ಬಿಳಿ ಮುಟ್ಟು ಅಥವಾ White Discharge (ಕುಶಲವೇ ಕ್ಷೇಮವೇ)

ಮಹಿಳೆಯರನ್ನು ಕಾಡುವ ಹಲವಾರು ಸಮಸ್ಯೆಗಳಲ್ಲಿ ಬಿಳಿಮುಟ್ಟು ಸ್ರಾವವೂ (White Discharge) ಒಂದು. ಇದನ್ನು ಲ್ಯುಕೋರಿಯಾ ಎಂದೂ ಕರೆಯುತ್ತಾರೆ.
ಬಿಳಿ ಮುಟ್ಟು (ಸಾಂಕೇತಿಕ ಚಿತ್ರ)
ಬಿಳಿ ಮುಟ್ಟು (ಸಾಂಕೇತಿಕ ಚಿತ್ರ)

ಮಹಿಳೆಯರನ್ನು ಕಾಡುವ ಹಲವಾರು ಸಮಸ್ಯೆಗಳಲ್ಲಿ ಬಿಳಿಮುಟ್ಟು ಸ್ರಾವವೂ (White Discharge) ಒಂದು. ಇದನ್ನು ಲ್ಯುಕೋರಿಯಾ ಎಂದೂ ಕರೆಯುತ್ತಾರೆ. ಋತುಚಕ್ರದ ಮುನ್ನಾ ದಿನಗಳಲ್ಲಿ, ಲೈಂಗಿಕ ಕ್ರಿಯೆಯ ವೇಳೆ ಹಾಗೂ ಗರ್ಭಿಣಿಯರಲ್ಲಿ ಬಿಳಿಮುಟ್ಟು ಸ್ರಾವ ಸಾಮಾನ್ಯ. ಹೆಣ್ಣಿನ ಜೀವಿತಾವಧಿಯಲ್ಲಿ ಕಿಶೋರಾವಸ್ಥೆಯಿಂದ ಹಿಡಿದು ವೃದ್ಧಾಪ್ಯದವರೆಗೂ ಒಂದಲ್ಲ ಒಂದು ಹಂತದಲ್ಲಿ ಬಿಳಿ ಮುಟ್ಟಿನ ಸಮಸ್ಯೆ ಕಾಡಬಹುದು. ಒಂದು ಸಂಶೋಧನೆಯ ಪ್ರಕಾರ ಭಾರತದಲ್ಲಿ ಸುಮಾರು ಶೇಕಡಾ ಐವತ್ತಕ್ಕಿಂತ ಹೆಚ್ಚು ಮಹಿಳೆಯರು ಬಿಳಿ ಸ್ರಾವದ ಸಮಸ್ಯೆಯಿಂದ ತೊಂದರೆಗೀಡಾಗಿದ್ದಾರೆ. ಈ ಸಮಸ್ಯೆ ದೇಹದಲ್ಲಿ ದೌರ್ಬಲ್ಯವನ್ನು ಉಂಟುಮಾಡುತ್ತದೆ. 

ಬಿಳಿ ಮುಟ್ಟು ಎಂದರೇನು?

