ಸಂಪತ್ತು ಸೃಷ್ಟಿ ಮಾಡುವುದು ಹೇಗೆ? ಈ ಸೂತ್ರಗಳನ್ನು ಪಾಲಿಸಿ...

ಹಣಕ್ಲಾಸು-390-ರಂಗಸ್ವಾಮಿ ಮೂಕನಹಳ್ಳಿ
ಸಂಪತ್ತು ಸೃಷ್ಟಿ (ಸಾಂಕೇತಿಕ ಚಿತ್ರ)
ಸಂಪತ್ತು ಸೃಷ್ಟಿ (ಸಾಂಕೇತಿಕ ಚಿತ್ರ)

ಸಂಪತ್ತನ್ನು ಸೃಷ್ಟಿಸುವುದು ಹೇಗೆ? ಸಂಪತ್ತು ಸೃಷ್ಟಿಸಲು ಏನಾದರೂ ಸ್ಟೆಪ್ ಬೈ ಸ್ಟೆಪ್ ಗೈಡ್ ಏನಾದರೂ ಇದೆಯೇ? ಎನ್ನುವ ಪ್ರಶ್ನೆ ಸಂಪತ್ತು ಸೃಷ್ಟಿಸಲು ಬಯಸುವ ಪ್ರತಿಯೊಬ್ಬರಲ್ಲೂ ಉಂಟಾಗುವ ಪ್ರಶ್ನೆ. ಹೀಗೆ ಮಾಡಿದರೆ ಹೀಗಾಗುತ್ತದೆ, ಇಂತಹುದೇ ಫಲಿತಾಂಶ ದೊರೆಯುತ್ತದೆ ಎಂದು ಹೇಳಲು ಇದು ವಿಜ್ಞಾನವಲ್ಲ ಅಥವಾ ಐಟಿ ಕ್ಷೇತ್ರದಲ್ಲಿ ಬರೆಯುವ ಕೋಡ್ ಕೂಡ ಅಲ್ಲ.

ಗಮನಿಸಿ ಅಲ್ಲೆಲ್ಲಾ ನಿಗದಿತ ಫಲಿತಾಂಶ ಸಿಗುತ್ತದೆ. ಏಕೆಂದರೆ ಅದು ವಿಜ್ಞಾನ. ಅಲ್ಲಿ ಎರಡು ಪ್ಲಸ್ ಎರಡು ನಾಲ್ಕು ಬಿಟ್ಟು ಬೇರೇನಾಗಲು ಸಾಧ್ಯವಿಲ್ಲ. ಆದರೆ ಬದುಕು ಹಾಗಲ್ಲ. ಇಲ್ಲಿ ಅದು 22, 222 ಅಥವಾ ಇನ್ನೇನು ಬೇಕಾದರೂ ಆಗಬಹುದು. ಸಮಾಜದಲ್ಲಿ, ಬದುಕಿನಲ್ಲಿ ಆಯಾಮಗಳ ಪಾತ್ರ ಬಹಳ ದೊಡ್ಡದು. ಹಾಗಾದರೆ ಸಂಪತ್ತು ಸೃಷ್ಟಿಸಲು ದಾರಿಯಿಲ್ಲವೇ. ಇದೆ. ಹಂತ ಹಂತವಾಗಿ ವೆಲ್ತ್ ಕ್ರಿಯೇಷನ್ ಮಾಡುವುದಕ್ಕೆ ಒಂದಷ್ಟು ದಾರಿಯಿದೆ. ಅವೇನು ಎನ್ನುವುದನ್ನು ನೋಡೋಣ.

