
ಪ್ರಧಾನಿ ಮೋದಿ- ಬೈಡನ್ ಜಂಟಿ ಸುದ್ದಿಗೋಷ್ಠಿ
ಕಳೆದ ವಾರ ನಮ್ಮ ಪ್ರಧಾನಿಯವರು ಅಮೆರಿಕ ಪ್ರವಾಸವನ್ನ ಕೈಗೊಂಡಿದ್ದರು. ಅಲ್ಲಿಗೆ ಅವರು ಮೋಜಿಗೆ ಹೋಗಿರಲಿಲ್ಲ. ಅಲ್ಲಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನಿಂದ ಎಲಾನ್ ಮಸ್ಕ್, ಸುಂದರ್ ಪಿಚೈ, ಸತ್ಯ ನಡೆಲ್ಲಾರಂತಹ ಅತಿರಥ ಮಹಾರಥರನ್ನ ಭೇಟಿ ಮಾಡಿದ್ದಾರೆ. ಪ್ರಧಾನಿಯವರ ಯಾವುದೇ ವಿದೇಶ ಪ್ರವಾಸಗಳಿರಲಿ ಅವೆಲ್ಲವೂ ಭಾರತದ ಒಟ್ಟಾರೆ ಅಭಿವೃದ್ಧಿಗೆ ಪೂರಕವಾಗುವಂತಹ ಒಂದಷ್ಟು ಒಪ್ಪಂದಗಳನ್ನ ಮಾಡಿಕೊಳ್ಳುವ ಉದ್ದೇಶವನ್ನು ಇಟ್ಟುಕೊಂಡೆ ಮಾಡಿರುತ್ತಾರೆ. ತಮ್ಮ ಜೊತೆಗೆ ತಮ್ಮನ್ನು ಹೊಗಳಲು ಬೇಕಾಗುವ ಪತ್ರಕರ್ತರನ್ನು ಎಂದಿಗೂ ಕರೆದುಕೊಂಡು ಹೋಗುವುದಿಲ್ಲ. ಅವರ ಜೊತೆಗೆ ಹೋದವರು ಕೂಡ ಅತಿರಥ ಮಹಾರಥರೇ! ಮುಕೇಶ್ ಅಂಬಾನಿ, ಆನಂದ್ ಮಹಿಂದ್ರಾ, ನಿತಿನ್ ಕಾಮತ್ ಇತರರು ಪ್ರಧಾನಿಯವರ ಜೊತೆಗಿದ್ದರು.
ಅಮೆರಿಕಾದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೋದಿಯವರೊಂದಿಗಿನ ವ್ಯವಹಾರ ಸುಲಭವಲ್ಲ ಎನ್ನುವ ಮಾತನ್ನು ಆಡಿದ್ದರು. ಅರ್ಥ ಇಷ್ಟೇ, ದೇಶಕ್ಕೆ ಎಷ್ಟು ಸಾಧ್ಯವೋ ಅಷ್ಟು ದೊಡ್ಡ ಮಟ್ಟದ ಲಾಭವನ್ನು ತರಲು ಪ್ರಯತ್ನಿಸುತ್ತಾರೆ ಹೊರತು, ಸಣ್ಣಪುಟ್ಟದ್ದಕ್ಕೆಲ್ಲ ಹೊಂದಾವಣಿಕೆ ಮಾಡಿಕೊಂಡು ಬರುವವರಲ್ಲ. ಈಗಿನ ಅಧ್ಯಕ್ಷ ಜೋ ಬೈಡೆನ್ ಅವರು ಕೂಡ ಹೆಚ್ಚು ಕಡಿಮೆ ಅದೇ ಮಾತನ್ನು ಆಡಿದ್ದಾರೆ, ಜೊತೆಗೆ ರಷ್ಯಾ ಮತ್ತು