ರಣರಂಗದಲ್ಲಿ ಒಂಟಿ ಸೇನಾನಿಯಾದ ಹರಿಪ್ರಸಾದ್! (ಸುದ್ದಿ ವಿಶ್ಲೇಷಣೆ)

ಯಗಟಿ ಮೋಹನ್`ಪ್ರಚಂಡ ಸೈನ್ಯ ಬಲದ ಎದುರು ಸೆಣಸಲು ನಿಂತ ಒಂಟಿ ಸೇನಾನಿ ‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಯುದ್ಧಕ್ಕಿಳಿದಿರುವ ಹಿರಿಯ ಕಾಂಗ್ರೆಸ್ ನಾಯಕರೂ ಆದ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರ ಸ್ಥಿತಿ ಇದು.
ಬಿಕೆ ಹರಿಪ್ರಸಾದ್
ಬಿಕೆ ಹರಿಪ್ರಸಾದ್
Updated on

'ಪ್ರಚಂಡ ಸೈನ್ಯ ಬಲದ ಎದುರು ಸೆಣಸಲು ನಿಂತ ಒಂಟಿ ಸೇನಾನಿ '

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಯುದ್ಧಕ್ಕಿಳಿದಿರುವ ಹಿರಿಯ ಕಾಂಗ್ರೆಸ್ ನಾಯಕರೂ ಆದ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರ ಸ್ಥಿತಿ ಇದು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಆಗುವ ಸಂದರ್ಭದಲ್ಲಿ ಸಚಿವ ಸ್ಥಾನ ಕೈ ತಪ್ಪಿದ ಆಕ್ರೋಶದಿಂದ ಕುದಿಯುತ್ತಿರುವ ಅವರ ಕೋಪ ಪರಾಕಾಷ್ಠೆಯ ಹಂತಕ್ಕೆ ಮುಟ್ಟಿದೆ.

ಹಿಂದುಳಿದ ವರ್ಗದ ಸಣ್ಣ ಸಣ್ಣ ಸಮುದಾಯಗಳ ಸ್ವಾಮೀಜಿಗಳ ಸಭೆ ನಡೆಸಿ ಬೃಹತ್ ಸಮಾವೇಶ ನಡೆಸಲು ನಿರ್ಧರಿಸುವ ಮೂಲಕ ಬಲ ಪ್ರದರ್ಶನಕ್ಕೂ ನಿರ್ಧರಿಸಿದ್ದಾರೆ. ಲೋಕಸಭೆಗೆ ಚುನಾವಣೆ ಹತ್ತಿರವಾಗುತ್ತಿರುವ ಈ ಹಂತದಲ್ಲಿ ಅವರ ಬಂಡಾಯ ಕಾಂಗ್ರೆಸ್ ಗೆ ಕಸಿವಿಸಿ ತಂದಿದ್ದು  ಪಕ್ಷದ ರಾಷ್ಟ್ರೀಯ ಘಟಕದದ ಶಿಸ್ತು ಸಮಿತಿ ಕಾರಣ ಕೇಳಿ ನೋಟಿಸ್ ನೀಡಿ ಹತ್ತು ದಿನಗಳ ಒಳಗೆ ಉತ್ತರಿಸುವಂತೆಯೂ ಸೂಚಿಸಿದೆ. ಇದಕ್ಕೆ ಅವರು ಇನ್ನೂ ಉತ್ತರಿಸಿಲ್ಲವಾದರೂ ಸಮುದಾಯದ ಬೃಹತ್ ಸಮಾವೇಶ ನಡೆಸುವ ಸಿದ್ಧತೆಯಿಂದ ದೂರ ಸರಿದಿಲ್ಲ.

