ಪಕ್ಷದ ಸಾರಥ್ಯ ವಹಿಸಿರುವ ಪುತ್ರನ ಯಶಸ್ಸಿನ ಹಾದಿಗೆ ಯಾವುದೇ ಅಡ್ಡಿಯಾಗದಂತೆ ಮುನ್ನೆಚ್ಚರಿಕೆ ವಹಿಸಿರುವ ಯಡಿಯೂರಪ್ಪ, ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ವಿಚಾರದಲ್ಲೂ ತಮ್ಮ ಮಾತೇ ಅಂತಿಮವಾಗುವಂತೆ ನೋಡಿಕೊಂಡಿದ್ದಾರೆ. ಪ್ರಮುಖವಾಗಿ ವಿಧಾನಸಭೆ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ತಮ್ಮ ಪರಮ ನಿಷ್ಠ ಮುಖಂಡ, ಮಾಜಿ ಸಚಿವ ಆರ್. ಅಶೋಕ್ ರನ್ನು ಆಯ್ಕೆ ಮಾಡುವ ಮೂಲಕ ಒಂದೇ ಏಟಿಗೆ ಪಕ್ಷದೊಳಗಿನ ತಮ್ಮ ವಿರೋಧಿಗಳು ನೆಲ ಕಚ್ಚುವಂತೆ ಮಾಡಿದ್ದಾರೆ.
ಶಾಂತವಾಗಿರುವ ಅಗ್ನಿ ಪರ್ವತದ ಮೇಲೆ ಕುಳಿತ ಸ್ಥಿತಿ
ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿ ಮಾಜಿ ಸಚಿವ ಆರ್. ಅಶೋಕ್ ಆಯ್ಕೆಯಾಗುತ್ತಿದ್ದಂತೆ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಹಿರಿಯ ಮುಖಂಡ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಈ ನೇಮಕವನ್ನು ವಿರೋಧಿಸಿ ಶಾಸಕಾಂಗ ಪಕ್ಷದ ಸಭೆಯಿಂದ ಹೊರ ನಡೆದಿದ್ದಾರೆ. ಬೆಂಗಳೂರಿನಲ್ಲಿ ತನ್ನನ್ನು ಭೇಟಿ ಮಾಡಿದ ದಿಲ್ಲಿ ವೀಕ್ಷಕರಿಗೆ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಆರೋಪಗಳ ಪಟ್ಟಿಯನ್ನೇ ನೀಡಿದ್ದು ಪ್ರತಿಪಕ್ಷದ ನಾಯಕನ ಸ್ಥಾನವನ್ನು ಉತ್ರ ಕರ್ನಾಟಕದ ಭಾಗದವರೊಬ್ಬರಿಗೆ ನೀಡಬೇಕೆಂದು ಬೇಡಿಕೆ ಇಟ್ಟಿದ್ದ ಬೇಡಿಕೆ ಫಲ ನೀಡಲಿಲ್ಲ. ಕಡೆಗೂ ಯಡಿಯೂರಪ್ಪ ಸೂಚನೆಯಂತೆಯೇ ಆರ್. ಅಶೋಕ್ ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿ ನೇಮಕಗೊಂಡಿದ್ದಾರೆ. ವರಿಷ್ಠರ ಈ ನಿರ್ಧಾರದ ವಿರುದ್ಧ ಕುದಿಯುತ್ತಿರುವ ಯತ್ನಾಳ್ ಸದ್ಯದಲ್ಲೇ ಯಡಿಯೂರಪ್ಪ ಕುಟುಂಬದ ವಿರುದ್ಧ ಹೊಸ ಸಮರ ಸಾರುವ ಸೂಚನೆಯನ್ನೂ ನೀಡಿದ್ದಾರೆ. ಅಧ್ಯಕ್ಷರಾಗಿ ನೇಮಕಗೊಂಡ ಆರಂಭದಲ್ಲೇ ವಿಜಯೇಂದ್ರ ಭಿನ್ನಮತ ಮತ್ತು ಬಂಡಾಯದ ಸಮಸ್ಯೆಯನ್ನು ಎದುರಿಸಬೇಕಆದ ಪರಿಸ್ಥಿತಿ ಎದುರಾಗಿದೆ.
