ಆರ್ಥಿಕ ಶಿಸ್ತು (ಸಾಂಕೇತಿಕ ಚಿತ್ರ)
ಆರ್ಥಿಕ ಶಿಸ್ತು (ಸಾಂಕೇತಿಕ ಚಿತ್ರ)

ಅನವಶ್ಯಕವಾಗಿ ಹಣ ಪೋಲಾಗುವುದನ್ನು ತಪ್ಪಿಸುವ 10 ಸೂತ್ರಗಳು (ಹಣಕ್ಲಾಸು)

ಹಣಕ್ಲಾಸು-385-ರಂಗಸ್ವಾಮಿ ಮೂಕನಹಳ್ಳಿ

ಹಣದ ಪ್ರಾಮುಖ್ಯತೆಯನ್ನ ನಾವು ಹಣಕ್ಲಾಸು ಅಂಕಣದ ಮೂಲಕ ಒಂದಷ್ಟು ಅರಿತುಕೊಂಡಿದ್ದೇವೆ. ಇನ್ನೊಂದು ಪ್ರಮುಖ ಕಲಿಕೆಯನ್ನಕೂಡ ನಾವು ಮಾಡಬೇಕಿದೆ. ಅದೇ ಅರ್ಥ ಶೌಚ ಅಥವಾಹಣಕಾಸು ಶಿಸ್ತು, ಫೈನಾನ್ಸಿಯಲ್ ಡಿಸಿಪ್ಲಿನ್. ಎಲ್ಲಾ ಶಿಸ್ತು ಇದ್ದು, ಆರ್ಥಿಕ ಶಿಸ್ತು ಇಲ್ಲದಿದ್ದರೆ, ಅಗಾಧವಾಗಿ ಕಟ್ಟಿ ನಿಲ್ಲಿಸಿದ ಸೌಧವೂ ಕೂಡ ಅರೆಗಳಿಗೆಯಲ್ಲಿ ನೆಲಸಮವಾಗುತ್ತದೆ. ವರ್ಷಗಳ ಕಠಿಣ ಪ್ರಯತ್ನ, ಯಶಸ್ಸು ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ, ಪ್ರಯೋಜನಕ್ಕೆ ಬಾರದೆ ಹೋಗುತ್ತದೆ. ಇದರ ಬಗ್ಗೆ ಸಂಸ್ಕೃತ ಶ್ಲೋಕವೊಂದರಲ್ಲಿ 

ಸರ್ವೇಷಾಣಾಂ ಹಿ ಶೌಚಾನಾಂ ಅರ್ಥಶೌಚಂ ಪರಂಸ್ಮೃತಂ |
ಯೋ ಅರ್ಥೇ ಶುಚಿಃ ಮೃತ್ವಾರಿ ಶುಚಿಃರ್ನಶುಚಿಃ |

ಎಲ್ಲಾ ರೀತಿಯ ಶೌಚಗಳಲ್ಲಿ ಹಣದ ವಿಚಾರದ ಶುಚಿತ್ವವು ಅತ್ಯುತ್ತಮವಾದದ್ದು. ಕೇವಲ ಮಣ್ಣು ಮತ್ತು ನೀರಿನಿಂದ ಆಗುವ ಶುಚಿಯ ಶುಚಿತ್ವವಲ್ಲ. ಅಂದರೆ ಬೇರೆಲ್ಲಾ ಶುಚಿತ್ವಕ್ಕಿಂತ ಹಣಕಾಸು ಶಿಸ್ತು, ಶುಚಿತ್ವ ಅತ್ಯಂತ ಪ್ರಮುಖವಾದದ್ದು ಎಂದು ಹೇಳಲಾಗಿದೆ. ಉತ್ತಮ ಬದುಕಿಗೆ ಶಿಸ್ತು ಬಹಳ ಮುಖ್ಯ. ಶಿಸ್ತುಗಳಲ್ಲಿ ಅನೇಕ ವಿಧಗಳಿವೆ. ಅವೆಲ್ಲಕ್ಕೂ ಕಳಶಪ್ರಾಯವಾಗಿ ಹಣಕಾಸಿನ ಶಿಸ್ತು ಪ್ರಾಮುಖ್ಯತೆಯನ್ನ ಪಡೆದಿದೆ. ಈ ರೀತಿಯ ಆರ್ಥಿಕ ಶಿಸ್ತು ಅದೇಕೆ ಮುಖ್ಯವಾಗುತ್ತದೆ ಎನ್ನುವುದಕ್ಕೆ ಅನೇಕಕಾರಣಗಳಿವೆ. ಅವುಗಳಲ್ಲಿ ಕೆಲವನ್ನ ಪಟ್ಟಿ ಮಾಡೋಣ. ನೆನಪಿರಲಿ ಇದು ವ್ಯಕ್ತಿ ಮತ್ತು ಸಂಸ್ಥೆ ಎರಡಕ್ಕೂ ಅನ್ವಯವಾಗುತ್ತದೆ. 