ಚೀನಾ ದೇಶದೊಂದಿಗೆ ಭಾರತದ ಜೊತೆಗೆ ಹೊಂದಿರುವ ಸಂಬಂಧ ಹೊಂದಲು ಸಾಧ್ಯವಿಲ್ಲ, ಏಕೆಂದರೆ ಭಾರತದ ಮತ್ತು ಅಮೆರಿಕ ದೇಶದ ಡಿಎನ್ಎ ಒಂದೇ , ನಮ್ಮದು ಪ್ರಜಾಪ್ರಭುತ್ವವನ್ನ ಹೊಂದಿರುವ ದೇಶ ಎಂದಿದ್ದಾರೆ. ಅಮೆರಿಕ ದೇಶಕ್ಕೆ ಹಿಂದಿಗಿಂತಲೂ ಇಂದು ಭಾರತದ ಸಖ್ಯ ಹೆಚ್ಚಾಗಿದೆ. ಚೀನಾ ದೇಶವನ್ನ ಪೂರ್ಣವಾಗಿ ಅವಲಂಬಿಸಿದರ ಫಲವನ್ನ ಅಮೆರಿಕ ಇಂದು ಅನುಭವಿಸುತ್ತಿದೆ. ಹೀಗಾಗಿ ತುರ್ತಾಗಿ ಅದಕ್ಕೆ ಭಾರತದ ಜೊತೆಗೆ ಒಪ್ಪಂದಗಳು ಬೇಕಾಗಿವೆ. ಇದು ಭಾರತಕ್ಕೂ ಬೇಕಾಗಿರುವ ಟಾನಿಕ್. ಹೀಗಾಗಿ ಈ ಭೇಟಿಯ, ಒಪ್ಪಂದಗಳ ಫಲಿತಾಂಶ ಎರಡೂ ದೇಶಗಳಿಗೂ ಒಳಿತನ್ನ ಮಾಡಲಿವೆ.
ಮೋದಿಯವರ ಇಂಗ್ಲಿಷ್ ಉಚ್ಚಾರಣೆಯನ್ನ ಟ್ರೋಲ್ ಮಾಡುವವರಿಗೆ ಅದಕ್ಕಿಂತ ಮುಖ್ಯವಾಗಿ ಒಪ್ಪಂದಗಳ ಸಾರಾಂಶ, ಅದರ ಫಲಿತಾಂಶದ ಬಗ್ಗೆ ಗಮನವಿಲ್ಲ. ಇಂದಿನ ಬರಹದಲ್ಲಿ ನಾವು ಅವುಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
- ಡಿಫೆನ್ಸ್ ಕೋ ಅಫೇರಷನ್: ಸೊಸ (SOSA) ಎಂದರೆ ಸೆಕ್ಯೂರಿಟಿ ಆಫ್ ಸಪ್ಲೈ ಅರೇಂಜ್ಮೆಂಟ್ ಮತ್ತು RDP ಎಂದರೆ ರೆಸಿಪ್ರೋಕಲ್ ಡಿಫೆನ್ಸ್ ಪ್ರೊಕ್ಯೂರೇಮೆಂಟ್ ಗಳ ಬಗ್ಗೆ ಮಾತುಕತೆ ನಡೆಯುತ್ತಿದೆ. ಭಾರತದ ಸೈನಿಕರು ಬಹಳ ಧೈರ್ಯಶಾಲಿಗಳು ಅದರ ಬಗ್ಗೆ ಎರಡು ಮಾತಿಲ್ಲ. ಆದರೆ ನಮ್ಮ ಬಳಿ, ಇಸ್ರೇಲಿಗಳ ಅಥವಾ ಅಮೆರಿಕನ್ನರ ಬಳಿ ಇರುವ ಆಧುನಿಕ ತಂತ್ರಜ್ಞಾನವಿಲ್ಲ. ಈ ಮಾತುಕತೆಗಳಿಗೆ ಒಪ್ಪಂದ ಸಹಿಯಾದರೆ ಅಮೆರಿಕಾದ ತಂತ್ರಜ್ಞಾನ ನಮಗೆ ಸಿಗಲಿದೆ. ಜೊತೆಗೆ ಅಮೇರಿಕಾ ಇಲ್ಲಿಯವರೆಗೆ ಚೀನಾ ಮತ್ತು ರಷ್ಯಾದ ಜೊತೆಗೆ ಯಾವುದೇ ಮಿಲಿಟರಿ ಉಪಕರಣಗಳನ್ನ ಕೊಂಡಿಲ್ಲ, ಕೊಳ್ಳುವುದು ಕೂಡ ಇಲ್ಲ. ಅಮೆರಿಕಾದ ಜಿ ಇ ಮತ್ತು ಭಾರತದ ಹೆಚ್ ಎ ಎಲ್ ಜೊತೆಗೆ GEF 414 ಎಂಜಿನ್ ಉತ್ಪಾದನೆಗೆ ಒಪ್ಪಂದವಾಗಿದೆ. ಇದನ್ನ ಭಾರತದಲ್ಲಿ ಉತ್ಪಾದಿಸಲು ಹಸಿರು ನಿಶಾನೆ ಸಿಕ್ಕಿದೆ. ಇದರಿಂದ ಅತ್ಯಂತ ಸುಧಾರಿತ ಜೆಟ್ ಗಳನ್ನ ನಾವು ಉತ್ಪಾದಿಸಬಹುದು. ಗಮನಿಸಿ ನಾವು ಉತ್ಪಾದಿಸಿದ ಜೆಟ್ಗಳನ್ನ ಅಮೇರಿಕಾ ಕೊಳ್ಳಲು ಸಿದ್ಧವಿದೆ. ಭಾರತ ಈಗಾಗಲೇ ಜಗತ್ತಿನ 80 ದೇಶಗಳಿಗೆ ಡಿಫೆನ್ಸ್ ಪರಿಕರಗಳನ್ನ ರಫ್ತು ಮಾಡುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ಭಾರತದ ರಫ್ತು ಕೇವಲ ಈ ವಲಯದಲ್ಲಿ ೫ ಬಿಲಿಯನ್ ಡಾಲರ್ ಮೀರಿಸಲಿದೆ ಎಂದರೆ ಒಂದು ಸಣ್ಣ ಅಂದಾಜು ನಿಮ್ಮದಾಗಿರುತ್ತದೆ. ಇದಕ್ಕೆ ಭಾರತ ಮೊದಲು DAFARS ನಿಯಮಗಳನ್ನ ಅನುಸರಿಸುವ ದೇಶವಾಗಿರಬೇಕು. ಡಿಫೆನ್ಸ್ ಫೆಡರಲ್ ಅಕ್ವಿಸಿಷನ್ ರೇಗುಲೇಷನ್ ಸಪ್ಪ್ಲಿಮೆಂಟ್ ಅಥವಾ DAFARS ಎಂದರೆ ಅದು ಅಮೇರಿಕಾ ದೇಶ ಯಾವ ದೇಶದೊಂದಿಗೆ ಡಿಫೆನ್ಸ್ ಪರಿಕರಕೊಳ್ಳಲು ಸಿದ್ಧವಿದೆ ಎನ್ನುವುದನ್ನ ಸೂಚಿಸುವ ಪಟ್ಟಿ ಅಷ್ಟೇ, ಇದರಲ್ಲಿ ರಷ್ಯಾ ಮತ್ತು ಚೀನಾಕ್ಕೆ ಸ್ಥಾನ ಸಿಕ್ಕಿಲ್ಲ. ಭಾರತಕ್ಕೆ ಇದರಲ್ಲಿ ಸ್ಥಾನ ಕಲ್ಪಿಸುವುದರ ಬಗ್ಗೆ ದೊಡ್ಡ ಮಟ್ಟದ ಮಾತುಕತೆ ನಡೆಯುತ್ತಿದೆ. ಇದು ಭಾರತಕ್ಕೆ ಅತೀವ ಲಾಭವನ್ನ ತಂದುಕೊಡಲಿದೆ.
