
ಕಾಲಿನ ಆಣಿ
ಒಂದು ದಿನ ಸಂಜೆ ನನ್ನ ಕ್ಲಿನಿಕ್ಕಿಗೆ ಮಧ್ಯವಯಸ್ಕರೊಬ್ಬರು ಬಂದು “ಡಾಕ್ಟರ್, ಕೆಲವು ದಿನಗಳಿಂದ ಕಾಲಿನ ಬೆರಳುಗಳ ಕೆಳಗೆ ಚರ್ಮ ಗಟ್ಟಿಯಾಗಿ ನೋವಾಗುತ್ತಿದೆ. ನಡೆಯಲೂ ಆಗುತ್ತಿಲ್ಲ. ಏನಾಗಿದೆ? ಒಮ್ಮೆ ನೋಡಿ” ಎಂದು ತೋರಿಸಿದರು. ನಾನು ಆ ಬಾಧಿತ ಭಾಗವನ್ನು ಪರೀಕ್ಷಿಸಿದಾಗ ಅದು ಆಣಿ (Corn) ಎಂದು ಗೊತ್ತಾಯಿತು. ಕಾಲಿನ ಬೆರಳುಗಳಲ್ಲಿ ಉಗುರುಗಳ ಕೆಳಗೆ, ಕಾಲಿನ ಬೆರಳುಗಳ ನಡುವೆ, ಕೆಳಗೆ ಮತ್ತು ಪಾದಗಳ ಅಕ್ಕಪಕ್ಕ ಆಣಿ ಕಾಣಿಸಿಕೊಳ್ಳುತ್ತದೆ ಎಂದು ಹೇಳಿ ಪರಿಹಾರ ಸೂಚಿಸಿ ಕಳಿಸಿದೆ.
ನಾವು ಆರೋಗ್ಯವಾಗಿರಲು ನಮ್ಮ ಚರ್ಮದ ಆರೋಗ್ಯ ಬಹಳ ಮುಖ್ಯ. ಚರ್ಮಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಾಗಲಿ ತುಂಬಾ ಬೇಗ ಕಾಣುತ್ತದೆ, ಹಾಗೆಯೇ ತುಂಬಾ ನೋವನ್ನು ನೀಡುತ್ತದೆ. ಅದರಲ್ಲಿ ಆಣಿ ಕೂಡ ಒಂದು. ಬಹುತೇಕರಿಗೆ ಆಣಿಯು ಕಾಲಿನಲ್ಲಿ ಕಾಣಿಸಿಕೊಳ್ಳುತ್ತದೆ, ಕೆಲವರಿಗೆ ಕೈ ಬೆರಳುಗಳ ನಡುವೆಯೂ ಕಾಣಿಸಿಕೊಳ್ಳುತ್ತದೆ. ಪಾದಗಳ ಅಡಿಯಲ್ಲಿ ಆಣಿ ಕಾಣಿಸಿಕೊಂಡರಂತೂ ಚಪ್ಪಲಿ ಧರಿಸುವುದು ಕೂಡ ಕಷ್ಟಕರವಾಗುತ್ತದೆ. ಇದೇನೋ ಗುಳ್ಳೆ ಒಂದೆರಡು ದಿನಗಳಲ್ಲಿ ಸರಿಹೋಗುತ್ತದೆ ಎಂದು ನಿರ್ಲಕ್ಷ್ಯ ಮಾಡಿದರೆ ನೋವು ಹೆಚ್ಚಾಗಬಹುದು.
Foot Corn ಏಕೆ ಮೂಡುತ್ತದೆ?
