ಚಿಕನ್‍ಪಾಕ್ಸ್ ಅಥವಾ ಅಮ್ಮ... (ಕುಶಲವೇ ಕ್ಷೇಮವೇ)

ಚಿಕನ್‍ಪಾಕ್ಸ್ ವೇರಿಸೆಲ್ಲಾ ಜೋಸ್ಟರ್ ಎಂಬ ವೈರಸ್ಸಿನಿಂದ ಉಂಟಾಗುವ ಒಂದು ಸಾಂಕ್ರಾಮಿಕ ರೋಗ. ಇದನ್ನು ಸ್ಥಳೀಯವಾಗಿ ಅಮ್ಮ ಎಂದು ಕರೆಯಲಾಗುತ್ತದೆ.
ಚಿಕನ್‍ಪಾಕ್ಸ್ ಅಥವಾ ಅಮ್ಮ (ಸಾಂಕೇತಿಕ ಚಿತ್ರ)
ಚಿಕನ್‍ಪಾಕ್ಸ್ ಅಥವಾ ಅಮ್ಮ (ಸಾಂಕೇತಿಕ ಚಿತ್ರ)
Updated on

ಚಿಕನ್‍ಪಾಕ್ಸ್ ವೇರಿಸೆಲ್ಲಾ ಜೋಸ್ಟರ್ ಎಂಬ ವೈರಸ್ಸಿನಿಂದ ಉಂಟಾಗುವ ಒಂದು ಸಾಂಕ್ರಾಮಿಕ ರೋಗ. ಇದನ್ನು ಸ್ಥಳೀಯವಾಗಿ ಅಮ್ಮ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಚಿಕನ್‍ಪಾಕ್ಸ್ ಕಂಡುಬರುತ್ತದೆ. ವಯಸ್ಕರನ್ನೂ ಇದು ಕಾಡಬಹುದು. ಗರ್ಭಿಣಿಯರಿಗೆ, ಹದಿಹರೆಯದವರಿಗೆ ಮತ್ತು ಕಡಿಮೆ ರೋಗನಿರೋಧಕ ಶಕ್ತಿ ಇರುವವರಿಗೆ, ಎಚ್‍ಐವಿ, ಕ್ಯಾನ್ಸರ್ ಇರುವವರಿಗೆ, ಕೀಮೋಥೆರಪಿ ಮತ್ತು ಸ್ಟೀರಾಯ್ಡ್ ತೆಗೆದುಕೊಳ್ಳುವವರಿಗೆ ಈ ವೈರಾಣು ಸೋಂಕು ಬೇಗನೆ ತಗಲುವ ಸಾಧ್ಯತೆ ಹೆಚ್ಚು. ಜೊತೆಗೆ ಇವರಲ್ಲಿ ಕಾಯಿಲೆ ಗಂಭೀರ ಸ್ವರೂಪದಲ್ಲಿರುತ್ತದೆ.

ಬೇಸಿಗೆಯ ಆರಂಭದಲ್ಲಿ ಮಕ್ಕಳನ್ನು ಚಿಕನ್‍ಪಾಕ್ಸ್ ರೋಗ ಕಾಡುವುದು ಸಾಮಾನ್ಯ. ಆದರೆ ವಿಕೋಪಕ್ಕೆ ಹೋದರೆ ಗಂಭೀರ ಸಮಸ್ಯೆಯನ್ನುಂಟುಮಾಡಬಹುದು. ಚಿಕನ್‍ಪಾಕ್ಸ್ ಮಕ್ಕಳ ಜೀವನ, ಆರೋಗ್ಯದ ಮೇಲೆ ದೀರ್ಘಾವಧಿ ಪರಿಣಾಮ ಬೀರುವುದಿಲ್ಲವಾದರೂ, ಸುಮಾರು 15-20 ದಿನಗಳ ನೋವು ಚಿಕ್ಕ ಮಕ್ಕಳನ್ನು ಬಾಧಿಸುತ್ತದೆ.