ಒಂದಂತೂ ಸ್ಪಷ್ಟ. ಅಧ್ಯಕ್ಷರಾಗಿ ವಿಜಯೇಂದ್ರ ನೇಮಕದ ಘೋಷಣೆ ಹೊರ ಬಿದ್ದ ತತ್ ಕ್ಷಣವೇ ಪಕ್ಷದ ಹಿರಿಯ ನಾಯಕರಾದ, ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವರಾದ ಸಿ.ಟಿ.ರವಿ, ವಿ.ಸೋಮಣ್ಣ ಸೇರಿದಂತೆ ಕೆಲವರು ನೀಡಿರುವ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಅತೃಪ್ತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತೆ ಇದೆ ಎಂಬುದು ಸ್ಪಷ್ಟ.
ಆರಂಭದ ದಿನಗಳಲ್ಲಿ ಯಡಿಯೂರಪ್ಪನವರಿಗೆ ಜೊತೆಯಾಗಿ ನಿಂತು ಪಕ್ಷ ಕಟ್ಟಿದ, ಒಂದು ಕಾಲಕ್ಕೆ ಅವರ ಪರಮಾಪ್ತರಾಗಿದ್ದ ಈಶ್ವರಪ್ಪ ನೀಡಿರುವ ಕ್ಷಿಪ್ರ ಪ್ರತಿಕ್ರಿಯೆಯಲ್ಲಿ ಸಾಮೂಹಿಕ ನಾಯಕತ್ವದ ವಿಚಾರವನ್ನು ಮುನ್ನೆಲೆಗೆ ತಂದಿರುವುದಲ್ಲದೇ "ಪಕ್ಷ ಯಾವುದೇ ಒಬ್ಬ ವ್ಯಕ್ತಿಯ ಮೇಲೆ ಅವಲಂಬಿತವಾಗಿಲ್ಲ" ಎಂದು ಹೇಳಿರುವುದು ಅಸಮಾಧಾನದ ಬೆಂಕಿ ಇನ್ನೂ ಆರಿಲ್ಲ ಎಂಬುದರ ಮುನ್ಸೂಚನೆ.
ಈ ಸನ್ನಿವೇಶದಲ್ಲೇ ವಿಧಾನ ಮಂಡಲದ ಉಭಯ ಸದನಗಳ ಪ್ರತಿ ಪಕ್ಷದ ನಾಯಕರ ಆಯ್ಕೆಗಾಗಿ ದಿಲ್ಲಿಯಿಂದ ಬೆಂಗಳೂರಿಗೆ ಶುಕ್ರವಾರ ಬಂದಿದ್ದ ಇಬ್ಬರು ವೀಕ್ಷಕರ ಪೈಕಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾದ ಯತ್ನಾಳ್ ಸೇರಿದಂತೆ ಆಯ್ದ ಕೆಲವು ಅತೃಪ್ತರು ಪಕ್ಷದಲ್ಲಿ ಯಡಿಯೂರಪ್ಪ ಕೈ ಮೇಲಾಗುತ್ತಿರುವುದರ ಕುರಿತು ತಮ್ಮ ಅಸಹನೆ ತೋಡಿಕೊಂಡಿದ್ದಾರೆ. ಆದರೆ ಇದ್ಯಾವುದೂ ಪ್ರಯೋಜನಕ್ಕೆ ಬಂದಿಲ್ಲ. ಅಸಮಾಧಾನಿತರನ್ನು ಸಮಾಧಾನ ಪಡಿಸಿದ ನಿರ್ಮಲಾ ಸೀತಾರಾಮನ್ ಪಕ್ಷದ ಹಿತ ದೃಷ್ಠಿಯಿಂದ ಭಿನ್ನಾಭಿಪ್ರಾಯ ಮರೆತು ಒಂದಾಗಿ ಹೋಗಬೇಕೆಂಬ ಓಲೈಕೆಯ ಮಾತುಗಳಿಗೆ ಯತ್ನಾಳ್, ಅರವಿಂದ ಬೆಲ್ಲದ್ ಸೇರಿದಂತೆ ವಿರೋಧಿ ಬಣ ಬಗ್ಗಿಲ್ಲ. ಪರಿಣಾಮ ಎಂಬಂತೆ ಶಾಸಕಾಂಗ ಪಕ್ಷದ ಸಭೆಯಿಂದ ಯತ್ನಾಳ್ ಹಾಗೂ ರಮೇಶ ಜಾರಕಿಹೊಳಿ ಹೊರ ಬಂದು ಒಂದೇ ಕಾರಿನಲ್ಲಿ ನಿರ್ಗಮಿಸಿದ್ದಾರೆ.
