ಡಯಾಬಿಟಿಕ್ ರೆಟಿನೋಪತಿ ಎಂಬ ಕಣ್ಣಿನ ಸಮಸ್ಯೆ (ಕುಶಲವೇ ಕ್ಷೇಮವೇ)

ಒಂದು ದಿನ ಸುಮಾರು 55-60 ವರ್ಷದ ಮಹಿಳೆಯೊಬ್ಬರು ನನ್ನ ಕ್ಲಿನಿಕ್ಕಿಗೆ ಬಂದು “ಡಾಕ್ಟ್ರೇ, ಇತ್ತೀಚೆಗೆ ಕಣ್ಣು ಸರಿಯಾಗಿ ಕಾಣುತ್ತಿಲ್ಲ.
ಡಯಾಬಿಟಿಕ್ ರೆಟಿನೋಪತಿ
ಡಯಾಬಿಟಿಕ್ ರೆಟಿನೋಪತಿ

ಡಾಒಂದು ದಿನ ಸುಮಾರು 55-60 ವರ್ಷದ ಮಹಿಳೆಯೊಬ್ಬರು ನನ್ನ ಕ್ಲಿನಿಕ್ಕಿಗೆ ಬಂದು “ಡಾಕ್ಟ್ರೇ, ಇತ್ತೀಚೆಗೆ ಕಣ್ಣು ಸರಿಯಾಗಿ ಕಾಣುತ್ತಿಲ್ಲ. ಎಲ್ಲವೂ ಮಂಜುಮಂಜಾಗಿ ಕಾಣುತ್ತಿದೆ” ಎಂದು ಸಮಸ್ಯೆ ಹೇಳಿಕೊಂಡರು. ಅವರ ಪೂರ್ವಾಪರ ಕೇಳಿ ತಿಳಿದುಕೊಂಡಾಗ ಡಯಾಬಿಟಿಸ್ ಸುಮಾರು 20 ವರ್ಷಕ್ಕಿಂತ ಹೆಚ್ಚು ಕಾಲದಿಂದ ಇರುವುದು ಗೊತ್ತಾಯಿತು. ಡಯಾಬಿಟಿಸ್ ಇರುವವರಿಗೆ ಕಣ್ಣಿನ ಸಮಸ್ಯೆ ಇರುವುದು ಸಾಮಾನ್ಯ ಎಂದು ಅವರಿಗೆ ತಿಳಿಸಿದೆ. ಸರಿಯಾದ ಪರೀಕ್ಷೆ ಮಾಡಿಸಿ ನೋಡಿದಾಗ ಅವರಿಗೆ ಡಯಾಬಿಟಿಸ್ ರೆಟಿನೋಪತಿ ಇರುವುದು ಗೊತ್ತಾಯಿತು.

ಇಂದು ಜನರನ್ನು ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಡಯಾಬಿಟಿಸ್ (ಮಧುಮೇಹ) ಕೂಡ ಒಂದು. ಇದನ್ನು ಸಕ್ಕರೆ ಕಾಯಿಲೆ ಎಂದೂ ಕರೆಯುತ್ತಾರೆ. ಇದು ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದರೆ ಅದು ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ. ಕಣ್ಣಿನ ಒಣಗುವಿಕೆ, ಮಸುಕಾದ ದೃಷ್ಟಿ ಮತ್ತು ಕಣ್ಣಿನ ಮೇಲೆ ಪೊರೆ ಬರುವುದು ಇಂತಹ ತೊಂದರೆಗಳು ಬರಬಹುದು. 

ಡಯಾಬಿಟಿಕ್ ರೆಟಿನೋಪತಿ ಎಂದರೇನು?

ಇಂದು ಡಯಾಬಿಟಿಸ್ ಇರುವವರಲ್ಲಿ ಹಲವಾರು ಜನರು ಡಯಾಬಿಟಿಕ್ ರೆಟಿನೋಪತಿ ಎಂಬ ಕಣ್ಣಿನ ತೊಂದರೆಯಿಂದ ಬಳಲುತ್ತಿದ್ದಾರೆ. ಇದು ಕಣ್ಣಿನ ರೆಟಿನಾ ಭಾಗದ (ಅಕ್ಷಿಪಟಲ) ಮೇಲೆ ಪರಿಣಾಮ ಬೀರುವ ಗಂಭೀರ ಸ್ಥಿತಿಯಾಗಿದೆ. ದೀರ್ಘ ಕಾಲದಿಂದ ಡಯಾಬಿಟಿಸ್ ಇರುವವರಿಗೆ ಮತ್ತು ಬೊಜ್ಜು/ದೈಹಿಕ ದೃಢತೆ (ಫಿಟ್) ಇಲ್ಲದಿರುವ ಕಾರಣದಿಂದ ಉಂಟಾಗುವ ಟೈಪ್ 2 ಡಯಾಬಿಟಿಸ್ ಇರುವವರಲ್ಲಿ 20% ರಿಂದ 40% ರಷ್ಟು ಜನರು ಡಯಾಬಿಟಿಕ್ ರೆಟಿನೋಪತಿಯಿಂದ ಬಳಲುತ್ತಿದ್ದಾರೆ. ರಕ್ತದಲ್ಲಿರುವ ಗ್ಲೂಕೋಸ್ ರೆಟಿನಾದ ಸಣ್ಣ ರಕ್ತನಾಳಗಳನ್ನು ಹಾನಿಗೊಳಿಸುವುದರಿಂದ ಡಯಾಬಿಟಿಕ್ ರೆಟಿನೋಪತಿ ಉಂಟಾಗುತ್ತದೆ.

