ಉಗ್ಗುವಿಕೆ ಸಮಸ್ಯೆ ಬಗ್ಗೆ ಉದಾಸೀನ ಬೇಡ (ಕುಶಲವೇ ಕ್ಷೇಮವೇ)

ಉಗ್ಗುವಿಕೆ ಎಂದರೆ ಸ್ಪಷ್ಟವಾಗಿ ನಿರರ್ಗಳವಾಗಿ ಮಾತನಾಡಲು ಆಗದಿರುವುದು, ಪದಗಳನ್ನು ಕಷ್ಟಪಟ್ಟು ಹೇಳುವುದು, ಒಂದು ಸ್ವರ ಅಥವಾ ಪದವನ್ನು ಮುಂದುವರೆಸಲು ಆಗದೇ ಅದನ್ನೇ ಪುನರಾವರ್ತಿಸುವ ಸ್ಥಿತಿ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಉಗ್ಗುವಿಕೆ (ಇಂಗ್ಲೀಷಿನಲ್ಲಿ stammering) ಎಂದರೆ ಸ್ಪಷ್ಟವಾಗಿ ನಿರರ್ಗಳವಾಗಿ ಮಾತನಾಡಲು ಆಗದಿರುವುದು, ಪದಗಳನ್ನು ಕಷ್ಟಪಟ್ಟು ಹೇಳುವುದು, ಒಂದು ಸ್ವರ ಅಥವಾ ಪದವನ್ನು ಮುಂದುವರೆಸಲು ಆಗದೇ ಅದನ್ನೇ ಪುನರಾವರ್ತಿಸುವುದು, ಮಾತಾಡುವಾಗ ಪದಗಳು ತುಂಡಾಗುವ ಮತ್ತು ಇದರಿಂದ ವಿಪರೀತ ಉದ್ವೇಗ/ಆತಂಕ ಉಂಟಾಗುವ ಸ್ಥಿತಿ.

ಉಗ್ಗುವಿಕೆ ಇರುವ ವ್ಯಕ್ತಿಗಳನ್ನು ನಾವೆಲ್ಲರೂ ಒಂದಲ್ಲ ಒಂದು ಸಲ ಭೇಟಿಯಾಗಿಯೇ ಇರುತ್ತೇವೆ. ಒಂದು ಅಂದಾಜಿನ ಪ್ರಕಾರ ನಮ್ಮ ದೇಶದ ಒಟ್ಟು ಜನಸಂಖ್ಯೆಯ ಶೇಕಡಾ ಒಂದರಷ್ಟು – ಅಂದರೆ ಸುಮಾರು ಒಂದು ಕೋಟಿ ನಲವತ್ತು ಲಕ್ಷ ಜನರಿಗೆ – ಮಾತನಾಡುವಾಗ ತೊದಲುವ ಈ ಸಮಸ್ಯೆ ಇದೆ.

ಉಗ್ಗುವಿಕೆ ಯಾವ ವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತದೆ?

ಈ ಸಮಸ್ಯೆ ಬಾಲ್ಯದಲ್ಲಿಯೇ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಹುಟ್ಟಿದ ನಂತರ ಮೂರರಿಂದ ಐದು ವರ್ಷಗಳಲ್ಲಿ ಮಕ್ಕಳು ಮಾತನಾಡುವುದನ್ನು ಚೆನ್ನಾಗಿ ಕಲಿಯುತ್ತಾರೆ. ಈ ಹಂತದಲ್ಲಿಯೇ ಅವರಿಗೆ ಸರಿಯಾಗಿ ಮಾತನಾಡಲು ತೊಂದರೆಯಾಗುತ್ತದೆ. ಮೊದಲಿಗೆ ಇದು ತೊದಲುನುಡಿ ಎನಿಸಬಹುದು. ಆದರೆ ಏಳೆಂಟು ವರ್ಷಗಳಾದರೂ ಈ ಸಮಸ್ಯೆ ಇದ್ದರೆ ವೈದ್ಯರಿಗೆ ತೋರಿಸಿದರೆ ಅವರು ಉಗ್ಗುವಿಕೆಯನ್ನು ಗುರುತಿಸುತ್ತಾರೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳು ಬೇಗನೇ ಸರಿಯಾಗಿ ಮಾತನಾಡುವುದನ್ನು ಕಲಿಯುತ್ತಾರೆ. ಈ ಸಮಸ್ಯೆಯು ಹೆಚ್ಚಾಗಿ ಗಂಡುಮಕ್ಕಳನ್ನು ಕಾಡುತ್ತದೆ. ಆದ್ದರಿಂದ ಮಕ್ಕಳ ಮೊದಲ ಮೂರು ವರ್ಷಗಳ ಬೆಳವಣಿಗೆಯನ್ನು ಗಮನಿಸಬೇಕು. ಅವರು ಸರಿಯಾಗಿ ಮಾತನಾಡುತ್ತಿದ್ದಾರಾ ಎಂದು ನೋಡಬೇಕು.

ಉಗ್ಗುವಿಕೆಗೆ ದೈಹಿಕ ಕಾರಣಗಳೂ ಸೇರಿದಂತೆ ಹಲವಾರು ಕಾರಣಗಳಿವೆ. ಆದರೆ ನಿಖರವಾದ ಕಾರಣ ಯಾವುದು ಎಂದು ಹೇಳುವುದು ಕಷ್ಟ. ಈ ಸಮಸ್ಯೆ ಅನುವಂಶೀಯವಾಗಿ ಬರುವ ಸಾಧ್ಯತೆಗಳು ಹೆಚ್ಚಾಗಿವೆ.

ಉಗ್ಗುವಿಕೆಯಿಂದ ಮನಸ್ಸಿನ ಮೇಲೆ ಪರಿಣಾಮ

ಉಗ್ಗುವಿಕೆಯಿಂದಾಗಿ ಮಕ್ಕಳು ಬೆಳೆಯುತ್ತಿರುವಾಗ ಬೇರೆಯವರೊಂದಿಗೆ ಮಾತನಾಡುವುದೇ ಒಂದು ಸವಾಲು ಎಂದುಕೊಳ್ಳುತ್ತಾರೆ. ಕೆಲವೊಮ್ಮೆ ಮಾತನಾಡುವುದು ಅಗತ್ಯವಿರುವ ಪರಿಸ್ಥಿತಿಗಳಿಂದ ತಪ್ಪಿಸಿಕೊಳ್ಳಲು, ಶಾಲೆ-ಕಾಲೇಜು ಅಥವಾ ಪಠ್ಯೇತರ/ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸದೇ ದೂರ ಉಳಿಯಬಹುದು. ಸಹಪಾಠಿಗಳು ಮತ್ತು ಹೊರಗೆ ಇತರರು ಅವರ ಪರಿಸ್ಥಿತಿ ನೋಡಿ ಹಾಸ್ಯ ಮಾಡಬಹುದು ಅಥವಾ ಒಂದಲ್ಲಾ ಒಂದು ಕಾರಣಕ್ಕೆ ಹೆದರಿಸಬಹುದು. ಇದೆಲ್ಲ ಅವರ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು. ಕ್ರಮೇಣ ಅವರಲ್ಲಿ ತಾವು ಇತರ ಸಾಮಾನ್ಯ ಜನರಂತಲ್ಲ ಎಂಬ ಭಾವನೆ ಬೆಳೆದು ಆತ್ಮಗೌರವ ಕುಂದುವ ಮತ್ತು ಆತ್ಮವಿಶ್ವಾಸದ ಕೊರತೆ ಕಂಡುಬರುವಂತಹ ಸಮಸ್ಯೆಗಳಾಗಿ ಪರಿಣಮಿಸಬಹುದು. ಈ ಬಗ್ಗೆ ಪೋಷಕರು ಗಮನವಹಿಸಬೇಕು. ಅವರನ್ನು ಅಕ್ಕರೆಯಿಂದ ಕಾಣಬೇಕು. ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ಇದು ಅವರ ಮುಂದಿನ ಬೆಳವಣಿಗೆಗೆ ಬಹಳ ಮುಖ್ಯ. ಮಕ್ಕಳು ತೊದಲು ಮಾತನಾಡುವುದು ಒಂದು ವಯಸ್ಸಿನ ಹಂತದಲ್ಲಿ ಮಾತ್ರ. ಅದನ್ನು ಮೀರಿ ತೊದಲು ಮಾತುಗಳನ್ನು ಹಾಗೆ ಮುಂದುವರಿಸಿದರೆ ಏನೋ ಸಮಸ್ಯೆ ಎಂದರ್ಥ.