ಚಿಕನ್‍ಪಾಕ್ಸ್ ಲಕ್ಷಣಗಳು

ಈ ರೋಗದ ಸಾಮಾನ್ಯ ಲಕ್ಷಣಗಳೆಂದರೆ ಸಾಧಾರಣದಿಂದ ತೀವ್ರ ತರದ ಜ್ವರ, ಬಳಲಿಕೆ, ನಡುಕ, ಹೊಟ್ಟೆ ಉರಿ, ವಾಂತಿ, ಮೈಮೇಲೆ ಕೆಂಪು ದದ್ದುಗಳು (ಗಂದೆ) ಕಾಣಿಸಿಕೊಳ್ಳುವುದು ಮತ್ತು ನವೆ. ಉರಿಯುಳ್ಳ ಗುಳ್ಳೆಗಳು ಮೈಮೇಲೆ ಪ್ರಾರಂಭವಾಗಿ ಕ್ರಮೇಣ ಮುಖ, ತಲೆ, ಬಾಯಿ, ಕಿವಿ, ಕೈಗಳು ಮತ್ತು ಕಾಲುಗಳಿಗೆ ಹರಡುತ್ತದೆ. ಈ ರೋಗದ ಲಕ್ಷಣಗಳು ಕೆಲವರಲ್ಲಿ ಸೌಮ್ಯವಾಗಿರಬಹುದು. ಇತರರಲ್ಲಿ ಗಂಭೀರವಾಗಿರಬಹುದು.

ಚಿಕನ್‍ಪಾಕ್ಸ್ ಹೇಗೆ ಹರಡುತ್ತದೆ?

ಈ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಬಹಳ ಸುಲಭವಾಗಿ ಹರಡುತ್ತದೆ. ಸೋಂಕಾಗಿರುವ ವ್ಯಕ್ತಿಗಳು ಬಳಸಿದ ವಸ್ತುಗಳನ್ನು ಉಪಯೋಗಿಸುವುದರಿಂದ ಈ ರೋಗವು ಬೇರೆಯವರಿಗೆ ಹರಡುತ್ತದೆ. ರೋಗಿಯು ಕೆಮ್ಮುವುದರಿಂದ, ಸೀನುವುದರಿಂದ ವೈರಾಣುಗಳು ಗಾಳಿಯಲ್ಲಿ ಸೇರಿ ಬೇರೆಯವರಿಗೆ ಉಸಿರಾಟದ ಮುಖಾಂತರ ಹರಡುತ್ತದೆ. ಆದ್ದರಿಂದ ಸೋಂಕಿತ ವ್ಯಕ್ತಿಯು ಕೆಮ್ಮುವಾಗ, ಸೀನುವಾಗ ಮುಖ ಹಾಗೂ ಮೂಗನ್ನು ಕಡ್ಡಾಯುವಾಗಿ ಮುಚ್ಚಿಕೊಳ್ಳಬೇಕು.

ಈ ರೋಗ ಇದ್ದವರನ್ನು ಮನೆಯಲ್ಲಿಯೂ, ಬೇರೆ ಮಕ್ಕಳ ಅಥವಾ ದೊಡ್ಡವರಿಂದ ದೂರ ಇರಿಸಬೇಕು. ರೋಗಿಗೆ ಪ್ರತ್ಯೇಕ ಊಟದ ತಟ್ಟೆ, ನೀರಿನ ಲೋಟ, ಹಾಸಿಗೆ ಮತ್ತು ಬಟ್ಟೆಗಳನ್ನು ಕೊಡಬೇಕು.

ಚಿಕನ್‍ಪಾಕ್ಸ್ ಬಂದರೆ ಏನು ಮಾಡಬೇಕು?