ಚರ್ಮದ ನಿರ್ದಿಷ್ಟ ಪ್ರದೇಶಗಳಲ್ಲಿ ಪುನರಾವರ್ತಿತ ಘರ್ಷಣೆ ಅಥವಾ ಒತ್ತಡದಿಂದಾಗಿ ಕಾಲುಗಳ ಮೇಲೆ ಆಣಿಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಘರ್ಷಣೆ ಮತ್ತು ಒತ್ತಡದಿಂದ ಚರ್ಮವು ದಪ್ಪ ಮತ್ತು ಗಟ್ಟಿಯಾಗಿ ಆಣಿ ಉಂಟಾಗುತ್ತದೆ. ದೇಹದ ತೂಕವನ್ನು ಹೊರುವ ಕಾಲ್ಬೆರಳುಗಳ ಬದಿಗಳಲ್ಲಿ ಆಣಿಗಳು ಕಾಣಿಸಿಕೊಳ್ಳುತ್ತವೆ.
ಇದನ್ನೂ ಓದಿ: ಮೂತ್ರಪಿಂಡ ವೈಫಲ್ಯ ಅಥವಾ Kidney failure (ಕುಶಲವೇ ಕ್ಷೇಮವೇ)
ಕಾಲಿನಲ್ಲಿ ಆಣಿ ಕಾಣಿಸಿಕೊಳ್ಳುವುದು ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಆಣಿಯು ಸಾಮಾನ್ಯವಾಗಿ ಕಾಲ್ಬೆರಳುಗಳು ಅಥವಾ ಪಾದಗಳ ಮೇಲೆ ಬೆಳೆಯುತ್ತದೆ. ಇದು ಕಿರಿಕಿರಿ ಮತ್ತು ನೋವನ್ನು ಉಂಟುಮಾಡುತ್ತದೆ. ಹಳ್ಳಿಗಳಲ್ಲಿ ಹೊಲಗದ್ದೆಗಳಲ್ಲಿ ಚಪ್ಪಲಿ ಹಾಕಿಕೊಳ್ಳದೇ ನಡೆದಾಗ ಕಾಲಿನ ಬೆರಳುಗಳಿಗೆ/ಪಾದಕ್ಕೆ ಮುಳ್ಳು ಚುಚ್ಚಿದಾಗ ಗಾಯವಾಗಿ ಅದು ಆಣಿಯಾಗಬಹುದು.
ಆಣಿಗಳು ಚರ್ಮದಲ್ಲಿ ನರ ತುದಿಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತವೆ. ಜೊತೆಗೆ ಗಟ್ಟಿಯಾದ ಚರ್ಮವು ಆಧಾರವಾಗಿರುವ ಅಂಗಾಂಶಗಳು ಮತ್ತು ಮೂಳೆಗಳಿಗೆ ಒತ್ತಬಹುದು. ಇದು ಅಸ್ವಸ್ಥತೆ ಅಥವಾ ತೀಕ್ಷ್ಣ ನೋವಿಗೆ ಕಾರಣವಾಗುತ್ತದೆ. ಕೆಲವೊಮ್ಮೆ ಆಣಿಗಳು ಉರಿಯೂತ ಅಥವಾ ಸೋಂಕಿಗೆ ಒಳಗಾಗಬಹುದು. ಇದರಿಂದ ನೋವು ಮತ್ತು ಅಸ್ವಸ್ಥತೆ ಹೆಚ್ಚಾಗಬಹುದು.
ಕಾಲಿನ ಆಣಿಯಿಂದ ಉಪಶಮನ ಹೇಗೆ?
ಆಣಿಯು ಉಲ್ಬಣಗೊಳ್ಳದಂತೆ ಮತ್ತು ಹೆಚ್ಚು ನೋವು ಉಂಟುಮಾಡುವುದನ್ನು ತಡೆಯಲು ತಕ್ಷಣವೇ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಮುಖ್ಯವಾಗಿದೆ. ಮೊದಲಿಗೆ ಆಣಿ ಇದ್ದಾಗ ಪಾದಗಳನ್ನು 10-15 ನಿಮಿಷಗಳ ಕಾಲ ಬೆಚ್ಚಗಿನ ನೀರಿನಲ್ಲಿ ಇಟ್ಟುಕೊಳ್ಳಬೇಕು. ಇದರಿಂದ ಆಣಿ ಮೃದುವಾಗುತ್ತದೆ ಮತ್ತು ನೋವು ಕಡಿಮೆಯಾಗುತ್ತದೆ.