ಡಯಾಬಿಟಿಕ್ ರೆಟಿನೋಪತಿ ಪರಿಣಾಮಗಳು

ಡಯಾಬಿಟಿಕ್ ರೆಟಿನೋಪತಿಯನ್ನು ಸರಿಯಾಗಿ ನಿರ್ವಹಿಸದಿದ್ದರೆ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಇದು ನೇರವಾಗಿ ರೆಟಿನಾದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಆರಂಭದಲ್ಲಿ ಯಾವುದೇ ಲಕ್ಷಣಗಳು ಕಂಡುಬರದಿದ್ದರೂ, ಕಣ್ಣುಗಳ ಒಣಗುವಿಕೆಯಿಂದ ಶುರುವಾಗಿ ದೃಷ್ಟಿ ಸಾಮರ್ಥ್ಯ ಕ್ರಮೇಣ ಕಡಿಮೆಯಾಗಿ ಕುರುಡುತನ ಉಂಟಾಗುವ ಸಂಭವವೂ ಇದೆ. ಡಯಾಬಿಟಿಕ್ ರೆಟಿನೋಪತಿಯ ಉಂಟಾಗಲು ಡಯಾಬಿಟಿಸ್ ಎಷ್ಟು ವರ್ಷಗಳಿಂದ ಇದೆ ಎಂಬುದು, ಹೈಪರ್ಗ್ಲೈಸೀಮಿಯಾ (ರಕ್ತದಲ್ಲಿ ಅಧಿಕ ಸಕ್ಕರೆ ಅಂಶ) ಮತ್ತು ಅಧಿಕ ರಕ್ತದೊತ್ತಡ ಪ್ರಮುಖ ಪಾತ್ರ ವಹಿಸಿವೆ. ಆದ್ದರಿಂದ ಈ ಮೂರು ಅಂಶಗಳ ಮೇಲೆ ಡಯಾಬಿಟಿಸ್ ಇರುವವರು ನಿರಂತರ ಗಮನ ವಹಿಸಬೇಕು. ಡಯಾಬಿಟಿಸ್ ಇರುವವರು ಸಾಮಾನ್ಯವಾಗಿ ಈ ರೋಗದ ತೀವ್ರತೆಯು ಹೆಚ್ಚಾಗುವವರೆಗೂ ಅದನ್ನು ಗಮನಿಸಿರುವುದಿಲ್ಲ.

ಡಯಾಬಿಟಿಕ್ ರೆಟಿನೋಪತಿ ಪತ್ತೆ ಹೇಗೆ?
ಬಹುತೇಕ ಪ್ರಕರಣಗಳಲ್ಲಿ ಆರಂಭದಲ್ಲಿ ಈ ಸಮಸ್ಯೆ ಕಂಡುಬಂದಾಗ ರೋಗಿಗೆ ಯಾವುದೇ ರೋಗಲಕ್ಷಣಗಳು ಕಾಣಿಸುವುದಿಲ್ಲ. ತುಂಬಾ ವಿರಳವಾಗಿ ಎಲ್ಲೋ ಕೆಲವರಿಗೆ ಮಾತ್ರ ಕಣ್ಣುಗಳ ಮುಂಭಾಗದಲ್ಲಿ ಸಣ್ಣ ಸಣ್ಣ ಕಪ್ಪು ಚುಕ್ಕೆಗಳು ಕಾಣಿಸುತ್ತವೆ. ಇದರಿಂದ ಕಣ್ಣು ಮಂಜಾಗುವ ಸಾಧ್ಯತೆ ಇರುತ್ತದೆ. ಡಯಾಬಿಟಿಕ್ ರೆಟಿನೋಪತಿಯಿಂದ ಬಳಲುತ್ತಿರುವ ಹಲವರಲ್ಲಿ ಕೆಲವೇ ಜನರು ಮಾತ್ರ ಇಂತಹ ರೋಗ ಲಕ್ಷಣಗಳ ಬಗ್ಗೆ ಹೇಳಿಕೊಳ್ಳುತ್ತಾರೆ. ಉಳಿದವರಿಗೆ ಕಣ್ಣಿನ ಸಮಸ್ಯೆ ಇದೆ ಎಂಬುದೇ ಗೊತ್ತಾಗುವುದಿಲ್ಲ. ದೀರ್ಘ ಕಾಲದಿಂದ ಡಯಾಬಿಟಿಸ್ ಇರುವವರಿಗೆ ಸ್ವಲ್ಪ ಹೆಚ್ಚಾಗಿ ಕಣ್ಣುಗಳ ಮಧ್ಯ ಭಾಗದ ಕಪ್ಪು ಬಣ್ಣದ ಆಕಾರದಲ್ಲಿ ಬದಲಾವಣೆ ಕಾಣಬಹುದು. ಕಣ್ಣುಗಳ ಕಾಯಿಲೆ ಹೆಚ್ಚಾದಂತೆ ಕಣ್ಣುಗಳಿಗೆ ಮಂಜು ಕವಿಯುವ ಸಾಧ್ಯತೆ ಕೂಡ ಹೆಚ್ಚಾಗುತ್ತದೆ.

