ಷೇರು ಮಾರುಕಟ್ಟೆಯನ್ನ ಉತ್ತೇಜಿಸುವ ಅಂಶಗಳೇನು? (ಹಣಕ್ಲಾಸು)

ಹಣಕ್ಲಾಸು-368-ರಂಗಸ್ವಾಮಿ ಮೂಕನಹಳ್ಳಿ
ಮುಂಬೈ ದಲಾಲ್ ಸ್ಟ್ರೀಟ್ ನ ಷೇರು ಮಾರುಕಟ್ಟೆಯ ಕೇಂದ್ರ
ಮುಂಬೈ ದಲಾಲ್ ಸ್ಟ್ರೀಟ್ ನ ಷೇರು ಮಾರುಕಟ್ಟೆಯ ಕೇಂದ್ರ

ನಾಳೆ ನಾವು ಮಾಡಿದ ಹೂಡಿಕೆ ಹೆಚ್ಚಾಗುತ್ತದೆ, ಲಾಭ ಬರುತ್ತದೆ ಎನ್ನುವ ನಂಬಿಕೆ, ವಿಶ್ವಾಸ ಹೂಡಿಕೆಯ ಹಿಂದಿನ ಪ್ರೇರಕ ಶಕ್ತಿ. ಇದು ಒಳ್ಳೆಯದು, ಆದರೆ ಅದರ ಜೊತೆಗೆ ಮಾರುಕಟ್ಟೆಯನ್ನ ಉತ್ತೇಜಿಸುವ ಅಂಶಗಳು ಯಾವುವು? ಎನ್ನುವುದನ್ನ ಕೂಡ ತಿಳಿದುಕೊಂಡರೆ, ಇನ್ನಷ್ಟು ವಿಶ್ವಾಸ, ನಂಬಿಕೆ ಹೂಡಿಕೆದಾರರಿಗೆ ಸಿಗುತ್ತದೆ. ಜೊತೆಗೆ ಈ ರೀತಿಯ ಮಾಹಿತಿ ಪೂರ್ಣ ನಿರ್ಧಾರಗಳು ಗೆಲುವಿನ ಸಂಭಾವ್ಯತೆಯನ್ನ ಕೂಡ ಹೆಚ್ಚುಸುತ್ತವೆ. ಇನ್ನೊಂದು ಅತಿ ಮುಖ್ಯ ಅಂಶವೇನು ಗೊತ್ತೇ? ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಕೇವಲ ಹಣವನ್ನ ಮಾತ್ರ ಗಳಿಸಿಕೊಡುವುದಿಲ್ಲ, ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಎಲ್ಲಾ ಕ್ಷೇತ್ರಗಳ ಬದಲಾವಣೆ ಕೂಡ ತಿಳಿಸುತ್ತದೆ. ಉತ್ತಮ ಹೂಡಿಕೆದಾರ ಸದಾ ಜಾಗ್ರತಾವಸ್ಥೆಯಲ್ಲಿರಬೇಕು. ಜಗತ್ತಿನ ಆಗು ಹೋಗುಗಳ ಬಗ್ಗೆ ಗಮನವಿರಿಸಬೇಕು. ಬನ್ನಿ ಷೇರು ಮಾರುಕಟ್ಟೆಯನ್ನ ಏರಿಳಿತಕ್ಕೆ ಉತ್ತೇಜಿಸುವ ಹತ್ತು ಅಂಶಗಳು ಯಾವುವು ಎನ್ನುವುದನ್ನ ಸ್ವಲ್ಪ ತಿಳಿದುಕೊಳ್ಳುವ ಪ್ರಯತ್ನವನ್ನ ಮಾಡೋಣ.

ದೇಶಿಯ ಆರ್ಥಿಕತೆ: ಸಾಮಾನ್ಯವಾಗಿ ನಮ್ಮ ಡೊಮೆಸ್ಟಿಕ್ ಮಾರ್ಕೆಟ್ ಸ್ಥಿರವಾಗಿದ್ದರೆ ಷೇರುಗಳ ಬೆಲೆ ಮೇಲಕ್ಕೇರುತ್ತವೆ , ಮಾರುಕಟ್ಟೆ ಲವಲವಿಕೆಯಿಂದ ಇರುತ್ತದೆ. ಇದಕ್ಕೆ ವಿರುದ್ಧವಾಗಿ ಸಮಾಜದಲ್ಲಿ ಅಸ್ಥಿರತೆ ಇದ್ದರೆ ಷೇರು ಮಾರ್ಕೆಟ್ ಕೂಡ ಮಂಕಾಗುತ್ತದೆ. ನಮ್ಮ ಅಂತರಿಕ ಮಾರುಕಟ್ಟೆಯಲ್ಲಿ ಆಗುವ ಬದಲಾವಣೆಗಳು ಷೇರು ಮಾರುಕಟ್ಟೆಯ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ. ಹೀಗಾಗಿ ನಮ್ಮ ಸ್ಥಳೀಯ ವಿತ್ತೀಯ ವಿಷಯಗಳನ್ನ ಸದಾ ವಿಶ್ಲೇಷಣೆ ಮಾಡುತ್ತಿರಬೇಕು. ಎಲ್ಲಕ್ಕೂ ಮುಖ್ಯವಾಗಿ ಕೆಳಗಿನ ಅಂಶಗಳನ್ನ ಗಮನಿಸುತ್ತಿರಬೇಕು:

  • ಜಿಡಿಪಿ- ಇದು ನಮ್ಮ ಆಂತರಿಕ ಕೊಳ್ಳುವ ಶಕ್ತಿಯ ಸೂಚಕ. ಇದು ಭಾರತದ ಮಟ್ಟಿಗೆ ನಿಖರವಲ್ಲದಿದ್ದರೂ , ಎಕಾನಮಿ ಸಾಗುತ್ತಿರುವ ದಾರಿಯನ್ನ ಹೇಳುತ್ತದೆ.
  • ಕನ್ಸೂಮರ್ ಸ್ಪೆನ್ಡಿಂಗ್ ಡೇಟಾ- ಖರೀದಿದಾರನ ಖರ್ಚಿನ ಪ್ಯಾಟ್ರನ್ ಇದರಿಂದ ತಿಳಿಯುತ್ತದೆ. ಆತ ಖರ್ಚು ಮಾಡುವ ಮನಸ್ಥಿತಿಯಲ್ಲಿದ್ದರೆ ಅದು ಮಾರುಕಟ್ಟೆಗೆ ಶುಭ ಸೂಚನೆ. ಆತ ಖರ್ಚು ಮಾಡಲು ಬಯಸದೆ ಚಿಪ್ಪಿನಲ್ಲಿ ಹುದುಗಿದರೆ ಅದು ಅಶುಭ. ಗ್ರಾಹಕನ ಮನಸ್ಥಿತಿಯನ್ನ ಇದು ತೋರಿಸುತ್ತದೆ.
  • ಫಿಸ್ಕಲ್ ಡೆಫಿಸಿಟ್, ಟ್ರೇಡ್ ಡೆಫಿಸಿಟ್, ಬಜೆಟ್ ಡೆಫಿಸಿಟ್- ಮಾರುಕಟ್ಟೆಯ ಮೇಲೆ ಇವೆಲ್ಲವೂ ಕೂಡ ಪ್ರಭಾವ ಬೀರುತ್ತವೆ. ಬಜೆಟ್ ಮಾಡಿದ ಅಂಕಿಅಂಶಕ್ಕೂ ನಿಜವಾದ ಅಂಕಿಅಂಶಕ್ಕೂ ಇರುವ ವ್ಯತ್ಯಾಸವನ್ನ ಬಜೆಟ್ ಡೆಫಿಸಿಟ್ ಎನ್ನಬಹದು, ಆದಾಯ ಮತ್ತು ಖರ್ಚಿನ ನಡುವಿನ ಅಂತರವನ್ನ ಫಿಸ್ಕಲ್ ಡೆಫಿಸಿಟ್ ಎನ್ನಲಾಗುತ್ತದೆ. ಆಮದು ಮತ್ತು ರಪ್ತಿನ ನಡುವಿನ ವ್ಯತ್ಯಾಸವನ್ನ ಟ್ರೇಡ್ ಡೆಫಿಸಿಟ್ ಎನ್ನಲಾಗುತ್ತದೆ. ಇವುಗಳ ಅಂತರ ಹೆಚ್ಚಿದಷ್ಟು ಅದು ಮಾರಕ. ಹೀಗಾಗಿ ಇವುಗಳನ್ನ ಗಮನಿಸುತ್ತಿರಬೇಕು, ಮತ್ತು ಇದರ ಸುಧಾರಣೆಗೆ ತೆಗೆದುಕೊಳ್ಳುವ ಅಂಶಗಳು ಮಾರುಕಟ್ಟೆಯನ್ನ ಧನಾತ್ಮಕವಾಗಿ ಉತ್ತೇಜಿಸುತ್ತವೆ ಎನ್ನುವುದನ್ನ ಕೂಡ ಅರಿತುಕೊಂಡಿರಬೇಕು.
