ಸ್ತನದ ಕ್ಯಾನ್ಸರ್: ಎಚ್ಚರ ಇರಲಿ, ಆತಂಕ ಬೇಡ (ಕುಶಲವೇ ಕ್ಷೇಮವೇ)

ಮಹಿಳೆಯರನ್ನು ಬಾಧಿಸುವ ಹಲವಾರು ಆರೋಗ್ಯ ಸಮಸ್ಯೆಗಳಲ್ಲಿ ಸ್ತನದ ಕ್ಯಾನ್ಸರ್ ಕೂಡ ಒಂದು. ಇಂದು ಪಾಶ್ಚಿಮಾತ್ಯ ದೇಶಗಳಲ್ಲಿ ಕಂಡುಬರುವುದಕ್ಕಿಂತ ಭಾರತದಲ್ಲಿ ಹೆಚ್ಚಾಗಿ ಕಿರಿಯ ವಯಸ್ಸಿನಲ್ಲಿ ಸ್ತನದ ಕ್ಯಾನ್ಸರ್ ಕಂಡುಬರುತ್ತಿರುವುದು ಕಾಳಜಿಯ ವಿಷಯ
ಸ್ತನದ ಕ್ಯಾನ್ಸರ್ (ಸಾಂಕೇತಿಕ ಚಿತ್ರ)
ಸ್ತನದ ಕ್ಯಾನ್ಸರ್ (ಸಾಂಕೇತಿಕ ಚಿತ್ರ)
Updated on

ಮಹಿಳೆಯರನ್ನು ಬಾಧಿಸುವ ಹಲವಾರು ಆರೋಗ್ಯ ಸಮಸ್ಯೆಗಳಲ್ಲಿ ಸ್ತನದ ಕ್ಯಾನ್ಸರ್ ಕೂಡ ಒಂದು. ಗ್ಲೋಬೋಕಾನ್ ಎಂಬ ಸಂಸ್ಥೆ 2020ರಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೊಮ್ಮೆ ಒಬ್ಬ ಮಹಿಳೆಯಲ್ಲಿ ಪರೀಕ್ಷೆ ಮಾಡಿದಾಗ ಸ್ತನದ ಕ್ಯಾನ್ಸರ್ ಇರುವುದು ಪತ್ತೆಯಾಗುತ್ತಿದೆ, ಪ್ರತಿ ವರ್ಷ 1,78,000 ಸ್ತನದ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ಭಾರತೀಯ ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯು ಗರ್ಭಗೊರಳಿನ (ಸರ್ವೈಕಲ್) ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯನ್ನೂ ಮೀರಿ ಮುನ್ನುಗ್ಗುತ್ತಿರುವುದು ಸ್ಪಷ್ಟವಾಗಿದೆ.

ಇಂದು ಪಾಶ್ಚಿಮಾತ್ಯ ದೇಶಗಳಲ್ಲಿ ಕಂಡುಬರುವುದಕ್ಕಿಂತ ಭಾರತದಲ್ಲಿ ಹೆಚ್ಚಾಗಿ ಕಿರಿಯ ವಯಸ್ಸಿನಲ್ಲಿ ಸ್ತನದ ಕ್ಯಾನ್ಸರ್ ಕಂಡುಬರುತ್ತಿರುವುದು ಕಾಳಜಿಯ ವಿಷಯವಾಗಿದೆ. ಹಿಂದೆಲ್ಲಾ 40-50 ವರ್ಷ ವಯಸ್ಸಿನವರನ್ನು ಕಾಡುತ್ತಿದ್ದ ಈ ರೋಗ ಇಂದು 30 ವರ್ಷಗಳಾದವರಿಗೂ ಬರುತ್ತಿದೆ. ಆದ್ದರಿಂದ ಮರಣಕ್ಕೆ ತುತ್ತಾಗುತ್ತಿರುವವರ ಸಂಖ್ಯೆಯು ಹೆಚ್ಚಾಗುತ್ತಿರುವುದನ್ನು (ಪ್ರತಿ ವರ್ಷ 80 ಸಾವಿರಕ್ಕೂ ಹೆಚ್ಚು ಜನ) ಗಮನಿಸಲಾಗಿದೆ. ಈ ರೋಗದ ಬಗ್ಗೆ ಅರಿವು ಇಲ್ಲದಿರುವುದು, ಆರೋಗ್ಯದ ಕುರಿತು ಅಸಡ್ಡೆ, ಏನೋ ಆಗುತ್ತದೆ ಎಂಬ ಭಯದಿಂದ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳದೇ ಇರುವುದು ಮತ್ತು ಗೊತ್ತಾದರೂ ತಮ್ಮ ಕುಟುಂಬದ ಜವಾಬ್ದಾರಿಗಳ ನಡುವೆ ಆರೋಗ್ಯದ ಕಾಳಜಿ ಮಾಡದಿರುವುದು ಇದಕ್ಕೆ ಕಾರಣ.