ಎಲ್ಲಕ್ಕೂ ಮೊದಲಿಗೆ ವೆಲ್ತ್ ಕ್ರಿಯೇಟ್ ಮಾಡಬೇಕೆನ್ನುವ ಮನಸ್ಥಿತಿ ಬಹಳ ಮುಖ್ಯ: ಬಡತನ ಮತ್ತು ಸಿರಿತನ ಎರಡೂ ಮನಸ್ಥಿತಿಗಳು. ಶ್ರೀಮಂತರಾಗಬೇಕು ಎಂದು ನಿರ್ಧರಿಸಿ ಆ ದಾರಿಯಲ್ಲಿ ನಡೆಯಲು ಶುರು ಮಾಡಿದರೆ ಶ್ರೀಮಂತರಾಗುವುದನ್ನು ತಪ್ಪಿಸಲಾಗುವುದಿಲ್ಲ. ನಮ್ಮ ಹುಟ್ಟು, ನಮ್ಮ ಪರಿಸರ ನಮ್ಮಲ್ಲಿ ಕೆಲವೊಂದು ಭಾವನೆಯನ್ನು ಭಿತ್ತಿರುತ್ತವೆ ಅದನ್ನು ಮೀರುವುದು, ಸಮಾಜದ ರಿವಾಜುಗಳನ್ನು ಮೀರುವುದು ಸವಾಲಿನ ಕೆಲಸ ಎನ್ನಿಸುತ್ತದೆ. ಒಮ್ಮೆ ನಾವು ಆ ಪರಿಧಿಯನ್ನು ದಾಟಿದರೆ ಸಿರಿವಂತಿಕೆಗೆ ಬೇಕಾದ ಮನಸ್ಥಿತಿ ನಮ್ಮದಾದರೆ ಅಲ್ಲಿಗೆ ಅರ್ಧ ಕೆಲಸ ಮುಗಿದಂತೆ. ನಡೆಯಲು ಪ್ರಾರಂಭಿಸಿದರೆ ದಾರಿ ತಾನಾಗೇ ತೆಗೆದುಕೊಳ್ಳುತ್ತದೆ. ಒಮ್ಮೆ ನಾನು ಸ್ಥಿತಿವಂತನಾಗಬೇಕು ಎನ್ನುವ ಮನಸ್ಸು ಮಾಡಿ ನೋಡಿ. ಮಿಕ್ಕದ್ದು ಮನಸ್ಸು ಸೃಷ್ಟಿಸುತ್ತಾ ಹೋಗುತ್ತದೆ.

ಈಗ ನಿಮ್ಮಲ್ಲಿ ಒಂದು ಪ್ರಶ್ನೆ ಉದ್ಭವಾಗಿರಬಹುದು. ಇದು ಇಷ್ಟೊಂದು ಸರಳವಾಗಿದ್ದರೆ ಜಗತ್ತಿನ ಬಹುತೇಕ ಜನ ಹಣವಿಲ್ಲ ಎಂದು ಕೊರಗುವುದೇಕೆ? ಮನಸ್ಥಿತಿ ಬದಲಿಸಿಕೊಂಡು ಶ್ರೀಮಂತರಾಗಬಹುದಲ್ಲ? ಯಾವುದನ್ನೇ ಆಗಲಿ ಪ್ರೀತಿಸುವುದಕ್ಕೂ, ತೀವ್ರವಾಗಿ ಬಯಸುವುದಕ್ಕೂ ವ್ಯತ್ಯಾಸವಿದೆ. ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ. ಅರ್ಥವಿಷ್ಟೆ ತೀವ್ರತೆ ಕೆಲಸದ ರೂಪದಲ್ಲಿ ವ್ಯಕ್ತವಾಗಬೇಕು. ನಾವು ಈ ದಾರಿಯಲ್ಲಿ ಪ್ರಾರಂಭಿಸಿದ ನಡಿಗೆ ಒಂದೇ ದಿನದಲ್ಲಿ ಅಥವಾ ಕೆಲವು ವಾರದಲ್ಲಿ ಫಲಿತಾಂಶ ನೀಡುವುದಿಲ್ಲ. ಕನಸು -ಗುರಿ ಬದಲಾಗದೆ ಆ ನಿಟ್ಟಿನಲ್ಲಿ ಸಾಗುವ ನಮ್ಮ ನಡಿಗೆ ಖಂಡಿತ ಅಂದುಕೊಂಡ ಫಲಿತಾಂಶ ಕೊಡುತ್ತದೆ.