ಬಿಳಿಮುಟ್ಟು ಯೋನಿಯ/ಜನನಾಂಗದ ಮೂಲಕ ಹೊರಸೂಸುವ ದ್ರವ ಮತ್ತು ದೇಹ ವಿಸರ್ಜಿಸಿದ ಜೀವಕೋಶಗಳ ಮಿಶ್ರಣವಾಗಿದೆ. ಇದು ಒಳಗಿನ ಕಲ್ಮಶಗಳೆಲ್ಲಾ ಸ್ವಚ್ಛಗೊಂಡು ಹೊರಹಾಕುವ ಕ್ರಿಯೆ. ಹಾಗಾಗಿ ಈ ಸ್ರಾವ ಆಗಾಗ ಅಗುತ್ತಿರಬೇಕು. ಆಗಲೇ ಒಳಗಿನ ಸೂಕ್ಷ್ಮ ಅಂಗಗಳೆಲ್ಲಾ ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿವೆ ಎಂದು ತಿಳಿದುಕೊಳ್ಳಬಹುದು. ಬಿಳಿ ಮುಟ್ಟು ದೇಹ ಗರ್ಭ ಧರಿಸಲು ಸೂಕ್ತ ಎಂಬುದರ ಸೂಚನೆಯೂ ಹೌದು. ಆರೋಗ್ಯ ಚೆನ್ನಾಗಿದ್ದಾಗ ಜನನಾಂಗದ ಸ್ವಚ್ಛತಾ ಕಾರ್ಯದ ಬಳಿಕ ಹೊರಹಾಕಲ್ಪಡುವ ದ್ರವ ಸಾಮಾನ್ಯವಾಗಿ ಅತಿ ಪಾರದರ್ಶಕವಲ್ಲದ ತಿಳಿಬಣ್ಣ ಮತ್ತು ಸ್ವಲ್ಪ ಅಂಟಾಗಿರುತ್ತದೆ. ಈ ಸ್ರಾವ ಅಂಡೋತ್ಪತ್ತಿಯ ದಿನ ಗರಿಷ್ಠವಾಗಿರುತ್ತದೆ. ಇತರೆ ದಿನಗಳಲ್ಲಿ ಸಾಮಾನ್ಯವಾಗಿ ನೀರಿನಂತಿರುತ್ತದೆ.

ಬಿಳಿಮುಟ್ಟು ವಿಸರ್ಜನೆ ಆಗುತ್ತಿದ್ದರೆ ಹೆಚ್ಚಿನ ಪ್ರಮಾಣದಲ್ಲಿ ಅದನ್ನು ಕಡೆಗಣಿಸಬಾರದು. ಏಕೆಂದರೆ ಕೆಲವು ಸಂದರ್ಭಗಳಲ್ಲಿ ಇದು ಗಂಭೀರವಾದ ಸೋಂಕು ಹಾಗೂ ಕಾಯಿಲೆಯ ಲಕ್ಷಣವೂ ಆಗಿರುತ್ತದೆ. ಅತಿಯಾದ ಸ್ರಾವದಿಂದ ದುರ್ವಾಸನೆ, ಯೋನಿ ಕಿರಿಕಿರಿ, ತುರಿಕೆ, ಕೆಂಪು ಗುಳ್ಳೆ, ಊತ ಮುಂತಾದ ಹಲವು ಗಂಭೀರ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಇಂತಹ ಸಂದರ್ಭಗಳಲ್ಲಿ ವೈದ್ಯರನ್ನು ತಡಮಾಡದೇ ಆದಷ್ಟು ಬೇಗ ಸಂಪರ್ಕಿಸಬೇಕು. ಗರ್ಭಾಶಯದಲ್ಲಿ ತೊಂದರೆ ಇದ್ದರೆ, ಯೋನಿಯ ಸೋಂಕು, ಅನೀಮಿಯಾ ಅಥವಾ ರಕ್ತಹೀನತೆಯಿಂದ ಬಳಲುತ್ತಿದ್ದರೂ ಬಿಳಿ ಮುಟ್ಟು ಹೆಚ್ಚು ಹೋಗುತ್ತದೆ. ಕೆಲವು ಮಹಿಳೆಯರು ಈ ಸಮಸ್ಯೆಯನ್ನು ಹೇಳಿಕೊಂಡರೆ ಮುಜುಗರ ಎಂದು ಭಾವಿಸುತ್ತಾರೆ. ಆದರೆ ಸಮಸ್ಯೆಯನ್ನು ಹೇಳಿಕೊಂಡರೆ ಅದರ ಪರಿಹಾರ ಸಾಧ್ಯ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು. ಜೊತೆಗೆ ಜಡ ಜೀವನಶೈಲಿ, ಒತ್ತಡ, ಹಲವಾರು ಕಿರಿಕಿರಿಗಳ ನಡುವೆ ಮಹಿಳೆಯರು ಹೆಚ್ಚಾಗಿ ಸ್ತ್ರೀರೋಗ ರೋಗಗಳ ಬಗ್ಗೆ ಜಾಗರೂಕರಾಗಿರುವ ಅವಶ್ಯಕತೆ ಹಿಂದೆಂದಿಗಿಂತ ಇಂದು ಹೆಚ್ಚಿದೆ.