ಸ್ತನದ ಕ್ಯಾನ್ಸರ್ ಲಕ್ಷಣಗಳು

ಸ್ತನದ ಕ್ಯಾನ್ಸರ್ ಸ್ತನದ ಅಂಗಾಂಶದ ಜೀವಕೋಶಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕ್ಯಾನ್ಸರ್ ನಂತರ ಹತ್ತಿರದ ಅಂಗಾಂಶಗಳು ಮತ್ತು ದೇಹದ ಇತರ ಭಾಗಗಳಿಗೆ ಹರಡುತ್ತದೆ. ಹಾರ್ಮೋನ್‍ಗಳ ಏರುಪೇರು, ಜೀವನಶೈಲಿ (ಬೊಜ್ಜು), ಜೆನೆಟಿಕ್ (ಆನುವಂಶೀಯ) ಮತ್ತು ಪರಿಸರದ ಅಂಶಗಳು ಸ್ತನದ ಕ್ಯಾನ್ಸರ್ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

ಸ್ತನದ ಕ್ಯಾನ್ಸರಿನ ಮೊದಲ ಲಕ್ಷಣವೆಂದರೆ ಸ್ತನದ ಯಾವುದೇ ಭಾಗದಲ್ಲಿ ರೂಪುಗೊಳ್ಳುವ ಗಡ್ಡೆ. ಮ್ಯಾಮೊಗ್ರಾಮ್ ಪರೀಕ್ಷೆಯ ಮೂಲಕ ಸ್ತನದ ಗಡ್ಡೆ ರೋಗಲಕ್ಷಣಗಳನ್ನು ಉಂಟುಮಾಡುವಷ್ಟು ದೊಡ್ಡದಾಗುವ ಮೊದಲು ಪತ್ತೆಹಚ್ಚಬಹುದು. ಗಡ್ಡೆಗಳು ಪೆನ್ಸಿಲ್‍ನ ತುದಿಯಷ್ಟು ಚಿಕ್ಕದಾಗಿರಬಹುದು (1 ಮಿಮೀ) ಅಥವಾ ಸ್ವಲ್ಪ (50 ಮಿಮೀ) ದೊಡ್ಡದಾಗಿರಬಹುದು. ಎಫ್‍ಎನ್‍ಎಸಿ ಪರೀಕ್ಷೆಯ ಮೂಲಕ ಸುಲಭವಾಗಿ ಇದನ್ನು ಪತ್ತೆ ಹಚ್ಚಬಹುದಾಗಿದೆ. ಇದು ಅತ್ಯಂತ ಸರಳ ಮತ್ತು ಕಡಿಮೆ ಖರ್ಚಿನಲ್ಲಿ ಮಾಡಿಸಿಕೊಳ್ಳುವ ಪರೀಕ್ಷೆಯಾಗಿದೆ.

ಕ್ಯಾನ್ಸರ್ ಬೆಳೆಯುತ್ತಾ ಹೋದಂತೆಲ್ಲಾ ಸ್ತನ ಭಾಗದಲ್ಲಿ ನೋವಿಲ್ಲದ ಗೆಡ್ಡೆಗಳು, ಸ್ತನದ ಆಕಾರ, ಗಾತ್ರದಲ್ಲಿ ವ್ಯತ್ಯಾಸ, ನಿಪ್ಪಲ್‍ನಲ್ಲಿ ಹಳದಿ ಅಥವಾ ಹಸಿರು ಮಿಶ್ರಿತ ದ್ರವರೂಪ ಸ್ರಾವ, ಊತ, ಸ್ತನ ಅಥವಾ ತೊಟ್ಟುಗಳಲ್ಲಿ ನೋವು, ತೊಟ್ಟು ಒಳಕ್ಕೆ ಹೋಗುವುದು (ತೊಟ್ಟುಗಳ ಒಳಮುಖವಾಗಿ ತಿರುಗುತ್ತದೆ), ಸ್ತನ ಚರ್ಮದ ಅಥವಾ ತೊಟ್ಟುಗಳು ಕೆಂಪಾಗುವುದು, ಚರ್ಮದಲ್ಲಿ ಅಸಹಜತೆ ಅಥವಾ ಮಬ್ಬಾಗಿಸುವಿಕೆ, ತೊಟ್ಟುಗಳ ಬಳಿ ಅಥವಾ ಸ್ತನ ಪ್ರದೇಶದಲ್ಲಿ ಗಡ್ಡೆ, ಕಂಕುಳಲ್ಲಿ ಗಡ್ಡೆ ಹೀಗೆ ಹಲವಾರು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಸ್ತನದ ಕ್ಯಾನ್ಸರ್ ಹೇಗೆ ಬರುತ್ತದೆ?