 • ಪ್ರತಿ ಹೆಜ್ಜೆಯನ್ನೂ ಪ್ಲಾನ್ ಮಾಡಿ: ಪ್ಲಾನ್ ಎಂದರೆ ನನ್ನ ಪ್ರಕಾರ ನಮ್ಮ ಕನಸನ್ನು ಮುಟ್ಟಲು ಸಾಗುವ ದಾರಿ. ನಮ್ಮ ಗಮ್ಯವನ್ನು ತಲುಪಲು ಒಂದಲ್ಲ ಹತ್ತು ದಾರಿಯಿರುತ್ತದೆ. ನಾವು ಯಾವ ದಾರಿಯಲ್ಲಿ ಸಾಗಬೇಕು ಎನ್ನುವುದನ್ನು ನಿರ್ಧಾರ ಮಾಡಿ ಆ ದಾರಿಯಲ್ಲಿ ನಡೆಯುವುದು ಪ್ಲಾನ್ ಎನ್ನಿಸಿಕೊಳ್ಳುತ್ತದೆ. ನಮ್ಮ ಸಮಾಜವನ್ನು ಗಮನಿಸಿ ನೋಡಿ ಅವರಲ್ಲಿ ಕೇವಲ ಒಂದಷ್ಟು ಪ್ರತಿಶತ ಜನ ಮಾತ್ರ ಹಣದ ಬಗ್ಗೆ ಗೊಣಗಾಟ ಮಾಡುವುದಿಲ್ಲ. ಉಳಿದವರೆಲ್ಲಾ ನಿತ್ಯವೂ ಹಣದ ಬಗ್ಗೆ ಗೋಳಾಟ , ಗೊಣಗಾಟದಲ್ಲಿ ಬದುಕು ಕಳೆಯುತ್ತಾರೆ. ಹೀಗೇಕೆ ಆಗುತ್ತದೆ? ಏಕೆಂದರೆ ಅವರು ತಮ್ಮ ಮನಸ್ಸಿಗೆ ಸರಿಯಾದ ಮಾರ್ಗಸೂಚಿಯನ್ನು ನೀಡಿರುವುದಿಲ್ಲ. ಸಿರಿವಂತಿಕೆಯ ಬೆಟ್ಟವನ್ನು ಹತ್ತಲು ಪ್ರಾರಂಭಿಸಿದಾಗ ಪ್ರತಿ ಹೆಜ್ಜೆಯೂ ನಾವು ನಿರ್ಧರಿಸಬೇಕು..
 • ಬಜೆಟ್ ಸಿದ್ದಪಡಿಸಿ ಮತ್ತು ಅದನ್ನು ಪಾಲಿಸಿ: ಬಜೆಟ್ ಎಂದರೆ ಆದಾಯ ಮತ್ತು ವ್ಯಯದ ಪಟ್ಟಿ. ನಮ್ಮ ಆದಾಯವೇಷ್ಟು? ಖರ್ಚೆಷ್ಟು? ಆ ಖರ್ಚುಗಳಲ್ಲಿ ಆದ್ಯತೆಯ ಪಟ್ಟಿಯನ್ನು ಸಿದ್ದ ಪಡಿಸಿದ್ದೇವೆಯೇ? ಎನ್ನುವುದನ್ನು ಗಮನಿಸಬೇಕು. ಶ್ರೀಮಂತರು ತಮ್ಮ ಖರೀದಿಯನ್ನು, ಖರ್ಚನ್ನು ಮೊದಲೇ ನಿರ್ಧರಿಸಿರುತ್ತಾರೆ. ಸಾಮಾನ್ಯನ ಕಣ್ಣಿಗೆ ಅವರಿಗೆ ಬೇಕೆಂದದ್ದನ್ನು ಬೇಕಾದಾಗ ಕೊಳ್ಳುತ್ತಾರೆ ಎನ್ನಿಸುತ್ತದೆ. ಆದರೆ ಅವೆಲ್ಲವೂ ಪೂರ್ವನಿರ್ಧಾರಿತವಾಗಿರುತ್ತದೆ. ಇದರ ಜೊತೆಗೆ ಆದ್ಯತೆಯ ಪಟ್ಟಿಯನ್ನು ಅವರು ಮೀರಿ ಎಂದಿಗೂ ಖರ್ಚು ಮಾಡುವುದಿಲ್ಲ. ಅಂದರೆ ಅವರ ಸಂಸ್ಥೆಗೆ ಯಾವುದೋ ಮೆಷಿನರಿ ಬೇಕು ಅದು ಆದ್ಯತೆಯಲ್ಲಿ ಮೊದಲ ಸ್ಥಾನ ಪಡೆಯುತ್ತದೆ. ಅವರಿಗೆ ಬೇಕಾದ ಕಾರು ಅಥವಾ ಇನ್ನ್ಯಾವುದೋ ವಸ್ತು ನಂತರದ ಸ್ಥಾನ ಪಡ್ದೆಯುತ್ತದೆ. ಜೊತೆಗೆ ಯಾವ ತಿಂಗಳಲ್ಲಿ ಯಾವುದು ಕೊಳ್ಳಬೇಕು. ಆ ತಿಂಗಳಲ್ಲಿ ಖರ್ಚಿಗೆ ಎಷ್ಟು ಹಣವಿದೆ. ಹೀಗೆ ಪ್ರತಿಯೊಂದನ್ನು ಅವರು ಮೊದಲೇ ಲೆಕ್ಕಾಚಾರದ ಆಧಾರದ ಮೇಲೆ ನಿರ್ಧರಿಸುತ್ತಾರೆ. ಕ್ರೆಡಿಟ್ ಕಾರ್ಡ್ ನಲ್ಲಿ ಹಣ ಪಾವತಿ ಮಾಡುವುದು ಮನಸ್ಸಿನಲ್ಲಿ 'ನೋವು' ಉಂಟು ಮಾಡುವುದಿಲ್ಲ. ನಾವು ನಗದಿನ ರೂಪದಲ್ಲಿ ಕೊಡುವಾಗ ಮನಸ್ಸಿನಲ್ಲಿ ಸಣ್ಣ ನೋವುಂಟಾಗುತ್ತದೆ. ಹೆಚ್ಚು ಖರ್ಚು ಮಾಡುತ್ತಿದ್ದೇನೆ ಎನ್ನುವ ಭಾವನೆ ಬರುತ್ತದೆ. ಡಿಜಿಟಲ್ ಪೆಮೆಂಟ್ನಲ್ಲಿ ಆ ಭಾವನೆ ಕಣ್ಮರೆಯಾಗುತ್ತದೆ. ಹೀಗಾಗಿ ಇಂದಿನ ಕಾಲಘಟ್ಟದಲ್ಲಿ ಬಜೆಟಿಂಗ್ ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತದೆ.
 • ನಿತ್ಯ ಬದುಕಿನ ಜಂಜಾಟದಿಂದ ದೂರಾಗುವಷ್ಟು ಹಣ ಗಳಿಸಬೇಕು: ಶ್ರೀಮಂತರಾಗುವುದು ಅಥವಾ ಸ್ಥಿತಿವಂತರಾಗುವುದು ಕಷ್ಟವೇನೂ ಅಲ್ಲ. ಆದರೆ ನಮ್ಮ ಬಹುತೇಕ ವೇಳೆ ನಿತ್ಯದ ಬದುಕನ್ನು ಬದುಕಲು ಬೇಕಾಗುವ ವೇತನಕ್ಕೆ ದುಡಿಯಲು ಶುರು ಮಾಡಿದರೆ ನಮ್ಮ ಬಳಿ ಆಲೋಚಿಸಲು ಸಮಯವೆಲ್ಲಿ ಸಿಗುತ್ತದೆ ? ನಾವು ಮುಂದಿನ ದಿನಗಳ ಬಗ್ಗೆ ಕನಸ್ಸು ,ಆಲೋಚನೆ ಮಾಡದಿದ್ದರೆ ಅದನ್ನು ಸಾಕಾರಗೊಳಿಸುವ ದಾರಿಯಾದರೂ ಯಾವುದು ? ಹೀಗಾಗಿ ಕನಸು ಕಾಣಲು ಬೇಕಾಗುವ ಸಮಯವನ್ನು ಮೊದಲು ನಾವು ಗಳಿಸಿಕೊಳ್ಳಬೇಕು. ಇದಕ್ಕಾಗಿ ಏನು ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು. ನಾವು ಬಜೆಟ್ ಮಾಡಿಕೊಂಡಿದ್ದೆವು ಅಲ್ಲವೇ? ಅದರ ಪ್ರಕಾರ ಮಾಸಿಕ ಆದಾಯ ಎಷ್ಟು ಬೇಕಾಗುತ್ತದೆ ಎನ್ನುವುದು ತಿಳಿದುಬರುತ್ತದೆ. ಎಲ್ಲಕ್ಕೂ ಮೊದಲಿಗೆ ಆ ಹಣವನ್ನು ನಾವು ನಮ್ಮ ಸಮಯವನ್ನು ಒತ್ತೆಯಿಡದೆ ಅಥವಾ ಈಗ ವ್ಯಯಿಸುವ ಸಮಯಕ್ಕಿಂತ ಕಡಿಮೆ ಸಮಯವನ್ನು ವ್ಯಯಿಸಿ ಹೇಗೆ ಗಳಿಸುವುದು? ಎನ್ನುವುದರ ಬಗ್ಗೆ ಗಮನ ಹರಿಸಬೇಕು. ಆದಷ್ಟೂ ಕಡಿಮೆ ಹಣದಲ್ಲಿ ಬದುಕುವುದು , ತನ್ಮೂಲಕ ಯೋಚಿಸಲು ಹೆಚ್ಚು ಸಮಯವನ್ನು ಗಳಿಸಿಕೊಳ್ಳುವುವದನ್ನು ಮಾಡಬೇಕು. ಅರ್ಥವಿಷ್ಟೆ ಎರಡು ಅಥವಾ ಮೂರು ವರ್ಷ ನಮ್ಮ ಕನಸಿನ ಬೆನ್ನತ್ತಲು, ಯಶಸ್ಸು ಪಡೆಯಲು ಬೇಕು ಎಂದಾದರೆ ಅಷ್ಟು ವರ್ಷಕ್ಕೆ ಬೇಕಾಗುವ ಹಣದ ಲೆಕ್ಕಾಚಾರ ಮಾಡಿ ಅಷ್ಟು ಹಣವನ್ನು ಕ್ರೋಡೀಕರಿಸಿ ಇಡಬೇಕು.