ಬಿಳಿ ಮುಟ್ಟು ಸ್ರಾವಕ್ಕೆ ಕಾರಣ

ಅಧಿಕ ಬಿಳಿ ಮುಟ್ಟು ಸ್ರಾವಕ್ಕೆ ಸಾಮಾನ್ಯ ಕಾರಣವೆಂದರೆ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕು. ಜನನಾಂಗಕ್ಕೆ ನುಸುಳುವ ಬ್ಯಾಕ್ಟೀರಿಯಾಗಳನ್ನು ಹೊರಹಾಕಲು ಈ ಸ್ರಾವದ ಪ್ರಮಾಣ ಹೆಚ್ಚುತ್ತದೆ. ಸೂಕ್ಷ್ಮಾಣುಜೀವಿಗಳು ಅನೇಕ ರೀತಿಯಲ್ಲಿ ಯೋನಿಯನ್ನು ತಲುಪುತ್ತವೆ. ಲೈಂಗಿಕ ಸಂಪರ್ಕದ ಸಂದರ್ಭದಲ್ಲಿ, ಸ್ವಚ್ಛಗೊಳಿಸದ, ತೇವಾಂಶ ಇರುವ ಒಳ ಉಡುಪುಗಳನ್ನು ಧರಿಸುವುದರಿಂದ, ಮೂತ್ರಕೋಶ ಅಥವಾ ಕೆಳ ಮೂತ್ರ ನಾಳದ ಸೋಂಕಿನಿಂದ, ಗುದದ್ವಾರದ ಸೋಂಕಿನಿಂದ, ಋತುಸ್ರಾವದ ಸಮಯದಲ್ಲಿ ಆ ಭಾಗದ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದಾಗ ಹೀಗೆ ಅನೇಕ ರೀತಿಗಳಲ್ಲಿ ಸೂಕ್ಷ್ಮಾಣುಜೀವಿಗಳು ಯೋನಿಯೊಳಗೆ ಪ್ರವೇಶ ಮಾಡುತ್ತವೆ. 

ಕೆಲವೊಮ್ಮೆ ಅತಿಯಾದ ಒತ್ತಡ ಮತ್ತು ಪೋಷಕಾಂಶಗಳ ಕೊರತೆಯಿಂದ ಬಿಳಿ ಮುಟ್ಟಿನ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯಿಂದಾಗಿ ತಲೆಸುತ್ತು, ಸುಸ್ತು, ತಲೆನೋವು ಮತ್ತು ಮಲಬದ್ಧತೆ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ಉಂಟಾಗದಂತೆ ಮಾಡಲು ಒಳಉಡುಪನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಹಾಗೂ ಮುಟ್ಟಿನ ಸಮಯದಲ್ಲಿ ದೀರ್ಘಕಾಲದವರೆಗೆ ಒಂದೇ ಪ್ಯಾಡ್ ಅನ್ನು ಬಳಸಬಾರದು. ಇದು ಸೋಂಕಿನ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸೂಕ್ಷ್ಮಾಣುಜೀವಿಗಳನ್ನು ನಿಯಂತ್ರಿಸುವ ಹಾಗೂ ನಾಶ ಮಾಡುವ ನಂಜು ನಿರೋಧಕ ಔಷಧದ ಬಳಕೆಯಿಂದ ಬಿಳಿ ಮುಟ್ಟನ್ನು ಗುಣಪಡಿಸಬಹುದು. ಈ ಔಷಧಗಳನ್ನು ವೈದ್ಯರ ಮಾರ್ಗದರ್ಶನದಲ್ಲಿ ಉಪಯೋಗಿಸಬೇಕು.  