ಚಿಕನ್‍ಪಾಕ್ಸ್ ಬಂದಾಗ ಹಾಸಿಗೆಯ ಮೇಲೆ ಬೇವಿನ ಎಲೆಗಳನ್ನು ಹರಡಿ ಅದರ ಮೇಲೆ ಮಲಗಬೇಕು ಮತ್ತು ಗಂದೆಗಳು ಒಣಗಬೇಕಾದರೆ ಬೇವಿನ ಎಲೆಗಳನ್ನು ನೀರಲ್ಲಿ ಅರೆದು ಲೇಪ ಮಾಡಿದರೆ ನಿವಾರಣೆಯಾಗುತ್ತವೆ.

ರೋಗಿಗೆ ಮಿತವಾದ ಆಹಾರವನ್ನು ನಿಯಮಿತವಾಗಿ ಕೊಡಬೇಕು. ಉಪ್ಪು, ಹುಳಿ, ಖಾರವಿಲ್ಲದ ಆಹಾರ ಸಪ್ಪೆ ಆಹಾರವನ್ನು ಕೊಡಬೇಕು. ಎಣ್ಣೆಯಲ್ಲಿ ಕರಿದ ಅಥವಾ ಹುರಿದಿರುವ ಆಹಾರಗಳ ಸೇವನೆ ಬೇಡ. ಆದಷ್ಟೂ ಮನೆಯಲ್ಲಿನ ಆಹಾರವೇ ಉತ್ತಮ. ಹೊರಗಿನ ಆಹಾರ ಹಿತವಲ್ಲ. ಹೆಚ್ಚಾಗಿ ನೀರು, ಎಳನೀರು ಮತ್ತು ಬಾರ್ಲಿ ಬೇಯಿಸಿದ ನೀರಿನ ಸೇವನೆ ಒಳ್ಳೆಯದು. ಕ್ಯಾರೆಟ್ ಮತ್ತು ಕೊತ್ತಂಬರಿ ಸೊಪ್ಪನ್ನು ಬೇಯಿಸಿ ಸೂಪ್ ಮಾಡಿ ಸೇವಿಸಿದರೆ ರೋಗ ನಿರೋಧಕ ಶಕ್ತಿ ಬೇಗ ಹೆಚ್ಚಾಗುತ್ತದೆ.

ಚಿಕನ್‍ಪಾಕ್ಸ್ ಆದಾಗ ತುರಿಕೆಯಾದರೆ ಗುಳ್ಳೆಗಳನ್ನು ಕೆರೆಯುದನ್ನು ತಪ್ಪಿಸಬೇಕು. ಏಕೆಂದರೆ ಇದು ಗಾಯಗಳಿಗೆ ಕಾರಣವಾಗಬಹುದು. ಎಲ್ಲ ಗುಳ್ಳೆಗಳು ಒಣಗುವವರೆಗೂ ಮನೆಯೆಲ್ಲಿಯೇ ಇರಬೇಕು. ಯಾವುದೇ ರೀತಿಯ ಪ್ರಯಾಣವನ್ನು ಮಾಡಬಾರದು. ಮೊಸರು ವಜ್ರ್ಯ. ಬದನೆಕಾಯಿ, ಅಲೂಗಡ್ಡೆ, ಉದ್ದು, ಅವಲಕ್ಕಿ, ಹಲಸಿನ ಹಣ್ಣು ಮುಂತಾದವುಗಳನ್ನು ತಿನ್ನಲೇಬಾರದು. ಎಲ್ಲಕ್ಕಿಂತ ಮುಖ್ಯವಾಗಿ ವಿಶ್ರಾಂತಿಯೇ ಉತ್ತಮ ಮದ್ದು.