  1. ಹೆಸರಿಸಲು, ಲೆಕ್ಕಕಿಡಲು ಬಾರದ ಖರ್ಚುಗಳು ಇಲ್ಲವಾಗುತ್ತವೆ: ನಮ್ಮ ಮಾಸಿಕ ಆದಾಯ, ಅಥವಾ ಸಂಸ್ಥೆಯ ಆದಾಯ ಮತ್ತು ವ್ಯಯವನ್ನ ಬರೆದಿಡುವ ಅಭ್ಯಾಸ ಮಾಡಿಕೊಳ್ಳಬೇಕು. ಇಂತಹ ಆಯವ್ಯಯ ಪಟ್ಟಿಯನ್ನ ತಯಾರಿಸುವ ಕಾರಣ ನಮ್ಮ ಖರ್ಚುಗಳು ಯಾವುವು ಎನ್ನುವುದು ನಮಗೆ ತಿಳಿಯುತ್ತದೆ. ಜೊತೆಗೆ ಯಾವುದಕ್ಕೆ ಎಷ್ಟು ಖರ್ಚು ಮಾಡುತ್ತಿದ್ದೇವೆ. ಅದನ್ನ ಉಳಿಸಲು ಸಾಧ್ಯವೇ ಇತ್ಯಾದಿ ನಿಯಂತ್ರಣಗಳನ್ನ ನಾವು ಮಾಡಿಕೊಳ್ಳಲು ಸುಲಭವಾಗುತ್ತದೆ. ಶಿಸ್ತುಬದ್ಧವಾದ ಲೆಕ್ಕ ಪತ್ರವನ್ನ ಇಡದೆ ಹೋದರೆ ಆಗ ನಮಗೆ ಗೊತ್ತಿಲ್ಲದೇ ಎಷ್ಟೋ ಖರ್ಚು ಆಗಿರುತ್ತದೆ. ಹಲವು ಬಾರಿ ಅವು ಅವಶ್ಯಕವಾದ ಖರ್ಚು ಕೂಡ ಆಗಿರುವುದಿಲ್ಲ. ನಿಯಂತ್ರಣವಿರದ ಕಾರಣ ಗೊತ್ತಿಲ್ಲದೇ ಅನವಶ್ಯಕವಾಗಿ ಖರ್ಚಾಗಿರುತ್ತದೆ. ಹಣವನ್ನ ಬಿಸಾಡಿದರೂ ಲೆಕ್ಕಹಾಕಿ ಬಿಸಾಡು ಎನ್ನುವ ಮಾತಿದೆ. ಹೀಗೆ ಪ್ರತಿಯೊಂದನ್ನೂ ಶಿಸ್ತಿನಿಂದ ಲೆಕ್ಕ ಬರೆದರೆ ಗೊತ್ತಿಲ್ಲದ ಖರ್ಚುಗಳು ನಮ್ಮ ಬಳಿಯೂ ಸುಳಿಯುವುದಿಲ್ಲ, ಹಣವೂ ಉಳಿತಾಯವಾಗುತ್ತದೆ. 
  2. ಬೇಡದ ಖರೀದಿ ತಪ್ಪುತ್ತದೆ, ಇರುವ ವಸ್ತುಗಳ ಸರಿಯಾದ ಬಳಕೆಯಾಗುತ್ತದೆ: ಹಣವು ಎಲ್ಲಿ ವ್ಯಯವಾಗಿದೆ, ಏಕೆ ವ್ಯಯವಾಗಿದೆ ಎನ್ನುವದನ್ನ ದಾಖಲಿಡುವ ಕಾರಣ ನಮ್ಮ ಬಳಿ ಏನಿದೆ ಎನ್ನುವ ಅರಿವು ಹೆಚ್ಚಾಗುತ್ತದೆ. ಹೊಸದಾಗಿ ಖರೀದಿಸುವುದು ತಪ್ಪುತ್ತದೆ. ಮತ್ತು ಎಲ್ಲೂ ಮನೆಯ /ಸಂಸ್ಥೆಯ ಮೂಲೆಯಲ್ಲಿದ್ದ ವಸ್ತುವಿನ ಉಪಯೋಗ ಕೂಡ ಆಗುತ್ತದೆ. ಉದಾಹರಣೆಗೆ ಕಳೆದ ತಿಂಗಳು ಮಕ್ಕಳಿಗೆ ಕೊಂಡ ಆಟದ ಸಾಮಾನು ಮರೆತು ಅಲ್ಲೆಲ್ಲೂ ಮನೆಯ ಮೂಲೆಯಲ್ಲಿ ಹುದುಗಿರಬಹುದು. ಮಕ್ಕಳು ಆಟದ ಸಾಮಾನು ಬೇಕು ಎಂದು ಕೇಳಿದಾಗ ಯಾವಾಗ ಕೊಂಡಿದ್ದೆವು, ಎಷ್ಟು, ಉಪಯೋಗವೇನು ಎಲ್ಲವೂ ನೆನಪಿಗೆ ಬರುತ್ತದೆ. ಹೊಸಖರೀದಿ ತಪ್ಪುತ್ತದೆ, ಕೊಂಡ ವಸ್ತುವಿನ ಬಳಕೆಯೂ ಆಗುತ್ತದೆ. ಇದು ಮನೆಗಳಲ್ಲಿ ಅಷ್ಟಾಗಿ ಆಗುವುದಿಲ್ಲ ಎಂದುಕೊಂಡರೂ ಈ ನಿಯಮ ಪಾಲನೆಯಿಂದ ಸಂಸ್ಥೆಯಲ್ಲಿ, ಅದರಲ್ಲೂ ಸ್ಟಾಕ್ ಮ್ಯಾನೇಜ್ಮೆಂಟ್ನಲ್ಲಿ ಬಹಳ ಸಹಕಾರಿಯಾಗುತ್ತದೆ. 
  3. ಹಣಕಾಸಿನ ಹರಿವು ಸುಗಮವಾಗಿರುತ್ತದೆ: ಎಲ್ಲಕ್ಕೂ ಬಜೆಟ್ ಮಾಡುವುದರಿಂದ ನಿಗದಿತ ಆದಾಯ ಮತ್ತು ನಿಗದಿತ ಖರ್ಚು ಗೊತ್ತಿರುತ್ತದೆ. ಹೀಗಾಗಿ ಅಂದಾಜಿಸಿದ ಕ್ಯಾಶ್ ಫ್ಲೋ ಸುಗಮವಾಗಿರುತ್ತದೆ. ಇದು ಒಂದು ಸಂಸ್ಥೆ ಅಥವಾ ಮನೆ ಸರಾಗವಾಗಿ ನಡೆಯಲು ಬಹಳ ಮುಖ್ಯ. ಹಣದ ಹರಿವು ಹೆಚ್ಚು ಕಡಿಮೆಯಾದರೆ, ಮಾಡಿದ ಎಲ್ಲಾ ಯೋಜನೆಗಳೂ ಕೂಡ ಬೇರೆ ದಾರಿಯನ್ನ ಹಿಡಿಯುತ್ತವೆ. ಹಣಕಾಸಿನ ಹರಿವು ಸರಾಗವಾಗಿದ್ದಷ್ಟೂ ಸಂಸ್ಥೆಯ ಬೆಳವಣಿಗೆ ಕೂಡ ಸರಾಗವಾಗುತ್ತದೆ. ಹಾಗೊಮ್ಮೆ ಅನಿರೀಕ್ಷಿತ ಖರ್ಚು ಬಂದರೂ ಅದನ್ನ ಕೂಡ ಅಂದಾಜಿಸಿರುವ ಕಾರಣ ಅಷ್ಟೇನೂ ಕಷ್ಟವಾಗಲಾರದು. ಬಜೆಟ್ ಮೀರಿದ ಅನಿರೀಕ್ಷಿತ ಖರ್ಚನ್ನಕೂಡ ಹಣಕಾಸಿನ ಹರಿವು ಚನ್ನಾಗಿದ್ದರೆ ತಡೆದುಕೊಳ್ಳುವ ಕ್ಷಮತೆ ಹೆಚ್ಚಿರುತ್ತದೆ. 
  4. ಹಾಕಿಕೊಂಡ ಗುರಿ ಮುಟ್ಟಲು ಸಹಕಾರಿ: ವೈಯಕ್ತಿಕ ಗುರಿ ಅಥವಾ ಸಂಸ್ಥೆಯ ಅಭಿವೃದ್ಧಿಯ ಗುರಿ ಯಾವುದೇ ಇರಲಿ, ಹಣಕಾಸು ಶಿಸ್ತು ಅದನ್ನ ನೆರವೇರಿಸಲು ಸಹಕಾರಿಯಾಗುತ್ತದೆ. ಟಾರ್ಗೆಟ್, ಎಸ್ಟಿಮೇಶನ್ ಮತ್ತು ಅದಕ್ಕೆ ಬೇಕಾದ ಹಣದ ಅಲೋಕೇಷನ್ ಸರಿಯಾಗಿದ್ದರೆ, ಹಾಕಿಕೊಂಡ ಗುರಿಯನ್ನ ಮುಟ್ಟಲು ಸಾಧ್ಯವಾಗುತ್ತದೆ. ನಾವು ಅಂದುಕೊಂಡ ಗುರಿಯನ್ನ ಮುಟ್ಟಲು ಸಾಧ್ಯವಾಗದಿದ್ದರೆ, ಅಥವಾ ಗುರಿಯಿಂದ ಅತ್ತಿತ್ತ ಹೋಗುತ್ತಿದ್ದರೆ ಎಲ್ಲಿ, ಏಕೆ ತಪ್ಪು ಹೋಗುತ್ತಿದ್ದೇವೆ ಎನ್ನುವುದನ್ನ ಕಂಡುಕೊಳ್ಳಲು ಕೂಡ ಇದು ಸಹಕಾರಿ, ಜೊತೆಗೆ ಮತ್ತೆ ಸರಿದಾರಿಯಲ್ಲಿ ನಡೆಯಲು ಕೂಡ ಇದು ಸಹಾಯ ಮಾಡುತ್ತದೆ. 
  5. ವ್ಯಕ್ತಿಗೆ ಅಥವಾ ಸಂಸ್ಥೆಗೆ ವಿಷನ್ ಬಹಳ ಮುಖ್ಯ: ಮುಂದಿನ ಹತ್ತಾರು ವರ್ಷದಲ್ಲಿ ಸಂಸ್ಥೆ ಯಾವ ಮಟ್ಟಕ್ಕೆ ಬೆಳೆದಿರಬೇಕು, ವೈಯಕ್ತಿಕವಾಗಿ ಯಾವ ಮಟ್ಟವನ್ನ ಮುಟ್ಟಿರಬೇಕು ಎನ್ನುವ ದೊಡ್ಡ ಗುರಿ, ಕನಸು ಸಾಕಾರವಾಗುವುದು ಹಣಕಾಸು ಶಿಸ್ತಿದ್ದಾಗ ಮಾತ್ರ ಸಾಧ್ಯ. ಗೆಲುವು ಎನ್ನುವುದು ಸಣ್ಣ ಸಣ್ಣಮಟ್ಟದಲ್ಲಿ ನಿತ್ಯವೂ ಸಿಗುತ್ತಾ ಹೋದರೆ ಆಗ ಅದು ಮುದೊಂದು ದಿನ ದೊಡ್ಡ ಮಟ್ಟದ ಯಶಸ್ಸು ಎನ್ನಿಸಿಕೊಳ್ಳುತ್ತದೆ. ಹೀಗೆ ನಿತ್ಯದ ಗುರಿಗಳನ್ನನಿಯಂತ್ರಣದಲ್ಲಿಟ್ಟು ಕೊಂಡು ಅಂದಿನ ಜಯಗಳಿಸಲು ಈ ಆರ್ಥಿಕ ಶಿಸ್ತು ಸಹಕಾರಿ ಅದು ದೊಡ್ಡ ಕನಸುಗಳನ್ನ, ವಿಷನ್ ಗಳನ್ನು ಪೂರ್ಣಗೊಳಿಸಲು ಕೂಡ ದೇಣಿಗೆ ನೀಡುತ್ತದೆ. 
  6. ಆರ್ಥಿಕ ಶಿಸ್ತು ವ್ಯಕ್ತಿಯ ಅಥವಾ ಸಂಸ್ಥೆಯ ವರ್ಚಸ್ಸು ಹೆಚ್ಚಿಸುತ್ತದೆ: ಕೊಟ್ಟ ಮಾತಿನಂತೆ ನಡೆಯುವುದು, ಹೇಳಿದ ಸಮಯಕ್ಕೆ ತಕ್ಕಂತೆ ಹಣಕಾಸು ವ್ಯವಹಾರ ಇಟ್ಟು ಕೊಳ್ಳುವುದು ವ್ಯಕ್ತಿಯ ಅಥವಾ ಸಂಸ್ಥೆಯ ವರ್ಚಸ್ಸು ಹೆಚ್ಚಿಸುತ್ತದೆ. ಅದು ವ್ಯಾಪಾರವಿರಲಿ ಅಥವಾ ವೈಯಕ್ತಿಕ ಮಟ್ಟದಲ್ಲಿನ ಹಣದ ವ್ಯವಹಾರ. ನಿಗದಿ ಪಡಿಸಿದ ಸಮಯಕ್ಕೆ ಹೇಳಿದಂತೆ ನಡೆದುಕೊಂಡರೆ ಮತ್ತು ಅದು ಪುನರಾವರ್ತನೆಯಾದರೆ ಆಗ ಅದು ವರ್ಚಸ್ಸನ್ನ ಹೆಚ್ಚಿಸುತ್ತದೆ. ಮಾರುಕಟ್ಟೆಯಲ್ಲಿ ಉತ್ತಮ ಹೆಸರನ್ನ ತಂದುಕೊಡುತ್ತದೆ. 
  7. ವ್ಯಕ್ತಿಯ ಕ್ಷಮತೆಯನ್ನ ಹೆಚ್ಚಿಸುತ್ತದೆ: ಉತ್ತಮ ನಡವಳಿಕೆ, ಸಮಾಜದಲ್ಲಿ ಸಿಗುವ ವರ್ಚಸ್ಸು ವ್ಯಕ್ತಿಯಲ್ಲಿನ ಕಾರ್ಯಕ್ಷಮತೆಯನ್ನ ಹೆಚ್ಚಿಸುತ್ತದೆ. ಗೊತ್ತಿಲ್ಲದೇ ಆತನ ಪ್ರಭಾವಳಿ , ಮಾನಸಿಕ ಕ್ಷಮತೆ ಹೆಚ್ಚುತ್ತದೆ. 
