ನೂರು ದಿನ… ನೂರು ಗೊಂದಲ, ದಿಕ್ಕು ತಪ್ಪಿದ ಆಡಳಿತ (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್ದಿಕ್ಕು ತಪ್ಪಿ, ಜೋಲಿ ಹೊಡೆಯುತ್ತಿರುವ ನೌಕೆ. ನೂರು ದಿನಗಳ ಸಂಭ್ರಮ ಪೂರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ  ಕಾಂಗ್ರೆಸ್ ಸರ್ಕಾರದ ಸ್ಥಿತಿ ಇದು.
ಸಿಎಂ ಸಿದ್ದರಾಮಯ್ಯ-ಡಿಸಿಎಂ ಡಿಕೆ ಶಿವಕುಮಾರ್
ಸಿಎಂ ಸಿದ್ದರಾಮಯ್ಯ-ಡಿಸಿಎಂ ಡಿಕೆ ಶಿವಕುಮಾರ್

ದಿಕ್ಕು ತಪ್ಪಿ, ಜೋಲಿ ಹೊಡೆಯುತ್ತಿರುವ ನೌಕೆ. ನೂರು ದಿನಗಳ ಸಂಭ್ರಮ ಪೂರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸ್ಥಿತಿ ಇದು. 135 ಶಾಸಕರ ಬೆಂಬಲ ಇದ್ದರೂ ಅಸ್ಥಿರತೆ, ಗೊಂದಲ, ಆತಂಕ, ಗೊಂದಲಗಳ ಮಧ್ಯೆಯೇ ಸರ್ಕಾರ ದಿನ ದೂಡುತ್ತಿದೆ. ಇನ್ನು ಎರಡು ತಿಂಗಳು ಕಳೆದರೆ ಹೊಸ ಆರ್ಥಿಕ ವರ್ಷಕ್ಕೆ ಮಂಡಿಸಬೇಕಾದ ಮುಂಗಡ ಪತ್ರಕ್ಕೆ ಪೂರಕ ಸಿದ್ಧತೆಗಳು ಆರಂಭವಾಗಬೇಕಾಗುತ್ತದೆ.

ಸರ್ಕಾರದ ವಿವಿಧ ಇಲಾಖೆಗಳು ಸಾಧಿಸಿರುವ ಪ್ರಗತಿ ,ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆಗಿರುವ ಪ್ರಗತಿಯ ಪರಾಮರ್ಶೆ ನಡೆಯಬೇಕು. ಆದರೆ ಸರ್ಕಾರದ ಒಟ್ಟು ಆಡಳಿತ ವೈಖರಿ ನೋಡಿದರೆ ಇನ್ನೂ ರಾಜಕೀಯ ಗೊಂದಲಗಳಿಂದ ಹೊರ ಬಂದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆಡಳಿತ ನಡೆಸಿದ ಅನುಭವ ಹೊಂದಿದ,ದೂರ ದೃಷ್ಟಿಯ ಸಂವೇದನಾಶೀಲ ನಾಯಕ ಎಂದೇ ಹೆಸರಾದ ಸಿದ್ದರಾಮಯ್ಯನವರು ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಈ ಸರ್ಕಾರದ ಆಡಳಿತ ಹೊಸ ದಿಕ್ಕಿನಲ್ಲಿ ಸಾಗಿ ಅಭಿವೃದ್ಧಿಗೆ, ರಾಜ್ಯವು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಸ್ಪಷ್ಟ ಉತ್ತರ ಸಿಗಬಹುದೆಂಬ ನಿರೀಕ್ಷೆಗಳು ಇತ್ತು. ಆದರೆ ಆ ಯಾವ ನಿರೀಕ್ಷೆಗಳೂ ನಿಜವಾಗುವ ಲಕ್ಷಣಗಳು ಕಾಣುತ್ತಿಲ್ಲ.

