ಸಾಮಾನ್ಯವಾಗಿ ಜನರಿಗೆ ಆರೋಗ್ಯಕರ ಜೀವನದ ಬಗ್ಗೆ ಹೆಚ್ಚು ಆಸಕ್ತಿ ಇದ್ದರೂ ಆಸ್ಥೆ ವಹಿಸುವುದಿಲ್ಲ. ಸಾಮಾನ್ಯವಾಗಿ ಒಂದು ವರ್ಷಕ್ಕೆ ಜನರು ವೈದ್ಯರ ಫೀಸು ಕಟ್ಟುತ್ತಾ ಔಷಧಿಗಳನ್ನು ನುಂಗಲು ಕೊಡುವಷ್ಟು ಗಮನ ತಮ್ಮ ಜೀವನದಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ತಂದುಕೊಂಡು ಆರೋಗ್ಯಕರವಾಗಿ ಇರಲು ಕೊಡದೆ ಇರುವುದೇ ದೊಡ್ಡ ಸಮಸ್ಯೆಯಾಗಿದೆ.
ಆಹಾರದ ಶಕ್ತಿ
ಜನರು ವರ್ಷವೊಂದರಲ್ಲಿ ವೈದ್ಯಕೀಯ ಪ್ರಿಸ್ಕ್ರಿಪ್ಷನ್‍ಗಳನ್ನು ತುಂಬುವಷ್ಟೇ ಆಸ್ಥೆಯಿಂದ ಮತ್ತು ಬೆಲೆ ಕೊಟ್ಟು ಆಹಾರದ ಶಕ್ತಿಯನ್ನು ಏಕೆ ಪಡೆದುಕೊಳ್ಳುವುದಿಲ್ಲ? ಆಹಾರದಲ್ಲಿ ಯಾವ ಶಕ್ತಿ ಇದೆ ಎನ್ನುವುದೇ ಜನರಿಗೆ ಗೊತ್ತಿಲ್ಲದೆ ಇರುವುದು ಮುಖ್ಯ ಕಾರಣವಾಗಿದೆ. ಆಹಾರದಲ್ಲಿ ಸಣ್ಣ ಪುಟ್ಟ ಬದಲಾವಣೆ ತಂದುಕೊಂಡು ಆರೋಗ್ಯಕರ ಜೀವನ ಶೈಲಿಯನ್ನು ಬೆಳೆಸಿಕೊಳ್ಳುವುದರಿಂದ ಬಹಳಷ್ಟು ಉತ್ತಮ ಪರಿಣಾಮಗಳನ್ನು ಪಡೆಯಹುದು. ಮಾತ್ರವಲ್ಲ, ಬಹಳಷ್ಟು ಭಯಾನಕ ರೋಗಗಳು ಹತ್ತಿರಕ್ಕೂ ಸುಳಿಯದಂತೆ ಕೇವಲ ಆಹಾರ ಪದ್ಧತಿಯಿಂದಲೇ ಆರೋಗ್ಯಕರ ಜೀವನ ಪಡೆಯಲು ಸಾಧ್ಯವಿದೆ. ಇದಕ್ಕೆ ಆಹಾರದಲ್ಲಿ ಬದಲಾವಣೆ ತಂದು ಅದರಂತೆ ನಡೆದುಕೊಳ್ಳುವ ದೃಢ ನಿಶ್ಚಯವಿದ್ದರೆ ಸಾಕು.