ಪ್ರತಿಯೊಂದು ಸ್ತನವು ಹಾಲನ್ನು ಉತ್ಪಾದಿಸುವ ಲೋಬ್ಸ್ ಎಂದು ಕರೆಯಲ್ಪಡುವ 15-20 ಗ್ರಂಥಿಗಳನ್ನು ಹೊಂದಿದೆ. ಸ್ತನದ ಕ್ಯಾನ್ಸರ್ ಸಾಮಾನ್ಯವಾಗಿ ಈ ಲೋಬ್ಸ್‍ನಲ್ಲಿ ಪ್ರಾರಂಭವಾಗುತ್ತದೆ. ಮಹಿಳೆಯರಲ್ಲಿ ಹೋಲಿಸಿದರೆ ಒಂದು ಸಾವಿರ ಪುರುಷರಲ್ಲಿ ಒಬ್ಬರಿಗೆ ಮಾತ್ರ ಸ್ತನದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಇದು ಸ್ತನದ ತೊಟ್ಟುಗಳ ಪ್ರದೇಶದ ಕೆಳಗಿರುವ ಒಂದು ಗಟ್ಟಿ ಗಡ್ಡೆಯಾಗಿ ಕಂಡುಬರುತ್ತದೆ. 0, 1, 2, 3 ಮತ್ತು 4 - ಹೀಗೆ ಈ ಮಾರಣಾಂತಿಕ ರೋಗಕ್ಕೆ ವಿವಿಧ ಹಂತಗಳಿವೆ. 0 ಹಂತದಲ್ಲಿದ್ದರೆ ಕ್ಯಾನ್ಸರ್ ಸ್ತನ ನಾಳಕ್ಕೆ (ಹಾಲು ಉತ್ಪಾದಿಸುವ ಸ್ಥಳ) ಸೀಮಿತವಾಗಿದೆ ಎಂದರ್ಥ, ಇದು ಮೊದಲಿನ ಹಂತವಾಗಿದೆ. ಮುಂದಿನ ಹಂತಗಳಲ್ಲಿ ಇದರ ಗಂಭೀರತೆ ಹೆಚ್ಚಾಗುತ್ತಾ ಹೋಗುತ್ತದೆ. ನಮ್ಮ ದೇಶದಲ್ಲಿ ಪ್ರತಿ ಮೂವರು ಸ್ತನ ಕ್ಯಾನ್ಸರ್ ರೋಗಿಗಳಲ್ಲಿ ಒಬ್ಬರು ಸಾವಿಗೀಡಾಗುವ ಸಾಧ್ಯತೆ ಇರುತ್ತದೆ. ಎಲ್ಲರೂ ಸಾಯುವುದಿಲ್ಲ. ಈ ಬಗ್ಗೆ ಭಯ ಬೇಡ. ಸ್ತನದ ಕ್ಯಾನ್ಸರ್ ಬೇಗನೆ ಪತ್ತೆಯಾದರೆ ಸೂಕ್ತ ಚಿಕಿತ್ಸೆ ನೀಡಿ ಜೀವ ಉಳಿಸಬಹುದು. ನಮ್ಮ ದೇಶದಲ್ಲಿ ಇಂದು ಹಂತ 3 ಅಥವಾ ಹಂತ 4ರಂತಹ ಮುಂದುವರಿದ ಹಂತಗಳಲ್ಲಿ ಸ್ತನದ ಕ್ಯಾನ್ಸರ್ ಪತ್ತೆ ಹಚ್ಚಲಾಗುತ್ತದೆ. ಪಶ್ಚಿಮದ ದೇಶಗಳಂತೆ ಹಂತ 1 ಅಥವಾ ಹಂತ 2ರಂತಹ ಸ್ತನದ ಕ್ಯಾನ್ಸರ್‍ನ ಆರಂಭಿಕ ಹಂತಗಳಲ್ಲಿಯೇ ಅದನ್ನು ಪತ್ತೆಹಚ್ಚಬೇಕಾಗಿದೆ.