  • ಗ್ರೋಥ್ ರೇಟ್- ಇದು ನಮ್ಮ ಎಕಾನಮಿ ಯಾವ ಮಟ್ಟದಲ್ಲಿ ಬೆಳೆಯುತ್ತಿದೆ ಎನ್ನುವುದರ ಸೂಚ್ಯಂಕ. ಇದು ಹೆಚ್ಚಿದಷ್ಟೂ ಒಳ್ಳೆಯದು. ಇದು ಕುಸಿತ ಕಂಡರೆ ಅದು ಮಾರುಕಟ್ಟೆಗೆ ಮಾರಕ.
  • ರಾಜಕೀಯ ಸ್ಥಿರತೆ- ಸ್ಥಳೀಯ ಅಂದರೆ ರಾಜ್ಯ ಮತ್ತು ದೇಶದ ಆಡಳಿತದಲ್ಲಿ ಸ್ಥಿರತೆ ಇದ್ದರೆ ಅದು ಬಹಳ ಒಳ್ಳೆಯದು. ರಾಜಕೀಯ ಅಸ್ಥಿರತೆ ದೇಶದ ಅರಾಜಕತೆಗೆ ನಾಂದಿಯಾಡುತ್ತದೆ. ಹೀಗಾಗಿ ದೇಶದ ರಾಜಕೀಯದಲ್ಲಿ ಏನಾಗುತ್ತಿದೆ, ಮುಂಬರುವ ಬದಲಾವಣೆಗಳನ್ನ ಕಾಣುವ, ಅದಕ್ಕೆ ಸಿದ್ಧವಾಗುವ ಕ್ಷಮತೆ ಇರಬೇಕು.

ಜಾಗತಿಕ ಆರ್ಥಿಕತೆ: ಸ್ಥಳೀಯ ಆರ್ಥಿಕತೆ ಜೊತೆಗೆ ಜಾಗತಿಕ ಆರ್ಥಿಕತೆ ಕೂಡ ಬಹಳ ಮುಖವಾಗುತ್ತದೆ ಏಕೆಂದರೆ ಇಂದಿಗೆ ಎಲ್ಲಾ ದೇಶಗಳೂ ಒಂದರ ಮೇಲೆ ಇನ್ನೊಂದು ಬಹಳ ಅವಲಂಬನೆ ಹೊಂದಿವೆ. ಇದರ ಜೊತೆಗೆ ಆಮದು , ರಫ್ತುವಿನ ಲೆಕ್ಕಾಚಾರ ಕೂಡ ಜೊತೆಗೂಡುತ್ತದೆ. ಬೇರೆ ದೇಶದವರು ನಮ್ಮ ದೇಶದಲ್ಲಿ , ನಾವು ಬೇರೆ ದೇಶದಲ್ಲಿ ಹೂಡಿಕೆಯನ್ನ ಮಾಡುತ್ತಿದ್ದೇವೆ. ನಮ್ಮ ಸೆಕ್ಯುರಿಟೀಸ್ ಬೇರೆ ದೇಶಗಳಲ್ಲಿ ಮಾರಾಟವಾಗುತ್ತವೆ ಅಲ್ಲಿನ ಸ್ಟಾಕ್ ಮಾರ್ಕೆಟ್ನಲ್ಲಿ ಲಿಸ್ಟ್ ಆಗಿರುತ್ತವೆ. ಮ್ಯೂಚುಯಲ್ ಫಂಡ್ ಹೂಡಿಕೆಗಳು ಕೂಡ ಹೆಚ್ಚಾಗಿವೆ , ಹೀಗಾಗಿ ಬೇರೆ ದೇಶದ  ಆರ್ಥಿಕತೆ , ಒಟ್ಟಾರೆ ಗ್ಲೋಬಲ್ ಎಕಾನಮಿ ಹೇಗಿದೆ ಎನ್ನುವುದು ಕೂಡ ನಮ್ಮ ಷೇರು ಮಾರುಕಟ್ಟೆಯ ಮೇಲೆ  ಪರಿಣಾಮ ಬೀರುತ್ತದೆ. ಹೀಗಾಗಿ ಇವುಗಳಲ್ಲಿ ಆಗುವ ಬದಲಾವಣೆ ಕೂಡ ಒಂದು ಕಣ್ಣು  ಹೂಡಿಕೆದಾರ ಇಟ್ಟಿರಬೇಕಾಗುತ್ತದೆ.

