ಹುಳುಕು ಹಲ್ಲು ಉಂಟಾಗಲು ಕಾರಣಗಳೇನು? ಚಿಕಿತ್ಸೆ ಹೇಗೆ? (ಕುಶಲವೇ ಕ್ಷೇಮವೇ)

ಹಲ್ಲಿನ ಸಾಮಾನ್ಯ ಸಮಸ್ಯೆಗಳಲ್ಲಿ ಹುಳುಕು ಹಲ್ಲು ಕೂಡ ಒಂದು. ಹಲ್ಲಿನಲ್ಲಿ ಹುಳುಕು ಆಗಿದೆ ಎಂದರೆ ಸೂಕ್ಷ್ಮಾಣುಜೀವಿಗಳು ಹಲ್ಲಿನಲ್ಲಿ ಸೇರಿಕೊಂಡು ತೂತುಮಾಡಿ ಅದನ್ನು ಹಾಳುಮಾಡುತ್ತವೆ.
ಹುಳುಕು ಹಲ್ಲು (ಸಂಗ್ರಹ ಚಿತ್ರ)
ಹುಳುಕು ಹಲ್ಲು (ಸಂಗ್ರಹ ಚಿತ್ರ)

ಹಲ್ಲಿನ ಸಾಮಾನ್ಯ ಸಮಸ್ಯೆಗಳಲ್ಲಿ ಹುಳುಕು ಹಲ್ಲು ಕೂಡ ಒಂದು. ಹಲ್ಲಿನಲ್ಲಿ ಹುಳುಕು ಆಗಿದೆ ಎಂದರೆ ಸೂಕ್ಷ್ಮಾಣುಜೀವಿಗಳು ಹಲ್ಲಿನಲ್ಲಿ ಸೇರಿಕೊಂಡು ತೂತುಮಾಡಿ ಅದನ್ನು ಹಾಳುಮಾಡುತ್ತವೆ. ಹೀಗೆ ಹುಳುಕು ಹಿಡಿದಿರುವ ಹಲ್ಲಿಗೆ ಹುಳುಕು ಹಲ್ಲು ಎಂದು ಹೇಳುತ್ತಾರೆ. ಮಕ್ಕಳು ದೊಡ್ಡವರು ಎನ್ನದೇ ಇದು ಎಲ್ಲರನ್ನು ಒಂದೇ ರೀತಿಯಾಗಿ ಕಾಡುತ್ತದೆ. ಹಾಗೆಯೇ ಇದು ನೆನ್ನೆ ಮೊನ್ನೆಯ ಸಮಸ್ಯೆಯಲ್ಲ. ಅನಾದಿ ಕಾಲದಿಂದಲೂ ಇದೆ.

ಹುಳುಕು ಹಲ್ಲು ಹೇಗೆ ಉಂಟಾಗುತ್ತದೆ?

