social_icon

ಇಂಟರ್ಮಿಟೆಂಟ್ ಫಾಸ್ಟಿಂಗ್ ಅಥವಾ ಮಧ್ಯಂತರ ಉಪವಾಸ (ಕುಶಲವೇ ಕ್ಷೇಮವೇ)

ಒಂದು ದಿನ ಸಂಜೆ ಮಧ್ಯವಯಸ್ಕರೊಬ್ಬರು ನನ್ನ ಕ್ಲಿನಿಕ್ಕಿಗೆ ಬಂದು “ಡಾಕ್ಟ್ರೇ, ನನಗೆ ತೂಕ ಜಾಸ್ತಿ ಇದೆ ಅನಿಸುತ್ತಿದೆ. ಎಲ್ಲರೂ ದಪ್ಪಗೆ ಆಗಿದ್ದೇನೆ ಎನ್ನುತ್ತಿದ್ದಾರೆ.

Published: 06th May 2023 10:52 AM  |   Last Updated: 06th May 2023 02:41 PM   |  A+A-


benefits

ಇಂಟರ್ಮಿಟೆಂಟ್ ಫಾಸ್ಟಿಂಗ್

Posted By : Srinivas Rao BV
Source :

ಒಂದು ದಿನ ಸಂಜೆ ಮಧ್ಯವಯಸ್ಕರೊಬ್ಬರು ನನ್ನ ಕ್ಲಿನಿಕ್ಕಿಗೆ ಬಂದು “ಡಾಕ್ಟ್ರೇ, ನನಗೆ ತೂಕ ಜಾಸ್ತಿ ಇದೆ ಅನಿಸುತ್ತಿದೆ. ಎಲ್ಲರೂ ದಪ್ಪಗೆ ಆಗಿದ್ದೇನೆ ಎನ್ನುತ್ತಿದ್ದಾರೆ. ಹೇಗೆ ಸಣ್ಣಗಾಗುವುದು? ನನ್ನ ಕೆಲಸದ ಸಮಯ ನೋಡಿದರೆ ನಾನು ದಿನ ಬೆಳಗ್ಗೆ ಎದ್ದು ಬ್ರಿಸ್ಕ್ ವಾಕಿಂಗ್, ಜಾಗಿಂಗ್ ಮಾಡಲು ಆಗಲ್ಲ. ಜಿಮ್ಮಿಗೆ ಹೋಗಲು ಆಗುತ್ತಿಲ್ಲ. ಪೇಪರಿನಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಇಂಟರ್ಮಿಟೆಂಟ್ ಫಾಸ್ಟಿಂಗ್ ಬಗ್ಗೆ ಓದಿದ್ದೇನೆ ಮತ್ತು ನೋಡಿದ್ದೇನೆ. ಇದು ವರ್ಕ್ ಆಗುತ್ತದೆಯಾ? ನಾನು ಇಂಟರ್ಮಿಟೆಂಟ್ ಫಾಸ್ಟಿಂಗ್ ಮಾಡಬಹುದಾ?” ಎಂದು ಕೇಳಿದರು. ನಾನು ಅವರಿಗೆ ಈ ಬಗ್ಗೆ ಸಾಕಷ್ಟು ವಿವರಗಳನ್ನು ನೀಡಿದೆ. ನಂತರ ತಾವು ಇಂಟರ್ಮಿಟೆಂಟ್ ಫಾಸ್ಟಿಂಗ್ ಮಾಡುತ್ತೇನೆ ಎಂದು ಹೇಳಿದರು. ಏನಾದರೂ ಸಮಸ್ಯೆ ಉಂಟಾದರೆ ಬಂದು ಕಾಣಿ ಎಂದು ನಾನು ತಿಳಿಸಿದ ನಂತರ ಅವರು ಹೋದರು.

ಇಂಟರ್ಮಿಟೆಂಟ್ ಫಾಸ್ಟಿಂಗ್ ಎಂದರೇನು?