ಜಾಗತಿಕ ರಾಜಕೀಯ: ಇವತ್ತು ಜಗತ್ತು ಒಂದು ಪುಟ್ಟ ಹಳ್ಳಿಯಂತಾಗಿದೆ, ಸ್ಥಳೀಯ ರಾಜಕೀಯ ಭದ್ರತೆ ಎಷ್ಟು ಮುಖ್ಯವೋ ಜಾಗತಿಕ ರಾಜಕೀಯ ಅಥವಾ ಜಿಯೋಪೊಲಿಟಿಕ್ಸ್ ಕೂಡ ಅಷ್ಟೇ ಮುಖ್ಯವಾಗುತ್ತದೆ. ಜಪಾನ್ ಹೂಡಿಕೆ ಅಮೇರಿಕಾದಲ್ಲಿ , ಚೀನಿಯರ ಮೇಲಿನ ಡಿಪೆಂಡೆನ್ಸ್ ಇವೆಲ್ಲಾ ಗೊತ್ತಿರುವ ವಿಷಯ. ಈ ದೇಶಗಳ ನಡುವಿನ ಸಂಬಂಧ ಮಧುರವಾಗಿದಷ್ಟೂ ಅದು ಮಾರುಕಟ್ಟೆಗೆ ಒಳಿತು. ಚೀನಾ ರಾಜತಾಂತ್ರಿಕ ವರ್ಗ ಜಪಾನ್ ವಿರುದ್ಧ ಹೇಳುವ ಒಂದು ಸಣ್ಣ ಹೇಳಿಕೆ ಮಾರುಕಟ್ಟೆ ಟ್ಯಾಂಕ್ ಆಗಲು ದೊಡ್ಡ ಕಾರಣವಾಗುತ್ತದೆ. ನಾರ್ತ್ ಕೊರಿಯಾ ಕ್ಷಿಪಣಿ ಉಡಾಯಿಸುತ್ತೇನೆ ಎನ್ನುವ ಹೇಳಿಕೆ ಮಾರುಕಟ್ಟೆ ಹಿನ್ನೆಡೆಗೆ ಕಾರಣವಾಗುತ್ತದೆ. ರಷ್ಯಾ -ಉಕ್ರೈನ್ ನಡುವಿನ ಕದನ ಕೋಟ್ಯಂತರ ರೂಪಾಯಿ ಹಣವನ್ನ ಕರಗಿಸುವ ಶಕ್ತಿ ಹೊಂದಿದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿನ ರಾಜಕೀಯ ಬದಲಾವಣೆಗಳ ಬಗ್ಗೆ ಕೂಡ ಹೂಡಿಕೆದಾರನ ಗಮನವಿರಬೇಕಾಗುತ್ತದೆ.

ಎಫ್ ಡಿಐ ಮತ್ತು ಎಫ್ಐಐ: ಫಾರಿನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಮತ್ತು ಫಾರಿನ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಇವೆರೆಡೂ ಭಾರತದ ಮಾರುಕಟ್ಟೆಗೆ ಬಹಳವಾಗಿ ಹರಿದು ಬರುತ್ತಿದೆ. ಕೋವಿಡ್ ನಂತರದ ಆರ್ಥಿಕತೆಯಲ್ಲಿ ಭಾರತವೇ ಬೆಸ್ಟ್ ಎನ್ನುವುದು ಹೂಡಿಕೆದಾರರ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಅಮೇರಿಕಾದಲ್ಲಿ ಫೆಡರಲ್ ಬಡ್ಡಿದರ ಏರಿಕೆ ಕಾಣುತ್ತಿದ್ದಂತೆ ಇಲ್ಲಿಂದ ಕಾಲ್ಕಿಳುವ ಇಂತಹ ಹೂಡಿಕೆದಾರರ ಸಂಖ್ಯೆ ಕೂಡ ಅಸಂಖ್ಯ. ಹೀಗಾಗಿ ಇಲ್ಲಿನ ಹೂಡಿಕೆಯಲ್ಲಿನ ವ್ಯತ್ಯಯಗಳನ್ನ ಗಮನಿಸುತ್ತಿರಬೇಕು. ದೀರ್ಘಾವಧಿಯಲ್ಲಿ ಇದು ಗೌಣ ಎನ್ನಿಸಬಹುದು ಆದರೆ ಆ ಕ್ಷಣದಲ್ಲಿ ಇದು ಮಾರುಕಟ್ಟೆಯ ಏರಿಳಿತಕ್ಕೆ ದೇಣಿಗೆ ನೀಡುವುದು ಸತ್ಯ.