ಇದು ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪ ಪಡೆಯುವ ಎಲ್ಲ ಸಾಧ್ಯತೆಗಳನ್ನೂ ಹುಟ್ಟು ಹಾಕಿದೆ.
ಪುತ್ರನ ಪಟ್ಟಾಭಿಷೇಕ, ವಿಧಾನಸಭೆ ವಿಪಕ್ಷ ನಾಯಕರಾಗಿ ಆರ್. ಅಶೋಕ್ ಆಯ್ಕೆಯೊಂದಿಗೆ ಯಡಿಯೂರಪ್ಪ ಮತ್ತೆ ಪಕ್ಷದಲ್ಲಿ ಅಧಿಕಾರದ ಕೇಂದ್ರ ಸ್ಥಾನವಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಮಂದಿನ ದಿನಗಳಲ್ಲಿ ರಾಜ್ಯ ರಾಜಕಾರಣ ಮತ್ತೆ ಯಡಿಯೂರಪ್ಪ ಸುತ್ತಲೇ ಗಿರಕಿ ಹೊಡೆಯಲಿದೆ. ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಯಾರೆಂಬುದು ಇನ್ನೂ ಖಚಿತವಾಗಿಲ್ಲ. ಒಂದೆರಡು ದಿನಗಳಲ್ಲಿ ಅದೂ ಘೋಷಣೆಯಾಗಲಿದೆ. ಮುಂದಿನ ದಿನಗಳಲ್ಲಿ ಪಕ್ಷದ ಪದಾಧಿಕಾರಿಗಳ ಆಯ್ಕೆಯೂ ಅವರ ಮರ್ಜಿಗೆ ಅನುಸಾರವಾಗೇ ನಡೆಯಲಿವೆ ಎಂದು ಹೇಳಲಾಗುತ್ತಿದೆ.
ಕುಮಾರಸ್ವಾಮಿ ಮುನಿಸು
ಜೆ.ಡಿ.ಎಸ್. ಪಕ್ಷದೊಂದಿಗೆ ಲೋಕಸಭಾ ಚುನಾವನೆಗೆ ಮೈತ್ರಿ ಮಾತುಕತೆ ನಡೆದಿರುವ ಸಂದರ್ಭದಲ್ಲೇ ಒಕ್ಕಲಿಗ ಸಮುದಾಯಕ್ಕೆ ಸೇರಿದ ಅಶೋಕ್ ಅವರನ್ನು ವಿಧಾನಸಭೆ ಪ್ರತಿಪಕ್ಷದ ನಾಯಕರಾಗಿ ಆಯ್ಕೆ ಮಾಡುವ ಮೂಲಕ ಯಡಿಯೂರಪ್ಪ ಜೆಡಿಎಸ್ ನಾಯಕತ್ವಕ್ಕೂ ಇರಿಸುವ ಮುರಿಸು ಉಂಟಾಗುವಂತೆ ಮಾಡಿದ್ದಾರೆ. ಒಕ್ಕಲಿಗೇತರರೊಬ್ಬರನ್ನು ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಕುಮಾರಸ್ವಾಮಿ ನಡೆಸಿದ ರಾಜಕೀಯ ತಂತ್ರ ವಿಫಲಗೊಂಡಿದ್ದರೆ, ಜೆಡಿಎಸ್ ಜತೆಗೆ ಮೈತ್ರಿ ಒಲ್ಲದ ಯಡಿಯೂರಪ್ಪ ಮಾತ್ರ ವಿಜಯದ ನಗೆ ಬೀರಿದ್ದಾರೆ. ಸಹಜವಾಗೇ ಇದರಿಂದ ಗಲಿಬಿಲಿ ಗೊಂಡಿರುವ ಕುಮಾರಸ್ವಾಮಿ ಮುಂದಿನ ದಿನಗಳಲ್ಲಿ ಯಾವ ರಾಜಕೀಯ ನಡೆ ಅನುಸರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ವಿಧಾನಸಭೆಯ ಪ್ರತಿಪಕ್ಷದ ನಾಯಕರೆ ಶಾಸಕಾಂಗ ಪಕ್ಷದ ನಾಯಕರಾಗಿಯೂ ಆಯ್ಕೆಯಾಗುವುದರಿಂದ ರಾಜಕೀಯವಾಗಿ ಅದೊಂದು ಪ್ರಮುಖ ಹುದ್ದೆ ಎನಿಸಿದೆ. ಅದಕ್ಕಾಗೇ ಈ ಸ್ಥಾನಕ್ಕೆ ಜಾತಿ ಲೆಕ್ಕಾಚಾರದ ಆಧಾರದಲ್ಲಿ ಅಶೋಕ್ ಆಯ್ಕೆಯಾಗುವಂತೆ ಯಡಿಯೂರಪ್ಪ ನೊಡಿಕೊಂಡಿದ್ದಾರೆ. ಒಕ್ಕಲಿಗರೊಬ್ಬರಿಗೆ ಪ್ರಧಾನ್ಯತೆ ನೀಡಿದಂತೆಯೂ ಆಯಿತು, ಪಕ್ಷದೊಳಗಿನ ವಿರೋಧಿಗಳನ್ನು ಮಣಿಸಿದಂತೆಯೂ ಆಯಿತು. ಜೆಡಿಎಸ್ ನಾಯಕತ್ವಕ್ಕೆ ಉತ್ತರ ಕೊಟ್ಟಂತೆಯೂ ಆಯಿತು ಎಂಬ ಅವರ ತಂತ್ರ ಮೇಲುಗೈ ಸಾಧಿಸಿದೆ.
ಪಕ್ಷದ ಸಾರಥ್ಯ ವಹಿಸಿರುವ ತಮ್ಮ ಪುತ್ರನ ಯಶಸ್ಸಿನ ಹಾದಿಗೆ ಯಾವುದೇ ಅಡ್ಡಿಯಾಗದಂತೆ ಮುನ್ನೆಚ್ಚರಿಕೆ ವಹಿಸಿರುವ ಯಡಿಯೂರಪ್ಪ, ಆ ಮಟ್ಟಿಗೆ ವಿಜಯೇಂದ್ರ ಹಾದಿಯನ್ನು ಸುಗಮಗೊಳಿಸಿದ್ದಾರೆ.
ಪ್ರಮುಖವಾಗಿ ವಿಧಾನಸಭೆ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಮಾಜಿ ಸಚಿವರಾದ ಸುನಿಲ್ ಕುಮಾರ್, ಆರ್. ಅಶೋಕ್, ಡಾ. ಅಶ್ವತ್ಥನಾರಾಯಣ ಸ್ಪರ್ಧೆಯಲ್ಲಿದ್ದರು. ಸುನಿಲ್ ಕುಮಾರ್ ಆಯ್ಕೆಗೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಒಲವು ವ್ಯಕ್ತಪಡಿಸಿದ್ದರು. ಹಿಂದುಳಿದ ವರ್ಗಕ್ಕೆ ಪ್ರಾತಿನಿಧ್ಯದ ಜತೆಗೇ ಯುವ ನಾಯಕತ್ವಕ್ಕೆ ಆದ್ಯತೆ ನೀಡಿದಂತಾಗುತ್ತದಲ್ಲದೇ ಶಾಸಕಾಂಗ ಪಕ್ಷದ ಮೇಲೆ ತಮ್ಮದೂ ಹಿಡಿತ ಇದ್ದಂತಾಗುತ್ತದೆ ಎಂಬುದು ಅವರ ಲೆಕ್ಕಾಚಾರ ಆಗಿತ್ತು. ಆದರೆ ಅದು ಕೈಗೂಡಲಿಲ್ಲ.