 • ಆಟೋಮೇಟ್ ಸೇವಿಂಗ್ ಅಂಡ್ ಇನ್ವೆಸ್ಟ್ಮೆಂಟ್: ಇವತ್ತು ತಂತ್ರಜ್ಞಾನ ದೊಡ್ಡ ಮಟ್ಟದಲ್ಲಿ ನಮಗೆ ಲಭ್ಯವಿದೆ. ಅದನ್ನು ನಮ್ಮ ಉನ್ನತಿಗೆ, ಒಳಿತಿಗೆ ಬಳಸಿಕೊಳ್ಳುವ ಆಯ್ಕೆ ನಮಗಿದೆ. ನಮ್ಮ ಮಾಸಿಕ ಆದಾಯದ 20 ಅಥವಾ 30 ಪ್ರತಿಶತ ಹಣವನ್ನು ಆದಾಯ ಬ್ಯಾಂಕಿಗೆ ಬಂದ ಮರುಗಳಿಗೆ ಬೇರೊಂದು ಖಾತೆಗೆ ವರ್ಗಾವಣೆ ಮಾಡುವುದು ಅಥವಾ
 • ನಮ್ಮಿಚ್ಛೆಯ ಸಂಸ್ಥೆಯ ಮೇಲೆ ಹೂಡಿಕೆ ಮಾಡುವುದಕ್ಕೆ ಪೂರ್ವ ಅನುಮತಿ ನೀಡುವುದು ಮಾಡಬೇಕು. ಅಂದರೆ ಹಿಂದಿನ ಲೆಕ್ಕಾಚಾರ ಏನಿತ್ತು ಅದನ್ನು ಮರೆತು ಹೊಸ ಲೆಕ್ಕಾಚಾರಕ್ಕೆ ಹೊಂದಿಕೊಳ್ಳುವುದು. ಹಿಂದೆ ಆದಾಯ ಮೈನಸ್ ಖರ್ಚು, ಉಳಿದದ್ದು  ಉಳಿಕೆ ಎಂದಿತ್ತು. ಇವತ್ತು ಕಾಲಘಟ್ಟ ಬದಲಾಗಿದೆ. ಆದಾಯ ಮೈನಸ್ ಉಳಿಕೆ , ಉಳಿದದ್ದು ಖರ್ಚು. ನಿಮಗೆಲ್ಲಾ ಒಂದು ರಹಸ್ಯವನ್ನು ಹೇಳುತ್ತೇನೆ. ಇದು ಸಾಧ್ಯವೇ? ಎನ್ನಿಸಬಹುದು. ಆದರೆ ಇದು ಸಾಧ್ಯ. ಅದಕ್ಕೆ ಬೇಕಾಗಿರುವುದು ಮನೋಬಲ.
