ಮೂರನೇ ಮಹಾಯುದ್ಧ ಆಗುವ ಸಾಧ್ಯತೆ ಎಷ್ಟು? (ಹಣಕ್ಲಾಸು)

ಹಣಕ್ಲಾಸು-353ರಂಗಸ್ವಾಮಿ ಮೂನಕನಹಳ್ಳಿ
ಮೂರನೇ ಮಹಾಯುದ್ಧ (ಸಾಂಕೇತಿಕ ಚಿತ್ರ)
ಮೂರನೇ ಮಹಾಯುದ್ಧ (ಸಾಂಕೇತಿಕ ಚಿತ್ರ)

ಈ ತಲೆಬರಹವೇ ಕೆಲವರಿಗೆ ಅರ್ಥವಿಲ್ಲದ್ದು ಎನ್ನಿಸಬಹುದು, ಆದರೆ ಗಮನಿಸಿ ಯಾವುದೆಲ್ಲಾ ಆಗಲು ಸಾಧ್ಯವಿಲ್ಲ ಎಂದು ಕೊಂಡಿರುತ್ತೇವೆ ಅವೆಲ್ಲವೂ ಆಗಲು ಸಾಧ್ಯವಿದೆ ಎನ್ನುವುದನ್ನ ಕೊರೋನ ತೋರಿಸಿಕೊಟ್ಟಿದೆ. ಪ್ರಪಂಚ ಪೂರ್ಣ ತಿಂಗಳುಗಟ್ಟಲೆ ಸ್ಟಾಂಡ್ ಸ್ಟಿಲ್ ಆಗುತ್ತದೆ ಎಂದು ಯಾರಾದರೂ 2019 ರಲ್ಲಿ ಅಥವಾ ಅದಕ್ಕಿಂತ ಮುಂಚೆ ಹೇಳಿದ್ದರೆ ಅವರನ್ನ ಜಗತ್ತು ಹುಚ್ಚ ಎಂದು ಅಪಹಾಸ್ಯ ಮಾಡಿ ನಕ್ಕಿರುತ್ತಿತ್ತು. ಇಂದು ಇದು ಸಾಧ್ಯವಿಲ್ಲ ಎನ್ನುವ ಹಂತವನ್ನ ನಾವು ಮೀರಿ ಬಿಟ್ಟಿದೇವೆ ಎನ್ನುವುದು ಸದಾ ನೆನಪಿರಲಿ.

3ನೇ ಮಹಾಯುದ್ಧ ಆಗಲು ಹಲವಾರು ಕಾರಣಗಳಿವೆ ಅವುಗಳಲ್ಲಿ ಪ್ರಮುಖವಾದವುಗಳನ್ನ ಉಲ್ಲೇಖಿಸುವೆ.  ಇವುಗಳು ಕೇವಲ ಊಹೆಗಳಾಗಿ ಉಳಿದುಕೊಳ್ಳಲಿ .

  1. ಯಾವಾಗ ಅಮೇರಿಕಾ ಮತ್ತು ಬ್ರಿಟನ್ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತವೆ ಆಗೆಲ್ಲಾ ಯುದ್ಧಗಳಾಗುತ್ತವೆ. ಮಹಾಯುದ್ಧ ಅಂತಲ್ಲ, ಒಟ್ಟಿನಲ್ಲಿ ಯುದ್ಧ ಕಟ್ಟಿಟ್ಟ ಬುತ್ತಿ. ಬ್ರಿಟನ್, ಬ್ರೆಕ್ಸಿಟ್ ನಿಂದ ಬಸವಳಿದಿದೆ, ಸಾಲದಕ್ಕೆ ಕೊರೋನಘಾತ. ಸಪ್ಪ್ಲೈ ಚೈನ್ ಕುಸಿತದಿಂದ ಆ ದೇಶ ಜರ್ಜರಿತವಾಗಿದೆ. ಕೆಲವೊಂದು ತಿಂಗಳಿಗೆ ಸಾಕಾಗುವಷ್ಟು ಆಹಾರ, ಔಷಧ ಇತ್ಯಾದಿಗಳನ್ನ ಕಾಯ್ದಿಡಲು ಬೇಕಾಗುವ ಉಗ್ರಾಣವಿಲ್ಲದ ದೇಶವದು. ಇನ್ನು ಅಮೇರಿಕಾ 2007 ರ ಲೇಮನ್ ಬ್ರದರ್ ಕುಸಿತದಿಂದ ಪೂರ್ಣ ಹೊರಬರಲು ಸಾಧ್ಯವಾಗಿಲ್ಲ. ಗಾಯದ ಮೇಲೆ ಬರೆ ಎಳೆದಂತೆ ಕೊರೋನ ವಕ್ಕರಿಸಿತು, ಅಮೆರಿಕವನ್ನ ಹೆಚ್ಚು ಹಣ ಮುದ್ರಿಸಲು ಅಸಹಾಯಕನನ್ನಾಗಿಸಿತು. ಪರಿಣಾಮ ಆ ದೇಶದಲ್ಲಿ ಇನ್ನಿಲ್ಲದ ಹಣದುಬ್ಬರ ತಾಂಡವವಾಡುತ್ತಿದೆ. ಮಾಸಿಕ ವೇತನದ 5 ರಿಂದ 6 ಪ್ರತಿಶತ ಊಟ ತಿಂಡಿಗೆ ವ್ಯಯ ಮಾಡುತ್ತಿದ್ದ ಜನರು ಇಂದು ಅದೇ ವೇತನದ 33ಕ್ಕೂ ಹೆಚ್ಚು ಪ್ರತಿಶತ ಹಣವನ್ನ ಊಟಕ್ಕೆ ಖರ್ಚು ಮಾಡುತ್ತಾರೆ ಎಂದರೆ ದೈನಂದಿನ ಬಳಕೆಯ ವಸ್ತುಗಳ ಬೆಲೆ ಇನ್ನ್ಯಾವ ಮಟ್ಟದಲ್ಲಿ ಹೆಚ್ಚಿರಬಹುದು ಎನ್ನುವ ಸಣ್ಣ ಸುಳಿವು ನಿಮಗೆ ಸಿಕ್ಕಿರುತ್ತದೆ. ಒಟ್ಟಿನಲ್ಲಿ ಅಮೇರಿಕಾ ಮತ್ತು ಬ್ರಿಟನ್ ಕುಸಿತ ಕಂಡು ವರ್ಷಗಳಾಗಿದೆ, ಈ ಕುಸಿತವನ್ನ ಅವರು ಒಪ್ಪುವ ಸ್ಥಿತಿಯಲಿಲ್ಲ. ನಿಮಗೊಂದು ಉದಾಹರಣೆ ಹೇಳುತ್ತೇನೆ, ನಾವು ಚಿಕ್ಕವರಿದ್ದಾಗ ಗಲ್ಲಿ ಕ್ರಿಕೆಟ್ ಆಡುತ್ತಿರಲಿಲ್ಲವೇ? ಆಗೆಲ್ಲಾ ನಮ್ಮ ಮಧ್ಯದ ಬಲಾಢ್ಯ ಹುಡುಗನೊಬ್ಬ ಔಟ್ ಆದಾಗ ನಾಟ್ ಔಟ್ ಎಂದು ವರಾತ ತೆಗೆಯುತ್ತಿರಲಿಲ್ಲವೇ? ಥೇಟ್ ಇವರದು ಅದೇ ರೀತಿಯ ವರಾತ. ಸೋತ ತಕ್ಷಣ ಹೊಸರಾಗ. ಇವರು ನೆಮ್ಮದಿಯಾಗಿರದೆ ಯಾರನ್ನೂ ನೆಮ್ಮದಿಯಾಗಿರಲು ಇವರು ಬಿಡುವುದಿಲ್ಲ.