ಗರ್ಭಕಂಠದ ಕ್ಯಾನ್ಸರ್‌

ಕೆಲವೊಮ್ಮೆ ಬಿಳಿ ಮುಟ್ಟು ಗರ್ಭಕಂಠದ ಕ್ಯಾನ್ಸರ್‌ನ ಲಕ್ಷಣ ಇದ್ದರೂ ಇರಬಹುದು. ಪ್ಯಾಪ್ ಸ್ಮಿಯರ್ ಪರೀಕ್ಷೆಯಿಂದ ಪತ್ತೆ ಮಾಡಬಹುದು. ನಲವತ್ತು ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರೂ ಪ್ಯಾಪ್ ಪರೀಕ್ಷೆಯನ್ನು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಇದು ಗರ್ಭಕಂಠದ ಕ್ಯಾನ್ಸರನ್ನು ಆರಂಭದ ಹಂತದಲ್ಲೇ ಪತ್ತೆ ಮಾಡಲು ನೆರವಾಗುತ್ತದೆ. ಗರ್ಭಕಂಠದ ಕ್ಯಾನ್ಸರ್ ಭಾರತದಲ್ಲಿ ಒಂದು ದೊಡ್ಡ ಕಾಯಿಲೆಯಾಗಿದೆ. ಋತುಬಂಧದ ನಂತರ ಬಿಳಿ ಮುಟ್ಟು ಸ್ರಾವ ಹೆಚ್ಚಾಗಿದ್ದರೆ ವೈದ್ಯರನ್ನು ಕಾಣಲೇಬೇಕು. 

ಸೂಕ್ಷ್ಮಾಣುಜೀವಿಗಳ ಸೋಂಕು ತಡೆಗಟ್ಟಲು ಸದಾ ಕಾಲ ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಹೆಚ್ಚು ಬಿಗಿ ಇರದ, ಸಡಿಲವಾದ, ಗಾಳಿಯಾಡುವಂತಹ ಹತ್ತಿಯ ಒಳಉಡುಪುಗಳನ್ನೇ ಧರಿಸಬೇಕು. ಅಯುರ್ವೇದದಲ್ಲಿ ಬಿಳಿ ಮುಟ್ಟು ಸಮಸ್ಯೆಗೆ ಉತ್ತಮ ಔಷಧಿ-ಚಿಕಿತ್ಸೆಗಳು ಲಭ್ಯವಿವೆ. ಅರಿಷಿಣದಿಂದ ಅಥವಾ ಬೇವಿನ ತೊಗಟೆಯ ಕಷಾಯ ತಯಾರಿಸಿ ಅದರಿಂದ ಯೋನಿಯನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು. ಹೆಚ್ಚಿನ ವಿವರಗಳಿಗೆ ಆಯುರ್ವೇದ ವೈದ್ಯರನ್ನು ಕಾಣಬಹುದು.

ಬಿಳಿ ಮುಟ್ಟಿಗೆ ಒಂದು ಕಾರಣವೆಂದರೆ ರಕ್ತಹೀನತೆ. ಆದ್ದರಿಂದ ದೇಹದಲ್ಲಿ ರಕ್ತವನ್ನು ಹೆಚ್ಚು ಉತ್ಪಾದನೆ ಮಾಡುವ ಆಹಾರಗಳನ್ನು ಸೇವನೆ ಮಾಡಬೇಕು. ಪಾಲಕ್ ಸೊಪ್ಪು, ಪೋಷಕಾಂಶಯುಕ್ತ ತಾಜಾ ತರಕಾರಿ ಮತ್ತು ಹಣ್ಣುಗಳ ಸೇವನೆ ಮಾಡುವುದರಿಂದ ರಕ್ತಹೀನತೆ ನಿವಾರಣೆಯಾಗುತ್ತದೆ. ವಿಟಮಿನ್ ಸಿ ಇರುವ ಹಣ್ಣುಗಳ ಸೇವನೆ ಆರೋಗ್ಯಕ್ಕೆ ಹೆಚ್ಚು ಉತ್ತಮ. ನಿಯಮಿತ ವಾಕಿಂಗ್, ಸರಳ ವ್ಯಾಯಾಮಗಳು ಮತ್ತು ಕೆಲವು ಯೋಗಾಸನಗಳನ್ನು ಮಾಡುವುದರಿಂದ ಆರೋಗ್ಯ  ಉತ್ತಮವಾಗಿರುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com