ಈ ಬಂಡಾಯದಿಂದ ಪಕ್ಷಕ್ಕೆ ಆಗಬಹುದಾದ ಮುಜುಗರ ತಪ್ಪಿಸಲು ಸಚಿವರಾದ ಡಾ. ಜಿ.ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಸಮಾವೇಶ ನಡೆಸುವ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಈ ಸಂಧಾನಕ್ಕೆ ಸ್ಪಷ್ಟ ಪ್ರತಿಕ್ರಿಯೆಯನ್ನೇನೂ ಅವರು ನೀಡಿಲ್ಲ. ಹೀಗಾಗಿ ಸದ್ಯಕ್ಕೆ ಬಂಡಾಯ ನಿಲ್ಲುವ ಲಕ್ಷಣ ನಿಲ್ಲುವ ಸೂಚನೆಗಳಿಲ್ಲ. 

ಹೈದರಾಬಾದ್ ನಲ್ಲಿ ನಡೆಯಲಿರುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಗೆ ಮುನ್ನ ಪಕ್ಷದ ಅಧಿ ನಾಯಕಿ ಶ್ರೀಮತಿ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ಹರಿಪ್ರಸಾದ್ ಚರ್ಚಿಸುವ ಸಾಧ್ಯತೆಗಳಿವೆ. ಈ ಭೇಟಿಯ ನಂತರ ಅವರ ಮುಂದಿನ ನಡೆ ಏನು ಎಂಬುದೇ ಈಗ ಕುತೂಹಲ ಮೂಡಿಸಿರುವ ಅಂಶ.

ಸಂಧಾನದ ಮಾತುಕತೆ ಪ್ರಾರಂಭವಾಗಿರುವ ಹಂತದಲ್ಲೇ ಸಿದ್ದರಾಮಯ್ಯ ಬೆಂಬಲಿಗರಾದ ಸಚಿವ ಭೈರತಿ ಸುರೇಶ್ ಸೇರಿದಂತೆ ಕೆಲವರು ಹರಿಪ್ರಸಾದ್ ವಿರುದ್ಧ ಕಿಡಿ ಕಾರಿದ್ದು ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ. ಇದು ಸಂಧಾನದ ಹಾದಿಗೆ ಅಡ್ಡಿ ತಂದಿದೆ. ಒಂದಂತೂ ಸ್ಪಷ್ಟ. ಎರಡನೇ ಬಾರಿಗೆ ಮುಖ್ಯಮಂತ್ರಿ ಯಾಗಿರುವ ಸಿದ್ದರಾಮಯ್ಯ ವಿರುದ್ಧ ಮೂಲ ಕಾಂಗ್ರೆಸ್ಸಿಗರ ಅಸಮಾಧಾನದ ಧ್ವನಿ ಮುಂದಿನ ದಿನಗಳಲ್ಲಿ ಗಟ್ಟಿಯಾಗುವ ಸೂಚನೆಗಳು ಕಂಡು ಬರುತ್ತಿದೆಯಾದರೂ ಇದನ್ನು ಮೂಲದಲ್ಲೇ ಚಿವುಟಿ ಹಾಕಲು ಅವರೂ ಪಣ ತೊಟ್ಟಿದ್ದಾರೆ.

