ವಿಟಮಿನ್ ಡಿ3 ಮತ್ತು ವಿಟಮಿನ್ ಬಿ12 ಕೊರತೆ (ಕುಶಲವೇ ಕ್ಷೇಮವೇ)

ನಲವತ್ತೈದು ವರ್ಷ ವಯಸ್ಸಿನ ಗೌರಮ್ಮ “ಡಾಕ್ಟರೇ, ಮೊದಲೆಲ್ಲಾ ದಿನವಿಡೀ ಗಂಟೆಗಟ್ಟಲೇ ಅಡಿಗೆ ಮನೆಯಲ್ಲಿ ಎಷ್ಟು ಕೆಲಸ ಮಾಡಿದರೂ ಸುಸ್ತಾಗಿರುತ್ತಿರಲಿಲ್ಲ.
ವಿಟಮೀನ್ ಡಿ
ವಿಟಮೀನ್ ಡಿ

ನಲವತ್ತೈದು ವರ್ಷ ವಯಸ್ಸಿನ ಗೌರಮ್ಮ “ಡಾಕ್ಟರೇ, ಮೊದಲೆಲ್ಲಾ ದಿನವಿಡೀ ಗಂಟೆಗಟ್ಟಲೇ ಅಡಿಗೆ ಮನೆಯಲ್ಲಿ ಎಷ್ಟು ಕೆಲಸ ಮಾಡಿದರೂ ಸುಸ್ತಾಗಿರುತ್ತಿರಲಿಲ್ಲ. ಈಗಂತೂ ಅರ್ಧ ಗಂಟೆ ಕೆಲಸ ಮಾಡಿದರೆ ಸಾಕು ಸುಸ್ತು, ಕಾಲು ನೋವು ಬಂದುಬಿಡುತ್ತದೆ. ಏನಾಗಿದೆ?” ಎಂದು ಆತಂಕದಿಂದ ಕೇಳಿದರು. ನಂದಾ ಎನ್ನುವ ಮತ್ತೊಬ್ಬರು ಅನಿಮಿಯಾ, ಶುಗರ್ ಮತ್ತಿತರ ಪರೀಕ್ಷೆಗಳ ರಿಪೋರ್ಟುಗಳ ಸಹಿತ ಬಂದಿದ್ದರು. ಇಬ್ಬರ ಸಮಸ್ಯೆಗಳನ್ನು ಪೂರ್ತಿ ಆಲಿಸಿ ರಕ್ತ ಪರೀಕ್ಷೆ ಮಾಡಿಸಿದಾಗ ವಿಟಮಿನ್ ಡಿ3 ಮತ್ತು ವಿಟಮಿನ್ ಬಿ12 ಕೊರತೆ ಗೊತ್ತಾಯಿತು. 

ಇತ್ತೀಚೆಗೆ ನನ್ನ ಕ್ಲಿನಿಕ್ಕಿಗೆ ಬರುವ ಹಲವಾರು ಜನರು ಸುಸ್ತು, ಸೊಂಟ ನೋವು, ಕಾಲು ನೋವು ಮತ್ತು ಭುಜ ನೋವು ಸಮಸ್ಯೆ ಇದೆ ಎಂದು ಹೇಳುತ್ತಾರೆ. ಅದರಲ್ಲೂ 35-40 ವರ್ಷ ಆಗಿರುವ ಮಹಿಳೆಯರಲ್ಲಿ ಇದು ಸಾಮಾನ್ಯವಾಗಿದೆ. ಅವರಿಗೆ ಬೇರೆ ಯಾವುದೇ ಸೋಂಕು, ರಕ್ತಹೀನತೆ ಅಥವಾ ಇತರೆ ಗಂಭೀರ ಸಮಸ್ಯೆಗಳು ಇರುವುದಿಲ್ಲ. ಆದರೂ ತುಂಬಾ ಸುಸ್ತಾಗುತ್ತಿದೆ ಎನ್ನುತ್ತಾರೆ. ರಕ್ತ ಪರೀಕ್ಷೆ ಮಾಡಿ ನೋಡಿದಾಗ ವಿಟಮಿನ್ ಡಿ3 ಮತ್ತು ವಿಟಮಿನ್ ಬಿ12 ಕೊರತೆ ಇರುವುದು ಕಂಡುಬಂತು. ಇದು ಬಹುಶ: ವಯಸ್ಸಿನ ಭೇದ ಇಲ್ಲದೇ ಎಲ್ಲರಲ್ಲಿಯೂ ಇದು ಕಂಡುಬರುತ್ತಿದೆ. 

ವಿಟಮಿನ್ ಡಿ3 ಮತ್ತು ವಿಟಮಿನ್ ಬಿ12 ಕೊರತೆಗೆ ಕಾರಣಗಳು

ಇಂದು ಜನರು ಬಿಸಿಲಲ್ಲಿ ಓಡಾಡುವುದಿಲ್ಲ. ಹೊರಗಿನ ವಾತಾವರಣಕ್ಕೆ ತೆರೆದುಕೊಳ್ಳುವುದಿಲ್ಲ. ಸದಾ ಕಾಲ ಆಫೀಸಿನಲ್ಲಿ ಎಸಿ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಾರೆ. ಕಾರಿನೊಳಗೂ ಎಸಿ ಹಾಕಿಕೊಂಡೇ ಓಡಾಡುತ್ತಾರೆ. ಜೊತೆಗೆ ಸತ್ವಯುತ ಆಹಾರವನ್ನು ಸೇವಿಸುವುದಿಲ್ಲ. ವಿಟಮಿನ್ ಡಿ3 ಮತ್ತು ವಿಟಮಿನ್ ಬಿ12 ಇರುವ ಆಹಾರವನ್ನು ಸೇವಿಸುವುದಿಲ್ಲ. ಆರೋಗ್ಯಕ್ಕೆ ಬೇಕಾದ ಆಹಾರ ಬಿಟ್ಟು ಉಳಿದೆಲ್ಲವನ್ನು ಸೇವಿಸುವುದು ಸಾಮಾನ್ಯವಾಗಿದೆ. ಇದೇ ಈ ಸಮಸ್ಯೆಗೆ ಕಾರಣವಾಗಿದೆ. 

ವಿಟಮಿನ್ ಡಿ3 ಮತ್ತು ವಿಟಮಿನ್ ಬಿ12 ದೇಹಕ್ಕೆ ಮುಖ್ಯ ಏಕೆ? 

ವಿಟಮಿನ್ ಡಿ3 ಮತ್ತು ವಿಟಮಿನ್ ಬಿ12 ಎರಡೂ ದೇಹಕ್ಕೆ ಬಹಳ ಮುಖ್ಯ. ವಿಟಮಿನ್ ಡಿ3 ಬಿಳಿ ರಕ್ತ ಕಣಗಳನ್ನು ಉತ್ಪಾದಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ದೇಹದಲ್ಲಿ ವಿಟಮಿನ್ ಬಿ12 ಕೊರತೆಯಿದ್ದರೆ ಈ ಎಲ್ಲಾ ಕಾರ್ಯಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಕಾಯಿಲೆಗಳ ಅಪಾಯ ಎದುರಾಗಬಹುದು. ವಿಟಮಿನ್ ಬಿ12 ಕೊರತೆಯಿಂದ ದೇಹದಲ್ಲಿ ಶಕ್ತಿಯ ಕೊರತೆ ಉಂಟಾಗಬಹುದು, ಕಾರ್ಬೋಹೈಡ್ರೇಟ್‍ಗಳ ಚಯಾಪಚಯ ಕ್ರಿಯೆಗೆ ತೊಂದರೆಯಾಗಬಹುದು. ಕರುಳಿನ ಕಾರ್ಯಚಟುವಟಿಕೆಗೆ ಅಡ್ಡಿಯಾಗಬಹುದು. ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆಯೂ ಕಡಿಮೆಯಾಗಬಹುದು. ಆದ್ದರಿಂದ ವಿಟಮಿನ್ನುಗಳು ನಮ್ಮ ದೇಹ ಮತ್ತು ಒಟ್ಟಾರೆ ಆರೋಗ್ಯಕ್ಕೆ ಅತ್ಯಗತ್ಯವಾಗಿವೆ.