ಮಾನ್ಸೂನ್ ಮತ್ತು ಕೃಷಿ ಕ್ಷೇತ್ರ: ತಂತ್ರಜ್ಞಾನ ಬಹಳಷ್ಟು ಮುಂದುವರೆದಿದೆ, ಜಗತ್ತು ನಾಗಾಲೋಟದಿಂದ ಓಡುತ್ತಿದೆ , ಎಲ್ಲವೂ ಒಪ್ಪುವ ಮಾತು, ಆದರೂ ನಮ್ಮದು ಇಂದಿಗೂ ಕೃಷಿ ಪ್ರಧಾನ ಸಮಾಜ, ಮತ್ತು ಕೃಷಿ ಇಂದಿಗೂ ಮಳೆಯನ್ನ ಅದರಲ್ಲೂ ಮಾನ್ಸೂನ್ ಮಳೆಯನ್ನ ನಂಬಿ ಕುಳಿತ್ತಿದ್ದೇವೆ. ನಮ್ಮ ಕ್ರಾಪ್ ಸೈಕಲ್ ನಿಂತಿರುವುದು ಮಾನ್ಸೂನ್ ಮೇಲೆ, ಇದರಲ್ಲಿ ವ್ಯತ್ಯಾಸವಾದರೆ ಬೆಳೆಗಳಲ್ಲಿ ವ್ಯತ್ಯಾಸವಾಗುತ್ತದೆ ತನ್ಮೂಲಕ ಆಹಾರ ಪದಾರ್ಥಗಳಲ್ಲಿ ಏರಿಕೆಯಾಗುತ್ತದೆ, ಇದು ಒಟ್ಟಾರೆ ಹಣದುಬ್ಬರಕ್ಕೆ ನಾಂದಿಯಾಡುತ್ತದೆ. ಹಣದುಬ್ಬರ ಮಾರುಕಟ್ಟೆಗೆ ಪೂರಕವಲ್ಲ. ಹೀಗಾಗಿ ನಮ್ಮ ಬೆಳೆಗಳ ಬಗ್ಗೆ, ಮಳೆ ಬಗ್ಗೆ ಕೂಡ ಹೂಡಿಕೆದಾರ ತಿಳಿದುಕೊಂಡಿರುವ ಅವಶ್ಯಕತೆಯಿದೆ.

ಬಡ್ಡಿ ದರಗಳು: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬಡ್ಡಿದರಗಳ ಮೇಲೆ ಸದಾ ನಿಗಾವಹಿಸರಬೇಕು. ಬಡ್ಡಿದರದಲ್ಲಿ ಹೆಚ್ಚಳವಾದರೆ ಆಗ ಸಾಮಾನ್ಯ  ಹೂಡಿಕೆದಾರ ಬ್ಯಾಂಕಿನ ಕಡೆಗೆ ಮುಖ ಮಾಡುತ್ತಾನೆ. ಬಡ್ಡಿದರ ಹೆಚ್ಚುತ್ತಿದೆ ಎನ್ನವುದು ಹಣದುಬ್ಬರದ ಸಂಕೇತ ಕೂಡ ಹೌದು. ಜಾಗತಿಕ ಮಟ್ಟದಲ್ಲಿ ಬಡ್ಡಿದರ  ಹೆಚ್ಚಾದರೆ ಅಂತರರಾಷ್ಟ್ರೀಯ ಹೂಡಿಕೆದಾರರು ಇಲ್ಲಿಂದ ಹಣವನ್ನ ತೆಗೆದುಕೊಳ್ಳುತ್ತಾರೆ. ಬಡ್ಡಿ ದರ ಕಡಿಮೆಯಾದರೆ ಹೂಡಿಕೆ ಮಾಡುತ್ತಾರೆ. ಹೀಗಾಗಿ ಬಡ್ಡಿದರದಲ್ಲಿನ ಏರಿಳಿತ ಮಾರುಕಟ್ಟೆಯ ಏರಿಳಿತಕ್ಕೂ ಕಾರಣವಾಗುತ್ತದೆ.