ನೇರವಾಗಿ ಎಐಸಿಸಿ ಅಧ್ಯಕ್ಷ ಖರ್ಗೆಯವರನ್ನೇ ದೂರವಾಣಿಯಲ್ಲಿ ಸಂಪರ್ಕಿಸಿ ಹರಿಪ್ರಸಾದ್ ಸುಮ್ಮನಿರಿಸಿ ಇಲ್ಲವಾದರೆ ಮುಂದಿನ ದಿನಗಳಲ್ಲಿ ನನ್ನ ಪರವಾಗಿಯೂ ಶಾಸಕರು, ಪ್ರಮುಖ ಮುಖಂಡರು ಹೇಳಿಕೆಗಳನ್ನು ಕೊಡಲು ಆರಂಭಿಸಿದರೆ ಅದರ ಜವಾಬ್ದಾರಿ ನನ್ನದಲ್ಲ. ಎಂದು ಸ್ಪಷ್ಟ ಮಾತುಗಳ ಎಚ್ಚರಿಕೆ ನೀಡಿರುವುದಷ್ಟೇ ಅಲ್ಲ, ಹರಿಪ್ರಸಾದ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಒತ್ತಡ ಹಾಕಿದ್ದಾರೆ. ಇದರಿಂದ ಇಕ್ಕಟ್ಟಿಗೆ ಸಿಕ್ಕಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ರಾಜ್ಯದಲ್ಲೇ ಈ ಬಂಡಾಯ, ಗುಂಪುಗಾರಿಕೆ ಚಟುವಟಿಕೆಗಳು ಇನ್ನಷ್ಟು ಹೆಚ್ಚಾದರೆ ಅದರಿಂದ ಪಕ್ಷಕ್ಕೆ ಹೆಚ್ಚು ಸಂಖ್ಯೆಯ ಸ್ಥಾನಗಳನ್ನು ಗೆಲ್ಲುವ ಅವಕಾಶ ತಪ್ಪಿ ಹೋಗಬಹುದು ಅಷ್ಟೇ ಅಲ್ಲ, ಸಹಜವಾಗೇ ಬಿಜೆಪಿ, ಜೆಡಿಎಸ್ ಪಕ್ಷಗಳು ಈ ಬಿಕ್ಕಟ್ಟಿನ ಲಾಭ ಪಡೆಯಬಹುದು ಎಂದು ಆತಂಕಗೊಂಡಿದ್ದಾರೆ. ಇದರ ಮುಂದುವರಿದ ಭಾಗ ಎಂಬಂತೆ ಸಂಧಾನಕ್ಕೆ ಹಿರಿಯ ಸಚಿವರನ್ನು ಕಳಿಸಿದ್ದಾರೆ. ಆದರೆ ಈ ಮನವೊಲಿಸುವ ಪ್ರಯತ್ನಗಳಿಗೆ ಹರಿಪ್ರಸಾದ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ರಾಜ್ಯದಲ್ಲಿ ಸರ್ಕಾರ ರಚನೆಯಾದಾಗ ಸಹಜವಾಗೇ ಸಂಪುಟದಲ್ಲಿ ಪ್ರಮುಖ ಖಾತೆಯ ಸಚಿವ ಸ್ಥಾನ ದೊರೆಯುವ ನಿರೀಕ್ಷೆಯನ್ನು ಹರಿಪ್ರಸಾದ್ ಹೊಂದಿದ್ದರು. ಜತೆಗೇ ವಿಧಾನ ಪರಿಷತ್ತಿನಲ್ಲಿ ಅದುವರೆಗೆ ಪ್ರತಿಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರಿಂದ ಸಂಫುಟಕ್ಕೆ ಸೇರ್ಪಡೆಗೆ ಯಾವುದೇ ಅಡ್ಡಿಗಳು ಬರುವುದಿಲ್ಲ ಎಂಬ ನಂಬಿಕೆಯೂ ಆವರಿಗಿತ್ತು. ಅದಕ್ಕಿಂತ ಮುಖ್ಯವಾಗಿ ಸಂಪುಟ ಸೇರುವ ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವ ಸಂದರ್ಭದಲ್ಲಿ ಸ್ವತಹಾ ಸೋನಿಯಾ ಗಾಂಧಿಯವರೇ ಅವರ ಹೆಸರನ್ನು ಸೂಚಿಸಿದ್ದರು. ಆದರೆ ಕಡೇ ಹಂತದಲ್ಲಿ ಅವರ ಬದಲು ಸೊರಬದ ಶಾಸಕ ಮಧು ಬಂಗಾರಪ್ಪ ಅವರ ಹೆಸರು ಸೇರ್ಪಡೆಯಾಯಿತು. 