- ಸೆಮಿ ಕಂಡಕ್ಟರ್ಸ್: ಇವತ್ತು ಜಗತ್ತನ್ನ ನಡೆಸುತ್ತಿರುವುದು ಸೆಮಿ ಕಂಡಕ್ಟರ್ಸ್ ಎಂದರೆ ತಪ್ಪಾಗಲಾರದು. ಏಕೆಂದರೆ ಇಂದು ನಾವು ಬಳಸುವ ಲ್ಯಾಪ್ ಟಾಪ್, ಕಂಪ್ಯೂಟರ್, ಮೊಬೈಲ್ನಿಂದ ಬಹಳ ಕಡೆ ಸೆಮಿ ಕಂಡಕ್ಟರ್ ಬಳಕೆಯಾಗುತ್ತದೆ. ಇದನ್ನ ನಾವು ಇಂದಿಗೆ ಮನುಷ್ಯನ ಮೆದುಳಿಗೆ ಹೋಲಿಸಬಹುದು. ಇದಿಲ್ಲದೆ ಯಾವುದೇ ಕಾರ್ಯವೂ ಅಸಾಧ್ಯ ಎನ್ನುವ ಮಟ್ಟಕ್ಕೆ ಜಗತ್ತು ಇಂದು ಸೆಮಿ ಕಂಡಕ್ಟರ್ಸ್ ಮೇಲೆ ಅವಲಂಬಿತವಾಗಿದೆ. ಗಮನಿಸಿ ನೋಡಿ ಈ ಸೆಮಿ ಕಂಡಕ್ಟರ್ಸ್ ಜಗತ್ತಿಗೆ ಉತ್ಪಾದಿಸಿ ಕಳಿಸುತ್ತಿರುವುದು ಚೀನಾ ಮತ್ತು ತೈವಾನ್. ನಿಮಗೆಲ್ಲಾ ಗೊತ್ತಿರುವಂತೆ ತೈವಾನ್ ಮೇಲೆ ಕೂಡ ಚೀನಾ ಬಿಗಿ ಹಿಡಿತವನ್ನ ಹೊಂದಿದೆ. ಹೀಗಾಗಿ ಜಗತ್ತಿನಲ್ಲಿ ಸೆಮಿ ಕಂದಕರ್ಸ್ ವಿಷಯದಲ್ಲಿ ಚೀನಾದ್ದೇ ಪಾರುಪತ್ಯ. ಅಮೇರಿಕಾ ದೇಶಕ್ಕೆ ಈ ಮೊನಾಪೊಲಿ ಮುರಿಯುವುದು ಬೇಕಿದೆ. ಭಾರತದಲ್ಲಿ ಉತ್ಪಾದಿಸಲು ಬೇಕಾಗುವ ಎಲ್ಲಾ ಸವಲತ್ತುಗಳಿವೆ ಆದರೆ ಅದಕ್ಕೆ ದೊಡ್ಡ ಮೊತ್ತದ ಬಂಡವಾಳ ಬೇಕಾಗುತ್ತದೆ. ಅಮೇರಿಕಾ ದೇಶದ ಮೈಕ್ರಾನ್ ಎನ್ನುವ ಸಂಸ್ಥೆ ಭಾರತದಲ್ಲಿ ೮೨೫ ಮಿಲಿಯನ್ ಡಾಲರ್ ಹಣವನ್ನ ಹೂಡಿಕೆ ಮಾಡಲಿದೆ. ಇದೆ ವರ್ಷದ ಅಂದರೆ 2023ರ ಡಿಸೆಂಬರ್ ವೇಳೆಗೆ ಇದು ಉತ್ಪಾದನೆ ಮಾಡಲು ಶುರು ಮಾಡುತ್ತದೆ. ಇದರಿಂದ ನೇರವಾಗಿ ೫ ಸಾವಿರ ಹೊಸ ಉದ್ಯೋಗಗಳು ಶುರುವಾಗಲಿವೆ. ಭಾರತದಿಂದ 