ನಾವು ಆಹಾರವನ್ನು ಅಗಿದು ತಿನ್ನುವಾಗ ಹಲ್ಲಿನ ಸಂದಿಗಳಲ್ಲಿ ಆಹಾರ ಕಣಗಳು ಸಿಕ್ಕಿಹಾಕಿಕೊಳ್ಳುತ್ತವೆ. ಬಾಯಿಯಲ್ಲಿರುವ ಸ್ಪೆಪ್ಟ್ರೋಕಾಕಸ್ ಮ್ಯೂಟಾನ್ಸ್ ಎಂಬ ಸಹಜ ಸೂಕ್ಷ್ಮಾಣುಜೀವಿಯು (ಬ್ಯಾಕ್ಟೀರಿಯಾ) ಆಹಾರದಲ್ಲಿರುವ ಸಕ್ಕರೆ, ಪಿಷ್ಟ ಮತ್ತಿತರ ಪೋಷಕಾಂಶಗಳು ಹಲ್ಲಿನ ಸಂದಿಗಳಲ್ಲಿ ಸಿಕ್ಕಿಹಾಕಿಕೊಂಡಾಗ ಅವುಗಳನ್ನು ಪಡೆದು ಕ್ರಿಯಾಶೀಲವಾಗುತ್ತದೆ. ಈ ಪೋಷಕಾಂಶಗಳು ಬಾಯಿಯಲ್ಲಿ ಆಮ್ಲೀಯ ವಾತಾವರಣವನ್ನು ನಿರ್ಮಿಸುತ್ತವೆ. ಆಮ್ಲೀಯ ವಾತಾವರಣ ಸೂಕ್ಷ್ಮಾಣುಜೀವಿಗಳ ಬೆಳವಣಿಗೆಗೆ ಸಹಾಯಕಾರಿ. ಇದರಿಂದ ಸೂಕ್ಷ್ಮಾಣುಜೀವಿಗಳು ಹೆಚ್ಚಾಗಿ ಹಲ್ಲಿನ ಗಟ್ಟಿ ಮೇಲ್ಪದರವಾದ ಎನಾಮೆಲ್ಲನ್ನು ಆಕ್ರಮಿಸುತ್ತವೆ. ಇದೇ ಹಲ್ಲು ಹುಳುಕಾಗಲು ಮೊದಲ ಕಾರಣ. ಎನಾಮೆಲ್ಲನ್ನು ಮೊದಲು ಆಕ್ರಮಿಸಿ ನಂತರ ಒಳಪದರಗಳಿಗೆ ಹಬ್ಬಿ ಹಲ್ಲನ್ನು ಸೂಕ್ಷ್ಮಾಣುಜೀವಿಗಳು ದುರ್ಬಲಗೊಳಿಸುತ್ತವೆ.

ಹುಳುಕು ಆರಂಭದಲ್ಲಿ ಹಲ್ಲಿನ ಮೇಲೆ ಒಂದು ಕಪ್ಪುಚುಕ್ಕೆಯಂತೆ ಕಾಣಿಸಿಕೊಳ್ಳುತ್ತದೆ. ನಿಧಾನವಾಗಿ ಅದು ದೊಡ್ಡದಾಗುತ್ತದೆ. ಹುಳುಕಿಗೆ ಹಲ್ಲುಗಳು ಅದರಲ್ಲೂ ದವಡೆ ಹಲ್ಲು (ಮೇಲಿನ ಮತ್ತು ಕೆಳಗಿನ ದವಡೆ ಹಲ್ಲುಗಳು) ಸಾಮಾನ್ಯವಾಗಿ ಬಲಿಯಾಗುತ್ತದೆ. ಮುಂದಿನ ಹಲ್ಲುಗಳಿಗಿಂತ ದವಡೆ ಹಲ್ಲುಗಳು ಆಹಾರ ಅಗಿಯುವುದರಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಅದ್ದರಿಂದ ಅಲ್ಲಿಯೇ ಆಹಾರಕಣಗಳು ಹೆಚ್ಚಾಗಿ ಸಿಕ್ಕಿಹಾಕಿಕೊಳ್ಳುತ್ತವೆ. ದವಡೆ ಹಲ್ಲಿನ ಮೇಲೆ ಹುಳುಕು ಚಿಕ್ಕ ಕಪ್ಪು ಚುಕ್ಕೆಯಂತೆಯೇ ಕಾಣಿಸಿಕೊಳ್ಳುತ್ತದೆ. ಹಲ್ಲುಗಳ ಸಂದಿಯಲ್ಲಿ ಹುಳುಕು ಆರಂಭವಾದರೆ ಸರಿಯಾಗಿ ಕಾಣಿಸಿಕೊಳ್ಳುವುದೂ ಇಲ್ಲ.