ನಿಲ್ಲದ ಶೀತಲ ಸಮರ
ರಾಜ್ಯ ಬಿಜೆಪಿಯಲ್ಲಿ ಪರ್ಯಾಯ ಅಧಿಕಾರ ಕೇಂದ್ರವಾಗಿರುವ ಸಂತೋಷ್ ಮತ್ತು ಯಡಿಯೂರಪ್ಪ ನಡುವಿನ ಸಂಬಂಧ ಉತ್ತಮವಾಗೇನೂ ಇಲ್ಲ. ಪ್ರಾಬಲ್ಯಕ್ಕಾಗಿ ಇಬ್ಬರ ನಡುವೆ ಶೀತಲ ಸಮರ ಮುಂದುವರಿದೇ ಇದೆ. ಹೋರಾಟದ ಹಿನ್ನಲೆಯಿಂದ ಬಂದ ಸುನಿಲ್ ಕುಮಾರ್ ಕೊಂಚ ನಿಷ್ಠುರವಾದಿ ಸಂಘ ಪರಿವಾರದ ಕಟ್ಟಾಳು, ಉಳಿದ ಇಬ್ಬರಿಗೆ ಹೋಲಿಸಿದರೆ ಯಡಿಯೂರಪ್ಪ ಜತೆಗಿನ ಅವರ ಸಂಬಂಧ ಅಷ್ಟಕ್ಕಷ್ಟೆ. ಹಾಗೆಂದು ಉಳಿದ ಕೆಲವರಂತೆ ಬಹಿರಂಗವಾಗಿ ಸಂಘರ್ಷಕ್ಕಿಳಿಯದೆ ಅಂತರ ಕಾಯ್ದುಕೊಂಡಿದ್ದಾರೆ.
ಅದರೆ ಜಾತಿ ಮತ್ತು ಯಡಿಯೂರಪ್ಪ ನಾಯಕತ್ವದ ಬಗೆಗಿನ ನಿಷ್ಠೆಯೇ ಆರ್. ಅಶೋಕ್ ಆಯ್ಕೆಗೆ ನೆರವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಂತಹ ಘಟಾನುಘಟಿ ನಾಯಕರನ್ನು ಸದನದಲ್ಲಿ ಅಷ್ಟೇ ದಿಟ್ಟತನ ದಿಂದ ಎದುರಿಸುವ ಛಾತಿಯುಳ್ಳ ವ್ಯಕ್ತಿ ಪ್ರತಿಪಕ್ಷದ ನಾಯಕನಾಗಬೇಕು. ಅಶೋಕ್ ಗೆ ಹಿರಿತನ ಮತ್ತು ಜಾತಿಯ ಬೆಂಬಲ ಇದೆಯಾದರೂ ಸರ್ಕಾರದಲ್ಲಿರುವ ದಿಗ್ಗಜರನ್ನು ಎದುರಿಸುವ ಸಾಮರ್ಥ್ಯ ಇಲ್ಲ. ಇಲ್ಲಿಯವರೆಗೆ ಅವರು ರಾಜಕೀಯವಾಗಿ ಅನುಸರಿಸಿಕೊಂಡು ಬಂದಿರುವುದು ಹೊಂದಾಣಿಕೆಯ ಹಾದಿ. ಸದನದಲ್ಲಿ ಪಟ್ಟು ಹಿಡಿದು ಸರ್ಕಾರವನ್ನು ಎದುರಿಸುವ, ನೀತಿ ನಿರ್ಧಾರಗಳನ್ನು ಪ್ರತಿಭಟಿಸುವ, ದಾರ್ಷ್ಟ್ಯ ಅವರಲ್ಲಿ ಇಲ್ಲ. ಹೀಗಿರುವಾಗ ಸದನದೊಳಗೆ ಅವರು ಸರ್ಕಾರವನ್ನು ಹೇಗೆ ಎದುರಿಸುತ್ತಾರೆ ಎಂಬುದೇ ಸದ್ಯಕ್ಕಿರುವ ಕುತೂಹಲ.
ವಿಧಾನಸಭೆ ಪ್ರತಿಪಕ್ಷದ ನಾಯಕರಾಗುವವರು ಸಮಾನಾಂತರ ಅಧಿಕಾರದ ಕೇಂದ್ರ ಆಗಬಾರದು ಎಂಬುದು ಯಡಿಯೂರಪ್ಪನವರ ದೂರ ದೃಷ್ಟಿ. ಅದನ್ನು ಗಮನದಲ್ಲಿಟ್ಟುಕೊಂಡೇ ಅಶೋಕ್ ಆಯ್ಕೆಯಲ್ಲಿ ಹೆಚ್ಚು ಮುತುವರ್ಜಿ ವಹಿಸಿದ್ದು ಆ ಮೂಲಕ ಮುಂದಿನ ದಿನಗಳಲ್ಲಿ ಪುತ್ರನ ಯಶಸ್ಸಿನ ನಾಗಾಲೋಟಕ್ಕೆ ಅಡ್ಡಿಯಾಗದಂತೆ ಎಚ್ಚರ ವಹಿಸಿದ್ದಾರೆ. ಇನ್ನು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ರಘುನಾಥ ಮಲಕಾಪುರೆ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ.