ಜೀವನಶೈಲಿ ಬದಲಾವಣೆ
ಆರೋಗ್ಯ ಸಮಸ್ಯೆಗಳಿಂದ ದೂರವಾಗಲು ಔಷಧಿ ತಿನ್ನುವುದೇ ಅತೀ ನಂಬಿಕಾರ್ಹ, ನೇರ ಮತ್ತು ವೈಜ್ಞಾನಿಕ ಹಾದಿ ಎಂದು ನಾವೆಲ್ಲಾ ತಿಳಿದುಕೊಂಡಿದ್ದೇವೆ. ಕೆಲವೊಂದು ಪ್ರಕರಣಗಳಲ್ಲಿ ಇದು ನಿಜವಾಗಿಯೂ ಇರುತ್ತದೆ. ರೋಗಗಳಿಗೆ ಔಷಧಿ ತಿಂದರಷ್ಟೇ ಅವು ಗುಣವಾಗುತ್ತದೆ. ಇದು ನಮಗೆಲ್ಲರಿಗೂ ಗೊತ್ತಿದೆ. ಆದರೆ ಸಣ್ಣ ಪುಟ್ಟ ಜೀವನಶೈಲಿಯ ಬದಲಾವಣೆಗಳಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ಅತಿ ಪರಿಣಾಮಕಾರಿಯಾಗಿ ನಿವಾರಿಸಬಹುದು ಎನ್ನುವ ವಾಸ್ತವವನ್ನು ಯಾರೂ ಅರ್ಥೈಸಿಕೊಳ್ಳುವುದೇ ಇಲ್ಲ. ವಾಸ್ತವದಲ್ಲಿ ಜೀವನಶೈಲಿ ಬದಲಾವಣೆಗಳಿಂದ ಹಲವಾರು ಲಾಭಗಳನ್ನು ಪಡೆದುಕೊಳ್ಳಬಹುದು. ರೋಗ ನಮ್ಮ ಹತ್ತಿರಕ್ಕೂ ಸುಳಿಯದಂತೆ ಮಾಡಲು ಆರೋಗ್ಯಕರ ಜೀವನದಿಂದ ಸಾಧ್ಯವಿದೆ.
ಔಷಧ V/s ಜೀವನಶೈಲಿ
ಮೊದಲನೆಯದಾಗಿ ಔಷಧಿಗಳು ಅಪಾಯಕಾರಿಯಾಗಬಹುದು ಮತ್ತು ಕೆಲವು ಅಡ್ಡ ಪರಿಣಾಮಗಳನ್ನೂ ದೇಹದ ಮೇಲೆ ಬೀರಬಹುದು. ಆದರೆ ಜೀವನಶೈಲಿ ಬದಲಾವಣೆಯಿಂದ ನೀವು ಪಡೆಯಬಹುದಾದ ಅಡ್ಡ ಪರಿಣಾಮಗಳೆಂದರೆ ಹೆಚ್ಚಿನ ಆರೋಗ್ಯ ಮತ್ತು ಅಧಿಕ ಶಕ್ತಿ. ಕೇವಲ ಸಕಾರಾತ್ಮಕ ಪರಿಣಾಮಗಳು ಮಾತ್ರ ಜೀವನಶೈಲಿ ಬದಲಾವಣೆಯಿಂದ ಪಡೆಯುವ ಉಡುಗೊರೆಯಾಗಿದೆ.
ಇದನ್ನೂ ಓದಿ: ವಿಟಮಿನ್ ಡಿ3 ಮತ್ತು ವಿಟಮಿನ್ ಬಿ12 ಕೊರತೆ
ಎರಡನೆಯದಾಗಿ ಔಷಧಿಗಳನ್ನು ನಿಮ್ಮ ಅನಾರೋಗ್ಯಕ್ಕೆ ನೀಡಲಾಗುತ್ತದೆ ಮತ್ತು ಆ ಸಮಸ್ಯೆಯನ್ನು ನಿವಾರಿಸುವ ಏಕಮಾತ್ರ ಉದ್ದೇಶ ಅದಕ್ಕಿರುತ್ತದೆ. ಆದರೆ ಜೀವನಶೈಲಿ ಬದಲಾವಣೆಗಳು ಆರೋಗ್ಯ ಸಮಸ್ಯೆಗಳು ಬಾರದಂತೆ ರಕ್ಷಿಸುತ್ತವೆ ಮತ್ತು ದೇಹದ ಮೇಲೆ ಆಗುವ ಬದಲಾವಣೆ ಸಮತೋಲಿತ, ಅತೀ ದೀರ್ಘಕಾಲೀನ ಮತ್ತು ಹೆಚ್ಚು ವ್ಯಾಪಕವಾಗಿರುತ್ತದೆ. ಜೀವನವನ್ನು ಒಂದು ಉತ್ತಮ ದಿಕ್ಕಿನೆಡೆಗೆ ಕೊಂಡೊಯ್ಯುವ ಶಕ್ತಿ ಜೀವನಶೈಲಿ ಬದಲಾವಣೆಗೆ ಇದೆ. ನಿಮ್ಮ ಆಹಾರ ಪದ್ಧತಿ ಮತ್ತು ಸ್ವಲ್ಪ ನಿತ್ಯದ ವ್ಯಾಯಾಮವು ನಿಮಗೆ ಅನೂಹ್ಯವಾದುದನ್ನು ಆರೋಗ್ಯದಲ್ಲಿ ಸಾಧಿಸಲು ಅವಕಾಶ ಕೊಡುತ್ತದೆ.