  2. ಯೂರೋಪು ಕೂಡ ಇನ್ನಿಲ್ಲದ ಕುಸಿತ ಕಂಡಿದೆ. ಹಲವಾರು ಯೂರೋಪಿಯನ್ ದೇಶಗಳು ಪೆನ್ಷನ್ ಫಂಡ್ ಗೂ ಕೈ ಇಡುವ ಮಟ್ಟಕ್ಕೆ ಕುಸಿತ ಕಂಡಿವೆ. ಒಬ್ಬರಿಗೆ ಪೆನ್ಷನ್ ನೀಡಲು ಕನಿಷ್ಠ 8 ರಿಂದ 10 ಜನ ಕೆಲಸ ಮಾಡುತ್ತಿರಬೇಕು, ಕೆಲಸವೂ ಇಲ್ಲ, ಜನರೂ ಇಲ್ಲ, ಈಗೇನು ಮಾಡುವುದು? ಈ ದೇಶಗಳ ಅಭಿವೃದ್ಧಿ ದರ (ಗ್ರೋಥ್ ರೇಟ್ ) ಬಹಳ ಕಡಿಮೆ ಕಾರಣ, ಅಲ್ಲಿಗೆ ಬೇಕಾದ ಎಲ್ಲವನ್ನೂ ನಿರ್ಮಿಸಿಯಾಗಿದೆ, ಅಲ್ಲೇನಿದ್ದರೂ ಮೈನ್ಟೆನೆನ್ಸ್. ಹಣಕಾಸು ಹರಿವು ಬಹಳ ಬಿಗಿಯಾಗಿದೆ. ದಶಕಗಳಿಂದ ಬ್ಯಾಂಕಿಂಗ್ ವ್ಯವಸ್ಥೆಯನ್ನ ಹಾಳುಗೆಡವಿದ್ದಾರೆ, ಜನ ಬೀದಿಗೆ ಬರುವ ಮುನ್ನ ಅವರ ಎದುರಿಗೆ ಅದಕ್ಕಿಂತ ದೊಡ್ಡ ಸಮಸ್ಯೆಯನ್ನ ಇಡದಿದ್ದರೆ ಉಳಿಗಾಲವಿಲ್ಲ ಎನ್ನುವುದು ಅವರಿಗೆ ತಿಳಿದಿದೆ.
  3. ಚೀನಾ ತನ್ನ ಹಣದಾಟ, ಮೋಸದಾಟದಲ್ಲಿ ದೊಡ್ಡ ಮಟ್ಟದ ಇಲ್ಯೂಷನ್ ಸೃಷ್ಟಿ ಮಾಡಿತ್ತು. ಚೀನಾದ ಎವರ್ ಗ್ರಾಂದೆ ಕುಸಿತ ಅದಕ್ಕೊಂದು ದೊಡ್ಡ ಉದಾಹರಣೆ. ಸಾಲದಕ್ಕೆ ಪಾಶ್ಚತ್ಯ ದೇಶಗಳು ಚೀನಾ ಪ್ಲಸ್ ಒನ್ ನಿಲುವು ಅದಕ್ಕೆ ಮುಳುವಾಗಿದೆ. ಜಗತ್ತನ್ನ ತನ್ನ ಅಂಕೆಯಲ್ಲಿ ಇಟ್ಟುಕೊಳ್ಳಲು ಚೀನಾ ಆಯ್ಕೆ ಮಾಡಿಕೊಂಡ ಡೆಟ್ ಟ್ರ್ಯಾಪ್ ದಾರಿಯಿಂದ 69ಕ್ಕೂ ಹೆಚ್ಚು ದೇಶಗಳು ಚೀನಾದ ಅಡಿಯಾಳಾಗುವ ಸಾಧ್ಯತೆಯನ್ನ ಕೊರೋನಾ ಹಾಳುಗೆಡವಿತು. ಅಂದಮಾತ್ರಕ್ಕೆ ಚೀನಾದ ಹಿಡಿತ ಸಡಿಲವಾಗಿದೆ ಎಂದೇನಿಲ್ಲ, ಆದರೆ ಇವತ್ತು ನಿಮಗೆ ವಾಪಸ್ಸು ಕೊಡಲು ಹಣವಿಲ್ಲ ಎಂದು ಅವುಗಳು ಕೈ ಎತ್ತಿವೆ. ನಮ್ಮ ಪಕ್ಕದ ಶ್ರೀಲಂಕಾ ದೇಶದಲ್ಲಿ ಹಣದುಬ್ಬರ ಆಕಾಶಕ್ಕೆ ಏರಿದೆ, ಕೆಜಿ ಅಕ್ಕಿಗೆ 300/400 ರೂಪಾಯಿ ತೆರಬೇಕು ಎಂದರೆ ನೀವೇ ಊಹಿಸಿಕೊಳ್ಳಿ , ಇನ್ನು ಪೆಟ್ರೋಲ್ ಐನೂರು ಕೊಟ್ಟರೂ ಸಿಗುವುದಿಲ್ಲ ಎನ್ನುವ ಮಟ್ಟಕ್ಕೆ ಬಂದು ಕುಳಿತಿದೆ. ಚೀನಾ ದೇಶಕ್ಕೆ ಅಸಲು ಮತ್ತು ಬಡ್ಡಿ ಕಟ್ಟಲಾಗದೆ ಶ್ರೀಲಂಕಾ ದಿವಾಳಿಯ ಅಂಚಿಗೆ ಬಂದು ಕುಳಿತಿದೆ. ಆಫ್ರಿಕಾದ ಹಲವು ದೇಶಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಚೀನಾ ಸಾಲ ಕೊಟ್ಟು ದೊಡ್ಡಣ್ಣ ಅನ್ನಿಸ್ಕೊಂಡಿರಬಹುದು ಆದರೆ ಆಂತರಿಕವಾಗಿ ಅಲ್ಲಿನ ದೊಡ್ಡ ಸಂಸ್ಥೆಗಳು ಸಾಲದ ಮೇಲೆ ಕಟ್ಟಿದ್ದ ಅಭಿವೃದ್ಧಿ ಬುನಾದಿ ಅಲ್ಲಾಡುವಂತೆ ಬಡ್ಡಿ ಕಟ್ಟಲಾಗದೆ ಡಿಫಾಲ್ಟರ್ಸ್ ಆಗುತ್ತಿದ್ದಾರೆ. ಹೀಗೆ ಮುಂದುವರಿದರೆ ಚೀನಾದ ಬ್ಯಾಂಕಿಂಗ್ ವ್ಯವಸ್ಥೆ ಖಂಡಿತ ಕುಸಿಯುತ್ತದೆ. ಈಗಾಗಲೇ ಅಂದರೆ ಕೇವಲ ಎರಡು ವರ್ಷದ ಹಿಂದೆ ಚೀನಾ ಬ್ಯಾಂಕ್ ರನ್ ಗೆ ಒಳಗಾಗಿತ್ತು ಎನ್ನುವುದನ್ನ ಮರೆಯಬಾರದು.
  4. ಜಗತ್ತಿನಿಂದ ಬಹಿಷ್ಕಾರ ಹಾಕಿಸಿಕೊಂಡ ಪುಟ್ಟ ದೇಶ ಏನು ಮಾಡಬಹದು? ಅದನ್ನ ನಾರ್ತ್ ಕೊರಿಯಾ ಮಾಡುತ್ತಿದ್ದೆ. ಅದನ್ನ ಆಳುತ್ತಿರುವರಿಗೆ ಸರಿ ತಪ್ಪುಗಳ ಗೆರೆಯನ್ನ ಹಾಕುವ ಚಿಂತೆಯಿಲ್ಲ. ಅವರದೇನಿದ್ದರೂ ದೇಶ ನೆಡೆಸಲು ದುಡ್ಡು ಸಂಪಾದಿಸುವುದು. ಇದಷ್ಟೇ ಅಲ್ಲದೆ ನಾರ್ತ್ ಕೊರಿಯವನ್ನ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿರುವ ಕಿಮ್ ಮನೆತನ ದೇಶಕ್ಕೆ ಪರ್ಯಾಯವಾಗಿ ತಮ್ಮದೇ ಆದ ಆದಾಯದ ಮೂಲವನ್ನ ಸೃಷ್ಟಿ ಮಾಡಿಕೊಂಡಿದ್ದಾರೆ. ಅದನ್ನ ದೇಶದ ಹಣಕಾಸು ಮಂತ್ರಿ ಕೂಡ ಪ್ರಶ್ನಿಸುವ ಹಕ್ಕನ್ನ ಹೊಂದಿಲ್ಲ. ಹಣಕ್ಕಾಗಿ ಈ ದೇಶ ಏನು ಬೇಕಾದರೂ ಮಾಡಲು ಸಿದ್ಧವಿದೆ. ಸಣ್ಣ ಕಿಡಿಗೆ ತುಪ್ಪ ಸುರಿಯುವ ಕೆಲಸ ಮಾಡಲು ಸದಾ ಸನ್ನದ್ಧವಾಗಿರುತ್ತದೆ. ಹುಚ್ಚನ ಕೈಯಲ್ಲಿ ಖಾಲಿ ಬಂದೂಕು ಇದ್ದರೂ ಹೆದರಬೇಕು ಅಂತಹುದರಲ್ಲಿ ತುಂಬಿದ ಶಸ್ತ್ರಾಸ್ತಗಳು ಇದ್ದಾಗ ಹೆದರದಿದ್ದರೆ ಹೇಗೆ?