ಸ್ತನದ ಕ್ಯಾನ್ಸರ್ ಪರೀಕ್ಷೆ ಮತ್ತು ಚಿಕಿತ್ಸೆ

ಸ್ತನದ ಕ್ಯಾನ್ಸರ್ ಇದೆಯೇ ಎಂಬುದನ್ನು ಮಹಿಳೆಯರು ಸ್ವತ: ತಮ್ಮ ಸ್ತನ ಪ್ರದೇಶದಲ್ಲಿ ಪರೀಕ್ಷಿಸಿಕೊಳ್ಳಿ. ಮೂವತ್ತು ವರ್ಷ ಆಗಿರುವ ಮಹಿಳೆಯರು ಮುಟ್ಟಿನ ನಂತರ ಪ್ರತಿ ತಿಂಗಳಿಗೊಮ್ಮೆ ಸ್ನಾನದ ಸಮಯದಲ್ಲಿ ಒಂದು ಕೈಯನ್ನು ಮೇಲೆತ್ತಿ ಇನ್ನೊಂದು ಕೈಯಿಂದ ಸ್ತನದಲ್ಲಿ ಗಡ್ಡೆ ಇದೆಯೇ ಎಂಬುದನ್ನು ನಿಧಾನವಾಗಿ ಪರೀಕ್ಷೆ ಮಾಡಿಕೊಳ್ಳಬೇಕು. ಕನ್ನಡಿ ಮುಂದೆ ನಿಂತುಕೊಂಡು ಈ ಪರೀಕ್ಷೆಯನ್ನು ಮಾಡಿಕೊಳ್ಳಬಹುದು.

ಸ್ತನದ ಕ್ಯಾನ್ಸರ್ ತಡೆಗಟ್ಟಲು ಮಹಿಳೆಯರು ಧೂಮಪಾನ ಮತ್ತು ಮದ್ಯಪಾನ ಮಾಡುತ್ತಿದ್ದರೆ ಅದನ್ನು ಬಿಡಬೇಕು, ನಿಯಮಿತವಾಗಿ ವ್ಯಾಯಾಮ, ಮಗುವಿಗೆ ಹಾಲುಣಿಸಬೇಕು ಮತ್ತು ಸ್ತನಗಳ ನಿಯಮಿತ ಪರೀಕ್ಷೆ ಮಾಡಿಕೊಳ್ಳಬೇಕು.

ಇಂದು ವೈದ್ಯರು ವಿಶೇಷವಾಗಿ ಸ್ತನ ಕ್ಯಾನ್ಸರಿನ ಆರಂಭಿಕ ಹಂತಗಳಲ್ಲಿ ಅತಿಕಡಿಮೆ ವಿಕಿರಣಶೀಲತೆಯನ್ನು ಉಪಯೋಗಿಸಿ ಚಿಕಿತ್ಸೆ ನಡೆಸುತ್ತಾರೆ. ಜೊತೆಗೆ ಉತ್ತಮ ಆಧುನಿಕ ವಿಧಾನಗಳ ಸಹಾಯದಿಂದ ಸ್ತನದ ಗಾತ್ರ, ಆಕಾರ ಮತ್ತು ಸೌಂದರ್ಯವನ್ನು ಕೂಡ ಪುನಸ್ಥಾಪಿಸಿಕೊಳ್ಳಬಹುದಾಗಿದೆ. ಕೀಮೋಥೆರಪಿ, ಹಾರ್ಮೋನು ಥೆರಪಿಗಳು ಇವೆ. ಎಲ್ಲ ಸ್ತನ ಕ್ಯಾನ್ಸರ್ ರೋಗಿಗಳಿಗೂ ಮಾಸ್ಟೆಕ್ಟಮಿಯ (ರೋಗಗ್ರಸ್ತ ಸ್ತನವನ್ನು ಪೂರ್ಣವಾಗಿ ತೆಗೆದುಹಾಕುವುದು) ಅಗತ್ಯ ಉಂಟಾಗುವುದಿಲ್ಲ.

ಸ್ತನದ ಕ್ಯಾನ್ಸರ್ ಇಷ್ಟು ಗಂಭೀರ ಸಮಸ್ಯೆಯಾಗಿರುವುದರಿಂದ ಪ್ರತಿ ವರ್ಷ ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಜಾಗೃತಿಯ ಮಾಸವೆಂದು ಆಚರಿಸಲಾಗುತ್ತಿದೆ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com