ಈಡಿಗ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ವಿಚಾರ ಬಂದಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ಇಬ್ಬರ ಹೆಸರೂ ಇರಲಿ ಎಂದು ಆಗ್ರಹಿಸಿದರಾದರೂ ಹರಿಪ್ರಸಾದ್ ಸಂಪುಟ ಸೇರ್ಪಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧಿಸಿದಾಗ ಶಿವಕುಮಾರ್ ಅನಿವಾರ್ಯವಾಗಿ ಸುಮ್ಮನಾದರು ಎಂಬುದು ಅವರ ಆಪ್ತರು ನೀಡುವ ಮಾಹಿತಿ.

ಸಿದ್ದರಾಮಯ್ಯ ಜತೆ ಹರಿ ಪ್ರಸಾದ್ ಮೊದಲಿನಿಂದಲೂ ಅಂತರ ಕಾಯ್ದುಕೊಂಡೇ ಬಂದಿದ್ದು ಈಗ ಅದು ಬಂಡಾಯದ ಹಂತಕ್ಕೆ ಮುಟ್ಟಿದೆ. ಇತ್ತೀಚೆಗೆ ಸೇರಿದ್ದ ಹಿಂದುಳಿದ ವರ್ಗಗಳ ಮಠಾಧೀಶರ ಸಭೆಯಲ್ಲಿ ಸಿದ್ದರಾಮಯ್ಯ ಹೆಸರು ಹೇಳದೇ ಅವರ ವಿರುದ್ಧ ಅತ್ಯುಗ್ರವಾಗಿ ವಾಗ್ದಾಳಿ ನಡೆಸುವ ಮೂಲಕ ಮುಂದಿನ ದಿನಗಳಲ್ಲಿ ತಮ್ಮ ಯುದ್ಧ ಇನ್ನಷ್ಟು ಬಿರುಸಾಗಲಿದೆ ಎಂಬ ಸೂಚನೆಯನ್ನೂ ನೀಡಿದ್ದಾರೆ.

ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ ಹರಿಪ್ರಸಾದ್ ವಿರುದ್ಧ ಕನಕ ಗುರು ಪೀಠದ ಶ್ರೀಗಳು ಬಹಿರಂಗವಾಗೇ ಆಕ್ರೋಶ ವ್ಯಕ್ತಪಡಿಸಿ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದಾರೆ. ಇದೂ ಕೂಡಾ ಸಂಧಾನದ ಹಾದಿಯನ್ನು ಕಠಿಣಗೊಳಿಸಿದೆ. ಮಂತ್ರಿಗಿರಿ ಕೈ ತಪ್ಪಿದಾಗ ಹೈಕಮಾಂಡ್ ನ ನಾಯಕರೂ ಸೇರಿದಂತೆ ಯಾರೂ ತಮ್ಮ ಬಳಿ ಕನಿಷ್ಟ ಮಾತನಾಡುವ ಸೌಜನ್ಯ ತೋರಿಲಿಲ್ಲ ಎಂಬುದು ಹರಿ ಪ್ರಸಾದ್ ಅಸಹನೆಗೆ ಇನ್ನೊಂದು ಕಾರಣ. 

ಸ್ವತಹಾ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಈ ವಿಚಾರದಲ್ಲಿ ಉಪೇಕ್ಷೆ ತೋರಿದ್ದಲ್ಲದೇ ಉದ್ದೇಶ ಪೂರ್ವಕವಾಗಿ ತನ್ನನ್ನು ನಿರ್ಲಕ್ಷಿಸಿದರು ಎಂಬುದುಅವರನ್ನು ಕೆರಳಿಸಿದೆ. ಇದೆಲ್ಲ ಏನೇ ಇರಲಿ, ಅಹಿಂದ ನಾಯಕ ಎಂದೇ ರಾಜ್ಯ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ವಿರುದ್ಧ ಯುದ್ಧ ಘೋಷಿಸಿರುವ ಹರಿಪ್ರಸಾದ್ ಈಗ ಕಾಂಗ್ರೆಸ್ ನಲ್ಲಿ ಹಿಂದುಳಿದ ವರ್ಗಳ ನಾಯಕರಾಗಲು ಹೊರಟಿದ್ದಾರೆ. ಅದರ ಪೂರ್ವ ತಯಾರಿ ಎಂಬಂತೆ ಈಡಿಗ ಸಮುದಾಯವೂ ಸೇರಿದಂತೆ ಹಿಂದುಳಿದ ವರ್ಗದ ಬೇರೆ ಬೇರೆ ಸಣ್ಣ ಸಮುದಾಯಗಳ ಮಠಾಧೀಶರನ್ನು ಒಂದೇ ವೇದಿಕೆಗೆ ಕರೆತಂದು ಬೃಹತ್ ಸಮಾವೇಶಕ್ಕೆ ತಯಾರಿ ನಡೆಸಲು ಮುಂದಾಗಿದ್ದಾರೆ.