ಆರೋಗ್ಯಕರ ಆಹಾರ
ಉದಾಹರಣೆಗೆ ಆರೋಗ್ಯಕರ ಆಹಾರವು ಕೊಬ್ಬಿನಂಶವನ್ನು ಕರಗಿಸುವ ಮೂಲಕ ತೂಕ ಕಾಪಾಡಿಕೊಳ್ಳಲು ನೆರವಾಗುತ್ತದೆ. ಜೊತೆಯಲ್ಲಿಯೇ ಹೃದಯದ ಸಾಮರ್ಥ್ಯವನ್ನು ಅಧಿಕಗೊಳಿಸುವುದು ಮತ್ತು ರಕ್ತಪರಿಚಲನೆ, ಮೆದುಳಿನ ಸಕ್ರಿಯತೆ ಹಾಗೂ ಮನಸ್ಥಿತಿ, ಇನ್‍ಸುಲಿನ್ ಸಂವೇದನೆ ಮತ್ತು ಮೂಳೆಗಳ ದೃಢತೆಯನ್ನು ಕಾಪಾಡುತ್ತದೆ. ಆಹಾರವು ನೂರಾರು ಆರೋಗ್ಯ ಪಾಲನೆಯ ವಿಚಾರಗಳನ್ನು ತನ್ನಲ್ಲಿ ತುಂಬಿಕೊಂಡಿರುತ್ತದೆ. ಅದನ್ನು ಅರ್ಥೈಸಿಕೊಂಡರಷ್ಟೇ ಉತ್ತಮ ಆರೋಗ್ಯಕರ ಜೀವನ ಪಡೆಯಲು ಸಾಧ್ಯ. ಮುಖ್ಯವಾಗಿ ಏನನ್ನು ತಿನ್ನಬೇಕು ಮತ್ತು ಏನನ್ನು ಬಿಡಬೇಕು ಎನ್ನುವ ಜ್ಞಾನವನ್ನು ನಾವು ಮೊದಲು ಪಡೆದುಕೊಳ್ಳಬೇಕಿದೆ.
ಜೀವನಶೈಲಿ ಬದಲಾವಣೆಯಲ್ಲಿ ಉತ್ತಮ ಆಹಾರ ಸೇವನೆ ಹಾಗೂ ಉತ್ತಮ ಜೀವನ ನಿರ್ವಹಣೆ ಎರಡೂ ಸೇರಿಕೊಂಡಿವೆ. ನೀವೇನು ತಿನ್ನುತ್ತೀರಿ ಎನ್ನುವುದು ನೀವೇನು ಆಗುತ್ತೀರಿ ಎನ್ನುವುದನ್ನು ತಿಳಿಸುತ್ತದೆ. ಆಹಾರವು ನಿಮ್ಮ ಜೀವನದ ಮೇಲೆ ಪ್ರತೀ ನಿಮಿಷವೂ ಪರಿಣಾಮ ಬೀರುತ್ತಲೇ ಇರುತ್ತದೆ. ಹೀಗಾಗಿ ನಿಮ್ಮ ಆರೋಗ್ಯದ ಗಂಭೀರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಮತ್ತು ಅಭಿವೃದ್ಧಿ ಪಡಿಸುವಲ್ಲಿ ಆಹಾರದ ಪ್ರಭಾವ ಅತ್ಯಧಿಕವಾಗಿರುತ್ತದೆ. ಹೃದಯಕ್ಕೆ ಸಂಬಂಧಿಸಿದ ರೋಗಗಳು, ಮಧುಮೇಹ ಹಾಗೂ ಕ್ಯಾನ್ಸರ್‍ನಂತಹ ರೋಗಗಳಲ್ಲೂ ಆಹಾರದ ಪ್ರಭಾವ ಅತ್ಯಧಿಕವಾಗಿರುತ್ತದೆ.