  5. ಒಂದೆರೆಡು ದಿನದಲ್ಲಿ ಉಕ್ರೈನ್ ದೇಶವನ್ನ ಅಪೋಷಣೆ ತೆಗೆದುಕೊಳ್ಳುತ್ತೇನೆ ಎಂದುಕೊಂಡಿದ್ದ ಪುಟಿನ್ ಗೆ ಇಗೋ ಹರ್ಟ್ ಆಗಿದೆ, ಅವರದೇ ಬ್ರೇಕ್ ಅವೇ ಪುಟಾಣಿ ಉಕ್ರೈನ್ ಇನ್ನಿಲ್ಲದ ಕಾಟ ಕೊಡುತ್ತಿದೆ. ಯಾವ ಕ್ಷಣದಲ್ಲಿ ಬೇಕಾದರೂ ಕೆಮಿಕಲ್ ಅಥವಾ ಬಯೋ ಕೆಮಿಕಲ್ ಅಸ್ತ್ರವನ್ನ ಆತ ಪ್ರಯೋಗಿಸಬಹುದು. ಇದಕ್ಕಾಗಿಯೇ ಕಾಯುತ್ತಿರುವ ನ್ಯಾಟೋ ರಷ್ಯಾದ ಮೇಲೆ ದಾಳಿ ಮಾಡುತ್ತದೆ. ಅದು ದೊಡ್ಡ ಯುದ್ಧಕ್ಕೆ ನಾಂದಿ ಹಾಡುತ್ತದೆ.
  6. ಕಳೆದ ಮೂರ್ನಾಲ್ಕು ದಿನದ ಹಿಂದೆ ಅಂತರರಾಷ್ಟ್ರೀಯ ನ್ಯಾಯಾಲಯ ರಷ್ಯಾದ ಅಧ್ಯಕ್ಷ ಪುಟಿನ್ ಅವರನ್ನ ಬಂಧಿಸುವ ಆದೇಶ ಹೊರಡಿಸಿದೆ. ಹಾಗೊಮ್ಮೆ ಪುಟಿನ್ ಮೇಲೆ ಕೈಯಿಟ್ಟರೆ ಮೂರನೇ ಮಹಾಯುದ್ಧವನ್ನ ತಪ್ಪಿಸಲು ಖಂಡಿತ ಸಾಧ್ಯವಿಲ್ಲ. ರಷ್ಯಾ ತನ್ನದೆ ಆದ ನೆಟ್ವರ್ಕ್ ಬಹಳ ಗಟ್ಟಿಯಾಗಿ ಕಟ್ಟಿಕೊಂಡಿದೆ. ರಷ್ಯಾದ ಮಿತ್ರ ದೇಶಗಳು ರಷ್ಯಾದ ಪರ ನಿಲ್ಲುತ್ತವೆ. ಹೀಗಾಗಿ ಗಂಟೆಯಲ್ಲಿ ಜಗತ್ತು ಇಬ್ಬಾಗವಾಗಿ ನಿಲ್ಲುತ್ತದೆ.