ಆಣಿಯ ಮೇಲೆ ಸ್ವಲ್ಪ ನಿಂಬೆಹಣ್ಣಿನ ರಸವನ್ನು ಹಚ್ಚಿದರೆ ನೋವು ಉಪಶಮನವಾಗುತ್ತದೆ. ಅದರ ಹೊರಗಿನ ಗಟ್ಟಿಯಾದ ಭಾಗ ಬಿದ್ದು ಹೋಗುವವರೆಗೆ ಹೀಗೆ ನಿಯಮಿತವಾಗಿ ಮಾಡಬೇಕು. ಇದೇ ರೀತಿಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ರಸವನ್ನು ಹಚ್ಚೆ ಈ ಸಮಸ್ಯೆಯನ್ನು ಹೋಗಲಾಡಿಸಿಕೊಳ್ಳಬಹುದು. ಉತ್ತಮ ಪರಿಹಾರಕ್ಕಾಗಿ ಅರಿಸಿನವನ್ನು ಜೇನುತುಪ್ಪದೊಂದಿಗೆ ಬೆರೆಸಿ ಮುಲಾಮಿನಂತೆ ಆಣಿಗೆ ಹಚ್ಚಿ ಬಟ್ಟೆಯನ್ನು ಸುತ್ತಿ ಸ್ವಲ್ಪ ಹೊತ್ತಿನ ಬಳಿಕ ಮೃದುವಾದಾಗ ಸ್ವಚ್ಛಮಾಡಿಕೊಳ್ಳಬೇಕು.
ಹರಳೆಣ್ಣೆಯನ್ನು ಆಣಿಗೆ ಹಚ್ಚಿ ಅದನ್ನು ಮೃದುಗೊಳಿಸಬಹುದು. ಹಾಗೆಯೇ ಎಕ್ಕದ ಗಿಡದ ಎಲೆಗಳಿಂದ ಬರುವ ಹಾಲಿಗೆ ಹರಳೆಣ್ಣೆ ಬೆರೆಸಿ ಅದನ್ನು ಹತ್ತಿ ಬಟ್ಟೆಯಿಂದ ಅದ್ದಿ ಆಣಿ ಇರುವ ಜಾಗಕ್ಕೆ ಹಚ್ಚಿ. ಹೀಗೆ ನಿಯಮಿತವಾಗಿ ಮಾಡಿದರೆ ಆಣಿ ಸಮಸ್ಯೆ ದೂರವಾಗುತ್ತದೆ. ಆಣಿಯ ಚರ್ಮವನ್ನು ಮೃದುಗೊಳಿಸಲು ಮಾಯಿಶ್ಚರೈಸರ್ ಕ್ರೀಮುಗಳನ್ನು ಬಳಸಬಹುದು. ವೈದ್ಯರ ಸಲಹೆ ಮೇರೆಗೆ ಔಷಧೀಯ ಮುಲಾಮುಗಳನ್ನು ಕೂಡ ಬಳಸಬಹುದು. ಈ ಮನೆಮದ್ದುಗಳನ್ನು ಮಾಡಿಯೂ ಆಣಿ ದೊಡ್ಡದಾಗಿ ಸಮಸ್ಯೆ ತೀವ್ರವಾಗಿದ್ದರೆ ವೈದ್ಯರಿಂದ ತೆಗೆಸಿಕೊಳ್ಳಬಹುದು.
ಇದನ್ನೂ ಓದಿ: ಹಿಮ್ಮಡಿ ನೋವು: ಭಯ ಬೇಡ, ಜಾಗ್ರತೆ ಇರಲಿ (ಕುಶಲವೇ ಕ್ಷೇಮವೇ)
ಆಣಿಗಳು ಬೆಳೆಯದಂತೆ ತಡೆಯುವುದು ಹೇಗೆ?