ಸಾಮಾನ್ಯವಾಗಿ ತೂಕ ಕಡಿಮೆ ಮಾಡಿಕೊಳ್ಳಲು ಎಲ್ಲರೂ ಡಯಟ್ ಮಾಡುತ್ತಾರೆ. ಜಂಕ್ ಫುಡ್, ಕೊಬ್ಬಿನ ಪದಾರ್ಥಗಳನ್ನು, ಸಿಹಿತಿಂಡಿಗಳನ್ನು ವರ್ಜಿಸುವುದು ಮತ್ತು ಅನ್ನ ಸೇವಿಸುವುದನ್ನು ಬಿಡುತ್ತಾರೆ. ಆದರೆ ಇಂಟರ್ಮಿಟೆಂಟ್ ಫಾಸ್ಟಿಂಗಿನಲ್ಲಿ ಹಾಗಲ್ಲ. ನಾವು ದಿನಾಲೂ ಸೇವಿಸುವ ಆಹಾರವನ್ನೇ ಸೇವಿಸುತ್ತೇವೆ. ಒಂದು ದಿನದಲ್ಲಿ 16 ಗಂಟೆಗಳ ಕಾಲ ಉಪವಾಸವಿರುವುದು ಮತ್ತು ಉಳಿದ 8 ಗಂಟೆಗಳ ಕಾಲದಲ್ಲಿ ಮಾತ್ರ ಆಹಾರ ಸೇವಿಸುವುದೇ ಇಂಟರ್ಮಿಟೆಂಟ್ ಫಾಸ್ಟಿಂಗ್. ಉದಾಹರಣೆಗೆ ಸಂಜೆ ಆರು ಗಂಟೆ ಒಳಗೆ ಆಹಾರ ಸೇವಿಸಿ ಮರುದಿನ ಬೆಳಗ್ಗೆ 10 ಗಂಟೆಗೆ ತಿಂಡಿ ತಿಂದರೆ ಒಟ್ಟು 16 ಗಂಟೆ ಇಂಟರ್ಮಿಟೆಂಟ್ ಫಾಸ್ಟಿಂಗ್ ಮಾಡಿದಂತಾಗುತ್ತದೆ. ಆದರೆ ಈ ಅವಧಿಯಲ್ಲಿ ಯಾವುದೇ ರೀತಿಯ ಆಹಾರವನ್ನು ಸೇವಿಸುವಂತಿಲ್ಲ. ಉಪವಾಸವಿರುವ ಸಮಯದಲ್ಲಿ ನೀರು ಮಾತ್ರ ಸೇವಿಸಬಹುದು. ಈ ಫಾಸ್ಟಿಂಗಿನ ಸಮಯವನ್ನು ಅವರವರ ಆಫೀಸ್ ಕೆಲಸ ಮತ್ತು ಅನುಕೂಲಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬಹುದು.

ಇದನ್ನೂ ಓದಿ: ಡಯಾಬಿಟಿಕ್ ರೆಟಿನೋಪತಿ ಎಂಬ ಕಣ್ಣಿನ ಸಮಸ್ಯೆ

ಮಧ್ಯಂತರ ಉಪವಾಸ ಮಾಡಲು ಸಾಧ್ಯವೇ?

ಇಂಟರ್ಮಿಟೆಂಟ್ ಫಾಸ್ಟಿಂಗ್ ನಲ್ಲಿ ಹೀಗೆ ರಾತ್ರಿ ಮತ್ತು ಬೆಳಗ್ಗೆ ಏನೂ ತಿನ್ನದೇ ಉಪವಾಸ ಇರಲು ಸಾಧ್ಯವೇ ಎಂಬ ಪ್ರಶ್ನೆ ಬರುವುದು ಸಹಜ. ಕೇವಲ ಅಭ್ಯಾಸದಿಂದ ಮಾತ್ರ ಇದು ಸಾಧ್ಯ. ನಿರಂತರ ಅಭ್ಯಾಸದಿಂದ ಏನು ಬೇಕಾದರೂ ಸಾಧಿಸಬಹುದು. ಆಸಕ್ತಿ ಇದ್ದವರು ಮೊದಲು 12 ಗಂಟೆಗಳ ಇಂಟರ್ಮಿಟೆಂಟ್ ಫಾಸ್ಟಿಂಗಿನಿಂದ ಆರಂಭಿಸಬೇಕು. ಒಂದು ಅಥವಾ ಎರಡು ದಿನಗಳ ಕಾಲ ಟ್ರೈ ಮಾಡಿ ನೋಡಬೇಕು. ನಿಧಾನವಾಗಿ ಈ ಕ್ರಮಕ್ಕೆ ಹೊಂದಿಕೊಳ್ಳಬಹುದು. ಪ್ರತಿದಿನ ಅಲ್ಲದಿದ್ದರೂ ವಾರಕ್ಕೆ ಎರಡು ದಿನ ಮಾಡಬಹುದು.

ಸರಳವಾಗಿ ಹೇಳುವುದೆಂದರೆ ಇದೊಂದು ತೂಕ ಕಡಿಮೆ ಮಾಡಲು ಅನುಸರಿಸಬೇಕಾದ ಆಹಾರ ಕ್ರಮ. ಇಂಟರ್‌ಮಿಟೆಂಟ್ ಫಾಸ್ಟಿಂಗ್ ತೂಕ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ ಮತ್ತು ಜಡ ಜೀವನಶೈಲಿ ಆಧಾರಿತ ದೀರ್ಘಕಾಲೀನ ಕಾಯಿಲೆಗಳನ್ನು ತಡೆಯುತ್ತದೆ ಎಂಬುದು ಹಲವು ಅಧ್ಯಯನಗಳಿಂದ ಸಾಬೀತಾಗಿರುವುದರಿಂದ ಇತ್ತೀಚಿಗೆ ಅನೇಕ ಜನರು ಇದನ್ನು ಅನುಸರಿಸುತ್ತಿದ್ದಾರೆ.