  7. ಡಿ ಡಾಲರೈಸೇಷನ್ ಅಂದರೆ ಡಾಲರ್ನನ್ನ ಜಾಗತಿಕ ಹಣದ ಪಟ್ಟದಿಂದ ಕೆಳಗಿಳಿಸುವ ಹುನ್ನಾರಗಳು ಬಹಳ ವೇಗ ಪಡೆದುಕೊಂಡಿವೆ. ಕಳೆದ ಏಳೆಂಟು ದಶಕದಿಂದ ಹಿರಿಯಣ್ಣನ ಪಟ್ಟದಲ್ಲಿ ಕುಳಿತ್ತಿದ್ದ ಅಮೇರಿಕಾ ಇದೀಗ ಇತರ ದೇಶಗಳ ಮಾತನ್ನ ಕೇಳಬೇಕಾದ ಪರಿಸ್ಥಿತಿ ಬಂದಿದೆ. ಅಧಿಕಾರ ಮತ್ತು ಹಣದ ಮೇಲಿನ ಹಿಡಿತವನ್ನ ಅಷ್ಟು ಬೇಗ ಅವರು ಬಿಟ್ಟು ಕೊಡಲು ಸಿದ್ದರಿಲ್ಲ. ಹೀಗಾಗಿ ಅತಿ ಸಣ್ಣ ಕಾರಣ ಸಿಕ್ಕರೂ ಸಾಕು ಅದನ್ನ ದೊಡ್ಡದು ಮಾಡಿ 'ಕೋತಿ ಹುಣ್ಣು ಬ್ರಹ್ಮ ರಾಕ್ಷಸ ' ಎನ್ನುವಂತೆ ಮಾಡಿ ಬಿಡುತ್ತದೆ.

ಕೊನೆಮಾತು: ಇವತ್ತಿನ ಜಾಗತಿಕ ಆರ್ಥಿಕ ಸ್ಥಿತಿ ಬಹಳ ಹದಗೆಟ್ಟಿದೆ, ಆಟದಲ್ಲಿ ಯಾರೂ ಗೆಲ್ಲುತ್ತಿಲ್ಲ, ಹೀಗಾಗಿ ಎಲ್ಲರಿಗೂ ಹೊಸದಾಗಿ ಆಟ ಶುರುಮಾಡಬೇಕಾದ ಅವಶ್ಯಕೆತೆಯಿದೆ., ಆದರೆ ಸುಮ್ಮನೆ ಈ ಆಟ ಸಾಕು ಎಂದರೆ ಕೊಡುವುದು ಕೊಟ್ಟು ಹೊರಡು ಎನ್ನುತ್ತಾರೆ. ಸೊ ಎಲ್ಲವನ್ನೂ ಕೆಡವಿ ಬಿಟ್ಟರೆ?? ಹೊಸದಾಗಿ ಕಟ್ಟಬಹುದಲ್ಲ?? ಹಣದ ಥೈಲಿ ಹೊತ್ತ ಅವರೇ ಮತ್ತೆ ನಾಯಕರಾಗುತ್ತಾರೆ. ಒಟ್ಟಿನಲ್ಲಿ ಅಮೇರಿಕಾ ಮುಂದಾಳತ್ವದಲ್ಲಿ ಅಭಿವೃದ್ಧಿ ಕಂಡ ಜಗತ್ತಿಗೆ ಇಂದು ಆ ಆಟ ಬೇಡವಾಗಿದೆ. ಜಗತ್ತು ಮಗ್ಗುಲು ಬದಲಿಸುವ ಸಮಯ ಸನ್ನಿಹಿತವಾಗಿದೆ. ಎಲ್ಲಾ ಬದಲಾವಣೆಗಳು ಅವು ಒಳ್ಳೆಯದೋ ಅಥವಾ ಕೆಟ್ಟದ್ದೋ ಎನ್ನುವುದು ನಂತರದ ಮಾತು, ನೋವನ್ನ ಖಂಡಿತ ನೀಡುತ್ತದೆ. ಜಾಗತಿಕ ವಿತ್ತ ಜಗತ್ತಿನಲ್ಲಿ ಈಗಾಗಲೇ ಕೋಲ್ಡ್ ವಾರ್ ಶುರುವಾಗಿದೆ. ಅದು ಶಸ್ತ್ರಾಸ್ತ ಕೈಲಿಡಿದು ಬೀದಿಗೂ ಬರುತ್ತದೆಯೆ? ಎನ್ನುವ ಅನುಮಾನಗಳನ್ನ ಜಾಗತಿಕ ಮಟ್ಟದಲ್ಲಿನ ಬದಲಾವಣೆಗಳು ಹುಟ್ಟುಹಾಕುತ್ತಿವೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com