ಆಣಿಗಳನ್ನು ತಡೆಗಟ್ಟಲು ಆರಾಮದಾಯಕ ಚಪ್ಪಲಿ ಅಥವಾ ಶೂ/ಬೂಟುಗಳನ್ನು ಧರಿಸಬೇಕು. ಇವುಗಳು ಸರಿಯಾಗಿ ಕಾಲಿಗೆ ಹೊಂದಿಕೊಳ್ಳುವುದು ಮುಖ್ಯ. ಜೊತೆಗೆ ಕಾಲ್ಬೆರಳುಗಳಿಗೆ ಸಾಕಷ್ಟು ಸ್ಥಳಾವಕಾಶವಿರಬೇಕು.
ಪಾದಗಳ ಮೇಲೆ ಘರ್ಷಣೆ ಮತ್ತು ಒತ್ತಡವನ್ನು ಉಂಟುಮಾಡುವ ಬಿಗಿಯಾದ ಅಥವಾ ಕಿರಿದಾದ ಚಪ್ಪಲಿ ಅಥವಾ ಶೂ/ಬೂಟುಗಳನ್ನು ಧರಿಸಬಾರದು. ಜೊತೆಗೆ ಕುಷನಿಂಗ್ ಪ್ಯಾಡ್‌ಗಳು ಅಥವಾ ಇನ್ಸೊಲ್‌ಗಳನ್ನು ಬಳಸಬೇಕು: ಇವು ಪಾದಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪಾದಗಳ ಘರ್ಷಣೆಯನ್ನು ಕಡಿಮೆ ಮಾಡಲು ಹತ್ತಿ ಸಾಕ್ಸ್ ಗಳನ್ನು ಹಾಕಿಕೊಳ್ಳಬೇಕು.
ಎಲ್ಲಕ್ಕಿಂತ ಮುಖ್ಯವಾಗಿ ಸರಿಯಾಗಿ ಪಾದದ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ತೇವಾಂಶ ಕಾಲಿನಲ್ಲಿ ಇರಬಾರದು. ಪಾದಗಳನ್ನು ದಿನವೂ ಚೆನ್ನಾಗಿ ತೊಳೆದು ಸ್ವಚ್ಛ ಮಾಡಿ ಶುದ್ಧ ಬಟ್ಟೆಯಿಂದ ಒರೆಸಬೇಕು. ಪಾದಗಳ ಮೇಲೆ ಅತಿಯಾದ ಒತ್ತಡವನ್ನು ಉಂಟುಮಾಡುವ ಚಟುವಟಿಕೆಗಳ ಮೇಲೆ ಗಮನವಿಡಬೇಕು. ಉದಾಹರಣೆಗೆ ಪಾದಗಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಕ್ರೀಡೆಗಳಲ್ಲಿ ದೀರ್ಘ ಕಾಲ ತೊಡಗಬಾರದು. ಬಹಳ ಹೊತ್ತು ನಿಲ್ಲಬಾರದು ಅಥವಾ ನಿಂತು ಕೆಲಸ ಮಾಡಬಾರದು. ಆಗಾಗ ವಿರಾಮ ತೆಗೆದುಕೊಳ್ಳಬೇಕು. ಆಣಿಯು ಚಿಕ್ಕದಾಗಿದ್ದಾಗ ಈ ರೀತಿ ಮನೆಮದ್ದುಗಳು ಮತ್ತು ಉಪಶಮನ ಕ್ರಮಗಳನ್ನು ಪಾಲಿಸಬಹುದು. ಆಣಿ ದೊಡ್ಡದಾಗಿ ನೋವು ಹೆಚ್ಚಾಗಿದ್ದರೆ ತಡಮಾಡದೇ ವೈದ್ಯರನ್ನು ಕಂಡು ಅದನ್ನು ತೆಗೆಸಿಕೊಳ್ಳಬೇಕು.
ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com