ಇಂಥದೊಂದು ಸಮಾವೇಶ ನಡೆಸುವ ಮೂಲಕ ಹೈಕಮಾಂಡ್ ಗೆ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರಿಗೆ ತಮ್ಮ ರಾಜಕೀಯ ಶಕ್ತಿಯ ಸಂದೇಶ ರವಾನಿಸುವುದು ಇದರ ಹಿಂದಿನ ಉದ್ದೇಶ. ಆದರೆ ಪಕ್ಷ ಮತ್ತು ಸರ್ಕಾರದಲ್ಲಿದ್ದೂ ಸಿದ್ದರಾಮಯ್ಯ ಕುರಿತ ಅತೃಪ್ತಿ ಹೊಂದಿರುವ ಪ್ರಮುಖ ಮುಖಂಡರು ಹಾಗು ಸಚಿವರು ಈ ವಿಚಾರದಿಂದ ಅಂತರ ಕಾಯ್ದುಕೊಂಡಿದ್ದು, ಯಾರೂ ಬಹಿರಂಗವಾಗಿ ಗುರುತಿಸಿಕೊಂಡಿಲ್ಲ. ಆದರೆ ಪಕ್ಷದ ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಸುದೀರ್ಘ ರಾಜಕೀಯ ಅನುಭವ ಹೊಂದಿರುವ ಹರಿಪ್ರಸಾದ್ ಏಕಾಏಕಿ ಯುದ್ಧ ಘೋಷಿಸಿದರೆ? ಎಂಬುದು ಸದ್ಯಕ್ಕೆ ಮೂಡಿರುವ ಪ್ರಶ್ನೆ.

ಅಹಿಂದ ವರ್ಗಗಳ ಪ್ರಶ್ನಾತೀತ ನಾಯಕರಾಗಿ ವಿಜೃಂಭಿಸುತ್ತಿರುವ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲು ಹರಿಪ್ರಸಾದ್ ಅವರನ್ನು ಹೈಕಮಾಂಡ್ ನ ಕೆಲವು ನಾಯಕರು ಅಸ್ತ್ರವಾಗಿ ಬಳಸಿಕೊಳ್ಳಲು ಹೊರಟಿರುವುದು ಗುಟ್ಟೇನೂ ಅಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿದ್ದ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆಯಾದರೂ ಇದರಿಂದ ಕಾಂಗ್ರೆಸ್ ವರ್ಚಸ್ಸಿಗೆ ಬದಲಾಗಿ ಸಿದ್ದರಾಮಯ್ಯ ಜನಪ್ರಿಯತೆ ಹೆಚ್ಚಾಗಿದೆ. ಇದು ಕಾಂಗ್ರೆಸ್ ನ ದಿಲ್ಲಿ ಮುಖಂಡರನ್ನು ಆತಂಕಕ್ಕೆ ದೂಡಿದೆ. ಸಿದ್ದರಾಮಯ್ಯ ಅವರನ್ನು ಮಣಿಸಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಿಂತ ಹಿಂದುಳಿದ ವರ್ಗದ ಮತ್ತೊಬ್ಬ ನಾಯಕನಿಂದ ಮಾತ್ರ ಸಾಧ್ಯ ಎಂಬ ತಿರ್ಮಾನಕ್ಕೆ ಬಂದಿರುವ ಅವರು ಹರಿಪ್ರಸಾದ್ ಬೆಂಬಲಕ್ಕೆ ಗುಟ್ಟಾಗಿ ನಿಂತಿದ್ದಾರೆ.