ಆಡಳಿತಾತ್ಮಕ ವಿಚಾರಗಳನ್ನೇ ನೋಡಿದರೆ ಅಧಿಕಾರಿಗಳ ವರ್ಗಾವರ್ಗಿಯಲ್ಲೇ ಕಾಲಹರಣ ಆಗುತ್ತಿದೆ. ಆ ವಿಚಾರದಲ್ಲೂ ಸ್ವತಹಾ ಮುಖ್ಯಮಂತ್ರಿಗಳ ಕಚೇರಿಯೇ ಗೊಂದಲಕ್ಕೆ ಸಿಕ್ಕಿದೆ. ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಹೊರಡಿಸಿರುವ ಆದೇಶಗಳು ಸಾರ್ವತ್ರಿಕವಾಗಿ ನಗೆಪಾಟಲಿಗೆ ಗುರಿಯಾಗಿವೆ. ಅಕ್ಟೋಬರ್ ತಿಂಗಳ ಕೊನೆಯಲ್ಲೂ ವರ್ಗಾವಣೆ ಭರಾಟೆಗೆ ಕಡಿವಾಣ ಬಿದ್ದಿಲ್ಲ. ಹೊಸ ಸರ್ಕಾರ ಬಂದಾಗ ಸಹಜವಾಗೇ ಕೆಳ ಹಂತದಿಂದ ಮೇಲ್ಮಟ್ಟದ ವರೆಗೆ ಅಧಿಕಾರಿಗಳ ವರ್ಗಾವಣೆ ನಡೆಯುತ್ತದೆ. ಇದು ಸಹಜ ಪ್ರಕ್ರಿಯೆ ಎಂಬಂತೆ ಆಗಿದೆ. ವಿಧಾನಸಭಾ ಕ್ಷೆತ್ರಗಳ ಮಟ್ಟದಲ್ಲಿ ತಮ್ಮಮರ್ಜಿಗೆ ಅನುಸಾರವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ನಿಯೋಜಿಸಲು ಶಾಸಕರೇ ಒತ್ತಡ ಹೇರುವುದರಿಂದ ಅದನ್ನು ನಿಭಾಯಿಸಲು ಆಗದಷ್ಟು ಮಟ್ಟಕ್ಕೆ ಆಡಳಿತ ಕುಸಿದಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಈ ವಿಚಾರದಲ್ಲಿ ಅಸಹಾಯಕರಾಗಿದ್ದಾರೆ.

ಇನ್ನು ಮಂತ್ರಿ ಮಂಡಲದಲ್ಲಿರುವ ಸಚಿವರುಗಳ ಕಾರ್ಯವೈಖರಿ ಗಣನೆಗೆ ತೆಗೆದುಕೊಂಡರೆ ಬೆರಳೆಣಿಕೆಯ ಮಂತ್ರಿಗಳನ್ನು ಬಿಟ್ಟರೆ ಉಳಿದವರು ತಮ್ಮ ಇಲಾಖೆಗಳತ್ತ ತಿರುಗಿಯೂ ನೋಡುತ್ತಿಲ್ಲ. ಸಚಿವರು ತಮಗೆ ವಹಿಸಿದ ಖಾತೆಗಳನ್ನು ಹೇಗೆ ನಿರ್ವಹಿಸುತ್ತಿದ್ದಾರೆ? ಇಲಾಖೆ ಕೆಲಸಗಳು, ಯೋಜನೆಗಳ ಜಾರಿ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಸರ್ಕಾರದಲ್ಲಿ ಮಾಹಿತಿಯೇ ಇಲ್ಲ. ಸರ್ಕಾರದ ಮಹತ್ವದ ಸಾಧನೆ ಎಂದರೆ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ವಿವಿಧ ಗ್ಯಾರಂಟಿಗಳ ಜಾರಿಗೇ ಹೆಚ್ಚು ಸಮಯ ನೀಡುತ್ತಿರುವುದು.

ಮಹಿಳೆಯರಿಗೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಭಾಗ್ಯ ಕಲ್ಪಿಸಿರುವ ಸರ್ಕಾರ ಅದರಿಂದ ಆಗುತ್ತಿರುವ  ಸಾವಿರಾರು ಕೋಟಿ ರೂ. ಗಳ ಆರ್ಥಿಕ ಕೊರತೆಯನ್ನು ತುಂಬುವ ಬಗ್ಗೆ ಚಿಂತನೆ ನಡೆಸಿದಂತೆ ಕಾಣುತ್ತಿಲ್ಲ.
ಈಗಾಗಲೇ ನಷ್ಟದಲ್ಲಿ ನಡೆಯುತ್ತಿರುವ ಸಾರಿಗೆ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಿ ಪುನಶ್ಚೇತನಕ್ಕೆ ಮುಂದಾಗಬೇಕಿದ್ದ ಸರ್ಕಾರ ಆಗೊಮ್ಮೆ ಈಗೊಮ್ಮೆ ಅಲ್ಪ ಪ್ರಮಾಣದ ಅನುದಾನವನ್ನು ಒದಗಿಸಿದ್ದು ಬಿಟ್ಟರೆ ಉಳಿದಂತೆ ನಷ್ಟದ ಪ್ರಮಾಣವನ್ನು ಸರಿದೂಗಿಸುವ ಕುರಿತು ಕ್ರಮವನ್ನೇ ಕೈಗೊಂಡಿಲ್ಲ. ಭವಿಷ್ಯದ ದಿನಗಳಲ್ಲಿ ಉಂಟಾಗಬಹುದಾದ ಆರ್ಥಿಕ ಸಂಕಷ್ಟ ನಿವಾರಣೆಗೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯೇ ಇಲ್ಲ. ಇನ್ನು ಭಾರೀ ಪ್ರಚಾರದೊಂದಿಗೆ ಜಾರಿಗೆ ಮುಂದಾಗಿದ್ದ ಅನ್ನ ಭಾಗ್ಯ ಯೋಜನೆ ಕುರಿತು ಗೊಂದಲಗಳು ಇನ್ನೂ ಮುಗಿದಿಲ್ಲ. ಯೋಜನೆಯಲ್ಲಿ ಘೋಷಿಸಿರುವಂತೆ ಆರ್ಥಿಕವಾಗಿ ದುರ್ಬಲರಾದವರಿಗೆ ಅಕ್ಕಿ ಒದಗಿಸುವ ಯೋಜನೆ ಆರಂಭದಲ್ಲೇ ಮುಗ್ಗರಿಸಿದೆ. ಉಳಿದ ಗ್ಯಾರಂಟಿಗಳ ಕತೆಯೂ ಇದೇ.

ಮುಂದಿನ ವರ್ಷ ಹೊಸ ಮುಂಗಡ ಪತ್ರ ಮಂಡಿಸಬೇಕಾಗಿರುವ ಸಿದ್ದರಾಮಯ್ಯ ಈ ಯೋಜನೆಗಳ ಜಾರಿಯಿಂದ ಉಂಟಾಗುವ ಹೆಚ್ಚುವರಿ ಆರ್ಥಿಕ ಹೊರೆಯನ್ನು ನಿಭಾಯಿಸಲು ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರೆ ಸರ್ಕಾರದ ಬಳಿ ನಿಖರ ಉತ್ತರಗಳೇ ಇಲ್ಲ. ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆ ಆಗದೆ ಶಾಸಕರು ಜನರ ಆಕ್ರೋಶವನ್ನು ಎದುರಿಸಬೇಕಾಗಿದೆ.

ಸಮನ್ವಯವೇ ಇಲ್ಲ:
ಸಮನ್ವಯತೆ ವಿಚಾರಕ್ಕೆ ಬಂದರೆ ಸಂಪುಟದಲ್ಲಿ ವಿವಿಧ ಇಲಾಖೆಗಳ ಸಚಿವರುಗಳ ನಡುವೆಯೇ ಸಮನ್ವಯತೆ ಇಲ್ಲ. ಬಹು ಮುಖ್ಯವಾಗಿ ರಾಜ್ಯದ ಜ್ವಲಂತ ಸಮಸ್ಯೆಗಳಾದ ಕಾವೇರಿನದಿ ನೀರು ಹಂಚಿಕೆ ಮತ್ತು ಮಹದಾಯಿ ಯೋಜನೆಗಳ ಬಗ್ಗೆ ಕಾನೂನು ಮತ್ತು ಜಲ ಸಂಪನ್ಮೂಲ ಇಲಾಖೆಗಳ ನಡುವೆ ಸಮ್ವನಯತೆ ಕೊರತೆ ಇದೆ.