ವಿಟಮಿನ್ ಬಿ12 ಒದಗಿಸುವ ಆಹಾರಗಳು ಇವು...
ವಿಟಮಿನ್ ಬಿ12 ಪಡೆಯಲು ಡೈರಿ ಉತ್ಪನ್ನಗಳು, ಮಾಂಸ, ನ್ಯೂಟ್ರಿಷಿನಲ್ ಯೀಸ್ಟ್, ಹಾಲು, ಮೊಟ್ಟೆಯ ಸೇವನೆ ಉತ್ತಮವಾಗಿದೆ. ವಿಟಮಿನ್ ಬಿ12 ನಮ್ಮ ದೇಹದಲ್ಲಿ ಶಕ್ತಿ ಉತ್ಪಾದನೆ ಮಾಡಲು ಸಹಾಯಕವಾಗಿದೆ. ಚಯಾಪಚಯ ಕ್ರಿಯೆಗೆ, ಕರುಳಿನ ಆರೋಗ್ಯ, ನರಗಳ ಆರೋಗ್ಯ, ಮೆದುಳಿನ ಆರೋಗ್ಯ ಮತ್ತು ಮನೋಸ್ಥಿತಿಯ (ಮೂಡ್) ನಿಯಂತ್ರಣಕ್ಕೆ ಕಾರಣವಾಗುತ್ತದೆ. ಹೀಗಾಗಿ ಎಲ್ಲರೂ ವಿಟಮಿನ್ 12 ಅನ್ನು ಅವಶ್ಯವಾಗಿ ಸೇವಿಸಬೇಕು.

ಸಾಲ್ಮನ್‍ನಂತಹ ಮೀನುಗಳು ಈ ಎರಡೂ ರೀತಿಯ ವಿಟಮಿನ್‍ಗಳನ್ನು ಒಳಗೊಂಡಿರುತ್ತವೆ. ಇದರಲ್ಲಿರುವ ಪೌಷ್ಟಿಕಾಂಶಗಳು ಮೆದುಳಿಗೆ ಪ್ರಯೋಜನಕಾರಿಯಾಗಿ ಕಂಡುಬರುತ್ತವೆ. ಅನೇಕ ವಿಧದ ವಿಟಮಿನ್ನುಗಳು, ಖನಿಜಗಳು ಮತ್ತು ಪ್ರೊಟೀನ್ ಗಳು ಮೊಟ್ಟೆಯ ಹಳದಿ ಲೋಳೆಯಲ್ಲಿ ಕಂಡುಬರುತ್ತವೆ. ಈ ಎರಡೂ ವಿಟಮಿನ್ ಗಳು ಮೊಟ್ಟೆಗಳಲ್ಲಿಯೂ ಕಂಡುಬರುತ್ತವೆ. ಆದ್ದರಿಂದ, ಎರಡೂ ವಿಟಮಿನ್ ಗಳನ್ನು ಮೊಟ್ಟೆಯ ಬುರ್ಜಿ, ಆಮ್ಲೆಟ್ ರೂಪದಲ್ಲಿ ಸೇವಿಸಬಹುದು. ಮೊಸರಿನಲ್ಲಿ ಪ್ರೊಟೀನ್ ನ ಜೊತೆಗೆ ವಿಟಮಿನ್ ಡಿ ಮತ್ತು ಬಿ12 ಸಹ ಕಂಡುಬರುತ್ತದೆ. 

ಧಾನ್ಯಗಳ ಹಿಟ್ಟನ್ನು ಜರಡಿ ಮಾಡದೇ ಬಳಸಬೇಕು. ಏಕೆಂದರೆ ಧಾನ್ಯಗಳ ತೌಡಿನಲ್ಲಿ ವಿಟಮಿನ್ ಬಿ12 ಇರುತ್ತದೆ. ಉದಾಹರಣೆಗೆ ಗೋಧಿ ಹಿಟ್ಟನ್ನು ಜರಡಿ ಮಾಡದೇ ಚಪಾತಿ ಮಾಡಬೇಕು. ಕೆಂಪಕ್ಕಿಯನ್ನು ಬಳಸದೇ ಉಪಯೋಗಿಸುವುದು ಉತ್ತಮ. ಅಕ್ಕಿಯನ್ನು ಹೆಚ್ಚು ತೊಳೆಯಬಾರದು. ಸೆಮಿಪಾಲಿಷ್ ಮಾಡಿದ್ದರೆ ಸಾಕು. ಆ ಅಕ್ಕಿಯ ಮೇಲ್ಮೈನಲ್ಲಿಯೂ ವಿಟಮಿನ್ ಬಿ12 ಇರುತ್ತದೆ. ಕಾಳುಗಳನ್ನು (ಉದಾಹರಣೆಗೆ ಹೆಸರುಕಾಳು, ಕಡ್ಲೆಕಾಳು) ಮೊಳಕೆ ಬರಿಸಿ ಸೇವಿಸುವುದು ಉತ್ತಮ.