ಸದ್ಯದ ಸನ್ನಿವೇಶವನ್ನು ಬಳಸಿಕೊಂಡು ಸಚಿವ ಸಂಪುಟ ಪುನಾರಚಿಸುವಂತೆ ಮಾಡಿ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿದರೆ ಅದರಿಂದ ದೂರಗಾಮಿ ಪ್ರಯೋಜನಗಳು ಸಾಧ್ಯ ಎಂಬ ಲೆಕ್ಕಾಚಾರವೂ ಇದರ ಹಿಂದಿದೆ. ಆದರೆ ಈ ಸೇರ್ಪಡೆಗೆ ಸಿದ್ದರಾಮಯ್ಯ ಒಪ್ಪುವ ಸಾಧ್ಯತೆಗಳು ಕಡಿಮೆ. 

ಹಿಂದುಳಿದ ವರ್ಗಕ್ಕೆ ಸೇರಿದ ಈಡಿಗ ಸಮುದಾಯ ಕರಾವಳಿ ಹಾಗುಉತ್ತರ ಕರ್ನಾಟಕದ ಪ್ರದೇಶಗಳೂ ಸೇರಿದಂತೆ ರಾಜ್ಯದ ಸುಮಾರು ಎಂಟು ಜಿಲ್ಲೆಗಳಲ್ಲಿ ನಿರ್ಣಾಯಕ ಪ್ರಾಬಲ್ಯ ಹೊಂದಿದೆ. ಒಂದು ಕಾಲಕ್ಕೆ ಈ ಸಮುದಾಯದ ನಾಲ್ಕು ಮಂದಿ ಸಂಸದರು ಲೋಕಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದರು. 

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ನೇತೃತ್ವ ದಲ್ಲಿ ಪ್ರಬಲವಾಗಿ ಸಂಘಟಿತವಾಗಿದ್ದ  ಈ ಸಮುದಾಯಕ್ಕೆ ಅವರ ನಿಧನಾ ನಂತರ ಸಮರ್ಥ ನಾಯಕರೇ ಇಲ್ಲದಂತಾಗಿದೆ. ಈ ಸನ್ನಿವೇಶವನ್ನು ಬಳಸಿಕೊಂಡು ಹರಿಪ್ರಸಾದ್ ತಮ್ಮ ಸಮುದಾಯದ ಜತೆಗೇ ಸೂಕ್ತ ರಾಜಕೀಯ ಪ್ರಾತಿನಿಧ್ಯ ಹೊಂದಿರದ ಇತರೆ ಹಿಂದುಳಿದ ಜಾತಿಗಳನ್ನು ಒಂದೇ ವೇದಿಕೆಯಡಿ ತಂದು ನಾಯಕತ್ವ ನೀಡಲು ಹೊರಟಿದ್ದಾರೆ. ಈ ಎಲ್ಲ ಲೆಕ್ಕಾಚಾರಗಳು ತತ್ ಕ್ಷಣಕ್ಕೆ ಫಲ ನೀಡುವ ಸಾಧ್ಯತೆಗಳು ಇಲ್ಲ. ಅವರನ್ನು ಬಹಿರಂಗವಾಗಿ ಬೆಂಬಲಿಸಲು ಕಾಂಗ್ರೆಸ್ ನ ಯಾವ ನಾಯಕರೂ ಸಿದ್ಧವಾಗಿಲ್ಲ. ಹೀಗಾಗಿ ಅವರದ್ದು ರಣರಂಗದಲ್ಲಿ ನಿಂತ ಒಂಟಿ ಸೈನಿಕನ ಸ್ಥಿತಿ. 

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com