ಇತ್ತೀಚೆಗೆ ಕರ್ನಾಟಕ ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಪ್ರಾಧಿಕಾರ ಹಾಗೂ ನ್ಯಾಯಾಲಯದ ಮುಂದೆ ಸಮರ್ಥವಾಗಿ ತನ್ನ ವಾದ ಮಂಡಿಸಿ ಹಕ್ಕನ್ನು ಪ್ರತಿಪಾದಿಸುವಲ್ಲಿ ವಿಫಲವಾಗಿದ್ದು ರಾಜ್ಯದ ಹಿತಾಸಕ್ತಿಗೆ ಬಿದ್ದ ದೊಡ್ಡ ಪೆಟ್ಟು ಎನ್ನಬಹುದು. ಪ್ರಮುಖ ಸಂಗತಿ ಎಂದರೆ ಕಾವೇರಿ ವಿವಾದ ಗಂಭೀರ ಸ್ವರೂಪ ಪಡೆದು ವಿಚಾರಣೆ ನಡೆಯುತ್ತಿದ್ದರೆ ಖುದ್ದಾಗಿ ಹಾಜರಿದ್ದು ರಾಜ್ಯದ ಜಲಾಶಯಗಳ ಪರಿಸ್ಥಿತಿ ಬಗ್ಗೆ ಪ್ರಾಧಿಕಾರಕ್ಕೆ ವಾಸ್ತವಾಂಶಗಳನ್ನು ಮನವರಿಕೆ ಮಾಡಿಕೊಡಬೇಕಿದ್ದ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಪಾಲ್ಗೊಂಡಿದ್ದರ ಬಗ್ಗೆ ಸರ್ಕಾರಕ್ಕೆ ಸಂಬಂಧ ಪಟ್ಟ ಸಚಿವರ ಗಮನಕ್ಕೆ ಬಂದರೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ.

ಜಲ ಸಂಪನ್ಮೂಲ ಇಲಾಖೆಯಂತಹ ಮಹತ್ವದ ಖಾತೆಯ ಹೊಣೆಗಾರಿಕೆ ಹೊತ್ತ ಉಪ ಮುಖ್ಯಮಂತ್ರಿ ಅದರ ಗಂಭೀರತೆ ಮತ್ತು ಸೂಕ್ಷ್ಮತೆಯನ್ನು ಅರಿಯದೇ ಬರೀ ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ತಮ್ಮ ಗಮನ ಕೇಂದ್ರೀಕರಿಸಿರುವುದು ನಿರರ್ಥಕ ಕಸರತ್ತು. ಆಡಳಿತದ ಮುಖ್ಯಸ್ಥರಾಗಿ ಹೆಚ್ಚಿನ ಜವಾಬ್ದಾರಿ ವಹಿಸಿಬೇಕಾಗಿದ್ದ ಮುಖ್ಯಮಂತ್ರಿ ಕೂಡಾ ಈ ವಿಚಾರವನ್ನು ಹಗುರವಾಗಿ ಪರಿಗಣಿಸಿದ್ದೇಕೆ? ಎಂಬುದು ಪ್ರಶ್ನೆಯಾಗೇ ಉಳಿದಿದೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬ್ರಾಂಡ್ ಬೆಂಗಳೂರು ಯೋಜನೆ ಬಗ್ಗೆ ತೀವ್ರ ಆಸಕ್ತಿ ವಹಿಸಿ ಹಲವು ಹೊಸ ಯೋಜನೆಗಳನ್ನು ಘೋಷಿಸುತ್ತಿದ್ದಾರೆ. ವಿಶೇಷ ಎಂದರೆ ನೀತಿಗೆ ಸಂಬಂಧಿಸಿದ ಈ ಯೋಜನೆ ಬಗ್ಗೆ  ಅಧಿಕಾರಿಗಳ ಮಟ್ಟದಲ್ಲಿ ಆಗಲೀ, ಸಂಪುಟದಲ್ಲಾಗಲೀ ವಿಸ್ತೃತ ಚರ್ಚೆಯೇ ನಡೆದಿಲ್ಲ. ಬೆಂಗಳೂರು ಈಗಾಗಲೇ ಮಿತಿ ಮೀರಿ ಬೆಳೆದಿದೆ. ಇಲ್ಲಿನ ಜನಕ್ಕೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪರದಾಡುವ ಸ್ಥಿತಿ ಬಂದಿದೆ. ಹಳೆಯ ಬೆಂಗಳೂರಿನ ಹಲವು ಪ್ರಮುಖ ಬಡಾವಣೆಗಳಿಗೆ ಹಾಗೂ ನಗರದ ಹೊರ ವಲಯಗಳಲ್ಲಿ ಈ ಮೊದಲು ಗ್ರಾಮಗಳಾಗಿದ್ದು ನಂತರ ಮಹಾನಗರದ ವ್ಯಾಪ್ತಿಗೆ ಸೇರಿದ ಪ್ರದೇಶಗಳಿಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ರಸ್ತೆ, ನೀರು, ಒಳ ಚರಂಡಿಗಳಂತಹ ಸೌಲಭ್ಯಗಳನ್ನು ಒದಗಿಸಲು ಸರ್ಕಾರಕ್ಕೆ ಈವರೆಗೆ ಸಾಧ್ಯವಾಗಿಲ್ಲ. ಇಂತಹ ಸನ್ನಿವೇಶದಲ್ಲಿ ಬೆಂಗಳೂರಿನ ಮೇಲೆ ಮತ್ತಷ್ಟು ಒತ್ತಡಕ್ಕೆ ಕಾರಣವಾಗುವ ಯೋಜನೆ ಘೋಷಿಸುವ ಮೂಲಕ ಶಿವಕುಮಾರ್ ಅನೇಕ ಸಂಶಯಗಳು ತಲೆ ಎತ್ತುವಂತೆ ಮಾಡಿದ್ದಾರೆ. ವಿಶೇಷ ಎಂದರೆ ಈ ಯೋಜನೆ ಬಗ್ಗೆ ಮುಖ್ಯಮಂತ್ರಿ ಈವರೆಗೆ ತಮ್ಮ ನಿಲುವು ವ್ಯಕ್ತಪಡಿಸಿಲ್ಲ.