ಇದನ್ನೂ ಓದಿ: ಹೀಟ್ ವೇವ್ ಅಥವಾ ಉಷ್ಣದ ಅಲೆ: ಆರೋಗ್ಯದ ಮೇಲೆ ಪರಿಣಾಮ

ಇಂಟರ್ಮಿಟೆಂಟ್ ಫಾಸ್ಟಿಂಗ್ ನಮ್ಮ ದೇಹದ ಜೈವಿಕ ಗಡಿಯಾರ (ಸರ್ಕಾಡಿಯನ್ ರಿದಂ) ಮೇಲೆ ಪರಿಣಾಮ ಬೀರುತ್ತದೆ. ಚಯಾಪಚಯ ಕ್ರಿಯೆ (ಮೆಟಬಾಲಿಸಂ), ನಿದ್ದೆ, ಎಚ್ಚರ ಇರುವ ಸಮಯ ಮತ್ತು ಮೂಡ್ ಎಲ್ಲದರ ಮೇಲೆ ಪರಿಣಾಮ ಆಗುತ್ತದೆ. ಇದು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಂಡುಬರುತ್ತದೆ. ಕೆಲವರಿಗೆ ನಿರ್ದಿಷ್ಟ ಸಮಯದಲ್ಲಿಯೇ ಆಹಾರ ಸೇವಿಸಿ, ಅದರಲ್ಲಿಯೂ ಬಗೆಬಗೆಯ ತಿಂಡಿತಿನಿಸು ತಿನ್ನುವವರು, ಇದನ್ನು ಮಾಡಲಾರರು. ಕೆಲವರಿಗೆ ಉಪವಾಸ ಇದ್ದರೆ ಚಡಪಡಿಕೆ ಉಂಟಾಗಬಹುದು. ಪ್ರತಿಕೂಲ ಪರಿಣಾಮ ಆದರೆ ವೈದ್ಯರನ್ನು ಕಾಣುವುದು ಒಳ್ಳೆಯದು. ಆದ್ದರಿಂದ ಅಂತಹವರು ತೂಕ ಕಡಿಮೆ ಮಾಡಿಕೊಳ್ಳಲು ಬೇರೆ ವಿಧಾನಗಳನ್ನು ಅನುಸರಿಸುವುದು ಉತ್ತಮ.

ಇಂಟರ್ಮಿಟೆಂಟ್ ಫಾಸ್ಟಿಂಗ್ ನಿಂದ ಆರೋಗ್ಯ ಪ್ರಯೋಜನಗಳು

ಇಂಟರ್ಮಿಟೆಂಟ್ ಫಾಸ್ಟಿಂಗ್ ಬಗ್ಗೆ ಒಟ್ಟಾರೆ ಹೇಳುವುದಾದರೆ ಇದರಿಂದ ಹಲವಾರು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಮೊದಲಿಗೆ ದೇಹದಲ್ಲಿ ಕೊಲೆಸ್ಟರಾಲ್ ಮಟ್ಟ ಸಮತೋಲನಗೊಳ್ಳುವುದು. ಇದರಿಂದ ಹೃದಯದ ಕಾಯಿಲೆಗಳು ಬರುವ ಸಂಭವ ಕಡಿಮೆ ಆಗುತ್ತದೆ. ಹಾಗೆಯೇ ಇದು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಆದ್ದರಿಂದ ಡಯಾಬಿಟಿಸ್ ಬಗ್ಗೆ ಹೆದರಬೇಕಿಲ್ಲ. ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು ಶಕ್ತಿಯಾಗಿ ಪರಿವರ್ತನೆ ಹೊಂದಿ ಉಸಿರಾಟ, ಹೃದಯ ಬಡಿತ, ಜೀರ್ಣಕ್ರಿಯೆ ಮತ್ತು ತ್ಯಾಜ್ಯ ವಿಸರ್ಜನೆಯಂತಹ ಅತ್ಯಗತ್ಯ ದೈಹಿಕ ಕ್ರಿಯೆಗಳ ಸುಗಮವಾಗಿ ನಡೆಯಲು ಸಹಾಯಮಾಡುತ್ತದೆ.

ಇದನ್ನೂ ಓದಿ: ವಿಶ್ವ ಆರೋಗ್ಯ ದಿನ 2023: ಎಲ್ಲರಿಗಾಗಿ ಆರೋಗ್ಯ

ಉಪವಾಸದ ಅವಧಿಯಲ್ಲಿ ಜೀರ್ಣಾಂಗಗಳಿಗೆ ವಿಶ್ರಾಂತಿ ದೊರಕಿ ಅವು ಮತ್ತಷ್ಟು ಸಮರ್ಥವಾಗುತ್ತವೆ. ಆಗಾಗ ನೀರು ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಪುಷ್ಟಿ ದೊರಕುತ್ತದೆ. ಉಪವಾಸದಿಂದ ಮೆದುಳಿನಲ್ಲಿ ಹೊಸ ನರ ಜೀವಕೋಶಗಳ ಬೆಳವಣಿಗೆಗೆ ಉತ್ತೇಜನ ದೊರೆತು ಮೆದುಳು ಚುರುಕುಕೊಳ್ಳುತ್ತದೆ. ಮೂಡ್ ಚೆನ್ನಾಗಿರುತ್ತದೆ. ದೇಹ ಹಗುರಾದ ಭಾವನೆ ಉಂಟಾಗುತ್ತದೆ. ಇದರಿಂದ ಯಾವುದೇ ಕೆಲಸವನ್ನಾದರೂ ಚೆನ್ನಾಗಿ ಮಾಡಲು ಸಹಾಯ ಆಗುತ್ತದೆ. ಜೊತೆಗೆ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಬಿಪಿ, ಫ್ಯಾಟಿ ಲಿವರ್, ಕಿಡ್ನಿ, ಥೈರಾಯಿಡ್ ಮತ್ತಿತರ ಸಮಸ್ಯೆಗಳು ನಿಯಂತ್ರಣಕ್ಕೆ ಬರುತ್ತವೆ. ಹೀಗೆ ಇಂಟರ್‌ಮಿಟೆಂಟ್ ಫಾಸ್ಟಿಂಗಿನಿಂದ ಉಂಟಾಗುವ ಹಿತಕಾರಿ ಪರಿಣಾಮಗಳನ್ನು ಪಟ್ಟಿ ಮಾಡುತ್ತಲೇ ಹೋಗಬಹುದು.

ಇಂಟರ್ಮಿಟೆಂಟ್ ಫಾಸ್ಟಿಂಗ್ ಎರಡು ಊಟಗಳ ನಡುವಿನ ಸಮಯವನ್ನು ಹೆಚ್ಚಿಸುತ್ತದೆಯೇ ಹೊರತು ಊಟದ ಪ್ರಮಾಣವನ್ನು ಬದಲಾಯಿಸುವುದಿಲ್ಲ. ಇದರಲ್ಲಿ ನಾವು ಯಾವ ಆಹಾರ ಪದಾರ್ಥವನ್ನೂ ತ್ಯಜಿಸಬೇಕಾಗಿಲ್ಲ. ಆದ್ದರಿಂದ ನಾವು ಏನನ್ನಾದರೂ ಕಳೆದುಕೊಂಡಿದ್ದೇವೆ ಎಂಬ ಭಾವನೆ ನಮ್ಮ ಮನಸ್ಸಿನಲ್ಲಿ ಮೂಡುವುದೇ ಇಲ್ಲ. ಆದ್ದರಿಂದಲೇ ಇತ್ತೀಚಿನ ದಿನಗಳಲ್ಲಿ ಜನರು ತೂಕ ಕಡಿಮೆ ಮಾಡಿಕೊಂಡು ಫಿಟ್ ಆಗಿರಲು ಮಧ್ಯಂತರ ಉಪವಾಸ (ಇಂಟರ್ಮಿಟೆಂಟ್ ಫಾಸ್ಟಿಂಗ್) ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ.


ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com


  Stay up to date on all the latest ಅಂಕಣಗಳು news
  Poll
  K Annamalai

  ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


  Result
  ಹೌದು
  ಇಲ್ಲ

  Comments(1)

  Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

  The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

  • Sujatha vishwanath

   ಉತ್ತಮವಾದ ಮಾಹಿತಿ ನೀಡಿದ್ದೀರಿ ಮೇಡಂ ಧನ್ಯವಾದಗಳು... ಇದು ಅನೇಕರಿಗೆ ಸಹಾಯವಾಗುತ್ತದೆ ಇದರ ಬಗ್ಗೆ ಕೇಳಿದ್ದೆ ಆದರೆ ಇದರ ಉಯೋಗಗಳ ಬಗ್ಗೆ ಮಾಹಿತಿ ಇರಲಿಲ್ಲ...ಉತ್ತಮ ಲೇಖನ...
   4 months ago reply
  flipboard facebook twitter whatsapp