 • ಸಾಲದ ಮೇಲೆ ನಿಗಾ ಇರಲಿ: ಸಾಲ ಎನ್ನುವುದು ಸ್ಪೀಡ್ ಬ್ರೇಕರ್ ಇದ್ದ ಹಾಗೆ, ಅದು ನಮ್ಮ ಅಭ್ಯುಧಯಕ್ಕೆ ಅಡಚಣೆ ಉಂಟು ಮಾಡುವ ಅಂಶ. ಇಂದಿಗೆ ಸಾಲವಿಲ್ಲದೆ ಅಭಿವೃದ್ಧಿ ಎಲ್ಲಿ ಸಾಧ್ಯ? ಸಾಲವಿಲ್ಲದೆ ಅಸೆಟ್ ಕ್ರಿಯೇಷನ್ ಹೇಗೆ ಸಾಧ್ಯ ಎನ್ನುವ ಮಟ್ಟಿಗೆ ಬದುಕು , ಸಮಾಜ ಬದಲಾಗಿ ಹೋಗಿದೆ. ಸಾಲವೇ ಹೊಸ ಹಣ. ಸಾಲವೇ ಸರ್ವಸ್ವ ಎನ್ನುವಂತಾಗಿದೆ. ಆದರೂ ನೀವು ಸೂಕ್ಷ್ಮವಾಗಿ ಗಮನಿಸಿ ನೋಡಿ ಸಾಲವಿಲ್ಲದೆ ಕಟ್ಟಿದ ಉದ್ಯಮಗಳೂ ಇವೆ. ಆದರೆ ಇಂದಿನ ಕಾಲಘಟ್ಟದಲ್ಲಿ ಯಾವುದು ಸಹಜ ಸಾಮಾನ್ಯ ಎನ್ನಿಸುತ್ತು ಅದು ಕೂಡ ವಾಹ್ ಎನ್ನುವ ಮಟ್ಟಕ್ಕೆ ಬಂದು ನಿಂತಿವೆ. ಸಾಲ ಎನ್ನುವುದು ಎರಡು ಅಲುಗಿನ ಖತ್ತಿ. ವಿಶೇಷ ಮುತವರ್ಜಿ ಅಗತ್ಯವಿದೆ.
 • ಸದಾ ಮಾಡುವ ಕೆಲಸದಿಂದ ಹೆಚ್ಚಿನ ಲಾಭ ಮಾಡುವುದು ಹೇಗೆ ಎನ್ನುವ ಯೋಚನೆಯಿರಲಿ: ಬದುಕು ಎಂದ ಮೇಲೆ ಎಲ್ಲವನ್ನೂ ಲಾಭ ನಷ್ಟದಲ್ಲಿ ಅಳೆಯಲು ಆಗುವುದಿಲ್ಲ ಎನ್ನುವುದು ಒಪ್ಪುವ ಮಾತು. ಆದರೆ ಸಿರಿವಂತಿಕೆಗೆ ಇರುವ ಹೆಜ್ಜೆಗಳಲ್ಲಿ ಕೆಲವು ಕಠೋರ ಎನ್ನಿಸುತ್ತವೆ. ಅವುಗಳನ್ನು ಪೂರ್ಣವಾಗಿ ವಿವರಿಸಲು ಕೂಡ ಮುಜುಗರವೆನ್ನಿಸುತ್ತದೆ. ಏಕೆಂದರೆ ನಮ್ಮದು ಅತಿ ಭಾವುಕ ಸಮಾಜ. ಇಲ್ಲಿ ಎಲ್ಲರಿಗೂ ಹಣವಂತರಾಗಬೇಕು ಎನ್ನುವ ಆಸೆಯಿದೆ, ಅದರ ಜೊತೆಗೆ ಸಿರಿವಂತರು ಎಂದರೆ ಕೆಟ್ಟವರು ಎನ್ನುವ ಭಾವನೆ ಕೂಡ ಹೆಚ್ಚಾಗಿದೆ. ಮನಸ್ಸಿನಲ್ಲಿ ಒಪ್ಪಿದರೂ ಅದನ್ನು ಸಮಾಜದ ಮುಂದೆ ಒಪ್ಪುವುದಕ್ಕೆ ಯಾರೂ ಸಿದ್ಧವಿರುವುದಿಲ್ಲ. ನೀವು ನಮ್ಮ ದೇಶದಲ್ಲಿರುವ ಯಾವುದೇ ವ್ಯಾಪಾರಸ್ಥ ಜನಾಂಗವನ್ನು ಗಮನಿಸಿ ನೋಡಿ ಅವರೆಲ್ಲರೂ ಸಮಾಜದ ಇತರ ವರ್ಗಗಳಿಗಿಂತ ಹೆಚ್ಚು ಸ್ಥಿತಿವಂತರಾಗಿರುತ್ತಾರೆ. ಅವರ ಮೂಲಭೂತ ನಿಯಮಗಳು ಸರಳವಾಗಿವೆ, ಅಲ್ಲಿ ಭಾವನೆಗೆ ಅವಕಾಶವಿಲ್ಲ.