ಸುರಂಗ ಮಾರ್ಗ ಯಾರಿಗಾಗಿ?

ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಇನ್ನೊಂದು ಎಡವಟ್ಟಿನ ಯೋಜನೆ ಎಂದರೆ ಬೆಂಗಳೂರು ಮಹಾನಗರದಿಂದ ಹೊರ ವಲಯಕ್ಕೆ ಸುರಂಗ ಮಾರ್ಗ ನಿರ್ಮಿಸುವ ಮೂಲಕ ನಗರದಲ್ಲಿ ಸಂಚಾರ ಸಮಸ್ಯೆಗೆ ಮುಕ್ತಿ ಕಂಡುಕೊಳ್ಳಲು ಹೊರಟಿರುವುದು. ಅಂದಾಜು 50 ಸಾವಿರ ಕೋಟಿ ರೂ. ಮೊತ್ತದ ಯೋಜನೆ ಇದೆಂದು ಹೇಳಲಾಗುತ್ತಿದೆ. ಇದರ ಸಾಧ್ಯಾಸಾಧ್ಯತೆಗಳ ಬಗ್ಗೆಯೇ ಜನರ ವಿರೋಧ ಇದೆ. ಸಂಚಾರ ಸಮಸ್ಯೆ ನಿವಾರಣೆಗೆ ಪರ್ಯಾಯ ಯೋಜನೆಗಳು ಇದ್ದರೂ ಆ ಕುರಿತು ಚಿಂತಿಸದೇ ಅತಿ ದೊಡ್ಡ ಸುರಂಗ ಮಾರ್ಗದ ಕುರಿತು ಅವರು ತಮ್ಮ ಉತ್ಸಾಹ ತೆರೆದಿಟ್ಟಿದ್ದಾರೆ.