  8. ಹೆಚ್ಚಿನ ಚೌಕಾಸಿ ಮಾಡುವ ಶಕ್ತಿಯನ್ನ ನೀಡುತ್ತದೆ: ಹಣಕಾಸು ಶಿಸ್ತು ಇದ್ದಾಗ ವಸ್ತುವಿನ ಮೌಲ್ಯದ ಬಗ್ಗೆ bargain ಮಾಡುವ ಶಕ್ತಿ ತಾನಾಗೇ ಬರುತ್ತದೆ. ಮಾರುವವರು ಕೂಡ ವ್ಯಕ್ತಿಯ ಮಾರುಕಟ್ಟೆಯಲ್ಲಿನ ವರ್ಚಸ್ಸು ನೋಡಿ, ಐದು ರೂಪಾಯಿ ಕಡಿಮೆಯಾದರೂ ಹಣ ಹೇಳಿದ ಸಮಯಕ್ಕೆ ಸಿಗುತ್ತದೆ ಎನ್ನುವ ಕಾರಣಕ್ಕೆ ಮಾರಲು ಸಿದ್ಧರಿರುತ್ತಾರೆ. ಆರ್ಥಿಕಶಿಸ್ತು ಇನ್ನಷ್ಟು ಮತ್ತಷ್ಟು ಹಣವನ್ನ ಉಳಿಸಲುಸಹಕಾರಿಯಾಗುತ್ತದೆ. 
  9. ಸಾಲ ಮಾಡುವುದು ತಪ್ಪುತ್ತದೆ: ಆರ್ಥಿಕ ಶಿಸ್ತಿರುವ ವ್ಯಕ್ತಿ ಅಥವಾ ಸಂಸ್ಥೆ ಅತಿ ಅವಶ್ಯಕವಲ್ಲದಿದ್ದರೆ ಸಾಲವನ್ನ ಎಂದಿಗೂಮಾಡುವುದಿಲ್ಲ. ಕಂಡದೆಲ್ಲಾ ನನ್ನದಾಗಿಸಿಕೊಳ್ಳಬೇಕು, ಎಲ್ಲವನ್ನೂ ಸಾಧಿಸಬೇಕು ಎನ್ನುವ ಹುಚ್ಚು ಶಿಸ್ತಿನಲ್ಲಿರದ ಕಾರಣ ಅಕಾರಣ ಸಾಲಗಳು ತನ್ಮೂಲಕ ಹಣ ಪೋಲಾಗುವುದನ್ನತಡೆಯುತ್ತದೆ. 
  10. ಆರ್ಥಿಕ ಭದ್ರತೆಗೆ ರಹದಾರಿ: ನೀವು ಮೇಲಿನ ಎಲ್ಲಾ ಅಂಶಗಳನ್ನ ಗಮನಿಸಿ ನೋಡಿ, ಎಲ್ಲದರಲ್ಲೂ ಶಿಸ್ತಿನ ಕಾರಣ ಹಣದ ಉಳಿತಾಯವಾಗಿದೆ, ಕೆಲವು ಕಡೆ ಹಣ ಪೋಲಾಗುವುದು ತಪ್ಪಿದೆ. ಇದು ವ್ಯಕ್ತಿಯ ಅಥವಾ ಸಂಸ್ಥೆಯ ಆರ್ಥಿಕ ಭದ್ರತೆಗೆ ಅಡಿಪಾಯ ಹಾಕಿಕೊಡುತ್ತದೆ. ನೀವು ಆರ್ಥಿಕ ಶಿಸ್ತಿಲ್ಲದ ಕಾರಣ ಆರ್ಥಿಕ ಅಭದ್ರತೆಗೆ ಒಳಗಾದವರನ್ನಕಾಣಬಹುದು. ಆದರೆ ಶಿಸ್ತಿನಿಂದ ಆರ್ಥಿಕವಾಗಿ ತೊಂದರೆಗೆ ಒಳಗಾಳದವರ ಸಂಖ್ಯೆ ಇಲ್ಲವೆನ್ನುವಷ್ಟು ಕಡಿಮೆ. 