ಫಾರಿನ್ ಎಕ್ಸ್ಚೇಂಜ್ ದರಗಳು: ವಿದೇಶಿ ವಿನಿಮಯ ದರಗಳಲ್ಲಿ ವ್ಯತ್ಯಾಸವಾದರೂ ಅದು ಮಾರುಕಟ್ಟೆಯ ಮೇಲೆ ಪ್ರಭಾವವನ್ನ ಬೀರುತ್ತವೆ . ಉದಾಹರಣೆ ನೋಡೋಣ; ಇಲೆಕ್ಟ್ರಾನಿಕ್ ಉಪಕರಣಗಳ ಬಿಡಿಭಾಗವನ್ನ ಅಮೇರಿಕಾದಿಂದ ಅಥವಾ ಬೇರೆ ದೇಶದಿಂದ ಆಮದು , ಅಂದರೆ ಭಾರತ ತರಿಸಿಕೊಂಡಿದೆ ಎಂದುಕೊಳ್ಳೋಣ. ಅದು ಸಾವಿರ ಡಾಲರ್ ಮೌಲ್ಯದ ವಸ್ತು ಎಂದುಕೊಳ್ಳಿ, ಇದನ್ನ ಕೊಂಡಾಗ ಒಂದು ಡಾಲರ್ ೭೦ ರುಪಾಯಿಗೆ ಸಮ ಎಂದುಕೊಳ್ಳೋಣ, ಈ ಹಣವನ್ನ ೧೫ ಅಥವಾ ೩೦ ದಿನಗಳ ನಂತರ ನೀಡುವಾಗ ವಿನಿಮಯದರದಲ್ಲಿ ಹೆಚ್ಚಳವಾಗಿ ಡಾಲರ್ಗೆ ೭೨ ರೂಪಾಯಿ ಎಂದುಕೊಂಡರೆ ಆಗ ನಾವು ೭೦ ಸಾವಿರ ನೀಡುವ ಬದಲಿಗೆ ೭೨ ಸಾವಿರ ನೀಡಬೇಕಾಗುತ್ತದೆ, ಆದರೆ ಡಾಲರ್ನಲ್ಲಿ ಮಾತ್ರ ಅದು ಸಾವಿರವೇ ಆಗಿರುತ್ತದೆ. ಇದೆ ರೀತಿ ಎಕ್ಸ್ಪೋರ್ಟ್ ಅಥವಾ ರಫ್ತು ವಿಷಯದಲ್ಲಿ ವಿನಿಮಯ ದರ ಕುಸಿದರೆ ಆಗ ಬರಬೇಕಾಗಿದ್ದ ಹಣದಲ್ಲಿ ಕಡಿಮೆಯಾಗುತ್ತದೆ. ಇವುಗಳು ಸಂಸ್ಥೆಯ ಫೈನಾನ್ಸಿಯಲ್ ಪರ್ಫಾರ್ಮೆನ್ಸ್ ಮೇಲೆ ನೇರವಾಗಿ ಹೊಡೆತವನ್ನ ನೀಡುತ್ತದೆ. ಇದರಿಂದ ಷೇರಿನ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ.

ಜಾಗತಿಕ ಕಚ್ಚಾ ತೈಲದ ಬೆಲೆಗಳು: ಡಾಲರ್ ಅಥವಾ ಯುರೋ ದರಗಳ ವ್ಯತ್ಯಾಸವಾದಾಗ ಷೇರು ಮಾರುಕಟ್ಟೆಯಲ್ಲಿ ಏರಿಳಿತವಾಗುವಂತೆ ತೈಲದರದಲ್ಲಿ ಏರಿಳಿತವಾದರೆ ಅದು ಕೂಡ ಮಾರುಕಟ್ಟೆಯ ಮೇಲೆ ನೇರ ಪರಿಣಾಮವನ್ನ ಬೀರುತ್ತದೆ. ಗಮನಿಸಿ ತೈಲಬೆಲೆಯಲ್ಲಿ ಹೆಚ್ಚಳವಾದರೆ ಅದು ಚೈನ್ ಲಿಂಕ್ ನಂತೆ ಕೆಲಸ ಮಾಡುತ್ತದೆ. ಇತರ ಎಲ್ಲಾ ವಲಯಗಳ ಮೇಲೆ, ಪದಾರ್ಥಗಳ ಮೇಲೆ ಕೂಡ ಇದರ ಪ್ರಭಾವ ಕಾಣುತ್ತದೆ. ಇದು ಹಣದುಬ್ಬರಕ್ಕೆ ನಾಂದಿ ಹಾಡುತ್ತದೆ. ಕುಸಿತ ನವ ಚೈತನ್ಯ ತುಂಬುತ್ತದೆ. ಒಟ್ಟಿನಲ್ಲಿ ಇಲ್ಲಿನ ಏರಿಳಿತದ ಮೇಲೆ ಕೂಡ ಹೂಡಿಕೆದಾರನಿಗೆ ಮಾಹಿತಿ ಇರಬೇಕಾಗುತ್ತದೆ.