ಇದನ್ನೂ ಓದಿ: ಆರೋಗ್ಯಕ್ಕಾಗಿ ಸಿರಿಧಾನ್ಯಗಳು
ಅಂತಿಮವಾಗಿ ಹೇಳಬೇಕೆಂದರೆ ನಿತ್ಯವೂ ಔಷಧಿ ಸೇವಿಸುವುದಕ್ಕಿಂತ ಜೀವನಶೈಲಿಯಲ್ಲಿ ಬದಲಾವಣೆ ತಂದುಕೊಳ್ಳುವುದೇ ಶ್ರೇಯಸ್ಕರವಾಗಿದೆ. ಮನೆಯವರು ಮತ್ತು ಸ್ನೇಹಿತರ ಜೊತೆಯಾಗಿ ಕುಳಿತು ಮನೆಯಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸುವುದೇ ಜೀವನಶೈಲಿಯಲ್ಲಿ ಅತ್ಯುತ್ತಮ ಬದಲಾವಣೆಯಾಗಬಲ್ಲದು. ಜೀವನದುದ್ದಕ್ಕೂ ನಿಮ್ಮ ಜೊತೆ ಉಳಿಯಬಲ್ಲ ಉತ್ತಮ ಆಹಾರದ ಹವ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ನೀವು ಆರೋಗ್ಯಕರ ಜೀವನವನ್ನು ಪಡೆದುಕೊಳ್ಳಬಹುದು.
ಆರಂಭದಲ್ಲಿ ನಿಮಗೆ ನಿಮ್ಮ ಜೀವನ ಶೈಲಿ ಬದಲಾವಣೆ ಅಥವಾ ಆಹಾರ ಪದ್ಧತಿಯಲ್ಲಿ ತರುವ ಬದಲಾವಣೆ ಬಹಳ ಕಷ್ಟವಾಗಿ ಕಾಣಿಸಬಹುದು. ಇದಕ್ಕೆ ಬದಲಾಗಿ ಒಂದು ಔಷಧಿ ಗುಳಿಗೆಯನ್ನು ತಿನ್ನುವುದೇ ಸೂಕ್ತ ಎಂದೂ ಅನಿಸಬಹುದು. ಹೌದು, ಜೀವನ ಶೈಲಿ ಬದಲಾವಣೆ ಸುಲಭ ಸಾಧ್ಯವಲ್ಲ. ಆರೋಗ್ಯಕರ ಜೀವನ ಮತ್ತು ವ್ಯಾಯಾಮಗಳ ಕುರಿತಂತೆ ಹಲವಾರು ಗೊಂದಲಪೂರಿತ ಮಾಹಿತಿಗಳೇಕೆ ಇವೆ ಎನ್ನುವುದು ನಿಮ್ಮ ಪ್ರಶ್ನೆಯಾಗಿರಬಹುದು. ಆದರೆ ಆರೋಗ್ಯಕರ ಜೀವನಶೈಲಿಯ ಮೂಲ ವಿಚಾರಗಳು ವಾಸ್ತವದಲ್ಲಿ ನೇರ ಮತ್ತು ದಿಟ್ಟವಾಗಿದೆ. ನಿಮಗೆ ಯಾವ ಆರೋಗ್ಯ ಸಮಸ್ಯೆಗಳಿವೆ ಅಥವಾ ಎಂತಹ ಆಹಾರ ನಿಮಗೆ ಇಷ್ಟ ಎನ್ನುವುದನ್ನು ಬದಿಗಿಟ್ಟು ಕೆಲವು ಆಹಾರದ ಪ್ರಮುಖ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಾಕು.
ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com
Advertisement