ಚಾಣಕ್ಯನ ನೀತಿ ಶ್ಲೋಕದಲ್ಲಿ ಒಂದು ಹೀಗಿದೆ: 

ಕಃ ಕಾಲಃ ಕಾನಿ ಮಿತ್ರಾಣಿ ಕೋ ದೇಶಃ ಕೌ ವ್ಯಾಯಾಗಮ್ !
ಕಸ್ಯಾಹಂ ಕಾ ಚ ಮೇ ಶಕ್ತಿರಿತಿ ಚಿಂತ್ಯಂ ಮುಹುಮುರ್ಹಃ !!

ಸಮಯ ಎಂತಹುದ್ದು? ಗೆಳೆಯರು ಯಾರು? ಇರುವ ಸ್ಥಾನ ಎಂತದ್ದು? ಆಯ-ವ್ಯಯಗಳು ಎಷ್ಟು? ನಾನು ಯಾರು? ನನ್ನ ಶಕ್ತಿಯೆಷ್ಟು? ಇವುಗಳನ್ನ ಪದೇಪದೇ ಆಲೋಚಿಸುತ್ತಿರಬೇಕು ಎನ್ನುತ್ತದೆ. ಗಮನಿಸಿ ನೋಡಿ, ಇವೆಲ್ಲವೂ ಒಮ್ಮೆ ಸಾಧಿಸಿದ ನಂತರ ಆಲಸ್ಯದಿಂದ ಕೂರುವಂತಿಲ್ಲ. ಇವುಗಳ ಬಗ್ಗೆ ಮತ್ತೆ ಮತ್ತೆ ಯೋಚಿಸುತ್ತಿರಬೇಕು. ಹಣದ ವಿಷಯದಲ್ಲಿ, ಆರ್ಥಿಕ ಶಿಸ್ತಿನ ವಿಷಯದಲ್ಲಿ ಕೂಡ ಇದು ಸತ್ಯ. ಸದಾ ಕಾಲವೂ ಅದೇ ಶಿಸ್ತನ್ನ ಕಾಯ್ದುಕೊಳ್ಳಬೇಕು. ಮಾಡಿದ ಕೆಲಸ ನೋಡದೆ ಹೋಯ್ತು ಎನ್ನುವ ಒಂದು ಆಡು ಮಾತಿದೆ. ನಾವು ಯಾವುದೇ ಶಿಸ್ತನ್ನ ಬಿಟ್ಟರೆ ಮತ್ತದೇ ಹಳೆಯ ಹಾದಿಗೆ ಮರಳುತ್ತೇವೆ. ಹೀಗಾಗಿ ಸದಾ ಸನ್ನದ್ಧ ಸ್ಥಿತಿಯಲ್ಲಿರಬೇಕು. ಆರ್ಥಿಕ ಶಿಸ್ತು ಎನ್ನುವುದು ಜೀವನ ಶೈಲಿಯಾಗಬೇಕು. ಅದು ಎರಡು ದಿನ ಪಾಲಿಸಿ ಆಮೇಲೆ ಕೈಕೊಡವಿಕೊಳ್ಳುವ ಕ್ರ್ಯಾಶ್ ಕೋರ್ಸ್ ಅಲ್ಲವೇ ಅಲ್ಲ.

ನೆನಪಿರಲಿ: ಎಲ್ಲಾ ಶಿಸ್ತುಗಳಲ್ಲಿ ಆರ್ಥಿಕ ಶಿಸ್ತಿಗೆ ಅಗ್ರ ಸ್ಥಾನವನ್ನ ನೀಡಲಾಗಿದೆ. ಏಕೆಂದರೆ ಬಹುತೇಕ ಎಲ್ಲವೂ ಇಂದು ಮನುಷ್ಯನ ಆರ್ಥಿಕತೆಯ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಆರ್ಥಿಕ ಶಿಸ್ತು ಎನ್ನುವುದು ಸದಾ ಕಾಪಾಡಿಕೊಂಡು ಬರಬೇಕಾಗಿರುವ ವಿಷಯವಾಗಿದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Related Stories

No stories found.

Advertisement

X
Kannada Prabha
www.kannadaprabha.com