ಹುಳುಕು ಕಾಣಿಸಿಕೊಂಡ ತಕ್ಷಣ ನೋವಾಗುವುದಿಲ್ಲ. ಹುಳುಕಿಗೆ ಕಾರಣವಾದ ಸೂಕ್ಷ್ಮಾಣುಜೀವಿಗಳು ಹಲ್ಲಿನ ಒಳಪದರಗಳನ್ನು ಭೇದಿಸಿ ಬುಡದಲ್ಲಿರುವ ರಕ್ತನಾಳಗಳಿಗೆ ಹಾನಿಯನ್ನುಂಟುಮಾಡಿದಾಗ ಅಂದರೆ ತೀವ್ರ ಮಟ್ಟಕ್ಕೆ ಹೋದಾಗ ನೋವು ಅನುಭವಕ್ಕೆ ಬರುತ್ತದೆ. ಹಲ್ಲುಗಳು ಅತಿ ಗಟ್ಟಿ. ಆದರೆ ಸೂಕ್ಷ್ಮಾಣುಜೀವಿಗಳು ಅವುಗಳನ್ನು ನುಗ್ಗಿ ಒಳಹೋಗುವಷ್ಟು ಸಾಮರ್ಥ್ಯ ಪಡೆದಿವೆ.

ಹುಳುಕು ಹಲ್ಲು ಉಂಟಾಗಲು ಕಾರಣಗಳೇನು?

ಹುಳುಕು ಹಲ್ಲು ಉಂಟಾಗಲು ಅತಿ ಸಿಹಿ, ಅಂಟಾದ ಪದಾರ್ಥಗಳು, ಆಮ್ಲಯುಕ್ತ ತಂಪು ಪಾನೀಯಗಳು, ಚಿಪ್ಸ್‍ನಂತಹ ಎಣ್ಣೆಯಲ್ಲಿ ಕರಿದ ಪದಾರ್ಥಗಳು ಮತ್ತು ಸಿದ್ಧ ತಿನಿಸುಗಳ ಸೇವನೆಯೇ ಕಾರಣ. ಮಕ್ಕಳಲ್ಲಿ ಚಾಕೋಲೇಟ್ ಸೇವನೆ ಹುಳುಕು ಹಲ್ಲಿಗೆ ಪ್ರಮುಖ ಕಾರಣ. ಇಂದು ಒಂದಲ್ಲ ನೂರಾರು ಬಗೆಗಳ ಚಾಕೋಲೇಟ್‍ಗಳು ಮಾರುಕಟ್ಟೆಯಲ್ಲಿ, ಅಂಗಡಿಯಲ್ಲಿ ಮತ್ತು ಮಾಲ್‍ಗಳಲ್ಲಿ ಲಭ್ಯವಿವೆ. ಇವುಗಳನ್ನು ತಿಂದರೆ ಹಲ್ಲು ಹುಳುಕು ಆಗುವುದು ಸಾಮಾನ್ಯ. ಹಾಗೆಯೇ ನಾವು ಕುಡಿಯುವ ನೀರು ಕೂಡ ಸಹ ಸ್ವಚ್ಛವಾಗಿರಬೇಕು. ಅಶುದ್ಧ ನೀರಿನಲ್ಲಿ ಹಲವಾರು ಬಗೆಗಳ ಸೂಕ್ಷ್ಮಾಣಜೀವಿಗಳು ಇರುತ್ತವೆ. ಅವುಗಳು ಹಲ್ಲಿಗೆ ಅಂಟಿಕೊಂಡು ತೊಂದರೆಯನ್ನುಂಟುಮಾಡಬಹುದು. ಅಲ್ಲದೇ ಅಂಟಾದ ಅನ್ನ, ಬ್ರೆಡ್ ಹಲ್ಲಿಗೆ ಸಿಕ್ಕಿಹಾಕಿಕೊಂಡು ಹುಳುಕಿಗೆ ದಾರಿಮಾಡಿಕೊಡುತ್ತವೆ.

