ಮನುಷ್ಯನ ದೈಹಿಕ–ಮಾನಸಿಕ ವಿಶ್ರಾಂತಿಯ ಸಮಯ ಎಂದರೆ ನಿದ್ರೆ. ಸಾಮಾನ್ಯವಾಗಿ ಒಬ್ಬ ಮನುಷ್ಯನಿಗೆ ಆರೋಗ್ಯವಾಗಿರಲು ಪ್ರತಿನಿತ್ಯ ಎಂಟು ಗಂಟೆಗಳ ನಿದ್ರೆ ಅತ್ಯವಶ್ಯಕ. ಮನುಷ್ಯರೂ ಸೇರಿದಂತೆ ಭೂಮಿಯಲ್ಲಿ ವಾಸಿಸುವ ಎಲ್ಲಾ ಜೀವಿಗಳಿಗೆ ಆಹಾರ, ನೀರು ಮತ್ತು ಗಾಳಿಯಂತೆ ಸಾಕಷ್ಟು ನಿದ್ರೆ ಅರೋಗ್ಯಕ್ಕೆ ಬಹಳ ಮುಖ್ಯ.
ನಿದ್ರಾಹೀನತೆ ಎಂದರೇನು?
ನಿದ್ರಾಹೀನತೆ ಎಂದರೆ ನಿದ್ರೆ ಸರಿಯಾಗಿ ಬರದೇ ಇರದಿರುವುದು. ಇದರಿಂದ ಸದಾಕಾಲ ಮಂಪರಿನ ಸ್ಥಿತಿ, ಶಕ್ತಿಯ ಕೊರತೆ, ಇರಿಸುಮುರಿಸು ಮತ್ತು ಕೆಲವೊಮ್ಮೆ ಖಿನ್ನತೆ ಉಂಟಾಗಬಹುದು. ನಿದ್ರಾಹೀನತೆಯು ಅಲ್ಪಕಾಲಿಕ ಅಥವಾ ದೀರ್ಘಕಾಲಿಕವಾಗಿ ಕಾಡಬಹುದು.
ಮಾನಸಿಕ ಒತ್ತಡ, ಯೋಚನೆ, ಎದೆಯುರಿ, ಋತುಬಂಧ, ಔಷಧಗಳು, ಮದ್ಯಪಾನ ಅಥವಾ ಬೇರೆ ಮಾದಕವಸ್ತುಗಳ ಪರಿಣಾಮ, ಸರಿಯಾದ ಸಮಯಕ್ಕೆ ನಿದ್ರಿಸದೇ ಇರುವುದು ಅಥವಾ ಅನಿಯಮಿತ ಕೆಲಸದ ಅವಧಿ ಅಥವಾ ನೈಟ್ ಶಿಫ್ಟ್ ನಿದ್ರಾಹೀನತೆಗೆ ಸಾಮಾನ್ಯ ಕಾರಣಗಳು. ಇದರಿಂದ ದೇಹದ ಜೈವಿಕ ಗಡಿಯಾರಕ್ಕೆ ಅಡ್ಡಿಯಾಗುತ್ತದೆ.
ಆರೋಗ್ಯದ ಮೇಲೆ ನಿದ್ರಾಹೀನತೆಯ ಪರಿಣಾಮ
ಒಂದು ಅಂದಾಜಿನ ಪ್ರಕಾರ ವಯಸ್ಕರಲ್ಲಿ ಶೇಕಡಾ 15ರಷ್ಟು ಜನರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ವಯಸ್ಸಾದಂತೆ ಇದರ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು. ಪುರುಷರಿಗಿಂತ ಮಹಿಳೆಯರು ಇದಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ನಿದ್ರಾಹೀನತೆಯಿಂದ ಬಳಲುತ್ತಿರುವ ಜನರು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ದಣಿವು ಮತ್ತು ಕಿರಿಕಿರಿಯನ್ನು ಅನುಭವಿಸುತ್ತಾರೆ. ಕೆಲವೊಮ್ಮೆ ತೂಕಡಿಕೆ ಬಂದರೂ ಅವರಿಗೆ ನಿದ್ರೆ ಮಾಡಲು ಆಗುವುದಿಲ್ಲ.