ಉಗ್ಗುವಿಕೆ ಸಮಸ್ಯೆ ಬರದಂತೆ ತಡೆಯುವುದು ಹೇಗೆ?

ಈ ಸಮಸ್ಯೆ ಬರದಂತೆ ತಡೆಯಲು ಮಕ್ಕಳ ಜೊತೆಗೆ ಮನೆಯಲ್ಲಿ ಯಾರಾದರೂ ಒಬ್ಬರು ಸದಾಕಾಲ ಸಂವಹನ ನಡೆಸುತ್ತಾ ಇರಬೇಕು. ಪೋಷಕರು ಮಕ್ಕಳೊಂದಿಗೆ ಹೆಚ್ಚು ಸಮಯ ಮಾತಾಡುತ್ತಾ ಕಳೆಯಬೇಕು. ಹೊರಗಡೆ ಅವರನ್ನು ಕರೆದುಕೊಂಡು ಹೋಗಿ ಪರಿಸರದ ಪರಿಚಯ ಮಾಡಿಸಬೇಕು. ಅವರು ಮಾತನಾಡಲು ಉತ್ತೇಜಿಸಬೇಕು. ಮಕ್ಕಳ ಜೊತೆ ಮಾತನಾಡುವಾಗ ನಿಧಾನ ಮತ್ತು ಮೆದು ಧ್ವನಿಯಲ್ಲಿ ಮಾತನಾಡುವುದು ಒಳಿತು. ಮಾತನಾಡಲು ಮಕ್ಕಳು ಸಮಯ ತಗೆದುಕೊಂಡರೆ ಯಾವುದೇ ತಪ್ಪಿಲ್ಲ ಎಂದು ಅರ್ಥಮಾಡಿಸಬೇಕು, ಮನೆಯಲ್ಲಿ ಶಾಂತ ಮತ್ತು ಸಮಾಧಾನಕರ ಪರಿಸರವನ್ನು ರೂಪಿಸಬೇಕು. ಇದು ಮಗುವನ್ನು ಮಾತನಾಡಲು ಆರಾಮದಾಯಕವಾಗಿಡುತ್ತದೆ.

ಉಗ್ಗುವಿಕೆಗೆ ಚಿಕಿತ್ಸೆ

ಇಂತಹ ಮಕ್ಕಳನ್ನು ಸೂಕ್ತ ವೈದ್ಯರಿಗೆ ಅಥವಾ ಸ್ಪೀಚ್ ಲಾಂಗ್ವೇಜ್ ಪೆಥಾಲಜಿಸ್ಟರಿಗೆ ತೋರಿಸಿ ಚಿಕಿತ್ಸೆ ಕೊಡಿಸಬೇಕು. ಅವರು ಕೆಲವು ಪರೀಕ್ಷೆಗಳನ್ನು ನಡೆಸಿ ಉಗ್ಗುವಿಕೆಯ ಸ್ಥಿತಿಯ ತೀವ್ರತೆಯನ್ನು ಮೌಲ್ಯ ಮಾಪನ ಮಾಡುತ್ತಾರೆ. ಸ್ಪೀಚ್ ಥೆರಪಿ ಅಗತ್ಯವಿದ್ದರೆ ವಾಕ್ ಶಕ್ತಿ ಉತ್ತಮಗೊಳಿಸಲು ಅಷ್ಟೇ ಅಲ್ಲದೆ ಉಗ್ಗುವಿಕೆಯ ಪ್ರತಿಯಾಗಿ ನಕಾರಾತ್ಮಕ ಪ್ರತಿಕ್ರಿಯೆಗಳಿಗೆ ಸರಿಯಾದ ಚಿಕಿತ್ಸಾ ಯೋಜನೆಯೊಂದನ್ನು ಆವಶ್ಯಕತೆಗಳಿಗೆ ಸರಿ ಹೊಂದುವಂತೆ ರೂಪಿಸುತ್ತಾರೆ. ಮಕ್ಕಳನ್ನು ಎಷ್ಟು ಬೇಗ ವೈದ್ಯರಲ್ಲಿಗೆ ತೋರಿಸಲು ಸಾಧ್ಯವೋ ಅಷ್ಟು ಬೇಗ ತೋರಿಸಿದರೆ ಉತ್ತಮ. ಪ್ರತಿ ಮಗುವಿನ ಸಮಸ್ಯೆಗೆ ಚಿಕಿತ್ಸೆಯು ವಿಭಿನ್ನವಾಗಿರುತ್ತದೆ. ಏಕೆಂದರೆ ಅವರ ಪರಿಸ್ಥಿತಿ ಒಂದೇ ಇದ್ದರೂ ಸಮಸ್ಯೆ ಬೇರೆಬೇರೆಯಾಗಿರುತ್ತದೆ. ಇದೊಂದು ಕಾಯಿಲೆಯಲ್ಲ. ಸರಿಯಾಗಿ ಮಾತನಾಡಲು ಆಗದಿರುವ ಸ್ಥಿತಿ ಮಾತ್ರ ಎಂದು ನಾವು ಮೊದಲು ಅರ್ಥಮಾಡಿಕೊಳ್ಳಬೇಕು.

ಉಗ್ಗುವಿಕೆಗೆ ಸ್ಪೀಚ್ ಥೆರಪಿ ಮುಖ್ಯ ಚಿಕಿತ್ಸೆಯಾಗಿದೆ. ಮಕ್ಕಳಲ್ಲಿ ಇದು ಕಲಿಕೆ ಮತ್ತು ಚಟುವಟಿಕೆಗಳನ್ನು ಒಳಗೊಂಡಿದೆ. ಉಗ್ಗುವಿಕೆ/ತೊದಲುವಿಕೆಯ ಲಕ್ಷಣಗಳು ಸುಧಾರಿಸಲು ಸ್ಪೀಚ್ ಥೆರಪಿ ಸಹಾಯ ಮಾಡುತ್ತದೆ. ಪದಗಳ ಉಚ್ಚಾರಣೆಯನ್ನು ಸರಳಗೊಳಿಸುವ ಕೆಲವೊಂದು ಸುಲಭ ಮಾತಿನ ಅಭ್ಯಾಸಗಳನ್ನು ರೂಢಿಸಿಕೊಂಡು ದಿನನಿತ್ಯ ಅಭ್ಯಾಸ ಮಾಡುವುದನ್ನು ತಜ್ಞರು ಹೇಳಿಕೊಡುತ್ತಾರೆ. ಉಸಿರಾಟದ ಗತಿಯನ್ನು ನಿಯಂತ್ರಿಸುವುದನ್ನು ರೂಢಿಸಿಕೊಳ್ಳುವುದು ಮತ್ತು ಓದುವಾಗ ಹಾಗೂ ಮಾತನಾಡುವಾಗ ಮೆಲುದನಿಯಲ್ಲಿ ನಿಧಾನವಾಗಿ ಮಾತನಾಡುವುದನ್ನು ಹೇಳಿಕೊಟ್ಟು ಆದಷ್ಟು ಈ ಸಮಸ್ಯೆ ನಿರ್ವಹಿಸುವುದನ್ನು ಅವರು ಕಲಿಸುತ್ತಾರೆ. ಜೊತೆಗೆ ಆತಂಕ, ಒತ್ತಡ ಅಥವಾ ಖಿನ್ನತೆಯಂತಹ ಪರಿಸ್ಥಿತಿಗಳನ್ನು ನಿಭಾಯಿಸುವುದನ್ನು ಹೇಳಿಕೊಡುತ್ತಾರೆ.

ಉಗ್ಗುವಿಕೆ ಒಂದು ಗಮನಾರ್ಹ ಸಮಸ್ಯೆಯಾಗಿರುವುದರಿಂದಲೇ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮತ್ತು ಚಿಕಿತ್ಸೆಯ ಮಹತ್ವವನ್ನು ಅರ್ಥ ಮಾಡಿಸಲು 1998ರಿಂದ ಈಚೆಗೆ ಪ್ರತಿ ವರ್ಷ ಅಕ್ಟೋಬರ್ 22ರಂದು ವಿಶ್ವ ಉಗ್ಗುವಿಕೆ ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತಿದೆ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com