ಬೂದಿ ಮುಚ್ಚಿದ ಕೆಂಡ:
ವಿಜಯೇಂದ್ರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಪಕ್ಷದ ಪ್ರಮುಖ ಮುಖಂಡರಾದ ಬಸವನಗೌಡ ಪಾಟೀಲ್ ಯತ್ನಾಳ್, ವಿ.ಸೋಮಣ್ಣ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ. ಸಿ.ಟಿ. ರವಿ ಸೇರಿದಂತೆ ಹಲವು ಪ್ರಮುಖರ ಗೈರು ಹಾಜರಾಗಿದ್ದು ಅತೃಪ್ತಿ ಬೂದಿ ಮುಚ್ಚಿದ ಕೆಂಡದಂತಿದೆ ಎಂಬುದನ್ನ ಸಾದರಪಡಿಸಿದೆ. ಅಧ್ಯಕ್ಷ ಸ್ಥಾನ, ಮತ್ತು ಪ್ರತಿಪಕ್ಷದ ನಾಯಕನ ಸ್ಥಾನ ಎರಡೂ ಸಿಗದೇ ಅಸಮಾಧಾನಗೊಂಡಿರುವ ಬಸವನಗೌಡ ಪಾಟೀಲ್ ಯತ್ನಾಳ್ ಬಂಡಾಯಕ್ಕೆ ತಾಲೀಮು ನಡೆಸಿದ್ದಾರೆ.
ತಣ್ಣಗಾದ ಈಶ್ವರಪ್ಪ:
ಇನ್ನುಳಿದಂತೆ ವಿಜಯೇಂದ್ರ ಹೆಸರು ಘೋಷಣೆ ಆಗುತ್ತಿದ್ದಂತೆ ಸಿಡಿದು ನಿಂತಿದ್ದ ಈಶ್ವರಪ್ಪ ಸದ್ಯಕ್ಕೆ ತಣ್ಣಗಾಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ತಮ್ಮ ಪುತ್ರನನ್ನು ಹಾವೇರಿ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಪ್ರಯತ್ನದಲ್ಲಿರುವ ಅವರದ್ದು ಲಾಭ - ನಷ್ಟಗಳ ಲೆಕ್ಕಾಚಾರ.
ಯಡಿಯೂರಪ್ಪ ವಿರುದ್ಧ ಸಿಡಿದು ನಿಂತಿರುವ ಮಾಜಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ನತ್ತ ಹೆಜ್ಜೆ ಇಟ್ಟಿದ್ದಾರೆ. ಈ ಪಟ್ಟಿಗೆ ಇನ್ನೊಂದು ಸೇರ್ಪಡೆ ಶಾಸಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ. ಈಗಾಗಲೇ ಕಾಂಗ್ರೆಸ್ ನಾಯಕರು ಸೋಮಣ್ಣಗೆ ಮುಕ್ತ ಆಹ್ವಾನವನ್ನೂ ನೀಡಿದ್ದಾರೆ.
ಪಕ್ಷದೊಳಗೆ ತಮ್ಮ ಪುತ್ರನ ಬೆಳವಣಿಗೆಗೆ ಅಡ್ಡಿಯಾಗಿದ್ದ ತಮ್ಮದೇ ಸಮುದಾಯದ ಹಲವು ಮುಖಂಡರನ್ನು ಪಕ್ಕಕ್ಕೆ ಸರಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಈ ವಿಚಾರದಲ್ಲಿ ಅವರದ್ದು ಜಾಣ್ಮೆಯ ರಾಜಕೀಯ ನಡೆ.
-ಯಗಟಿ ಮೋಹನ್
yagatimohan@gmail.com
Advertisement