ರೋಗಿಯು ಶುಚಿತ್ವಕ್ಕೆ ಬಹಳ ಗಮನ ಕೊಡಬೇಕು. ಸ್ನಾನ ಮಾಡುವ ನೀರಿನಲ್ಲಿ ಬೇವಿನ ಎಲೆಗಳನ್ನು ಮತ್ತು ಅರಿಶಿಣವನ್ನು ಹಾಕಿಕೊಂಡರೆ ತುರಿಕೆ ಕಡಿಮೆ ಆಗುತ್ತದೆ ಮತ್ತು ಸ್ನಾನದ ಮೊದಲು ಬೇವಿನ ಎಣ್ಣೆಯನ್ನು ಮೈಗೆಲ್ಲಾ ಹಚ್ಚಬೇಕು. ನಂತರ ಮೆತ್ತನೆಯ ಹತ್ತಿ ಬಟ್ಟೆಯಿಂದ ಮೈಯೆಲ್ಲಾ ಒರೆಸಿಕೊಂಡು ಚಂದನ, ಮಂಜಿಷ್ಠ, ಉಶಿರ ಮುಂತಾದ ಆಯುರ್ವೇದ ಲೇಪಗಳನ್ನು ಹಚ್ಚಿಕೊಂಡರೆ ಗುಳ್ಳೆಗಳ ಉರಿ ಮತ್ತು ತುರಿಕೆ ಸಾಕಷ್ಟು ಕಡಿಮೆ ಆಗುತ್ತದೆ.

ರೋಗಿಗಳು ಉಗುರುಗಳನ್ನು ಸರಿಯಾಗಿ ಕತ್ತರಿಸಿಕೊಳ್ಳಬೇಕು. ಏಕೆಂದರೆ ಉಗುರುಗಳು ಗುಳ್ಳೆಗಳಿಗೆ ತಾಗಿ ಸೋಂಕು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕೈಗಳಿಗೆ ಆದಷ್ಟು ಗ್ಲೌಸ್ ಹಾಕಿಕೊಳ್ಳಿ. ಇದರಿಂದ ತುರಿಕೆಯಾದಾಗ ಗುಳ್ಳೆಗಳನ್ನು ಮುಟ್ಟುವುದು ಕಡಿಮೆಯಾಗುತ್ತದೆ. ಗುಳ್ಳೆಗಳ ಮೇಲೆ ಅರಿಶಿನವನ್ನು ಹಚ್ಚಿದರೆ ಅವು ಬೇಗ ಒಣಗುತ್ತವೆ. ಬಿಸಿ ನೀರಿಗೆ ಅರಿಶಿನವನ್ನು ಸೇರಿಸಿ ಕುಡಿದರೆ ದೇಹವೂ ಬೆಚ್ಚಗಾಗುತ್ತದೆ. ದೇಹದಲ್ಲಿ ರೋಗ ನಿರೋಧಕಶಕ್ತಿಯೂ ಉತ್ತಮವಾಗುತ್ತದೆ. ಚರ್ಮದ ಮೇಲಿನ ರೋಗಗಳನ್ನು ತಡೆಯಲು ಅರಿಶಿನ ಉತ್ತಮ ಮನೆಮದ್ದಾಗಿದೆ. ಆದ್ದರಿಂದ ಚಿಕನ್ ಪಾಕ್ಸ್ ಆದಾಗ ಅರಿಶಿನ ಬಳಕೆ ಚೆನ್ನಾಗಿ ಮಾಡಬೇಕು.

ಈ ರೋಗವನ್ನು ತಡೆಗಟ್ಟಲು ಉತ್ತಮ ಮಾರ್ಗವೆಂದರೆ ಲಸಿಕೆ ಪಡೆಯುವುದು. ಮಕ್ಕಳು, ಹದಿಹರೆಯದವರು ಮತ್ತು ವಯಸ್ಕರನ್ನು ಒಳಗೊಂಡಂತೆ ಪ್ರತಿಯೊಬ್ಬರೂ ಚಿಕನ್‍ಪಾಕ್ಸ್ ಲಸಿಕೆಯನ್ನು ಪಡೆಯಬೇಕು. ಚಿಕನ್‍ಪಾಕ್ಸ್ ಲಸಿಕೆ ಅತ್ಯಂತ ಸುರಕ್ಷಿತ ಮತ್ತು ರೋಗವನ್ನು ತಡೆಗಟ್ಟುವಲ್ಲಿ ಅತಿ ಹೆಚ್ಚು ಪರಿಣಾಮಕಾರಿಯಾಗಿದೆ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com