯಾಡ್, ಲ್ಯಾಪ್‌ಟಾಪ್‌ನ ಕ್ಯಾಮೆರಾ ಮೂಲಕ ವೈದ್ಯರು ಬಾಯಿ, ನಾಲಿಗೆ, ಚರ್ಮವನ್ನು ಪರೀಕ್ಷಿಸುತ್ತಾರೆ.

ಇ-ಸಂಜೀವಿನಿ ಟೆಲಿಮೆಡಿಸಿನ್ ಸೇವೆ

ಭಾರತ ಸರ್ಕಾರದ ಆರೋಗ್ಯ ಸಚಿವಾಲಯವು ಆರಂಭಿಸಿರುವ ಇ-ಸಂಜೀವಿನಿ ಟೆಲಿಮೆಡಿಸಿನ್ ಸೇವೆಯು ಈವರೆಗೆ 60 ಲಕ್ಷ ಸಮಾಲೋಚನೆಗಳನ್ನು ಪೂರ್ಣಗೊಳಿಸಿದೆ (2022ರಲ್ಲಿ ಭಾರತ ಸರ್ಕಾರ ನೀಡಿದ ಮಾಹಿತಿಯಂತೆ). ಪ್ರತಿದಿನ 40,000ಕ್ಕೂ ಹೆಚ್ಚು ರೋಗಿಗಳು ಆರೋಗ್ಯ ಸೇವೆಗಳನ್ನು ಪಡೆಯಲು ಇ-ಸಂಜೀವಿನಿಯನ್ನು ಬಳಸುತ್ತಾರೆ. ಈ ರಾಷ್ಟ್ರೀಯ ಟೆಲಿಮೆಡಿಸಿನ್ ಸೇವೆಯಲ್ಲಿ 375ಕ್ಕೂ ಹೆಚ್ಚು ಆನ್‌ಲೈನ್ ಒಪಿಡಿಗಳು ಲಭ್ಯವಿವೆ. ಒಂದು ಅಂದಾಜಿನ ಪ್ರಕಾರ ಈ ನವೀನ ಡಿಜಿಟಲ್ ಮಾಧ್ಯಮವನ್ನು ಬಳಸಿಕೊಂಡು ಪ್ರತಿದಿನ 1600ಕ್ಕೂ ಹೆಚ್ಚು ವೈದ್ಯರು ಮತ್ತು ತಜ್ಞರನ್ನು ಸಂಪರ್ಕಿಸುತ್ತಾರೆ. ಪ್ರಸ್ತುತ ರಾಷ್ಟ್ರೀಯ ಟೆಲಿಮೆಡಿಸಿನ್ ಸೇವೆಯು 31 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ವಿವರಗಳಿಗಾಗಿ https://esanjeevaniopd.in/ ಸಂಪರ್ಕಿಸಬಹುದು. ಗೂಗಲ್ ಪ್ಲೇಸ್ಟೋರಿನಲ್ಲಿ eSanjeevaniOPD - MoHFW (GoI) ಆಪ್ ಅನ್ನು ಮೊಬೈಲ್ ಫೋನಿಗೆ ಡೌನ್ಲೋಡ್ ಮಾಡಿಕೊಳ್ಳಬಹುದು.

ಟೆಲಿಮೆಡಿಸಿನ್ ಸವಾಲುಗಳು: ಭಾರತದಲ್ಲಿ ಟೆಲಿಮೆಡಿಸಿನ್ ಇನ್ನೂ ವಿಕಸನಗೊಳ್ಳುತ್ತಿದೆ ಮತ್ತು ಕೆಲವು ಸವಾಲುಗಳನ್ನು ಎದುರಿಸುತ್ತಿದೆ ಎಂಬುದನ್ನು ಗಮನಿಸುವುದು ಇಲ್ಲಿ ಮುಖ್ಯವಾಗಿದೆ. ಮೂಲಸೌಕರ್ಯ, ಇಂಟರ್ನೆಟ್ ಸಂಪರ್ಕ, ಕಾನೂನು ಮತ್ತು ನಿಯಂತ್ರಕ ಚೌಕಟ್ಟುಗಳು, ಮಾಹಿತಿ ಗೌಪ್ಯತೆ ಮತ್ತು ಮರುಪಾವತಿ ನೀತಿಗಳಿಗೆ ಸಂಬಂಧಿಸಿದ ಸಮಸ್ಯೆಗಳು ಇಂದಿಗೂ ಸವಾಲುಗಳಾಗಿವೆ. ಈ ಸವಾಲುಗಳನ್ನು ಎದುರಿಸಲು ಮತ್ತು ದೇಶಾದ್ಯಂತ ಟೆಲಿಮೆಡಿಸಿನ್ನಿನ ವ್ಯಾಪಕ ಅಳವಡಿಕೆಯನ್ನು ಉತ್ತೇಜಿಸಲು ಸರ್ಕಾರ ಮತ್ತು ವಿವಿಧ ಸಂಸ್ಥೆಗಳು ನಾನಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com