60 ಸಾವಿರ ಆಯ್ದ ಎಂಜಿನೀರ್ಗಳನ್ನ ಅಮೆರಿಕಕ್ಕೆ ಕಳುಹಿಸಿ ಕೊಡಿ ಅವರಿಗೆ ಬೇಕಾದ ಸ್ಕಿಲ್ ವೃದ್ಧಿಗೆ ನಾವು ಸಹಾಯ ಮಾಡುತ್ತೇವೆ ಎನ್ನುವ ಮಾತನ್ನ ಅಮೆರಿಕಾದ ಲಾಮ್ ರಿಸೆರ್ಚ್ ಇನ್ಸ್ಟಿಟ್ಯೂಟ್ ಆಫ್ ಅಮೇರಿಕಾ ಆಡಿದೆ. ಇದು ಭಾರತಕ್ಕೆ ಅತಿ ದೂಡ್ಡ ಅವಕಾಶ. ಜಾಗತಿಕವಾಗಿ ಚೀನಾ ದೇಶದ ಪಾರುಪತ್ಯೆಗೆ ಅಂತ್ಯ ಹಾಡುವ ಶಕ್ತಿ ಇರುವುದು ಭಾರತಕ್ಕೆ, ಇದನ್ನ ಸರಿಯಾಗಿ ನಾವು ಬಳಸಿಕೊಳ್ಳಬೇಕಿದೆ.
- ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ: ಮುಂದಿನ ದಿನಗಳಲ್ಲಿ ಜಗತ್ತನ್ನು ಎಲ್ಲಾ ರೀತಿಯಲ್ಲೂ ಕಂಟ್ರೋಲ್ ಮಾಡುವ ಶಕ್ತಿಯಿರುವುದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಗೆ ಎನ್ನುವುದು ನಿರ್ವಿವಾದ. ಗೂಗೆಲ್ ಸಂಸ್ಥೆಯ ಸುಂದರ್ ಪಿಚೈ ಇದಕ್ಕೆ ಭಾರತದ ಸಹಕಾರ ಬಹಳ ಅಗತ್ಯವಿದೆ ಎಂದಿದ್ದಾರೆ. ಜಾಗತಿಕವಾಗಿ ಶಕ್ತಿಶಾಲಿ ದೇಶಗಳನ್ನ ಪಟ್ಟಿ ಮಾಡಿದರೆ ೧೦/೧೨ ದೇಶಗಳ ಹೆಸರು ಮುಂಚೂಣಿಗೆ ಬರುತ್ತವೆ . ವಿವಿಧ ಕೋನಗಳಲ್ಲಿ ವಿಶ್ಲೇಷಣೆ ಮಾಡುತ್ತಾ ಹೋದಾಗ ಕೆಲವು ದೇಶಗಳ ಹೆಸರನ್ನ ಕೈ ಬಿಡಬೇಕಾಗುತ್ತದೆ. ಹೀಗಾಗಿ ಭಾರತ ಪ್ರಥಮ ಆಯ್ಕೆಯಲ್ಲದಿದ್ದರೂ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತದೆ. ಇದು ಕೂಡ ಮುಂಬರುವ ವರ್ಷಗಳಲ್ಲಿ ಭಾರತಕ್ಕೆ ಅತೀವ ಬಲವನ್ನ ತಂದುಕೊಡಲಿವೆ.