ದೇಶಿಯ ಮತ್ತು ಅಂತಾರಾಷ್ಟ್ರೀಯ ಹಣದುಬ್ಬರ: ನಮ್ಮ ದೇಶದಲ್ಲಿನ ಹಣದುಬ್ಬರ ಸರಿಯಾಗಿದ್ದರೂ ಕೂಡ ಜಾಗತಿಕ ಮಟ್ಟದಲ್ಲಿ ವ್ಯವಸ್ಥೆ ಹದಗೆಟ್ಟು ಹೆಚ್ಚಿನ ಹಣದುಬ್ಬರ ಉಂಟಾದರೆ ಅದು ನಮ್ಮ ಮಾರುಕಟ್ಟೆಗೂ ತಟ್ಟುತ್ತದೆ. ಉದಾಹರೆಣೆಗೆ ನೋಡಿ ಅಮೇರಿಕಾ ಕೋವಿಡ್ ಸಮಯದಲ್ಲಿ ೯ ಟ್ರಿಲಿಯನ್ ಹೊಸ ಹಣವನ್ನ ಸೃಷ್ಟಿಸಿ ಮಾರುಕಟ್ಟೆಗೆ ಬಿಟ್ಟಿತು. ಸಂಪನ್ಮೂಲ ಅಷ್ಟೇ ಇದ್ದು ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಾದರೆ ಅದು ವಸ್ತುವಿನ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಇಂದು ಅಮೇರಿಕಾ, ಬ್ರಿಟನ್ ಮತ್ತು ಯೂರೋಪಿನ ಇತರ ದೇಶಗಳು ದಶಕಗಳಲ್ಲಿ ಕಾಣದ ಹಣದುಬ್ಬರವನ್ನ ಕಾಣುತ್ತಿವೆ. ಭಾರತದಲ್ಲಿ ಆಂತರಿಕ ವ್ಯವಸ್ಥೆ ಪರವಾಗಿಲ್ಲ ಎನ್ನುವ ಮಟ್ಟದಲ್ಲಿದ್ದೂ ಕೂಡ ಇಲ್ಲಿಗೂ ಹಣದುಬ್ಬರದ ಕಾಟ ತಟ್ಟಿದೆ. ಹೀಗಾಗಿ ನಮ್ಮ ಆಂತರಿಕ ಹಣದುಬ್ಬರವನ್ನ ಸರಿಯಾಗಿ ಇಟ್ಟು ಕೊಳ್ಳಲೇ ಬೇಕು ಅದರ ಜೊತೆಗೆ ಜಾಗತಿಕ ಮಟ್ಟದ ಬದಲಾವಣೆಗಳಿಗೂ ಎಚ್ಚರದಿಂದಿರಬೇಕು.

ಹೂಡಿಕೆದಾರನ ವಿಶ್ವಾಸ, ಮತ್ತಿತರ ಕಾರಣಗಳು: ನ್ಯಾಚುರಲ್ ಕಲಾಮಿಟಿಸ್, ಡಿಮ್ಯಾಂಡ್ ಅಂಡ್ ಸಪ್ಲೈ, ಸರಕಾರಿ ಪಾಲಿಸಿಗಳು ಹೂಡಿಕೆದಾರನ ಆತ್ಮವಿಶ್ವಾಸವನ್ನ ಹೆಚ್ಚಿಸುವ ಅಥವಾ ಕುಗ್ಗಿಸುವ ಕೆಲಸವನ್ನ ಮಾಡುತ್ತವೆ. ನೈಸರ್ಗಿಕ ವಿಕೋಪ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗುತ್ತದೆ. ಇತ್ತೀಚಿನ ಕೋವಿಡ್ ಮಾರುಕಟ್ಟೆಯನ್ನ ಯಾವ ಮಟ್ಟಕ್ಕೆ ಕುಸಿಯುವಂತೆ ಮಾಡಿತ್ತು ಎನ್ನುವುದು ನಮಗೆಲ್ಲಾ ಗೊತ್ತಿದೆ. ಡಿಮ್ಯಾಂಡ್ ಕಡಿಮೆ ಇದ್ದು ಸಪ್ಲೈ ಜಾಸ್ತಿಯಿದ್ದರೆ ಅದು ಕುಸಿತಕ್ಕೂ, ಸಪ್ಲೈ ಕಡಿಮೆಯಿದ್ದು ಡಿಮ್ಯಾಂಡ್ ಜಾಸ್ತಿಯಿದ್ದರೆ ಅದು ಏರಿಕೆಗೂ ಕಾರಣವಾಗುತ್ತದೆ. ಸರಕಾರ ಹೊರಡಿಸುವ ಅಧಿಸೂಚನೆಗಳು ವಲಯಕ್ಕೆ ತಕ್ಕಂತೆ ಪೂರಕವೋ ಅಥವಾ ಮಾರಕವೋ ಎನ್ನುವುದು ನಿರ್ಧಾರವಾಗುತ್ತದೆ. ಮೇಲಿನ ಎಲ್ಲಾ ಏರಿಳಿತಗಳ ಆಧಾರದ ಮೇಲೆ ಗ್ರಾಹಕನ, ಹೂಡಿಕೆದಾರನ ಮನಸ್ಥಿತಿ ಕೂಡ ಬದಲಾಗುತ್ತದೆ. ಹೀಗಾಗಿ ಇವೆಲ್ಲವೂ ಚೈನ್ ಲಿಂಕ್, ಒಂದಕ್ಕೊಂದು ಲಿಂಕ್ ಆಗಿರುತ್ತದೆ. ಒಳ್ಳೆಯ ಸುದ್ದಿ ಒಳ್ಳೆಯದನ್ನ ಹೆಚ್ಚಿಸುತ್ತದೆ, ಕೆಟ್ಟ ಮನಸ್ಥಿತಿ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗುತ್ತದೆ.