ಈಗಾಗಲೇ ಮೆಟ್ರೋ ಯೋಜನೆ ಬೆಂಗಳೂರು ನಗರದಲ್ಲಿ ವಿಳಂಬವಾದರೂ ಯಶಸ್ವಿಯಾಗಿದೆ. ಹೊರ ವಲಯದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ವರ್ತುಲ ರೈಲು ಯೋಜನೆ ಬಗ್ಗೆ ನಾಲ್ಕು ದಶಕಗಳಿಂದ ಸರ್ಕಾರಗಳು ಬರೀ ಮಾತನಾಡುತ್ತಲೇ ಬಂದಿವೆ. ಅದರ ವ್ಯವಸ್ಥಿತ ಜಾರಿ ಆಗೇ ಇಲ್ಲ. ಬೆಂಗಳೂರಿನ ಮೇಲೆ ಒತ್ತಡ ತಪ್ಪಿಸಲು ರಾಜ್ಯದ ಇತರ ನಗರಗಳನ್ನು ಅಭಿವೃದ್ಧಿ ಪಡಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಹಿಂದೆ ಬಂದು ಹೋದ ಸರ್ಕಾರಗಳಲ್ಲಿ ತೀರ್ಮಾನಗಳಾಗಿವೆ ಆದರೆ ಅನುಷ್ಠಾನ ಆಗಿಲ್ಲ. ವಿಜಾಪುರ, ಹಾಸನ ಸೇರಿದಂತೆ ರಾಜ್ಯದ ಇತರ ನಗರಗಳಲ್ಲಿನ ವಿಮಾನ ನಿಲ್ದಾಣ ಯೋಜನೆಗಳು ಇನ್ನೂ ಕುಂಟುತ್ತಲೇ ಸಾಗಿವೆ. ಇಂತಹ ಸನ್ನಿವೇಶದಲ್ಲಿ ಉಪಯುಕ್ತವಲ್ಲದ ಬ್ರಾಂಡ್ ಬೆಂಗಳೂರು ಯೋಜನೆಯನ್ನು ಜಾರಿಗೆ ತರಲು ತರಾತುರಿ ನಡೆಸುತ್ತಿರುವುದರ ಹಿಂದೆ ಅಡಗಿರುವ ನಿಗೂಢ ಸಂಗತಿಗಳು ಬಯಲಾಗಬೇಕಿವೆ.

ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿಸುವ ವಿಚಾರದಲ್ಲಿ ಶಿವಕುಮಾರ್ ನೀಡಿರುವ ಹೇಳಿಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಿಡಿದೇಳಲು ಕಾರಣವಾಗಿದೆ. ಬಹುಮುಖ್ಯವಾಗಿ ಸರ್ಕಾರದ ನೀತಿಗೆ ಸಂಬಂಧಿಸಿದ ಈ ವಿಚಾರದಲ್ಲಿ ಕಂದಾಯ ಸಚಿವರು, ಮುಖ್ಯಮಂತ್ರಿಗಳ ಮಟ್ಟದಲ್ಲಿ ಚರ್ಚೆ ನಡೆಸಿ ತೀರ್ಮಾನಿಸುವ ಮೊದಲೇ ಶಿವಕುಮಾರ್ ತಮ್ಮ ಇಲಾಖೆಗೆ ಸಂಬಂಧ ಪಡದ ಈನಿರ್ಧಾರವನ್ನು ಪ್ರಕಟಿಸಿ ಮುಜುಗುರಕ್ಕೆ ಕಾರಣರಾಗಿದ್ದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಚಾರದಲ್ಲಿ ತಮ್ಮೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಕಡ್ಡಿ ಮುರಿದಂತೆ ಸ್ಪಷ್ಟಪಡಿಸಿದ್ದಾರೆ.

ಸಮಾನಾಂತರ ಅಧಿಕಾರ ಕೇಂದ್ರ: ಸರ್ಕಾರದಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆಯೇ ಸಮನ್ವಯತೆ ಇಲ್ಲ ಎಂಬುದು ಈಗ ಗುಟ್ಟೇನೂ ಅಲ್ಲ. ಉಪ ಮುಖ್ಯಮಂತ್ರಿಯಾಗಿ ಶಿವಕುಮಾರ್ ಮುಖ್ಯಮಂತ್ರಿಗೆ ಸಮನಾಗಿ ಸರ್ಕಾರದಲ್ಲಿ ಅಧಿಕಾರ ಚಲಾಯಿಸಲು ಹೊರಟಿರುವುದು ವಿವಾದಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇದೇ ಒಂದು ದೊಡ್ಡ ತಲೆ ನೋವಾದರೂ ಆಶ್ಚರ್ಯವಿಲ್ಲ. ಇನ್ನು ಸಮರ್ಥ ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸಬೇಕಿದ್ದ ಬಿಜೆಪಿ ಒಡೆದ ಮನೆಯಾಗಿದೆ. ಆ ಪಕ್ಷಕ್ಕೆ ರಾಜ್ಯದಲ್ಲಿ ಸಮರ್ಥ ನಾಯಕತ್ವವೇ ಇಲ್ಲ.

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com