ವಿಟಮಿನ್ ಡಿ3 ಪಡೆಯುವುದು ಹೇಗೆ?

ವಿಟಮಿನ್ ಡಿ3 ಹೆಚ್ಚಾಗಿ ಸೂರ್ಯನ ಕಿರಣಗಳಿಂದ ದೊರಕುತ್ತದೆ. ಥೈರಾಯ್ಡ್ ಮತ್ತು ಲೈಂಗಿಕ ಹಾರ್ಮೋನುಗಳು ಸೇರಿದಂತೆ ಹಾರ್ಮೋನುಗಳ ಉತ್ಪಾದನೆ, ಮೆದುಳಿನ ಆರೋಗ್ಯ ಮತ್ತು ಸ್ಮರಣ ಶಕ್ತಿ ಹೆಚ್ಚಳ, ಮುಖ್ಯವಾಗಿ ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ. 

ಸಸ್ಯಾಹಾರಿಗಳಿಗೆ ಸೋಯಾ ಹಾಲು ಈ ಎರಡೂ ವಿಟಮಿನ್‍ಗಳ ಉತ್ತಮ ಮೂಲವಾಗಿದೆ. ಇದು ಹೆಚ್ಚಿನ ಪ್ರಮಾಣದ ವಿಟಮಿನ್ ಡಿ ಅನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಇತ್ತೀಚಿನ ಸಂಶೋಧನೆಗಳು ವಿಟಾಮಿನ್ ಡಿ ಮಹತ್ವವನ್ನು ಒತ್ತಿ ಒತ್ತಿ ಹೇಳುತ್ತಿವೆ – ಕೇವಲ ಮೂಳೆಗಳ ಆರೋಗ್ಯಕ್ಕೆ ಅಷ್ಟೇ ಅಲ್ಲ ನಮಗೆ ವಯಸ್ಸು ಹೆಚ್ಚುತ್ತಾ ಹೋದ ಹಾಗೆಲ್ಲಾ ಬಾಧಿಸುವ ದೀರ್ಘಕಾಲಿಕ ಕಾಯಿಲೆಗಳನ್ನು ತಡೆಯುವ ನಿಟ್ಟಿನಲ್ಲಿಯೂ ಸಹ ವಿಟಮಿನ್ ಡಿ ಮಹತ್ವದ ಪಾತ್ರವನ್ನು ವಹಿಸುತ್ತದೆ.  

ನಾವು ಆರೋಗ್ಯವಾಗಿರಬೇಕೆಂದರೆ ಎಲ್ಲಾ ವಿಟಮಿನ್‍ಗಳು ಸೂಕ್ತ ಪ್ರಮಾಣದಲ್ಲಿ ದೊರಕುತ್ತಿರಬೇಕು. ಅದರಲ್ಲೂ ವಿಟಮಿನ್ ಡಿ3 ಹಾಗೂ ವಿಟಮಿನ್ ಬಿ12 ಅಗತ್ಯವಾಗಿರುತ್ತದೆ. ಅದಕ್ಕಾಗಿ ಡಿ3 ಪಡೆಯಲು ಕೆಲವು ನೈಸರ್ಗಿಕ ಮೂಲಗಳಾದ ಸೂರ್ಯನ ಬೆಳಕನ್ನು ಪಡೆಯುವುದು, ಮೊಟ್ಟೆ, ಅಣಬೆಗಳು ಮತ್ತು ಕೊಬ್ಬಿನ ಮೀನುಗಳನ್ನು ಸೇವಿಸುವುದು ಒಳ್ಳೆಯದು.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com