 • ಟ್ರಸ್ಟ್ ನೋ ಒನ್: ಯಾರನ್ನೂ ಪೂರ್ಣವಾಗಿ ನಂಬಬೇಡಿ. ವ್ಯಕ್ತಿಯನ್ನು ನಂಬುವುದಕ್ಕಿಂತ ಸಿಸ್ಟಮ್, ನಾವೇ ಸೃಷ್ಟಿಸಿದ ನಿಯಮಾವಳಿಗಳನ್ನು ನಂಬಬೇಕು. ತೀರಾ ಆಪ್ತ ವಲಯಕ್ಕೆ, ವ್ಯವಹಾರದ ಗುಟ್ಟುಗಳು ತಿಳಿದುಕೊಳ್ಳುವ ಹಂತಕ್ಕೆ ಯಾರನ್ನೇ ಆಗಲಿ ಬಿಟ್ಟುಕೊಳ್ಳುವ ಮುಂಚೆ ಗಮನವಿರಲಿ .
 • ಸದಾ ಈ ಕಾರ್ಯ ಮಾಡುವುದರಿಂದ ನನಗೇನು ಲಾಭ ಎನ್ನುವ ಪ್ರಶ್ನೆ ಸಿದ್ಧವಿರಲಿ: ಕೆಲವೊಮ್ಮೆ ಕೆಲವು ಕಾರ್ಯಗಳಿಂದ ಹಣ ಗಳಿಸಿದೆ ಹೋಗಬಹುದು. ಆದರೆ ಲಾಭ ಎಂದರೆ ಕೇವಲ ಹಣ ಎಂದಷ್ಟೇ ಅಲ್ಲ. ಸೋಶಿಯಲ್ ಕ್ಯಾಪಿಟಲ್, ಸೋಶಿಯಲ್ ಕರೆನ್ಸಿ ನಿಜವಾದ ಹಣಕ್ಕಿಂತ ಅತ್ಯಂತ ಪ್ರಬಲವಾದದ್ದು. ಹೀಗಾಗಿ ಸಿರಿವಂತರು ಅಥವಾ ಸಿರಿವಂತರಾಗಲು ಬಯಸುವವರು ಮಾಡುವ ಎಲ್ಲಾ ಕಾರ್ಯದಲ್ಲೂ ಇದರಲ್ಲಿ ನನಗೇನಿದೆ ಎಂದು ಕೇಳಿಕೊಳ್ಳಬೇಕು. ಕೇಳಿಕೊಳ್ಳುತ್ತಾರೆ. ಅದಕ್ಕೆ ಅವರು ಆ ಮಟ್ಟವನ್ನು ಮುಟ್ಟಿರುತ್ತಾರೆ.
 • ಭಾವನೆ ಮತ್ತು ಬಿಸಿನೆಸ್ ಮಿಕ್ಸ್ ಮಾಡುವಂತಿಲ್ಲ: ವ್ಯವಹಾರ ಎನ್ನುವುದು ಪಕ್ಕಾ ಕಮರ್ಷಿಯಲ್. ಇಲ್ಲೇನಿದ್ದರೂ ವ್ಯವಹಾರವೇ ಮುಖ್ಯ. ಗೋಳಾಟಕ್ಕೆ, ಭಾವನೆಗೆ, ಮನಕರಗಿಸುವ ಕಥೆಗಳಿಗೆ ಇಲ್ಲಿ ಎಂದಿಗೂ ಜಾಗವಿರಬಾರದು. ರೂಥ್ಲೆಸ್ ಎನ್ನಿಸುತ್ತದೆ. ಆದರೆ ನೀವು ಒಮ್ಮೆ ಭಾವನೆಗೆ ಬಲಿಯಾದರೆ ಅಲ್ಲಿಗೆ ಕಥೆ ಮುಗಿಯಿತು.