ಆಧುನಿಕ ಜಗತ್ತಿನಲ್ಲಿ ಅದರಲ್ಲಿಯೂ ವಿಶೇಷವಾಗಿ ಕೊರೊನಾ ಮಹಾಮಾರಿ ಸಮಯದಲ್ಲಿ ನಿದ್ರಾಹೀನತೆ ಸಮಸ್ಯೆ ಹೆಚ್ಚಾಗಿದೆ. ಸರಿಯಾದ ಸಮಯದಲ್ಲಿ ಸರಿಯಾಗಿ ನಿದ್ರೆ ಮಾನಸಿಕ ನೆಮ್ಮದಿ ಹಾಗೂ ದೈಹಿಕ ಯೋಗಕ್ಷೇಮಕ್ಕೆ ಅತ್ಯಗತ್ಯ ಎಂದು ಸಂಶೋಧನೆಗಳು ಸಾಬೀತು ಮಾಡಿವೆ. ನಿದ್ರಾಹೀನತೆ ಬುದ್ದಿ ಮತ್ತು ಭಾವನಾತ್ಮಕ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ಬಾಯಿ ಹುಣ್ಣಿಗೆ ಮನೆಮದ್ದು ಹಾಗೂ ಆಯುರ್ವೇದ ಪರಿಹಾರಗಳು
ಇತ್ತೀಚೆಗಂತೂ ಪೋಷಕರು ಮಕ್ಕಳಿಗೆ ಮೊಬೈಲ್ ಫೋನನ್ನು ಕೊಟ್ಟು ಗೇಮ್ಸ್ ಆಡಲು ಅಥವಾ ಕಾರ್ಟೂನುಗಳನ್ನು ನೋಡಲು ಕೊಡುತ್ತಾರೆ. ರಾತ್ರಿಯ ಹೊತ್ತು ಗಂಟಗಟ್ಟಲೇ ಮಕ್ಕಳು ಮೊಬೈಲ್ ಫೋನನ್ನು ಹಿಡಿದುಕೊಂಡು ಕೂರುತ್ತಾರೆ. ಇದರಿಂದ ಅವರ ಕಣ್ಣಿಗಷ್ಟೇ ಅಲ್ಲ ನಿದ್ರಿಸುವ ಅವಧಿಯ ಮೇಲೆಯೂ ಪರಿಣಾಮ ಆಗುತ್ತದೆ. ಈ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು. ಬೆಳೆಯುವ ಮಕ್ಕಳಿಗೆ ಕನಿಷ್ಠ ಒಂಬತ್ತು-ಹತ್ತು ಗಂಟೆಗಳ ನಿದ್ರೆ ಬೇಕೇಬೇಕು.
ಜೀವನಶೈಲಿ ಬದಲಾವಣೆಯಿಂದ ನಿದ್ರಾಹೀನತೆ ದೂರ
ನಿದ್ರೆ ಸರಿಯಾಗಿ ಮಾಡದಿರುವುದು, ಅಡೆತಡೆಯ ನಿದ್ದೆ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುತ್ತದೆ. ನಿದ್ರಾಹೀನತೆಯಿಂದ ಮಾನಸಿಕ ಖಿನ್ನತೆ, ರಕ್ತದ ಒತ್ತಡ, ಬೊಜ್ಜು ಮತ್ತಿತರ ಸಮಸ್ಯೆ ಕಾಣಿಸಿಕೊಳ್ಳಬಹುದು. ಆದ್ದರಿಂದ ನಿದ್ರಾಹೀನತೆ ಉಂಟಾಗದಂತೆ ಜೀವನಶೈಲಿಯನ್ನು ಬದಲಿಸಿಕೊಳ್ಳುವುದೇ ಉತ್ತಮ ಮಾರ್ಗ.
ನಿದ್ರಾಹೀನತೆಗೆ ಆಯುರ್ವೇದದಲ್ಲಿ ಪರಿಹಾರ
ಆಯುರ್ವೇದದಲ್ಲಿ ನಿದ್ರಾಹೀನತೆ ಉತ್ತಮ ಪರಿಹಾರವಿದೆ. ಈ ಸಮಸ್ಯೆ ಇದ್ದವರು ಒಂದು ಚಮಚ ಬ್ರಾಹ್ಮಿ ಚೂರ್ಣಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿ ಮಲಗುವ ಸ್ವಲ್ಪ ಸಮಯ ಮುಂಚೆ ಸೇವಿಸಬೇಕು. ಡಯಾಬಿಟಿಸ್ ಇದ್ದವರು ಜೇನುತುಪ್ಪಕ್ಕೆ ಬದಲಾಗಿ ಬಿಸಿನೀರನ್ನು ಬಳಸಬಹುದು.
ಇದನ್ನೂ ಓದಿ: ಹುಳುಕು ಹಲ್ಲು ಉಂಟಾಗಲು ಕಾರಣಗಳೇನು? ಚಿಕಿತ್ಸೆ ಹೇಗೆ?
ಅರ್ಧ ಚಮಚ ಗಸಗಸೆಯನ್ನು ಎರಡು ಅಥವಾ ಮೂರು ಗಂಟೆಗಳ ಕಾಲ ಕುಡಿಯುವ ನೀರಿನಲ್ಲಿ ನೆನೆಸಿ ಮಲಗುವ ಮುಂಚೆ ಅದನ್ನು ಅಗಿದು ತಿಂದು ನೀರನ್ನು ಕುಡಿಯಬೇಕು.
ದೀರ್ಘಕಾಲ ನಿದ್ರಾಹೀನತೆ ಸಮಸ್ಯೆ ಇದ್ದವರು ಶಿರೋಧಾರಾ ಮತ್ತು ಶಿರೋಪಿಚು ಚಿಕಿತ್ಸೆಗಳನ್ನು ಪಡೆಯಬಹುದು. ಅಯುರ್ವೇದ ವೈದ್ಯರನ್ನು ಸಂಪರ್ಕಿಸಿ ಅವರು ಹೇಳಿದಂತೆ ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆಯನ್ನು ಮಾಡಿಕೊಂಡು ನಿದ್ರಾಹೀನತೆ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು.
ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com
Advertisement