ಹುಳುಕು ಹಲ್ಲಿಗೆ ಚಿಕಿತ್ಸೆ

ಆರಂಭದಲ್ಲಿ ಹಲ್ಲಿಗೆ ಚಿಕಿತ್ಸೆ ಸುಲಭ. ಆದರೆ ಗಂಭೀರ ಪರಿಸ್ಥಿತಿಯಲ್ಲಿ ಚಿಕಿತ್ಸೆ ಕಷ್ಟ. ಹಲ್ಲನ್ನು ಕಳೆದುಕೊಳ್ಳುವ ಸಂಭವ ಹೆಚ್ಚು. ಕೆಲವೊಮ್ಮೆ ಹುಳುಕಾಗಿರುವ ಹಲ್ಲನ್ನು ಕೀಳಿಸಿಕೊಳ್ಳಬೇಕಾಗುತ್ತದೆ. ಹುಳುಕಾದ ಹಲ್ಲಿಗೆ ಫಿಲ್ಲಿಂಗ್ (ಆಡುಭಾಷೆಯಲ್ಲಿ ಸಿಮೆಂಟ್ ಹಾಕಿಸಿಕೊಳ್ಳುವುದು) ಮಾಡಿಸಿಕೊಳ್ಳುವುದು ಸಾಮಾನ್ಯ. ಹುಳುಕು ಶುರುವಾದಾಗ ಹಲ್ಲಿಗೆ ಗಟ್ಟಿ ಪದಾರ್ಥವನ್ನು ತುಂಬಿಸಿದರೆ ಹುಳುಕನ್ನು ತಡೆಯಬಹುದು. ಇದು ಆಹಾರವನ್ನು ಅಗಿಯುವ ಸಾಮಥ್ರ್ಯವನ್ನು ಮರಳಿ ಒದಗಿಸಿಕೊಡುತ್ತದೆ. ಹೀಗೆ ಮಾಡದೇ ಇದ್ದರೆ ಹುಳುಕು ಹಲ್ಲಿನ ಒಳಗೆ ಹೋಗಿ ಹಾನಿ ಮಾಡುತ್ತದೆ.

ಹುಳುಕು ಹಲ್ಲು ತೀವ್ರವಾಗಿ ಹಲ್ಲಿನ ಬೇರಿನ ರಕ್ತನಾಳಗಳಿಗೆ ತೊಂದರೆಯುಂಟುಮಾಡಿದಾಗ ‘ರೂಟ್ ಕೆನಾಲ್’ ಎಂಬ ಚಿಕಿತ್ಸೆಯನ್ನು ದಂತವೈದ್ಯರು ಮಾಡುತ್ತಾರೆ. ಹಲ್ಲಿನ ಬೇರಿಗೆ ಔಷಧ ತುಂಬಿಸಿ ಮೇಲ್ಭಾಗಕ್ಕೆ ಗಟ್ಟಿ ಕವಚವನ್ನು (ಕ್ಯಾಪ್) ಜೋಡಿಸುತ್ತಾರೆ. ಹಲ್ಲನ್ನು ಹುಳುಕಾಗದಂತೆ ನೋಡಿಕೊಳ್ಳುವುದು ಸುಲಭ. ದಂತವೈದ್ಯರು ಹೇಳುವಂತೆ ಎಲ್ಲಕ್ಕಿಂತ ಮುಖ್ಯವಾಗಿ ಉತ್ತಮ ಆಹಾರ ಸೇವನೆ ಬಹಳ ಮುಖ್ಯ. ಸಿಹಿ ಆಹಾರ, ಸಿದ್ಧಪಡಿಸಿದ ತಿನಿಸುಗಳು, ಜಂಕ್ ಫುಡ್‍ಗಳಿಗಿಂತ ಹಣ್ಣು, ತರಕಾರಿ, ಹಾಲು ಮತ್ತು ಧಾನ್ಯಗಳು ಎಲ್ಲವನ್ನೂ ಒಳಗೊಂಡಿರುವ ಆಹಾರವನ್ನು ನಿತ್ಯವೂ ಸೇವಿಸಬೇಕು.

ಹಲ್ಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹೇಗೆ?