- ಬಾಹ್ಯಾಕಾಶ: ಎಲ್ಲರಿಗೂ ಗೊತ್ತಿರುವಂತೆ ಭಾರತದ ಇಸ್ರೋ ಜಾಗತಿಕವಾಗಿ ಅತ್ಯುನ್ನತ ಸ್ಥಾನದಲ್ಲಿ . ಹಲವು ವಿಷಯಗಲ್ಲಿ ಅಮೆರಿಕಾದ ನಾಸಾವನ್ನ ಕೂಡ ಮೀರಿಸಿ ಬೆಳೆದಿದೆ ಎನ್ನುವುದು ಕೂಡ ಸತ್ಯ. ಅಮೇರಿಕಾ ದೇಶದ ನಾಸಾ ಜೊತೆಗೆ ಇಸ್ರೋ ಬಹಳಷ್ಟು ಒಪ್ಪಂದಗಳಿಗೆ ಸಹಿ ಹಾಕಿದೆ /ಹಾಕಲಿದೆ. ಇದು ಭಾರತೀಯ ನವೋದ್ದಿಮೆಗಳಿಗೆ ಮತ್ತು ಭಾರತೀಯ ಬಾಹ್ಯಾಕಾಶದಲ್ಲಿ ಕೆಲಸ ಮಾಡುತ್ತಿರುವ ಯುವ ವಿಜ್ಞಾನಿಗಳಿಗೆ ವರದಾನವಾಗಲಿದೆ.
- 5ಜಿ ಮತ್ತು 6 ಜಿ ತಂತ್ರಜ್ಞಾನದ ಬಗ್ಗೆ ಒಪ್ಪಂದ: ಗೂಗೆಲ್ ಭಾರತ ದೇಶದಲ್ಲಿ 10 ಬಿಲಿಯನ್ ಡಾಲರ್ ಹೂಡಿಕೆ, 35 ಹೊಸ ರಿಸೆರ್ಚ್ ಗಳಿಗೆ ಸಹಿ, ಹೀಗೆ ಒಟ್ಟಾರೆ 58 ಅತಿ ದೊಡ್ಡ ಪಾಲುದಾರಿಕೆಗೆ ಇಲ್ಲಿ ಸಹಿ ಬಿದ್ದಿದೆ, ಕೆಲವೊಂದಕ್ಕೆ ಶೀಘ್ರದಲ್ಲಿ ಸಹಿ ಬೀಳಲಿದೆ.
ಕೊನೆಮಾತು: ಜಗತ್ತಿನ ಜನರ ಮನಸ್ಥಿತಿ ಎಲ್ಲಿಂದೆಲ್ಲಿಗೆ ಹೋಗಿ ಸೇಮ್, ಕೆಲವರು ಹೊಗಳುತ್ತಾರೆ, ಕೆಲವರು ಎಲ್ಲದರಲ್ಲೂ ನೆಗಟಿವ್ ಹುಡುಕುತ್ತಾರೆ. ಜಗತ್ತಿನ ಬಹುತೇಕರು ಭಾರತದ ಪ್ರಧಾನಿಯವರ ಕಾರ್ಯವನ್ನ ಹೊಗಳುತ್ತಿದ್ದರೆ, ಕೆಲವು ನಾಯಕರು ಮೋದಿಯವರ ಕಾರ್ಯದಲ್ಲಿ ಹುಳುಕನ್ನ ಹುಡುಕಲು ಪ್ರಯತ್ನ ಮಾಡಿದ್ದಾರೆ. ಮೊದಲೇ ಹೇಳಿದಂತೆ ಇದು ಜಗದ ನಿಯಮ. ಎಲ್ಲರೂ ಒಂದೇ ದಿಕ್ಕಿನಲ್ಲಿ, ಒಂದೇ ನಿಟ್ಟಿನಲ್ಲಿ ಯೋಚಿಸಲಿ ಎನ್ನುವುದು ಸಾಧ್ಯವಿಲ್ಲದ ಮಾತು. ಯಾವುದು ಬಹುಜನರ, ದೇಶದ ಹಿತದಲ್ಲಿರುತ್ತದೆ ಅದನ್ನ ಮಾಡಬೇಕು. ಉಳಿದಂತೆ ಎಲ್ಲಾ ನಾಗರೀಕರು ತಮ್ಮ ತಮ್ಮ ಅನಿಸಿಕೆಗಳನ್ನ ಹಂಚಿಕೊಳ್ಳಲು ಸ್ವತಂತ್ರರು.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com