 • ಒಂದೇ ಆದಾಯದ ಮೂಲಕ್ಕೆ ಜೋತು ಬೀಳುವುದು ಬೇಡ: ನೀವು ನಮ್ಮ ಸುತ್ತಮುತ್ತಲಿರುವ ಶ್ರೀಮಂತರನ್ನು ಗಮನಿಸಿ ನೋಡಿ. ಅವರೆಲ್ಲರೂ ಒಂದಲ್ಲ ಹತ್ತು ವಿವಿಧ ವ್ಯಾಪಾರದಲ್ಲಿ ತೊಡಗಿಕೊಂಡಿರುತ್ತಾರೆ. ಹೀಗಾಗಿ ಅವರ ಆದಾಯದ ಮೂಲ ಕೂಡ ಒಂದಲ್ಲ ಹತ್ತು! ಒಂದು ವ್ಯಾಪಾರ ಸೋತರೆ, ಇನ್ನೊಂದು ವ್ಯಾಪಾರ ಅದನ್ನು ಹೇಗೋ  ಬ್ಯಾಲೆನ್ಸ್ ಮಾಡುತ್ತದೆ. ಅಲ್ಲದೆ ಆ ವ್ಯಾಪಾರಗಳು ಒಂದಕ್ಕೊಂದು ಯಾವುದೇ ರೀತಿಯ ಸಂಬಂಧವಿಲ್ಲದ ತೀರಾ ವಿಭಿನ್ನ ಲೈನ್ ಆಗಿರುತ್ತದೆ. ಅವರು ತಮ್ಮ ಹೂಡಿಕೆಯನ್ನು ಡೈವರ್ಸಿಫೈ ಮಾಡುತ್ತಾರೆ. ಹೆಚ್ಚು ಲಾಭವಿದೆ ಎಂದು ಒಂದೇ ಕಡೆ ಎಲ್ಲವನ್ನೂ ತೊಡಗಿಸುವುದಿಲ್ಲ.
 • ಗಳಿಕೆಯಲ್ಲಿ ಎಂದಿಗೂ ಇಳಿಕೆಯಾಗಬಾರದು: ಇದೊಂದು ಮಂತ್ರ. ಗಳಿಕೆಯಲ್ಲಿ ಎಂದಿಗೂ ಇಳಿಕೆಯಾಗಬಾರದು. ಸದಾ ವ್ಯಾಪಾರ ಹಸಿರಾಗಿರಬೇಕು. ಹಳೆಯ ಗ್ರಾಹಕರು ಹೋಗುವ ಮುನ್ನ ಹೊಸ ಗ್ರಾಹಕರನ್ನು ಸೃಷ್ಟಿ ಮಾಡಿಕೊಳ್ಳುವ ಕಲೆ, ಮಾರ್ಕೆಟಿಂಗ್ ತಂತ್ರಗಾರಿಕೆ ಇಂದಿನ ದಿನದ ಅತ್ಯಗತ್ಯ ವಿಷಯವಾಗಿದೆ. ಗಳಿಕೆಯಲ್ಲಿ ಕುಸಿತ ಕಂಡರೆ ಮತ್ತು ಅದರ ಬಗ್ಗೆ ಗಮನ ಒಂದಂಶ ಕಡಿಮೆಯಾದರೂ ಅದು ಸೈಕ್ಲಿಕಲ್ ಎಫೆಕ್ಟ್ ಗೆ ದಾರಿ ಮಾಡಿಕೊಡುತ್ತದೆ.
 • ಕಲಿಕೆ ಸದಾ ಬೆನ್ನಿಗಿರಲಿ: ನೀವು ಯಾವುದೇ ಒಬ್ಬ ಯಶಸ್ವಿ ವ್ಯಕ್ತಿಯನ್ನು ಗಮನಿಸಿ ನೋಡಿ, ಅವರಲ್ಲಿ ಕಲಿಯುವ ಹಂಬಲ ಬತ್ತುವುದಿಲ್ಲ. ಎಷ್ಟೆಲ್ಲಾ ಹಣ, ಹೆಸರು, ಕೀರ್ತಿ ಸಿಕ್ಕರೂ ಅವರ ಕಲಿಕೆಯ ಹಸಿವು ಕಡಿಮೆಯಾಗುವುದಿಲ್ಲ. ಅದು ಅವರ ಯಶಸ್ಸಿನ ಗುಟ್ಟು. ಶ್ರೀಮಂತರಾಗುವುದು ಮತ್ತು ನಂತರದ ದಿನಗಳಲ್ಲಿ ಆ ಜಾಗದಲ್ಲಿ ಉಳಿದುಕೊಳ್ಳುವುದು ಸಾಧ್ಯವಾಗುವುದು ಕಲಿಕೆಯಿಂದ ಮಾತ್ರ ಸಾಧ್ಯ. ಇದೊಂದು ನಿರಂತರ ಪ್ರಕ್ರಿಯೆ. ಕಲಿಕೆಯಿಂದ ವಿಮುಖರಾಗುವಂತಿಲ್ಲ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com