ದಿನಕ್ಕೆ ಕಡ್ಡಾಯವಾಗಿ ಎರಡು ಬಾರಿ ಸರಿಯಾಗಿ ಹಲ್ಲನ್ನು ಉಜ್ಜಬೇಕು. ಬೆಳಿಗ್ಗೆ ಎದ್ದಾಗ ಮತ್ತು ರಾತ್ರಿ ಮಲಗುವ ಮುನ್ನ ಹಲ್ಲನ್ನು ಚೆನ್ನಾಗಿ ಉಜ್ಜಿ ಸ್ವಚ್ಛವಾಗಿಟ್ಟುಕೊಳ್ಳಬೇಕು. ಆಹಾರ ಸೇವಿಸಿದ ಬಳಿಕ ಬಾಯಿಯನ್ನು ಚೆನ್ನಾಗಿ ತಿಳಿನೀರಿನಿಂದ ನಿಮುಕ್ಕಳಿಸಬೇಕು. ಆಹಾರಕಣಗಳು ಹಲ್ಲುಗಳ ಸಂದಿಗಳಿಗೆ ಸಿಕ್ಕಿಹಾಕಿಕೊಳ್ಳದಂತೆ ನೋಡಿಕೊಳ್ಳಬೇಕು. ಒಂದೊಮ್ಮೆ ಆಹಾರಕಣಗಳು ಹಲ್ಲುಗಳ ಸಂದಿಗಳಿಗೆ ಆಹಾರಕಣಗಳು ಸಿಕ್ಕಿಹಾಕಿಕೊಂಡಿದ್ದರೆ ಆಗಾಗ ದಂತದಾರ (ಡೆಂಟಲ್ ಫ್ಲಾಸ್ – ಔಷಧಿ ಅಂಗಡಿಗಳಲ್ಲಿ ದೊರೆಯುತ್ತದೆ) ಬಳಸಿ ಹಲ್ಲುಗಳನ್ನು ಸ್ವಚ್ಛ ಮಾಡಿಕೊಳ್ಳಬೇಕು. ಜೊತೆಗೆ ಕನಿಷ್ಠ ಆರು ತಿಂಗಳುಗಳಿಗೆ ಒಮ್ಮೆಯಾದರೂ ದಂತವೈದ್ಯರನ್ನು ಕಂಡು ಹಲ್ಲುಗಳನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು.

ವಾರಕ್ಕೊಮ್ಮೆ ತ್ರಿಫಲ ಚೂರ್ಣದಿಂದ ಬಾಯಿಯನ್ನು ಮುಕ್ಕಳಿಸಬೇಕು. ಮಾನಸಿಕ ಒತ್ತಡ ಇದ್ದಾಗ, ರಾತ್ರಿ ನಿದ್ದೆ ಬರದೇ ಇದ್ದರೆ ಕೆಲವರಿಗೆ ಹಲ್ಲಿನ ತೊಂದರೆ ಕಾಡಬಹುದು. ಕೆಲವರು ಆಗಾಗ ಹಲ್ಲನ್ನು ಕಡಿಯುತ್ತಾರೆ. ಇದರಿಂದ ಹಲ್ಲಿನ ಮೇಲಿರುವ ಎನಾಮೆಲ್ ಹೋಗಿ ನೋವು/ತೊಂದರೆ ಉಂಟಾಗಬಹುದು. ಮಾನಸಿಕ ಒತ್ತಡ, ನಿದ್ರಾಹೀನತೆ ಮತ್ತು ಹಲ್ಲು ಕಡಿಯುವುದನ್ನು ತಪ್ಪಿಸಲು ಯೋಗ ಮತ್ತು ಧ್ಯಾನದ ಅಭ್ಯಾಸ ರೂಢಿಸಿಕೊಳ್ಳುವುದು ಉತ್ತಮ. ಪ್ರತಿದಿನ ಆರರಿಂದ ಎಂಟು ಗಂಟೆಗಳ ಕಾಲ ನಿದ್ರೆ ಮಾಡುವುದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕಡ್ಡಾಯ.


ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com