ಕೊನೆಮಾತು: ಷೇರುಮಾರುಕಟ್ಟೆಯ ಮೇಲಿನ ಹೂಡಿಕೆ ಒಬ್ಬ ಹೂಡಿಕೆದಾರನನ್ನ ಪರಿಪೂರ್ಣ ವ್ಯಕ್ತಿಯನ್ನಾಗಿಸುತ್ತದೆ. ಇದು ಕೇವಲ ಲಾಭಕ್ಕಾಗಿ ಎಂದು ಶುರು ಮಾಡಿದರೂ ಕೂಡ ಕಾಲ ಕ್ರಮೇಣ ಅದು ವ್ಯಕ್ತಿಯನ್ನ ಮಾಗಿಸುತ್ತಾ ಹೋಗುತ್ತದೆ. ಮಾರ್ಕೆಟ್ ಸೆಂಟಿಮೆಂಟ್ ಜೊತೆಗೆ ಜಗತ್ತಿನಲ್ಲೆಡೆ ಆಗುತ್ತಿರುವ ಬದಲಾವಣೆಗಳು, ದೇಶದಲ್ಲಿ ಆಗುತ್ತಿರುವ ಆರ್ಥಿಕ, ರಾಜಕೀಯ ಬದಲಾವಣೆಗಳು, ಜಿಯೋ ಪಾಲಿಟಿಕ್ಸ್, ಬಜೆಟ್, ಟ್ರೇಡ್, ಫಿಸ್ಕಲ್ ಡೆಫಿಸಿಟ್ ನಂತಹ ಸೂಕ್ಷ್ಮಗಳು, ಜಾಗತಿಕ ಹೂಡಿಕೆದಾರರ ಮನಸ್ಥಿತಿ, ಹೀಗೆ ಎಲ್ಲವನ್ನೂ ಗ್ರಹಿಸಿದರೆ ಮಾತ್ರ ಇಲ್ಲಿ ನಿಲ್ಲಬಹುದು, ಗೆಲ್ಲಬಹುದು. ಅಂತಹ ಒಂದು ಗ್ರಹಿಕೆಗೆ ಇದು ನೆಲೆಯನ್ನ ಒದಗಿಸಕೊಡುತ್ತದೆ. ಮೇಲೆ ಹೇಳಿದ ವಿಷಯಗಳನ್ನ ಹೊರತುಪಡಿಸಿ ಕೂಡ ಎಣಿಕೆಗೆ ನಿಲುಕದ ಬದಲಾವಣೆಗಳಿಗೆ ಕೂಡ ಹೂಡಿಕೆದಾರ ಸಿದ್ಧನಿರಬೇಕು, ಬಂದದ್ದು ಎದುರಿಸುತ್ತೇನೆ ಎನ್ನುವ ಮನಸ್ಥಿತಿ ಹೊಂದಿರಬೇಕು. ಆಗ ಷೇರು ಮಾರುಕಟ್ಟೆಯನ್ನ ಉತ್ತೇಜಿಸುವ ಅಂಶಗಳಿಗೆ ತಾಳ್ಮೆಯ ಉತ್ತರವನ್ನ ಹೂಡಿಕೆದಾರ ನೀಡಬಲ್ಲ. ನೆನಪಿರಲಿ: ಗೆಲ್ಲುವಾಗ ಇವೆಲ್ಲಾ ನಗಣ್ಯ, ಸೋಲುವಾಗ ಎಲ್ಲವೂ ಲೆಕ್ಕಕ್ಕೆ ಬರುತ್ತವೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com