ಡಯಾಬಿಟಿಸ್ ಇರುವವರು ಮತ್ತು ವಯಸ್ಸಾದವರಿಗೆ, ಸಕಾಲಿಕ ರೋಗನಿರ್ಣಯ ಮತ್ತು ರೋಗ ನಿರ್ವಹಣೆಯನ್ನು ಸಕ್ರಿಯಗೊಳಿಸಲು ನಿಯಮಿತ ಕಣ್ಣಿನ ತಪಾಸಣೆಯು ಪ್ರಮುಖವಾಗಿದೆ. ಡಯಾಬಿಟಿಕ್ ರೆಟಿನೋಪತಿ ರೋಗನಿರ್ಣಯ ಮಾಡಿದ ನಂತರ ಡಯಾಬಿಟಿಸನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಕಣ್ಣಿನ ಕಾಯಿಲೆಗಳ ಹೆಚ್ಚಳ ತಡೆಯಲು ಚಿಕಿತ್ಸೆಗೆ ಬದ್ಧವಾಗಿರುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಡಯಾಬಿಟಿಸ್ ಇರುವವರ ಕಣ್ಣುಗಳ ಸಮಸ್ಯೆಗಳು ಕಾಣಿಸಲು ಪ್ರಾರಂಭವಾದರೆ ಅವರು ಮೊದಲಿಗೆ ಆಹಾರ ಸೇವನೆಯ ಬಗ್ಗೆ ಗಮನ ವಹಿಸಬೇಕು. ಸಕ್ಕರೆ ಅಂಶ ಹೆಚ್ಚಾಗಿರುವ ಆಹಾರಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ತಮ್ಮ ದೇಹದ ರಕ್ತದ ಒತ್ತಡವನ್ನು ಸಾಧ್ಯ ಆದಷ್ಟು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿಕೊಳ್ಳಬೇಕು. 

ಡಯಾಬಿಟಿಕ್ ರೆಟಿನೋಪತಿಗೆ ಆಯುರ್ವೇದದಲ್ಲಿ ಚಿಕಿತ್ಸೆ

ಡಯಾಬಿಟಿಕ್ ರೆಟಿನೋಪತಿ ಬರದಂತೆ ತಡೆಯಲು ಆಯುರ್ವೇದದಲ್ಲಿ ನೇತ್ರ ತರ್ಪಣ ಎಂಬ ಚಿಕಿತ್ಸೆ ಇದೆ. ಇದರಲ್ಲಿ ಉದ್ದಿನ ಹಿಟ್ಟನ್ನು ಕಣ್ಣಿನ ಸುತ್ತಲೂ ಕಟ್ಟಿ ಔಷಧೀಯ ತುಪ್ಪವನ್ನು 30 ರಿಂದ 45 ನಿಮಿಷಗಳ ತನಕ ಕಣ್ಣಿಗೆ ನಿಧಾನವಾಗಿ ಬಿಡುತ್ತಾರೆ. ಇದರಿಂದ ಕಣ್ಣಿನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ವರ್ಷಕ್ಕೆ ಒಂದು ವಾರ ಕಾಲ ಈ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬೇಕು. 

ಡಯಾಬಿಟಿಕ್ ರೆಟಿನೋಪತಿ ಸಮಸ್ಯೆಯನ್ನು ಆರಂಭದಲ್ಲಿ ಪತ್ತೆ ಹಚ್ಚಬೇಕಾದರೆ ಡಯಾಬಿಟಿಸ್ ಇರುವವರು ಕನಿಷ್ಠ ಪಕ್ಷ ವರ್ಷಕ್ಕೆ ಒಂದು ಬಾರಿಯಾದರೂ ತಮ್ಮ ಕಣ್ಣುಗಳ ಪರೀಕ್ಷೆಯನ್ನು ಮಾಡಿಸಿಕೊಳ್ಳಲೇಬೇಕು. ಇದನ್ನು ಆರಂಭಿಕ ಹಂತದಲ್ಲಿ ಗುರುತಿಸಿದರೆ ಪರಿಹಾರ ಮಾಡಿಕೊಳ್ಳುವುದು ಸಾಧ್ಯ. ಹಾಗೆಯೇ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಕೆಲವು ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಂಡು ಡಯಾಬಿಟಿಸ್ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಡಯಾಬಿಟಿಕ್ ರೆಟಿನೋಪತಿ ಸಮಸ್ಯೆ ಅಷ್ಟಾಗಿ ಕಾಡಲಾರದು.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com